ಲೇಖಕ ಮಾಲತೇಶ ಅಂಗೂರ ಅವರ ತೀವ್ರ ಅನಾರೋಗ್ಯದ ನಂತರ ಮತ್ತೆ ಕ್ಯಾಮರಾ ಹಿಡಿದು ಹೊರಟಾಗ ಸಿಕ್ಕ ಅದ್ಬುತ ಚಿತ್ರಗಳ ಜೊತೆ ಸುಂದರ ಬರಹ, ಮುಂದೆ ಓದಿ…
ಹಳದಿ ಹೂಗುಬ್ಬಿಯೊಂದು ಹೂವುಗಳ ಮಕರಂದ ಹೀರುವ ದೃಶ್ಯ ಕಣ್ಣಿಗೆ ಕಂಡಿತು. ಪರಿಸರ ವಿಚಿತ್ರ, ವಿಸ್ಮಯಗಳ ಗೂಡು, ಪರಿಸರ ನಿತ್ಯವೂ ಹೊಸತರ ಕಾಣುತ್ತದೆ. ಪರಿಸರದಲ್ಲಿ ಏನೇಲ್ಲಾ ವಿಸ್ಮಯಗಳಿವೆ. ಅವುಗಳನ್ನು ನೋಡುವ ಒಳಗಣ್ಣು ನಮ್ಮಲ್ಲಿರಬೇಕು. ಹಲವಾರು ಬಾರಿ “ಹಳದಿ ಹೂಗುಬ್ಬಿಮಕರಂದ ಹೀರುವ ದೃಶ್ಯಗಳನ್ನು ಕಂಡಿದ್ದ ನನಗೆ ಈ ಗುಬ್ಬಿಗಳ ನಿರಂತರ ಹಾರಾಟದಿಂದ ಇವುಗಳು ಈ ರೀತಿಯ ಛಾಯಾಚಿತ್ರಗಳನ್ನು ಸೆರೆಹಿಡಿಯಲು ಸಾಧ್ಯವಾಗಿರಲಿಲ್ಲ. ಆದರೆ, ಶನಿವಾರ ಬೆಳಿಗ್ಗೆ ಯಾವುದೋ ಸಸ್ಯದ ಗಿಡದಲ್ಲಿ “ಹಳದಿ ಹೂಗುಬ್ಬಿ” ಹೂವಿನಿಂದ ಮಕರಂದ ಹೀರುತ್ತಿದ್ದ ದೃಶ್ಯ ಗಮನ ಸೆಳೆಯಿತು. ಅದರ ಕೆಲವು ದೃಶ್ಯಗಳನ್ನು ಕ್ಯಾಮೇರಾ ಕಣ್ಣಿನಲ್ಲಿ ಸೆರೆಹಿಡಿದೆ.
ನೆರಳೆ ಬಣ್ಣ ಪ್ರಧಾನವಾಗಿರುವ ಗುಬ್ಬಚ್ಚಿ ಗಾತ್ರದ “ಹಳದಿ ಹೂಗುಬ್ಬಿ”ಎದೆ ಹೊಟ್ಟೆ ಬಿಳಿ-ತಿಳು ಹಳದಿ ಬಣ್ಣ. ರೆಕ್ಕೆ ಮತ್ತು ಬಾಲದ ಪುಕ್ಕಗಳು ಸಾಧಾರಣ ನೇರಳೆ ಬಣ್ಣ, ತುಸು ಕಂದುಗೆಂಪು ಬಣ್ಣಕ್ಕಿದ್ದು ಹೊಟ್ಟೆಯ ಭಾಗ ಬೂದಿ ಬಿಳಿ ಬಣ್ಣ ಇದಕ್ಕಿದೆ. ಜೋಡಿಗಳಲ್ಲಿ ಹೂವಿನ ಗಿಡಗಳಲ್ಲಿ ಇವು ಹೆಚ್ಚಾಗಿ ಇರುತ್ತವೆ.
ಅತಿ ಹಗುರ ಹಕ್ಕಿಗಳಾದ್ದರಿಂದ ಹೂವಿನ ತೊಟ್ಟು ದಳಗಳ ಮೇಲೆಲ್ಲಾ ರೆಕ್ಕೆ ಬಡಿಯುತ್ತಾ ಕುಳಿತು ಹೂವಿನ ಮಕರಂದ ಹೀರುತ್ತವೆ. ಕೊಂಚ ಕಾಲ ರೆಕ್ಕೆ ಬಡಿಯುತ್ತಾ ಗಾಳಿಯಲ್ಲೇ ನಿಂತು ಮಧುಪಾನ ಮಾಡುವ ಸಾಮರ್ಥ್ಯ ಇವಕ್ಕಿದೆ. ಚಿಕ್ ಚಿಕ್ ಚೀಚೀ ಎಂದು ಮಕರಂದ ಹೀರುತ್ತಾ ನಿರಂತರವಾಗಿ ಸಿಳ್ಳು ಹಾಕುತ್ತವೆ.
ಈ ಹಕ್ಕಿಗಳು ಅನೇಕ ಹೂವುಗಳ ಪರಾಗ ಸ್ಪರ್ಷಕ್ಕೆ ಸಹಾಯ ಮಾಡುತ್ತವೆ. ಹಾಗೇ ಪರತಂತ್ರ ಜೀವಿ ಬಂದಳಿಕೆಗಳ ಬೀಜ ಪ್ರಸಾರಕ್ಕೂ ಸಹಾಯ ಮಾಡಿ ತೊಂದರೆ ಕೊಡುತ್ತದೆ. ಗಿಡಗಳ ಬಾಗಿರುವ ಕೊಂಬೆಗಳ ತುದಿಯಲ್ಲಿ ಜೋಳಿಗೆಯಾಕಾರದ ಗೂಡು ಕಟ್ಟಿ ಜೇಡರ ಬಲೆಯನ್ನು ಹೊಸೆದು ಮಾಡಿದ ದಾರದಿಂದ ತೊಟ್ಟಿಲಿನಂತೆ ನೇತು ಹಾಕುತ್ತದೆ. ಪಕ್ಕದಿಂದ ಪ್ರವೇಶದ್ವಾರವಿರುವ ಗೂಡಿಗೆ ಒಂದು ಪುಟ್ಟ ಛಾವಣಿಯಿರುತ್ತದೆ.
ಇವುಗಳ ಪೋಟೋ ತಗೆಯುವುದು ನಿಜಕ್ಕೂ ಸವಾಲಿನ ಕೆಲಸವೇ ಸರಿ!. ಅದಕ್ಕೆ ಬಹಳ ತಾಳ್ಮೆಯು ಬೇಕಾಗುತ್ತದೆ. ಪ್ರತಿಕ್ಷಣವು ರೆಕ್ಕೆ ಬಡೆಯುತ್ತಾ ಅತ್ತಿಂದ ಇತ್ತ, ಇತ್ತಿಂದ ಅತ್ತ ಹಾರಾಡುತ್ತಲೇ ಇರುವ ಹೂವುಗಳ ಮಕರಂದ ಹೀರುವ “ಹಳದಿ ಹೂಗುಬ್ಬಿ”ಯನ್ನು ಸೆರೆಹಿಡಿಯಲು ಕ್ಯಾಮೇರಾವನ್ನು ಪುಟ್ಟಪಕ್ಷಿಯ ಮೇಲೆ ಕೇಂದ್ರೀಕಿಸಿದ ಲೆನ್ಸ್ ಹೊಂದಿಸಿಕೊಳ್ಳುವ ವೇಳೆ ತತಕ್ಷಣ ಹಾರುವ ಈ ಪುಟ್ಟ “ಹಳದಿ ಹೂಗುಬ್ಬಿ” ಪಕ್ಷಿಗಳಲ್ಲಿಯೇ ವಿಸ್ಮಯಕಾರಿಯಾಗಿದೆ. ಈ ವಿಸ್ಮಯಗಳು ಕೆಲವೊಮ್ಮೆ ನಮ್ಮ ಕಣ್ಣಿಗೆ ಕಾಣುವುದಿಲ್ಲ. ಕಂಡರೂ ಆ ವಿಸ್ಮಯವನ್ನು ಅವಿಸ್ಮರಣೀಯವಾಗಿಸಿಕೊಳ್ಳುವ ಬೇಗುದಿ ನಮ್ಮಲ್ಲಿರಬೇಕು. ಹೀಗೆ ಹಳದಿಹೂಗುಬ್ಬಿಯ ಮೇಲೆ ಹೆಗಲೇರಿದ ಕ್ಯಾಮೆರಾ ಕ್ಲಿಕ್ಕಿಸಿದ ಕೆಲವು ಚಿತ್ರಗಳು ಇವು.
- ಚಿತ್ರ/ಬರಹ: ಮಾಲತೇಶ ಅಂಗೂರ, ಹಾವೇರಿ.