‘ಉದ್ಭವ’ ಕುರಿತು ನನ್ನ ಮಾತು – ಕಾರ್ತಿಕ್ ಕೃಷ್ಣ

ಬಿ ವಿ ವೈಕುಂಠರಾಜು ಅವರ ‘ಉದ್ಭವ’ ಕಾದಂಬರಿ ೧೯೯೦ ರಲ್ಲಿ ಸಿನಿಮಾ ಮಾಡಲಾಯಿತು.ಇಡೀ ಸಿನಿಮಾದ ಸಂಭಾಷಣೆ ಬರೆದದ್ದು ನಾಗತಳ್ಳಿ ಚಂದ್ರಶೇಖರ್ ಅವರು ಈ ಸಿನಿಮಾದ ಕುರಿತು ಕಾರ್ತಿಕ್ ಕೃಷ್ಣ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ನಂಬಿಕೆಯನ್ನೇ ಬಂಡವಾಳ ಮಾಡಿಕೊಂಡು ಬದುಕುವ ರಾಗಣ್ಣನ ಕಥೆಯೇ ‘ಉದ್ಭವ’. ಹಾಗಂತ ಅವನು ಮೋಸಗಾರನಲ್ಲ. ಆತನೊಬ್ಬ ಜೀನಿಯಸ್! ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳುವ ಕಲೆ ಆತನಿಗೆ ಸಿದ್ಧಿಸಿದೆ. ಜೇಬಲ್ಲಿ ನಯಾಪೈಸೆಯಿಲ್ಲದಿದ್ದರೂ ಆತ ಆರಾಮಾಗಿ ಜೀವಿಸಬಲ್ಲ. ಆತನಿಗೆ ಮಗುವನ್ನು ಜಿಗುಟುವುದೂ ಗೊತ್ತು, ಅದನ್ನು ಸಮಾಧಾನ ಪಡಿಸುವುದೂ ಗೊತ್ತು. ‘ಅಯ್ಯೋ ಸಾರ್..ನಂಗ್ಯಾತಕೆ ದುಡ್ಡು? ನಂಗೆ ಸ್ವಂತ ಮನೆಯಿದೆ, ಎರಡು ಗಂಡು ಮಕ್ಕಳಿದ್ದಾರೆ..ಆದ್ರೆ ಇಂತ ಕೆಲ್ಸ ಮಾಡ್ಬೇಕು ಅಂದ್ರೆ ಹಣ ಖರ್ಚಾಗ್ತದೆ ನೋಡಿ.. ಆದ್ರೆ ಐದು ಸಾವಿರದಲ್ಲಿ ಏನಾಗ್ತದೆ..’ ಎಂದು ತನ್ನ ಬಳಿ ಬರುವ ಆಸಾಮಿಗಳಿಂದ ನೋಟು ಪೀಕುವ ರಾಗಣ್ಣನಿಗೆ ಅವನೇ ಸಾಟಿ!

ರೋಡು ಅಗಲೀಕರಣದ ನೆಪದಲ್ಲಿ ರಾಗಣ್ಣ ಊರಿನ ಪ್ರಮುಖನಾಗುತ್ತಾನೆ. ಕೆಲಸ ನಿಲ್ಲಿಸಬೇಕು ಎನ್ನುತ್ತಾ ಇವನ ಬಳಿ ಬಂದು ದುಡ್ಡು ಸುರಿಯುವವರು ಒಂದೆಡೆಯಾದರೆ ರಸ್ತೆ ಅಗಲವಾಗಬೇಕು ಎನ್ನುತ್ತಾ ಬರುವವರು ಇನ್ನೊಂದೆಡೆ. ಎರಡು ಪಂಗಡದವರ ಬೇಡಿಕೆಯನ್ನು ಈಡೇರಿಸುವ ಭರವಸೆ ನೀಡಿ ದುಡ್ಡು ಮಾಡುವ ರಾಗಣ್ಣ ಚಾಲಾಕಿ! ಇಂತಹದ್ದೇ ಒಂದು ಸಂದರ್ಭದಲ್ಲಿ ರಾತ್ರೋ ರಾತ್ರಿ ಪೆಂಡಾಲವೊಂದರಲ್ಲಿ ಗಣಪತಿಯ ವಿಗ್ರಹವನ್ನು ಮಣ್ಣಿನಲ್ಲಿ ಹುದುಗಿಸಿ ‘ಉದ್ಭವ ಗಣೇಶ’ ಸುಳ್ ಸುದ್ದಿ ಹಬ್ಬುವಂತೆ ಮಾಡಿ, ರಸ್ತೆ ಅಗಲೀಕರಣದ ಪಥವನ್ನೇ ಬದಲಿಸುವ ರಾಗಣ್ಣ ಅದೆಂತ ಆಸಾಮಿ ಇರಬೇಕು?

ಇಡೀ ಸಿನಿಮಾದ ಸಂಭಾಷಣೆ ಬರೆದದ್ದು ನಾಗತಳ್ಳಿ ಚಂದ್ರಶೇಖರ್ ಅವರು. ಸನ್ನಿವೇಶಗಳ ಆಳವನ್ನು ಗ್ರಹಿಸಿ ಅವರು ಬರೆದ ಸಂಭಾಷಣೆಗಳು ಅದ್ಭುತವಾಗಿದೆ. ಕಥೆಯ ಬಗ್ಗೆ ಹೇಳುವುದಾದರೆ, ಬಿ ವಿ ವೈಕುಂಠರಾಜು ಅವರ ‘ಉದ್ಭವ’ ಕಾದಂಬರಿಯೇ ಈ ಸಿನೆಮಾಗೆ ಸ್ಫೂರ್ತಿ. ತೆಲುಗು, ಹಿಂದಿ, ಮಲಯಾಳಂ ಭಾಷೆಗೂ ಅನುವಾದಗೊಂಡಿರುವ ಈ ಕೃತಿ, ನಾಟಕಕ್ಕೂ ರೂಪಾಂತರಗೊಂಡು, 1990 ರಲ್ಲಿ ಕೋಡ್ಲು ರಾಮಕೃಷ್ಣರ ನಿರ್ದೇಶನದಲ್ಲಿ ಚಲನಚಿತ್ರವಾಯಿತು. ರಾಗಣ್ಣನ ಪಾತ್ರದಲ್ಲಿ ಅನಂತ ನಾಗ್ ಅವರನ್ನು ಹೊರತು ಪಡಿಸಿ ಇನ್ನೊಬ್ಬರನ್ನು ಊಹಿಸಿಕೊಳ್ಳುವುದು ಕಷ್ಟ. ತಮ್ಮ ಸಹಜ ಅಭಿನಯದಿಂದ ಯಾವುದೇ ಪಾತ್ರಕ್ಕೆ ಜೀವತುಂಬುವ ಅವರು one of the best. ವಿಶೇಷವಾಗಿ ಇಂತಹ satirical ಪಾತ್ರಗಳು ಅವರಿಗೆ ಹೇಳಿ ಮಾಡಿಸಿದಂತಿರುತ್ತದೆ.

ಚಿತ್ರದ ಕೊನೆಯಲ್ಲಿ ಒಂದು ಸಾಲು ನನ್ನನ್ನು ಬಹುವಾಗಿ ಕಾಡುತ್ತಿದೆ. ಉದ್ಭವ ಮೂರುತಿಯ ಅಸಲೀಯತ್ತನ್ನು ಬಯಲಿಗೆಳೆಯಬೇಕು ಎಂದು ಒಂದಷ್ಟು ಮಂದಿ ವಿಚಾರವಾದಿಗಳು ಹೋರಾಟ ಮಾಡುವಾಗ ರಾಗಣ್ಣ ಹೇಳುವ ಮಾತದು. ಅದು ಧಾರ್ಮಿಕತೆಯ ಬಗ್ಗೆ ಜನರಿಗಿರುವ ನಂಬಿಕೆಗೆ ಕೈಗನ್ನಡಿಯಂತಿದೆ. ‘ಸಾಕ್ಷಾತ್ ಗಣೇಶ ಮತ್ತು ಶಿವ ಇಲ್ಲಿಗೆ ಬಂದು ಇದೆಲ್ಲ ಮೋಸ ಅಂತ ಹೇಳಿದ್ರೂ ಇವ್ರದನ್ನು ನಂಬೋದಿಲ್ಲ’ – ಈ ಮಾತು ಇಂದಿಗೂ ಪ್ರಸ್ತುತ!


  • ಕಾರ್ತಿಕ್ ಕೃಷ್ಣ

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW