ನಾನಿಯವರ “ಅಂತರಂಗದ ಧ್ಯಾನ” ಗಜಲ್ ಸಂಕಲನದ ಕುರಿತು ಗದ್ಯ ಬರಹಗಾರ,ಕವಿ ಡಾ. ಲಕ್ಷ್ಮಣ ಕೌಂಟೆ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ಮುಂದೆ ಓದಿ…
ಪುಸ್ತಕ : ಅಂತರಂಗದ ಧ್ಯಾನ
ಲೇಖಕರು :ನಾರಾಯಣ ಸ್ವಾಮಿ
ಪ್ರಕಾರ : ಗಜಲ್ ಸಂಕಲನ
ಪ್ರಕಾಶನ : ಆಶಾ ಪ್ರಕಾಶನ
ಬೆಲೆ : ೧೨೦ /
ನಾನಿ ಕಾವ್ಯನಾಮ ಇರಿಸಿಕೊಂಡು ಕವಿತೆ, ಗಜಲ್ ಮುಂತಾದವುಗಳನ್ನು ಬರೆಯುತ್ತಿರುವ ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ಮಾಸ್ತಿ ಹೋಬಳಿಯ ಬಂಡಹಟ್ಟಿ ಗ್ರಾಮದ ವಕೀಲರಾದ ನಾರಾಯಣ ಸ್ವಾಮಿ ವಿ. ಯವರು ವೃತಿಯಲ್ಲಿ ವಕೀಲರಾಗಿದ್ದು ಸಾಹಿತ್ಯ ರಚನೆಯಲ್ಲಿ ಆಸಕ್ತಿ ವಹಿಸಿದ್ದು ರೋಚಕ, ಸಂತಸದಾಯಕ ವಿಷಯವಾಗಿದೆ. “ಮೌನದೊಳಗಣ ಭಾವ” ಎನ್ನುವ ಶೀರ್ಷಿಕೆಯ ಕವನ ಸಂಕಲನಕ್ಕೆ ನಾನು ಮುನ್ನುಡಿ ರೂಪದ ಕೆಲವು ಸಾಲುಗಳನ್ನು ಬರೆದಿದ್ದೆ. ಅವರು ಆ ಕವನ ಸಂಕಲನದ ಮುದ್ರಣದ ನಂತರ ಒಂದಲ್ಲ, ಎರಡು ಪ್ರತಿಗಳನ್ನು ನನಗೆ ಕಳುಹಿಸಿಕೊಟ್ಟಿದ್ದರು. ಈಗ ತಮ್ಮ ಎರಡನೆಯ ಕೃತಿ “ಅಂತರಂಗದ ಧ್ಯಾನ” ವನ್ನು ಅದೇ ಪ್ರೀತಿ ವಿಶ್ವಾಸ ಸ್ನೇಹದೊಂದಿವೆ ಕಳುಹಿಸಿಕೊಟ್ಟಿದ್ದಾರೆ. ಅವರ ಸ್ನೇಹಪೂರ್ಣ ವರ್ತನೆಗೆ ನಾನು ಋಣಿಯಾಗಿರುವೆ.
ನಾನಿಯವರ “ಅಂತರಂಗದ ಧ್ಯಾನ” ಅರವತ್ತು ಗಜಲ್ ಗಳ ಒಂದು ಸುಂದರ ಸಂಕಲನವಾಗಿದೆ. ಕನ್ನಡದಲ್ಲಿ ಈಗ ಹಲವು ಬಗೆಯ ಕಾವ್ಯ ಪ್ರಕಾರದ ಪ್ರಯೋಗಗಳು ನಡೆದಿವೆ. ಮೊಬೈಲ್ ನಂತಹ ವಿದ್ಯುನ್ಮಾನ ಉಪಕರಣಗಳು ಕೈಗೆ ಬಂದ ಮೇಲೆ ವಿಶ್ವಸಾಹಿತ್ಯದ ಪ್ರಕಾರಗಳು ಸ್ಥಳೀಯ ಪ್ರಾದೇಶಿಕ ಭಾಷೆಗಳನ್ನು ತಮ್ಮ ನಾಡಕಾಯದ ಮೇಲೆ ನಮ್ಮುಡುಗೆ ಉಟ್ಟು ನಮ್ಮಗಳ ಮಧ್ಯ ನಸುನಗುತ್ತ ಮೆರೆಯುತ್ತಿವೆ. ವಿದೇಶಿ ಮಹಿಳೆ ಸ್ವದೇಶಿ ವೇಷ ತೊಟ್ಟು ನಮ್ಮ ಉಡುಗೆ ತೊಡಿಗೆಯ ಮೌಲ್ಯವನ್ನು ವೃದ್ಧಿಸಿದಂತೆ ಇವೆಲ್ಲ.
ಈ ಹಿಂದೆ ಟಿವಿ ಮೊಬೈಲ್ ಇಲ್ಲದ ಕಾಲದಲ್ಲಿ ಅಕ್ಷರ ಬಲ್ಲವರು ಮನೋರಂಜನೆಗಾಗಿ ಸಾಹಿತ್ಯ ಕೃತಿಗಳ ಮೊರೆ ಹೋಗುವುದು ಸಾಮಾನ್ಯವಾಗಿತ್ತು. ಆಗ ಸಮಯ ವ್ಯಯಕ್ಕಾಗಿ ದೀರ್ಘ ಕಥಾನಕಗಳಾದ ಕಾವ್ಯ, ಕಾದಂಬರಿ, ಕಥೆ ಮೊದಲಾದವುಗಳನ್ನು ಬರೆಯುವುದು ಓದುವುದು ಸಾಮಾನ್ಯವಾಗಿತ್ತು. ಹಲವರು ಸಾಹಿತ್ಯಪ್ರಿಯ ವಿದ್ವಾಂಸರು ಮಹಾಕಾವ್ಯ, ಖಂಡ ಕಾವ್ಯ ಮುಂತಾದವುಗಳನ್ನು ಬರೆಯುತ್ತಿದ್ದರು, ಓದುತ್ತಿದ್ದರು.
ಈಗ ಕಾಲ ಬದಲಾಗಿದೆ. ಮನುಷ್ಯ ಅವಸರದ ಬದುಕಿನಲ್ಲಿ ಗತಿಶೀಲನಾಗಿದ್ದಾನೆ. ಈಗವನಿಗೆ ಯಾವುದೂ, ಸಾಹಿತ್ಯದಂಥದ್ದು ದೊಡ್ಡದು ಬೇಕಿಲ್ಲ (ಆಸ್ತಿ ಪಾಸ್ತಿ ಹಣ ಬಿಟ್ಟು!), ಎಲ್ಲ ಶಾರ್ಟ್ ಆಯಿಂಡ್ ಸ್ವೀಟ್ ಬೇಕು. ಹಲವು ಅನುಕೂಲಗಳ ಮಧ್ಯವೂ, ವೇಗ ವಾಹಕಗಳಿದ್ದರೂ ಅವನಿಗೆ ಇಂದು ಸಮಯವೇ ಸಾಲುತ್ತಿಲ್ಲ. ಬಹುಶಃ ಅವನಿಗೆ ಗಡಿಯಾರ ನೋಡಿ ಸಮಯ ತಿಳಿದುಕೊಳ್ಳುವುದಕ್ಕೂ ಸಮಯವಿಲ್ಲ! ಹೀಗಾಗಿ ಕತೆ, ಕಾದಂಬರಿ, ಮಹಾಕಾವ್ಯಾದಿಗಳ ಗೊಡವೆ ಬಿಟ್ಟು ಸಣ್ಣ ಸಣ್ಣ ಕವನ ಕಂಡಿಕೆಗಳ ಕಡೆಗೆ ಮನುಜ ಗಮನ ಹರಿಸಿದ್ದಾನೆ. ಕಿರಿಯದರಲ್ಲಿಯೇ ಹಿರಿದರ್ಥ ಹೇಳುವ ತಂಕಾದಂತಹ ಕಾವ್ಯ ಪ್ರಕಾರ ಅವನ ಮನವನ್ನು ಸೆಳೆಯಲು ಹತ್ತಿವೆ. ಬರೆಯುವವರೂ ಸಹ ದೀರ್ಘ ಬರಹಕ್ಕೆ ಓದು, ಅಧ್ಯಯನ, ವಿಷಯ ಸಂಗ್ರಹಣ; ಬರೆಯುವುದಕ್ಕೆ ಬೇಕಾದ ಅಪಾರ ಸಹನೆಯನ್ನು ಹೊಂದಿಸುವ ಶ್ರಮದ ಗೊಡವೆಗೆ ಹೋಗದೆ ಲಘು ಬರಹದೆಡೆಗೆ ಹೆಚ್ಚು ಗಮನವನ್ನು ಕೊಡುತ್ತಿದ್ದಾರೆ.
ಕನ್ನಡ ಸಾಹಿತ್ಯದಲ್ಲೂ ಪ್ರಾಚೀನ ಕಾಲದಿಂದಲೂ ದ್ವಿಪದಿ ಎನ್ನುವ ಕಾವ್ಯ ಪ್ರಕಾರವೊಂದು ಅಸ್ತಿತ್ವದಲ್ಲಿದ್ದು, ಅಂತಹ ಐದು ದ್ವಿಪದಿಗಳು ಇಲ್ಲಿ ಗಜಲ್ ರೂಪ ಧರಿಸಿ ಕಾಣಿಸುತ್ತಿರುವಂತೆ ತೋರುತ್ತಿದೆ. ಆದರೂ ದೇಶಿ ದೇಶಿಯೇ, ವಿದೇಶಿ ವಿದೇಶಿಯೇ. ಅಲ್ಲಿನ ಸೊಗಡು ಇಲ್ಲಿ, ಇಲ್ಲಿನ ಸೊಗಡು ಅಲ್ಲಿ ಒಂದರ್ಥದಲ್ಲಿ ವೈರುದ್ಧ್ಯವೇ.
ಗಜಲ್ ಫಾರ್ಸಿ, ಅರಬ್ಬಿ, ಉರ್ದುವಿನ ಒಂದು ಸುಂದರ ಕಾವ್ಯ ಪ್ರಕಾರ. ಹೆಚ್ಚಾಗಿ ಶರಾಬ್ ಶಬನಮ್ ನಂತೆ ಗುಲಾಬ್ ಫೂಲ್ ನಂತೆಯೇ ಮಾದಕಭಾವದ ದ್ವಿಪದಿಗಳನ್ನು ಅಭಿವ್ಯಕ್ತಿಸುವ
ಅದು ಸುಂದರ, ಕೋಮಲ ಭಾವಗಳಿಗೆ ಜೀವ, ಚೈತನ್ಯ ತುಂಬುವಂಥದ್ದು.
ಗಜಲ್ ಕುರಿತು ಸಶಕ್ತವಾಗಿ ಮಾತನಾಡುವ ವಿದ್ವತ್ತು ನಾನು ಹೊಂದಿಲ್ಲ. ನಾನು ಮೂಲತಃ ಗದ್ಯ ಬರಹಗಾರ. ಕವಿತೆಗಳನ್ನೂ ಬರೆಯುತ್ತೇನೆ. ಆದರೆ ಜಪಾನಿ ಟಂಕಾ, ಹೈಕು; ಫಾರ್ಸಿ ಉರ್ದು ಅರಬ್ಬಿಯ ಗಜಲ್ ಮುಂತಾದ ಬಗೆ ನನಗೆ ಹೆಚ್ಚೂ ಕಡಿಮೆ ಅಪರಿಚಿತವೇ.
ನಾನಿಯವರ “ಅಂತರಂಗದ ಧ್ಯಾನ” ಗಜಲ್ ಸಂಕಲನದ ಕುರಿತು ಅದಾಗಲೇ ಬಹಳ ಜನ ಬರೆದಿದ್ದಾರೆ. ಮುದ್ರಿತ ಆ ಕೃತಿಯಲ್ಲೂ ಕೆಲವು ಜನ ಪ್ರಬುದ್ಧ ಗಜಲ್ ಕಾರರು, ವಿಮರ್ಶಕರೂ ಅರ್ಥಪೂರ್ಣವಾದ ಮುನ್ನುಡಿ, ಆಶಯ, ಹಾರೈಕೆಗಳನ್ನು ಬರೆದು ಆ ಕುರಿತು ಪರಿಚಯ ಮಾಡಿಕೊಟ್ಟಿದ್ದಾರೆ. ಅವರ ಅಭಿಪ್ರಾಯಗಳು, ಅನಿಸಿಕೆಗಳೂ ನನ್ನವುಗಳೂ ಆಗಿವೆ.
ನಾನಿಯವರು ಇನ್ನು ಮುಂದೆಯೂ ಉತ್ತಮ ಕೃತಿಗಳನ್ನು ಬರೆದು ಪ್ರಕಟಿಸಲಿ ಮತ್ತು ಅವರ ಬರಹದ ಆಸಕ್ತಿ ಗದ್ಯದೆಡೆಯೂ ವಾಲಲಿ ಎಂದು ನಾನು ಆಶಿಸುತ್ತೇನೆ.
- ಡಾ. ಲಕ್ಷ್ಮಣ ಕೌಂಟೆ – ಕವಿ, ಲೇಖಕರು, ಉಪನ್ಯಾಸಕರು, ಕಲಬುರಗಿ.