ಜಗತ್ತಿನಲ್ಲಿ ನಾನಾ ರೀತಿಯ ಜನರಿರುವರು. ಗುಣ ಸ್ವಭಾವಗಳಲ್ಲಿ ನಡೆ ನುಡಿಗಳಲ್ಲಿ ರೀತಿ ರಿವಾಜುಗಳಲ್ಲಿ ಜಗತ್ತಿನೊಂದಿಗೆ ವ್ಯವಹರಿಸುವುದರಲ್ಲಿ ನಾನಾ ರೀತಿಯ ವ್ಯತ್ಯಾಸಗಳಿವೆ. ವ್ಯಕ್ತಿಗಳ ವ್ಯಕ್ತಿತ್ವದಲ್ಲಿಯೂ ಎರಡು ರೀತಿಯ ಗುಣ ಸ್ವಭಾವ ಹೊಂದಿದವರು ಇರುತ್ತಾರೆ. ಒಂದು ಸೌಮ್ಯ ಸ್ವಭಾವ ಇನ್ನೊಂದು ಒರಟು ಸ್ವಭಾವ. ಭಾವನೆಗಳ ಕುರಿತು ಶಾರದಾ ಶ್ರಾವಣಸಿಂಗ್ ರಜಪೂತ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಸೌಮ್ಯ ಸ್ವಭಾವ ಏನು ಮಾತಾಡಿದರೆ ಎನಾಗುತ್ತದೆಯೋ? ಹೇಗೆ ನಡೆದುಕೊಂಡರೆ ಎನಾಗುತ್ತದೆಯೋ? ಏನೋ? ಎಂದು ಅಳಿದು ಸುರಿದು ವ್ಯವಹರಿಸುವರು. ಇವರು ತುಂಬಾ ಸೂಕ್ಷ್ಮ ಮನಸ್ಸಿನವರು. ತಾವೇ ನೋವು ಅನುಭವಿಸುತ್ತಾರೆ ಹೊರತು ಮತ್ತೊಬ್ಬರಿಗೆ ನೋವುಂಟು ಮಾಡುವುದಿಲ್ಲ. ಆದರೆ ಒರಟು ಸ್ವಭಾವದವರು ಹಾಗಲ್ಲ. ಅವರಿಗೆ ಯಾರಿಗೆ ಏನಾದರೂ ಏನು? ನಾವು ಹೀಗೆ ಬದುಕುವವರು.
ಇವರು ಯಾವುದೇ ಸಂದರ್ಭದಲ್ಲೂ ಪರಿಸ್ಥಿತಿಗೆ ಹೊಂದಾಣಿಕೆ ಮಾಡಿಕೊಳ್ಳುವವರಲ್ಲ. ಯಾರ ನೋವುಗಳು ಇವರಿಗೆ ಲೆಕ್ಕಕ್ಕೆ ಬರುವುದಿಲ್ಲ. ತಾವೇ ಸರಿ ಎಂಬ ಮನಸ್ಥಿತಿ ಉಳ್ಳವರು.ಸಹಜವಾಗಿ ಈ ಎರಡು ಮನಸ್ಥಿತಿಯವರನ್ನು ನಾವೆಲ್ಲ ನೋಡಿದ್ದೇವೆ. ಆದರೆ ಇವೆರಡನ್ನು ಹೊರತುಪಡಿಸಿ ನಾವು ಬದುಕಬಹುದಲ್ಲವೇ? ಹುಟ್ಟು ಸಾವಿನ ಮಧ್ಯದೊಳಗೆ ಬರುವ ಮೂರು ದಿನದ ಬದುಕಿಗೆ ಅರ್ಥವತ್ತಾದ ಬದುಕನ್ನು ಬಾಳ ಬಹುದಲ್ಲವೇ? ಯಾಕೆಂದರೆ ನಾವು ಮನುಷ್ಯರು. ಮನುಷ್ಯರಾಗಿಯೇ ಇರಬೇಕಲ್ಲವೇ? ಮಾನವೀಯತೆಯ ನೆಲೆಯಲ್ಲಿ ಬದುಕಬೇಕಾದದ್ದು ನಮ್ಮ ಧರ್ಮ. ಅದರ ಜ್ಞಾನವಿಲ್ಲದೆ ಬಾಳಿದರೆ ಪ್ರಾಣಿ ಜೀವನಕ್ಕೂ ನಮಗೂ ವ್ಯತ್ಯಾಸವೆಲ್ಲಿ ಕಂಡೀತು? ಅದಕ್ಕೆ ಕುವೆಂಪು ಅವರು ಹೇಳಿದ್ದು “ಏನಾದರೂ ಹಾಗೂ ಮೊದಲು ಮಾನವನಾಗು”.
ಬಿಡಿತನದ ಬಿಕ್ಕಟ್ಟಿನಲ್ಲಿ ಇಡಿತನದ ಒಕ್ಕಟ್ಟನ್ನು ಹುಟ್ಟಿಸುವುದನ್ನು ಕಲಿಯಬೇಕೆಂದರು ಬೇಂದ್ರೆಯವರು. ಕೂಡಿ ಬಾಳುವುದನ್ನು ಹೀಗೆ ಹೇಳಿಕೊಟ್ಟರು. ತಾಳ್ಮೆ , ಸಹನೆ, ವಿಶಾಲ ಹೃದಯವಂತಿಕೆ ಎಲ್ಲರೂ ನನ್ನವರೆಂದು ಬದುಕಿದರೆ ಅದರ ಲಾಭ ಮೊದಲು ದೊರಕುವುದು ನಮಗೇ!! ಪ್ರತಿನಿತ್ಯ ಸಿಟ್ಟು, ಸೆಡವು ಎಲ್ಲರೊಂದಿಗೆ ಅಸಹನೀಯತೆಯಿಂದ ಬದುಕುವುದು, ಮತ್ತೊಬ್ಬರ ನಿಂದನೆಯಲ್ಲೇ ಬದುಕುವುದು, ಇಂತಹವುಗಳನ್ನು ಸಾಕಷ್ಟು ನೋಡುತ್ತೇವೆ. ಆದರೆ ಅದು ನಮ್ಮ ಮನಸ್ಸನ್ನೇ ಮೊದಲು ಕೆಡಿಸುವುದು ಎಂಬ ಅಂಶ ಬಲ್ಲವರು ಬಹಳಿಲ್ಲ. ವಿಚಾರ, ಆಲೋಚನೆಗಳು ನಮ್ಮ ಮನಸ್ಥಿತಿಯನ್ನು ಕಾಯ್ದುಕೊಂಡು ಹೋಗುತ್ತಿರುತ್ತವೆ. ಇದು ವೈಜ್ಞಾನಿಕವಾಗಿಯೂ ನಿಜ. ಅಂದ ಮೇಲೆ ಸುಮ್ಮನೆ ನಕಾರಾತ್ಮಕ ಆಲೋಚನೆಗಳನ್ನು ನಮ್ಮ ತಲೆಯಲ್ಲಿ ಬಿತ್ತುವುದು ಏಕೆ? ಬಿತ್ತಿದ ಬೆಳೆಯ ಫಸಲನ್ನು ಉಣ್ಣುವವರು ನಾವೇ ಅಲ್ಲವೇ?.
ನಿನ್ನೊಳಗೆ ನೀ ಹೊಕ್ಕು
ನಿನ್ನ ನೀನೇ ಕಂಡು
ನೀನು ನೀನಾಗು ಗೆಳೆಯ…
ಎಂಬ ವರಕವಿ ಬೇಂದ್ರೆ ಅವರ ಮಾತು ಎಷ್ಟು ಸತ್ಯ!
ಮತ್ತೊಬ್ಬರನ್ನು ಹೀಗಳೆಯುವ ಮುನ್ನ, ಮತ್ತೊಬ್ಬರನ್ನು ದೂಷಿಸುವ ಮುನ್ನ, ಮತ್ತೊಬ್ಬರನ್ನು ನಿಂದಿಸುವ ಮುನ್ನ ಒಂದೇ ಒಂದು ಸಲ ನಮ್ಮ ಆತ್ಮಾವಲೋಕನ ಮಾಡಿಕೊಂಡರೆ ಹೇಗೆ? ಆಳಗೊಡದವರ ಬಾಳಗೊಡದವರ ನಡುವಿನ ಜೀವನವನ್ನು ನೊಂದವರು ಸಹಿಸಿ ಬದುಕುವುದು ಹೇಗೆ? ಆಲೋಚನೆ ಮತ್ತು ಭಾವನೆ ಬೇರೆ ಬೇರೆ ಅಲ್ಲ .ಅವೆರಡು ನಮ್ಮ ವ್ಯಕ್ತಿತ್ವದ ಕುರುಹುಗಳು! “ನೀನು ಏನು?” ಎಂದು ತೋರಿಸುವ ಮಾನದಂಡಗಳು!! ಅಂದಮೇಲೆ ಮತ್ತೊಬ್ಬರ ಭಾವನೆಗಳಿಗೆ ಪೆಟ್ಟು ಕೊಟ್ಟು ನಾವು ತೋರಿಸಿಕೊಳ್ಳುವುದು ಏನಿದೆ?ನಮ್ಮ ವ್ಯಕ್ತಿತ್ವದ ಪರಿಚಯವನ್ನಲ್ಲವೇ? ಇದನ್ನು ಯಾಕೆ ನಾವು ಅರ್ಥ ಮಾಡಿಕೊಳ್ಳುವುದಿಲ್ಲ?.
ನಗಿಸಿ ನೋಡು ಜಗ ಸುಂದರವೆನಿಸುತ್ತದೆ. ಅಳಿಸಿ ನೋಡು ಆ ಜಗದಲ್ಲಿ ನಿನ್ನ ವಿಕೃತಿಯ ನೆರಳು ಗೋಚರಿಸುತ್ತದೆ!ಸಾಧಿಸಲು ಸಾಕಷ್ಟು ಇದೆ, ಬಾಳಲು ಸಾಕಷ್ಟಿದೆ. ಅವೆರಡರ ಗುರಿ ಬಿಟ್ಟು ಎತ್ತ ಸಾಗುತ್ತಿದ್ದೇವೆ ನಮ್ಮ ಅರ್ಥಹೀನ ವಿಚಾರಗಳನ್ನು ಹೊತ್ತು ? ಗೊತ್ತಿದ್ದೋ, ಗೊತ್ತಿಲ್ಲದೆಯೋ ನಮ್ಮಿಂದ ಮತ್ತೊಬ್ಬರ ಭಾವನೆಗಳಿಗೆ ಪೆಟ್ಟು ಬಿದ್ದರೆ ಅದನ್ನು ಅರಿತು ಸರಿ ಮಾಡುವುದು ಸುಶಿಕ್ಷಿತರ ಲಕ್ಷಣ. ಇಲ್ಲವಾದರೆ ನಾವೆಷ್ಟು ವಿದ್ಯೆ ಗಳಿಸಿದ್ದರೇನು? ಮುಷ್ಟಿ ಅರ್ಥ ಆ ವಿದ್ಯೆಯಿಂದ ಗಳಿಸಿಲ್ಲದಿದ್ದರೆ…? ಅಲ್ಲವೇ?. ಮೊದಲು ನಮ್ಮ ವ್ಯಕ್ತಿತ್ವಕ್ಕೆ ಒಂದಿಷ್ಟು ಅರ್ಥ ಕೊಟ್ಟು ಬದುಕಿದರೆ ಸಾಕು. ಬದಲಾವಣೆ ಬೀಜವನ್ನೇ ನಾವು ಬಿತ್ತಿದ ಹಾಗೆ.
ನಾವು ಆಡುವ ಮಾತುಗಳಿಗೆ ಜೇನಿನ ಲೇಪನ ಬೇಡ. ಮಾತುಗಳನ್ನೇ ಜೇನಾಗಿಸೋಣ.ಒಲವುಳ್ಳ ಮಾತನ್ನು ವಿಷದಲ್ಲಿ ಅರಳಿಸುವುದು ಬೇಡ. ಅಂತರಂಗ ಬಹಿರಂಗ ಶುದ್ಧಿಯನ್ನು ನಮ್ಮ ಮನಸ್ಸಿಗೆ ಕೊಡೋಣ. ತುಟಿಯಂಚಿನಲ್ಲಿ ನಗುವಿಟ್ಟು ಹೃದಯದಲ್ಲಿ ವಿಷವಿಟ್ಟು ನಗುವುದು ಬೇಡ. ಶುದ್ಧ ಶುಭ್ರ ಮಂದಹಾಸವನ್ನೇ ಹೃದಯದಿಂದ ತುಟಿಯಂಚಿಗೆ ಕಳಿಸೋಣ.” Face is the index of the mind” ಅಲ್ಲವೇ? ಸತ್ಯವೇ ಗೆಲ್ಲುವುದು ಒಂದು ದಿನ! ಕಬ್ಬಿನಲ್ಲಿ ಸಿಹಿ ಇದೆ, ಎಳ್ಳಿನಲ್ಲಿ ಎಣ್ಣೆ ಇದೆ, ಹಾಲಿನಲ್ಲಿ ತುಪ್ಪವಿದೆ, ಕಟ್ಟಿಗೆಯಲ್ಲಿ ಬೆಂಕಿ ಇದೆ. ಇದೇ ಸತ್ಯ!! ಎಲ್ಲರೂ ಇದನ್ನು ಬಲ್ಲವರು! ಅಂದಮೇಲೆ ಇದನ್ನೆಲ್ಲಾ ಅರಿತವರು ನಮ್ಮನ್ನು ಅರಿಯಲಾರರೇ?. ಆದ್ದರಿಂದ ಆತ್ಮಾವಲೋಕನದ ಅರ್ಥಪೂರ್ಣ ಬದುಕನ್ನು ಬಾಳೋಣ. ಬದುಕು ಬದಲಾಗಬೇಕಾದರೆ ನಮ್ಮ ಆಲೋಚನೆಗಳ ದಾರಿಯನ್ನೇ ಬದಲಾಯಿಸಿಕೊಳ್ಳಬೇಕು. ಮತ್ತೊಬ್ಬರ ಕಣ್ಣ ಹನಿ ಹನಿಸುವಾಗ ನಮ್ಮ ಎರಡು ಬೆರಳು ಸಾಕಲ್ಲವೇ ಆ ಕಣ್ಣೀರು ಜಾರದಂತೆ ಆಧಾರವಾಗಲು. ಆಗ ನಮ್ಮ ಬದುಕಿಗೆ ಎಷ್ಟೊಂದು ಸಾರ್ಥಕತೆಯ ಭಾವ ಉಂಟಾಗುತ್ತದೆ!! ಹೌದಲ್ಲವೇ?
- ಶಾರದಾ ಶ್ರಾವಣಸಿಂಗ್ ರಜಪೂತ
