ಮನ ಗೆದ್ದ 'ಬೆಲ್ ಬಾಟಮ್' …

‘ಬೆಲ್ ಬಾಟಮ್’ ಪದ ಕೇಳು ಕೇಳುತ್ತಿದ್ದಂತೆ ಮನಸ್ಸಿಗೆ ಏನೋ ಒಂದು ಥರ ಖುಷಿ ಕೊಡುತ್ತದೆ. ಅಪ್ಪ ತೊಡುತ್ತಿದ್ದ ಹೂವು ಹೂವಿನ ಉದ್ದ ಕಾಲರ್ ಶರ್ಟ್, ಬೆಲ್ ಬಾಟಮ್ ಪ್ಯಾಂಟ್ ನ ಕಾಲದ ಸಿಹಿ ಸಿಹಿ ನೆನಪುಗಳತ್ತ ಕರೆದೊಯ್ಯುತ್ತದೆ. ಆ ಸುಮಧುರ ನೆನಪುಗಳನ್ನು ಮನಸ್ಸಿನಲ್ಲಿ ಇಟ್ಟುಕೊಂಡೆ ರಿಷಬ್ ಶೆಟ್ಟಿ ಅವರ ‘ಬೆಲ್ ಬಾಟಮ್’ ಸಿನಿಮಾ ನೋಡಲು ಹೋದೆ.

ಅರೆ ರೇ.. ಸಿನಿಮಾ ನಾನು ಅಂದುಕೊಂಡ ಹಾಗೆ ಬೆಲ್ ಬಾಟಮ್ ಪ್ಯಾಂಟ್ ನ ಕಾಲದ ಕತೆ ಅಲ್ಲವೇ ಅಲ್ಲ. ಎಲ್ಲ ಇಂದಿನ ಕತೆಯೇ. ಆದರೆ ಸಿನಿಮಾಕ್ಕೆ ಬೆಲ್ ಬಾಟಮ್ ಹೆಸರು ಹೇಗೆ ಬಂತು? ಎಂದೆಲ್ಲ ನೀವೆಲ್ಲ ಸಹಜವಾಗಿಯೇ ಕೇಳಬಹುದು. ಅದೇ ಸಿನಿಮಾದ ಕುತೂಹಲ.’ಬೆಲ್ ಬಾಟಮ್’ ಪಕ್ಕ ಪತ್ತೇದಾರಿ ಕನ್ನಡ ಸಿನಿಮಾ.

ಸಿನಿಮಾದ ನಾಯಕ ರಿಷಬ್ ಶೆಟ್ಟಿ ಮತ್ತು ಅವರ ಅಪ್ಪನ ಪಾತ್ರದಾರಿ ಅಚ್ಚುತ್ ಅವರ ನಗೆ ಚಟಾಕಿಯಿಂದ ಸಿನಿಮಾ ಶುರುವಾಗುತ್ತದೆ. ಪೊಲೀಸ್ ಸ್ಟೇಷನ್ ನಲ್ಲಿ ಆಗುವ ಕಳ್ಳತನವನ್ನು ಬೆನ್ನಟ್ಟಿ ಹೋಗುವ ನಾಯಕ ತನ್ನ ಪತ್ತೇದಾರಿಯಿಂದ ಕಳ್ಳರನ್ನು ಹೇಗೆಲ್ಲ ಪತ್ತೆ ಹಚ್ಚುತ್ತಾನೆ? ಕೊನೆಗೆ ಯಾರೆಲ್ಲ ಕಳ್ಳರಾಗುತ್ತಾರೆ ? ಎನ್ನುವ ಸ್ವಾರಸ್ಯಭರಿತ ಕತೆಯನ್ನೆಲ್ಲ ನನ್ನ ಲೇಖನದಲ್ಲೇ ಹೇಳಿ ಮುಗಿಸೋಣವೆನ್ನಿಸುತ್ತಿದೆ. ಅಷ್ಟು ಸಿನಿಮಾ ಖುಷಿ ಕೊಟ್ಟಿದೆ. ಆದರೆ ಸಿನಿಮಾದಲ್ಲಿ ಕಳ್ಳನನ್ನು ಹಿಡಿಯಲು ನಾಯಕ ತಲೆ ಓಡಿಸಿದ ರೀತಿ ನೋಡಿದರೆ ನನ್ನನ್ನು ಕೂಡ ಪತ್ತೆ ಹಚ್ಚುತ್ತಾರೆ ಎನ್ನುವ ಭಯ. ಆದಕಾರಣ ಸದ್ಯಕ್ಕೆ ಆ ದುಃಸಾಹಸಕ್ಕೆ ಕೈ ಹಾಕುವುದು ಬೇಡ. ಸಿನಿಮಾದ ರೋಚಕ ಕತೆಯನ್ನು ನೀವೆಲ್ಲ ಚಿತ್ರಮಂದಿರದಲ್ಲಿಯೇ ದುಡ್ಡು ಕೊಟ್ಟೇ ನೋಡಬೇಕು.ಈ ಸಿನಿಮಾ ಪ್ರೇಕ್ಷಕರಿಗೆ ಮನರಂಜನೆ ಕೊಡುವಲ್ಲಿ ಕಂಜೂಸ್ ಆಗಿಲ್ಲ. ಸಖತ್ ಉದಾರತೆಯಿಂದ ಮನರಂಜನೆಯನ್ನು ನೀಡಿದ್ದಾರೆ. ಮತ್ತು ಸಿನಿಮಾ ತೆರೆಯ ಮೇಲೆ ಅಷ್ಟೇ ಅದ್ಭುತವಾಗಿ ಮೂಡಿಬಂದಿದೆ.

ರಿಷಬ್ ಶೆಟ್ಟಿ ಅವರ ನಿರ್ದೇಶನದ ‘ಕಿರಿಕ್ ಪಾರ್ಟಿ’, ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ’ ಸಿನಿಮಾಗಳನ್ನು ನೋಡಿದ್ದೇವೆ. ಅವರ ನಿರ್ದೇಶನದ ಕೈ ಚಳಕ ನೋಡಿದ್ದೇವೆ. ಆದರೆ ಈ ಸಿನಿಮಾದಲ್ಲಿ ಅವರನ್ನು ನಾಯಕನಾಗಿ ನೋಡುವುದಷ್ಟೇ ಅಲ್ಲ, ಅವರಲ್ಲಿನ ಒಬ್ಬ ಹಾಸ್ಯ ಕಲಾವಿದನನ್ನು ಕೂಡ ನೋಡಬಹುದು. ಅಷ್ಟರ ಮಟ್ಟಿಗೆ ಪ್ರೇಕ್ಷಕನನ್ನು ನಗಿಸಿದ್ದಾರೆ. ರಿಷಬ್ ಶೆಟ್ಟಿ ಮೊದಲ ಬಾರಿಗೆ ನಾಯಕರಾದರೂ ಸಿನಿಮಾಕ್ಕೆ ಯಾವುದೇ ಮೋಸವಾಗಿಲ್ಲ. ಪಾತ್ರಕ್ಕೆ ಪೂರ್ಣ ಪ್ರಮಾಣದ ನ್ಯಾಯವನ್ನು ಅವರು ಒದಕಿಸಿದ್ದಾರೆ.

ಚಿತ್ರಕತೆ ಮತ್ತು ನಿರ್ದೇಶಕ ಜಯತೀರ್ಥ ಅವರು ಸಿನಿಮಾದ ಮುಖ್ಯ ಕಾರಣಕರ್ತರು ಎಂದೇ ಹೇಳಬಹುದು. ಪತ್ತೇದಾರಿ ಸಿನಿಮಾ ಮಾಡುವುದು ಅಷ್ಟು ಸುಲಭದ ಕೆಲಸವಲ್ಲ, ಪ್ರೇಕ್ಷಕನನ್ನು ಕೊನೆಯವರೆಗೂ ಹಿಡಿತಿಟ್ಟಿಕೊಳ್ಳುವುದು ಮುಖ್ಯ, ಆ ಕೆಲಸವನ್ನು ಜಯತೀರ್ಥ ಅವರು ಚನ್ನಾಗಿ ಮಾಡಿದ್ದಾರೆ. ರಘು ನಿಡುವಳ್ಳಿಯವರ ಪಂಚಿಂಗ್ ಸಂಭಾಷಣೆ ಸಕ್ಕತ್ ಖುಷಿ ಕೊಡುತ್ತದೆ. ಮತ್ತು ಕನ್ನಡದಲ್ಲಿ ಹೊಸತರವಾದ ಕತೆಯನ್ನು ಹೆಣೆದು, ಅತ್ಯಂತ ಸರಳವಾಗಿ ಜನರ ಹೃದಯಕ್ಕೆ ಮುಟ್ಟಿಸುವಲ್ಲಿ ಯಶಸ್ಸಾಗಿದ್ದಾರೆ. ಕತೆಯನ್ನು ನಂಬಿ ದುಡ್ಡು ಹಾಕಿದ ನಿರ್ಮಾಪಕ ಸಂತೋಷ ಕುಮಾರ ಅವರಿಗೂ ಸಿನಿಮಾ ಕೈ ಕೊಟ್ಟಿಲ್ಲ.

ಅವರ ಸೂಟ್ ಕೇಸ್ ತುಂಬಾ ಜಣ-ಜಣ ಕಾಂಚಾಣ ತುಂಬಿರಬಹುದು. ಇದೇ ಸಂತೋಷದಲ್ಲಿ ಅವರು ಇನ್ನಷ್ಟು ಕನ್ನಡ ಸಿನಿಮಾಗಳಿಗೆ ದುಡ್ಡು ಹಾಕಲಿ. ಹೊಸ ಹೊಸ ಕತೆಗಳನ್ನು, ಹೊಸ ಕಲಾವಿದರಿಗೆ ಪ್ರೋತ್ಸಾಹ ಇವರಿಂದ ಸಿಗಲಿ ಎನ್ನುವುದು ಆಶಯ. ಇನ್ನು ನಾಯಕಿ ಹರಿಪ್ರಿಯಾ ಈ ಸಿನಿಮಾದಲ್ಲಿ ಬುದ್ದಿವಂತೆಯಾಗಿ ಕಾಣುವುದಷ್ಟೇ ಅಲ್ಲ, ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಸಿನಿಮಾದಲ್ಲಿ ಬಂದಂತಹ ಪ್ರತಿಯೊಂದು ಪಾತ್ರಗಳು ಅನಾವಶ್ಯಕವೆನ್ನಿಸುವುದಿಲ್ಲ. ಕತೆಗೆ ಪ್ರತಿ ಪಾತ್ರಗಳು ಪೂರಕವಾಗುತ್ತಾ ಹೋಗುತ್ತದೆ. ಒಟ್ಟಿನಲ್ಲಿ ಪ್ರೇಕ್ಷಕರು ‘ಬೆಲ್ ಬಾಟಮ್’ ನೋಡಿ ಹೊರಗೆ ಬರುವಷ್ಟರಲ್ಲಿ ಅವರ ಮುಖದಲ್ಲಿ ನಗು ಮೂಡಿಸಿಯೇ ಕಳುಹಿಸುತ್ತದೆ.

(ಶಿವಪ್ಪ ನಾಯಕನ ಕೋಟೆಯಲ್ಲಿರುವ ಫಲಕದ ಚಿತ್ರ )

ರಿಷಬ್ ಶೆಟ್ಟಿ ಮತ್ತುಅವರ ಚಿತ್ರ ತಂಡದ ಇನ್ನೊಂದು ವಿಶೇಷತೆ ಏನೆಂದರೆ ಅತ್ಯಂತ ಸರಳವಾಗಿ, ಸುಂದರವಾಗಿ ಸಿನಿಮಾವನ್ನು ಪ್ರೇಕ್ಷಕರನ್ನು ಮುಟ್ಟಿಸುವಲ್ಲಿ ಸದಾ ಪ್ರಯತ್ನಿಸುತ್ತಲೇ ಇರುತ್ತಾರೆ. ಅದರಲ್ಲಿಯೂ ಅವರ ಸಿನಿಮಾಗಳು ಹೆಚ್ಚಾಗಿ ಕತೆ ಆಧಾರಿತವಾಗಿರುತ್ತವೆ. ಮತ್ತು ಮುಚ್ಚಿ ಹೋದ ಕರ್ನಾಟಕದ ಸೌಂದರ್ಯವು ಅವರ ಸಿನಿಮಾಗಳಲ್ಲಿ ಹೊಸ ಹೊಳಪನ್ನು ಪಡೆದು ಕೊಳ್ಳುತ್ತವೆ. ‘ಬೆಲ್ ಬಾಟಮ್’ ಸಿನಿಮಾದಲ್ಲಿಯೂ ಶಿವಪ್ಪ ನಾಯಕ ಕೋಟೆಯನ್ನು ತೋರಿಸಲಾಗಿದೆ. ಇದು ಶಿವಮೊಗ್ಗ ಜಿಲ್ಲೆಯ ‘ನಗರ’ ಎನ್ನುವ ಐತಿಹಾಸಿಕ ಸ್ಥಳದಲ್ಲಿದೆ.

ನಾನು ಆರು ತಿಂಗಳ ಹಿಂದೆ ಕೊಲ್ಲೂರಿಗೆ ಹೋಗುವಾಗ ಈ ಕೋಟೆಯ ಒಳಗೆ ಒಂದು ಸುತ್ತು ಹಾಕಿದ್ದೆ.ಇದು ಪಾಳು ಬಿದ್ದ ಕೋಟೆ. ಇಲ್ಲಿ ಧನ -ಕರುಗಳು ಸ್ವಚ್ಚಂಧವಾಗಿ ಈ ಕೋಟೆಯೊಳಗೆ ಹುಲ್ಲು ಮೇಯುತ್ತವೆ. ಶಿವಪ್ಪ ನಾಯಕನ ಬಗ್ಗೆ ಅಲ್ಲಿ ಚಿಕ್ಕದಾದ ಮಾಹಿತಿಯ ಫಲಕವಿದೆ. ಅಷ್ಟು ಪುರಾತನವಾದ ಕೋಟೆಗೆ ಸರ್ಕಾರದ ಯಾವುದೇ ಭದ್ರತೆಯಾಗಲಿ, ಖಾಳಜಿಯಾಗಲಿ ಇಲ್ಲ.ಜೊತೆಗೆ ಇಂದಿನ ಸಿನಿಮಾ ತಂಡಗಳು ವಿದೇಶಕ್ಕೆ ಹಾರುವ ಭರದಲ್ಲಿ ಕರ್ನಾಟಕದ ಸೌಂದರ್ಯವನ್ನು ಮರೆಯುತ್ತಿರುವುದು ಕೆಲವೊಮ್ಮೆ ಬೇಸರ ತರುತ್ತವೆ. ಆದರೆ ‘ಬೆಲ್ ಬಾಟಮ್’ ಚಿತ್ರ ತಂಡ ಆ ಬೇಸರವನ್ನು ದೂರ ಮಾಡಿದೆ. ಶಿವಪ್ಪ ನಾಯಕ ಕೋಟೆಯ ಸೌಂದರ್ಯವನ್ನು ತಮ್ಮ ಕಾಮೆರಾದ ಕಣ್ಣುಗಳಲ್ಲಿ ಸೆರೆ ಹಿಡಿದಿದ್ದಾರೆ.ಮತ್ತು ಕೋಟೆಯ ಸೌಂದರ್ಯವನ್ನು ಇನ್ನಷ್ಟು ಜನರಿಗೆ ತಲುಪುವಂತೆ ಮಾಡಿದ್ದಾರೆ.

ಹೀಗೆ ಅವರ ಚಿತ್ರ ತಂಡದಿಂದ ಹೊಸ ಹೊಸ ಪ್ರಯತ್ನಗಳು, ಸಿನಿಮಾದಲ್ಲಿನ ಸಂಶೋಧನೆಗಳು ನಡೆಯುತ್ತಿರಲಿ ಎನ್ನುವುದು ಆಕೃತಿ ಕನ್ನಡದ ಆಶಯ.

bf2fb3_90f3133197a2408e8e50f4c733ca019c~mv2.jpg

ಲೇಖನ : ಶಾಲಿನಿ ಪ್ರದೀಪ್

aakritikannada@gmail.com

Home
News
Search
All Articles
Videos
About
%d bloggers like this:
Aakruti Kannada

FREE
VIEW