ಕುಮಟಾಕ್ಕೆ ಹೋಗುವ ರಾಷ್ಟೀಯ ಹೆದ್ದಾರಿಯಲ್ಲಿ 15 ಕಿ ಮೀ ಅಂತರದಲ್ಲಿ ಮಿರ್ಜಾನ ಕೋಟೆ ಇದೆ. ಸಾಮಾನ್ಯ ಅಳತೆಗಿಂತ ನಾಲ್ಕಾರು ಪಟ್ಟು ದೊಡ್ಡ ಗಾತ್ರದ ಕೆಂಪು ಕಲ್ಲುಗಳಿಂದ ಈ ಕೋಟೆಯನ್ನು ನಿರ್ಮಿಸಲಾಗಿದೆ. ಮಿರ್ಜಾನ ಕೋಟೆ ಕುರಿತು ಟಿ.ಶಿವಕುಮಾರ್ ಅವರು ಬರೆದಿರುವ ಲೇಖನವನ್ನು ತಪ್ಪದೆ ಮುಂದೆ ಓದಿ…
ಕೋಟೆಗಳು ಒಂದು ಕಾಲದ ಅಧಿಕಾರ ಕೇಂದ್ರಗಳು. ಮೇಲ್ನೋಟಕ್ಕೆ ಆ ಕಾಲದ ರಾಜರುಗಳ ಸಾಮರ್ಥ್ಯ, ದರ್ಪ, ಅಹಂಕಾರಗಳ ಸಂಕೇತದಂತೆ ಕಂಡರೂ ವಾಸ್ತವವಾಗಿ ಅವು ಆ ರಾಜರ ಪುಕ್ಕುಲುತನ ಮತ್ತು ಅಭದ್ರತೆಯ ಪ್ರತೀಕಗಳು. ಶತ್ರುಗಳಿಂದ ಬೇದಿಸಲಾಗದ ಅಡಗಿಕೊಳ್ಳಲು ಮತ್ತು ರಹಸ್ಯ ಮಾರ್ಗವಾಗಿ ಓಡಿಹೋಗಲು ಅನುಕೂಲವಿರುವ ಕೋಟೆಗಳನ್ನು ಕಟ್ಟಿಕೊಳ್ಳುತ್ತಿದ್ದರು.
ಇಂದು ರಾಜರುಗಳಿಲ್ಲ. ಆದರೆ ಕೋಟೆಗಳಿವೆ. ಆ ಕೋಟೆಗಳು ನಮ್ಮ ಸಂಸ್ಕ್ರತಿಯ ಭಾಗಗಳೆಂದು ಗುರುತಿಸುತ್ತೇವೆ. ಎಷ್ಟೋ ಕೋಟೆಗಳು ಇನ್ನೂ ಕತ್ತಲಲ್ಲಿ ಉಳಿದಿವೆ. ಅಂಥ ಕೋಟೆಗಳಲ್ಲಿ ಬಹಳ ವರ್ಷಗಳ ಕಾಲ ಹೊರ ಜಗತ್ತಿನ ಗಮನ ಸೆಳೆಯದೆ ಅನಾಥವಾಗಿದ್ದ ಕೋಟೆಯೊಂದು ಸುಸ್ಥಿತಿಯತ್ತ ಸಾಗುತ್ತಿರುವ ಕೋ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲ್ಲೂಕಿನ ಮಿರ್ಜಾನದ ಸಮೀಪವಿದೆ.
ಕುಮಟಾಕ್ಕೆ ಹೋಗುವ ರಾಷ್ಟೀಯ ಹೆದ್ದಾರಿಯಲ್ಲಿ 15 ಕಿ ಮೀ ಅಂತರದಲ್ಲಿ ಮಿರ್ಜಾನ ಇದೆ. ಹೆದ್ದಾರಿಯಿಂದ ಒಳಹೋದರೆ ಮಿರ್ಜಾನ ಕೋಟೆ ಗೋಚರಿಸುತ್ತದೆ. ಹೊಳೆ ಹಾಗೂ ಘಜನಿ ಪ್ರದೇಶದ ಎದುರಿನ ಎತ್ತರದ ಪ್ರದೇಶದಲ್ಲಿರುವ ಈ ಐತಿಹಾಸಿಕ ಕೋಟೆ. ಸಾಮಾನ್ಯ ಅಳತೆಗಿಂತ ನಾಲ್ಕಾರು ಪಟ್ಟು ದೊಡ್ಡ ಗಾತ್ರದ ಕೆಂಪು ಕಲ್ಲುಗಳಿಂದ ಈ ಕೋಟೆಯನ್ನು ನಿರ್ಮಿಸಲಾಗಿದೆ. ಕೋಟೆಯ ಒಳ ಪ್ರವೇಶಿಸಿದಾಕ್ಷಣ ವಿಶಾಲವಾದ ಪ್ರಾಂಗಣದಲ್ಲಿ ಒಂದು ಚಿಕ್ಕ ಮತ್ತು ದೊಡ್ಡ ಎರಡು ಬಾವಿಗಳಿವೆ. ಈ ಬಾವಿಗಳಿಗೆ ನೆಲಮಾಳಿಗೆಯ ಮೂಲಕವೂ ಪ್ರವೇಶಿಸುವಂತೆ ಕಟ್ಟಲಾಗಿರುವುದು ವಿಶೇಷ ದೊಡ್ಡ ಬಾವಿಯ ಪಕ್ಕದಲ್ಲಿ ಅಳಿದುಹೋದ ಅರಮನೆಯ ಕುರುವಾಗಿ ಬೃಹದಾಕಾರದ ನೆಲಗಟ್ಟು ಕಂಡುಬರುತ್ತದೆ. ಇಲ್ಲಿಯೂ ನೆಲಮಾಳಿಗೆಗಳಿವೆ. ಸ್ವಲ್ಪ ದೂರದಲ್ಲಿ ಮರವೊಂದರ ಕೆಳಗೆ ಕದಂಬ ಶೈಲಿಯ ಹೋಲಿಕೆಯಲ್ಲಿರುವ ಸಿಂಹಾರೂಢ ದೇವಿಯ ವಿಗ್ರಹವನ್ನು ಪ್ರತಿಷ್ಠಾಪಿಸಲಾಗಿದೆ. ಈ ವಿಗ್ರಹವನ್ನು ಯಾವಾಗ ಪ್ರತಿಷ್ಠಾಪಿಸಲಾಗಿದೆ ಎಂಬುದು ನಿಖರವಿಲ್ಲ. ಇಲ್ಲಿನ ಒಂದು ದಂತಹಥೆಯ ಪ್ರಕಾರ ಮಲ್ಲಿಕ್ ಎಂಬ ಬಾಲಕ ಅಂಕೋಲಾ ಅಚವೆಯ ಕುಂಟಕಣಿಯ ಹೆಬ್ಬಾರರ ಕುಟುಂಬವೊಂದರಲ್ಲಿ ದನಗಾಯುವವನಾಗಿದ್ದ. ಒಂದು ದಿನ ಮಧ್ಯಾಹ್ನ ದ ಉರಿಬಿಸಿಲಿನಲ್ಲಿ ಮಲಿಕ್ ದನಗಳನ್ನು ಮೇಯಿಸುತ್ತಿದ್ದಾಗ ಹಾಗೇ ಮಲಗಿ ನಿದ್ರಿಸಿದನಂತೆ ನಿದ್ದೆಯಲ್ಲಿದ್ದ ಬಾಲಕ ಮಲ್ಲಿಕನಿಗೆ ಸುಡುಬಿಸಿಲು ತಗಲುತ್ತಿರುವುದನ್ನು ಗಮನಿಸಿದ ಸರ್ಪವೊಂದು ಆತನ ತಲೆಯ ಬಳಿ ಹೆಡೆಬಿಚ್ಚಿ ನೆರಳು ನೀಡಿತಂತೆ. ಇದರಿಂದ ಆ ಬಾಲಕ ‘ಸರ್ಪಮಲ್ಲಿಕ’ನೆಂದು ಹೆಸರು ಪಡೆದನಂತೆ ನಂತರ ಸರ್ಪಮಲ್ಲಿಕನು 14ನೇ ಶತಮಾನದ ಅಂತ್ಯದಲ್ಲಿ ತಾನು ಗಳಿಸಿದ ಪ್ರಖ್ಯಾತಿಯಿಂದ ನಾಲ್ಕು ಎಕರೆ ಇರುವ ಪ್ರದೇಶದಲ್ಲಿ ಈಗಿನ ಮಿರ್ಜಾನ ಕೋಟೆಯನ್ನು ಕಟ್ಟಿದ ಎನ್ನುವುದು ಒಂದು ಕಥೆ.
16ನೇ ಶತಮಾನದ ಪೂರ್ವದಲ್ಲಿ ಸೋದೆ ಸದಾಶಿವನಾಯಕನ ಹಿಡಿತಕ್ಕೆ ಒಳಪಟ್ಟಿತು. 1659ರ ಅವಧಿಯಲ್ಲಿ ಉತ್ತರಕನ್ನಡದ ಮೇಲೆ ಹಿಡಿತ ಹೊಂದಿದ್ದ ಕೆಳದಿಯ ಶಿವಪ್ಪನಾಯಕನು ಈ ಕೋಟೆಯನ್ನು ತನ್ನ ವಶಕ್ಕೆ ತೆಗೆದುಕೊಂಡ. ನಂತರ 1769 ರಲ್ಲಿ ಹೈದರಾಲಿ ದಂಡೆತ್ತಿ ಬಂದು ಈ ಮಿರ್ಜಾನ ಕೋಟೆಯನ್ನು ತನ್ನ ವಶಕ್ಕೆ ತೆಗೆದುಕೊಂಡ ಎಂದು ಒಂದೆಡೆ ಇತಿಹಾಸ ಹೇಳುತ್ತದೆ. ಇನ್ನೊಂದು ವಾದದಲ್ಲಿ ಮಿರ್ಜಾನ ಕೋಟೆಯನ್ನು ಬನವಾಸಿಯನ್ನು ಆಳುತ್ತಿದ್ದ ಕದಂಬ ರಾಜ ಮಯೂರವರ್ಮನು ಕಟ್ಟಿಸಿದ್ದಲ್ಲದೆ ಈ ಕೋಟೆಯಲ್ಲಿ ದೇವಿಯ ವಿಗ್ರಹವನ್ನು ಸ್ಥಾಪಿಸಿದ ಎನ್ನಲಾಗಿದೆ.
ನಂತರ 18ನೇ ಶತಮಾನದಲ್ಲಿ ಬ್ರಿಟಿಷರು ಮಿರ್ಜಾನ ಕೋಟೆಯನ್ನು ವಶಕ್ಕೆ ತೆಗೆದುಕೊಂಡರು. ಆ ಸಮಯದಲ್ಲಿ ಇಲ್ಲಿಗೆ ಬಂದಿದ್ದ ವೈಸರಾಯರೊಬ್ಬರು ಈ ಕೋಟೆಯ ಅಂದವನ್ನು ನೋಡಿ ತನ್ನ ಪ್ರೇಯಸಿ ಹಾಗೂ ತನ್ನ ಹೆಸರನ್ನು ಸೇರಿಸಿ ‘ಮೆರಿಜಾನ್’ ಎಂದು ನಾಮಕರಣ ಮಾಡಿದನಂತೆ ನಂತರ ‘ಮಿರ್ಜಾನ’ ಎಂದು ಕರೆಯಲ್ಪಟ್ಟಿರಬಹುದು ಏನೇ ಇದ್ದರೂ ಕೋಟೆಯ ಮೇಲೆ ಒಂದಕ್ಕಿಂತಲೂ ಹೆಚ್ಚು ಬಾರಿ ಹೊರಗಿನ ಆಕ್ರಮಣ ಮತ್ತು ಅಧಿಪತ್ಯ ನಡೆದಿರುವ ಲಕ್ಷಣಗಳನ್ನು ಈಗಲೂ ಇಲ್ಲಿನ ಅವಶೇಷಗಳಲ್ಲಿ ಮತ್ತು ಜನಜೀವನದಲ್ಲೂ ಗುರುತಿಸಬಹುದು.
ಕೋಟೆ ಸುರಂಗ ಸಂಬಂಧ ಮಿರ್ಜಾನ ಕೋಟೆಗೂ ಅಘನಾಶನಿ ಚಂದಾವರ ಕೋಟೆಗೂ ಹತ್ತಿರದ ಸಂಬಂಧವಿರಬಹುದು ಎಂದು ತರ್ಕಿಸಲಾಗುತ್ತದೆ ಏಕೆಂದರೆ ಸಂಪೂರ್ಣ ನಶಿಸಿದ ಕೋಟೆಯ ಕಡೆ ಹೋಗಿರುವ ಸಾಧತೆಯನ್ನು ಅಲ್ಲಗಳೆಯುವಂತಿಲ್ಲ. ಇದೇ ರೀತಿ ಮಿರ್ಜಾನ ಕೋಟೆಯಿಂದ ಚಂದಾವರದಲ್ಲಿ ಅವಶೇಷವಾಗಿರುವ ಕೋಟೆಯೆಡೆಗೂ ಸಾಗಿರುವ ಸಾಧತೆ ಇದ್ದು ಅದು ಉತ್ಖನನದಿಂದಷ್ಟೇ ಗೊತ್ತಾಗಬೇಕು. ಇವೆಲ್ಲವನ್ನೂ ಗಮನಿಸಿದಾಗ ಮಿರ್ಜಾನ ಕೋಟೆಗಳಿಗೆ ಕೇಂದ್ರವಾಗಿತ್ತು. ಅಘನಾಶಿನಿ ಕೋಟೆಯು ಸಮುದ್ರ ಸಂಪರ್ಕ ವಾಣಿಜ್ಯ ಸಾಗಾಣಿಕೆಯ ತಾಣವಾಗಿದ್ದುದು ಊಹೆಗೆ ಸಿಲುಕುತ್ತದೆ.
ಹೀಗೆ ಹಲವಾರು ಏಳುಬೀಳುಗಳನ್ನು ಕಂಡ ಮಿರ್ಜಾನ ಕೋಟೆಯು ಇನ್ನು ಎದೆ ಸೆಟೆದು ನಿಂತಿದೆ.
- ಟಿ.ಶಿವಕುಮಾರ್ – ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಅರಳೇಶ್ವರ.