‘ಅಗಮ್ಯ’ ಎಂದರೆ ‘ಬುದ್ಧಿಗೆಟುಕದ್ದು’ ಎಂಬ ಅರ್ಥವಿದೆ. ಡಾ.ಕೆ.ಸೌಭಾಗ್ಯವತಿ ಅವರ ‘ಅಗಮ್ಯ’ ಕೃತಿಯ ಕುರಿತು ಮಾಲತಿ ರಾಮಕೃಷ್ಣ ಭಟ್ ಅವರು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಕೃತಿ : ಅಗಮ್ಯ
ಲೇಖಕರು: ಡಾ.ಕೆ. ಸೌಭಾಗ್ಯವತಿ
ಮುದ್ರಣದ ವರ್ಷ:೨೦೦೫
ಪುಟಗಳು : ೧೨೮
ಬೆಲೆ: ೯೫.00 ರೂ.
ಪರಿಚಯ: ಉನ್ನತ ಶಿಕ್ಷಣದಲ್ಲಿ ಜಾನಪದವನ್ನು ಅಭ್ಯಾಸ ಮಾಡಿರುವ ಲೇಖಕಿ ಡಾ.ಕೆ.ಸೌಭಾಗ್ಯವತಿಯವರು ಮೈಸೂರು ವಿಶ್ವ ವಿದ್ಯಾಲಯದ ಸಂಜೆ ಕಾಲೇಜಿನಲ್ಲಿ ಉಪನ್ಯಾಸಕರು. ಅನೇಕ ಕಥೆ ಹಾಗೂ ಕಾದಂಬರಿಗಳನ್ನು ಇವರು ಬರೆದಿದ್ದಾರೆ.
ಅಗಮ್ಯ ಎನ್ನುವ ಶೀರ್ಷಿಕೆಯುಳ್ಳ ಈ ಪುಸ್ತಕದಲ್ಲಿ ವೈವಿಧ್ಯಮಯ ಲೇಖನಗಳಿದ್ದು ಬಹುತೇಕ ಕೆಲವು ಪತ್ರಿಕೆಗಳಲ್ಲಿ ಪ್ರಕಟವಾಗಿರುವಂತವು. ಮನುಷ್ಯನ ಸಂಕೀರ್ಣ ಬದುಕಿನ ಹಾಗೂ ಸಮಾಜದಲ್ಲಿ ನಡೆಯುವ ಅನ್ಯಾಯಗಳ ಕುರಿತ ಚಿಂತನೆಯುಳ್ಳ ಲೇಖನಗಳು ಇಲ್ಲಿವೆ. ‘ಅಗಮ್ಯ’ ಎಂದರೆ ‘ಬುದ್ಧಿಗೆಟುಕದ್ದು’ ಎಂಬ ಅರ್ಥವಿದೆ.
ಒಂದು ಘಟನೆ…ಒಬ್ಬ ಎಂಜಿನಿಯರ್ ವರನಿಗೆ ಮಗಳನ್ನು ಕೊಟ್ಟು ಮದುವೆ ಮಾಡಿದ್ದರು. ಆ ವ್ಯಕ್ತಿಗೆ ಮಗಳಿಗಿಂತ ಅತ್ತೆಯೇ ಹೆಚ್ಚು ಇಷ್ಟವಾಗಿ, ಅವರಿಬ್ಬರ ನಡುವೆ ಅನೇಕ ವರ್ಷಕಾಲ ಅನೈತಿಕ ಸಂಬಂಧ ಮುಂದುವರೆದಿತ್ತು! ಮಗಳಿಗೆ ಈ ಸಂಗತಿ ತಿಳಿದು, ಬಿಸಿ ತುಪ್ಪ ನುಂಗಿದಂತಾಗಿ ತನ್ನ ತಾಯಿ ಮತ್ತು ಗಂಡನಿಗೆ ಏನು ಮಾಡಲಾಗದೇ ತಾನೇ ಆತ್ಮಹತ್ಯೆ ಮಾಡಿ ಕೊಂಡಳಂತೆ!.

ಮತ್ತೊಂದು ಪ್ರಕರಣದಲ್ಲಿ ಸಂಪ್ರದಾಯಸ್ಥ ಕುಟುಂಬದಲ್ಲಿ ಒಡ ಹುಟ್ಟಿದ ಅಣ್ಣನೇ ತನ್ನ ತಂಗಿಯನ್ನು ಬಲಾತ್ಕರಿಸಿ ಶೋಷಿಸುತ್ತಿದ್ದ! . ಯಾರಿಗಾದರೂ ಹೇಳಿದರೆ ಕೊಲ್ಲುವುದಾಗಿ ಬೆದರಿಸುತ್ತಿದ್ದ!!. ವಿಷಯ ಗೊತ್ತಾದ ಮೇಲೆ ಹೆತ್ತ ತಾಯಿ ಹುಚ್ಚಿಯಾಗಿ ನಿಮ್ಹಾನ್ಸ್ ಸೇರಿದಳು! ಕಾಮವೆಂಬುದು ಕಲಿಯುಗದಲ್ಲಿ ಅಟ್ಟಹಾಸ ಗೈಯುತ್ತಾ ಅನಭಿಷಿಕ್ತ ದೊರೆಯಂತೆ ವಿಜೃಂಭಿಸುತ್ತಿದೆ. ಇಂತಹವರನ್ನು ಶಿಕ್ಷಿಸುವುದು ಹೇಗೆ?…
ಅಗಮ್ಯ ಸಂಬಂಧಗಳು ಎನ್ನುವ ಲೇಖನದಲ್ಲಿ ಇಂತಹ ಸಮಾಜ ಬಾಹಿರ ಹಾಗೂ ನಿಷೇಧಿತ ಸಂಬಂಧಗಳ ಕುರಿತು ಲೇಖಕಿ ವಿವರಿಸಿದ್ದಾರೆ. ‘ಆಂತರ್ಯದ ಆರ್ತನಾದ’ ಎನ್ನುವ ಬರಹದಲ್ಲಿ ಜೈಲು ಶಿಕ್ಷೆಯನ್ನು ಅನುಭವಿಸುತ್ತಿರುವ ಮಹಿಳೆಯರು ಹಾಗೂ ಪುರುಷರ ಮಾನಸಿಕ ಸ್ಥಿತಿ ಗತಿಯ ಬಗ್ಗೆ ಅವರೊಂದಿಗೆ ನಡೆಸಿದ ಪ್ರಶ್ನೋತ್ತರಗಳ ಮೂಲಕ ತಿಳಿಸಿದ್ದಾರೆ.
ಮದುವೆ ಎನ್ನುವುದು ಪವಿತ್ರವಾದ ಸಂಬಂಧ. ಎಲ್ಲಾ ಅತ್ತೆ ನಾದಿನಿಯರೂ ಕೆಟ್ಟವರಾಗಿರುವುದಿಲ್ಲ. ತವರು ಮನೆಯವರು ಮಗಳಿಗೆ ಬುದ್ಧಿ ಹೇಳಿ ಕುಟುಂಬವನ್ನು ಒಂದುಗೂಡಿಸ ಬೇಕೆ ಹೊರತೂ, ಅದು ಒಡೆಯಲು ಬಿಡಬಾರದು. ಹೆಣ್ಣು ವಿವೇಚನೆಯಿಂದ ಆಲೋಚಿಸಿ ಮುನ್ನಡೆಯ ಬೇಕು. ಆಗ ದುರಂತ ತಪ್ಪುತ್ತದೆ. ಎಲ್ಲವನ್ನೂ ನಾವು ದುಡ್ಡಿನಿಂದ ಅಳೆಯಲಾಗುವುದಿಲ್ಲ.
ವ್ಯಕ್ತಿ ವ್ಯಕ್ತಿಯಲ್ಲಿನ ಪ್ರೀತಿಯಿಂದ ನಾವು ಅಂತಹ ಅನಾಥ ಪ್ರಜ್ಞೆಯನ್ನು ತಾತ್ಕಾಲಿಕವಾಗಿ ದೂರ ಮಾಡ ಬಹುದೇನೋ… ಎಂದಿದ್ದಾರೆ.
ನಮ್ಮ ಇಂದಿನ ಸಮಾಜ ಹೆದರಿ ನಡೆವವರನ್ನು ಹೆದರಿಸಿ, ತಿರುಗಿ ಬಿದ್ದವರನ್ನು ಗೌರವದಿಂದ ನಡೆಸಿ ಕೊಳ್ಳುತ್ತದೆ! ಎನ್ನುವ ಬಗ್ಗೆಯೂ ಬರಹವಿಲ್ಲಿದೆ. ಬಾಲ ಕಾರ್ಮಿಕರಾಗಿ ದುಡಿವ ಮಕ್ಕಳ ಸೂಕ್ಷ್ಮ ಮನಸ್ಸು ಪಾಶವೀಕೃತ್ಯಗಳನ್ನು ಕಂಡು ಘಾಸಿಗೊಳ್ಳುತ್ತದೆ. ಪ್ರೀತಿ ಮತ್ತು ಕರುಣೆಯಿಂದ ಅವರನ್ನು ನೋಡಿ ಕೊಂಡಾಗ ಅದು ಪರಿಣಾಮ ಬೀರುತ್ತದೆ. ನಾಡಿನ ಮುಂದಿನ ಸತ್ಪ್ರಜೆಗಳನ್ನು ನಾವೇ ರೂಪಿಸಬೇಕಾಗಿದೆ.

ಬೀದಿಯಲ್ಲಿ ಹೊಟ್ಟೆಪಾಡಿಗಾಗಿ ‘ದೊಂಬರಾಟ’ ಮಾಡುವ ವೇಷಧಾರಿಗಳು ಕಬ್ಬಿಣದ ಬಳೆಗಳಿಂದ ದೇಹವನ್ನು ದಂಡಿಸುವುದು, ಸರಳನ್ನು ಗಂಟಲಿಗೆ ಚುಚ್ಚಿಕೊಂಡು ಅದನ್ನು ಬೆಂಡಾಗಿಸುವುದು ಮುಂತಾದ ಶ್ರಮ ಹಾಗೂ ಅಪಾಯಕಾರಿ ಆಟ ಮಾಡುವುದು ವ್ಯಥೆ ತರಿಸುತ್ತದೆ ಎನ್ನುತ್ತಾರೆ.
ಕಿರೀಟವಿಲ್ಲದಿದ್ದರೆ ಯಾವ ರಾಜನೇ ಆಗಲಿ ಪರಿಪೂರ್ಣ ಎನ್ನಿಸಲಾರ. ಆದ್ದರಿಂದ ಕೇವಲ ಪದವಿಯಿಂದ ಬದುಕನ್ನು ನಡೆಸಲು ಸಾಧ್ಯವಿಲ್ಲ. ಮನುಷ್ಯನಿಗೆ ಒಳ್ಳೆಯ ಸಂಸ್ಕಾರ ಬೇಕು.ಕೆಲವು ಗ್ರಾಮೀಣ ಭಾಗದ ಹಿರಿಯರಲ್ಲಿರುವ ಅಗಾಧ ಜಾನಪದ ತಿಳುವಳಿಕೆಯು ಯಾವ ಓದಿನಲ್ಲೂ ಕಾಣ ಸಿಗುವುದಿಲ್ಲ. ಓದಿಗಿಂತ ದೊಡ್ಡ ಸಾಮಾನ್ಯ ಜ್ಞಾನವೇನೆಂದರೆ ಒಬ್ಬರ ಮನಸ್ಸನ್ನು ನೋಯಿಸ ಬಾರದೆನ್ನುವ ಮನೋಭಾವ. ಇದು ನಮ್ಮಲ್ಲಿ ಮತ್ತು ಪ್ರತಿಯೊಬ್ಬರಲ್ಲೂ ಬೆಳೆದು ಬರಬೇಕು ಎಂದು ಅಭಿಪ್ರಾಯ ಪಡುವ ಇವರ ಎಲ್ಲಾ ಬರಹಗಳೂ ಸೊಗಸಾಗಿವೆ.
ಮಾಲತಿ ರಾಮಕೃಷ್ಣ ಭಟ್ ಅವರು ಸಾಕಷ್ಟು ಪುಸ್ತಕಗಳನ್ನು ಓದಿ ಓದುಗರಿಗೆ ಪರಿಚಯವನ್ನು ಮಾಡಿಕೊಟ್ಟಿದ್ದಾರೆ. ಅವರು ಮಾಡಿದ ಪುಸ್ತಕಗಳ ಪರಿಚಯ :
- “ಹಸುರು ಹೊನ್ನು” ಕೃತಿ ಪರಿಚಯ
- ‘ಪ್ರೀತಿ ಮಮತೆಗಳ ನಡುವೆ’ ಕೃತಿ ಪರಿಚಯ
- ‘ಮೀನಾಕ್ಷಿಯ ಸೌಗಂಧ’ ಕೃತಿ ಪರಿಚಯ
- ‘ಬೇಲಿಯ ಹೂಗಳು’ ಪುಸ್ತಕ ಅಪರಿಚಯ
- ‘ಸಿಂಧೂರ ರೇಖೆಯ ಮಿಂಚು’ ಕೃತಿ ಪರಿಚಯ
- ‘ಇನ್ನೊಂದು ಸಂಪುಟ’ ಕೃತಿ ಪರಿಚಯ
- ‘ಬರೀ ಬೆಳಗಲ್ಲೊ ಅಣ್ಣಾ’ ಕೃತಿ
- ‘ಪಾಂಚಾಲಿಯಾಗಲಾರೆ’ ಕೃತಿ ಪರಿಚಯ
- ‘ಕನ್ನಡಿಗರ ಕರ್ಮ ಕಥೆ’ ಕೃತಿ ಪರಿಚಯ
- ಮಾಲತಿ ರಾಮಕೃಷ್ಣ ಭಟ್
