‘ಸೀಮಾಂತೆ ಅಲ್ಲ ಸೀಮಾತೀತೆ’ ಪುಸ್ತಕ ಪರಿಚಯ

ಮೊದಲ ಬಾರಿಗೆ ವೈದೇಹಿಯವರ ಸಮಗ್ರ ಬರಹಗಳ ಸಮೀಕ್ಷೆ ಮಾಡಿ ಬರೆದ ಶ್ರೇಯಸ್ಸು ಡಾ. ಬಿ ಎನ್ ಸುಮಿತ್ರಾ ಬಾಯಿ ಅವರಿಗೆ ಸಲ್ಲಬೇಕು. ಅವರ ‘ಸೀಮಾಂತೆ ಅಲ್ಲ ಸೀಮಾತೀತೆ ವೈದೇಹಿ ಸಾಹಿತ್ಯ ಲೋಕ ದರ್ಶನ’ ಅವರ ಕೃತಿಯ ಕುರಿತು ಲೇಖಕರಾದ ರಘುನಾಥ್ ಕೃಷ್ಣಮಾಚಾರ್ ಅವರು ತಮ್ಮ ಅಭಿಪ್ರಾಯವನ್ನು ಓದುಗರ ಮುಂದೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಪುಸ್ತಕ : ಸೀಮಾಂತೆ ಅಲ್ಲ ಸೀಮಾತೀತೆ ವೈದೇಹಿ ಸಾಹಿತ್ಯ ಲೋಕ ದರ್ಶನ 
ಲೇಖಕಿ : ಡಾ. ಬಿ ಎನ್ ಸುಮಿತ್ರಾ ಬಾಯಿ
ಬೆಲೆ : ೧೭೫.೦೦

ಸಾಮಾನ್ಯವಾಗಿ ವೈದೇಹಿಯವರಿಗೂ ಅವರ ಕಥಾ ಸಾಹಿತ್ಯಕ್ಕೂ ಇರುವ ಅಂಟಿನ ನಂಟಿನ ಏಕತಾನತೆಯನ್ನು ಈ ಹೊತ್ತಗೆ ಮುರಿದು ಹೊಸದಾಗಿ ಕಟ್ಟುತ್ತದೆ.ಆ ಮೂಲಕ ಅವರ ಕೃತಿ ಸಮಸ್ತದ ಮೇಲೆ ಹೊಸ ಬೆಳಕು ಚೆಲ್ಲುತ್ತದೆ. ಅದಕ್ಕೆ ಅವರು ವೈದೇಹಿಯವರ ಸಾಹಿತ್ಯ ಸೃಷ್ಟಿಯ ಮೂಲವನ್ನು ಕಂಡುಹಿಡಿಯಲು ಪ್ರಯತ್ನ ಮಾಡಿದ್ದಾರೆ. ಅವರ ಪ್ರಕಾರ ವೈದೇಹಿಯವರ ಅನ್ಯವನ್ನು ಒಳಗೊಳ್ಳುವ ಅವರ ಸೃಜನಶೀಲತೆ ಈ ಸ್ರೋತದ ಮೂಲಾಧಾರೆಯಾಗಿದೆ.

ವೈದೇಹಿ

ಕೆಲವು ವರ್ಷಗಳ ಹಿಂದೆ ಇದ್ದಕಿದ್ದಂತೆ ವೈದೇಹಿಯವರಿಂದ ನನ್ನ ಸಂಗಾತಿ ಗಿರಿಜಾ ಶಾಸ್ತ್ರಿ ಅವರಿಗೆ ಫೋನ್ ಬಂದಿತ್ತು. ಪರಸ್ಪರ ಅಪರಿಚಿತರಾದ ಇವರಿಗೆ ಅನಿರೀಕ್ಷಿತವಾಗಿ ಬಂದ ಅವರ ಕರೆಗೆ ಹೇಗೆ ಪ್ರತಿಕ್ರಿಯಿಸಬೇಕೆಂದೇ ತಿಳಿಯಲಿಲ್ಲ. ” ನಾನು ಕಣೆ ಗಿರಿಜಾ, ವೈದೇಹಿ, ನಿನ್ನ ಪ್ರಜಾವಾಣಿಯಲ್ಲಿನ ಲೇಖನ ಓದಿ ತುಂಬಾ ಸಂತೋಷವಾಯಿತು, ಅದಕ್ಕೆ ಕರೆ ಮಾಡಿದೆ’ ಎಂದು ಯಾವ ಹಮ್ಮು ಬಿಮ್ಮುಗಳಿಲ್ಲದೆ ಹೇಳಿದಾಗ ,ಆ ಧ್ವನಿಯಲ್ಲಿನ ಮಾರ್ದವತೆಗೆ ಇವರು ಮಾರು ಹೋದರು. ನಂತರ ಕೆಲವು ದಿನಗಳಲ್ಲಿ ಅವರಿಂದ ಮತ್ತೆ ಕರೆ. ಈ ಸಲ ಇವರು ಹನ್ನೆರೆಡು ವರ್ಷಗಳ ಹಿಂದೆ ಪ್ರಕಟಿಸಿದ ‘ ಪುಸ್ತಕ ಮತ್ತು ನವಿಲುಗರಿ ” ಕವನ ಸಂಕಲನವನ್ನು ಪ್ರಕಾಶಕರಿಂದ ಪಡೆದು ಓದಿ, ಆದ ಆವರ ಸಂತೋಷವನ್ನು ಹಂಚಿಕೊಳ್ಳುವುದಕ್ಕೆ. ಅದಕ್ಕೆ ಶಿವಮೊಗ್ಗ ಕರ್ನಾಟಕ ಸಂಘದ ಜಿ.ಎಸ್.ಎಸ್. ಪ್ರಶಸ್ತಿ ಬಂದಾಗ ಆದ ಸಂತೋಷಕ್ಕಿಂತ ಹೆಚ್ಚು ಸಂತೋಷವನ್ನು ಅವರಿಗೆ ಕೊಟ್ಟಿತು.ಇದು ಕೇವಲ ನಮ್ಮ ಅನುಭವ ಮಾತ್ರ ಅಲ್ಲ ಮುಂಬೈನ ನನ್ನ ಗೆಳೆಯರಿಗೆ ಕೂಡ ಆದ ಅನುಭವ.

ಡಾ. ಬಿ ಎನ್ ಸುಮಿತ್ರಾ ಬಾಯಿ

ಮೇಲಿನ ಎರಡು ಪ್ರಸಂಗಗಳನ್ನು ಉಲ್ಲೇಖಿಸಿದ ಉದ್ದೇಶ ಇಷ್ಟೇ.ಅವರಿಗೆ ಯಾರೂ ಅನ್ಯರಲ್ಲ. ಆದ್ದರಿಂದಲೇ ಅವರಿಗೆ ಎಲ್ಲರನ್ನೂ ಒಳಗೊಳ್ಳುವುದು ಸಾಧ್ಯವಾಗುವುದು.ಅವರ ಈ ಅಪೂರ್ವ ಸಾಮರ್ಥ್ಯವೇ, ಅದನ್ನು ಸದಾ ಪ್ರಯೋಗಶೀಲರಾಗಿ, ಅಭಿವ್ಯಕ್ತಿಗೆ ಸಂಯೋಜನೆ ಮಾಡುವುದು ಅವರ ಸಾಹಿತ್ಯ ಸೃಷ್ಟಿಯ ಸ್ಥಾಯೀ ಭಾವ.ಅದನ್ನು ಅವರ ವಿವಿಧ ಪ್ರಕಾರಗಳ ಮೂಲಕ ಮಾಡಿದ ಬಗೆಯ ಅನಾವರಣ ಈ ಪುಸ್ತಕದ ಹೂರಣವಾಗಿದೆ.

ಅವರ ಕಥಾ ಸಾಹಿತ್ಯ ಸ್ತ್ರೀಯ ಅಸ್ಮಿತೆಯನ್ನು ಅಭಿವ್ಯಕ್ತಿಯ ಮೂಲಕ ಅನಾವರಣ ಮಾಡುತ್ತದೆ.ಅಡುಗೆ ಮನೆಯನ್ನು ಹೊಗುವ ಸಹಜತೆಯಿಂದಲೇ ,ತಿಳಿಸಾರನ್ನು ಪಾಕ ಮಾಡುವ ರೂಪಕದ ಮೂಲಕ ಅವರು ಸ್ತ್ರೀಯ ಅನಂತ ಮುಖಗಳು ಅವರಿಗೆ ಕಂಡಿವೆ.ಹಾಗೆ ಕಂಡಿರಿಸಿದ್ದು ವಿವಿಧ ಹಂತಗಳಲ್ಲಿ ಬೆಳೆದು ಬಂದ ಬಗೆಯನ್ನು ಆವರ ಕಥೆಗಳನ್ನು – ಕಥಾ ಸಂಕಲನಗಳನ್ನು ಆಧರಿಸಿ ವಿಶ್ಲೇಷಣೆಗೆ ಒಳಪಡಿಸಿದ್ದಾರೆ. ಅವರ ಅಜ್ಜಿಯರ ಮನೋಲೋಕದ ಮೂಲಕ ಏನೇನು ಕಳೆದುಕೊಂಡಿದ್ದೇವೆ ಎಂದು ತಿಳಿಯಲು ಸಾಧನವಾದರೆ, ಅವರ ಪ್ರಸಿದ್ಧ ಅಮ್ಮಚ್ಚು ಮತ್ತು ಅಕ್ಕು ಕಥೆಗಳು ಸಂಪ್ರದಾಯ ಬದ್ಧ ಸಮಾಜದ ಹೆಣ್ಣಿನ ವ್ಯಕ್ತಿತ್ವದ ಮೇಲೆ ಕಟ್ಟುಪಾಡುಗಳ ಹೇರುವುದರ ವಿರುದ್ಧದ, ಪ್ರತಿಭಟನೆಯ ಅಪೂರ್ವ ರೂಪಕಗಳಾಗಿವೆ ಎಂದು ಲೇಖಕಿ ಮನಗಾಣಿಸಿದ್ದಾರೆ. ಅವರ ಗೂಡಿನೊಳಗಿನ ಹಕ್ಕಿ , ಮನೆಯ ನಾಲ್ಕು ಗೋಡೆಗಳ ನಡುವೆ ಬೆತ್ತಲಾಗಿ ತಿರುಗಿ ತನ್ನ ಬಿಡುಗಡೆ ಅನುಭವಿಸಲು ಪ್ರಯತ್ನಿಸಿದರೆ, ಅವರ ‘ಸೌಗಂಧಿಕಾಗಳ ಸ್ವಗತ ‘ತಂದೆ ತಾಯಿಗಳಿಂದ ಎದುರಿಸುವ ಸ್ವಾತಂತ್ರ್ಯ ಹರಣವನ್ನು ಮೌನವಾಗಿ ದಾಖಲಿಸಿದ್ದಾರೆ.ಇದು ಎಸ್.ದಿವಾಕರ ಅವರ ‘ಕ್ರೌರ್ಯ’ ಕಥೆಯನ್ನು ದಟ್ಟವಾಗಿ ನೆನಪಿಗೆ ತರುತ್ತದೆ. ಇದನ್ನು ಲೇಖಕಿ ಗಮನಿಸಿಲ್ಲ.ಇದೆ ಭಾರತ ಪಾಕಿಸ್ತಾನಗಳಾಗಿ ಒಡೆದು ಹೋದಾಗಿನ ಕತೆ ಕೂಡ, ಖುಷ್ವಂತ್ ಸಿಂಗ್ ಅವರ ಟ್ರೈನ್ ಟು ಪಾಕಿಸ್ತಾನದ ಪ್ರತಿಬಿಂಬ ಆಗಿದೆ. ಅಲ್ಲದೆ ಕಥಾಭಾರತಿ ಕಥಾಸಂಕಲನದ ಕಾಶ್ಮೀರಿ ಕಥೆಯ ಲತಿಕಾಳನ್ನು ಕೂಡ ಹೋಲುತ್ತದೆ. ಅದರಂತೆ ರಾಜಲಕ್ಷ್ಮಿ ಎನ್ ರಾವ್ ಅವರ ವೈಶಾಖ ಶುಕ್ಲ ಪೂರ್ಣಿಮಾ ಕತೆಯನ್ನು ಹೋಲುವ ಕತೆ ಕೂಡ ಇದೆ. ಅವರ ಕ್ರೌಂಚ ಪಕ್ಷಿಗಳು ಮಾಂತ್ರಿಕ ವಾಸ್ತವದ ಕತೆಗಳಾಗಿ, ಅವರು ಕಥೆಗಾರರಾಗಿ ಬೆಳೆದು ನಿಂತಿದ್ದರ ದ್ಯೋತಕವಾಗಿದೆ ಎಂದು ಲೇಖಕಿ ಸರಿಯಾಗಿಯೇ ಗುರುತಿಸಿದ್ದಾರೆ.

ಅವರ ಪ್ರಬಂಧಗಳು ಕೂಡ ಪ್ರಕಾರದ ಕಟ್ಟುನಿಟ್ಟಿನ ಬಂಧದಲ್ಲಿ ಚಲಿಸದೆ ಕಥೆ ಮತ್ತು ಪ್ರಬಂಧಗಳ ನಡುವೆ ಚಲಿಸುತ್ತವೆ. ಅವರ ಮೇಜು ಮತ್ತು ಬಡಗಿ ಲಿಂಗ ತಾರತಮ್ಯವನ್ನು ಸೂಕ್ಷ್ಮವಾಗಿ ಪ್ರತಿಭಟಿಸುವ ವಿಧಾನವನ್ನು ಸೂಚಿಸಿದ್ದಾರೆ.

ಅವರ ಒಳಗೊಳ್ಳುವ ಶಕ್ತಿಗೆ ನಿದರ್ಶನವಾಗಿ ಅವರ ಬರೆದ ನಾಲ್ಕು ವ್ಯಕ್ತಿ ಕಥನಗಳನ್ನು ಇಲ್ಲಿ ಉಲ್ಲೇಖಿಸಿದ್ದಾರೆ.ಅವರುಗಳು: ಕೊ.ಲ.ಕಾರಂತರು, ಸೇಡಿಯಾಪು ಕೃಷ್ಣಭಟ್ಟರು , ಬಿ.ವಿ.ಕಾರಂತರ ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ’ ಹಾಗೂ ಅಪರೂಪದ ಲೇಖಕಿಯಾದ ಸರಸ್ವತಿ ಬಾಯಿ ರಾಜವಾಡೆ ಸಂದರ್ಶನ.ಇಲ್ಲೆಲ್ಲ ಅವರ ನಿರೂಪಣೆಯಲ್ಲಿ ಸ್ವೋಪಜ್ಞತೆ ಎದ್ದು ಕಾಣುತ್ತದೆ ಎಂದು ಲೇಖಕಿ ಗುರುತಿಸಿದ್ದಾರೆ.

ಅವರ ಅನುವಾದ ಶಕ್ತಿಗೆ ನಿದರ್ಶನವಾಗಿ ಅವರು ಮಾಡಿರುವ ಕಮಲಾದೇವಿ ಚಟ್ಟೋಪಾಧ್ಯಾಯ, ಮೈತ್ರೇಯಿ ಅವರ ಕೃತಿಗಳನ್ನು ಅವು ಅನುವಾದದಂತೆ ಕಾಣಿಸದೆ ಸ್ವತಂತ್ರ ಕೃತಿಗಳ ಹಾಗೆ ಕಾಣಿಸುವುದೆ ಅವುಗಳ ಹಿರಿಮೆಯನ್ನು ಸಾರುತ್ತದೆ .

ಅವರ ಕಾವ್ಯದಲ್ಲಿ ಪ್ರಾರಂಭದಲ್ಲಿ ಉಲ್ಲೇಖಿಸಿದ ತಿಳಿಸಾರಿನ ಪಾಕ ಮತ್ತು ಕಾವ್ಯದ ಸಮನ್ವಯ , ಶಿವನ ಮೀಯಿಸುವ ಹಾಡಿನಲ್ಲಿ ಎಲ್ಲೆಲ್ಲೂ ತಿರುಗಾಡಿ ಬಂದ ಅವನಿಗೆ ಮೀಯಿಸುತ್ತಲೇ, ಅವನನ್ನು ಮೃದು ಮಾತಿನ ಮೂಲಕ ಚುಚ್ಚುವ ಪರಿಯನ್ನು ಉದ್ಧರಿಸಿ, ವೈದೇಹಿಯವರ ಪ್ರತಿಭಟನೆಯ ಸೂಕ್ಷ್ಮ ವಿಧಾನವನ್ನು, ಅದು ಸಿಡಿಯದೆ ಸಂಭಾಳಿಸುತ್ತಲೇ ತನ್ನ ಅಸ್ಮಿತೆಯನ್ನು ಪ್ರಕಟಿಸವ ವಿಧಾನ ,ಎಂದು ಅವರ ಸಾಹಿತ್ಯದ ಪ್ರಧಾನ ಲಕ್ಷಣವೆಂದು ವ್ಯಾಖ್ಯಾನ ಮಾಡಿದ್ದಾರೆ.

ಅವರ ಏಕೈಕ ಕಾದಂಬರಿ ಅಸ್ಪೃಶ್ಯರು ಬ್ರಾಹ್ಮಣ ಸಮುದಾಯದಲ್ಲಿ ಇರುವ ಮಡಿ ಮೈಲಿಗೆಗಳ ಆಚರಣೆಯಿಂದ, ಒಬ್ಬರು ಇನ್ನೊಬ್ಬರಿಗೆ ಅಸ್ಪೃಶ್ಯರಾಗಿರುವ ಅಮಾನವೀಯತೆಯನ್ನು ಮೊದಲ ಬಾರಿಗೆ ಬಯಲಿಗೆ ಎಳೆದಿರುವ ವೈಶಿಷ್ಟ್ಯವನ್ನು ಲೇಖಕಿ ನಿರೂಪಿಸಿದ್ದಾರೆ. “ಬ್ರಾಹ್ಮಣರು ಅವರ ಮನೆಯಲ್ಲಿಯೇ ಒಬ್ಬರು ಇನ್ನೊಬ್ಬರಿಗೆ ಅಸ್ಪೃಶ್ಯರು” ಎಂದು ಸದಾ ಹೇಳುವ ನನ್ನ ಸಂಗಾತಿಯ ಮಾತಿನ ವ್ಯಾಖ್ಯಾನದಂತೆ ಇಡೀ ಕಾದಂಬರಿ ಇದೆ. ಅಲ್ಲದೆ ಅವರು ಶಿವರಾಮ ಕಾರಂತರ ಚೋಮನ ದುಡಿಯನ್ನು ಹಾಗೂ ಮುಲ್ಕ್ ರಾಜ್ ಆನಂದರ ಅನ್ ಟಚಬಲ್ ಕೃತಿಗಳನ್ನು ಉಲ್ಲೇಖ ಸರಿಯಾಗಿ ಮಾಡಿದ್ದಾರೆ.‌ಅವುಗಳ ತೌಲನಿಕ ಅಧ್ಯಯನ ಮಾಡಬಹುದು. ಜಿ.ಎಸ್.ಆಮೂರರು ತಮ್ಮ ಎಸ್ಸೇಸ್ ಆನ್ ಮಾಡ್ರನ್ ಕನ್ನಡ ಲಿಟರೇಚರ್ ಕೃತಿಯಲ್ಲಿ ಮಾಡಿದಂತೆ.

ಅವರ ಅನುವಾದಿತ ಗೊಂಬೆ ಮ್ಯಾಕ್ಬೆತ್ ಮತ್ತು ಇತರ ಮಕ್ಕಳ ನಾಟಕಗಳು ಮಕ್ಕಳಲ್ಲಿ ಕಲ್ಪನಾ ವಿಲಾಸ ಬೆಳೆಸುವ ಪ್ರಯತ್ನಗಳಾಗಿವೆ ಎಂದು ಸರಿಯಾಗಿ ಗುರುತಿಸಿದ್ದಾರೆ. ಮೇಲಿನ ಸ್ಥೂಲ ಸಮೀಕ್ಷೆ ಬಿ.ಎನ್ ಸುಮಿತ್ರಾ ಬಾಯಿ ಅವರು ನಮ್ಮ ಕಾಲದ ಸಾಂಸ್ಕೃತಿಕ ಮಹತ್ವದ ಲೇಖಕಿ ವೈದೇಹಿ ಎಂದು ಸ್ಥಾಪಿಸುವಲ್ಲಿ ಯಶಸ್ವಿಯಾಗಿದ್ಧಾರೆ. ಅಲ್ಲಲ್ಲಿ ಬಳಕೆಯಾಗಿರುವ ಸಂಸ್ಕೃತ ಭೂಯಿಷ್ಟ ಭಾಷೆ,( ಸಾರ್ವತ್ರಿಕತಿತ್ವ ಇತ್ಯಾದಿ) ಮತ್ತು ಲಿಪಿ ಸ್ಖಾಲಿತ್ಯಗಳು ಓದುಗರ ಗ್ರಹಿಕೆಗೆ ತೊಡಕನ್ನು ಉಂಟು ಮಾಡುತ್ತದೆ.

ಈ ಮಹತ್ವದ ಕೃತಿಯ ಪ್ರಕಾಶಕರಾದ ಡಾ.ಆರ್ ಪೂರ್ಣಿಮಾ ಅವರಿಗೆ ಮತ್ತು ಲೇಖಕಿಗೆ ಅಭಿನಂದನೆಗಳು.ಪುಸ್ತಕ ಕೊಟ್ಟು ಓದಲು ಅವಕಾಶ ಮಾಡಿ ಕೊಟ್ಟ ಪ್ರಕಾಶಕರಿಗೆ ಕೃತಜ್ಞತೆಗಳು.


  • ರಘುನಾಥ್ ಕೃಷ್ಣಮಾಚಾರ್ – ಲೇಖಕರು, ರಾಮನಿರಂಜನ್ ಝುನ್ಝುನ್ವಾಲ ಕಾಲೇಜು ಉಪನ್ಯಾಸಕರು

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW