‘ಸಾಸಿವೆ ತಂದವಳು’ ಕೃತಿಯ ವಿಮರ್ಶೆ – ಮುನವ್ವರ್ ಜೋಗಿಬೆಟ್ಟುಕ್ಯಾನ್ಸರ್ ನ್ನು ಗೆದ್ದು ಬೇರೆಯವರಿಗೆ ಸ್ಪೂರ್ತಿಯ ಚಿಲುಮೆಯಾಗುವ ಲೇಖಕಿ, ತಮ್ಮ ನೋವುಗಳನ್ನು,ತಮ್ಮ ಆರ್ಥಿಕತೆಯನ್ನು ಹೇಳಿಕೊಳ್ಳದೆ ಸುತ್ತಲಿನ ಸಮಾಜ ಅವರ ಮೇಲೆ ಬೀರಿದ ದೃಷ್ಟಿಕೋನವನ್ನು ಹಾಸ್ಯಮಯವಾಗಿ ‘ಸಾಸಿವೆ ತಂದವಳು’ ಕೃತಿಯಲ್ಲಿ ಸೂಕ್ಷ್ಮವಾಗಿ ಅವರ ನೋವನ್ನು ಓದುಗರ ಮನ ಮುಟ್ಟುವಂತೆ ಮಾಡಿದ್ದಾರೆ.

ಬುದ್ಧನು ಸತ್ತವರನ್ನು ಬದುಕಿಸಿಕೊಡಲು “ಸಾವಿಲ್ಲದ ಮನೆಯ ಸಾಸಿವೆ ತೆಗೆದುಕೊಂಡು ಬಾ” ಎಂದು ಕಳುಹಿಸಿಕೊಡುತ್ತಾನೆ. ಸಾವಿಲ್ಲದ ಒಂದು ಮನೆಯೂ ಹುಡುಕಿ ಕೊಡಲಾಗದವಳು ಹಿಂತಿರುಗಿ ಬರುವುದು ಮತ್ತು ಸಾವು ಯಾವ ಮನೆಯನ್ನೂ ಬಿಡುವುದಿಲ್ಲವೆಂದು ತಿಳಿ ಹೇಳುವ ಈ ಕಥೆ ಈ ಪುಸ್ತಕದ ಹೆಸರಿಗೆ ಪ್ರೇರಣೆ. ಈ ಪುಸ್ತಕದಲ್ಲಿ ‘ಸಾಸಿವೆ ತಂದವಳು’ ಎಂಬುದು ಒಂದು ರೂಪಕವಾಗಿ ಬಳಕೆಯಾಗಿದೆ. ಸಾವಿನ ಜೊತೆ ಗುದ್ದಾಡಿ ಗೆದ್ದು ಬರುವವಳ ಕಥೆ ಎಂಬರ್ಥದಲ್ಲಿ. ಅದೇ ಹೆಸರಿನೊಂದಿಗೆ ಈ ಪುಸ್ತಕವೂ ನಮ್ಮನ್ನು ಓದಿನೆಡೆಗೆ ಸೆಳೆಯಬಲ್ಲದು.

ಒಂದು‌ ರೋಗದ ಕಥೆ ಎಷ್ಟಿರಬಹುದು? ಚಿಕಿತ್ಸೆ ಮತ್ತು ಚಿಕಿತ್ಸೆ. ಅಷ್ಟರಲ್ಲೇ ಈ ಪುಸ್ತಕ ಮುಗಿದು ಹೋಗುವುದಿತ್ತು. ನಾನು ಅದೇ ಪೂರ್ವಾಗ್ರಹದಲ್ಲಿ ಪುಸ್ತಕದ ಬಗ್ಗೆ ತಿಳಿದಿದ್ದರೂ ಓದಲು ಸೋಮಾರಿಯಾಗಿ ಬಿಟ್ಟಿದ್ದೆ. ಇತ್ತೀಚಿಗೆ ಗೆಳೆಯನೊಬ್ಬ ವಿಮರ್ಶೆ ಬರೆದಾಗ ನಾನೂ ಓದಬೇಕಿನಿಸಿ ಬುಕ್ ಮಾಡಿಕೊಂಡೆ. ಅಂಚೆ ಇಲಾಖೆಯವರು, ಕೊರಿಯರ್ನವರು ಎರಡು ವಾರಗಳ ಕಾಲ ಕಾಯಿಸಿ ಕೊನೆಗೂ ಪುಸ್ತಕ ತಲುಪಿಸಿದರು.

ಇಡೀ ಪುಸ್ತಕ ಒಂದೇ ಗುಕ್ಕಿನಲ್ಲಿ ಓದಿ ಮುಗಿಸಿದೆ. ಓದಲು ಕುಳಿತ ನಾನು ನಕ್ಕು ನಕ್ಕು ಹೊಟ್ಟೆ ಹುಣ್ಣಾಗಲು ಬಾಕಿ. ನನ್ನ ಪೂರ್ವಾಗ್ರಹವೆಲ್ಲಾ ಜರ್ರನೇ ಇಳಿದೇ ಹೋಗುವಂತಹ ಶೈಲಿ. ಕ್ಯಾನ್ಸರ್ ರೋಗವೊಂದರ ಹುಟ್ಟು ಮತ್ತು ಶಮನದ ಪಡಿಪಾಟಲು, ಸಂಕಟ ಮಾತ್ರವನ್ನೇ ಎದುರು ನೋಡುತ್ತಿದ್ದವನಿಗೆ ಭಾರತಿ ಅಕ್ಕ ಒಂದು ಪತ್ತೆ ದಾರಿ ಕಥೆಯಂತೆಯೇ ಓದಿಸಿ ಹಚ್ಚಿ ಬಿಟ್ಟರು. ಯಾವುದೇ ರೋಗದ ಲಕ್ಷಣಗಳನ್ನು ಓದಿದರೂ ಅದನ್ನು ನನ್ನೊಳಗೂ ಹುಡುಕಿಕೊಳ್ಳುವ ಖಯಾಲಿಗೆ ನಾನೂ ಹೊರತಾಗಿರಲಿಲ್ಲ. ನೇಮಿ ಚಂದ್ರರವರು ಮುನ್ನುಡಿಯಲ್ಲಿ ಹೇಳಿದಂತೆ ಇದೊಂದು ಕೇವಲ ಸ್ಪೂರ್ತಿದಾಯಕ ಪುಸ್ತಕ ಮಾತ್ರವಾಗಿ ಉಳಿಯದೆ ಒಂದು ಅತ್ಯುತ್ತಮ ಸಾಹಿತ್ಯಿಕ ಬರಹ ಕೂಡ ಹೌದು. ಒಂದು ದೊಡ್ಡ ಸವಾಲನ್ನು ನಗುತ್ತಲೇ ಸ್ವೀಕರಿಸುವ ಭಾರತಿ ಅಕ್ಕ, ಕಣ್ಣ ಮುಂದೆ ಬರುತ್ತಾರೆ. ಹಾಗಂತ ಅವರೇನೂ ಹುಟ್ಟು ದಿಟ್ಟೆಯೇನಲ್ಲ. ನಮ್ಮಂತೆ ಸಣ್ಣ ವಿಷಯಗಳಿಗೂ ಹೆದರುವ ಸವಾಲನ್ನು ಸುಲಭವಾಗಿ ಸ್ವೀಕರಿಸಿಕೊಳ್ಳಲಾಗದವರು. ಕ್ಯಾನ್ಸರ್ ಬಂದಂದಿನಿಂದ ಬದಲಾದ ಅವರ ಜೀವನ ಸಂಗ್ರಾಮ ನಿಜಕ್ಕೂ ಸ್ಪೂರ್ತಿ ತುಂಬುವಂತದ್ದು.

ಲೇಖಕಿ ಎಲ್ಲೂ ತಮ್ಮ ಆರ್ಥಿಕ ಸಂಕಷ್ಟಗಳನ್ನು ಹೇಳಿಕೊಳ್ಳುವುದಿಲ್ಲ. ಕೆಲವರು ಇದನ್ನೇ ಬೊಟ್ಟು ಮಾಡಿಕೊಂಡು “ನಿಮ್ಮಂತಹ ಶ್ರೀಮಂತರಿಗೆ ಇಂಥಹ ರೋಗ ಗೆಲ್ಲಬಹುದಪ್ಪಾ” ಎಂದು ಕೆಟ್ಟದಾಗಿ ಕಮೆಂಟ್ ಮಾಡಿರುವುದನ್ನೂ ಹೇಳಿಕೊಂಡು ಲೇಖಕಿ ನೊಂದುಕೊಳ್ಳುತ್ತಾರೆ. ಬಹುಶಃ ಅವೆಲ್ಲಾ ಮೊಸರಲ್ಲಿ ಕಲ್ಲು ಹುಡುಕುವ ಕೆಲಸಗಳಷ್ಟೇ.

ಶುಕ್ರವಾರ ಮಸೀದಿ ಮುಗಿಸಿ ಹೊರ ಬರುವಾಗ ತುಂಡು ಕಾಗದ ಹಿಡಿದು ಬೇಡುವ ಬಾಯಿಯಲ್ಲಿ ” ಅಮ್ಮ, ಅಪ್ಪ, ಗಂಡನಿಗೆ ಕ್ಯಾನ್ಸರ್” ಎಂದು ಹೇಳಿಕೊಳ್ಳುವ ನೋವಿನವರಿಗೆ ಇದು ಸ್ಪೂರ್ತಿ ದಾಯಕ ಪುಸ್ತಕವಾಗದಿರಬಹುದು ಅಥವಾ ಅದನ್ನು ಹೇಳಿಕೊಳ್ಳುವ ಮನಸ್ಸುಗಳಿಗೆ ಇಂಥ ಪುಸ್ತಕ ತುಟ್ಟಿಯಾಗಲೂ ಬಹುದು. ಹಾಗಂತ ಒಂದು ಕ್ಯಾನ್ಸರ್ ರೋಗಿಯ ಮಾನಸಿಕ ಅವಸ್ಥೆಯನ್ನು ಪರಿಗಣಿಸದೆ ಅಷ್ಟೂ ಕೀಳ್ಮಟ್ಟದ ಕಮೆಂಟ್ ಮಾಡುವುದು ಉಚಿತವಲ್ಲ‌. ಅದು ವಿಕೃತಿಯೇ ಹೊರತು ಇನ್ನೇನೂ ಅಲ್ಲ.

( ‘ಸಾಸಿವೆ ತಂದವಳು’ ಕೃತಿಯ ಲೇಖಕಿ ಭಾರತಿ ಬಿ.ವಿ)

ಇನ್ನು ಸಾಹಿತ್ಯಿಕವಾಗಿ ಹೇಳುವುದಾದರೆ, ಇದೊಂದು ಬಹಳ ಅದ್ಭುತ ಶೈಲಿ‌ಯ ಪುಸ್ತಕ. ನಾನು ಮಹಿಳಾ ಸಾಹಿತ್ಯ ಅದೆಷ್ಟೋ ಓದಿದ್ದೇನಾದರೂ ಈ ಬಗೆಯ ಬರವಣಿಗೆ ಭಾರತೀ ಅವರಿಗೆ ವಿಶಿಷ್ಟವಾದುದು. ಒಮ್ಮೆ ನಗೆಗಡಲಲ್ಲಿ ತೇಲಿಸಿ ಮರುಕ್ಷಣಕ್ಕೆ ನೋವನ್ನೂ ಹೇರದೆ ತನ್ನ ಬೇನೆಗಳನ್ನು ಹೇಳಿಕೊಳ್ಳುವುದು ಅಷ್ಟೇನೂ ಸುಲಭವಲ್ಲ. ನೋವುಗಳಿಂದ ಬಳಲಿ ಬೆಂಡಾದ ರೋಗಿಗೆ ತನ್ನ ನೋವುಗಳನ್ನು ಹಾಸ್ಯದೊಂದಿಗೆ ಬೆರೆಸಿ ಹೇಳಿಕೊಳ್ಳಲೂ ಮನಸ್ಸಾಗದು. ಆದರೆ ಭಾರತಿಯವರು ಫೀನಿಕ್ಸ್ ಪಕ್ಷಿಯಂತೆ ರೆಕ್ಕೆ ಬಿಚ್ಚಿ ಹಾರಾಡುವುದು ಮತ್ತು ಅದನ್ನು ಇತರರೊಂದಿಗೆ ಕಟ್ಟಿಕೊಡುವ ವೈಖರಿಯೂ ಬಹಳ ಮನೋಜ್ಞವಾಗಿದೆ. “ಆರತಿ ಎತ್ತಿರೇ ನಮ್ ದಮಯವಂತಿಗೆ!” ಎಂಬ ಅಧ್ಯಾಯ ಓದುಗರನ್ನು ಎಲ್ಲ ನೋವುಗಳಿಂದಲೂ ಅಳಿಸುವಂತೆ ಮಾಡುವ ಬರಹ. ಅಡುಗೆಗಾಗಿ ಬರುವ ಕೆಲಸದಾಳು ಮಾಡುವ ಅವಾಂತರಗಳು,ಕಿತಾಪತಿಗಳು ನೆನೆದರೆ ನಕ್ಕು ಹೊಟ್ಟೆ ಹುಣ್ಣಾಗುತ್ತದೆ. ಅಷ್ಟಾಗಿಯೂ ಅವರಿಗೆ ನೋವಾಗುವಂತೆ ಬೈಯ್ಯದೆ ತಿಂಗಳುಗಳ ಕಾಲ ಇರಿಸಿಕೊಂಡ ಲೇಖಕಿಯ ಮನೋ ವಿಶಾಲತೆ ಮೆಚ್ಚಲೇ ಬೇಕು‌. ಎಷ್ಟೆಲ್ಲಾ ನೋವಿದ್ದರೂ ಸಂಯಮ ಕಳೆದುಕೊಳ್ಳದ ಲೇಖಕಿ ರೋಗವೆಂದರೆ ಅರ್ಧ ಸತ್ತುಕೊಳ್ಳುವವರಿಗೆ ಸ್ಪೂರ್ತಿಯ ಚಿಲುಮೆಯಾಗುತ್ತಾರೆ. ಎಲ್ಲವೂ ಮುಗಿದಾಗ ಕೊನೆಗೊಮ್ಮೆ ಸ್ಕ್ಯಾನಿಂಗ್ ರಿಪೋರ್ಟ್ ನಲ್ಲಿ ಎಡಗಡೆಯ ನೋಡ್ಸಿಗೆ ಕ್ಯಾನ್ಸರ್ ಪಸರಿಸಿದೆ ಎಂದು ಭಾವನ ರಹಿತರಾಗಿ ಹೇಳಿಕೆ ಕೊಡುವ ಸ್ಕ್ಯಾನಿಂಗ್ ಸೆಂಟರಿನವರ ಬೇಜಾವಾಬ್ದಾರಿ, ಕ್ಯಾನ್ಸರ್ ಪೂರ್ವದಲ್ಲಿ ಚೆಕಿಂಗ್ನಲ್ಲಿ ಸಿಕ್ಕ ಮೊದಲ ಡಾಕ್ಟರ್ ಒಬ್ಬರ ಉದ್ಧಟತನ‌ ಈ ಎಲ್ಲವುಗಳಿಂದ ಹಿಂಡಿ ಹಿಪ್ಪೆಯಾಗ ಬೇಕಾದವರು ಒಮ್ಮೆಯೂ ಸೋಲೊಪ್ಪಿಕೊಳ್ಳವುದಿಲ್ಲ.ಇನ್ನೆಷ್ಟು ಕ್ಯಾನ್ಸರ್ ಆದರೇನು? ಕಿಮೋ, ರೆಡಿಯೇಶನ್ ಮತ್ತಿನ್ನೇನಾದರೇನು? ಎಂದು ರೋಗವನ್ನೇ ಹೆದರಿಸಿ ಬಿಡುವ ಅವರ ಛಾತಿ ಎಂತಹ ರೋಗಿಯನ್ನು ಬದುಕಿಸಬಲ್ಲದು. ಕೊನೆಯದಾಗಿ ನೋವಿನಿಂದ ಅವರು ಹೇಳಿ ಕೊಳ್ಳುವ ಕೆಲವೊಂದು ಅತೀ ಕೀಳ್ಮಟ್ಟದ ಮನಸ್ಥಿತಿಯ ಜನರ ವಿಮರ್ಶೆ. ಕ್ಯಾನ್ಸರ್, ಎಲ್ಲಾ ಸ್ಟೇಜ್ ಬಗ್ಗೆ ಹೇಳಿಲ್ಲವೆಂದು ವಕ್ಕರಿಸುವ ಮ‌ನುಷ್ಯತ್ವ ಸತ್ತವರು. ಅದೆಲ್ಲದಕ್ಕೂ ಮಿಗಿಲಾಗಿ ಅತೀ ಅನುಕಂಪವೆಂಬ ಪೆಡಂಭೂತದಿಂದ ರೋಗಿಯನ್ನು ಇನ್ನಷ್ಟು ಶಿಥಿಲರಾಗಿಸುವ ಕೆಲವೊಬ್ಬರು. ಇಂತಹವುಗಳಿಂದ ಯಾವ ರೋಗಿಯನ್ನು ಚೈತನ್ಯ ರಹಿತರಾಗಿ ಮಾಡದಿರಲೆಂದು ಪ್ರಾರ್ಥಿಸುವ ಒಳ್ಳೆಯ ಮನಸ್ಸಿನ ಲೇಖಕಿಯ ಸನ್ಮನಸ್ಸು. ಕೊನೆಯದಾಗಿ ನನ್ನದೊಂದು ಸಲಹೆ, ನಿಮ್ಮ ಸುತ್ತ-ಮುತ್ತಲಿನ , ಆಪ್ತ ವಲಯದವರ ಯಾರದಾದರೂ ಕ್ಯಾನ್ಸರ್ ರೋಗಿಗಳಿದ್ದರೆ ಈ ಪುಸ್ತಕವನ್ನೇ ಉಡುಗೊರೆಯಾಗಿ ಕೊಟ್ಟು ಬಿಡಿ.ಸಾವಿನ ಬಾಗಿಲಲ್ಲಿ ನಿಂತವರಿಗೆ ಬದುಕುವ ಛಲ ಕಟ್ಟಿಕೊಡುವ ಈ ಪುಸ್ತಕಗಳು ಇನ್ನಷ್ಟು ಜನರನ್ನು ಮಾನಸಿಕವಾಗಿ ಬದುಕಿಸಲಿ.


  • ಮುನವ್ವರ್, ಜೋಗಿಬೆಟ್ಟು

0 0 votes
Article Rating

Leave a Reply

0 Comments
Inline Feedbacks
View all comments
0
Would love your thoughts, please comment.x
()
x
%d bloggers like this:
Aakruti Kannada

FREE
VIEW