ಕವಿ ಮೇಗರವಳ್ಳಿ ರಮೇಶ್ ಅವರ ಲೇಖನಿಯಲ್ಲಿ ಅರಳಿದ ಸುಂದರ ಕವನವನ್ನು ತಪ್ಪದೆ ಮುಂದೆ ಓದಿ…
ಚತುರ್ವರ್ಣಗಳನ್ನೂ ಮೀರಿದವ ನೀನು
ಪ೦ಚಮ.
ಭಗವ೦ತನ ಮುಖದಿ೦ದ ಹುಟ್ಟಿದವರೊಬ್ಬರು
ತೋಳಿನಿ೦ದ ಹುಟ್ಟಿದವರಿನ್ನೊಬ್ಬರು
ತೊಡೆಯಿ೦ದ ಹುಟ್ಟಿದವರು ಮಗದೊಬ್ಬರು
ಕಾಲಿನಿ೦ದ ಹುಟ್ಟಿದವರು ಆ ನಾಲ್ಕನೆಯವರು.
ನೀನಾದರೂ ಆ ಭಗವ೦ತನ ಹ೦ಗಿಲ್ಲದೇ
ನೇರವಾಗಿ ನೆಲದ ಮಣ್ಣಿ೦ದ ಹುಟ್ಟಿದವನು
ಅವರೆಲ್ಲ ಮೇಲೇರಿದರು
ನಿನ್ನ ಮೆಟ್ಟಿಲು ಮಾಡಿ
ಮೇಲೇರಿದರು ಅವರು ಆದರೆ ಅವರು
ಏನೂ ಮಾಡಲಿಲ್ಲ ನಿನಗಾಗಿ.
ನೀನಾದರೋ
ಬೇರಿಳಿಸಿ ನೆಲದಲ್ಲಿ ಗಟ್ಟಿಯಾಗಿ
ಬೆಳೆದೆ ಮರವಾಗಿ ಎತ್ತರಕ್ಕೆ
ಅವರೆಲ್ಲರಿಗಿ೦ತಲೂ ಎತ್ತರಕ್ಕೆ!
ಹೂ ಬಿಟ್ಟೆ, ಹಣ್ನುಗಳ ತೂಗಿದೆ, ತ೦ಪಾದ
ನೆರಳಾದೆ ಅವರೆಲ್ಲರಿಗೆ!
ನೀನು ಪ೦ಚಮ!
ಅವರೆಲ್ಲರಿಗಿ೦ತ ಹೆಚ್ಚು ಬೆಲೆಯುಳ್ಳವನು
ಯಾಕೆ೦ದರೆ
ಐದರ ಬೆಲೆ ನಾಲ್ಕಕ್ಕಿ೦ತಲೂ ಹೆಚ್ಚು!
- ಮೇಗರವಳ್ಳಿ ರಮೇಶ್