ಕಠಿಣ ಪರಿಶ್ರಮದಿಂದ ಅರ್ಹತಾ ಪರೀಕ್ಷೆ ಬರೆದು, ಕರ್ನಾಟಕ ರಾಜ್ಯದಲ್ಲಿರುವ ಪಶುವೈದ್ಯಕೀಯ ಪರಿಷತ್ತಿನಿಂದ ಮಾನ್ಯತೆ ಪಡೆದ ಪಶುವೈದ್ಯಕೀಯ ಮಹಾವಿದ್ಯಾಲಯಗಳಲ್ಲಿನ ಕಡಿಮೆ ಇರುವ ಸೀಟುಗಳನ್ನು ಎಲ್ಲರ ಜೊತೆ ಸೆಣಸಿ ಪ್ರತಿಭೆಯಿಂದ ಸೀಟು ಗಿಟ್ಟಿಸಿಕೊಂಡು ಐದು ವರ್ಷಗಳ ಕಾಲ ಸತತ ಪರಿಶ್ರಮದ ನಂತರ ಬಿ.ವಿ.ಎಸ್ಸಿ ಮತ್ತು ಎ ಹೆಚ್ ಪದವಿಯನ್ನು ಪಡೆದು, ಕಾನೂನಿನ ಮಾನ್ಯತೆ ಪಡೆದ ‘ಡಾಕ್ಟರ್’ ಎಂದು ಕರೆಸಿಕೊಳ್ಳುವುದು, ಹೀಗಿರುವಾಗ ಜಾನುವಾರಿಗೆ ಇಂಜೆಕ್ಷನ್ ಹಾಕುವವರನ್ನಲ್ಲಾ “ಡಾಕ್ಟರ್” ಎಂದು ಕರೆಯುವುದರಿಂದ ಬಹಳ ಪಶುವೈದ್ಯರಿಗೆ ಒಂದಲ್ಲಾ ಒಂದು ರೀತಿಯಲ್ಲಿ ಅಸಮಾಧಾನವಿದೆ. ತಪ್ಪದೆ ಮುಂದೆ ಓದಿ …
ಮೊನ್ನೆ ನಮ್ಮ ವೃತ್ತಿಪರ ಫೇಸ್ಬುಕ್ ಪುಟದಲ್ಲಿ ಪಶುವೈದ್ಯರನ್ನು ಜಾನುವಾರು ಸೇವೆಯ ಪ್ರಸಕ್ತ ಸ್ಥಿತಿಗತಿಯ ಸುಧಾರಣೆಗೆ ಮಾಹಿತಿಯನ್ನು ಪಡೆಯುವುದಕ್ಕೆ ಒಂದು ವಿನಂತಿ ಹಾಕಿದ್ದೆ. ಅದಕ್ಕೆ ಪ್ರತಿಕ್ರಿಯೆ ನೀಡುತ್ತಾ, ಅನೇಕರು ಜಾನುವಾರುಗಳ ಚಿಕಿತ್ಸೆಯಲ್ಲಿ ಸೂಕ್ತ ಪದವಿ ಇಲ್ಲದಿದ್ದರೂ ಸಹ “ಡಾಕ್ಟರ್” ಎಂದು ಕರೆಸಿಕೊಳ್ಳುತ್ತಿದ್ದು ಜನಸಾಮಾನ್ಯರಿಗೆ ಪದವಿ ಪಡೆದ ವೈದ್ಯರಿಗೂ ಇವರಿಗೂ ಇರುವ ವ್ಯತ್ಯಾಸವನ್ನು ತಿಳಿಸಬೇಕೆಂಬ ಕೋರಿಕೆಯಿತ್ತು.
ಮುಗ್ದ ರೈತರೇ ಜಾಸ್ತಿ ಇರುವುದರಿಂದ ಜಾನುವಾರಿಗೆ ಇಂಜೆಕ್ಷನ್ ಹಾಕುವವರನ್ನಲ್ಲಾ “ಡಾಕ್ಟರ್” ಎಂದು ಕರೆಯುವುದರಿಂದ ಬಹಳ ಪಶುವೈದ್ಯರಿಗೆ ಒಂದಲ್ಲಾ ಒಂದು ರೀತಿಯಲ್ಲಿ ಅಸಮಾಧಾನವಿದೆ. ಇದು ಸಹಜ ಸಹ. ಅಲ್ಲದೇ ಅವರ ಜೊತೆಯೇ “ಪೈಪೋಟಿ” ನಡೆಸಿ “ಡಾಕ್ಟರ್” ಎಂದು ಕರೆಸಿಕೊಳ್ಳುವ ಅನಿವಾರ್ಯತೆ ಸೃಷ್ಟಿಯಾಗಿರುವುದು ಅನೇಕ ವೃತ್ತಿಪರ ಪಶುವೈದ್ಯರ ಅಂತರಾಳದ ನೋವು. ಅಲ್ಲದೇ ನಿಯಮಗಳ ಪ್ರಕಾರ ಲಸಿಕೆ ಹಾಕುವುದು ಮತ್ತು ಪ್ರಥಮ ಚಿಕಿತ್ಸೆಯನ್ನು ಹೊರತು ಪಡಿಸಿದರೆ ಜೀವನಿರೋಧಕಗಳು, ನೋವು ನಿವಾರಕಗಳು, ಹಾರ್ಮೋನುಗಳು ಮತ್ತು ಔಷಧಿಯೆಂದು ಕರೆಸಿಕೊಳ್ಳುವ ಯಾವುದೇ ವಸ್ತುವನ್ನು ಪಶುಗಳಲ್ಲಿ ಬಳಸಲು ಮಾನ್ಯತೆ ಪಡೆದ ಪಶುವೈದ್ಯಕೀಯ ಪದವಿ ಪಡೆದಿರಬೇಕು.
ವೈದ್ಯಕೀಯ ಕ್ಷೇತ್ರದಲ್ಲಿ ವೈದ್ಯರನ್ನು ಹೊರತುಪಡಿಸಿ ನರ್ಸುಗಳು, ಸಹಾಯಕರು, ಫಾರ್ಮಾಸಿಸ್ಟ್, ಶಸ್ತ್ರಚಿಕಿತ್ಸಾ ಸಹಾಯಕರು, ಕ್ಷಕಿರಣ ತಂತ್ರಜ್ಞರು ಇತ್ಯಾದಿ ವಿವಿಧ ವೃಂದಗಳಂತೆ, ಪಶುವೈದ್ಯ ಕ್ಷೇತ್ರದಲ್ಲಿ ಸಹ ಪಶುವೈದ್ಯರನ್ನು ಹೊರತುಪಡಿಸಿ ಪಶುವೈದ್ಯಕೀಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವವರು, ಕೃತಕ ಗರ್ಭಧಾರಣಾ ಕಾರ್ಯಕರ್ತರು, ವಿವಿಧ ನೌಕರರುಗಳು, ಮೈತ್ರಿ ಕಾರ್ಯಕರ್ತರು, ಪಶುಸಖಿಯರು ಇತ್ಯಾದಿ ಅನೇಕ ವರ್ಗಗಳಿವೆ. ಇದು ಬಹಳ ಜನರಿಗೆ ಗೊತ್ತಿರದ ಸರಳ ಮಾಹಿತಿ. ಬಹುತೇಕ ಜನ ಲಸಿಕಾ ಕಾರ್ಯಕ್ರಮ, ಕೃತಕ ಗರ್ಭದಾರಣೆ ಇತ್ಯಾದಿ ಪಶುವಿಗೆ ಸಂಬಂಧಿಸಿದ ವಿವಿಧ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುತ್ತಾರೆ. ಆದರೆ ಎಲ್ಲರನ್ನೂ “ಡಾಕ್ಟರ್”ಎಂದು ಮುಗ್ಧತೆಯಿಂದ ಕರೆಯುತ್ತಾ ಹೋದಲ್ಲಿ ನಿಜವಾಗಿ ಪದವಿ ಪಡೆದವರಿಗೆ ಬೇಸರವಾಗದೇ ಹೋದೀತೆ? ಇದೇ ಈಗ ಆಗುತ್ತಿರುವುದು.
ಭಾರತೀಯ ಪಶುವೈದ್ಯಕೀಯ ಪರಿಷತ್ ಇದರಡಿಯ ಕರ್ನಾಟಕ ಪಶುವೈದ್ಯಕೀಯ ಪರಿಷತ್‍ನಿಂದ ಮಾನ್ಯತೆ ಪಡೆದು, ಪದವಿ ಹೊಂದಿ ಪಶುವೈದ್ಯ ವೃತ್ತಿಯನ್ನು ನಡೆಸಲು ಪ್ರಮಾಣ ಪಡೆದ ಬಿ.ವಿ.ಎಸ್ಸಿ ಡಿಗ್ರಿ ಪಡೆದವರು ಮಾತ್ರ “ಡಾಕ್ಟರ್” ಎಂದು ಕರೆಸಿಕೊಳ್ಳಲು ಯೋಗ್ಯರು. ಆದರೆ ಪಶುವೈದ್ಯಕೀಯ ಕ್ಷೇತ್ರದಲ್ಲಿ ಪ್ರಾಣಿಗಳಿಗೆ ಚುಚ್ಚುಮದ್ದು ನೀಡುವ ಎಲ್ಲರೂ ಸಹ ‘ಡಾಕ್ಟರ್’ ಗಳಲ್ಲ ಎನ್ನುವುದನ್ನು ದೊಡ್ಡಮಟ್ಟದಲ್ಲಿ ಜನರಿಗೆ ಗೊತ್ತುಮಾಡುವ ಕೆಲಸ ಆ ರೀತಿ ಕರೆಸಿಕೊಳ್ಳುವವರಿಂದಲೇ ಆಗಬೇಕು. ಪಶುಸೇವೆ ಮಾಡುವ ಅನೇಕರನ್ನು ರೈತರು ಮುಗ್ಧತೆಯಿಂದ “ಡಾಕ್ಟ್ರೇ” ಎಂದು ಕರೆದಾಗ ನಯವಾಗಿಯೇ ನಮಗೆ ಈ ರೀತಿ ಕರೆಸಿಕೊಳ್ಳುವ ಶೈಕ್ಷಣಿಕ ಅರ್ಹತೆಯಿಲ್ಲ. ನಮ್ಮ ತಂದೆ ತಾಯಿ ಇಟ್ಟ ಹೆಸರನ್ನೇ ಕರೆಯಿರಿ ಎಂದು ವಿನಯದಿಂದ ಹೇಳುವ ಕೆಲವೇ ಕೆಲವು ವಿನಯವಂತರನ್ನು ನನ್ನ ೩೫ ವರ್ಷದ ಪಶುವೈದ್ಯ ವೃತ್ತಿಜೀವನದಲ್ಲಿ ನೋಡಿದ್ದೇನೆ. ಕರೆಯಲಿ ಬಿಡಿ, ನಿಮಗೇನು ನಷ್ಟ, ನಾವೂ ಪದವಿ ಪಡೆದವರಷ್ಟೇ ಕಷ್ಟ ಪಟ್ಟು ಕೆಲಸ ಮಾಡುವುದಿಲ್ಲವೇ? ಎಂದು ಹೇಳುವುದು ಅಹಂಕಾರದ ಪ್ರತೀಕ.
ಹಾಗಿದ್ದರೆ ಈ ತಾಕಲಾಟ ಪ್ರಾರಂಭವಾಗಿದ್ದೆಲ್ಲಿ? ಡಿವಿಜಿಯವರ ಮಂಕುತಿಮ್ಮನ ಕಗ್ಗದ……ಅನ್ನದಾತುರಕಿಂತ ಚಿನ್ನದಾತುರ ತೀಕ್ಷ್ಣ, ಚಿನ್ನದಾತುರಕಿಂತ ಹೆಣ್ಣು ಗಂಡೊಲವು, ಮನ್ನಣೆಯ ದಾಹವು ಎಲ್ಲಕುಂ ತೀಕ್ಷ್ಣತಮ, ತಿನ್ನುವುದು ಆತ್ಮವನೆ ಮಂಕುತಿಮ್ಮ ಎನ್ನುವ ಕಗ್ಗವನ್ನು ಈ ಸಂದರ್ಭದಲ್ಲಿ ನೆನೆಯುವುದು ಒಳ್ಳೆಯದು.
ಅಂದರೆ ಮೂರು ಹೊತ್ತು ಊಟಕ್ಕೆ ಸಿಕ್ಕರು ಸಾಕು ಅನ್ನುವವರಿಗೆ ಅನ್ನ ದೊರಕಿದ ನಂತರ ಮನೆ, ಮಠ, ಒಡವೆ, ಚಿನ್ನ ಬೇಕು ಅನ್ನಿಸಲು ಪ್ರಾರಂಭವಾಗುತ್ತದೆ. ಇದೆಲ್ಲ ದೊರಕಿದವರಿಗೆ ಬಾಳಿನಲ್ಲಿ ಸುಂದರ ಸಂಗಾತಿ ಬೇಕೆನಿಸುತ್ತದೆ. ಇವೆಲ್ಲವೂ ಇದ್ದರೆ ನನ್ನನ್ನು ಜನ ಗುರುತಿಸಲಿ ಎಂಬ “ಮನ್ನಣೆಯ ದಾಹ” ಪೀಡಿಸಲು ಪ್ರಾರಂಭವಾಗುತ್ತದೆ. ಈ ದಾಹ ಎಷ್ಟು ತೀಕ್ಷ್ಣವೆಂದರೆ ನಮ್ಮನ್ನೇ ತಿಂದು ಹಾಕುತ್ತದೆ. ನಮ್ಮ ವಿವೇಕವನ್ನೇ ಬದಿಗೊತ್ತುತ್ತದೆ ಎಂಬುದು ಡಿವಿಜಿಯವರ ಮಾತು ಬಹಳ ನಿಜ. ಇದನ್ನು ಆಂಗ್ಲ ಭಾಷೆಯಲ್ಲಿ “ಐಡೆಂಟಿಸಿ ಕ್ರೈಸಿಸ್” ಎನ್ನಬಹುದು ಅಥವಾ ಇದೊಂದು ಸಾಮಾಜಿಕ ಭದ್ರತೆಯ ಒಂದು ಮುಖವೂ ಇರಬಹುದು. ಇದು ಈಗ ಹುಟ್ಟಿದ ಚಿಕ್ಕ ಮಗುವಿನಿಂದ ಹಿಡಿದು ನಾಳೆಯೋ ನಾಡಿದ್ದೋ ಸಾಯಲಿರುವ ವಯೋವೃದ್ಧರವರೆಗೂ ಒಂದಲ್ಲ ಒಂದು ಪ್ರಮಾಣದಲ್ಲಿ ಇದ್ದೇ ಇರುತ್ತದೆ. ಇದರ ಪ್ರಮಾಣ ಶೂನ್ಯವಾಗಿದ್ದರೆ ಅರ್ಹತೆಯಿದ್ದರೆ ಈ ಪ್ರಮಾಣ ಮನ್ನಣೆಯ ದಾಹ ಅಂದರೆ ಜನರೆಲ್ಲ ತನ್ನನ್ನು ಗುರುತಿಸಬೇಕೆಂಬ “ಡಾಕ್ಟರ್” ಜೀವನವನ್ನು ಬಯಸಿ ಮತ್ತು ಅದಕ್ಕೆ ಬಲಿಯಾಗುವುದು ಮತ್ತು ಈ ವಿಷಯ ತಾಕಲಾಟಕ್ಕೆ ಎಡೆ ಮಾಡುತ್ತಿರುವುದು ಸತ್ಯ. ಕೆಲವೊಮ್ಮೆ ಮನ್ನಣೆಯ ದಾಹ ಎನ್ನುವುದಕ್ಕಿಂತಲೂ ಅನಾಯಾಸವಾಗಿ ಜಾಸ್ತಿ ಕಷ್ಟ ಪಡದೆ ಸಿಗುವ “ಗೌರವ ಸೂಚಕ” ಪದವನ್ನು ಅವರು ತಿರಸ್ಕರಿಸುತ್ತಿಲ್ಲ ಅಷ್ಟೇ. ಅವರೇ ಸಾರ್ವಜನಿಕರಿಗೆ ಮಾಹಿತಿ ಕೊಡಲಿ ಎಂದು ನಿರೀಕ್ಷಿಸುವುದು ಸಹ ಕಾರ್ಯಸಾಧುವಲ್ಲವೆಂಬುದು ಹಲವು ಹಿರಿಯ ಮಿತ್ರರ ಅನುಭವದ ಮಾತು.
ಕಠಿಣ ಪರಿಶ್ರಮದಿಂದ ಅರ್ಹತಾ ಪರೀಕ್ಷೆ ಬರೆದು, ಕರ್ನಾಟಕ ರಾಜ್ಯದಲ್ಲಿರುವ ಪಶುವೈದ್ಯಕೀಯ ಪರಿಷತ್ತಿನಿಂದ ಮಾನ್ಯತೆ ಪಡೆದ ಪಶುವೈದ್ಯಕೀಯ ಮಹಾವಿದ್ಯಾಲಯಗಳಲ್ಲಿನ ಕಡಿಮೆ ಇರುವ ಸೀಟುಗಳನ್ನು ಎಲ್ಲರ ಜೊತೆ ಸೆಣಸಿ ಪ್ರತಿಭೆಯಿಂದ ಸೀಟು ಗಿಟ್ಟಿಸಿಕೊಂಡು ಐದು ವರ್ಷಗಳ ಕಾಲ ಸತತ ಪರಿಶ್ರಮದ ನಂತರ ಬಿ.ವಿ.ಎಸ್ಸಿ ಮತ್ತು ಎ ಹೆಚ್ ಪದವಿಯನ್ನು ಪಡೆದು, ಕಾನೂನಿನ ಮಾನ್ಯತೆ ಪಡೆದ ‘ಡಾಕ್ಟರ್’ ಎಂದು ಕರೆಸಿಕೊಳ್ಳುವುದು ಪಶುವೈದ್ಯರ ಹಕ್ಕು ಮತ್ತು ಅವರ ಸ್ವಾಭಿಮಾನದ ಸಂಕೇತ. ಜನರು ಈ ಬಗ್ಗೆ ಗೊತ್ತಿಲ್ಲದೆ ಅವರ ಜಾನುವಾರಿಗೆ ಚುಚ್ಚುಮದ್ದು ನೀಡಿದವರೆನ್ನಲ್ಲಾ “ಡಾಕ್ಟರ್” ಎಂದು ಕರೆದಾಗ ಅವರಿಗೆ ಅಸಹನೆ ಸಹಜ.
ಗೋಪಾಲಕರೂ ಸಹ ಪಶುಚಿಕಿತ್ಸೆಯಲ್ಲಿ ಒಂದಲ್ಲ ಒಂದು ರೀತಿಯಲ್ಲಿ ತೊಡಗಿರುವವರು, ಕೆ.ಎಂ.ಎಫ್. ನಲ್ಲಿ ಕೃತಕ ಗರ್ಭಧಾರಣೆ ಮಾಡುವವರು, ಎಸ್.ಎಸ್.ಎಲ್.ಸಿ. ನಂತರ ಡಿಪ್ಲೊಮಾ ಪದವೀದರರು,ನಾಟಿ ಪಶುಚಿಕಿತ್ಸೆ ಮಾಡುವವರು ಮತ್ತು ಇದೇ ರೀತಿಯ ಅನೇಕ ಜನರನ್ನು ‘ಡಾಕ್ಟರ್’ ಎಂದು ಕರೆಯಬಾರದು, ಹಾಗೂ ಅವರ ಹೆಸರನ್ನೇ ಗೌರವದಿಂದ ಕರೆಯಬೇಕು ಎಂದು ಪ್ರಜ್ಞೆ ಮೂಲಕ ಅರಿತುಕೊಳ್ಳುವುದು ಒಳ್ಳೆಯದು. ಗೌರವಸೂಚಕ ಶಬ್ಧದಿಂದ ಕರೆಸಿಕೊಳ್ಳಲು ಅರ್ಹನಿಲ್ಲದಿದ್ದರೂ ಸಹ ಹಾಗೇ ಕರೆಸಿಕೊಂಡು ಒಳಗೊಳಗ ಖುಷಿ ಹೊಂದುವುದು ಸಹ ಆತ್ಮವಂಚನೆ.
ಹಳ್ಳಿಗಳಲ್ಲಿ ಪಶು ಸಂಬಂಧಿ ಕೆಲಸ ನಿರ್ವಹಿಸುತ್ತಿರುವ ಅನೇಕರು ಜನರು ಅವರನ್ನು ಮುಗ್ಧತೆಯಿಂದ “ಡಾಕ್ಟರ್” ಎಂದು ಕರೆದರೂ “ಈ ರೀತಿ ಕರೆಯಬೇಡಿ”, ನಮಗೆ ಆ ಬಗ್ಗೆ ಅವಶ್ಯಕ ಶೈಕ್ಷಣಿಕ ಅರ್ಹತೆಯಿಲ್ಲ” ಎಂದು ನಯವಾಗಿ ಹೇಳುವ ಬದಲು, “ನಾವು ಪಶುವೈದ್ಯರಿಗಿಂತ ಜಾಸ್ತಿ “ರಾತ್ರಿ ಹಗಲು” ಕೆಲಸ ಮಾಡುತ್ತೇವೆ. ಇನ್ನು “ಡಾಕ್ಟರ್” ಅಂತ ಕರೆಸಿಕೊಳ್ಳೋದು ತಪ್ಪೇ ಎಂದು ಹೇಳುವುದು ಸಮರ್ಥನೀಯವಲ್ಲದ ವಿತಂಡವಾದ. ಅನಾಯಾಸವಾಗಿ ಸಿಗುವ ಗೌರವಸೂಚಕ ಪದವನ್ನು ಅವರು ತಿರಸ್ಕರಿಸಿ ಸಾಮಾಜಿಕ ಜವಾಬ್ಧಾರಿ ನಿರ್ವಹಿಸುವುದು ಅವಶ್ಯ. ಅಲ್ಲದೇ ಇದು ಮುಗ್ಧ ರೈತರಿಗೆ ಮಾಡುವ ಮೋಸದ ತರ.
ಜೊತೆಗೆ “ಡಾಕ್ಟರ್” ಎಂದು ಕರೆಸಿಕೊಳ್ಳುವವರಿಗೂ ಸಹ ಒಂದಿಷ್ಟು ಸಂಹಿತೆ ಅಗತ್ಯವೆಂಬದು ಸಾರ್ವಜನಿಕ ಅಭಪ್ರಾಯ ಮತ್ತು ಅವರ ನಿರೀಕ್ಷೆ. ಇದು ಹಳ್ಳಿಯ ಸಾಮಾನ್ಯ ಜನರ ಕಲ್ಪನೆ ಮತ್ತು ನಿರೀಕ್ಷೆ ಸಹಾ. ವೈದ್ಯರ ವೃತ್ತಿಗೆ ಅಗತ್ಯವಾದ ಬಿಳಿ ಏಪ್ರಾನ್ ಧರಿಸಬೇಕು. ಚೊಕ್ಕಟ ಭಟ್ಟೆ ಧರಿಸಬೇಕು. ಸ್ಟೆಥೋಸ್ಕೋಪ್ ಮತ್ತು ಥರ್ಮಾಮೀಟರ್ ಯಾವಾಗಲೂ ಇಟ್ಟುಕೊಂಡು ಶೂ ಧರಿಸಿರಬೇಕು. ಅಹಂಕಾರಕ್ಕಲ್ಲದಿದ್ದರೂ ಸಾಮಾನ್ಯ ಜನರಿಂದ ಚಿಕ್ಕದು ಎನ್ನಬಹುದಾದ ಸಾಮಾಜಿಕ ಅಂತರ ಕಾದುಕೊಳ್ಳಬೇಕು. ಆಸ್ಪತ್ರೆಗೆ ಬರುವ ಪ್ರತಿ ಪ್ರಾಣಿಯ ಸಂಪೂರ್ಣ ವೃತ್ತಾಂತವನ್ನು ತಾಳ್ಮೆಯಿಂದ ಸಂಗ್ರಹಿಸಿ ಅದರ ಸಂಪೂರ್ಣ ತಪಾಸಣೆ ನಡೆಸಿ, ಹೃದಯ ಮಿಡಿತ, ನಾಡಿ ಗಮನಿಸಿ, ದುಗ್ದ ಗ್ರಂಥಿಗಳ ಪರೀಕ್ಷೆ ಮತ್ತು ಉದರ ಚಲನೆ ಪರೀಕ್ಷೆ ನಡೆಸಬೇಕು. ಸಾಧ್ಯವಿದ್ದರೆ ದೊಡ್ಡ ಹೊಟ್ಟೆಯಲ್ಲಿನ ದ್ರವ ತೆಗೆದು ಸೂಕ್ಷ್ಮದರ್ಶಕದಡಿ ಅದರಲ್ಲಿನ ಸೂಕ್ಷ್ಮಾಣುಗಳ ಚಲನವಲನೆಯನ್ನು ಪರೀಕ್ಷಿಸಿ ರೈತನಿಗೆ ತೋರಿಸಬೇಕು. ಕೃತಕ ಗರ್ಭಧಾರಣೆ ಮಾಡುವ ಮೊದಲು ವೀರ್ಯಾಣುಗಳ ಚಲನವಲನವನ್ನು ನಿಯಮಿತವಾಗಿ ಸೂಕ್ಷ್ಮದರ್ಶಕ ಯಂತ್ರದಲ್ಲಿ ನೋಡಿ ರೈತರಿಗೆ ತೋರಿಸುವ ಪರಿಪಾಠ ಬೆಳೆಸಿಕೊಳ್ಳಬೇಕು. ಪೂರ್ಣ ಮರಣೋತ್ತರ ಪರೀಕ್ಷೆಯನ್ನು ಕಡ್ಡಾಯವಾಗಿ ಮಾಡಬೇಕು. ಶಸ್ತ್ರಚಿಕಿತ್ಸೆಯು ಫಲಪ್ರಧವಾಗಲಿ ಅಥವಾ ಆಗದಿರಲಿ ಪ್ರಯತ್ನ ಮಾಡಲೇಬೇಕು ಅಥವಾ ಅಂತಹ ತಜ್ಞರ ಬಳಿ ಅವಶ್ಯ ಚಿಕಿತ್ಸೆ ಕೊಡಿಸಬೇಕು. ವೈದ್ಯರು ವೈದ್ಯರಂತೆ ಕಾಣಬೇಕು. ವೈದ್ಯರಂತೆ ಕರ್ತವ್ಯ ನಿರ್ವಹಿಸಬೇಕು. ಪ್ರಯೋಗಾಲಗಳ ಲಭ್ಯತೆಯನ್ನು ಉಪಯೋಗಿಸಿಕೊಂಡು ರೋಗನಿದಾನವನ್ನು ಕರಾರುವಾಕ್ಕಾಗಿ ಮಾಡಬೇಕು. ಪ್ರಯೋಗಾಲಯಗಳೇ ಇಲ್ಲದಿದ್ದಾಗ ಇದು ಕಷ್ಟವಾಗಿತ್ತು. ಈಗ ಪ್ರತಿ ತಾಲೂಕು ಮಟ್ಟದಲ್ಲಿಯೂ ಸಹ ಮಾನವ ಪ್ರಯೋಗಾಲಯಗಳು ಪಶುಗಳ ರಕ್ತ ತಪಾಸಣೆಯನ್ನು ಮಾಡುತ್ತಿವೆ. ಜಿಲ್ಲಾ ಮಟ್ಟದಲ್ಲಿ ಪಶುವೈದ್ಯಕೀಯ ಪ್ರಯೋಗಾಲಯಗಳಿವೆ. ಹೆಚ್ಚು ಹೆಚ್ಚು ಶಸ್ತ್ರಚಿಕಿತ್ಸೆಗಳನ್ನು ಮಾಡಬೇಕು. ಅದರಿಂದ ಆರ್ಥಿಕ ಲಾಭವಿಲ್ಲವೆಂದು ನಿರ್ಲಕ್ಷಿಸಬಾರದು.ಆಗ ಸಹಜವಾಗಿಯೇ ನಾವು ಏನನ್ನೂ ಹೇಳದೇ ಇದ್ದರೂ ವೈದ್ಯರಾರು ಎಂದು ಸಾರ್ವಜನಿಕರಿಗೆ ಗೊತ್ತಾಗುತ್ತದೆ.ಇದಕ್ಕೆ ಸಮಯ, ತಾಳ್ಮೆ ಇಲ್ಲ ಎಂದರೆ ಡಾಕ್ಟರ್ ಎಂದು ಕರೆಸಿಕೊಳ್ಳುವುದು ಸಹ ಕಷ್ಟ. ಅಹವಾಲುಗಳನ್ನು ಹೇಳಿಕೊಳ್ಳಲು ವೃತ್ತಿಪರ ಸಂಘ ಸಂಸ್ಥೆಗಳಿವೆ. ಹೇಳಬೇಕಾಗಿರುವುದನ್ನು ಸಂಘಗಳಿಂದಲೇ ಹೇಳಿಸುವ ವಿಚಾರವಂತರ ದಂಡೇ ಇದೆ. ವಾಟ್ಸಪ್, ಟೆಲಿಗ್ರಾಂ, ಫೇಸ್ಬುಕ್, ಲಿಂಕ್ಡೆನ್, ಯುಟ್ಯೂಬ್ ಇತ್ಯಾದಿ ವಿಚಾರ ವಿನಿಮಯ ಹಂಚಿಕೊಳ್ಳಲು ಅವಶ್ಯವಾದ ಆಧುನಿಕ ವೇದಿಕೆ ಇದೆ.
ಇದೊಂತರ ಬಿಗ್ ಬಜಾರ್ ಅಥವಾ ಮೋರ್ ಅಥವಾ ಮೆಗಾಮಾರ್ಟುಗಳು ಚಿಕ್ಕ ದಿನಸಿ ಅಂಗಡಿಗಳ ಜೊತೆ ಪೈಪೋಟಿಗೆ ಬಿದ್ದ ಹಾಗೆ. ಉತ್ತಮ ಗುಣ ಮಟ್ಟದ ರೋಗ ತಪಾಸಣೆ ಮತ್ತು ಚಿಕಿತ್ಸೆಯಿದ್ದರೆ ತತ್ಕ್ಷಣದಲ್ಲಿಯಲ್ಲದಿದ್ದರೂ ದೀರ್ಘಕಾಲದಲ್ಲಿ ಜನರಿಗೆ ಗೊತ್ತಾಗಿಯೇ ಆಗುತ್ತದೆ. ಸದ್ಯದ ಜನರ ನಿರೀಕ್ಷೆ ದೂರವಾಣಿ ಮಾಡಿದ ಕೂಡಲೇ ಬಂದು “ಚಿಕಿತ್ಸೆ” ನೀಡುವ ಜನ ಬೇಕು. ಅದು ತಜ್ಞತೆ ಹೊಂದಿದ ಪಶುವೈದ್ಯನಾದರೂ ಸರಿ ಅಥವಾ ಯಾರಾದರೂ ಸರಿ. ಡಿಗ್ರೀ ಕಟ್ಟಿಕೊಂಡು ಅವರಿಗೇನೂ ಆಗಬೇಕಿಲ್ಲ. ಇವರ ಜೊತೆ ಪೈಪೋಟಿ ಅನಿವಾರ್ಯ ತಜ್ಞ ಪಶುವೈದ್ಯರಿಗೆ ಆಗಿಬಿಟ್ಟಿದೆ. ಅಷ್ಟಕ್ಕೂ ಸಾಕ್ಷರತೆಯ ಪ್ರಮಾಣ ಕಡಿಮೆಯಿದ್ದಾಗ ಇದನ್ನೆಲ್ಲಾ ಜನರಿಂದ ನಿರೀಕ್ಷಿಸಲು ಸಾಧ್ಯವೇ? ಈ ಆಧುನಿಕ ಯುಗದಲ್ಲಿ ಪಶುವಿಗೆ ಹುಶಾರಿಲ್ಲದಿದ್ದರೆ ತಜ್ಞರನ್ನು ಕರೆಸಿ ಚಿಕಿತ್ಸೆ ಕೊಡಿಸಬೇಕು ಎನ್ನುವುದು ಗೋಪಾಲಕರಲ್ಲಿ ಇರಬೇಕಾದ ಒಂದು ಸಾಮಾಜಿಕ ಪ್ರಜ್ಞೆ. ಮನುಷ್ಯರ ಆರೋಗ್ಯಕ್ಕಾಗಿ ಹೇಗೆ ರಾಜಿ ಮಾಡಿಕೊಳ್ಳದೇ “ತಜ್ಞ”ರನ್ನು ಹುಡುಕಿಕೊಂಡು ಹೋಗುತ್ತಾರೆಯೋ ಹಾಗೆಯೇ ಸಾಕಿದ ಪ್ರಾಣಿಗೂ ಸಹ ತಜ್ಞರಿಂದ ಸೂಕ್ತ ಮತ್ತು ಉತ್ತಮ ಚಿಕಿತ್ಸೆ ಪಡೆಯುವ ಹಕ್ಕು ಇದೆ ಎನ್ನುವುದನ್ನು ಪಶುಪಾಲಕರು
ತಿಳಿದುಕೊಳ್ಳುವುದು ಒಳ್ಳೆಯದು.
ದನಕ್ಕೆ ಚುಚ್ಚುಮದ್ದು ಕೊಡುವವರೆಲ್ಲಾ ವೈದ್ಯರಲ್ಲ ಎಂದು ಹೇಳಬೇಕಾದ ಅಗತ್ಯತೆ, ಅನಿವಾರ್ಯತೆ ಜಾಸ್ತಿ ಇದೆ. ಏಕೆಂದರೆ ಉತ್ತಮ ಗುಣ ಮಟ್ಟದ ದುಬಾರಿ ಆಕಳುಗಳು, ಚರ್ಮಗಂಟು ರೋಗದಂತ ಹೊಸ ಹೊಸ ಕಾಯಿಲೆಗಳು, ಕೆಚ್ಚಲು ಬಾವಿನಂತ ಜ್ವಲಂತ ಕಾಯಿಲೆಗಳು, ಗರ್ಭಧರಿಸದ ಸಮಸ್ಯೆ ಇವೆಲ್ಲವುಗಳನ್ನು ಗ್ರಾಮೀಣ ಭಾಗದ ರೈತರು ಹೊಂದಿದ್ದು ಅವರಿಗೆ ತಜ್ಞ ಪಶುವೈದ್ಯರ ಅವಶ್ಯಕತೆ ಜಾಸ್ತಿ ಇದೆ. ಉತ್ತಮ ಗುಣ ಮಟ್ಟದ ಚಿಕಿತ್ಸೆ ಪಡೆಯುವುದು ಗೋವುಗಳ ಹಕ್ಕು ಎಂಬುದು ಸಹ ನಿಜ. ಹಿಂದೆಂದಿಗಿಂತ ಈಗ ಪ್ರತಿ ತಾಲ್ಲೂಕಿನಲ್ಲಿಯೂ ಹೆಚ್ಚಾನು ಹೆಚ್ಚು ಪಶುವೈದ್ಯಕೀಯ ಸಂಸ್ಥೆಗಳಿದ್ದು ಇವುಗಳಲ್ಲಿ ಪದವಿ ಪಡೆದ ಪಶುವೈದ್ಯರ ಸಂಖ್ಯೆಯು ಹೆಚ್ಚಾಗುವ ತುರ್ತು ಅವಶ್ಯಕತೆ ಇದೆ. ಇವರಿಗೆ ಪೂರಕವಾಗಿ ಇವರಿಗೆ ಸಹಕರಿಸುವ ಪೂರಕ ಸಿಬ್ಬಂದಿಯೂ ಸಹ ಇರಬೇಕು. ಪ್ರತಿಯೊಂದು ಸಂಸ್ಥೆಗೂ ಸಹ ಪದವಿ ಪಡೆದ ಪಶು ವೈದ್ಯರಿದ್ದರೆ ಪಶುಗಳಿಗೆ ಉತ್ತಮ ಚಿಕಿತ್ಸೆ ತಲುಪಿ ಎಲ್ಲಾ ಆಶಯಗಳು ಈಡೇರಿಯಾವು ಎಂಬುದು ಭರವಸೆ.
- ಡಾ.ಎನ್.ಬಿ.ಶ್ರೀಧರ – ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು, ಪಶುವೈದ್ಯಕೀಯ ಔಷಧಶಾಸ್ತ್ರ ಮತ್ತು ವಿಷಶಾಸ್ತ್ರ ವಿಭಾಗ, ಪಶುವೈದ್ಯಕೀಯ ಮಹಾವಿದ್ಯಾಲಯ, ಶಿವಮೊಗ್ಗ