ಬೆಳಕಿನ ರಹಸ್ಯಗಳನ್ನು ಭೇದಿಸಿ ವೈಜ್ಞಾನಿಕ ಇತಿಹಾಸದಲ್ಲಿ ಅಳಿಸಲಾಗದ ಛಾಪು ಮೂಡಿಸಿದ ಭೌತಶಾಸ್ತ್ರದ ಪ್ರವರ್ತಕರು, ನೊಬೆಲ್ ಪ್ರಶಸ್ತಿ ವಿಜೇತರಾದ “ಭಾರತ ರತ್ನ ಸರ್ ಸಿ. ವಿ. ರಾಮನ್” ರವರ ಜನುಮದಿನದಂದು ನನ್ನ ಗೌರವಪೂರ್ವಕ ನುಡಿ ನಮನಗಳು.ತಪ್ಪದೆ ಮುಂದೆ ಓದಿ…
ಬೆಳಕಿನ ರಹಸ್ಯಕ್ಕೆ ಬೆಳಕು ತೋರಿದ ಮಹಾನ್ ಬೆಳಕು :
1921, ಸೆಪ್ಟೆಂಬರ್ ತಿಂಗಳು ಇಂಗ್ಲೆಂಡಿನಲ್ಲಿ ವೈಜ್ಞಾನಿಕ ಸಮ್ಮೇಳನವೊಂದರಲ್ಲಿ ಭಾಗವಹಿಸಿ ಮರಳಿ ತವರಿಗೆ ರಾಮನ್ ಪ್ರಯಾಣಿಸುತ್ತಿರುವ ಸಮಯ ಹಡಗು ಮೆಡಿಟರೇನಿಯನ್ ಸಮುದ್ರದಲ್ಲಿ ಸಾಗುತ್ತಿದ್ದಾಗ ಸಮುದ್ರದ ಅಚ್ಚ ನೀಲಿ ಬಣ್ಣವನ್ನು ಕಂಡ ರಾಮನ್ ಬೆರಗಾದರು. ಅರೇ ಇದೇನಿದು – ಎಂಥ ನೀಲಿ – ಎಂಥ ಚೆಲುವು ! ಈ ಬಣ್ಣವು ಸಮುದ್ರಕ್ಕೆ ಬಂದದ್ದು ಹೇಗೆ ಎಂಬ ಪ್ರಶ್ನೆ ಅವರನ್ನು ಕಾಡತೊಡಗಿತು.
ಹಾಗೆ ನೋಡಿದರೆ ಶುಭ್ರ ಬಾನಿನ ಬಣ್ಣವೂ ನೀಲಿಯೇ ಬಾನಿನ ನೀಲಿಗೆ ಅದಾಗಲೇ ಪರಿಪೂರ್ಣ ವಿವರಣೆಯನ್ನು ಬ್ರಿಟೀಷ್ ಭೌತ ವಿಜ್ಞಾನಿ ಲಾರ್ಡ್ ರ್ಯಾಲೆ ಕೊಟ್ಟಿದ್ದರು. ಬಾನಿಗೆ ನೀಲಿಯನ್ನು ವಿವರಿಸಿದ ರ್ಯಾಲೆ, ಅದೇಕೋ ಏನೋ,ಸಾಗರದ ನೀಲಿಯನ್ನು ವಿವರಿಸುವಲ್ಲಿ ಎಡವಿದ್ದರು. ಬಾನಿನ ನೀಲಿ ಸಾಗರದ ನೀರಿನಿಂದ ಪ್ರತಿಫಲಿಸಲ್ಪಟ್ಟು ಸಾಗರ ನೀಲವಾಗಿ ಕಾಣಿಸುತ್ತದೆಂದು ವಿವರಣೆ ನೀಡಿ ಸುಮ್ಮನಾಗಿದ್ದರು. ಆದರೆ ರಾಮನ್ ತನ್ನೆದುರು ಹರಡಿ ಚೆಲ್ಲಿದ ನೀಲ ನೀರಿನ ರಾಶಿಯನ್ನು ನೋಡುತ್ತಿದ್ದಂತೆ ನೀರಿನ ಅಣುಗಳಿಂದ ನೀಲಿ ಬಣ್ಣದ ಬೆಳಕು ಅತ್ಯಧಿಕ ಪ್ರಮಾಣದಲ್ಲಿ ಚದರಿಸಲ್ಪಡುವುದೇ ಕಾರಣವೆಂದು ಅರಿತು ಹಡಗಿನಲ್ಲಿಯೇ ಸಮುದ್ರದ ನೀರನ್ನು ಬಾಟಲಿಗಳಲ್ಲಿ ಸಂಗ್ರಹಿಸಿ ಕಡಲಿನ ನೀಲಿ ಬಣ್ಣದ ಕಾರಣವನ್ನು ಅರಿಯಲು ಪ್ರಯೋಗ ಮಾಡುತ್ತ ಹಡಗಿನ ತುಂಬಾ ಪ್ರಯಾಣದ ಸಮಯದಲೆಲ್ಲಾ ಓಡಾಡಿದ್ದರು. ಏಳು ವರ್ಷಗಳ ಸತತ ಪರಿಶ್ರಮದ ಬಳಿಕ, 1928 ಫೆಬ್ರವರಿ 28 ಬೆಳಗ್ಗೆ ಹತ್ತರ ಹೊತ್ತಿಗೆ ತಮ್ಮ ಪ್ರಯೋಗದಲ್ಲಿ ರಾಮನ್ ಯಶಸ್ಸು ಕಂಡರು. ದ್ರವ ಮಾಧ್ಯಮದಲ್ಲಿ ಅಣುಗಳು ಬೆಳಕಿನ ಅಲೆಗಳನ್ನು ಚದರಿಸುವ ಮೂಲಕ ಬೆಳಕಿನ ರೋಹಿತ ರೇಖೆಯ ಅಲೆಯುದ್ದ ವ್ಯತ್ಯಾಸವಾಗಿ ಹೊಸ ರೇಖೆಗಳು ಪ್ರಕಟವಾಗುವ ವಿನೂತನ ವಿದ್ಯಮಾನವನ್ನು ಅಂದು ರೋಹಿತ ದರ್ಶಕದಲ್ಲಿ ಗಮನಿಸಿದರು ಮತ್ತು ಆ ರೋಹಿತದ ಛಾಯಾ ಚಿತ್ರವನ್ನು ಪಡೆಯುವಲ್ಲಿ ಯಶಸ್ವಿಯಾದರು.
ಅಂದು ಪ್ರತಿಪಾದಿಸಿದ ಆ ವಿದ್ಯಮಾನ ಮುಂದೆ ರಾಮನ್ ಪರಿಣಾಮ (Raman Effect) ಎಂಬ ಹೆಸರಿನಲ್ಲಿ ಸುಪ್ರಸಿದ್ಧವಾಗಿ ಹಲವಾರು ಸಂಶೋಧನೆಗಳಿಗೆ ಮುನ್ನುಡಿಯಾಯಿತು. ಲೇಸರ್ ಕಿರಣಗಳ ಆವಿಷ್ಕಾರವಾದ ನಂತರ ರಾಮನ್ ಪರಿಣಾಮದ ಉಪಯುಕ್ತತೆ ಇನ್ನಷ್ಟು ವಿಸ್ತರಿಸಿತು. ಲೇಸರ್, ಇನ್ಫರಾರೆಡ್, ಆಲ್ಟ್ರಾವಯೋಲೆಟ್ ಮತ್ತು ಎಕ್ಸ್ರರೇ ರಾಮನ್ ಸ್ಪೆಕ್ಟ್ರೋಸ್ಕೋಪಿ ಇಂದು ಮುಂಚೂಣಿಯಲ್ಲಿರುವ ಸಂಶೋಧನಾ ಕ್ಷೇತ್ರಗಳು. ಭೌತ, ಜೀವ, ರಸಾಯನ ಮತ್ತು ಖಗೋಳ ವಿಜ್ಞಾನ ಹಾಗೂ ನ್ಯಾನೋ ತಂತ್ರಜ್ಞಾನದ ಹಲವು ವಿಭಾಗಗಳಲ್ಲಿ ರಾಮನ್ ಪರಿಣಾಮ ತನ್ನ ಪರಿಣಾಮ ಬೀರುತ್ತಿದೆ. ಈ ಆಧಾರದಲ್ಲಿ ಕ್ಯಾನ್ಸರ್, ಡಯಾಬಿಟೀಸ್, ಮಲೇರಿಯಾ, ಆಸ್ತಮಾದ ಪತ್ತೆ ಮತ್ತು ಚಿಕಿತ್ಸೆಯಲ್ಲಿ ಇಂದು ರಾಮನ್ ಸ್ಪಕ್ಟ್ರೋಸ್ಕೋಪಿ ಮಹತ್ತರ ಪಾತ್ರ ವಹಿಸುತ್ತಿದೆ.
ರಾಷ್ಟ್ರೀಯ ವಿಜ್ಞಾನ ದಿನಕ್ಕೆ ಕಾರಣೀಭೂತರು :
ಏನಿದು ವಿಜ್ಞಾನ ದಿನ?: “ವಿಜ್ಞಾನ ದಿನ”ದ ಮಹತ್ವವೇನು? (Science Day). ಭಾರತೀಯ ಭೌತಶಾಸ್ತ್ರಜ್ಞ ಸರ್ ಸಿ ವಿ ರಾಮನ್ (ಚಂದ್ರಶೇಖರ ವೆಂಕಟ ರಾಮನ್) ಅವರು ಮತ್ತು ಅವರಂಥಹ ಇತರ ದೊಡ್ಡ ವಿಜ್ಞಾನಿಗಳು ನಮ್ಮ ದೇಶಕ್ಕೆ ನೀಡಿದ ಕೊಡುಗೆಗಳನ್ನು ನೆನಪಿಸಿಕೊಳ್ಳಲು, ಗೌರವಿಸಲು ಇರುವ ದಿನ. 1928ರಲ್ಲಿ ಇದೇ ದಿನ, ಸಿವಿ ರಾಮನ್ ಅವರು ಸ್ಪೆಕ್ಟ್ರೋಸ್ಕೋಪಿ ಕ್ಷೇತ್ರದಲ್ಲಿ ಒಂದು ಪ್ರಮುಖ ಆವಿಷ್ಕಾರವನ್ನು ಮಾಡಿದರು. ನಂತರ ಅದನ್ನು ‘ರಾಮನ್ ಎಫೆಕ್ಟ್’ (Raman Effect) ಎಂದು ಹೆಸರಿಸಲಾಯಿತು. .
‘ರಾಮನ್ ಪರಿಣಾಮ’ ಸಂಶೋಧನೆಯ ವಿವರಗಳು ಪ್ರಕಟವಾದ ಆ ಚಾರಿತ್ರಿಕ ದಿನದ ನೆನಪಿನಲ್ಲಿ ಪ್ರತಿ ವರ್ಷ ಫೆಬ್ರವರಿ ೨೮ನೇ ದಿನಾಂಕವನ್ನು ರಾಷ್ಟ್ರೀಯ ವಿಜ್ಞಾನ ದಿನವನ್ನಾಗಿ ಆಚರಿಸಲಾಗುತ್ತದೆ. ವಿಜ್ಞಾನ ಹಾಗೂ ನಮ್ಮ ಜೀವನದಲ್ಲಿ ಅದರ ಮಹತ್ವದ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸುವುದು ರಾಷ್ಟ್ರೀಯ ವಿಜ್ಞಾನ ದಿನ ಆಚರಣೆಯ ಉದ್ದೇಶವಾಗಿದೆ.
ಹಲವು ಮೊದಲುಗಳ ಸರದಾರರು :
* ವಿಜ್ಞಾನ ಹಾಗೂ ತಂತ್ರಜ್ಞಾನದಲ್ಲಿ (Science and Technology) ನೊಬೆಲ್ ಪಡೆದ ಮೊದಲ ಭಾರತೀಯ, ಮೊದಲ ಏಷ್ಯನ್ ಹಾಗೂ ಮೊದಲ ಶ್ವೇತವರ್ಣೀಯರಲ್ಲದ ಹೆಮ್ಮೆಯ ಭಾರತೀಯ ವ್ಯಕ್ತಿ!
* ದಾಖಲೆ ಅಂಕಗಳೊಂದಿಗೆ 11ನೇ ವಯಸ್ಸಿನಲ್ಲೇ ಹತ್ತನೇ ತರಗತಿ ಪಾಸು ಮಾಡಿದ ಅಪ್ರತಿಮ ಪ್ರತಿಭಾವಂತ. ಹತ್ತೊಂಬತ್ತರ ಹರೆಯದಲ್ಲಿ ಭೌತಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದ ಪ್ರತಿಭಾನ್ವಿತರು.
* ನಮ್ಮ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಮೊಟ್ಟ ಮೊದಲ ನಿರ್ದೇಶಕರಾಗಿ, ಭೌತಶಾಸ್ತ್ರ ವಿಭಾಗದ ಮುಖ್ಯಸ್ಥರೂ ಆಗಿದ್ದರು.
* ಸಂಗೀತದಲ್ಲಿ (Music) ಭಾರೀ ಆಸಕ್ತಿಹೊಂದಿದ್ದ ಈ ಸಂಗೀತ ಪ್ರೇಮಿ ಮೃದಂಗ ಮತ್ತು ತಬಲಾವನ್ನು ಚೆನ್ನಾಗಿ ನುಡಿಸಬಲ್ಲವರಾಗಿದ್ದರು.
* ಭಾರತ ಸ್ವಾತಂತ್ರ್ಯಗೊಂಡ ಬಳಿಕ ದೇಶದ ಮೊತ್ತಮೊದಲ ರಾಷ್ಟ್ರೀಯ ಪ್ರೊಫೆಸರ್ ಆದ ಹೆಗ್ಗಳಿಕೆ ಇವರದು.
ತಮಿಳುನಾಡಿನ ತಿರುಚಿನಾಪಳ್ಳಿಯ ತಿರುವಣ್ನೈಕಾವಲ್ ನಲ್ಲಿ ಹುಟ್ಟಿದರೂ ಕನ್ನಡನಾಡಿನಲ್ಲಿ ನೆಲೆಸಿದ್ದ ಚಂದ್ರಶೇಖರ ವೆಂಕಟರಾಮನ್ ಕರ್ನಾಟಕವನ್ನು ವಿಶ್ವವಿಜ್ಞಾನ ಭೂಪಟದಲ್ಲಿ ಚಿತ್ರಿಸಿದ ಅಪ್ರತಿಮ ಕರ್ನಾಟಕ ಪ್ರೇಮಿ. ಬೆಂಗಳೂರಿನಲ್ಲೇ 1928ರಲ್ಲಿ ಫೆಬ್ರವರಿ 28ರಲ್ಲಿ ಕೆಎಸ್ ಕೃಷ್ಣನ್ ಜತೆ ತಾವು ಆವಿಷ್ಕಾರ ಮಾಡಿದ ಸಂಗತಿಯನ್ನು ಮಾರ್ಚ್ 16ರಂದು ದಕ್ಷಿಣ ಭಾರತ ವಿಜ್ಞಾನ ವೇದಿಕೆ ಹಾಗೂ ಬೆಂಗಳೂರು ಸೆಂಟ್ರಲ್ ಕಾಲೇಜಿನ ವಿಜ್ಞಾನ ವೇದಿಕೆಯಲ್ಲಿ ರಾಮನ್ ಹಂಚಿಕೊಂಡರು. ಅವರ ಅಂತಿಮದಿನಗಳು ಕೂಡಾ ಇಲ್ಲೆ ಕಳೆದು ಇಲ್ಲೇ ವಿಧಿವಶರಾದರು.
ಸರ್. ಸಿ.ವಿ. ರಾಮನ್ ಜನಿಸಿದ್ದು 1888ರ ನವೆಂಬರ್ 7ರಂದು 82 ವರ್ಷಗಳ ತುಂಬು ಜೀವನ ನಡೆಸಿದ ರಾಮನ್ ಕೊನೆಯುಸಿರೆಳೆದಿದ್ದೂ 1970ರ ನವೆಂಬರ್ 21ರಂದು. ಭೌತವಿಜ್ಞಾನಕ್ಕೆ ಅಭೂತಪೂರ್ವ ಕಾಣಿಕೆ ಇತ್ತ ಇವರ ಹುಟ್ಟು – ಸಾವುಗಳೆರಡು ನವೆಂಬರ್‌ನಲ್ಲಿಯೇ ಎಂಬುದು ಮತ್ತೊಂದು ವಿಶೇಷ.
ಶಬ್ದ, ಬೆಳಕು, ಸ್ವರ, ನಾದಗಳಿಗೆ ವರ್ಣಮಯ ಬೆಳಕು ಚೆಲ್ಲಿದ ಧೀಮಂತ ಸಂಶೋಧಕರಾದ ಇವರು ನಮಗೆ ನೀಡಿದ ಕಾಣಿಕೆ ಅಭೂತಪೂರ್ವ. ಭಾರತದಲ್ಲಿ ಆಧುನಿಕ ವಿಜ್ಞಾನದ ಪ್ರವರ್ತಕರಾದ ಇವರ ವಿಜ್ಞಾನದ ಬೆಳವಣಿಗೆಯು ಯುವ ವಿಜ್ಞಾನಿಗಳಿಗೆ ಎಂದೆಂದಿಗೂ ಸದಾ ಸ್ಫೂರ್ತಿದಾಯಕ.
- ಸೌಮ್ಯ ಸನತ್