‘ಬಾಟಮ್ ಐಟಂ’ ಪುಸ್ತಕ ಪರಿಚಯ – ಪಾರ್ವತಿ ಜಗದೀಶ್

ರವಿ ಬೆಳೆಗೆರೆ ಅವರು ಬರವಣಿಗೆಯನ್ನೇ ತಮ್ಮ ಉಸಿರಾಗಿರಿಸಿಕೊಂಡವರು. ಅವರ ಬಾಟಮ್ ಐಟಂ ಪುಸ್ತಕದ ಕುರಿತು ಪಾರ್ವತಿ ಜಗದೀಶ್ ಅವರು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ …
ಪುಸ್ತಕ : ಬಾಟಮ್ ಐಟಂ
ಲೇಖಕರು : ರವಿ ಬೆಳೆಗೆರೆ
ಬೆಲೆ : ೧೨೫ .೦೦
ಪುಟಗಳು : ೨೦೬

ರವಿ ಬೆಳೆಗೆರೆ ಅವರು ಬರವಣಿಗೆಯನ್ನೇ ತಮ್ಮ ಉಸಿರಾಗಿರಿಸಿಕೊಂಡವರು. ಹಾಯ್ ಬೆಂಗಳೂರ್, ಓ ಮನಸೇ ಪತ್ರಿಕೆಯ ಸಂಪಾದಕರು ಸಾಹಿತ್ಯ ರಂಗದಲ್ಲಿ ಕೃಷಿ ಮಾಡುವ ಎಲ್ಲರಿಗೂ ಚಿರ ಪರಿಚಿತರು.

ಅವರು ಹೇಳುವ ಅನೇಕ ಸಂಗತಿಗಳು ಬದುಕಿಗೆ ತೀರಾ ಹತ್ತಿರ ಸಂಗತಿಗಳು ಹಾಗೂ ಎಲ್ಲರಿಗೂ ಸಾಮಾನ್ಯವಾಗಿ ಅನುಭವಕ್ಕೆ ಬಂದವಂತವುಗಳೇ ಆದರೂ ಅದನ್ನು ಜನರಿಗೆ ಸಂದೇಶ ರವಾನಿಸುವ ರೀತಿ ವಿಭಿನ್ನ ಹಾಗೂ ವಿಶಿಷ್ಟವಾಗಿದೆ.ಓದುಗರಿಗೆ ಸದಾ ಕಾಲ ಹೊಸತನ್ನೆನಾದರೂ ಕೊಡಬೇಕು ಅನ್ನುವ ಹಂಬಲ.ಆ ನಿಟ್ಟಿನಲ್ಲಿಯೇ ಅವರು ಸದಾ ಕಾಲ ಕ್ರೀಯಾಶೀಲರಾಗಿದ್ದರೂ ಕೂಡ. ಹೀಗಾಗಿಯೇ ಅವರ ಬರಹಗಳು ಬರಹಗಾರರನ್ನು ಹೊರತು ಪಡಿಸಿಯೂ ಸಾಮಾನ್ಯ ಓದುಗರನ್ನೂ ಹತ್ತಿರವಾಗಿಸಿಕೊಂಡಿವೆ. ನನ್ನನ್ನೂ ಒಳಗೊಂಡು ಇಂದಿನ ಯುವ ಪೀಳಿಗೆಯವರಿಗೆ ರವಿ ಸರ್ ಪುಸ್ತಕಗಳೆಂದರೆ ಅಚ್ಚು ಮೆಚ್ಚು.ಸ್ವಲ್ಪ ಸಮಯ ಸಿಕ್ಕರೂ ಓದಿನಲ್ಲಿ ತೊಡಗಿಕೊಳ್ಳುವ ನಾನು ನನ್ನ ಹವ್ಯಾಸದ ಓದಿಗೆ ಆಯ್ಕೆ ಮಾಡಿಕೊಂಡ ಪುಸ್ತಕಗಳಲ್ಲಿ ರವಿ ಸರ್,ಜೋಗಿ ಸರ್ ಪುಸ್ತಕಗಳನ್ನು ಅದರಲ್ಲಿಯೂ ಬಾಟಮ್ ಐಟಂ,ಲವ್ ಲವಿಕೆ,ಯಂತಹ ಪುಸ್ತಕಗಳನ್ನು ಪ್ರತಿನಿತ್ಯ ಒಂದು ಪೇಜನ್ನಾದರೂ ತಿರುವಿ ಹಾಕಿ ನಿದ್ದೆ ಮಾಡುವ ಹವ್ಯಾಸ.ಅದೊಂತರ ಚೂರು ನೆಮ್ಮದಿ ರಾತ್ರಿಗೆ ನಿದ್ದೆ ಬರಿಸುವ ಸಿರಪ್ ಇದ್ದಂತೆ.

ಸಾಮಾನ್ಯ ಜನರ ಬದುಕಿನ ಕಂಡುಂಡ ಘಟನೆಗಳನ್ನೆ ವಿಭಿನ್ನ ರೀತಿಯಲ್ಲಿ ಹೇಳುವ ಪ್ರಯತ್ನ ಅವರದ್ದು ಆ ನಿಟ್ಟಿನಲ್ಲಿ ಯಶಸ್ವಿ ಕೂಡ ಆಗಿದ್ದಾರೆ.ಅಂತಹ ಅವರ ಅನಿಸಿಕೆ, ಅಭಿಪ್ರಾಯ, ಭಾವನೆಗಳ ಗುಚ್ಛಗಳೇ ಬಾಟಮ್ ಐಟಂ ನ ಲೇಖನಗಳ ಪ್ರತಿರೂಪ.

ಸಾಕೆಂದು ಬಿಟ್ಟು ಹೋದವರಿಗೆ ಅತ್ತು ಕರೆದು ಗೋಗೆರೆದರೆ ಪ್ರಯೋಜನವಿಲ್ಲ ಅಂತವರಿಗಾಗಿ ನಾವೇಷ್ಟೇ ಹಂಬಲಿಸಿದರೂ ಅದು ವ್ಯರ್ಥ ಪ್ರಯತ್ನ.ನೀ ಬೇಡ ಹೋಗು ಎಂದವರ ಬಾಯಲ್ಲಿ ನೀನೇ ಬೇಕು ಬಾರೇ ಎಂಬ ಮಂತ್ರ ಹೇಳಿಸಲಾಗದು.ಬರಬೇಕು ಅಂತಿದ್ದರೆ ಅವರಾಗೆ ಅವರು ಹುಡುಕಿಕೊಂಡು ಬರಲಿ.ಸುಮ್ಮನೆ ಸತ್ತು ಹೋದ ನಿರ್ಜಿವ ಬಾಂಧವ್ಯಗಳಿಗೆ ಜೀವ ತುಂಬುವ ವ್ಯರ್ಥ ಪ್ರಯತ್ನ ಮಾಡಲೇಬಾರದು ಅನ್ನುವ ಅವರ ಮಾತಿನಲ್ಲಿ ತಥ್ಯವಿದೆ ಜೊತೆಗೆ ವಿಷಾದ ಭಾವವೂ ಇದೆ.

ಈ ಜಗತ್ತಿನಲ್ಲಿ ನಾವು ಉಳಿದರಿಗಿಂತ ಡಿಫಾರಂಟ್ ಆಗಿ ಕಾಣಲು ಮಾಡಬೇಕಾಗಿರುವುದು ಏನು? ನಮ್ಮ ಜೀವನ ಶೈಲಿ ಬದಲಾಯಿಸಿಕೊಳ್ಳಬೇಕಾ? ನಮ್ಮ ಬಾಹ್ಯ ಲುಕ್ ಬದಲಾವಣೆ ಮಾಡಿಕೊಳ್ಳಬೇಕಾ? ಅಥವಾ ವ್ಯಕ್ತಿತ್ವವನ್ನೇ ಬದಲಿಸಿಕೊಳ್ಳಬೇಕಾ? ಇಲ್ಲವೇ ನಮ್ಮ ನಡೆ,ನುಡಿ,ಭಾಷೆ,ಸಂವಹನ? ಯಾವುದು ನಮ್ಮನ್ನ ಇತರರಿಗಿಂತ ಭಿನ್ನವಾಗಿರಿಸುತ್ತದೆ.? ನಾವೂ ಬೇರೆಯವರಂತೆ ಅನುಕರಿಸಿ ಅವರಂತೆ ಆಗುವುದಕ್ಕೆ ಪ್ರಯತ್ನ ಮಾಡುವುದರಿಂದ ಅದರ ಫಲಿತಾಂಶ ಪರಿಣಾಮಕಾರಿ ಆಗುತ್ತದೆಯೇ? ನಮ್ಮತನವನ್ನೇ ಬದಲಿಸದೇ ನಾವೂ ಇತರರಿಗಿಂತ ಭಿನ್ನವಾಗಿ ಕಾಣಲು ಸಾಧ್ಯವಿದೆಯಾ? ಇಂತಹ ಅನೇಕ ಪ್ರಶ್ನೆಗಳಿಗೆ ಉತ್ತರವಾಗಿಸುತ್ತದೆ ಈ ಪುಸ್ತಕ.

ಅದೊಂದು ವಯಸ್ಸಿನಲ್ಲಿ ಹುಡುಗರ ಮನಸ್ಥಿತಿ ಯಾವುದಾದರೂ ಒಂದು ಹುಡುಗಿ ಸಿಕ್ಕರೆ ಸಾಕು ಅವಳು ಅವನ ಕಡೆಗೊಮ್ಮೆ ನೋಡಿ ನಸು ನಕ್ಕರೂ ಸಾಕು.ಅನ್ನುವ ಮನಸ್ಥಿತಿಯಲ್ಲಿಯೇ ಒಂದಷ್ಟು ಬೇಡದ ಸಂಬಂಧಗಳಿಗೆಲ್ಲ ಕೈ ಹಾಕಿ ಕೈ ಸುಟ್ಟು ಕೊಂಡು ಕೊರಗುವ ಬದಲು ಒಂದಷ್ಟು ತಾಳ್ಮೆಯಿಂದ ಕಾಯ್ದು ಆರಿಸಿಕೊಂಡ ಪ್ರೀತಿ ಫಲಪ್ರದವಾಗಿರುತ್ತದೆ.ಅನ್ನುವ ಅವರ ಬರಹದ ತಿರುಳು ಇಂದಿನ ಯುವ ಪೀಳಿಗೆಗೆ ಹೇಳಿ ಮಾಡಿಸಿದ ಬರಹ.

ಹೆಣ್ಣುಮಗಳೊಬ್ಬಳು ತೀರಾ ನರಳುವುದು ಆಕೆಯ ಗರ್ಭಪಾತದಂತ ಸಂದರ್ಭದಲ್ಲಿ ಆ ಸನ್ನಿವೇಶಗಳಲ್ಲಿ ಆಕೆಯ ಮನಸ್ಥಿತಿ ಮಾನಸಿಕವಾಗಿ,ದೈಹಿಕವಾಗಿವಾಗಿಯೂ ಜರ್ಜರಿತವಾಗಿರುತ್ತದೆ.ಅಂತಹ ಸಂದರ್ಭದಲ್ಲಿ ಗಂಡನಾದವನು ಆಕೆಯ ಬೆಂಬಲಕ್ಕೆ ನಿಂತು ಸೆಕ್ಯೂರ್ ಫೀಲ್ ಕೊಡಬೇಕು.ಒಂದು ಕಂಫೋರ್ಟ್ ಜೋನ್ ಒದಗಿಸಿ ಕೊಡಬೇಕು.ಬೇಡದ ಗರ್ಭದಲ್ಲೂ ಕೂಡ ಯಾತನೆಗಿಂತ ಹೆಚ್ಚಾಗಿ ಗಿಲ್ಟಿ ಫೀಲ್ ಇರುತ್ತದೆ.ಇಂತಹ ಹೆಣ್ಣಿನ ಸೂಕ್ಷ್ಮ ಸಂವೇದನಗಳಿಗೆ ಗಂಡನಾದವನು ಭಾವನಾತ್ಮಕ ರಕ್ಷಣೆ ಕೊಟ್ಟು ಧೈರ್ಯ ತುಂಬಬೇಕು ಎಂದು ಸ್ತ್ರೀ ಕುಲದ ಪರವಾಗಿ ಹೇಳುವ ಬರಹ ಇಷ್ಟವಾಯ್ತು.

ಒಮ್ಮೆ ಸುಮ್ಮನೆ ಹೊಗಳಿ ನೋಡಿ ಅನ್ನುವ ಅಡಿ ಬರಹದಲ್ಲಿ ಬೇರೆಯವರಲ್ಲಿರುವ ಒಳ್ಳೆ ಗುಣಗಳನ್ನು ಪ್ರಶಂಸೆ ಮಾಡುವುದು ಒಂದು ಒಳ್ಳೆ ಅಭ್ಯಾಸ.ಇದರಿಂದ ನಮಗೆ ಒಳ್ಳೆ ಸ್ನೇಹಿತರು ಸಿಗುತ್ತಾರೆ.ಏಕಕಾಲಕ್ಕೆ ಪ್ರಶಂಸೆಗೊಳಗಾದವರ ಮನಸ್ಥಿತಿ ಉತ್ತಮಗೊಳ್ಳುತ್ತಿದೆ.ಪ್ರತಿಯೊಬ್ಬ ಮನುಷ್ಯನಿಗೂ ಇರುವ ಅತ್ಯಂತ ಪ್ರಭಲ ಆಸೆ ಅಂದರೆ ಹೊಗಳಿಕೆ ” ನಾವು ಯಾರಿಗೂ ಬೇಕಾಗಿಲ್ಲ” ಎಂಬ ಭಾವನೆ ಮನಸ್ಸನ್ನು ಕುಗ್ಗಿಸಿಬಿಡುತ್ತದೆ ಅದೇ ನೋವಿಗೂ ಕಾರಣ ಆಗ್ತದೆ.ಹಾಗಾಗಿ ನಮ್ಮ ಒಂದು ಮೆಚ್ಚುಗೆ ಅವರಿಗೆ ಮಾಡುವ ಕೆಲಸದಲ್ಲಿ ಸ್ಫೂರ್ತಿ ತುಂಬಿ ಕೆಲಸದಲ್ಲಿ ಹುಮ್ಮಸ್ಸು ಬರುವುದಲ್ಲದೆ ಇನ್ನೂ ಹೆಚ್ಚಿನ ಕೆಲಸಕ್ಕೆ ಪೂರಕವಾಗುತ್ತದೆ.ಇಂತಹ ಗುಣಗಳನ್ನು ನಾವು ರೂಢಿಸಿಕೊಂಡರೆ ಅದು ಸಮಾಜದ ಉನ್ನತಿಗೂ ಕಾರಣವಾಗಬಹುದು.

ಹೊಗಳುವುದು ಅಂದರೆ, ಅವರೆಡೆಗೆ ಇರುವ ನಮ್ಮ ಒಳ್ಳೆ ಅಭಿಪ್ರಾಯ,ನೈಜ ಅನಿಸಿಕೆ ಮಾತ್ರ ಅದೂ ಒಂದು ಪಾರಿತೋಷಕವಿದ್ದಂತೆ.ಉದಾಹರಣೆಗೆ ಮಗನೊಬ್ಬ ಅಮ್ಮನ ಕೈರುಚಿ ಹೋಗಳುವುದು,ಗಂಡನಾದವನು ಹೆಂಡತಿ ಕುರಿತು ಒಂದೆರಡು ಖುಷಿ ಕೊಡುವ ಅಭಿಪ್ರಾಯ ಹೇಳುವುದು,ಪ್ರಿಯತಮೆ,ಪ್ರಿಯಕರನಿಗೆ ಕೊಡುವ ಮೆಚ್ಚುಗೆ ನೋಟ,ಪಾಠ ಕಲಿಸಿದ ಗುರುಗಳಿಗೆ ವಿಧೇಯ ಭಾವ, ಸರಿಯಾದ ಸಮಯಕ್ಕೆ ನಮ್ಮನ್ನು ತಲುಪ ಬೇಕಾದ ಸ್ಥಳಕ್ಕೆ ತಲುಪಿಸಿದ ವಾಹನ ಚಾಲಕರಿಗೆ ಪ್ರೀತಿ ಪೂರ್ವಕ ಒಂದು ಧನ್ಯವಾದ ಹೇಳುವುದು ಇವೆಲ್ಲವೂಗಳು ಬದುಕಿಗೆ ಬಹಳಷ್ಟು ಖುಷಿ ಕೊಡುವ ಸಂಗತಿಗಳು ಅದಕ್ಕೆ ನೀವೂ ಆಗಾಗ ಇತರರೆಡೆಗೆ ಮೆಚ್ಚುಗೆ ವ್ಯಕ್ತಪಡಿಸಿ ಅನ್ನುವ ಸಾಮಾನ್ಯ ಸತ್ಯವನ್ನು ಪ್ರಸ್ತುತ ಪಡಿಸಿದ ರೀತಿ ಅಮೋಘ.

ಕೆಲವೊಮ್ಮೆ ನಾವು ಏನನ್ನೂ ನಿರೀಕ್ಷೆ ಮಾಡದೇ ಸಮಯಕ್ಕಾಗಿ ಕಾಯುವುದು ಒಂದರ್ಥದಲ್ಲಿ ಒಳ್ಳೆಯದೇ ಅನ್ನುವ ಲೇಖಕರ ಮಾತು ಸತ್ಯಕ್ಕೆ ಹತ್ತಿರವೆನಿಸಿತು.ಅನಾವಶ್ಯಕವಾಗಿ ನಾವು ಮಾತಾಡಿದಾಗ,ನಮ್ಮ ಅಗತ್ಯತೆ ಇಲ್ಲದ ಪಾತ್ರಗಳಲ್ಲೂ ನಾವು ಅನಗತ್ಯವಾಗಿ ಮೂಗು ತೂರಿಸಿ ನಾವೇ ಅವರಿಗೆ ಬೋರ್ ಆದಂತೆ ಅನಿಸಿ ನಮ್ಮಿಂದ ಅವರು ದೂರವಾಗಲು ಪ್ರಯತ್ನಿಸುತ್ತಾರೆ ಅನ್ನುವ ಸತ್ಯ ತಿಳಿದಿದ್ದರೂ,ಮತ್ತದೇ,ಅಂತಹ ಸಾಹಸಕ್ಕೆ ಕೈ ಹಾಕ್ತಿವಲ್ಲಾ ನಾವೂ ಒಂದರ್ಥದಲ್ಲಿ ಬುದ್ದುಗಳು ಅನಿಸದೇ ಇರಲಾರದು.ಇಂತಹ ಅನೇಕ ಸಣ್ಣ, ಪುಟ್ಟ, ಸಂಗತಿಗಳೇ ನಮ್ಮ ನೆಮ್ಮದಿಯ ಬದುಕಿಗೆ ದಾರಿ ದೀಪವಾಗುತ್ತವೆ.

ಮನಸಿಗೆ ತೀರಾ ಹತ್ತಿರವಾದ ಬರಹದ ಅನೇಕ ಸಾಲುಗಳು ಬದುಕಿನ ನೈಜ ದರ್ಶನ ಮಾಡಿಸುವ ಬರಹಗಳಾಗಿವೆ .ಹಾಗಾಗಿಯೇ ಅವರ ಎಲ್ಲ ಬರಹಗಳು ನನಗೆ ಅತ್ಯಂತ ಆಪ್ತ.ಅಂತಹ ಆಪ್ತತೆಯ ಪರಿಚಯ ನಿಮಗೂ ಆಗಬೇಕು ಅನಿಸಿದ್ರೆ ನೀವೂ ರವಿ ಬೆಳೆಗೆರೆ ಅವರ ಪುಸ್ತಕ ಬಾಟಮ್ ಐಟಂ ಕೊಂಡು ಓದಿ..

ಓದ್ತೀರಲ್ಲಾ?


  • ಪಾರ್ವತಿ ಜಗದೀಶ್

0 0 votes
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d
Aakruti Kannada

FREE
VIEW