ಕಣ್ಣಿನ ಪೋರೆ ತಗೆಸಲು ತೆತ್ತ ಹಣ ಒಂದು ಲಕ್ಷದ ಇಪ್ಪತ್ತು ಸಾವಿರ ರೂಪಾಯಿಗಳು, ಇನ್ಸೂರೆನ್ಸ್ ಇದ್ದ ಕಾರಣ ೮೮,೦೦೦ ಸಾವಿರ ರೂಪಾಯಿ ಆಯಿತು. ಪೆನ್ಷನ್ ಇರುವ ಕಾರಣ ನಾನು ಗೆದ್ದೇ. ಆದರೆ ಈ ದೇಶದ ಬಡವರ ಪಾಡೇನು? ಎನ್ನುವ ಪ್ರಶ್ನೆ ನನ್ನನ್ನು ತುಂಬಾನೇ ಕಾಡಿತು. ಡಾ.ಮೋದಿ ಅಂತಹವರು ಎಲ್ಲಯೂ ಕಾಣುತ್ತಿಲ್ಲ. ಹಿರಿಯ ವಿಜ್ಞಾನಿ ಶಕುಂತಲಾ ಶ್ರೀಧರ ಅವರ ಅನುಭವದ ಲೇಖನ ತಪ್ಪದೆ ಓದಿ…
ಎರಡು ವರ್ಷದಿಂದ ನನ್ನ ದೇಹಕ್ಕೆ ಒಂದೊಂದೇ ರಿಪೇರಿ ಆಗುತ್ತಲೇ ಇದೆ. ಲೇಟೆಸ್ಟ್ ಅಂದರೆ ಎರಡೂ ಕಣ್ಣುಗಳ ಪೋರೆ ತೆಗೆಸಿದ್ದು. ಲೇಸರ್ ಮೂಲಕ ಪೊರೆ ತೆಗೆಸಿದ್ದಕ್ಕೆ ಕೇವಲ ೧೫ ನಿಮಿಷ.ಆದರೆ ನಾನು ಕಾರ್ಡಿಯಾಕ್ ಬೈಪಾಸ್ ಸರ್ಜರಿ, ನ್ಯೂಮೋನಿಯಾ ಮತ್ತು ಕೋವಿಡ್ ಗಳೊಂದಿಗೆ ಹೋರಾಡಿ ಗೆದ್ದು ಬಂದ ಕಾರಣ ಇಡೀ ಪ್ರಕ್ರಿಯೆ, ಆರು ದಿನಗಳು ತೆಗೆದುಕೊಂಡಿತು.
ophthalmology ವಿಭಾಗಕ್ಕೆ ಹೋದಾಗ ಕಣ್ಣಿಗೆ ದ್ರವ ಹಾಕಿ ಅರ್ಧ ಗಂಟೆ ಕೂರಿಸಿ ಲ್ಯಾಬ್ ಟೆಚ್ನಿಷಿಯನ್ ಏನೇನೋ ಕಣ್ಣಿನ ಫೋಟೋಗಳನ್ನ ತೆಗೆದು ಕಣ್ಣಿನ ಡಾಕ್ಟರ್ ಹತ್ತಿರ ಕಳುಹಿದರು. ಅವರು ಪೊರೆ ಎರಡು ಕಣ್ಣಲ್ಲಿಯೂ ಇದೆ. ಲೇಸರ್ ಮೂಲಕ ತೆಗೆಯಬಹುದು. ಅದಕ್ಕೆ ಮೊದಲು ಕಾರ್ಡಿಯೋಲಾಜಿಸ್ಟ್,ನೆಫ್ರಯಾಲೊಜಿಸ್ಟ್, ಡೈಯ ಟಿಸಿಎನ್, ಕ್ಷ-ರೇ, ಮರವಳಿಕೆ ತಜ್ಞ ಇವರೆಲ್ಲರ ಕಡೆಯಿಂದ ಒಂದು ಥರ “ಫಿಟ್ನೆಸ್ ಸರ್ಟಿಫಿಕೇಟ್ ಕಮ್ ನೋ ಒಬ್ಜೆಕ್ಷನ್ ಸರ್ಟಿಫಿಕೇಟ್” ತನ್ನಿ ಅಂದರು. ಇದೆಲ್ಲ ಮಾಡಿಸಲಿಕ್ಕೆ ಮೂರು ದಿನ ಬೇಕಾಯಿತು. ಎಲ್ಲರೂ ಕನಿಷ್ಠ ಎರಡೆರಡು ಟೆಸ್ಟ್ ಮಾಡಿಸಿ, ಚೆನ್ನಾಗಿ ಹೆದರಿಸಿದರು. ನನ್ನ ಶರೀರದ ಅಂಗಾಂಗಗಳೆಲ್ಲ ಕೆಟ್ಟು ಕುಲಗೆಟ್ಟು ಹೋಗಿದೆಯೇನೋ ಅನ್ನಿಸಿಬಿಟ್ಟಿತು. ಇದೆಲ್ಲ ಆದಮೇಲೆ ರೇಟಿನ ಸ್ಪೆಷಲಿಸ್ಟ್ ನೋಡಿ ಅವರ ಅಭಿಪ್ರಾಯ ಬೇಕೆಂದರು..ಅವರೋ ಬ್ಯಾಪ್ಟಿಸ್ಟ್ ಆಸ್ಪತ್ರೆಗೆ ಶನಿವಾರ ಮಾತ್ರ ಅದೂ ಕೇವಲ ಎರಡು ಗಂಟೆ ಬರೋದು. ಅವರು ಎರಡು ಕಣ್ಣನ್ನು ಪರೀಕ್ಷಿಸಿ ಆಪರೇಷನ್ ಮಾಡಿಸಿಕೊಳ್ಳಲು ಹೇಳಿದರು. ಇದೆಲ್ಲ ಆದಮೇಲೆ ಶಸ್ತ್ರಚಿಕಿತ್ಸೆ ಕೇವಲ ಗುರುವಾರ ಮಾತ್ರ ಅಂತ ಗೊತ್ತಾಯಿತು. ಇಷ್ಟೆಲ್ಲಾ ವಾರಗಟ್ಟಲೆ ಬೇರೆ ಬೇರೆ ಡಾಕ್ಟರ್ಗಳನ್ನ ಸಮಾಲೋಚಿಸಿದ ಮೇಲೆ ಪೊರೆ ತೆಗೆಯೋದಕ್ಕೆ ಬೇಕಾಗಿದ್ದು ಕೇವಲ ೧೫ ನಿಮಿಷ.. ಇವೆಲ್ಲ ಟೆಸ್ಟ್ಗಳು ನಾನು ಮಾಡಿಸಿಕೋಬೇಕು ಎಂದು ನನ್ನ ಹೃದಯತಜ್ಞರಿಗೆ ಹೇಳಿದಾಗ ಅವರೆಂಥ ಬಂಗಾರದಂಥ ಮಾತು ಹೇಳಿದರೆಂದರೆ, ಒಂದು ಪೊರೆ ತೆಗೆಯುವುದಕ್ಕೆ ಕೊಂಕಣ ಸುತ್ತಿ ಮೈಲಾರಕ್ಕೆ ಹೋದ ಹಾಗಾಯಿತು. ಪದ್ಮಶ್ರೀ ಡಾ.ಮೋದಿ ಇಂತಹ ಯಾವುದೇ ಸುತ್ತು ಬಳಸು ವಿಧಾನಗಳನ್ನ ಬಳಸದೆ, ಸಾವಿರಾರು ಹಳ್ಳಿಯ ಜನಕ್ಕೆ, ಟೆಂಟ್ಗಳನ್ನ ಹಾಕಿ ಒಂದೇ ದಿನದಲ್ಲಿ ಸುಸೂತ್ರವಾಗಿ ನೂರಾರು ಜನರ ಕಣ್ಣಿನ ಪೊರೆ ತೆಗೆಯುತ್ತಿದ್ದರು ಎಂಬ ಮಾತು.
ಫೋಟೋ ಕೃಪೆ :google
ಸದ್ಯ ಇನ್ನೊಂದು ಸಲ ಎಲ್ಲಾ ಟೆಸ್ಟ್ ಮಾಡಿಸಬೇಕು ಅಂತ ಹೇಳಲಿಲ್ಲ. ಆಪರೇಷನ್ ಆದ ವಾರದ ಮೇಲೆ ಬಂದು ನೋಡಲು ಹೇಳಿದರು. ಆದರೆ ಒಪಿಥೋಮೊಲೊಜಿಸ್ಟ್ ಸಿಗಬೇಕಾದರೆ ಮತ್ತೆ ಹದಿನೈದು ದಿನ ಬೇಕಾಯಿತು. ಒಂದು ಖುಷಿ ಸಂಗತಿ ಅಂದರೆ ಆಪರೇಷನ್ ಆದ ಮೇಲೆ ಎಲ್ಲ ಸ್ಪಷ್ಟವಾಅಗಿ ಕಾಣಿಸೋಕೆ ಶುರು ಆಯಿತು. ವೃತ್ತ ಪತ್ರಿಕೆಗಳ ಸಣ್ಣ ಅಕ್ಷರಗಳನ್ನು ಯಾವ ಕನ್ನಡಕದ ಸಹಾಯವೂ ಇಲ್ಲದೆ ಸರಾಗವಾಗಿ ಓದೋಕ್ಕೆ ಸಾಧ್ಯವಾಯಿತು. ಆದರೆ ಅದೊಂದು ಮರೀಚಿಕೆ. ಕೆಲವೇ ದಿನಗಳಲ್ಲಿ ಓದೋಕ್ಕೆ ಕನ್ನಡಕ ಬೇಕಾಯಿತು. ಆದರೆ ಈಗ ಹಳೆ ಕನ್ನಡಕ ಉಪಯೋಗಕ್ಕೆ ಬರಲಿಲ್ಲ. ಡಾಕ್ಟರ್ ಮತೊಮ್ಮೆ ತಿಂಗಳಾದನಂತರ ಬರಲಿಕ್ಕೆ ಹೇಳಿದರು. ಹೋದಾಗ ಹೇಳಿದ ಮಾತು,ಈಗ ಡಯಾಬೆಟೆಸ್ ಇರುವ ಕಾರಣ ಕಣ್ಣಲ್ಲಿ ಸ್ವಲ್ಪ ಫ್ಲೂಯಿಡ್ ಇದೆ. ಭಯ ಪಡೋದು ಏನೂ ಬೇಡ. ಅದನ್ನು ತೆಗೆಯಬಹುದು. ಯಾವುದಕ್ಕೂಯೂ ರೇಟಿನ ಸ್ಪೆಸಿಲಿಸ್ಟ್ ಒಂದು ಸಲ ನೋಡಿಬಿಡಿ ಅನ್ನೋ ಸಲಹೆ ಬಂತು. ಕಣ್ಣಿನ ಪುರಾಣ ಟಿವಿಯ ಧಾರಾವಾಹಿಯಂತೆ ಮುಂದುವರೀತಾನೆ ಇತ್ತು. ಈ ಕಡೆ ನೋಡಿದರೆ ರಾಶಿ ರಾಶಿ ಓದಿ ಬರೆಯುವ ಕೆಲಸ.
ಫೋಟೋ ಕೃಪೆ :google
ನನ್ನ ದುರಾದೃಷ್ಟಕ್ಕೆ ರೇಟಿನ ಸ್ಪೆಷಲಿಸ್ಟ್ ಸಿಗಬೇಕಾದರೆ ಒಂದು ತಿಂಗಳು ಕಾಯಬೇಕಾಯಿತು. ಅವರೋ ನಮ್ಮನ್ನು ಮಾತಾಡೋಕೆ ಬಿಡಲ್ಲ. ಎರಡು ನಿಮಿಷ ಕಣ್ಣು ಪರೀಕ್ಷಿಸಿ ಮತ್ತದೇ ಡೈಯುಗನೊಸಿಸ್, ಸ್ವಲ್ಪ ಫ್ಲೂಯಿಡ್ ಇದೆ. ಯೋಚನೆ ಮಾಡೋ ಅಗತ್ಯ ಇಲ್ಲ. ನೀವು ಹೊಸ ಕನ್ನಡಕ ತಗೋಬಹುದು. ಎರಡು ತಿಂಗಳಾದಮೇಲೆ ಬಂದು ನೋಡಿ ಅಂದರು. ಸದ್ಯ, ಇನ್ನಾದರೂ ಓದಿ ಬರೆಯಬಹುದು ಅಂತ ಭಾರಿ ಖುಷಿ ಆಯಿತು. ಆದರೆ ಪಾಪಿ ಸಮುದ್ರಕ್ಕೆ ಹೋದರೂ ಮೊಳಕಾಲುದ್ದ ನೀರೇ. ಹೊಸ ಕನ್ನಡಕ ಕೊಡಬೇಕೆಂದರೆ ಒಂದು ವಾರ ಬೇಕು ಅಂತ ಗೊತ್ತಾಯಿತು, ಬೇರೆ ದಾರಿನೇ ಇರಲಿಲ್ಲ. ಅಂತೂ ಇಂತೂ ಹೊಸ ಕನ್ನಡಕ ಎರಡು ದಿನದ ಹಿಂದೆ ಕೈಗೆ ಸಿಕ್ಕಿತು, ಅದೂ ಅಡ್ಜಸ್ಟ್ ಆಗಬೇಕಾದರೆ ಸ್ವಲ್ಪ ದಿನ ಬೇಕು ಅನ್ನೋ ವಾರ್ನಿಂಗ್ ಜೊತೆ. ಕೊನೆಗೂ ಓದೋದು ಸರಾಗ, ಬರೆಯುವುದು ಇನ್ನೂ ಸುಲಭ. ನನ್ನ ಒಂದೆರಡು ವರ್ಷಗಳ ವನವಾಸ ಮುಗಿಯಿತು ಅಂತ ಕಾಣುತ್ತೆ. ಇದಕ್ಕೆ ನಾನು ತೆತ್ತ ಬೆಲೆ ಸುಮಾರು ಒಂದು ಲಕ್ಷದ ಇಪ್ಪತ್ತು ಸಾವಿರ, ಕನ್ನಡಕವೂ ಸೇರಿ. ಇನ್ಶೂರೆನ್ಸ್ ಇದ್ದ ಕಾರಣ ೮೮,೦೦೦ ಸಾವಿರ ವಾಪಸ್ಸು ಬಂತು. ಪೆನ್ಷನ್ ಸಾಕಾಗುವಷ್ಟು ಇರುವ ಕಾರಣ ನಾನು ಗೆದ್ದೇ. ಆದರೆ ಈ ದೇಶದ ಬಡವರ ಪಾಡೇನು? ಡಾ.ಮೋದಿ ಅಂತಹವರು ಎಲ್ಲಯೂ ಕಾಣುತ್ತಿಲ್ಲ.
ಬಾಲಂಗೋಚಿ: ನನ್ನ ನಾದಿನಿ ಮಿಂಟೋ ಅಸ್ಪ್ರತ್ತೆಯಲ್ಲಿ ಇದೇ ಅಪೆರೇಷನ್ ಮಾಡಿಸಿಕೊಂಡಿದ್ದಾಳೆ. ಖರ್ಚು ತೀರಾ ಕಡಿಮೆ. ಆದರೆ ಆಪರೇಷನ್ ಅಂತ ಹೇಳಿಕೊಳ್ಳುವಂಥ ಪರಿಣಾಮ ಕೊಟ್ಟಿಲ್ಲ. ಅದಕ್ಕೆ ಆಕೆಯ ಡಯಾಬಿಟಿಕ್ ಕಾರಣ ಇರಬಹುದು. ಜಯದೇವ ಆಸ್ಪತ್ರೆಯಂಥ ಒಂದು ಕಣ್ಣಿನ ಆಸ್ಪತ್ರೆ ತುರ್ತಾಗಿ ಬೇಕಾಗಿದೆ. ಏನಂತೀರಾ?
- ಶಕುಂತಲಾ ಶ್ರೀಧರ