ದ್ರೌಪದಿ ( ಕಾದಂಬರಿ) ಪರಿಚಯ – ಡಾ. ಎಸ್ ವಿ ಪ್ರಭಾವತಿ

ದ್ರೌಪದಿ ಕಾದಂಬರಿಯ ಕುರಿತು ಸ್ವತಃ ಕಾದಂಬರಿಗಾರ್ತಿ ಡಾ. ಎಸ್ ವಿ ಪ್ರಭಾವತಿ ಅವರು ತಮ್ಮ ಕಾದಂಬರಿ ಕುರಿತು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಪುಸ್ತಕ : ದ್ರೌಪದಿ
ಲೇಖಕಿ : ಡಾ. ಎಸ್ ವಿ ಪ್ರಭಾವತಿ
ಪ್ರಕಾರ : ಕಾದಂಬರಿ

ವ್ಯಾಸ ಭಾರತದಲ್ಲಿ ದ್ರೌಪದಿ ಯುನ ಐವರನ್ನು ಮದುವೆ ಯಾಗಬೇಕಾಗಿ ಬಂದ ಪ್ರಸಂಗವನ್ನು ಇನ್ನಿಲ್ಲದಷ್ಟು ಎಳೆಯಲಾಗಿದೆ ಎಂದು ನನಗನಿಸಿತು . ಕುಂತಿಯು ಹಂಚಿಕೊಳ್ಳಲು ಹೇಳಿದ್ದರಿಂದ ಹಿಡಿದು ಅವಳು ಹಿಂದಿನ ಜನ್ಮದಲ್ಲಿ ನಾಲಾಯಣಿ ಎಂಬ ಋಷಿ ಪತ್ನಿ ಯಾಗಿದ್ದ ಕತೆ , ಐವರು ಇಂದ್ರರ ಕತೆ , ದ್ರುಪದನ ಗೋಳಾಟ , ವ್ಯಾಸರ ಮಧ್ಯಸ್ಥಿಕೆ … ಈ ಎಲ್ಲಾ ಗೋಜು ಗೊಂದಲದಲ್ಲಿ ದ್ರೌಪದಿಗೆ ಏನನಿಸಿತು ಎಂದು ಯಾರೂ ಕೇಳುವುದೇ ಇಲ್ಲ .

ಎ ಆರ ಕೃಷ್ಣ ಶಾಸ್ತ್ರಿಗಳು ,” ವಚನ ಭಾರತ ” ಎಂಬ ಹೆಸರಿನಿಂದ ಇದನ್ನು ಸರಳವಾದ ಹೊಸಗನ್ನಡ ಕ್ಕೆ ಅನುವಾದ ಮಾಡುವಾಗ ” ದ್ರೌಪದಿ ಗೆ ಅವರೈವರ ಮೇಲೆ ಮನಸ್ಸಾಯಿತು . ಅವರೈವರಿಗೂ ದ್ರೌಪದಿ ಯ ಮೇಲೆ ಮನಸ್ಸಾಯಿತು ” ಎಂದು ಹೇಳುತ್ತಾರೆ . ಮೂಲದಲ್ಲಿ ಯಾವ ಸೂಚನೆ ಯೂ ಇಲ್ಲದೇ ಅವರು ಹೀಗೆ ಬರೆಯುವುದು ಸಾಧ್ಯವಿಲ್ಲ. ಈ ಅಂಶವು ನನ್ನ ಬರವಣಿಗೆಗೆ ಪೂರಕವಾಗಿ ಒದಗಿತು.

ಪ್ರಕ್ಷೇಪಗಳ ಗೋಜು ಗೊಂಚಲಿನಲ್ಲಿ ವ್ಯಾಸರ ಅಂತರಂಗವನ್ನು ನಿಜವಾಗಿ ಅರಿತವರು ಕಡಿಮೆ . ೮೦ ರ ದಶಕದಲ್ಲಿ ಸ್ತ್ರೀ ವಾದೀ ಚಳವಳಿಯು ಕನ್ನಡ ಸಾಹಿತ್ಯ ವನ್ನು ಪ್ರವೇಶಿಸಿದಾಗ ಇಡೀ ಮಹಾಭಾರತ ರಾಮಾಯಣಗಳನ್ನು ಸ್ತ್ರೀವಾದಿ ದೃಷ್ಟಿಕೋನದಿಂದ ಪುನಃ ಸೃಷ್ಟಿಸಬಹುದು ಎಂಬ ಮಾತು ಪದೇ ಪದೇ ಕಿವಿಯ ಮೇಲೆ ಬಿದ್ದಾಗ ಹುಟ್ಟಿದವಳು ದ್ರೌಪದಿ.

೧೩೦ ಪುಟಗಳ ಈ ಪುಟ್ಟ ಪುಸ್ತಕ ದಲ್ಲಿ ತನ್ನ ಐವರು ಮಕ್ಕಳನ್ನೂ ತನ್ನ ಅಣ್ಣ ನನ್ನೂ ಕಳೆದುಕೊಂಡು ಗೋಳಾಡುತ್ತಾ ತನ್ನ ಬದುಕಿನ ಎಲ್ಲಾ ಘಟನೆ ಗಳನ್ನೂ ಅವಳು ನೆನಪಿಸಿಕೊಳ್ಳುವ ಸ್ಮರಣತಂತ್ರವನ್ನು ಬಳಸಿಕೊಂಡು ಅವಳ ಅಂತರಂಗದ ಅನಾವರಣ ಮಾಡಲಾಗಿದೆ . ವಿಶಾಲವಾದ ಕುರುಕ್ಷೇತ್ರದ ಒಂದು ಮೂಲೆಯಲ್ಲಿ ಆರು ಹೆಣಗಳ ಮೇಲೆ ಕೈಯಾಡಿಸುತ್ತಾ ಬರಲಿರುವ ಅಶ್ವತ್ಥಾಮ ನ ಹೆಣಕ್ಕಾಗಿ ಕಾಯುತ್ತಾ ಅವಳು ಕುಳಿತಿರುವಾಗ ಅವಳು ಹುಟ್ಟಿದ್ದು , ಅರ್ಜುನ ನಿಗೇ ಹೆಂಡತಿ ಎಂದು ಅವಳನ್ನು ಸಾಕಿದ್ದು , ಸ್ವಯಂವರ , ಮತ್ಸ್ಯ ಯಂತ್ರ ಬೇಧನ , ಐವರ ಜೊತೆಗೆ ಮದುವೆ , ನಾರದರ ಸೂತ್ರ ದಂತೆ ಒಬ್ಬೊಬ್ಬ ಗಂಡನೊಂದಿಗೆ ಒಂದೊಂದು ವರ್ಷ ಸಂಸಾರ , ಹಾಗೆ ಹುಟ್ಟಿದ ಪ್ರತಿವಿಂದ್ಯ , ಶ್ರುತಸೋಮ , ಶ್ರುತಕೀರ್ತಿ , ಶ್ರುತವರ್ಮ ಶತಾನೀಕ ..,…ಈ ಐವರು ಮಕ್ಕಳು ದ್ರೌಪದಿ ಯ ಮಕ್ಕಳಾಗಿ ಬೆಳೆದರೇ ಹೊರತು ತಂದೆ ಇಲ್ಲ ….ಎಂದು ಅನಿಸುತ್ತದೆ . ಸಭಾ ಪರ್ವ ದ ಅವಮಾನ ವನವಾಸದ ಕಷ್ಟ ವಿರಾಟ ನಗರದ ಕೀಚಕನ ಕಾಟ ಸಂಧಿಪ್ರಸ್ತಾಪ …….ಕೊನೆಗೊಮ್ಮೆ ಯುದ್ಧ ವಾಗಿ ತನ್ನ ಸೆರಗೆಳೆದ ದುಶ್ಶಾಸನ ತೊಡೆ ತೋರಿಸಿದ ದುರ್ಯೋಧನ …,ಎಲ್ಲಾ ಎಲ್ಲಾ ಸತ್ತರು ಅಂದುಕೊಳ್ಳುವಾಗ ಈ ಪಾಪಿ ಅಶ್ವತ್ಥಾಮ ಎಂತಹ ಪುತ್ರ ಶೋಕ ತಂದಿಟ್ಟ … ಈಗ ಅವನನ್ನು ಕೊಲ್ಲದೆ ಚಿರಂಜೀವಿ ಯಾಗೆಂಬ ಶಾಪ ಕೊಟ್ಟು ಬಂದಿರುವ ಕೃಷ್ಣ ನೂ ಅವಳಿಗೆ ಶತ್ರುವಾಗಿ ಕಾಣಿಸುತ್ತಾನೆ

ಅಭಿಮನ್ಯು ಸತ್ತಾಗ ಸುಭದ್ರೆಯನ್ನು ತಬ್ಬಿ ಗೋಳಾಡಿದ ಅರ್ಜುನ , ಘಟೋದ್ಗಜ ಸತ್ತಾಗ ಭೋರಾಡಿ ಅತ್ತ ಭೀಮ , ಈಗ ಸುಮ್ಮನೇ ನಿಂತಿದ್ದಾರೆ ಸತ್ತ ಈ ದ್ರೌಪದಿಯ ಮಕ್ಕಳಿಗೂ ತಮಗೂ ಸಂಬಂಧವೇ ಇಲ್ಲ ದವರಂತೆ ..ಸೂಳೆಗೆ ಹುಟ್ಟಿದವರಂತೆ …ಒಬ್ಬ ಹೆಂಗಸು ಐವರಿಗೆ ಸೆರಗು ಹಾಸಿದಾಗ ಹುಟ್ಟಿದ ವರಂತೆ ….. ಹಾದರಕ್ಕೆ ಹುಟ್ಟಿದವರಂತೆ ….ಯೋಚಿಸುತ್ತಾ ಕುಳಿತ ದ್ರೌಪದಿ ನನ್ನ ಮಕ್ಕಳಿಗೆ ನಾನೇ ಬೆಂಕಿಯಿಡುತ್ತೇನೆ ….ಇವರು ನನ್ನ ಮಕ್ಕಳು ಮತ್ತು ನನ್ನ ಮಕ್ಕಳು ಮಾತ್ರ .ಎಂದು ತಾನೇ ಬೆಂಕಿಯಿಡುತ್ತಾಳೆ

ಭೈರಪ್ಪನವರ ಪರ್ವ ದ ಪಡಿಯಚ್ಚು ಆಗಿಬಿಡಬಹುದಾಗಿದ್ದ ಅಪಾಯ ದಿಂದ ಇದು ತಪ್ಪಿಸಿಕೊಳ್ಳಲು ಸಾಧ್ಯವಾಗಿದ್ದು ಕೊನೆಯ ಎರಡು ಪುಟಗಳಲ್ಲಿ . ದುಃಖಿಸುತ್ತಾ ಕುಳಿತ ಅವಳ ಎರಡೂ ತೋಳುಗಳನ್ನು ಹಿಡಿದು ಮೇಲೆತ್ತುತ್ತಾ ದ್ರೌಪದಿ ನೀನು ಮದುವೆಯಾದುದು ಐವರನ್ನು ಮೂವರನ್ನು ಮಾತ್ರ ಅಲ್ಲ ಅನ್ನುವ ನಕುಲ ಸಹದೇವರು ಅವಳ ಕಣ್ಣಿಗೆ ಜಗತ್ತಿಗೇ ಸುಂದರ ಪುರುಷರಂತೆ ತೋರುತ್ತಾರೆ . ತಾಯ್ತನದ ಬಯಕೆ ಮರುಕಳಿಸುತ್ತದೆ

ನನಗೆ ಅಪಾರ ಜನಪ್ರಿಯತೆ ಪ್ರಚಾರ ಪ್ರಸಂಶೆಗಳನ್ನು ತಂದಿತ್ತ ಗುಲಬರ್ಗಾ ಮತ್ತು ಬಿಜಾಪುರ ವಿ ವಿ ಗಳ ಪಠ್ಯ ವಾದ ಈಗ ಐದನೇ ಮುದ್ರಣ ಕಂಡ ಈ ಕಾದಂಬರಿಯ ಬಗ್ಗೆ ಬರೆದು ಕೊಳ್ಳಲು ಅವಕಾಶ ಕೊಟ್ಟು , ಮನಸ್ಸು ಮತ್ತೊಮ್ಮೆ ೨೫ ವರ್ಷ (೧೯೯೬) ಹಿಂದೋಡುವಂತೆ ಮಾಡಿದ ಸಂಬಂಧಪಟ್ಟವರೆಲ್ಲರಿಗೆ ಕೃತಜ್ಞತೆ ಗಳು


  • ಡಾ. ಎಸ್ ವಿ ಪ್ರಭಾವತಿ

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW