‘ಚಿಕ್ಕದಾದ ಬಾಗಿಲು’ ಕತೆ – ಮೇಗರವಳ್ಳಿ ರಮೇಶ್



ವಿದೇಶದಲ್ಲಿ ಓದಿದ ಮಾತ್ರಕ್ಕೆ ಹುಟ್ಟಿ,ಆಡಿ, ಬೆಳೆದ ಮನೆಯ ಬಾಗಿಲು ಚಿಕ್ಕದಾಯಿತಾ? ಒಂದು ಸಣ್ಣಕತೆ ಮನಸ್ಸಿನ ಬಾಗಿಲನ್ನು ತೆರೆಯುತ್ತದೆ. ಕವಿ, ಲೇಖಕರಾದ ಮೇಗರವಳ್ಳಿ ರಮೇಶ್ ಅವರು ಬರೆದ ‘ಚಿಕ್ಕ ಬಾಗಿಲು’ ಎಲ್ಲರ ಗಮನಸೆಳೆಯುತ್ತದೆ. ಮುಂದೆ ಓದಿ…

ಅವರು ನಮ್ಮೂರಿನ ದೇವಸ್ಥಾನದ #ಅರ್ಚಕರು. ಸುತ್ತಮುತ್ತಲ ಊರುಗಳಲ್ಲಿ ಪೌರೋಹಿತ್ಯವನ್ನು ಮಾಡುತ್ತಿದ್ದರು. ಅವರು ತಾವೇ ಕಟ್ಟಿಸಿದ ಮನೆಯಲ್ಲಿ ಹೆಂಡತಿ ಮತ್ತು ಮಗನೊಂದಿಗೆ ವಾಸವಾಗಿದ್ದರು. ಮಗಳಿಗೆ ಮದುವೆ ಮಾಡಿ ಕೊಟ್ಟಿದ್ದರು. ಅಳಿಯ ಹತ್ತಿರದ ಹಳ್ಳಿಯಲ್ಲಿ ಕೃಷಿಕನಾಗಿದ್ದ. ಅವರಿಗ ಇದ್ದ ಆಸ್ತಿ ಎಂದರೆ ಅರ್ಧ ಎಕರೆ ಅಡಿಕೆ ತೋಟ, ಒಂದು ಎಕರೆ ಗದ್ದೆ ಮತ್ತು ವಾಸಿಸುತ್ತಿರುವ ಮನೆ. ಮಗ ಓದಿನಲ್ಲಿ ತುಂಬಾ ಜಾಣ. ಎಲ್ಲ ತರಗತಿಗಳಲ್ಲೂ ಪ್ರಥಮ ಶ್ರೇಣಿಯಲ್ಲೇ ಉತ್ತೀರ್ಣನಾಗುತ್ತಿದ್ದ, ಅವನು ಎಸ್ ಎಸ್ ಎಲ್ ಸಿ ಯಲ್ಲಿ ರಾಜ್ಯಕ್ಕೇ ಮೊದಲಿಗನಾಗಿ ತೇರ್ಗಡೆ ಹೊಂದಿದ. ಹತ್ತಿರದ ತಾಲೂಕು ಕೇಂದ್ರದ ಜೂನಿಯರ್ ಕಾಲೇಜಿನಲ್ಲಿ ಓದಿ ಪೀಯೂಸಿ ಯಲ್ಲೂ ತನ್ನ ಪ್ರಥಮಸ್ಥಾನವನ್ನು ಉಳಿಸಿಕೊಂಡುತೇರ್ಗಡೆಯಾದ. ಮುಂದೆ ಸಿಇಟಿ ನಲ್ಲೂ ಮೊದಲ ರಾಂಕ್ ಪಡೆದ ಅವನಿಗೆ ಸರ್ಕಾರಿ ಕೊಟಾದಲ್ಲಿ ಅವನು ಇಷ್ಟಪಟ್ಟ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ಗೆ ಸೀಟ್ ಸಿಕ್ಕಿತು.

ಫೋಟೋ ಕೃಪೆ : newsclick

ಅವನ ತಂದೆಗೆ ಮಗ ಹತ್ತಿರದ ಜಿಲ್ಲಾ ಕೇಂದ್ರದ ಕಾಲೇಜಿನಲ್ಲಿ ಓದಲಿ ಎಂಬ ಆಸೆ ಇತ್ತು. ಅದಕ್ಕೆ ಅವರ ಆರ್ಥಿಕ ಸ್ಥಿತಿಯೂ ಕಾರಣವಾಗಿತ್ತು. ಆದರೆ ಅವನು ತಾನು ಬೆಂಗ್ಳೂರಿನ ಪ್ರತಿಷ್ಠಿತ ಕಾಲೇಜಿನಲ್ಲೇ ಓದ ಬೇಕೆಂದು ಹಟ ಹಿಡಿದಿದ್ದರಿಂದ ಅನಿವಾರ್ಯವಾಗಿ ತಮ್ಮ ಒಂದು ಎಕರೆ ಗದ್ದೆಯನ್ನು ಮಾರಿ ಬೆಂಗಳೂರಿನ ಕಾಲೇಜಿಗೆ ಸೇರಿಸಿ ಹಾಸ್ಟೆಲ್ ವ್ಯವಸ್ಥೆ ಮಾಡಿದರು. ಬೆಂಗಳೂರಿನಲ್ಲಿ ಪಿಡಬ್ಲ್ಯುಡಿ ನಲ್ಲಿ ಇಂಜಿನಿಯರ್ ಆಗಿರುವ ತಮ್ಮ ಸಂಬಂಧಿಕರ ಮನೆಗೆ ಮಗನೊಂದಿಗೆ ಹೋಗಿ ಮಗನ ಪರಿಚಯ ಮಾಡಿಕೊಟ್ಟರು. ಅವರ ಮನೆಯಲ್ಲೇ ಊಟ ಮಾಡಿ ಮಗನನ್ನು ಹಾಸ್ಟೆಲ್ನಲ್ಲಿ ಬಿಟ್ಟು ಊರಿಗೆ ಹಿಂದಿರುಗಿದರು.

ಇಂಜಿನೀರಿಂಗ್ ನ ಪ್ರತೀ ಸೆಮಿಸ್ಟರ್ ನಲ್ಲೂ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗುತ್ತಿದ್ದ. ಅವನ ಬುದ್ಧಿ ಮತ್ತೆಯನ್ನು ಅವನ ಸಂಬಂಧಿಕ ಇಂಜಿನಿಯರರು ಗಮನಿಸಿದ್ದರು. ತಮಗಿರುವ ಒಬ್ಬಳೇ ಮಗಳನ್ನು ಅವನಿಗೆ ಕೊಟ್ಟು ಮದುವೆ ಮಾಡಿ ಮನೆ ಅಳಿಯನನ್ನಾಗಿಸಿಕೊಳ್ಳುವ ಬಯಕೆ ಅವರದ್ದು. ಅವನಿಗೆ ಇಂಜಿನಿಯರಿಂಗ್ ಮುಗಿಯುವದರೊಳಗೇ ಪ್ರತಿಷ್ಠಿತ MNC ಸಾಫ್ಟ್ ವೇರ್ ಕಂಪನಿಯಲ್ಲಿ ಕ್ಯಾಂಪಸ್ ಸೆಲೆಕ್ಷನ್ ಆಯಿತು. ಅಪ್ಪ ಅಮ್ಮನಿಗೆ ಫೋನ್ ಮಾಡಿ ತಿಳಿಸಿದಾಗ ತುಂಬಾ ಖುಷಿ ಪಟ್ಟರು. ತಮ್ಮ ಕಷ್ಟಗಳೆಲ್ಲ ಕೊನೆಯಾಗುವುದೆಂಬ ಸಂತೋಷದಲ್ಲಿ ದೇವರಿಗೆ ವಿಶೇಷ ಅರ್ಚನೆ ಮಾಡಿದರು. ಸಂಬಂಧಿಕ ಇಂಜಿನಿಯರ್ ಅವನಿಗೆ ನೀನು ಈಗಲೇ ಏಕೆ ಕೆಲಸಕ್ಕೆ ಸೇರುತ್ತಿ? ಅಮೇರಿಕಾದಲ್ಲಿ ಓದಿ ಎಮ್.ಎಸ್ ಮಾಡು ಎಂಬ ಸಲಹೆ ಮುಂದಿಟ್ಟರು. ಆದರೆ ಅವನು ತಮ್ಮ ಆರ್ಥಿಕ ಸ್ಥಿತಿಗೆ ಅದು ಸಾಧ್ಯವಿಲ್ಲವೆಂದು ಹೇಳಿದಾಗ ಅವರು ನೀನೇಕೆ ಚಿಂತಿಸುತ್ತಿ, ನಾನು ನಿನ್ನನ್ನು ಸ್ಪಾನ್ಸಾರ್ ಮಾಡುತ್ತೇನೆ. ನೀನು ಮುಂದೆ ಓದು ಎಂದು ಹುರುದುಂಬಿಸಿದರು. ಅವನಿಗೆ ಬಹಳ ಸಂತೋಷವಾಯಿತು. ಅಪ್ಪ ಅಮ್ಮನಿಗೆ ತಿಳಿಸಿದಾಗ, ಅಪ್ಪ ಕೆಲಸಕ್ಕೆ ಸೇರಿದ್ದರೆ ಅನುಕೂಲವಾಗುತ್ತಿತ್ತು ಎಂದುಕೊಂಡರು. ಆದರೆ ಹೇಳಲಿಲ್ಲ, ಆದರೂ ತಮ್ಮ ಮಗ ಎತ್ತರಕ್ಕೆ ಬೆಳೆಯುತ್ತಿರುವುದು ಸಂತೋಷ ತಂದಿತು. ಅಮ್ಮನಿಗೆ ಮಾತ್ರ ಸ್ವರ್ಗಮೂರೇ ಗೇಣು ಉಳಿಯಿತು, ಅಷ್ಟು ಸಂತೋಷವಾಯಿತು.



#ಅಮೇರಿಕಾದಲ್ಲಿ ಎಮ್ ಎಸ್ ಮುಗಿಸಿ ಹಿಂದಿರುಗಿದವನಿಗೆ ಬೆಂಗಳೂರಿನಲ್ಲೇ ದೊಡ್ಡದೊಂದು ಕಂಪೆನಿಯಲ್ಲಿ ಭಾರಿ ಸಂಬಳದ ಕೆಲಸ ಸಿಕ್ಕಿತು. ಇಂಜಿನಿಯರ್ ತಮ್ಮ ಮಗಳನ್ನುಕೊಟ್ಟು ವೈಭವದ ಮದುವೆ ಮಾಡಿದರು. ಮದುವೆಗೆ ಬಂದಿದ್ದ ಅವನ ಅಪ್ಪ- ಅಮ್ಮ ಊರಿಗೆ ಹೊರಡುವಾಗ ಮಗ ಸೊಸೆಗೆ ” ಮನೇಗೆ ಬನ್ನಿ ಆರ್ತಿ ಮಾಡ ಬೇಕು” ಎಂದು ಕರೆದರು. ಮಗ ತಲೆಯಾಡಿಸಿದ. ಊರಿಗೆ ಹಿಂದಿರುಗಿದ ಅವರಿಗೆ ಸಡಗರವೋ ಸಡಗರ. ಮಗನಿಗಾಗಿ ಆ ತಾಯಿ ಅವನಿಗಿಷ್ಟವಾದ ತಿನಿಸುಗಳನ್ನೆಲ್ಲಾ ತಯಾರಿಸಿದರು. ವಾರದ ನಂತರ ಮಗ- ಸೊಸೆ ದೊಡ್ದ ಕಾರಿನಲ್ಲಿ ಬಂದಿಳಿದರು. ಅಪ್ಪ ಅಮ್ಮನ ಸಂತೊಷಕ್ಕೆ ಪಾರವೇ ಇಲ್ಲ. ಓಡಿ ಬಂದು ಮಗನನ್ನು ಅಪ್ಪಿಕೊಂಡರು. ಬನ್ನಿ… ಬನ್ನಿ… ಎಂದು ಅರ್ತಿಯಿಂದ ಮಗ ಸೊಸೆಯರನ್ನು ಕರೆದು ಕೊಂಡು ಮನೆ ಬಾಗಿಲಿಗೆ ಬಂದರು.

ಮಗ ಬಾಗಿಲಲ್ಲೇ ನಿಂತು ಬಿಟ್ಟ. ಅವನಿಗೆ ತಾನಿರುವ ಎತ್ತರಕ್ಕೆ ಅಪ್ಪ ಕಟ್ಟಿದ ಆ ಮನೆಯ ಬಾಗಿಲು ತುಂಬಾ ಚಿಕ್ಕದಾಗಿದೆ ಎನ್ನಿಸಿತು.


  • ಮೇಗರವಳ್ಳಿ ರಮೇಶ್  (ನಿವೃತ್ತ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಧಿಕಾರಿ, ಕವಿಗಳು, ಲೇಖಕರು)ಬೆಂಗಳೂರು

5 1 vote
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW