ಬಿಡುವಿಲ್ಲ ದುಡಿವ ರಟ್ಟೆಗೆ…ಗಂಜಿ ಕುಡಿವರು ಹಸಿದ ಹೊಟ್ಟೆಗೆ…ಗತಿಯಿಲ್ಲ ಮಾನ ಮುಚ್ಚುವ ಬಟ್ಟೆಗೆ…ಡಾ. ಅಶೋಕ ಕುಮಾರ ಎಸ್ ಮಟ್ಟಿ ಮೀನಕೇರಿ ಅವರ ಲೇಖನಿಯಲ್ಲಿ ಅರಳಿದ ಸುಂದರ ಕವನವನ್ನು ತಪ್ಪದೆ ಮುಂದೆ ಓದಿ…
ಹೊತ್ತು ಸಾಗಿಸಿದರು ಇಟ್ಟಿಗೆ
ಗುಡಿಸಿ ಬಂದರು ದನದ ಕೊಟ್ಟಿಗೆ
ಕೈಚಾಚಿ ನಿಂತರು ತಂಗುಳ ರೊಟ್ಟಿಗೆ.
ಬಿಡುವಿಲ್ಲ ದುಡಿವ ರಟ್ಟೆಗೆ
ಗಂಜಿ ಕುಡಿವರು ಹಸಿದ ಹೊಟ್ಟೆಗೆ
ಗತಿಯಿಲ್ಲ ಮಾನ ಮುಚ್ಚುವ ಬಟ್ಟೆಗೆ.
ಹೊತ್ತು ಹಾಕಿದರು ಕಟ್ಟಿಗೆ
ಹೊಲಿಗೆ ಹಾಕಿ ಹರಿದ ಮೆಟ್ಟಿಗೆ
ಬೆವರು ಸುರಿಸಿ ದುಡಿವರು ಬಿಟ್ಟಿಗೆ.
ಹಿಟ್ಟಿಲ್ಲ ಹಸಿದ ಹೊಟ್ಟೆಗೆ
ಹಳಸಿದನ್ನ ಹಾಕುವರು ತಟ್ಟೆಗೆ
ಮುಟ್ಟಲು ಬಿಡುವುದಿಲ್ಲ ಬಾವಿ ಕಟ್ಟೆಗೆ.
ಕಡೆಯಿಲ್ಲ ಕಣ್ಣೀರು ಕಟ್ಟೆಗೆ
ನಾಲಿಗೆಯಿಲ್ಲ ಕೊರಳ ಗಂಟೆಗೆ
ಬೆವರ ಹನಿನಂಟು ದಂಟು ದಂಟಿಗೆ.
ಬೆಲೆಯಿಲ್ಲ ಬೆವರು ತೊಟ್ಟಿಗೆ
ಬಡವ ಧ್ವನಿ ಎತ್ತುವ ಹಾಗಿಲ್ಲ ಗಟ್ಟಿಗೆ
ನೊಂದವರ ಬದುಕೆಂದಾಗುವುದು ನೆಟ್ಟಗೆ.
- ಡಾ. ಅಶೋಕ ಕುಮಾರ ಎಸ್ ಮಟ್ಟಿ ಮೀನಕೇರಿ – ಪ್ರಾಂಶುಪಾಲರು ಸರಕಾರಿ ಪ್ರಥಮ ದರ್ಜೆ ವಸತಿ ಕಾಲೇಜು ಮುದ್ನಾಳ ಯಾದಗಿರಿ ಜಿಲ್ಲೆ.
