ಚಿತ್ರದುರ್ಗ ಸರ್ಕಾರಿ ಕಾಲೇಜಿನ ಮುಖ್ಯಸ್ಥರಾಗಿರುವ ಡಾ.ಲೋಕೇಶ್ ಅಗಸನಕಟ್ಟೆಯವರು ಕಥೆ, ಕಾವ್ಯ, ವಿಮರ್ಶೆ ಹಾಗೂ ನಾಟಕ ರಚನೆಯಲ್ಲಿ ಹೆಸರು ಮಾಡಿದ್ದಾರೆ. ಅವರ ‘ಸಾಂದರ್ಭಿಕ’ ಕೃತಿಯ ಕುರಿತು ಮಾಲತಿ ರಾಮಕೃಷ್ಣ ಭಟ್ ಅವರು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಕೃತಿ : ಸಾಂದರ್ಭಿಕ.
ಲೇಖಕರು: ಡಾ. ಲೋಕೇಶ್ ಅಗಸನಕಟ್ಟೆ.
ಸಿವಿಜಿ ಇಂಡಿಯಾ ಬೆಂಗಳೂರು.
ಮುದ್ರಣದ ವರ್ಷ: ೨೦೧೪.
ಪುಟಗಳು: ೧೮೦.
ಬೆಲೆ: ರೂ. ೧೫೦.
ಚಿತ್ರದುರ್ಗ ಸರ್ಕಾರಿ ಕಾಲೇಜಿನ ಮುಖ್ಯಸ್ಥರಾಗಿರುವ ಡಾ.ಲೋಕೇಶ್ ಅಗಸನಕಟ್ಟೆಯವರು ಕಥೆ, ಕಾವ್ಯ, ವಿಮರ್ಶೆ ಹಾಗೂ ನಾಟಕ ರಚನೆಯಲ್ಲಿ ಹೆಸರು ಮಾಡಿದ್ದಾರೆ. ಮೂಲ ದಾವಣಗೆರೆ ತಾಲ್ಲೂಕಿನ ಅಗಸನಕಟ್ಟೆ ಗ್ರಾಮದ ಇವರಿಗೆ ೨೦೦೪ ರಲ್ಲಿ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಹಾಗೂ ೨೦೦୭ ರಲ್ಲಿ ಛಂದ ಪುಸ್ತಕ ಪ್ರಶಸ್ತಿಯು ಲಭಿಸಿದೆ.
ಕನ್ನಡ ಸಾರಸ್ವತ ಲೋಕ ಬಹು ದೊಡ್ಡ ಪರಂಪರೆಯನ್ನು ಹೊಂದಿದೆ. ಈ ನಿಟ್ಟಿನಲ್ಲಿ ಸಿವಿಜಿ ಇಂಡಿಯಾ ಬೆಂಗಳೂರು ಸಂಸ್ಥೆಯು ಕನ್ನಡದ ಅಮೃತ ಬಳ್ಳಿ ಎನ್ನುವ ಹೆಸರಿನಲ್ಲಿ ೨೦ ವರ್ಷಗಳಲ್ಲಿ ೧೦೦೦ ವೈವಿಧ್ಯಮಯ ಪುಸ್ತಕ ಪ್ರಕಟಣೆಯ ಮೂಲಕ ಕನ್ನಡ ಸೇವೆ ನಡೆಸುತ್ತಿದೆ. ಅದರ ಒಂದು ಭಾಗವಾದ ಪ್ರಸ್ತುತ ಈ ಕೃತಿಯಲ್ಲಿ ಕಾವ್ಯ ಕಥನ, ಸಂಸ್ಕೃತಿ ಕುರಿತು ಡಾ. ಲೋಕೇಶ್ ಅವರ ಹಲವು ಬರಹಗಳಿವೆ.

ಇದರಲ್ಲಿ ಮೂರು ರೀತಿ ವಿಂಗಡಿಸಿದ್ದಾರೆ.
ಭಾಗ- ೧ : ಕಾವ್ಯ ಸಂದರ್ಭಗಳನ್ನು ಕಾಣುತ್ತೇವೆ. ಗೋಪಾಲ ಕೃಷ್ಣ ಅಡಿಗರು ನಿರ್ಮಿಸಿದ ಹಲವು ಕಾವ್ಯ ಪ್ರತಿಮೆಗಳಲ್ಲಿ ಒಂದಾದ ‘ಮೋಹನ ಮುರಲಿ’ ಎನ್ನುವ ಜನಪ್ರಿಯ ಹಾಡಿನ ತಾತ್ವಿಕತೆಯ ಬಗ್ಗೆ ಬಣ್ಣಿಸಿದ್ದಾರೆ. ಅದರ ಜೊತೆಗೆ ಅಡಿಗರ ಇನ್ನೊಂದು ಸುಪ್ರಸಿದ್ಧ ಕವಿತೆ ‘ಹಿಮಗಿರಿಯ ಕಂದರ’ ವನ್ನೂ ಒಟ್ಟಿಗೇ ತುಲನೆ ಮಾಡಿ ಮೋಹನ ಮುರಲಿ- ಹಿಮಗಿರಿಯ ಜುಗಲ್ ಬಂದಿ ಎಂದಿದ್ದಾರೆ.
ಕವಿ ಚಂದ್ರಶೇಖರ ಕಂಬಾರರ ಕಾವ್ಯದಲ್ಲಿಹೊರಡುವ ಭಾವಗಳು, ಅನುಭವಗಳು ವಾಸ್ತವ ಜಗತ್ತಿಗೆ ತೀರಾ ಸಮೀಪವಾದವುಗಳು. ಅವರ ಹೇಳತೇನಿ ಕೇಳಾ, ಗಂಗಾಮಾಯಿ, ಸಿಂಗಾರೆವ್ವ ಮುಂತಾದ ಕವಿತೆಗಳಲ್ಲಿಯ ಸಂಭ್ರಮ, ವಿಷಾದಗಳ ವೈಭವವನ್ನು ವಿವರಿಸಿದ್ದಾರೆ.
ಜಿ.ಎಸ್. ಶಿವರುದ್ರಪ್ಪನವರ ಕವಿತೆಗಳು ಬಾಳುವ ಹಂಬಲಕ್ಕೆ ಬೇಕಾದ ಆತ್ಮ ವಿಶ್ವಾಸದ ಧ್ವನಿಯಾಗಿ ನಿಲ್ಲ ಬಲ್ಲ ಲೋಕ ಕಾವ್ಯಗಳು ಎಂದು ಹೊಗಳಿದ್ದಾರೆ. ಭಾವನಾತ್ಮಕತೆ ಹಾಗೂ ವೈಚಾರಿಕತೆಯನ್ನು ಮೇಳೈಸಿ ಕೊಂಡಿರುವ ‘ಎದೆ ತುಂಬಿ ಹಾಡಿದೆನು’ ‘ಹಣತೆ ಹಚ್ಚುತ್ತೇನೆ ನಾನೂ’ ಯಾವ ಹಾಡು ಹಾಡಲಿ? ‘ಪ್ರೀತಿ ಇಲ್ಲದ ಮೇಲೆ ಹೂವು ಅರಳೀತು ಹೇಗೆ? ಮುಂತಾದ ವಿಶಿಷ್ಟ ಕವಿತೆಗಳನ್ನು ಉದಾಹರಿಸಿದ್ದಾರೆ.

ಗೃಹಿಣಿಯಾಗಿದ್ದ ಬೆಳಗೆರೆ ಜಾನಕಮ್ಮನವರ ಕವಿತೆಗಳಲ್ಲಿನ ಸಂವೇದನೆಯ ಸ್ವರೂಪವು ಉಳಿದ ಸಮಕಾಲೀನ ಕವಿಗಳಿಗಿಂತ ಭಿನ್ನವಾಗಿದೆ.
ಉದಾ:
ಏರುವುದು- ಹಾರುವುದು
ಬೇಡೆನಗೆ ಊರುಗೋಲಿನ ಪಯಣ ಸಾಕು ಸಾಕು
ಎನ್ನುವ ಅವರ ಆಶು ಕವಿತ್ವದ ಪ್ರತಿಭೆ ಸಂಸಾರಬಂಧನ, ಪತಿಯ ನಿಂದನೆ ಇವೆಲ್ಲವುಗಳಿಂದ ಆಕೆ ನೊಂದು ಹೋದಂತೆ ತೋರುತ್ತದೆ ಎಂದಿದ್ದಾರೆ.
ಕವಿತೆಯನ್ನು ಕಟ್ಟುವ ವ್ಯವಧಾನ, ಧ್ಯಾನ, ಬದ್ಧತೆ ಮತ್ತು ಪ್ರಾಮಾಣಿಕತೆ ಇರುವ ಲಂಕೇಶರ ‘ಅವ್ವ’ ಕವಿತೆ ಮತ್ತು ವಿಷ್ಣು ನಾಯ್ಕರ ‘ನೋವು ಪ್ರೀತಿಯ ಪ್ರಶ್ನೆ’ ಇನ್ನೂ ಮುಂತಾದ ಕವಿಕಾವ್ಯದ ಬಗ್ಗೆ ಇಲ್ಲಿ ವಿಶ್ಲೇಷಿಸಿದ್ದಾರೆ.
ಭಾಗ-೨ ರಲ್ಲಿ ಕಥನ ಸಂದರ್ಭವಿದೆ.
ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಗೆ ಭಾಜನ ವಾಗಿರುವ ಸಾಹಿತಿ ಕುಂ.ವೀರಭದ್ರಪ್ಪನವರ’ ಅರಮನೆ’ ಮತ್ತು ಶಾಮಣ್ಣ, ಕಾದಂಬರಿಯನ್ನು ಸುದೀರ್ಘವಾಗಿ ಸೊಗಸಾಗಿ ವಿಶ್ಲೇಷಣೆ ಮಾಡಿದ್ದಾರೆ.
ಭಾಗ-೩ ರಲ್ಲಿ ಸಂಕೀರ್ಣ ಸಂದರ್ಭವಿದೆ.
ವಿಚಾರ ಸಾಹಿತ್ಯದ ನೆಲೆಯಲ್ಲಿ ಅಂಬೇಡ್ಕರ್ ರ ಪ್ರಸ್ತುತತೆ ಬಂಧನ ಮತ್ತು ಗುಲಾಮಗಿರಿಯ ಬಿಡುಗಡೆಯ ಬಗ್ಗೆ, ರಂಗಭೂಮಿಯ ಸಕ್ರೀಯ ಪಾತ್ರಧಾರಿ ಕೆ. ಮರುಳ ಸಿದ್ಧಪ್ಪ ನವರ ಕೊಡುಗೆ, ನಾಗತಿಹಳ್ಳಿ ಚಂದ್ರಶೇಖರ್ ಅವರು ತಮ್ಮೂರನ್ನು ಸರ್ವಾಂಗೀಣ ಪ್ರಗತಿಯನ್ನಾಗಿಸಿದ್ದು,ಇಂದಿನ ವಿದ್ಯಾರ್ಥಿಗಳ ಜವಾಬ್ದಾರಿ ಏನು?.. ಇಂತಹ ವಿಷಯಾಧಾರಿತ ಲೇಖನಗಳಿವೆ. ಸಾಂದರ್ಭಿಕ ಎನ್ನುವ ಶೀರ್ಷಿಕೆ ಹೊಂದಲು ಯೋಗ್ಯವಾದ, ಸತ್ವಭರಿತ ಒಂದು ಗಂಭೀರ ಓದಿನ ಪುಸ್ತಕ ಇದಾಗಿದೆ.
ಮಾಲತಿ ರಾಮಕೃಷ್ಣ ಭಟ್ ಅವರು ಸಾಕಷ್ಟು ಪುಸ್ತಕಗಳನ್ನು ಓದಿ ಓದುಗರಿಗೆ ಪರಿಚಯವನ್ನು ಮಾಡಿಕೊಟ್ಟಿದ್ದಾರೆ. ಅವರು ಮಾಡಿದ ಪುಸ್ತಕಗಳ ಪರಿಚಯ :
- “ಹಸುರು ಹೊನ್ನು” ಕೃತಿ ಪರಿಚಯ
- ‘ಪ್ರೀತಿ ಮಮತೆಗಳ ನಡುವೆ’ ಕೃತಿ ಪರಿಚಯ
- ‘ಮೀನಾಕ್ಷಿಯ ಸೌಗಂಧ’ ಕೃತಿ ಪರಿಚಯ
- ‘ಬೇಲಿಯ ಹೂಗಳು’ ಪುಸ್ತಕ ಅಪರಿಚಯ
- ‘ಸಿಂಧೂರ ರೇಖೆಯ ಮಿಂಚು’ ಕೃತಿ ಪರಿಚಯ
- ‘ಇನ್ನೊಂದು ಸಂಪುಟ’ ಕೃತಿ ಪರಿಚಯ
- ‘ಬರೀ ಬೆಳಗಲ್ಲೊ ಅಣ್ಣಾ’ ಕೃತಿ
- ‘ಪಾಂಚಾಲಿಯಾಗಲಾರೆ’ ಕೃತಿ ಪರಿಚಯ
- ‘ಕನ್ನಡಿಗರ ಕರ್ಮ ಕಥೆ’ ಕೃತಿ ಪರಿಚಯ
- ‘ಅಗಮ್ಯ’ ಕೃತಿ ಪರಿಚಯ
- ‘ಯಾವ ನಾಳೆಯೂ ನಮ್ಮದಲ್ಲ’ ಕೃತಿ ಪರಿಚಯ
- ‘ದೀಪದ ಮಲ್ಲಿಯರು’ ಕೃತಿ ಪರಿಚಯ
- ‘ಕಾಡು ತಿಳಿಸಿದ ಸತ್ಯಗಳು’ ಕೃತಿ ಪರಿಚಯ
- ‘ಕೃಷಿ ಬದುಕಿನ ಹೆಜ್ಜೆ ಸಾಲು’ ಕೃತಿ ಪರಿಚಯ
- ‘ಒಲ್ಲೆಯೆನದಿರು ನಮ್ಮದಲ್ಲದ ನಾಳೆಗಳ’ ಕೃತಿ ಪರಿಚಯ
- ‘ಗಾದೆ ಮಾತಿನ ಗುಟ್ಟು’ ಕೃತಿ ಪರಿಚಯ
- ‘ಕಿಚ್ಚಿಲ್ಲದ ಬೇಗೆ’ ಕೃತಿ ಪರಿಚಯ
- ‘ಅಗಸ್ತ್ಯ’ ಕೃತಿ ಪರಿಚಯ
- ಮಾಲತಿ ರಾಮಕೃಷ್ಣ ಭಟ್
