‘ಯಾವ ನಾಳೆಯೂ ನಮ್ಮದಲ್ಲ’ ಕೃತಿ ಪರಿಚಯ

ಹಿರಿಯ ಲೇಖಕಿ ಹಾಗೂ ಚಿತ್ರಗಾರ್ತಿ ಉಷಾ ಪಿ. ರೈ ಯವರ ಆತ್ಮಕಥನದ ‘ಯಾವ ನಾಳೆಯೂ ನಮ್ಮದಲ್ಲ’ ಪುಸ್ತಕವು ನಿರಾಶೆಯಿಂದ ಸೋತ ಎಷ್ಟೋ ಜನರಿಗೆ ಆತ್ಮವಿಶ್ವಾಸವನ್ನು ತುಂಬುವಂತಿದೆ. ಕಷ್ಟಗಳ ನಡುವೆಯೂ ಜೀವನ್ಮುಖಿಯಾಗಿ ನಗು ನಗುತ್ತಾ ಹೋರಾಡುವ ಈ ಲೇಖಕಿಯವರ ಬದುಕು ನೊಂದವರಿಗೆ ಮಾರ್ಗದರ್ಶನ ಹಾಗೂ ಸ್ಫೂರ್ತಿ ನೀಡುವಂತಿದೆ. ಕೃತಿಯ ಕುರಿತು ಮಾಲತಿ ರಾಮಕೃಷ್ಣ ಭಟ್ ಅವರು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಕೃತಿ : ಯಾವ ನಾಳೆಯೂ ನಮ್ಮದಲ್ಲ.
ಲೇಖಕರು: ಉಷಾ ಪಿ. ರೈ.
ಪ್ರಿಯದರ್ಶಿನಿ ಪ್ರಕಾಶನ ಬೆಂಗಳೂರು.
ಮುದ್ರಣ  ವರ್ಷ: ೨೦೧೧.
ಪುಟಗಳು: ೩೭೨.
ಬೆಲೆ: ರೂ. ೨೦೦.

ಭೂತಕಾಲದ ಅನುಭವಗಳನ್ನು ವರ್ತಮಾನಕ್ಕೆ ಹೊತ್ತು ತರುವುದರಲ್ಲಿ ಆತ್ಮಕಥೆಗಳ ಪಾತ್ರ ದೊಡ್ಡದು. ವರ್ತಮಾನಕ್ಕೆ ಬಲ ನೀಡುವುದು ಭೂತಕಾಲದ ಅನುಭವಗಳೇ. ಅರವತ್ತರ ವಯಸ್ಸಾಗಿದ್ದರೂ ಜೀವನದ ಏರು- ಪೇರುಗಳು ಹಾಗೂ ಅನಾರೋಗ್ಯದಲ್ಲೂ ತಮ್ಮ ಹುಮ್ಮಸ್ಸು ಕಡಿಮೆಯಾಗಿರಲಿಲ್ಲ. ಆದರೆ ಒಂದು ಭೀಕರ ರಸ್ತೆ ಅಪಘಾತ ತಮ್ಮನ್ನು ದೈಹಿಕ ಹಾಗೂ ಮಾನಸಿಕ ಆಘಾತಕ್ಕೆ ದೂಡಿತ್ತು. ಎಂದು ಲೇಖಕಿ ತಮ್ಮ ಇಳಿ ವಯಸ್ಸಲ್ಲಿ ನಡೆದ ಈ ದುರ್ಘಟನೆಯನ್ನು ಹೇಳಿದ್ದಾರೆ.

ಕಾಲ ಯಾರನ್ನೂ ಕಾಯುವುದಿಲ್ಲ. ನಾಳೆ ಏನೆಂದು ಅರಿವಿಲ್ಲದೇ ನಾವು ಕಾಲದೊಡನೆ ಓಡುತ್ತೇವೆ. ಎಷ್ಟು ಬೇಗ ಬಾಲ್ಯ ಕಳೆದು ಹೋಗುತ್ತದೆ ಎನ್ನುತ್ತಾ ಲೇಖಕಿ ತಮ್ಮ ತಂದೆ ಹೊನ್ನಯ್ಯ ಶೆಟ್ಟಿ ಅವರು ‘ನವಯುಗ’ ಪತ್ರಿಕೆಯ ಸಂಪಾದಕರಾಗಿ, ಸಾಹಿತಿಯಾಗಿದ್ದರಿಂದ ತಮಗೂ ಬರವಣಿಗೆಗೆ ಸ್ಫೂರ್ತಿ ದೊರಕಿದ್ದು, ತಮ್ಮ ಉಡುಪಿಯ ಹುಟ್ಟೂರು,ಅಂದಿನ ಶಾಲಾದಿನಗಳು, ಆಡಿ ಬೆಳೆದ ಮನೆ, ಒಡ ಹುಟ್ಟಿದವರು,ತಂದೆ- ತಾಯಿ, ಇವೆಲ್ಲರ ಪ್ರಭಾವದಿಂದ ಹೇಗೆಲ್ಲಾ ತಮ್ಮ ವ್ಯಕ್ತಿತ್ವವನ್ನು ಮತ್ತು ಅಂತಃಶಕ್ತಿಯನ್ನು ಬೆಳೆಸಿಕೊಳ್ಳಲು ಸಹಾಯ ಮಾಡಿತು ಎನ್ನುವ ಕುರಿತು ಬಹಳಷ್ಟು ಬರೆದಿದ್ದಾರೆ.

ಮುಂದೆ ಕಾಲೇಜು ಮುಗಿದು ಬ್ಯಾಂಕ್ ಉದ್ಯೋಗದಲ್ಲಿದ್ದ ಸಾಹಿತಿಯೂ ಆಗಿದ್ದ ಪ್ರಭಾಕರ ರೈ ಯವರನ್ನು ಮದುವೆಯಾದ ಮೇಲೆಯೂ ಮನೆಯಲ್ಲಿ ಸಾಹಿತ್ಯಕ ವಾತಾವರಣವೇ ಇದ್ದದರಿಂದ ಸಹಕಾರಿಯಾಗಿತ್ತು. ವಿಜಯಾ ಬ್ಯಾಂಕಿನಲ್ಲಿ ಕೆಲಸಕ್ಕೆ ಸೇರಿದ ಮೇಲೆ ೧೯୭೪ ರಲ್ಲಿ ತಮ್ಮ ಪ್ರಥಮ ಕಾದಂಬರಿಯೊಂದು ಪ್ರಜಾಮತದಲ್ಲಿ ಪ್ರಕಟವಾದ ಸುದ್ದಿಯನ್ನಿಲ್ಲಿ ವಿವರಿಸಿದ್ದಾರೆ. ಇಬ್ಬರು ಗಂಡು ಮಕ್ಕಳ ಜವಾಬ್ದಾರಿ, ಉಬ್ಬಸದ ಸಮಸ್ಯೆ, ಮನೆ ಕೆಲಸ ಹಾಗೂ ಬ್ಯಾಂಕ್ ವೃತ್ತಿಯ ನಡುವೆಯೇ ಅವರು ಬರೆದು ಲೇಖಕಿಯಾಗಿ ಬೆಳೆದರು.

ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷರಾಗಿ ೫ ವರ್ಷ ಸೇವೆ ಸಲ್ಲಿಸಿದ ಅವಧಿಯಲ್ಲಿ ಮಾಡಿದ ಉತ್ತಮ ಕೆಲಸಗಳು, ಇವರಿಗೆ ದೊರೆತ ಅಸಂಖ್ಯ ಪ್ರಶಸ್ತಿ ಪುರಸ್ಕಾರಗಳು, ತಮ್ಮ ಅನೇಕ ಪ್ರವಾಸಗಳ ಜೊತೆ ಅಮೇರಿಕಾದ ಅಕ್ಕ ವಿಶ್ವಕನ್ನಡ ಸಮ್ಮೇಳನದಲ್ಲಿ ಭಾಗವಹಿಸಿದ ಕುರಿತ ವಿವರಗಳಿಲ್ಲಿವೆ. ೨೫ ವರ್ಷ ಬ್ಯಾಂಕ್ ವೃತ್ತಿ ನಿಭಾಯಿಸಿದ ಇವರು ವನಿತಾ ಸಹಾಯವಾಣಿ ಕೇಂದ್ರದಲ್ಲೂ ಸೇವೆ ಸಲ್ಲಿಸಿದ್ದಾರೆ.

ತಾವು ದುಡಿಯುವ ಮಹಿಳೆಯಾಗಿ, ಲೇಖಕಿಯಾಗಿ ಬೆಳೆದಿದ್ದು ಬೆಂಗಳೂರಿಗೆ ಬಂದ ನಂತರವೇ. ಬ್ಯಾಂಕಿನಲ್ಲಿ ಸಂಖ್ಯೆಗಳೊಡನೆ, ಮನೆಯಲ್ಲಿ ಅಕ್ಷರಗಳೊಡನೆ ಸಖ್ಯ ಹೆಚ್ಚಿ ಸಮಯಕ್ಕಾಗಿ ಪರದಾಡುವಂತಾಗುತ್ತಿತ್ತು. ಉಬ್ಬಸ ಬಿಡದೇ ಕಾಡುತ್ತಿದ್ದರೂ, ಜೊತೆಗೆ ಬರವಣಿಗೆಯೂ ಸಾಗುತ್ತಿತ್ತು. ತಮ್ಮ ೪೦ ನೆಯ ವಯಸ್ಸಿನಲ್ಲಿ ಕಾರು ಚಲಾಯಿಸುವುದು ಕಲಿತಿದ್ದು, ಇದರಿಂದಾಗಿ ಮಗನನ್ನು ಅವನು ಅಂತರಾಷ್ಟ್ರೀಯ ಈಜುಗಾರನಾಗಲು ಪೂರಕವಾಗಿ ಸಮಯಕ್ಕೆ ಸರಿಯಾಗಿ ಈಜು ತರಬೇತಿಗೆ ಕಳಿಸಲು ಸಹಾಯವಾಗಿದ್ದು, ಆಗೆಲ್ಲಾ ಅನುಪಮಾ ನಿರಂಜನ ಅವರು ತಮ್ಮನ್ನು ಹುರಿದುಂಬಿಸಿದ್ದನ್ನು ನೆನೆಸಿ ಕೊಂಡಿದ್ದಾರೆ.

ಕಾಸರಗೋಡಿಗೆ ವರ್ಗವಾದಾಗ ಮೆಟ್ಟಿಲಿನಿಂದ ಬಿದ್ದು ಕಾಲಿನ ಗಂಟು ಫ್ರಾಕ್ಚರ್ ಆಗಿ, ಆರು ವಾರಗಳ ಕಾಲ ನಡೆಯಲಾಗದೇ ಇದ್ದಾಗ ಪತಿ ಸಣ್ಣ ಮಗುವಿನಂತೆ ನೋಡಿ ಕೊಂಡಿದ್ದು, ಮುಂದಿನ ದೊಡ್ಡ ಅಪಘಾತ ಎದುರಿಸಲು ಅದೊಂದು ರಿಹರ್ಸಲ್ ಇದ್ದಿರ ಬಹುದೇ?… ಎಂದು ಅಭಿಪ್ರಾಯ ಪಡುತ್ತಾರೆ.

೫೫ ನೆಯ ವಯಸ್ಸಿನಲ್ಲಿ ಅವರಿಗೆ ಬೆಂಗಳೂರಿನಿಂದ ಹುಬ್ಬಳ್ಳಿಗೆ ವರ್ಗವಾದಾಗ ಕೆಲಸಕ್ಕೆ ವಿದಾಯ ಹೇಳ ಬೇಕಾಗಿ ಬಂತು. ಆಗ ಸ್ವಯಂ ನಿವೃತ್ತಿ ಯೋಜನೆ ಇರದ ಕಾರಣ ಸುಮಾರು ಹತ್ತು ಹನ್ನೆರಡು ಲಕ್ಷ ನಷ್ಟವಾಗಿದ್ದರೂ ಬೇಸರ ಗೊಂಡಿರಲಿಲ್ಲ. ದಂಪತಿಗಳಿಬ್ಬರೂ ನಿವೃತ್ತರಾಗಿ ಸಾಹಿತ್ಯ ಚಟುವಟಿಕೆಗಳಲ್ಲಿ ತೊಡಗಿಸಿ ಕೊಂಡಿದ್ದರು.

ಆದರೆ ವಿಧಿ ಕಾರು ಅಪಘಾತದ ದುರಂತದಲ್ಲಿ ತಮ್ಮ ಪತಿಗೆ ಹಾಗೂ ತಮಗೆ ತೀವೃ ಪೆಟ್ಟಾಗಿ ಆಸ್ಪತ್ರೆ ಸೇರುವಂತೆ ಮಾಡಿತ್ತು. ಏಳಲಾಗದೇ ಮಲಗಿ ಕಳೆಯಬೇಕಾದ ಆ ದಿನಗಳಲ್ಲಿ ಬೇಸರ ಕಳೆಯಲು ತಾವು ಚಿತ್ರಕಲೆಯನ್ನು ಅಭ್ಯಾಸ ಮಾಡಿದ್ದು,ಯಶಸ್ವಿ ಕಲಾವಿದೆಯಾಗಿ ರೂಪು ಗೊಂಡಿದ್ದು, ತಾವು ನೀಡಿದ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ , ತಮ್ಮ ಆಸಕ್ತಿಯ ಕ್ಷೇತ್ರವಾದ ಸಮಾಜ ಸೇವೆ ತಮ್ಮ ಪತಿಯ ಅನಾರೋಗ್ಯ ಹಾಗೂ ಇಬ್ಬರು ಗಂಡು ಮಕ್ಕಳ ವೃತ್ತಿ ಪ್ರವೃತ್ತಿಗಳು, ತಾವು ಮಲಗಿದ, ವಿಲ್ ಚೇರಲ್ಲಿ ಓಡಾಡುವ ದಿನಗಳಲ್ಲಿ ಯಾವ ಹೆಣ್ಣು ಮಕ್ಕಳಿಗೂ ಕಡಿಮೆ ಇಲ್ಲದಂತೆ ಗಂಡು ಮಕ್ಕಳು ತಮ್ಮನ್ನು ನೋಡಿ ಕೊಂಡಿದ್ದರ ಕುರಿತು ನೆನಪಿಸಿ ಕೊಂಡಿದ್ದಾರೆ.

ವೃತ್ತಿಯಲ್ಲಿನ ಒಳಿತು- ಕೆಡುಕಿನ ಸಂದರ್ಭಗಳು, ಮಗನ ದಾಂಪತ್ಯ ಜೀವನದ ಬಿರುಕು, ತಾಯಿಯಿಂದ ದೂರವಾದ ಚಿಕ್ಕ ಮೊಮ್ಮಗನನ್ನು ಪಾಲಿಸುವ ಜವಾಬ್ದಾರಿ, ಅದರಿಂದ ಮನೆಯಲ್ಲಿನ ಮಾನಸಿಕ ಒತ್ತಡವನ್ನು ಪ್ರಾಮಾಣಿಕವಾಗಿ ತೆರೆದಿಟ್ಟಿದ್ದಾರೆ. ಮಕ್ಕಳಿಗಾಗಿ ಜೀವ ತೇಯುವ ಹೆತ್ತವರಿಗೆ ಅವರ ಜೀವನ ಸರಿ ಇಲ್ಲದಿದ್ದಾಗ ಬೇಸರ ನೋವು ಸಹಜ. ಆದರೆ ಇವರು ಸಕಾರಾತ್ಮಕ ಮನೋಭಾವದಿಂದ ಬಂದ ಸಮಸ್ಯೆಗಳನ್ನು ಎದುರಿಸಿ ಮೊಮ್ಮಗನನ್ನು ನೋಡಿ ಕೊಳ್ಳುವ ಜವಾಬ್ದಾರಿ ಹೊತ್ತಿದ್ದು ಓದುವಾಗ ನೋವಾಗುತ್ತದೆ.

ಇಷ್ಟೆಲ್ಲಾ ಕಷ್ಟಗಳ ನಡುವೆಯೂ ಅವರ ಧನಾತ್ಮಕ ಚಿಂತನೆ, ಜೀವನ ಪ್ರೀತಿ ,ಕರ್ತವ್ಯದಿಂದ ವಿಮುಖವಾಗದಿರುವ ಧೃಡತೆ ಮತ್ತು ಹಸನ್ಮುಖ- ಸರಳತೆ ನಮಗೆ ವಿಸ್ಮಯವನ್ನುಂಟು ಮಾಡುತ್ತದೆ. ಪುಸ್ತಕ ಪ್ರೀತಿಯಿಂದ ಖರೀದಿಸಿದ ಪುಸ್ತಕಗಳಲ್ಲಿ ತುಂಬಾ ಇಷ್ಟವಾದದ್ದನ್ನು ಮಾತ್ರ ಇಟ್ಟುಕೊಂಡು ಉಳಿದಿದ್ದು ದಾನ ಮಾಡಿದ್ದು, ಏಕೆಂದರೆ ಈಗಿನ ಮಕ್ಕಳ ಜೀವನವೆಲ್ಲಾ ಇಂಗ್ಲಿಷ್ ಮಯ! ಕನ್ನಡ ಪುಸ್ತಕಗಳು ಯಾರಿಗೂ ಬೇಡ. !! ಎನ್ನುವ ಅವರ ಮಾತು ಸತ್ಯವೆನಿಸುತ್ತದೆ.

ಅಪಘಾತ ಮತ್ತು ಮಾನಸಿಕವಾಗಿ ಹಲವಾರು ನೋವುಗಳನ್ನು ಅನುಭವಿಸಿ, ಅದರಿಂದ ಮೇಲೆದ್ದು ಬಂದುದರಿಂದ ಮನಸ್ಸು ಇನ್ನಷ್ಟು ಗಟ್ಟಿಯಾಗಿದೆ. ಬದುಕುವಾಗ ನಾಳೆಯ ಬಗ್ಗೆ ಯೋಚಿಸದೇ ಈ ಕ್ಷಣಕ್ಕಾಗಿ ಬದುಕ ಬೇಕು. ಜೀವನ ಹಾಕುವ ಸವಾಲುಗಳಿಗೆ ಹೆದರದೆ, ಎದುರಿಸಿ ನಮಗಿಷ್ಟ ವಾದ ಪರ್ಯಾಯ ಮಾರ್ಗಗಳನ್ನು ಹುಡುಕ ಬೇಕು. ಎನ್ನುವುದಕ್ಕೆ ತಾವೇ ಉದಾಹರಣೆ ಎನ್ನುವ ಲೇಖಕಿ ಚಿತ್ರಕಲಾ ಪರಿಷತ್ತಿನಲ್ಲಿ ತಮ್ಮ ೬೩ ನೆಯ ವಯಸ್ಸಿನಲ್ಲಿ ಚಿತ್ರಗಳ ಪ್ರದರ್ಶನವನ್ನು ಏರ್ಪಡಿಸಿದ್ದು ಅವರ ಸಾಧನೆ ಹಾಗೂ ಆತ್ಮ ವಿಶ್ವಾಸದ ಕುರುಹು.

ಮಗ ಸೊಸೆಯ ದಾಂಪತ್ಯ ಜೀವನ ವಿಚ್ಛೇದನದಲ್ಲಿ ಅಂತ್ಯ ಗೊಂಡಾಗ ತಾಯಿಯ ಪ್ರೀತಿಯಿಂದ ವಂಚಿತನಾದ ಮೊಮ್ಮಗನ ಬಗ್ಗೆ ಅವರು ಬರೆದ ಪುಟಗಳು ಬಹಳ ನೋವು ಕೊಡುತ್ತವೆ. ಮೊಮ್ಮಗನನ್ನು ನೋಡಿ ಕೊಳ್ಳಲಿಕ್ಕಾಗಿಯೇ ದೇವರು ತಮ್ಮನ್ನು ಅಷ್ಟು ದೊಡ್ಡ ಅಪಘಾತದಿಂದ ಉಳಿಸಿರ ಬೇಕು ಇಲ್ಲವಾದರೆ ಮಗನಿಗೆ ಬಹಳ ಕಷ್ಟ ವಾಗುತ್ತಿತ್ತು. ಎನ್ನುವ ಅವರು ತಮ್ಮ ಇಬ್ಬರು ಮಕ್ಕಳ ಕಷ್ಟ ಸುಖ ದಲ್ಲಿ ಹೆಗಲಾಗಿ ನಿಂತಿದ್ದು, ಆ ಮಕ್ಕಳು ಕೂಡ ತಾಯಿಯನ್ನು ಅಷ್ಟೇ ಜತನದಿಂದ ನೋಡಿ ಕೊಂಡಿದ್ದು ಹೃದ್ಯವೆನಿಸುತ್ತದೆ. ಎಂತಾ ಮಾತೃ ಹೃದಯದ ಮಾತೆಗೆ ತದ್ವಿರುದ್ಧವಾದ ಸೊಸೆ ಸಿಕ್ಕಿದಳಲ್ಲಾ ಎಂದು ಕನಿಕರವೂ ಆಗುತ್ತದೆ.

ತಮ್ಮ ಅನಾರೋಗ್ಯ ದಲ್ಲಿ ಮಗುವಂತೆ ನೋಡಿ ಕೊಂಡಿದ್ದ ಪತಿ ಈಗ ನೆನಪಿನ ಶಕ್ತಿ ಕುಂದಿ ಮಗುವಿನಂತೆ ಆಗಿದ್ದಾರೆ ಮುಪ್ಪಿನಲ್ಲಿ ಅವರನ್ನು ನೋಡಿ ಕೊಳ್ಳ ಬೇಕಾದ ಭಾರ ತಮ್ಮ ಹೆಗಲಿಗೆ ಎನ್ನುವುದನ್ನು ಓದಿ ಮನಸ್ಸು ಮರುಗುತ್ತದೆ.

ಮೂರು ದೊಡ್ಡ ಆಘಾತಗಳು ಬಂದರೂ, ಚೇತರಿಸಿ ಕೊಂಡು ‘ಮೂರನೇ ಕಣ್ಣಿ’ನಿಂದ ಜೀವನದ ದೃಷ್ಟಿಯನ್ನು ಕಂಡುಕೊಳ್ಳುತ್ತಾ, ಬದುಕನ್ನು ಬದಲಾಯಿಸಿಕೊಂಡು ಮತ್ತೆ ತಲೆ ಎತ್ತಿ ನಿಂತಿರುವ ಇವರು ಬಹುದೊಡ್ಡ ಸಾಧಕರು. ಇಲ್ಲಿನ ಪ್ರತಿ ಪುಟಗಳೂ ಅಮೂಲ್ಯವಾದವು. ನಾನು ಎಲ್ಲವನ್ನೂ ಬರೆಯಲೂ ಆಗದು. ಇಂತಹಾ ಅತ್ಯುತ್ತಮ ಕೃತಿಯೊಂದರ ರಚನೆಯ ಮೂಲಕ ನೀವು ಎಷ್ಟೊಂದು ಓದುಗರ ಮನದ ಕದ ತೆರೆದಿದ್ದೀರಿ ಉಷಾಮ್ಮ. ನಿಮ್ಮನ್ನು ಆ ದೇವರು ಚೆನ್ನಾಗಿಟ್ಟಿರಲಿ ಎಂಬುದೇ ಪ್ರಾರ್ಥನೆ.

ಪುಸ್ತಕ ಓದುವಾಗ ಕೊನೆಯಲ್ಲಿ ಕಣ್ಣು ಮಂಜಾಗುತ್ತದೆ. ಓದಿದ ಮೇಲೆ ಮನದಲ್ಲಿ ಉಳಿದ ಸಾಲುಗಳು :

* ಒಂದು ಕಟ್ಟಡ ಮನೆಯಾಗುವುದು ಅದರೊಳಗೆ ತುಂಬುವ ಪ್ರೀತಿಯಿಂದ. ಅಲ್ಲಿ ಜನರು ಬದುಕುವ ರೀತಿಯಿಂದ. ಆದರೆ ಆಗಿದ್ದ ಪ್ರೀತಿ, ಸಹಕಾರ ಈಗ
ಕಾಲದೊಡನೆ ಕಳೆದು ಹೋಗಿದೆ. ಯಾರಿಗೆ ಯಾರೂ ಇಲ್ಲದ ಕಾಲದಲ್ಲಿ ನಾವಿಂದು ಬಂದು ನಿಂತಿದ್ದೇವೆ.

*ಬದುಕುವುದು ಸುಲಭದ ಕೆಲಸವಲ್ಲ. ಎಲ್ಲರ ಬದುಕಲ್ಲೂ ಸುಖ- ದುಃಖಗಳು ಸಹಜ. ಇಲ್ಲಿ ಎಲ್ಲರೂ ಗೆಲ್ಲುವುದೂ ಇಲ್ಲ. ಅದರಲ್ಲೂ ಒಬ್ಬಂಟಿಯಾಗಿ ಹೊರಡುವುದು ಎಂದರೆ ಬಹಳ ಕಷ್ಟ.

*ಸಾವೇ ಇಲ್ಲವೇನೋ ಎಂದು ನಾವು ಬದುಕುತ್ತೇವೆ. ಸಾಯುವಾಗ ಬದುಕಿಯೇ ಇಲ್ಲವೇನೋ ಎಂಬಂತೆ ಸಾಯುತ್ತೇವೆ.

*ನಮಗೆ ನೋವು ಕೊಟ್ಟವರನ್ನು ಮರೆತು ಜೀವನದಲ್ಲಿ ಮುಂದೆ ಹೋಗುವುದೇ ಪರಿಹಾರವಲ್ಲದೆ ಅದಕ್ಕಾಗಿ ಕೊರಗಿ ಇಂದಿನ ನಮ್ಮ ಜೀವನವನ್ನು ಹಾಳು ಮಾಡಿಕೊಳ್ಳ ಬಾರದು.

*ಜೀವನ ಎಷ್ಟು ನಿಗೂಢವೆನ್ನುವ ನಮಗೆ ಅರಿವಾಗುವುದು ಅನಿರೀಕ್ಷಿತ ಅವಘಡಗಳು ಸಂಭವಿಸಿದಾಗ.

*ಒಂದು ಮಾತ್ರ ನಿಜ. ಯಾವುದೇ ಕಲೆ, ಸಂಗೀತ ಸಾಹಿತ್ಯದ ಅಭ್ಯಾಸ ಒಂದು ಯೋಗಾಭ್ಯಾಸದಂತೆ. ಕಲೆ ಜೀವನಕ್ಕೆ ಬಣ್ಣ ತುಂಬುತ್ತದೆ. ಚಿತ್ರಕಲೆ ಜೀವನ ಕಲೆ.

* ಜೀವನ ಎನ್ನುವುದು ಒಂದು ಕುರುಕ್ಷೇತ್ರ. ನಿರಂತರ ಹೋರಾಟ. ಅದರಿಂದ ಬಿಡುಗಡೆಯಿಲ್ಲ. ಬಂದಿದ್ದನ್ನು ಆತ್ಮ ವಿಶ್ವಾಸ ಕಳೆದು ಕೊಳ್ಳದೆ ಛಲದಿಂದ ಎದುರಿಸಿದಾಗ ಎಲ್ಲಾ ಕಷ್ಟಗಳೂ ಸಹ್ಯವಾಗುತ್ತದೆ. ನಮಗೇಕೆ ಹೀಗಾಯಿತು ಎಂದು ಅಳುತ್ತಿದ್ದರೆ ಯಾರೂ ನಮ್ಮೊಡನೆ ಅಳುವುದಿಲ್ಲ. ನೋವಲ್ಲೂ ನಕ್ಕರೆ ಎಲ್ಲರೂ ನಮ್ಮೊಡನೆ ನಗುತ್ತಾರೆ.

ಮನಸ್ಸು ಖಿನ್ನವಾದಾಗ ನಾವು ಈ ಪುಸ್ತಕವನ್ನು ತೆರೆದು ಓದಿದರೆ ಅದು ಮತ್ತೆ ನಮ್ಮನ್ನು ಜೀವನ್ಮುಖಿಯಾಗಿಸುತ್ತದೆ
ಎಂಬುದು ಸತ್ಯ.

ಮಾಲತಿ ರಾಮಕೃಷ್ಣ ಭಟ್ ಅವರು ಸಾಕಷ್ಟು ಪುಸ್ತಕಗಳನ್ನು ಓದಿ ಓದುಗರಿಗೆ ಪರಿಚಯವನ್ನು ಮಾಡಿಕೊಟ್ಟಿದ್ದಾರೆ. ಅವರು ಮಾಡಿದ ಪುಸ್ತಕಗಳ ಪರಿಚಯ : 


  • ಮಾಲತಿ ರಾಮಕೃಷ್ಣ ಭಟ್

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW