ಗೇರು ಬೀಜದ ಸುತ್ತ ಒಂದು ಹಳೆಯ ನೆನಪಿನ ದೋಣಿ. ರಂಗಕರ್ಮಿ ಕಿರಣ್ ಭಟ್ ಅವರ ಬತ್ತಳಿಕೆಯಲ್ಲಿ ಮೂಡಿ ಬಂದ ಬಾಲ್ಯದ ಒಂದು ನೆನಪನ್ನು ತಪ್ಪದೆ ಮುಂದೆ ಓದಿ…
ವಾಕಿಂಗ್ ದಾರಿಯಲ್ಲಿ ಮರಗಳ ತುಂಬ ಬಣ್ಣ ಬಣ್ಣದ ಗೇರುಹಣ್ಣುಗಳು ನಳನಳಿಸುತ್ತಿದ್ದವು. ನಮ್ ಕಡೆ ಇದಕ್ಕೆ ‘ ಗೋವೆ ಹಣ್ಣು’ ಅಂತೇವೆ. ಕಸುವು ತುಂಬಿಕೊಂಡು ಹೊಳೆಯುತ್ತಿದ್ದ ಗೇರು ಬೀಜಗಳನ್ನ ಕಂಡಾಗ ಗೇರು ಬೀಜದ ಆಟ ನೆನಪಾಯ್ತು.
ನಾವೆಲ್ಲ ಚಿಕ್ಕ ಮಕ್ಕಳಿರೋವಾಗ ಗೇರು ಬೀಜದ ಆಟ ಆಡ್ತಿದ್ವಿ. ಗೇರು ಬೆಳೆಯೋ ಶ್ರಾಯದಲ್ಲಿ ಕಿಸೆ ತುಂಬಾ ಗೇರುಬೀಜಗಳು ಇರ್ತಿದ್ವು.ಚೆಡ್ಡಿ ಕಿಸೆ ಕಲೆಯಾಗೋವಷ್ಟು.
ಸಮತಟ್ಟಾದ ನೆಲದ ಮೇಲೆ ಒಂದು ವೃತ್ತ ಬರೆಯೋದು. ಆಟಕ್ಕಾಗಿ ಸೇರ್ಕೊಂಡ ಹುಡುಗರೆಲ್ಲಾ ಒಂದೊಂದು ಗೇರು ಬೀಜ ಆ ವೃತ್ತದಲ್ಲಿಡೋದು. ವೃತ್ತದಿಂದ ಹತ್ತು ಹೆಜ್ಜೆ ದೂರದಲ್ಲಿ ಒಂದು ಗೆರೆ. ಆ ಗೆರೇ ಮೇಲೆ ನಿಂತ್ಕೊಂಡು ಒಂದು ವಿಶೇಷ ಗೇರು ಬೀಜದಿಂದ ಆ ಗೇರುಬೀಜದ ಗುಪ್ಪೆಗೆ ಗುರಿಯಿಟ್ಟು ಹೊಡೆಯೋದು. ವೃತ್ತದಿಂದ ಹೊರಬಿದ್ದ ಗೇರುಬೀಜ ಹೊಡೆದವನ ಕಿಸೆಗೆ. ನಂತರ ಇನ್ನೊಬ್ಬನ ಸರದಿ.
ಫೋಟೋ ಕೃಪೆ : beyondthenut
ಇನ್ನೊಂಥರಾ ಆಟ:
ದೊಡ್ಡ ಗೇರು ಬೀಜ ವೃತ್ತದ ಮಧ್ಯೆ ಇಡೋದು. ಗೆರೆ ಮೇಲೆ ನಿಂತು ಗುರಿಯಿಟ್ಟು ಆ ಬೀಜಕ್ಕೆ ಹೊಡೆಯೋದು. ಗುರಿ ತಾಗಿ ಗೇರು ಬೀಜ ವೃತ್ತದಿಂದ ಹೊರ ಬಿದ್ರೆ ಹೊಡೆದವನಿಗೊಂದು ಗೇರು ಬೀಜ. ಗೇರು ಬೀಜದ ಬ್ಯಾಂಕ್ ತುಂಬೋದೇ ಒಂದು ಸ್ಪರ್ಧೆ. ಹೀಗೇ ಏನೋ ಆಟ.
ನನಗೆ ತುಂಬ ನೆನಪಿರೋದು ಗುರಿಯಿಟ್ಟು ಹೊಡೆಯೋ ಆ ‘ಸ್ಪೆಷಲ್’ ಗೇರುಬೀಜ ರೆಡಿ ಮಾಡ್ತಿದ್ದ ರೀತಿ. ‘ಮಾಸ್ಟರ್’ ಗೇರು ಬೀಜ ಭಾರವಾದಷ್ಟೂ ಅದರ ಗುರಿ ನಿಖರವಾಗಿರುತ್ತಿತ್ತು ಅದಕ್ಕೇ ಅದನ್ನ ಭಾರವಾಗಿಸಬೇಕಿತ್ತು. ಆಗ ಸಹಾಯಕ್ಕೆ ಬರ್ತಿದ್ದದ್ದು ಸೀಸ.
ಗೇರು ಬೀಜದ ಮೇಲು ಭಾಗದಲ್ಲಿ ದಬ್ಬಣ ಉಪಯೋಗಿಸಿ ತೂತು ಕೊರೆಯುತ್ತಿದ್ದೆವು. ನಂತರ ನಿಧಾನವಾಗಿ ಬೀಜದ ತಿರುಳನ್ನ ತೆಗೆದು ಅದನ್ನ ಖಾಲಿ ಮಾಡುತ್ತಿದ್ದೆವು. ಬರೇ ಹೊರಭಾಗದ shell ಮಾತ್ರ ಉಳೀತಿತ್ತು. ಮತ್ತೆ ಸೀಸವನ್ನು ಕಾಯಿಸಿ ಮೇಲ್ಭಾಗದ ತೂತಿನೊಳಗೆ ತುಂಬುತ್ತಿದ್ದೆವು. ಬೀಜದ ಖಾಲಿ ಜಾಗದಲ್ಲಿ ಸೀಸ ತುಂಬಿಕೊಂಡು ಬೀಜ ಭಾರವಾಗುತ್ತಿತ್ತು.
ಈ ಸೀಸ ಒಟ್ಟು ಮಾಡತ್ತಿದ್ದುದೂ ತುಂಬ interesting. ಆಗ ಸಿಗರೇಟ್ ಪ್ಯಾಕ್ ಗಳಲ್ಲಿ ತುಂಬ ತೆಳ್ಳಗಿನ ಹೊಳೆಯುವ ಬ್ಯಾಗಡೆಗಳಿರುತ್ತಿದ್ದವು. ಹತ್ತಿಪ್ಪತ್ತು ಬ್ಯಾಗಡೆಗಳನ್ನ ಸೇರಿಸಿ ಒಂದು ಸೌಟಿನಲ್ಲಿ ಕಾಸಿದರೆ ಸ್ವಲ್ಪ ಸೀಸ liquid form ನಲ್ಲಿ ಕುದಿಯುತ್ತಿತ್ತು. ತುಂಬ ಜಾಗ್ರತೆಯಿಂದ ಕಾದ ಸೀಸವನ್ನು ಬೀಜದಲ್ಲಿ ತುಂಬಬೇಕಿತ್ತು. ಬೀಜದೊಳಗೆ ಸೀಸ ತಂಪಾಗಿ ಗಟ್ಟಿಯಾಗುತ್ತಿತ್ತು.
‘ಮಾಸ್ಟರ್ ಗೇರು ಬೀಜ’ ಸಿದ್ಧವಾಗ್ತಿತ್ತು. ಮತ್ತೆ ಆಟ ಶುರು….
- ಕಿರಣ್ ಭಟ್ ಹೊನ್ನಾವರ