ಕೂದಲೊಳಗೆ ಒಂದು ಹೇನು ಸೇರಿಕೊಂಡರೆ ಮುಗಿಯಿತು. ನಾವೇನಾದರೂ ಮೈಮರೆತರೆ ಅವರ ವಂಶಸ್ಥರೆಲ್ಲ ಅಲ್ಲೇ ಅಭಿವೃದ್ಧಿ ಆಗುತ್ತಾ ಜಾಂಡ ಊಡುತ್ತಾರೆ. ಇದು ಹೇನುಗಳ ಕತೆ, ರಮ್ಯಾ ರಾಜ್ ಅವರ ಈ ಲೇಖನವನ್ನು ತಪ್ಪದೆ ಮುಂದೆ ಓದಿ…
ಈ ಸರ್ ಗಳಿಗೂ, ಈ ಹೇನುಗಳಿಗೂ ಏನ್ ಸಂಬಂಧ ಅಂತ ಇದ್ದೀರಾ?? ಏನಿಲ್ಲ ಏನೋ ಟೈಟಲ್ ಚೆನ್ನಾಗಿದೆ ಅಂತ ಸರ್ ನ ಕರೆದಿದ್ದೇನೆ ಅಷ್ಟೇ. ಇನ್ನು ಗೊತ್ತಾಗಲಿಲ್ವಾ, ಕೆಲವರೆಲ್ಲ ಹೇನು ಅಂದ್ರೆ ಏನು? ಅಂತ ಯೋಚನೆ ಮಾಡ್ತಾ ಇದ್ದೀರಾ ಅನ್ಸುತ್ತೆ ಅಲ್ವಾ..ಅದೇ ಅದೇ ರೀ ನಮ್ ತಲೆ ಹೇನು.
ಈಗ ನೆನಪಾಗಿರಬೇಕಲ್ವಾ! ತಲೆನಾ ಪರ ಪರ ಅಂತ ಕೆರೆದುಕೊಳ್ಳುತ್ತಿದ್ದ ನಿಮ್ಮ ಶಾಲೆಯಲ್ಲಿನ ಸಹಪಾಠಿಗಳೊ, ಮನೆಯಲ್ಲಿನ ಅಮ್ಮಂದಿರೊ, ನಿಮ್ಮ ಅಕ್ಕ ತಂಗಿಯರೊ. ನಂತರದ ದಿನಗಳಲ್ಲಿ ನಿಮ್ಮ ಹೆಂಡತಿಯೋ, ನಿಮ್ಮ ಮಕ್ಕಳೆಲ್ಲ ಕಣ್ಮುಂದೆ ಬಂದಿರುತ್ತಾರೆ ಅಲ್ವೇ?? ಹ..ಹ..ಹ ಅಂತ ನಗ್ತಾ ಇದ್ದೀರಾ. ನಮ್ಮ ಹೆಣ್ಣು ಮಕ್ಕಳಿಗೆ ಗೊತ್ತು ಬಿಡಿ ಆ ಕಷ್ಟ. ಅದೆಲ್ಲಿಂದ ಬಿಗಡಾಯಿಸಿ ಬಿಡುತ್ವೋ ಆ ಹಾಳಾದ ಹೇನುಗಳು.
ಕೂದಲೊಳಗೆ ಒಂದು ಸೇರಿಕೊಂಡರೆ ಮುಗಿಯಿತು. ನಾವೇನಾದರೂ ಮೈಮರೆತರೆ ಅವರ ವಂಶಸ್ಥರೆಲ್ಲ ಅಲ್ಲೇ ಅಭಿವೃದ್ಧಿ ಆಗುತ್ತಾ ಜಾಂಡ ಊಡುತ್ತಾರೆ. ಏನೋ ಮನುಷ್ಯರೆಲ್ಲ ನಾವು ವಾಸ ಮಾಡಲು ಬದುಕುಳಿಯಲು ಜಾಗ ಕೊಟ್ಟಿದ್ದಾರಲ್ಲ ಅಂತ ಸ್ವಲ್ಪವೂ ಅನುಕಂಪವೇ ಇಲ್ಲದೆ. ಪ್ರಾಣವನ್ನು ಹಿಂಡಿ ಬಿಡುತ್ತವೆ.
ಅವುಗಳು ಕೊಡುವ ಕಾಟ ಅಷ್ಟಿಷ್ಟಲ್ಲ ಬಿಡಿ. ತಲೆ ಕೂದಲೊಳಗೆ ಅವುಗಳು ಗುಳು ಗುಳು ಅಂತ ಓಡಾಡುತ್ತಿದ್ದ ಹಾಗೆ ನಮ್ಮ ಎದುರು ಯಾರಿರಲಿ ಬಿಡಲಿ, ಕೈ ಮಾತ್ರ ತಲೆ ಕಡೆಗೆ ಮೆಲ್ಲನೆ ಹೋಗುವುದಂತನ್ನು ತಪ್ಪಿಸುವುದಕ್ಕೆ ಸಾಧ್ಯವೇ ಇಲ್ಲ ಬಿಡಿ.ಯಾವುದೇ ಸಭೆ ಸಮಾರಂಭಕ್ಕೆ ಹೋಗಿರಲಿ ಇವುಗಳ ಕಿರಿಕಿರಿಯಿಂದ ಹೇಗೆ ತಪ್ಪಿಸಿಕೊಳ್ಳುವುದೆಂಬುದೆ ದೊಡ್ದ ತಲೆ ನೋವಾಗಿರುತ್ತದೆ.

ಹಿಂದೆಲ್ಲಾ ನಮ್ಮ ಹಳ್ಳಿಗಳಲ್ಲಿ ತಲೆ ಸ್ನಾನಕ್ಕಾಗಿ ಯಾವುದೇ ಶಾಂಪುಗಳಿರುತ್ತಿರಲಿಲ್ಲ, ತಲೆ ತುಂಬಾ ಕೈ ಎಣ್ಣೆ (ಹರಳೆಣ್ಣೆ) ಮೆತ್ತಿಕೊಳ್ಳುತ್ತಿದ್ದರು , ಸೀಗೆಕಾಯಿ ಪುಡಿಯನ್ನು ಮಾತ್ರ ಉಪಯೋಗಿಸುತ್ತಿದ್ದ ಕಾಲವದು. ವಾರಕ್ಕೊಮ್ಮೆ ತಲೆ ಸ್ನಾನ. ಹೀಗಿರಬೇಕಾದರೆ .. ಮಕ್ಕಳೆಲ್ಲ ಸೀಗೆಕಾಯಿಯ ಕಣ್ಣು ಉರಿಯ ಭಯದಿಂದಾಗಿ ಹಾಗೂ ತಲೆಗೆ ಮೆತ್ತಿರುವ ಎಣ್ಣೆಯನ್ನು ತೆಗೆಯಲು ಕಷ್ಟ ಪಡಬೇಕಾಗಿದ್ದರಿಂದ ಅರ್ಧಂಬರ್ಧ ತಲೆ ಸ್ನಾನ ಮಾಡುತ್ತಿದ್ದ ಫಲವಾಗಿಯೋ, ಕೂದಲುಗಳನ್ನು ಸರಿಯಾಗಿ ಒಣಗಿಸದೆ ಒದ್ದೆ ಆಗಿರುವ ಕೂದಲನ್ನು ಜಡೆ ಹಾಕಿಕೊಳ್ಳುತ್ತಿದ್ದರಿಂದಲೋ. ಆ ಕೊಳೆತನಕ್ಕೆ ಇರಬೇಕು ಹೇನುಗಳೆಲ್ಲ ದಾಂಗುಡಿಯಿಟ್ಟು ವಿರಾಜಮಾನವಾಗಿ ನಮ್ಮ ತಲೆಗಳಲ್ಲಿ ತಮ್ಮ ನೆಲೆಗಳನ್ನು ಸ್ಥಾಪಿಸಿಕೊಳ್ಳುತ್ತಿದ್ದವು.
ಜೊತೆಗೆ ಶಾಲೆಯಲ್ಲಿ ಒಬ್ಬರಿಂದ ಒಬ್ಬರಿಗೆ ಹರಡುತ್ತಿದ್ದವು. ಅಜ್ಜಿ ಹೇಳುತ್ತಿದ್ದ ಹಾಗೆ ಹೇನುಗಳಿಗೆ ಏಳು ಹಾಸಿಗೆಗಳನ್ನು ದಾಟುವ ಸಾಮರ್ಥ್ಯವಿರುತ್ತದೆ ಅಂತೆ. ಹಾಗಾಗಿ ಮನೆಯಲ್ಲಿ ರುವ ಒಬ್ಬ ಸದಸ್ಯರ ತಲೆಯಲ್ಲಿ ಹೇನು ಇಣುಕಿದರೆ ಸಾಕು. ಮನೆ ಮಂದಿಗೆಲ್ಲ ಉಚಿತ ಬೋನಸ್ ಇದ್ದ ಹಾಗೆ.
ಆ ಹೇನುಗಳ ಕಡಿತಕ್ಕೆ ಸರಿಯಾಗಿ ನಿದ್ರೆಯೆ ಬರೋದಿಲ್ಲ ಅನ್ನಿ. ಬೆಳಗ್ಗೆ ಎದ್ದ ತಕ್ಷಣ ಅವುಗಳನ್ನು ಹೇನು ಬರುವ ಬಾಚಣಿಗೆಯಿಂದ ತಲೆಯನ್ನು ಬಾಚಿ ಅವುಗಳಿಗೆ ಮುಕ್ತಿ ಕೊಡದಿದ್ದರೆ ನಮಗೆ ಸಮಾಧಾನವೇ ಇರುವುದಿಲ್ಲ. ನಮ್ಮ ಹಳ್ಳಿಯ ಕಡೆ ಹೆಂಗಸರೆಲ್ಲಾ ಪಡಸಾಲೆಯ ಮೆಟ್ಟಿಲುಗಳಲ್ಲಿ ಸ್ಟೆಪ್ ಬೈ ಸ್ಟೆಪ್ ಕೂತು ತಲೆ ಹೇನುಗಳ ಹುಡುಕಾಟ ನಡೆಸುತ್ತಿದ್ದ ದೃಶ್ಯವೇ ಅಮೋಘ.
ದೊಡ್ಡ ಹೇನಿಗೆ ದಡಿ ಎಂತಲೂ ಅವುಗಳ ಮರಿಗಳಿಗೆ ಮೊಟ್ಟೆಯಿಂದ ಶುರುವಾಗಿ, ಹೂ ನತ್ತು, ನತ್ತು ಹೀಗೆ ವೆರೈಟಿ ಹೆಸರುಗಳು. ಹಿಂದೆಲ್ಲ ಹೇನುಗಳ ಮೊಟ್ಟೆ ಸೀರುವುದಕ್ಕಾಗಿ ಸೀರಣಿಗೆಯನ್ನು ಬಳಸುತ್ತಿದ್ದರು. ಸೀರಣಿಗೆಯನ್ನು ಪ್ರೆಸ್ ಮಾಡಿದರೆ ಸಾಕು ಆ ಸೀರಣಿಗೆಯಲ್ಲಿ ಸಿಕ್ಕಿ ಹಾಕಿಕೊಂಡ ಮೊಟ್ಟೆಗಳ ನರಕ್ಕೆನ್ನುವ ಶಬ್ದ ಕಿವಿಗಳಿಗೆ ಇಂಪು. ದೊಡ್ಡವರು ಹಿಡಿದು ಕೊಡುತ್ತಿದ್ದ ಹೇನುಗಳನ್ನು ಲೆಕ್ಕ ಹಾಕುವುದು, ಅವುಗಳನ್ನು ಕುಕ್ಕುವುದು ಮಕ್ಕಳಿಗೆಲ್ಲ ಒಂದು ಮೋಜಿನ ಆಟದಂತಿರುತ್ತಿತ್ತು.
ಅಕ್ಕ ಪಕ್ಕದ ಮನೆಯವರೆಲ್ಲ ಇದಕ್ಕಾಗಿಯೂ ಒಂದಾಗಿ ಬಿಡುತ್ತಿದ್ದರು. ನಿನ್ನ ತಲೆಯಲ್ಲಿ ಏನು ಬಂದಾಗ ನಾನು ಕ್ಲೀನ್ ಮಾಡಿ ಕೊಡುತ್ತೇನೆ. ನನ್ನ ತಲೆಯಲ್ಲಿ ಹೇನು ಬಂದಾಗ ನೀನು ಕ್ಲೀನ್ ಮಾಡಿ ಕೊಡು ಎನ್ನುವ ಒಪ್ಪಂದವಾಗಿರುತ್ತಿತ್ತು. ಇವೆಲ್ಲ ಈಗ ಮಾಯವಾಗಿವೆ ಅನ್ನಿ.
ಜನರೆಲ್ಲಾ ರಾಸಾಯನಿಕ ಯುಕ್ತವಾದ ಶ್ಯಾಂಪೂಗಳನ್ನೆಲ್ಲ ಬಳಸಿ ತಲೆ ಸ್ನಾನ ಮಾಡುತ್ತಿರುವಾಗ ನಮಗೆ ಉಳಿಗಾಲವೆಲ್ಲಿ ಎಂದು ಓಟ ಕಿತ್ತಿರಬೇಕು. ಈಗ ಬದಲಾದ ಕಾಲಮಾನದಲ್ಲಿ ತಲೆಹೊಟ್ಟು, ಹೇನಿನ ಜಾಗವನ್ನು ಆಕ್ರಮಿಸಿಕೊಂಡಿದೆ ಎನ್ನಬಹುದು.
ಪಾಪಿ ಹೇನುಗಳು ಎಂದು ಬಯ್ಯುತ್ತಿದ್ದ ನಾವೆಲ್ಲ ಇಂದು ಪಾಪ ಹೇನುಗಳು ಎನ್ನುವಂತಾಗಿದೆ. ಅಲ್ಲವೇ??
- ರಮ್ಯಾ ರಾಜ್
