ಬಿಗ್ ಬಾಸ್ ರಿಯಾಲಿಟಿ ಶೋ ಮುಗಿದು ತಿಂಗಳುಗಳೇ ಕಳಿದಿವೆ. ಕೆಲವು ಸ್ಪರ್ಧಿಗಳು ತಮ್ಮ ತಮ್ಮ ಬದುಕಿನಲ್ಲಿ ತಲ್ಲೀನರಾದರೆ, ಇನ್ನು ಕೆಲವು ಸ್ಪರ್ಧಿಗಳು ಬಿಗ್ ಬಾಸ್ ಮನೆಯಲ್ಲಿ ನಡೆದ ಕಹಿ ಘಟನೆಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಅವರಿವರ ವಿರುದ್ಧ ಹಲ್ಲು ಮಸೆಯುತ್ತಿದ್ದಾರೆ.
ಬಿಗ್ ಬಾಸ್ ೫ನೇ ಸರಣಿಯವರೆಗೂ ಭಾಗವಹಿಸಿದಂತಹ ಸ್ಪರ್ಧಿಗಳೆಲ್ಲ ಬಿಗ್ ಬಾಸ್ ಮನೆಯ ಬಗ್ಗೆ ಸಾಕಷ್ಟು ಗೌರವವನ್ನು ಇಟ್ಟುಕೊಂಡಿದ್ದನ್ನು ನೋಡಿದ್ದೇವೆ. ಮತ್ತು ಅವರ ವೃತ್ತಿ ಬದುಕಿನಲ್ಲಿ ಬಿಗ್ ಬಾಸ್ ನ ಪಾತ್ರ ದೊಡ್ಡದಿರುವುದನ್ನುಕೂಡಾ ನೋಡಿದ್ದೇವೆ. ಆದರೆ ಬಿಗ್ ಬಾಸ್ ಸೀಸನ್ ೬ ರ ಸ್ಪರ್ಧಿಗಳಿಗೆ ಬಿಗ್ ಬಾಸ್ ಮನೆ ಅವರ ಬದುಕಿನಲ್ಲಿ ಮುಳ್ಳನ್ನು ತಂದೊಡ್ಡಿತಾ? ಎನ್ನುವ ಪ್ರಶ್ನೆಗಳಿವೆ. ಇಲ್ಲಿ ಯಾರು ಎಡವಿದರು?. ಸ್ಪರ್ಧಿಗಳ ಆಯ್ಕೆಯಲ್ಲಿ ಬಿಗ್ ಬಾಸ್ ಎಡವಿತಾ? ಅಥವಾ ಬಿಗ್ ಬಾಸ್ ಮನೆಗೆ ಬಂದು ಸ್ಪರ್ಧಿಗಳು ಎಡವಿದರಾ? ಯಾವುದು ಗೊತ್ತಿಲ್ಲ. ಆದರೆ ಸಿಕ್ಕ ಅವಕಾಶವನ್ನು ಸದುಪಯೋಗ ಮಾಡಿಕೊಳ್ಳಬೇಕಾದದ್ದು ಸ್ಪರ್ಧಿಗಳ ಕೆಲಸ. ಆದರೆ ಅದನ್ನೆಲ್ಲ ಬಿಟ್ಟು ಬಿಗ್ ಬಾಸ್ ಮನೆಯಿಂದ ಹೊರ ಬಂದ ಮೇಲೂ ಅವರಿವರ ಮೇಲೆ ಕೆಸರಾಟ ಆಡುವುದು ಮೂರ್ಖತನದ ವಿಷಯ ಎನ್ನುವುದು ಹಲವರ ಅನಿಸಿಕೆ.
ಇವೆಲ್ಲ ಹೊರತು ಪಡಿಸಿ ನೋಡುವುದಾದರೆ ಈ ಸರಣಿಯಲ್ಲಿನ ಕಂಡಂತಹ ಅದ್ಬುತ ಪ್ರತಿಭೆ ಎಂದರೆ ಅಕ್ಷತಾ ಪಾಂಡವಪುರ.ಈ ಸರಣಿಯಲ್ಲಿ ಅವರ ಪ್ರತಿಭೆ ಬೂದಿ ಮುಚ್ಚಿದ ಕೆಂಡದಂತೆ ಆಗಾಗ ಹೊರಗೆ ಬಂದರು ಕೂಡಾ ಜನರ ಮನಸ್ಸಿನಲ್ಲಿ ಶಾಶ್ವತವಾಗಿ ಒಂದು ಛಾಪು ಮೂಡಿಸಿದಂತಹ ನಟಿ. ಅವರು ನಟಿಸಿದ ಮೊದಲ ಸಿನಿಮಾ ‘ಪಲ್ಲಟ’ ದಲ್ಲಿನ ಅಭಿನಯಕ್ಕಾಗಿ ‘ರಾಜ್ಯ ಚಲನಚಿತ್ರ ಪ್ರಶಸ್ತಿ’ಯನ್ನು ಗೆದ್ದುಕೊಂಡವರು. ‘ಪಲ್ಲಟ’ ಒಂದು ಕಲಾತ್ಮಕ ಚಿತ್ರ. ಕಲಾತ್ಮಕ ಚಿತ್ರಗಳು ಸಾಮಾನ್ಯವಾಗಿ ಎಲ್ಲ ಚಿತ್ರಮಂದಿರಗಳಲ್ಲಿ ನೋಡಲು ಸಿಗುವುದಿಲ್ಲ.ಇಂತಹ ಸಿನಿಮಾಗಳಲ್ಲಿನ ಒಳ್ಳೆಯ ಕಲಾವಿದರು, ನಿರ್ದೇಶಕರು ಸಾಮಾನ್ಯ ಜನರಿಗೆ ಮುಟ್ಟುವಲ್ಲಿ ಸಾಧ್ಯವಾಗುವುದಿಲ್ಲ. ಆದರೆ ಬಿಗ್ ಬಾಸ್ ಮನೆ ಅಕ್ಷತ ಅವರಂತಹ ಎಷ್ಟೋ ಪ್ರತಿಭೆಯನ್ನು ಇಡೀ ಕರ್ನಾಟಕಕ್ಕೆ ಪರಿಚಿಯಿಸಿತು. ನಮ್ಮ ಕರ್ನಾಟಕದಲ್ಲಿನ ಪ್ರತಿಭೆಗಳನ್ನು ಹುಡುಕಿ ಹೆಕ್ಕಿ ತೆಗೆದು ಜನರಿಗೆ ಮುಟ್ಟಿಸುವಲ್ಲಿ ಬಿಗ್ ಬಾಸ್ ಒಂದು ಉತ್ತಮ ವೇದಿಕೆ ಎಂದು ಹೇಳಬಹುದು.
ಆದರೆ ಬಿಗ್ ಬಾಸ್ ಮನೆ ಅಕ್ಷತಾ ಅವರ ಬದುಕನ್ನೇ ‘ಪಲ್ಲಟ’ ಮಾಡಿತು ಎನ್ನುವ ಮಾತುಗಳು ಹೆಚ್ಚಾಗಿ ಕೇಳಿಬಂದವು. ಅಕ್ಷತಾ ಭಾವನಾತ್ಮಕ ಜೀವಿ. ಬಿಗ್ ಬಾಸ್ ಮನೆಯಲ್ಲಿ ಅವರ ಪ್ರತಿಭೆಯ ಬಗ್ಗೆ ಮಾತಾಡುವುದಕ್ಕಿಂತ ಇಲ್ಲ-ಸಲ್ಲದ ಮಾತಿಗೆ ಹೆಚ್ಚು ಆಹಾರವಾದರು. ಆನ್ ಲೈನ್ ತುಂಬಾ ಅವರ ಬಗ್ಗೆ ವಿರೋಧದ ಮಾತುಗಳು ಹೆಚ್ಚಾಗಿ ಹರಿದಾಡಿದವು. ಆದರೆ ಟಿವಿಯನ್ನು ಮನರಂಜನೆಗಾಗಿ ನೋಡುವಾಗ ಪ್ರೇಕ್ಷಕಳಾಗಿ ನಾನು, ಅಕ್ಷತಾ ಅವರ ಪ್ರತಿಭೆಯನ್ನು ಸೂಕ್ಷ್ಮವಾಗಿ ನೋಡುತ್ತಾ ಹೋದೆ. ಬಿಗ್ ಬಾಸ್ ಮನೆಯಲ್ಲಿ ಅವರ ತೊಡುತ್ತಿದ್ದ ವಿಭಿನ್ನ ರೀತಿಯ ಉಡುಗೆ-ತೊಡಿಗೆಗಳು, ಅವರು ಮಾಡುತ್ತಿದ್ದಂತಹ ಟಾಸ್ಕ್ ಗಳಲ್ಲಿನ ಹೊಸತನ, ಕ್ರಿಯಾಶೀಲತೆಯನ್ನು ಗಮನಿಸಿದೆ. ಅದರಲ್ಲಿಯೂ ಅವರು ಬೆಲ್ಲಿ ನೃತ್ಯವನ್ನು ಬೆಲ್ಲಿ ಬಳುಕುವಿಕೆ ಇಲ್ಲದೆಯೇ, ಮುಖದ ಹಾವಭಾವದಲ್ಲಿ ತೋರಿಸಿದಂತಹ ರೀತಿ ಕೇವಲ ಅದ್ಬುತವಲ್ಲ, ಅತ್ಯದ್ಭುತವಾಗಿತ್ತು. ಇದರ ಬಗ್ಗೆ ಆನ್ ಲೈನ್ ನಲ್ಲಿ ಪ್ರಶಂಸೆಗಳೇನು ಕಾಣಲಿಲ್ಲ. ಕಲಾವಿದನಿಗೆ ತೆಗಳಿಕೆ ಮತ್ತು ಹೊಗಳಿಕೆ ಎರಡು ಸಮನಾಗಿ ಪ್ರೇಕ್ಷಕರಿಂದ ಸಿಗಬೇಕು.ಇದರಲ್ಲಿ ಒಂದು ಹೆಚ್ಚಾದರೂ ಆ ಕಲಾವಿದ ಹೆಚ್ಚು ಕಾಲ ಬೆಳೆಯಲು ಸಾಧ್ಯವಿಲ್ಲ. ಅದು ಅಕ್ಷತಾ ಅವರ ಬದುಕಿನಲ್ಲಿ ತೆಗಳಿಕೆಗಳೇ ಪ್ರೇಕ್ಷಕರಿಂದ ಸಾಕಷ್ಟು ಸಿಕ್ಕಿದವು. ಆದರೆ ಅವರಲ್ಲಿನ ಕಲೆಯನ್ನು ಒಮ್ಮೆ ಕಣ್ಣಾಡಿಸುವುದಾದರೆ, ಅವರಲ್ಲಿ ಅದ್ಬುತ ನಟಿ ಕಾಣುತ್ತಾರೆ. ತೆಗಳಿಕೆಯ ಜೊತೆಗೆ ಸ್ವಲ್ಪ ಹೊಗಳಿಕೆಯು ಅಕ್ಷತಾವರಿಗೆ ಇರಲಿ ಎನ್ನುವುದು ನನ್ನ ಅನಿಸಿಕೆ.
ಮಂಡ್ಯ ಜಿಲ್ಲೆಯ ಗ್ರಾಮಾಂತರ ಪ್ರದೇಶದಲ್ಲಿ ಹುಟ್ಟಿ ಬೆಳೆದ ಅಕ್ಷತಾ ಅವರ ಪ್ರತಿಭೆ ಸಾಮಾನ್ಯದ್ದು ಅಲ್ಲ. ಅವರು ಬೆಳೆದು ಬಂದಂತಹ ದಾರಿಯಲ್ಲಿ ಸಾಕಷ್ಟು ಕಲ್ಲು, ಮುಳ್ಳುಗಳಿದ್ದವು. ಅದಕ್ಕೆಲ್ಲ ಅವರು ಜಗ್ಗಲಿಲ್ಲ-ಬಗ್ಗಲಿಲ್ಲ. ಅವರ ಮೇಲೆ ಸಮಾಜದ ದೃಷ್ಟಿಕೋನ ಬದಲಾದರೂ ಅವುಗಳಿಗೆ ಸೊಪ್ಪು ಹಾಕಲಿಲ್ಲ. ಅವರ ಮುಂದೆ ಇದ್ದಂತಹ ಗುರಿ ಎಂದರೆ ರಂಗಭೂಮಿಯಲ್ಲಿ ಏನಾದರೂ ಸಾಧಿಸಬೇಕು ಎನ್ನುವ ಹಠ. ಗುರಿ ಬೆನ್ನಟ್ಟಿ ಹೋಗಿ ಸೇರಿಕೊಂಡಿದ್ದೆ ಮೈಸೂರಿನ ರಂಗಾಯಣದಲ್ಲಿ. ಅಲ್ಲಿಂದ ಶುರುವಾದ ರಂಗ ಪಯಣ ಮುಂದೆ ನೀನಾಸಂ ಮತ್ತು ದೆಹಲಿಯಲ್ಲಿನ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ (NSD) ಶಾಲೆಗಳು ಅವರ ನಟನೆಯನ್ನು ಇನ್ನಷ್ಟು ಪಕ್ವಗೊಳಿಸಿದವು.
NSD ಬಗ್ಗೆ ಹೇಳಬೇಕೆಂದರೆ ಅಲ್ಲಿ ಪದವಿ ಪಡೆಯುವುದು ಅಷ್ಟು ಸುಲಭವಲ್ಲ. ಪ್ರತಿ ರಾಜ್ಯದಿಂದ ಒಬ್ಬರನ್ನು ಅಥವಾ ಇಬ್ಬರನ್ನೂ ಮಾತ್ರ ಅಲ್ಲಿ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಆಯ್ಕೆಗಾಗಿ ಸಾಕಷ್ಟು ಪೈಪೋಟಿಗಳು ನಡೆಯುತ್ತವೆ. ಒಂದು ಸಾರಿ NSDನಲ್ಲಿ ಆಯ್ಕೆಯಾದರೆ, ಅವರು ಅಲ್ಲಿಂದ ಹೊರಗೆ ಬರುವಷ್ಟರಲ್ಲಿ ಪರಿಪೂರ್ಣ ಕಲಾವಿದರಾಗಿ ಹೊರಹೊಮ್ಮುತ್ತಾರೆ.ಅಷ್ಟರ ಮಟ್ಟಿಗೆ NSDಕಲಾವಿದನನ್ನು ತಯಾರಿ ಮಾಡಿ ಕಳುಹಿಸುತ್ತದೆ. ಆದರೆ ಇಲ್ಲಿ ಆಯ್ಕೆಯಾಗುವುದು ಅಷ್ಟು ಸುಲಭವಲ್ಲ.
ಅದರಲ್ಲಿಯೂ ಗ್ರಾಮೀಣ ಪ್ರದೇಶದ ಹುಡುಗಿ ಅಕ್ಷತಾ ಅವರಿಗೆ ದೆಹಲಿಯ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾದಲ್ಲಿ ಪದವಿ ಪಡೆಯುವುದು ಅಷ್ಟು ಸುಲಭವಾಗಿರಲಿಲ್ಲ. NSD ಯಲ್ಲಿಅವಕಾಶ ಗಿಟ್ಟಿಸಲು ಹಿಂದಿ ಮಾತಾಡುವುದು ಅನಿವಾರ್ಯವಾಗಿತ್ತು. ಆದರೆ ಅವರು ಬೆಳೆದಂತಹ ವಾತಾವರಣದಲ್ಲಿ ಕನ್ನಡವೇ ಕನ್ನಡಿಗರಿಗೆ ಅರ್ಥವಾಗುವುದು ಕಷ್ಟ. ಅಂಥದರಲ್ಲಿ ಹಿಂದಿ ಭಾಷೆ ಕಲಿಯುವುದು ಮತ್ತು ಕೇಳುವುದು ದೂರದ ಮಾತಾಗಿತ್ತು. ಅವರಲ್ಲಿನ ಕಲಿಯುವಿಕೆಯ ತುಡಿತ ಅವರಲ್ಲಿನ ಆತ್ಮವಿಶ್ವಾಸವನ್ನು ಕುಗ್ಗಿಸಲಿಲ್ಲ. NSD ಪ್ರವೇಶ ಪರೀಕ್ಷೆಯನ್ನು ಕನ್ನಡ ಭಾಷೆಯಲ್ಲಿಯೇ ಬರೆದರು. ತಮ್ಮ ನಟನೆಯ ಮೂಲಕ ಸಂದರ್ಶಕರ ಮನಸ್ಸನ್ನು ಕೂಡಾ ಗೆದ್ದರು. ಮುಂದೆ ದೆಹಲಿಗೆ ಹೋಗಿ ನಾಟಕದಲ್ಲಿ ಪದವಿಯನ್ನು ಕೂಡಾ ಪಡೆದು ಕೊಂಡರು. ನಟನೆಯಲ್ಲಿ ತಮ್ಮನ್ನು ತಾವು ಸಾಕಷ್ಟು ಕರಗತ ಮಾಡಿಕೊಂಡರು.ಅಕ್ಷತಾ ಪೂರ್ಣಪ್ರಮಾಣದ ರಂಗನಟಿಯಾಗಿ ಹೊರಹೊಮ್ಮುತ್ತಿದ್ದಂತೆ ‘ಪಲ್ಲಟ’ ಸಿನಿಮಾಕ್ಕೆ ಅವಕಾಶ ಬಂದಿತು.
ಅಕ್ಷತಾ ಅವರು ಸಿನಿಮಾದಲ್ಲಿ ನಟಿಯಾಗಬೇಕು ಎಂದು ತಾವಾಗಿಯೇ ಹೋದವರಲ್ಲ. ಒಬ್ಬ ಪೂರ್ಣ ಪ್ರಮಾಣದ ರಂಗಭೂಮಿ ನಟಿಯಾಗಬೇಕು ಎಂದು ಹೊರಟವರು. ಸಿನಿಮಾವೇ ಅವರನ್ನು ಹುಡುಕಿಕೊಂಡು ಬಂದಾಗ ಬೇಡವೆನ್ನಲಿಲ್ಲ. ರಂಗಭೂಮಿಯಲ್ಲಿಯೇ ಬೇರೂರಬೇಕು ಅಂದುಕೊಂಡಂತಹ ಹುಡುಗಿಗೆ ಸಿನಿಮಾದಲ್ಲಿ ಆಯ್ಕೆಯಾದಾಗ ಕೆಲವಷ್ಟು ಸವಾಲುಗಳು ಎದುರಾದವು. ಅದಕ್ಕೆಲ್ಲ ಅಂಜಲಿಲ್ಲ. ಬದಲಾಗಿ ಸಿನಿಮಾಕ್ಕೆ ಬೇಕಾಗುವ ಪೂರ್ವಭಾವಿ ಸಿದ್ಧತೆಗಳನ್ನು ಮಾಡಿಕೊಂಡರು. ಅರಲುಕುಪ್ಪೆ ಗ್ರಾಮದಲ್ಲಿ ಎರಡು ದಿನ ವಾಸ್ತವ್ಯ ಹೂಡಿ ಅಲ್ಲಿನ ಹೆಣ್ಣು ಮಕ್ಕಳ ಚಲನವಲನ ಮತ್ತು ಅವರ ವೇಷ -ಭೂಷಣವನ್ನು, ನಡೆ ನುಡಿಯನ್ನು ಸೂಕ್ಷ್ಮವಾಗಿ ಗಮನಿಸಿ ಅದನ್ನು ತಮ್ಮ ಪಾತ್ರಕ್ಕೆ ಅಳವಡಿಸಿಕೊಂಡರು. ಬಹುಶ ಇಷ್ಟೆಲ್ಲ ಸಿದ್ದತೆಗಳನ್ನು ಇಂದಿನ ಯಾವ ನಾಯಕಿಯರು ಮಾಡಿಕೊಳ್ಳುವುದು ಅನುಮಾನವೇ?. ಅವರ ಪೂರ್ವಭಾವಿ ಸಿದ್ದತೆಗಳು ‘ಪಲ್ಲಟ’ ವನ್ನು ಯಶಸ್ವಿಯಾಗಿಸಿತು. ಅವರ ಮೊದಲ ಸಿನಿಮಾಕ್ಕೆ ಹಸಿರು ನಿಶಾನೆ ಸಿಕ್ಕ ಮೇಲಂತೂ ಅವರಲ್ಲಿದ್ದಂತಹ ಆತ್ಮವಿಶ್ವಾಸ ಇಮ್ಮಡಿಗೊಂಡಿತು.
ಇನ್ನೇನ್ನು ಸಾಲು ಸಾಲು ಸಿನಿಮಾಗಳು ಬೆನ್ನಟ್ಟಿ ಬರುತ್ತವೆ ಅಂದುಕೊಳ್ಳುವಷ್ಟರಲ್ಲಿ ಅವೆಲ್ಲ ಸುಳ್ಳಾದವು. ಕಾರಣ ಅಕ್ಷತಾ ಅವರು ಪತ್ರಿಕೆಯೊಂದಕ್ಕೆ ಕೊಟ್ಟಂತಹ ಹೇಳಿಕೆ ”ನಾಯಕರಿಗೆ ನಾಯಕಿಯಾಗುವುದಿಲ್ಲ,ಕತೆಗೆ ನಾಯಕಿಯಾಗುವೆ’. ಸಿನಿಮಾದಲ್ಲಿ ನಾಯಕನೇ ಮುಖ್ಯವಾದರೆ ನಾಯಕಿಯ ಕೆಲಸವೇನು?. ಒಂದು ವೇಳೆ ಸಿನಿಮಾ ಕತೆ ಆಧಾರಿತವಾದರೆ ನಾಯಕಿಯಾಗಿ ನಟಿಸಲು ನಾನು ಸಿದ್ದ’ ಎನ್ನುವ ನೇರ ನುಡಿ ಅಕ್ಷತಾ ಅವರದಾಗಿತ್ತು. ಈ ಮಾತಿನಿಂದ ಅವರಿಗೆ ಸಿನಿಮಾದಲ್ಲಿನ ಅವಕಾಶಗಳು ಕಮ್ಮಿಯಾದವು. ಹೀಗೆ ಶುದ್ಧ ಗ್ರಾಮೀಣ ಭಾಷೆಯಲ್ಲಿ ಮನಸ್ಸು ಬಿಚ್ಚಿ ಮಾತಾಡುವ ಅಕ್ಷತಾ ಅವರ ಮಾತು ಬಹುಶ ಬಿಗ್ ಬಾಸ್ ಮನೆಯಲ್ಲಿ ಮುಳುವಾಯಿತೇನೋ?.
ಅಕ್ಷತಾ ಪಾಂಡವಪುರ ಒಳ್ಳೆಯ ಕಲಾವಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಅವರು ಸಿನಿಮಾವನ್ನೇ ಮಾಡಲಿ ಅಥವಾ ರಂಗಭೂಮಿಯನ್ನೇ ನೆಚ್ಚಿಕೊಳ್ಳಲ್ಲಿ ಪಾತ್ರಕ್ಕೆ ಜೀವ ತುಂಬುವ ಶಕ್ತಿ ಅವರಲ್ಲಿದೆ. ಅವರಿಗೆ ಸರಸ್ವತಿಯ ಕೃಪಾಕಟಾಕ್ಷವಿದೆ. ಅದನ್ನು ಅವರು ಎಂದು ಮರೆಯಬಾರದು ಮತ್ತು ಅವರಲ್ಲಿನ ಕಲೆಯನ್ನು ಆರಾಧಿಸಲಿ,ಬೆಳೆಸಲಿ. ಜೊತೆಗೆ ಇನ್ನಷ್ಟು ಒಳ್ಳೆ- ಒಳ್ಳೆಯ ಪಾತ್ರಗಳಿಗೆ ಬಣ್ಣ ಹಚ್ಚಲಿ ಎನ್ನುವುದು ಆಕೃತಿ ಕನ್ನಡದ ಆಶಯ.
ಲೇಖನ : ಶಾಲಿನಿ ಪ್ರದೀಪ್