ಇತ್ತೀಚೆಗೆ ಹೆಣ್ಣು ಮಕ್ಕಳು ಶರಪಂಜರ ಕಲ್ಪನಾ ರೀತಿ ವರ್ತಿಸಿ ತಮ್ಮ ಸುಖಿ ಕುಟುಂಬಗಳನ್ನು ತಾವೇ ನಾಶಮಾಡಿಕೊಳ್ಳಲು ಮುಖ್ಯ ಕಾರಣವೇನು? ತಮ್ಮ ಮಾನಸಿಕ ವರ್ತನೆಯ ಮೇಲೆ ತಮ್ಮ ಹತೋಟಿಯನ್ನ ಕಳೆದುಕೊಂಡಿರುತ್ತಾರೆ. ಹೆಂಡತಿಯರಿಂದ ಪೀಡನೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದ್ದು ಇದರ ಕುರಿತು ವಿಜ್ಞಾನಿಯಾದ ಪ್ರಸನ್ನ ಸಂತೇಕಡೂರು ಅವರ ಬರೆದ ಈ ಲೇಖನವನ್ನು ತಪ್ಪದೆ ಮುಂದೆ ಓದಿ…
ಜಗತ್ಪ್ರಸಿದ್ದ ಲೇಖಕ ಲಿಯೋ ಟಾಲ್ಸ್ಟಾಯ್ ತನ್ನ ಮಹೋನ್ನತ ಕಾದಂಬರಿ ಅನ್ನಾಕರೆನೀನದ ಆರಂಭದಲ್ಲಿಯೇ ”ಎಲ್ಲಾ ಸುಖಿ ಕುಟುಂಬಗಳು ಒಂದೇ ರೀತಿ ಇರುತ್ತವೆ. ದುಃಖಿ ಕುಟುಂಬಗಳು ಕೂಡ ಅವುಗಳದೇ ಆದ ರೀತಿಯಲ್ಲಿ ಒಂದೇ ರೀತಿಯಲ್ಲಿ ಇರುತ್ತವೆ” ಎಂದು ಹೇಳಿದ್ದಾನೆ.
ಇತ್ತೀಚಿಗೆ ಹೆಂಡತಿಯರಿಂದ ಪೀಡನೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ನಿವೃತ್ತ ಪೊಲೀಸ್ ಅಧಿಕಾರಿಯವರ ಕುಟುಂಬದ ದುರಂತಕ್ಕೆ ಹಲವು ಆಯಾಮಗಳಿದ್ದರೂ ಆರೋಗ್ಯದ ಆಯಾಮ ಅಂದರೆ ಖಿನ್ನತೆ ಬಹುಮುಖ್ಯ ಎಂದು ಮೇಲ್ನೋಟಕ್ಕೆ ಕಾಣುತಿದೆ. ಕಳೆದ ವರ್ಷ ಒಂದು ಕಾರ್ಯಕ್ರಮದಲ್ಲಿ ಸಿಕ್ಕ ಕನ್ನಡದ ಹಿರಿಯ ಲೇಖಕರೊಬ್ಬರು ತಮ್ಮ ಪತ್ನಿಯ ವಿಚಿತ್ರ ವರ್ತನೆಯ ಬಗ್ಗೆ ತಿಳಿಸಿದರು. ಜೊತೆಯಲ್ಲಿ ಇವರ ಹತ್ತಿರ ಯಾವುದೇ ದುರುದ್ದೇಶ ಇಲ್ಲದೆ ಆತ್ಮೀಯವಾಗಿ ಮಾತನಾಡುತ್ತಿದ್ದ ಮಹಿಳೆಯ ಬಗ್ಗೆ ಕೂಡ ತಿಳಿಸಿದರು. ತಕ್ಷಣ ಆ ಲೇಖಕರಿಗೆ ಸಮಸ್ಯೆಯ ಮೂಲ ಕಾರಣದ ಬಗ್ಗೆ ತಿಳಿಸಿದೆ. ಲೇಖಕರಿಗೆ ನಾನು ಹೇಳಿದ ವಿಷಯಗಳಿಗೂ ಅವರ ಹೆಂಡತಿಯ ವರ್ತನೆಗೂ ತುಂಬಾ ಸಾಮ್ಯತೆ ಇರುವುದು ತಿಳಿಯಿತು. ನನ್ನ ಈ ಲೇಖನವನ್ನ ಕಳಿಸಿದೆ. ಅವರು ತಮ್ಮ ಮಗಳಿಗೂ ಕಳಿಸಿ ಅವರ ಅಮ್ಮನ ವರ್ತನೆಗೆ ಮುಖ್ಯ ಕಾರಣವನ್ನು ತಿಳಿಸಿದರು.
ಹಾಗಾದರೆ ಇತ್ತೀಚೆಗೆ ಹೆಣ್ಣು ಮಕ್ಕಳು ಶರಪಂಜರ ಕಲ್ಪನಾ ರೀತಿ ವರ್ತಿಸಿ ತಮ್ಮ ಸುಖಿ ಕುಟುಂಬಗಳನ್ನು ತಾವೇ ನಾಶಮಾಡಿಕೊಳ್ಳಲು ಮುಖ್ಯ ಕಾರಣವೇನು? ಹಾಗಾದರೆ ಇಲ್ಲಿ ಪುರುಷರ ತಪ್ಪೇ ಇರುವುದಿಲ್ಲವೇ? ಪುರುಷರ ತಪ್ಪು ಇರುತ್ತದೆ. ಆದರೆ ಅದು ೩೦% ಇದ್ದರೆ ಸ್ತ್ರೀಯರ ಖಿನ್ನತೆಯ ಪಾತ್ರ ದಶಾವತಾರದ ಭುಜಂಗಯ್ಯನ ಹೆಂಡತಿಯ ವರ್ತನೆಯ ರೀತಿ ೭೦% ಇರುತ್ತದೆ. ಅವರು ತಮ್ಮ ಮಾನಸಿಕ ವರ್ತನೆಯ ಮೇಲೆ ತಮ್ಮ ಹತೋಟಿಯನ್ನ ಕಳೆದುಕೊಂಡಿರುತ್ತಾರೆ.
ಇದಕ್ಕೆಲ್ಲಾ ಮುಖ್ಯ ಕಾರಣ ಈ ಲೇಖನ ಓದಿದ ಮೇಲೆ ನಿಮಗೆ ತಿಳಿಯುತ್ತೆ. ಓದುತ್ತ ಹೋಗಿ.
ಥೈರಾಯ್ಡ್ ಸಮಸ್ಯೆಗೆ ಶಾಶ್ವತ ಪರಿಹಾರ ಉಂಟೇ?
ಇತ್ತೀಚೆಗೆ ಅಂದರೆ ಕಳೆದ ವರ್ಷ ಡಿಸೆಂಬರ್ ಹದಿಮೂರರಂದು ಅಂಕಣಗಾರ್ತಿ ಕುಸುಮಬಾಲೆ ಆಯರಹಳ್ಳಿಯವರು ಈ ಮೇಲಿನ ಪ್ರಶ್ನೆಯನ್ನು ಫೇಸ್ಬುಕಿನಲ್ಲಿ ಹಾಕಿದ್ದರು. ಜೊತೆಗೆ ಕೆಲವು ಸಾಲುಗಳನ್ನು ಸೇರಿಸಿದ್ದರು. ಅದನ್ನು ಕೆಳಗೆ ಕೊಟ್ಟಿದ್ದೇನೆ. ಆಗ ಆ ತಕ್ಷಣಕ್ಕೆ ಕುಸುಮ ಅವರ ಕೋರಿಕೆಗೆ ಉತ್ತರ ತಿಳಿಸಲು ಆಗಿರಲಿಲ್ಲ. ಇಲ್ಲಿ ಕುಸುಮಬಾಲೆಯವರ ಪ್ರಶ್ನೆಗೆ ಆಧುನಿಕ ವಿಜ್ಞಾನ ಏನು ಹೇಳುತಿದೆ ಅನ್ನುವುದನ್ನು ನಿಮ್ಮ ಮುಂದೆ ನೀಡಲು ಪ್ರಯತ್ನಿಸುತ್ತಿದ್ದೇನೆ. ಜೊತೆಗೆ ನಾಡಿನ ಬೇರೆ ಬೇರೆ ಕ್ಷೇತ್ರದ ಹೆಸರಾಂತ ವಿಜ್ಞಾನಿಗಳು ಜನಪ್ರಿಯ ವಿಜ್ಞಾನ ಲೇಖಕರುಗಳಾದ ಟಿ. ಆರ್. ಅನಂತರಾಮು, ಪ್ರೊ. ಸಂಪಿಗೆ ತೋಂಟದಾರ್ಯ ಮತ್ತು ಸುಧೀಂಧ್ರ ಹಾಲ್ದೊಡ್ಡೇರಿ ಅವರ ಫೇಸ್ಬುಕ್ ವಿಚಾರ ವಿನಿಮಯ ಈ ವಿಷಯದ ಬಗ್ಗೆ ಈಗ ಬರೆಯಲು ಪ್ರೇರೇಪಿಸಿತು.
ಕುಸುಮ ಅವರ ಬರಹ
ಥೈರಾಯ್ಡ್ ಸಮಸ್ಯೆಗೆ ಶಾಶ್ವತ ಪರಿಹಾರ ಉಂಟೇ? ನಮ್ಮ ದೇಹ, ಮನಸ್ಸು, ಕೋಪ, ಖುಷಿಗಳನ್ನೆಲ್ಲ ಪ್ರಭಾವಿಸುವ ಇದು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಭಾರತದ ಪ್ರತಿ ಎರಡನೆ ಮಹಿಳೆ ಥೈರಾಯ್ಡ್ ಸಮಸ್ಯೆಯಿಂದ ಬಳಲುತ್ತಾಳೆಂದು ಅಂಕಿಅಂಶ ಹೇಳುತ್ತದೆ. ಹಳೇ ಕಾಲದಲ್ಲಿ ಯಾರುಗಿತ್ತು? ಇದೆಲ್ಲ ನಿಮ್ಮ ಲೈಫ್ ಸ್ಟೈಲ್ ನ ಫಲ ಅನ್ನೋರೂ ಉಂಟು. ನಂಗಂತೂ, ಭಾರತದ ಶಕ್ತಿ ಇರೋದೇ ಇಲ್ಲಿನ ಮಹಿಳೆಯರಲ್ಲಿ ಅಂತ ಕಂಡುಕೊಂಡ ಯಾರೋ ನಮ್ಮನ್ನು ಹಿಂಡಿಹಿಪ್ಪೆಮಾಡಲು ಇದನ್ನು ತಗುಲಿಸಿದಾರಾ ಅಂತಲೂ ಡೌಟಾಗುತ್ತದೆ.

ಕುಸುಮಬಾಲೆ ಆಯರಹಳ್ಳಿ
ಥೈರಾಯ್ಡಿಂದಾಗೋ ಮೂಡ್ ಸ್ವಿಂಗಿನ ಕಾರಣಗಳು ಗೊತ್ತಾಗದೇ ಸಂಸಾರಗಳು ಮುರಿದಿವೆ. ನಮ್ಮಲ್ಲಿ ಪರಿಹಾರ ಉಂಟು ಅಂತ ಕೆಲವರಂದರೆ ಇದಕ್ಕೆ ಸಾಯೋವರೆಗೂ ಮಾತ್ರೆಯೇ ಪರಿಹಾರ ಅಂತದೆ ಅಲೋಪತಿ. ಬಲ್ಲವರಿದ್ದರೆ ಹೇಳಿ ಇದ್ರ ವಿಷ್ಯ ಸ್ವಲ್ಪ.
ಇಲ್ಲಿ ಕುಸುಮ ಅವರ ಆರೋಪ ಈ ಸಮಸ್ಯೆ ಭಾರತದ ಮಹಿಳೆಯರಿಗೆ ಮಾತ್ರ ಎಂಬುದಾಗಿದೆ. ಆದರೆ ಥೈರಾಯ್ಡ್ ಸಮಸ್ಯೆ ಇಂದು ವಿಶ್ವವ್ಯಾಪಕವಾಗಿದೆ. ಜೊತೆಗೆ ಉತ್ತರವೂ ಅವರ ಪ್ರಶ್ನೆಯಲ್ಲಿಯೇ ಇದೆ. ಕುಸುಮ ಅವರೇ ಕೆಲವು ವರ್ಷಗಳ ಹಿಂದೆ ಒಂದು ಲೇಖನ ಬರೆದಿದ್ದರು. ಆ ಲೇಖನದಲ್ಲಿ ಅವರು ಹಿಂದೆ ಭಾರತದಲ್ಲಿ ಒಂದು ಜಿಲ್ಲೆಯಿಂದ ಇನ್ನೊಂದು ಜಿಲ್ಲೆಗೆ ಪ್ರಯಾಣಿಸಿದರೆ ನಮ್ಮ ಉಡುಗೆ, ತೊಡುಗೆ, ಆಹಾರ, ಸಂಸ್ಕೃತಿ ಎಲ್ಲವೂ ವೈವಿಧ್ಯಮಯವಾಗಿರುತ್ತಿದ್ದವು. ಆದರೆ ಇಂದು ಭಾರತದ ಎಲ್ಲಾ ಭಾಗದಲ್ಲೂ ಉಡುಗೆ, ತೊಡುಗೆ, ಆಹಾರ, ಸಂಸ್ಕೃತಿ ಎಲ್ಲವೂ ಒಂದೇ ರೀತಿ ಆಗುತ್ತಿದೆ ಎಂಬುದು. ಜೊತೆಗೆ ಮಹಿಳೆಯರು, ಪುರುಷರು ತಮ್ಮ ಪಾರಂಪರಿಕ ಉಡುಪುಗಳನ್ನು ಬಿಟ್ಟು ಎಲ್ಲರೂ ಜೀನ್ಸ್ ತೊಟ್ಟು ಒಂದೇ ರೀತಿಯ ಉಡುಪಿಗೆ ಮೊರೆಹೋಗುತ್ತಿದ್ದಾರೆ ಎಂಬುದು. ಅದು ಸತ್ಯ ಕೂಡ. ಇಂದು ಮ್ಯಾಕ್ ಡೊನಾಲ್ಡ್, ಕೆ.ಎಫ್.ಸಿ, ರಿಲಯನ್ಸ್, ಬಿಗ್ ಬಜಾರ್, ಮೊರ್, ಪಿಜ್ಜಾ ಹಟ್, ಡೋಮಿನೋಸ್ ಪಿಜ್ಜಾ ಭಾರತದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲೂ ಸಿಗುತ್ತಿವೆ. ಹಿಂದೆ ಪಾಶ್ಚಾತ್ಯ ದೇಶಗಳಲ್ಲಿದ್ದ ಈ ರೀತಿ ಸಂಸ್ಕೃತಿ ಇಂದು ಭಾರತದಲ್ಲೂ ಇದೆ. ಜೊತೆಗೆ ಪ್ರತಿ ಚಿಕ್ಕ ಪಟ್ಟಣಗಳ, ಹೋಬಳಿ ಕೇಂದ್ರಗಳಲ್ಲೂ ಬೇಕರಿಗಳು ಹೆಚ್ಚಾಗಿವೆ. ಈ ಬೇಕರಿಗಳಿಂದ ಮತ್ತು ಮ್ಯಾಕ್ ಡೊನಾಲ್ಡ್, ಕೆ.ಎಫ್.ಸಿ, ಪಿಜ್ಜಾ ಹಟ್, ಡೋಮಿನೋಸ್ ಪಿಜ್ಜಾ ಜೊತೆಗೆ ಮಾಲ್ ಸಂಸ್ಕೃತಿಯಿಂದ ನಮ್ಮ ತಿನ್ನುವ ಸಂಸ್ಕೃತಿಯೂ ಬದಲಾಗಿದೆ. ಹಿಂದೆ ಒಂದು ಚಿಕ್ಕ ಪ್ಯಾಕೆಟಿನಲ್ಲಿ ಪಾಪ್ ಕಾರ್ನ್ ಜೋಳ ತಿನ್ನುತ್ತಿದ್ದ ನಾವು ಇಂದು ಒಂದು ದೊಡ್ಡ ಬಕೇಟಿನಲ್ಲಿ ತಿನ್ನುತ್ತಿದ್ದೇವೆ. ಅರ್ಧ ಲೀಟರ್ ಪೆಪ್ಸಿ, ಕೊಕೊಕೋಲಾ ಕುಡಿಯುತ್ತಿದ್ದ ನಾವು ಇಂದು ಐದು ಲೀಟರ್ ಬಾಟಲಿಯಲ್ಲಿ ಕುಡಿಯುತ್ತಿದೇವೆ. ವರ್ಷಕ್ಕೆ ಒಮ್ಮೆಯೋ ಎರಡು ಬಾರಿಯೋ ಕೇಕು ತಿನ್ನುತ್ತಿದ್ದವರು ಇಂದು ವಾರಕೊಮ್ಮೆ ತಿನ್ನುತ್ತಿದ್ದೇವೆ. ಹಬ್ಬ ಹರಿದಿನಕ್ಕೆ ತಿನ್ನುತ್ತಿದ್ದ ಸಿಹಿತಿಂಡಿಗಳನ್ನು ಈಗ ಪ್ರತಿದಿನವೂ ತಿನ್ನುತ್ತಿದ್ದೇವೆ. ಎಂದೋ ಒಮ್ಮೆ ನೆಂಟರು ಬಂದಾಗಲೋ ಊರಿನ ಜಾತ್ರೆಗೋ ಪಾನಕ ಮಾಡುತ್ತಿದ್ದ ನಾವು ಇಂದು ಫ್ರೂಟ್ ಜ್ಯೂಸುಗಳನ್ನು ಅತೀ ಹೆಚ್ಚು ಸಕ್ಕರೆ ಹಾಕಿ ಕುಡಿಯುತ್ತಿದ್ದೇವೆ. ಚಿಕ್ಕ ಲೋಟದಲ್ಲಿ ಟೀ, ಕಾಫಿ ಕುಡಿಯುತ್ತಿದ್ದವರು ಕೆಫೆ ಕಾಫೀ ಡೇ ಬಂದ ಮೇಲೆ ಲೀಟರ್ ಗಟ್ಟಲೆ ಕುಡಿಯುತ್ತಿದ್ದೇವೆ. ಎಲ್ಲದಕ್ಕೂ ನಡೆದೇ ಓಡಾಡುತ್ತಿದ್ದ ನಾವು ಇಂದು ಕಾರಿನಿಂದ ಕೆಳಗೆ ಇಳಿಯುವುದಿಲ್ಲ.
೧೯೯೦ ರ ಹಿಂದೆ ಭಾರತದಲ್ಲಿ ಹೃದಯ ಸಂಬಂಧಿ ಕಾಯಿಲೆಗಳು, ಸಕ್ಕರೆ ಕಾಯಿಲೆ, ಬೊಜ್ಜು, ಕ್ಯಾನ್ಸರ್ ಎಲ್ಲವೂ ಅಪರೂಪದ ಕಾಯಿಲೆಗಳಾಗಿದ್ದವು. ಆಗರ್ಭ ಶ್ರೀಮಂತರ ಖಾಯಿಲೆಗಳಾಗಿದ್ದವು. ಅದಕ್ಕೆ ಉತ್ತಮ ಉದಾಹರಣೆ ತೇಜಸ್ವಿಯವರ ತಬರನ ಕತೆಯಲ್ಲಿ ನಮಗೆ ಸಿಗುತ್ತದೆ. ತಬರನ ಹೆಂಡತಿಗೆ ಅತೀಯಾದ ಮಧುಮೇಹದಿಂದ ಕಾಲಿನ ಗಾಯ ಗ್ಯಾನ್ಗ್ರಿನ್ ಆಗಿ ಅವಳ ಕಾಲನ್ನು ಕತ್ತರಿಸಿ ತೆಗೆಯುವ ಪ್ರಸಂಗ ಬರುತ್ತದೆ. ಅಲ್ಲಿ ವೈದ್ಯರು ತಬರನಿಗೆ ತಮಾಷೆ ಮಾಡುತ್ತಾರೆ. “ಏನೋ ತಬರ ನಿನ್ನ ಹೆಂಡತಿಗೆ ಪರಂಗಿಯವರ ಖಾಯಿಲೆ ಬಂದಿದೆಯಲ್ಲೋ?” ಎಂದು. ಅಂದರೆ ಮಧುಮೇಹ ಅಥವಾ ಸಕ್ಕರೆ ಕಾಯಿಲೆ ಭಾರತೀಯರಿಗೆ ಬರುತ್ತಿರಲಿಲ್ಲ ಪರಂಗಿಯವರಿಗೆ ಅಂದರೆ ಬ್ರಿಟಿಷರಿಗೆ ಅಥವಾ ಪಾಶ್ಚಾತ್ಯರಿಗೆ ಮಾತ್ರ ಬರುತಿತ್ತು ಎಂದು ಅರ್ಥ. ಅದು ಸತ್ಯ ಕೂಡ. ಹೃದಯ ಸಂಬಂಧಿ ಕಾಯಿಲೆಗಳು, ಸಕ್ಕರೆ ಕಾಯಿಲೆ, ಬೊಜ್ಜು, ಕ್ಯಾನ್ಸರ್ ಎಲ್ಲವೂ ಪಾಶ್ಚಾತ್ಯರಿಗೆ ಹೆಚ್ಚು ಇದ್ದವು. ಅದಕ್ಕೆ ಮುಖ್ಯ ಕಾರಣ ಅವರ ಜೀವನ ಶೈಲಿ. ಅತೀ ಹೆಚ್ಚು ಯಂತ್ರಗಳ ಮೇಲೆ ಅವಲಂಬಿತರಾಗಿ ಕುಳಿತೇ ಮಾಡುತ್ತಿದ್ದ ಕೆಲಸಗಳು ಮತ್ತು ಹೆಚ್ಚು ಹೆಚ್ಚು ಕ್ಯಾಲೋರಿಗಳು ಇರುವ ಆಹಾರ ತಿನ್ನುತ್ತಿದ್ದ ಅವರ ಜೀವನ ಶೈಲಿ. ಬ್ರಿಟಿಷರು ಭಾರತದಲ್ಲಿದ್ದಾಗ ಅವರ ಮನೆಯ ಕೆಲಸಗಳಿಂದಿಡಿದು ಎಲ್ಲದಕ್ಕೂ ಭಾರತೀಯ ಕೆಲಸಗಾರರಿದ್ದರು. ಅವರು ಹೆಚ್ಚು ಕುಳಿತೆ ಇರುತ್ತಿದ್ದರು. ಆ ಕಾರಣದಿಂದ ಅವರು ತಮ್ಮ ದೇಶದಲ್ಲಿದ್ದರೂ ಭಾರತದಲ್ಲಿದ್ದರೂ ಅವರಿಗೆ ಈ ಕಾಯಿಲೆಗಳು ಹೆಚ್ಚು ಇದ್ದವು. ೧೯೯೦ ರನಂತರ ಭಾರತೀಯರ ಮನೆಗೆ ಟಿವಿ ಬಂತು, ೨೦೦೦ ದ ನಂತರ ಫೋನಿನ ಜೊತೆ ಮೊಬೈಲ್ ಫೋನು ಬಂತು, ಮಿಕ್ಸಿ, ಗ್ರೈಂಡರ್, ಕಂಪ್ಯೂಟರ್, ಸಾಫ್ಟ್ವೆರ್ ಉದ್ಯೋಗ ಅಥವಾ ಎ.ಸಿ. ರೂಮಿನಲ್ಲಿ ಕುಳಿತೆ ಮಾಡುವ ಉದ್ಯೋಗ, ದ್ವಿಚಕ್ರ ವಾಹನ, ಕಾರುಗಳು, ಜೊತೆಗೆ ವಾಯು ಮಾಲಿನ್ಯ ಎಲ್ಲವೂ ಬಂದವು. ಅದರಿಂದ ಭಾರತದಲ್ಲಿ ಹೃದಯ ಸಂಬಂಧಿ ಕಾಯಿಲೆಗಳು, ಸಕ್ಕರೆ ಕಾಯಿಲೆ, ಬೊಜ್ಜು, ಕ್ಯಾನ್ಸರ್ ಎಲ್ಲವೂ ಹೆಚ್ಚಾದವು. ೨೦೦೩ರಲ್ಲಿ ನಾನು ಸುಮಾರು ಮೂರು ತಿಂಗಳುಗಳ ಕಾಲ ಪುಣೆಯಲ್ಲಿದ್ದೆ. ಅಲ್ಲಿನ ಯುವಕ, ಯುವತಿಯರನ್ನ(ಶೇಕಡ ೬೦) ನೋಡಿದರೆ ನಮ್ಮ ಶಿವಮೊಗ್ಗದ ಅಥವಾ ಮೈಸೂರಿನ ಯುವಕ, ಯುವತಿಯರ ರೀತಿ ತೆಳ್ಳಗೆ ಇರದೇ ಹೆಚ್ಚು ದಪ್ಪವಾಗಿದ್ದರು. ಈಗ ಶಿವಮೊಗ್ಗ ಮತ್ತು ಮೈಸೂರಿನ ಯುವಕ, ಯುವತಿಯರು ನನಗೆ ಹಾಗೆ ಕಾಣುತ್ತಾರೆ. ಆಗ ನಮ್ಮ ಕರ್ನಾಟಕದ ಜನ ರಸ್ತೆ ಬದಿಯ ಆಹಾರಕ್ಕೆ ಹೆಚ್ಚು ಹೊಂದಿಕೊಂಡಿರಲಿಲ್ಲ. ಜನರು ಅಪರೂಪಕ್ಕೆ ಪಾನಿಪುರಿ ಅಥವಾ ಆಗಿನ್ನೂ ಪ್ರಚಾರವಾಗುತ್ತಿದ್ದ ಗೋಬಿಮಂಚೂರಿಯನ್ನು ತಿನ್ನುತ್ತಿದ್ದರು. ಈಗ ಬಹಳಷ್ಟು ಜನರ ಪ್ರತಿದಿನದ ಆಹಾರವೂ ಬೀದಿ ಬದಿಯ ಅಥವಾ ಮಾಲ್ ನಲ್ಲಿರುವ ಆಹಾರದ ಮೇಲೆಯೇ ಅವಲಂಬಿತವಾಗಿದೆ. ಈ ಸಂಸ್ಕೃತಿಯನ್ನು ನಾನು ಪುಣೆಯಲ್ಲಿ ಆಗಲೇ ನೋಡಿದ್ದೆ. ಅದು ಏನೇ ಇರಲಿ.
ಹಾಗಾದರೆ ಈ ಥೈರಾಯ್ಡ್ ಸಮಸ್ಯೆಗೆ ಕಾರಣವೇನು?
ಥೈರಾಯ್ಡ್ ಸಮಸ್ಯೆ ಇಂದು ಸ್ತ್ರೀಯರಲ್ಲಿ ಮಾತ್ರವಲ್ಲ ಪುರುಷರಲ್ಲೂ ಹೆಚ್ಚಾಗುತ್ತಿದೆ. ಅದಕ್ಕೆ ಕೆಲವು ಕಾರಣಗಳನ್ನು ಇಲ್ಲಿ ಕೊಡುತ್ತಿದ್ದೇನೆ.
೧) ಆಹಾರದಲ್ಲಿ ಅಯೋಡಿನ್ ಕೊರತೆ.
೨) ವಂಶಪಾರಂಪರ್ಯವಾಗಿ ತಂದೆ ತಾಯಿಗಳಿಂದ ಕೂಡ ಬರಬಹುದು.
೩) ವಂಶವಾಹಿನಿಗಳಿಂದ ಆಗುವ ಬದಲಾವಣೆಗಳು(ಮ್ಯುಟೇಷನ್ಸ್)
೩) ಆಹಾರದಲ್ಲಿ ಅತೀಯಾದ ಕಳೆನಾಶಕ, ಕೀಟನಾಶಕಗಳು ಸೇರಿರಬಹುದು.
೪) ವಿಟಮಿನ್ ಡಿ. ಕೊರತೆ
ಇಲ್ಲಿ ನಾನು ಮುಖ್ಯವಾಗಿ ಹೇಳಬೇಕಾಗಿರುವುದು ವಿಟಮಿನ್ ಡಿ. ಕೊರತೆಯ ಕುರಿತು.
ವಿಟಮಿನ್ ಡಿ. ನಮ್ಮ ದೇಹದಲ್ಲಿ ಉತ್ಪತ್ತಿಯಾಗುವ ಒಂದು ಹಾರ್ಮೋನು. ಇದು ವಿಟಮಿನ್ ಮತ್ತು ಹಾರ್ಮೋನು ಎರಡು ಆಗಿರುವುದರಿಂದ ನಮ್ಮ ದೇಹದ ಬಹಳಷ್ಟು ಕಾರ್ಯಗಳನ್ನು ನಿಯಂತ್ರಿಸುತ್ತದೆ. ಈ ವಿಟಮಿನ್ ನಮ್ಮ ದೇಹದಲ್ಲಿ ಉತ್ಪತ್ತಿಯಾಗಬೇಕಾದರೆ ನಮಗೆ ಹಿತವಾದ ಮಿತವಾದ ಸೂರ್ಯನ ಬೆಳಕು ಬೇಕು. ನಾವು ಸೂರ್ಯನ ಬೆಳಕಿನಲ್ಲಿ ಓಡಾಡಬೇಕು. ಇಂದು ಬಹಳಷ್ಟು ಸ್ತ್ರೀಯರಿರಲಿ ಪುರುಷರೂ ಕೂಡ ಕಪ್ಪಾಗುತೇವೆ ಎಂದು ಸೂರ್ಯನ ಬಿಸಿಲಿಗೆ ಹೋಗುವುದಿಲ್ಲ. ನೆರಳಿನಲ್ಲಿಯೇ ಕುಳಿತು ಕೆಲಸ ಮಾಡುತ್ತಿದ್ದೇವೆ. ದ್ವೀಚಕ್ರ ವಾಹನದಲ್ಲಿ ಅಥವಾ ನಡೆದು ಓಡಾಡುವ ಸ್ತ್ರೀಯರಂತೂ ಮನೆಯಿಂದ ಹೊರಗಡೆ ಹೋಗುವಾಗ ಮುಖ, ಕೈ, ಕಾಲುಗಳನ್ನು ಸಂಪೂರ್ಣವಾಗಿ ಮುಚ್ಚಿಕೊಂಡು ಪ್ರೊಫೆಸರ್ ಕೆ.ಎಸ್.ನಿಸಾರ್ ಅಹಮದ್ ರ “ಅಮ್ಮ, ಆಚಾರ ಮತ್ತು ನಾನು” ಕವಿತೆಯ ನಾಯಕಿಯರಾಗಿ ಹೊರಡುತ್ತಾರೆ. ಈ ರೀತಿ ಹೊರಗಡೆ ಹೋಗುವುದರಿಂದ ದೇಹದ ಚರ್ಮದ ಮೇಲೆ ಸೂರ್ಯನ ಬಿಸಿಲು ಬೀಳುವುದಿಲ್ಲ. ವಿಟಮಿನ್ ಡಿ. ದೇಹದಲ್ಲಿ ಸರಿಯಾಗಿ ಉತ್ಪತ್ತಿಯಾಗುವುದಿಲ್ಲ. ಅದರಿಂದ ಕ್ಯಾಲ್ಸಿಯಂ ನಮ್ಮ ದೇಹದೊಳಗೆ ಸೇರುವುದಿಲ್ಲ. ಕ್ಯಾಲ್ಸಿಯಂ ಸೇರದಿದ್ದರೆ ಮೂಳೆಗಳು ಗಟ್ಟಿಯಾಗುವುದಿಲ್ಲ. ಇನ್ನೊಂದು ಕಡೆ ಬ್ಯಾಕ್ಟಿರಿಯಾಗಳು ನಮ್ಮ ದೇಹದ ಮೇಲೆ ಆಕ್ರಮಣ ಮಾಡಿದಾಗ ಅವುಗಳನ್ನು ಕೊಲ್ಲಲು ನಮ್ಮ ದೇಹ ಸೋಲುತ್ತದೆ. ಉರಿಯೂತಗಳು ಹೆಚ್ಚಾಗುತ್ತವೆ. ಥೈರಾಯ್ಡ್ ಹಾರ್ಮೋನು ಸರಿಯಾಗಿ ಕೆಲಸ ಮಾಡುವುದಿಲ್ಲ. ಥೈರಾಯ್ಡ್ ಹಾರ್ಮೋನು ಸರಿಯಾಗಿ ಕೆಲಸ ಮಾಡದಿದ್ದಾಗ ಸ್ತ್ರೀಯರು ಶರಪಂಜರದ ಕಲ್ಪನಾರ ರೀತಿ ಚಿತ್ರ ವಿಚಿತ್ರವಾಗಿ ವರ್ತಿಸುತ್ತಾರೆ ಹಾಗೆ ಅಥವಾ ದಶಾವತಾರದ ಭುಜಂಗಯ್ಯನ ಹೆಂಡತಿಯ ಹಾಗೆ ವರ್ತಿಸಲಾರಂಭಿಸುತ್ತಾರೆ. ಪುರುಷರು ಹೆಂಡತಿ ಪೀಡಕರಾಗುತ್ತಾರೆ,ಅಥವಾ ನಿಶಕ್ತಿಯಿಂದ ಸೋಮಾರಿಗಳಾಗುತ್ತಾರೆ. ದೇಹದ ಬೊಜ್ಜು ಹೆಚ್ಚಾಗುತ್ತದೆ, ವಿವಾಹ ವಿಚ್ಛೇದನಗಳು ಹೆಚ್ಚಾಗಬಹುದು. ಸಂಸಾರಗಳು ಬೀದಿಗೆ ಬೀಳಬಹುದು, ಅಥವಾ ಬದುಕಿನಲ್ಲಿ ನೆಮ್ಮದಿಯೇ ಇರದ ಹಾಗೆ ಆಗಬಹುದು.
ಇತ್ತೀಚೆಗೆ ಒಂದು ಆಶ್ಚರ್ಯಕರ ವಿಜ್ಞಾನ ಸಂಶೋಧನ ಲೇಖನ ಓದಿದೆ. ಅದರ ಪ್ರಕಾರ ನಮ್ಮ ದೇಹದಲ್ಲಿ ಮೆಲಟೋನಿನ್ ಎಂಬ ಹಾರ್ಮೋನು ಇದೆ. ಆ ಹಾರ್ಮೋನು ನಾವು ಮಲಗಿದಾಗ ಹೆಚ್ಚು ಉತ್ಪತ್ತಿಯಾಗಿ ಬೆಳಿಗ್ಗೆ ಎದ್ದಾಗ ಉತ್ಪತ್ತಿ ಕಮ್ಮಿಯಾಗುತ್ತದೆ. ಈ ಹಾರ್ಮೋನು ನಮ್ಮ ಮೆದುಳಿನಲ್ಲಿ ಉತ್ಪತ್ತಿಯಾಗಿ ನಮ್ಮ ದೇಹದಲ್ಲಿ ಉರಿಯೂತ ಮತ್ತು ಕ್ಯಾನ್ಸರ್ ಜೀವಕೋಶಗಳ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತದೆ. ನಮ್ಮ ದೇಹ ಸದಾ ಪ್ರಶಾಂತತೆಯಿಂದ ಇರುವಂತೆ ನೋಡಿಕೊಳ್ಳುತ್ತದೆ. ಜೊತೆಗೆ ಈ ಹಾರ್ಮೋನು ತನ್ನ ಕಾರ್ಯವನ್ನು ಹೆಚ್ಚು ಯಶಸ್ವಿಯಾಗಿ ನಿರ್ವಯಿಸಲು ವಿಟಮಿನ್ ಡಿ. ಚಟುವಟಿಕೆಗೆ ಸಹಾಯ ಮಾಡುವ ಪ್ರೋಟೀನಿನ ಮೇಲೆಯೇ ಅವಲಂಬಿಸಿದೆ ಎಂದು ತಿಳಿದುಬಂತು. ಇದರಿಂದ ಹಗಲಿನಲ್ಲಿ ವಿಟಮಿನ್ ಡಿ ಮಾಡುವ ಕಾರ್ಯವನ್ನು ಮೆಲಟೋನಿನ್ ರಾತ್ರಿ ಮಾಡುತ್ತದೆ ಎಂಬುದನ್ನು ಊಹಿಸಬಹುದು. ಸೂರ್ಯನ ಬೆಳಕು ಹೆಚ್ಚು ಇದ್ದಾಗ ವಿಟಮಿನ್ ಡಿ. ಉತ್ಪತ್ತಿಯಾಗುತ್ತದೆ. ರಾತ್ರಿಯಲ್ಲಿ ಮೆಲಟೋನಿನ್ ಹೆಚ್ಚು ಉತ್ಪತ್ತಿಯಾಗುತ್ತದೆ. ರಾತ್ರಿಯ ಹೊತ್ತು ಮಲಗದೆ ಹೆಚ್ಚು ಹೊತ್ತು ಕಂಪ್ಯೂಟರ್ ಅಥವಾ ಫೋನ್ ನೋಡುತ್ತ ಅಥವಾ ರಾತ್ರಿ ಪಾಳೆಯದಲ್ಲಿ ಕೆಲಸಮಾಡಿ ಹಗಲಿನಲ್ಲಿ ಮಲಗುವುದರಿಂದ ಈ ಹಾರ್ಮೋನಿನ ಉತ್ಪತ್ತಿಯಲ್ಲಿ ಅಸಮತೋಲನವಾಗಿ ಕ್ಯಾನ್ಸರ್ ಬರುವ ಸಂಭವ ಹೆಚ್ಚು. ಅದರಲ್ಲಿ ಮಹಿಳೆಯರಲ್ಲಿ ಸ್ತನದ ಕ್ಯಾನ್ಸರ್ ಅಥವಾ ಗರ್ಭಕಂಠದ ಕ್ಯಾನ್ಸರ್ ಹೆಚ್ಚು ಎಂದು ವಿಜ್ಞಾನ ಸಂಶೋಧನ ಲೇಖನಗಳು ಹೇಳುತ್ತವೆ.
ನೀವು ಹೆಚ್ಚು ವ್ಯಾಯಾಮ, ಹೆಚ್ಚು ಚಟುವಟಿಕೆಯಿಂದ ಇದ್ದು ಸಮಪ್ರಮಾಣದ ನಿದ್ರೆ, ಉತ್ತಮ ಆಹಾರ, ಒತ್ತಡವಿಲ್ಲದ ಜೀವನ ಸಾಗಿಸಿದರೆ ಮೆಲಟೋನಿನ್ ಹೆಚ್ಚಾಗಿ ಮೇಲಿನ ಯಾವುದೇ ಕಾಯಿಲೆಗಳು ಬರುವ ಸಂಭವ ಕಡಿಮೆ.
ಜೊತೆಗೆ ನೀವು ಯೋಗ, ಶಿವಯೋಗ, ಧ್ಯಾನ, ಸೂರ್ಯ ನಮಸ್ಕಾರ ಮಾಡುವುದರಿಂದ ಕೂಡ ಈ ಮೆಲಟೋನಿನ್ ಹಾರ್ಮೋನನ್ನು, ವಿಟಮಿನ್ ಡಿ. ಮತ್ತು ಥೈರಾಯ್ಡ್ ಸಮಸ್ಯೆಗಳನ್ನು ನಿಯಂತ್ರಿಸಿಕೊಳ್ಳಬಹುದು. ಜೊತೆಗೆ ನಿಮ್ಮ ಜೀವನ ಶೈಲಿ ಉತ್ತಮವಾಗಿದ್ದಾರೆ ವಂಶಪಾರಂಪರ್ಯವಾಗಿ ತಂದೆ ತಾಯಿಗಳಿಂದ ನಿಮಗೆ ಬಂದಿದ್ದ ಥೈರಾಯ್ಡ್ ಸಮಸ್ಯೆಗಳನ್ನು ನಿಮ್ಮ ಮಕ್ಕಳಿಗೆ ಬಳುವಳಿಯಾಗಿ ನೀಡದೆ ಇರಲು ಕೂಡ ಸಹಾಯ ಮಾಡುತ್ತದೆ. ವಂಶವಾಹಿನಿಗಳಿಂದ ಆಗುವ ಬದಲಾವಣೆಗಳನ್ನು ಸರಿಪಡಿಸಿಕೊಳ್ಳಲು ಕೂಡ ನಿಮ್ಮ ಜೀವನ ಶೈಲಿ ಸಹಾಯ ಮಾಡುತ್ತದೆ. ನಾವು ಗ್ರೇಗರ್ ಜಾನ್ ಮೆಂಡಲ್ ಪ್ರತಿಪಾದನೆಯ ಜೊತೆಗೆ ತಾಯಿಯಿಂದ ನಮಗೆ ಬಳುವಳಿಯಾಗಿ ಬರುವ ಮೈಟೊಕಾಂಡ್ರಿಯಾದ ವಂಶವಾಹಿನಿಗಳ ಮತ್ತು ಎಪಿಜೆನೆಟಿಕ್ಸ್ ಅಂದರೇ ನಮ್ಮ ವಂಶವಾಹಿನಿಗಳ ಕಾರ್ಯವನ್ನು ಪರೋಕ್ಷವಾಗಿ ನಿಯಂತ್ರಿಸುವ ಪ್ರೋಟೀನ್ ಮತ್ತು ಅವುಗಳ ಮೇಲಿನ ರಾಸಾಯನಿಕಗಳ ಬದಲಾವಣೆಯಿಂದ ಕೂಡ ನಮ್ಮ ಆರೋಗ್ಯವನ್ನು ನಮ್ಮ ಉತ್ತಮ ಜೀವನ ಶೈಲಿಯಿಂದ ಬದಲಾಯಿಸಿಕೊಳ್ಳಬಹುದು. ಆ ಕಾರಣದಿಂದ ಥೈರಾಯ್ಡ್ ಸಮಸ್ಯೆ, ಮಧುಮೇಹ, ಹೃದಯ ಸಂಬಂಧಿ ಕಾಯಿಲೆಗಳು, ಬೊಜ್ಜು, ಕ್ಯಾನ್ಸರ್ ಗಳು ಬರುವುದನ್ನು ತಡೆಗಟ್ಟಬಹುದು. ಕೊನೆಯ ಹಂತದ ಕ್ಯಾನ್ಸರ್ ಬಿಟ್ಟು ಉಳಿದ ಕಾಯಿಲೆಗಳನ್ನು ನಮ್ಮ ಜೀವನ ಶೈಲಿಯಿಂದ ತಡೆಗಟ್ಟಲೂ ಸಾಧ್ಯವಿದೆ.

ವಿಜಯ್ ಮಾಲೂರು
ನಾನು ಅಮೆರಿಕಾದ ರಿಚ್ಮಂಡ್ ನಲ್ಲಿದ್ದಾಗ ಅಲ್ಲಿನ ಅಮೆರಿಕನ್ನಡಿಗರಾದ ವಿಜಯ್ ಮಾಲೂರುರವರು (Malur Vijay ) ತಾವು ಬರೆದಿದ್ದ ತಮ್ಮ ಸಾಹಸಮಯ ಜೀವನದ ಪುಸ್ತಕ ನೀಡಿದ್ದರು. ಆ ಪುಸ್ತಕ ಓದಿ ನನಗೆ ಮೈ ರೋಮಾಂಚನವಾಗಿತ್ತು. ಅವರು ಆಕಸ್ಮಿಕವಾಗಿ ಸಂಭವಿಸಿದ ಅಪಘಾತದಿಂದ ಕೋಮಾಗೆ ಹೋಗಿ ಮೆದುಳಿನ ಸರ್ಜರಿ ಮಾಡಿಸಿಕೊಂಡು ಆರು ತಿಂಗಳು ಹಾಸಿಗೆಯಿಡಿದು ನಂತರ ಹೃದಯದ ನಾಲ್ಕು ಬೈಪಾಸ್ ಸರ್ಜರಿಯನ್ನ ಮಾಡಿಸಿಕೊಂಡಿದ್ದರು. ಆ ನಂತರ ತಮ್ಮ ಜೀವನ ಶೈಲಿಯನ್ನು ಬದಲಿಸಿಕೊಂಡು ಹಿಮಾಲಯದ ಮೌಂಟ್ ಎವರೆಸ್ಟ್ ನ ಬೇಸ್ ಕ್ಯಾಂಪಿಗೆ ಏರಿದ್ದರು. ಜೊತೆಗೆ ತಮ್ಮ ಎಪ್ಪತ್ತನೇ ವರ್ಷದ ಹುಟ್ಟು ಹಬ್ಬವನ್ನು ಆಫ್ರಿಕಾದ ಅತೀ ಎತ್ತರದ ಶಿಖರ ಮೌಂಟ್ ಕಿಲಿಮಂಜಾರೋದ ತುತ್ತ ತುದಿಯಲ್ಲಿ ಆಚರಿಸಿಕೊಂಡಿದ್ದರು. ಅದೇ ಎಂಬತ್ತು ವರ್ಷದ ಮಾಲೂರು ವಿಜಯ್ ಅವರು ಸಿನಿಮಾ ನಟ ಜಗ್ಗೇಶ್ ರಿಚ್ಮಂಡ್ ಗೆ ಭೇಟಿಕೊಟ್ಟಾಗ ಇಪ್ಪತ್ತರ ಯುವಕರ ಜೊತೆ ಕುಣಿದು ಕುಪ್ಪಳಿಸಿದ್ದನ್ನು ನಾನು ಕಣ್ಣಾರೆ ನೋಡಿದ್ದೇನೆ. ಅದು ಮನುಷ್ಯನೊಬ್ಬ ತನ್ನ ಇಚ್ಛಾಶಕ್ತಿಯಿಂದ ಏನು ಬೇಕಾದರೂ ಸಾಧಿಸಬಹುದು ಎಂದು ತೋರಿಸುವ ಪುಸ್ತಕ. ಅಂತಹ ಸಾಹಸಮಯ ವ್ಯಕ್ತಿಯನ್ನ ನಾನು ನೇರವಾಗಿ ನೋಡಿದ್ದರೂ ಅವರ ಜೀವನದ ಬಗ್ಗೆ ಹೆಚ್ಚು ತಿಳಿದಿರಲಿಲ್ಲ. ಈಗ ಅವರ ಆತ್ಮಚರಿತ್ರೆ (Towards Thin Air, From Cardiac Bypass to Everest Bypasses) ಆಂಗ್ಲಭಾಷೆಯಲ್ಲಿ ಪ್ರಕಟಗೊಂಡು ಆರೇಳು ವರ್ಷವಾಗಿದೆ, ಅದನ್ನು ನೀವು ಓದಲು ಪ್ರಯತ್ನಿಸಬಹುದು.

ಡಾ. ಅನುಪಮಾ ನಿರಂಜನ
ಜೊತೆಗೆ ಮೇಲೆ ನಾನು ಹೇಳಿರುವ ಕೆಲವು ಸಲಹೆಗಳನ್ನು ಕನ್ನಡದ ಖ್ಯಾತ ಲೇಖಕಿ, ಸ್ವತಃ ವೈದ್ಯೆಯಾಗಿದ್ದ ಮತ್ತು ಕ್ಯಾನ್ಸರ್ ವಿರುದ್ಧ ತಮ್ಮ ಬದುಕಿನ ಕೊನೆಯ ದಿನದವರೆಗೂ ಹೋರಾಡಿದ ಡಾ. ಅನುಪಮಾ ನಿರಂಜನ, ಕನ್ನಡದ ಇನ್ನೊಬ್ಬ ಖ್ಯಾತ ಲೇಖಕರಾಗಿದ್ದ ಡಾ. ಸ.ಜ. ನಾಗಲೋಟಿಮಠ ಮತ್ತು ಪ್ರೊಫೆಸರ್, ರಾಜಶೇಖರ ಭೂಸನೂರಮಠರು ಇದನ್ನೇ ಬರೆದಿದ್ದಾರೆ. ಇಲ್ಲಿ ಇವರು ಸೂರ್ಯನಮಸ್ಕಾರ, ಧ್ಯಾನ, ಯೋಗಾಸಾನದ ಬಗ್ಗೆ ಹೇಳುತ್ತಾರೆ. ಜೊತೆಗೆ ಶಿವಯೋಗ ಅಂದರೆ ಅನಿಮಿಷ-ಅಲ್ಲಮ-ಬಸವಣ್ಣರ ಇಷ್ಟಲಿಂಗ ಪೂಜೆಯ ಬಗ್ಗೆಯೂ ಹೇಳುತ್ತಾರೆ. ಅನುಪಮಾ ನಿರಂಜನರು ಇಷ್ಟಲಿಂಗ ಪೂಜೆಯನ್ನು ದೀಪಧ್ಯಾನ ಎಂದು ಹೇಳುತ್ತಾರೆ. ಇವುಗಳಿಂದ ನಾನು ಮೇಲೆ ಹೇಳಿದ ಮೆಲಟೋನಿನ್ ಉತ್ಪತ್ತಿಯಾಗುವವುದನ್ನು ಹೇಳುತ್ತಾರೆ.
ಜೊತೆಗೆ ಡಾ. ಸ.ಜ.ನಾಗಲೋಟಿಮಠರು ಅಕ್ಕಮಹಾದೇವಿಯ ಕೆಲವು ವಚನಗಳ ಪ್ರಸ್ತಾಪ ಮಾಡುತ್ತಾರೆ. ಆ ವಚನಗಳಲ್ಲಿ ಒಂದು

ಡಾ. ಸ.ಜ.ನಾಗಲೋಟಿಮಠ
ಆಹಾರವ ಕಿರಿದು ಮಾಡಿರಣ್ಣಾ
ಆಹಾರವ ಕಿರಿದು ಮಾಡಿ. ಆಹಾರದಿಂದ ವ್ಯಾಧಿ ಹಬ್ಬಿ ಬಲಿವುದಯ್ಯಾ. ಆಹಾರದಿಂ ನಿದ್ರೆ
ನಿದ್ರೆಯಿಂ ತಾಮಸ ಅಜ್ಞಾನ ಮೈಮರಹು
ಅಜ್ಞಾನದಿಂ ಕಾಮವಿಕಾರ ಹೆಚ್ಚಿ ಕಾಯವಿಕಾರ
ಮನೋವಿಕಾರ ಇಂದ್ರಿಯವಿಕಾರ
ಭಾವವಿಕಾರ ವಾಯುವಿಕಾರವನುಂಟುಮಾಡಿ
ಸೃಷ್ಟಿಗೆ ತಹುದಾದ ಕಾರಣ ಕಾಯದ ಅತಿಪೋಷಣ ಬೇಡ. ಅತಿ ಪೋಷಣೆ ಮೃತ್ಯುವೆಂದುದು. ಜಪ ತಪ ಧ್ಯಾನ ಧಾರಣ ಪೂಜೆಗೆ ಸೂಕ್ಷ್ಮದಿಂ ತನುಮಾತ್ರವಿದ್ದರೆ ಸಾಲದೆ ತನುವ ಪೋಷಿಸುವ ಆಸೆ ಯತಿತ್ವಕ್ಕೆ ವಿಘ್ನವೆಂದುದು. ತನು ಪೋಷಣೆಯಿಂದ ತಾಮಸ ಹೆಚ್ಚಿ
ಅಜ್ಞಾನದಿಂ ವಿರಕ್ತಿ ಹಾನಿ
ಅರಿವು ನಷ್ಟ
ಪರವು ದೂರ
ನಿರಕೆ ನಿಲವಿಲ್ಲದ ಕಾರಣ. ಚೆನ್ನಮಲ್ಲಿಕಾರ್ಜುನನೊಲಿಸ ಬಂದ ಕಾಯವ ಕೆಡಿಸದೆ ಉಳಿಸಿಕೊಳ್ಳಿರಯ್ಯಾ.
ಇನ್ನೊಂದು
ಲೋಕದ ಚೇಷ್ಟೆಗೆ ರವಿ ಬೀಜವಾದಂತೆ
ಕರಣಂಗಳ ಚೇಷ್ಟೆಗೆ ಮನವೇ ಬೀಜ.
ಎನಗುಳ್ಳುದೊಂದು ಮನ.
ಆ ಮನ ನಿಮ್ಮಲ್ಲಿ ಸಿಲುಕಿದ ಬಳಿಕ ಎನಗೆ ಭವವುಂಟೆ ಚೆನ್ನಮಲ್ಲಿಕಾರ್ಜುನಾ ?
ಇಲ್ಲಿ ಅಕ್ಕನ ವಚನದಿಂದ ಹೆಚ್ಚು ಹೆಚ್ಚು ತಿನ್ನುವುದರಿಂದ ಏನೆಲ್ಲಾ ಆಗಬಹುದು ಎಂಬುದು ಚೆನ್ನಾಗಿ ತಿಳಿಯುತ್ತದೆ. ಇನ್ನೊಂದು ವಚನದಲ್ಲಿ ಸೃಷ್ಟಿಯ ಎಲ್ಲವೂ ಸೂರ್ಯನಿಂದ ನಿಯಂತ್ರಿಸಲ್ಪಡುತ್ತದೆ ಎಂದು ತಿಳಿದುಬರುತ್ತದೆ. ಸಸ್ಯಗಳು ಸೂರ್ಯನಿಂದಲೇ ತಮ್ಮ ಆಹಾರವನ್ನು ತಯಾರಿಸುವುದು. ಭೂಮಿಯಲ್ಲಿ ಹಗಲು ರಾತ್ರಿಗಳು ಅದಕ್ಕೆ ತಕ್ಕಂತೆ ಮಹಿಳೆಯರ ಋತುಚಕ್ರವೂ ನಿಯಂತ್ರಿಸಲ್ಪಡುತ್ತದೆ. ನಾವು ಸೂರ್ಯನ ಬೆಳಕಿಗೆ ಹೋಗದೆ ಕತ್ತಲೆಯಲ್ಲಿಯೇ ಇದ್ದರೆ ಅಥವಾ ಕತ್ತಲಿಗೆ ಹೋಗದೆ ನಿದ್ರೆ ಮಾಡದೆ ಟಿ.ವಿ. ಅಥವಾ ಕಂಪ್ಯೂಟರ್ ಮುಂದೆಯೇ ಹೆಚ್ಚು ಹೊತ್ತು ಕುಳಿತರೆ ಅದು ಕೂಡ ನಮ್ಮ ಆರೋಗ್ಯದ ಮೇಲೆ ವ್ಯಕ್ತಿರಿಕ್ತ ಪರಿಣಾಮ ಉಂಟು ಮಾಡುತ್ತದೆ. ಆ ಕಾರಣದಿಂದ ನಮ್ಮ ಆಹಾರವನ್ನು ಕಡಿಮೆ ಮಾಡಬೇಕು, ಕಡಿಮೆ ಕ್ಯಾಲೋರಿ ಇರುವ ಆಹಾರ ಸೇವಿಸಬೇಕು, ಕುಳಿತು ಮಾಡುವ ಕೆಲಸದಲ್ಲಿದ್ದರೆ ಮಧ್ಯ ಮಧ್ಯ ಬಿಡುವು ಮಾಡಿಕೊಂಡು ಓಡಾಡಬೇಕು, ನೀರನ್ನು ಆಗಾಗ ಕುಡಿಯಬೇಕು. ಮುಂಜಾನೆಯ ಮತ್ತು ಸಂಜೆಯ ಸೂರ್ಯನ ಬೆಳಕಿನಲ್ಲಿ ಓಡಾಡಬೇಕು, ರಾತ್ರಿ ನಿದ್ರೆ ಮಾಡಬೇಕು. ವರ್ಷದ ಆರುತಿಂಗಳು ಸೂರ್ಯನ ಬೆಳಕೇ ಕಾಣದ ಕಂಡರೂ ಬಿಸಿಲು ಇರದ ಜಾಗಗಳಲ್ಲಿ (ಅಮೆರಿಕಾ ಮತ್ತು ಯೂರೋಪಿನಲ್ಲಿ) ಮಹಿಳೆಯರು ಹೆಚ್ಚು ವಿಟಮಿನ್ ಮಾತ್ರೆಗಳನ್ನು ಸೇವಿಸುತ್ತಾರೆ. ನಮ್ಮಲ್ಲಿ ಆ ಸಂಸ್ಕೃತಿ ಇನ್ನು ಬೆಳೆದುಬಂದಿಲ್ಲ. ಉತ್ತಮ ಆಹಾರದಲ್ಲಿ ಮತ್ತು ಜೀವನ ಶೈಲಿಯಲ್ಲಿಯೇ ನಮ್ಮ ಆರೋಗ್ಯವನ್ನು ನಾವು ನಿಯಂತ್ರಿಸಿಕೊಳ್ಳಬಹುದು.
ಇಲ್ಲಿ ವಿಪರ್ಯಾಸ ಒಂದರ ಬಗ್ಗೆ ಹೇಳಬೇಕು. ಇಷ್ಟೆಲ್ಲಾ ತಿಳಿದಿದ್ದ ಡಾ. ಸ.ಜ.ನಾಗಲೋಟಿಮಠರು ವೈದ್ಯಕೀಯ ಕ್ಷೇತ್ರಕ್ಕೆ ಕೊಡಮಾಡುವ ದೇಶದ ಪ್ರತಿಷ್ಠಿತ ಬಿ.ಸಿ. ರಾಯ್ ಪ್ರಶಸ್ತಿ ಪಡೆದಿದ್ದರು. ಹಲವಾರು ಸಂಶೋಧನೆ ಮಾಡಿದ್ದರು. ಕರ್ನಾಟಕ ಸಾಹಿತ್ಯ ಅಕಾಡೆಮಿ ಮತ್ತು ಕರ್ನಾಟಕ ವಿಜ್ಞಾನ ಪರಿಷತ್ತಿನ ಪ್ರಶಸ್ತಿ ಕೂಡ ಪಡೆದಿದ್ದರು. ಅವರ ಒಂದೇ ಒಂದು ತಪ್ಪು ಗ್ರಹಿಕೆಯಿಂದ ತಮ್ಮ ಪ್ರಾಣಕ್ಕೆ ಸಂಚಕಾರ ತಂದುಕೊಂಡರು ಎಂದು ಅನಿಸುತ್ತದೆ. ಇಂದು ಮಧುಮೇಹಕ್ಕೆ ಇನ್ಸುಲಿನ್ ಅವಶ್ಯಕತೆ ಮತ್ತು ಸಕ್ಕರೆಯ ನಿಯಂತ್ರಣದ ಬಗ್ಗೆ ಪ್ರತಿಯೊಬ್ಬರಿಗೂ ಗೊತ್ತು. ಆದರೆ ಜಗತ್ತೇ ಒಪ್ಪಿಕೊಂಡಿದ್ದ ಇನ್ಸುಲಿನ್ ಕಾರ್ಯವೈಖರಿಯ ಬಗ್ಗೆ ನಾಗಲೋಟಿಮಠರಿಗೆ ನಂಬಿಕೆ ಬಂದಿರಲಿಲ್ಲ. ಹೆಚ್ಚು ಹೆಚ್ಚು ಹೋಳಿಗೆ ಸಿಹಿ ತಿಂಡಿಗಳನ್ನು ತಿಂದು ತಮ್ಮದೇ ಆದ ರೀತಿಯಲ್ಲಿ ತಮ್ಮ ದೇಹದ ಸಕ್ಕರೆಯನ್ನು ನಿಯಂತ್ರಣ ಮಾಡಿಕೊಳ್ಳಲು ಪ್ರಯತ್ನಪಡುತ್ತಿದ್ದರು ಎಂದು ತಿಳಿದುಬರುತ್ತದೆ. ಅದು ವಿಫಲವಾಗಿ ಅವರು ಕೋಮಾಗೆ ಹೋಗುವ ಸಂಭವ ಬಂತು. ಅದು ಅವರ ಪ್ರಾಣಕ್ಕೂ ತೊಂದರೆಯಾಯಿತು. ಅಕ್ಕನ ವಚನದ ಬಗ್ಗೆ ತಾವೇ ಬರೆದಿದ್ದರೂ ಅದನ್ನು ಅರ್ಥಮಾಡಿಕೊಳ್ಳದೆ ಸೋತರು. ಇಲ್ಲಿ ನಾವು ತಿಳಿಯಬೇಕಾದ್ದು ಇಷ್ಟೇ ನಾವು ಹಿತವಾಗಿ, ಮಿತವಾಗಿ, ನೈಸರ್ಗಿಕವಾಗಿ ಬಂದ ಜೀವನ ಶೈಲಿಯನ್ನು ರೂಡಿಸಿಕೊಳ್ಳಬೇಕು. ಈ ಕಾರಣದಿಂದಲೇ ನಮ್ಮ ಪೂರ್ವಜರು ಹೆಚ್ಚು ಹೆಚ್ಚು ವರ್ಷಗಳ ಕಾಲ ಆಸ್ಪತ್ರೆಯ ಮುಖವನ್ನೇ ನೋಡದೆ ಬದುಕಿದ್ದರು.
ಪ್ರತಿದಿನ ಸೂರ್ಯೋದಯವನ್ನೋ, ಸೂರ್ಯಾಸ್ತವನ್ನೋ, ಒಂದು ಉದ್ದನೆಯ ವಾಯುವಿಹಾರವನ್ನು ಗೆಳೆಯ, ಗೆಳತಿಯರ ಜೊತೆಯೋ, ಬಾಳ ಸಂಗಾತಿಯ ಜೊತೆಗೋ ಕುಟುಂಬದವರ ಜೊತೆಯೋ ಮಾಡಿದರೆ ಹಾಗೆ ವರ್ಷಕ್ಕೆ ಮೂರೂ ನಾಲ್ಕು ಬಾರಿ ಕೊಡಚಾದ್ರಿ, ಮುಳ್ಳಯ್ಯನಗಿರಿ, ಕುಮಾರ ಪರ್ವತವನ್ನೋ ಏರಿ ಆಗದಿದ್ದರೆ ನಾಟ್ಯರಾಣಿಯ ಶಿವಗಂಗೆ ಬೆಟ್ಟವೋ, ಟಿಪ್ಪುವಿನ ನಂದಿ ಬೆಟ್ಟವೋ ಕೊನೆಗೆ ಕಿಷ್ಕಿಂದೆಯ ಬೆಟ್ಟ,ಅತ್ತಿಮಬ್ಬೆಯ ಕೋಪಾಣಚಲ ಅಥವಾ ಚಾಮುಂಡಿ ಬೆಟ್ಟವನ್ನಾದರೂ ಏರಿದರೆ ಬದುಕು ಎಷ್ಟು ಸುಂದರವಾಗಿರುತ್ತದೆ ಅಲ್ಲವೇ ?
- ಪ್ರಸನ್ನ ಸಂತೇಕಡೂರು – (ವಿಜ್ಞಾನಿಯಾಗಿ ಮ್ಯಾಸ್ಸಿ ಕ್ಯಾನ್ಸರ್ ಸೆಂಟರಿನಿಂದ ಎಕ್ಸೆಲೆನ್ಸ್ ಇನ್ ಕ್ಯಾನ್ಸರ್ ರಿಸರ್ಚ್ ಅವಾರ್ಡ್ ಪಡೆದಿದ್ದಾರೆ, ಸಾಹಿತಿಯಾಗಿ ವಿಜಯ ಕರ್ನಾಟಕ ಪತ್ರಿಕೆಯ 2021ನೇ ಅವ್ವ ಪ್ರಶಸ್ತಿ ಪುರಸ್ಕೃತರು ಆಗಿದ್ದಾರೆ) ಮೈಸೂರ
