ನನ್ನಂಥವರಿಗೆ ಪುಸ್ತಕಗಳ ಓದಿಗಿಂತಲೂ ಕಣ್ಣಿಗೆ ನಿತ್ಯ ಕಂಡದ್ದೆಲ್ಲವೂ ಬರಹದ ವಸ್ತು ವಿಷಯದಿಂದ ಎದೆಗೆ ಬಿದ್ದದ್ದು ಅಕ್ಷರವಾಗಿ ಹೊರ ಹೊಮ್ಮುವಂತಾಗುತ್ತದೆ. ಲೇಖಕರಾದ ಹಿರಿಯೂರು ಪ್ರಕಾಶ್ ಅವರ ಬರಹದ ಕುರಿತಾದ ಮನದ ಮಾತು…
” ವಾರಕ್ಕೆ ಏನಿಲ್ಲವೆಂದರೂ ಎರಡು ಮೂರು ಆರ್ಟಿಕಲ್ ಅಂತ ಏನಾದ್ರೂ ಬರೀತಾನೇ ಇರ್ತೀಯಪ್ಪಾ ! ಈ ಬರವಣಿಗೆಗೆ ಮ್ಯಾಟರ್ರು ಹೇಗೆ ಹೊಳೆಯುತ್ತೆ , ವಿಷಯ ಸಂಗ್ರಹಣೆ ಅಷ್ಟು ಬೇಗ ಹೇಗೆ ಮಾಡ್ತೀಯಾ? ಮೋಸ್ಟ್ ಆಫ಼್ ದ ಬರಹಗಳಲ್ಲಿನ ವಿಷಯ ಮಂಡನೆ, ನಿರೂಪಣೆ ಹಾಗೂ ಸಮರ್ಥನೆ ಹೆಚ್ಚು ಕಡಿಮೆ ಓಕೆಯಾಗೇ ಇರುತ್ತೆ. ಇದಕ್ಕೆಲ್ಲಾ ಟೈಮ್ ಹೆಂಗೆ ಹೊಂದಿಸಿಕೊಳ್ತೀಯಾ, ಅಷ್ಟುದ್ದ ಕನ್ನಡದಲ್ಲಿ ಹೇಗೆ ಟೈಪ್ ಮಾಡ್ತೀಯಾ?”…
ಕಳೆದ ಭಾನುವಾರ ದಾವಣಗೆರೆಯಲ್ಲಿ ಅಪರೂಪಕ್ಕೆ ಸಿಕ್ಕ ಅಲ್ಲಿನ ಪರಿಚಿತ ಹಿರಿಯ ವೈದ್ಯರೊಬ್ಬರು ಹೀಗೆ ಅಚಾನಕ್ಕಾಗಿ ಮಾತಿಗೆ ಸಿಕ್ಕಾಗ ಕೇಳಿದ್ದರು ! ಇದೇ ಅರ್ಥ ಬರುವಂತೆ ನನ್ನನ್ನು ಬಲ್ಲ ಅನೇಕರೂ ಸಹ ಆಗಾಗ್ಗೆ ಎಲ್ಲಿಯಾದರೂ ಸಿಕ್ಕಾಗ ಕೇಳುತ್ತಲೇ ಇರುತ್ತಾರೆ . ಸೋಷಿಯಲ್ ಮೀಡಿಯಾ ಎಷ್ಟೊಂದು ಪ್ರಭಾವ ಬೀರಿದೆಯೆಂದರೆ ನಿಮ್ಮ ಹಿಂದಿನ ಎಲ್ಲಾ ಪರಿಚಯ, ಇಂದಿನ ಪದದನಾಮಗಳಿಗಿಂತಲೂ ಇಲ್ಲಿ ಬರೆದು ಪೋಸ್ಟ್ ಮಾಡಿದ ನಾಲ್ಕಕ್ಷರಗಳ ಸೆಳೆತವೇ ಹೊರ ಜಗತ್ತಿಗೆ ಅಥವಾ ಈಗಾಗಲೇ ಪರಿಚಿತರಾಗಿರುವ ಪ್ರಪಂಚಕ್ಕೆ ನಮ್ಮನ್ನು ಮತ್ತೇ ಅದ್ಭುತವಾಗಿ ಪರಿಚಯ ಮಾಡಿಸಿ ಬಿಡುತ್ತದೆ. ಇದು ಕೇವಲ ನನಗೊಬ್ಬನಿಗೇ ಮಾತ್ರವಲ್ಲ, ಬಹುತೇಕರ ವಿಚಾರದಲ್ಲೂ ಹೆಚ್ಚು ಕಡಿಮೆ ಹೀಗೆಯೇ ಇದ್ದಿರಬಹುದು.
ವಾಸ್ತವವಾಗಿ ಸಾಮಾಜಿಕ ಜಾಲತಾಣದ ಬರಹಗಳು ತುಂಬಾ ಸುಲಭಕ್ಕೆ ಎಲ್ಲರಿಗೂ ರೀಚ್ ಆಗುವುದರಿಂದ, ಓದುಗರಿಗಿಂತ ಬರಹಗಾರರೇ ಹೆಚ್ಚಾಗಿರುವುದರಿಂದ ಇಲ್ಲಿನ ಬರಹಗಳನ್ನು ಗಂಭೀರವಾಗಿ ಓದುವವರು ಕಡಿಮೆ. ಏನಿದ್ದರೂ ತಮಗಿರುವ ಕಡಿಮೆ ಸಮಯದಲ್ಲಿ ಹಾಗೇ ಸುಮ್ಮನೇ ಗ್ಲ್ಯಾನ್ಸ್ ಮಾಡಿ ಮುಂದೆ ಹೋಗುವವರೇ ಹೆಚ್ಚು. ಹಾಗಂತ ಇಲ್ಲಿನ ಬರಹಗಳೆಲ್ಲವೂ ಪೂರಾ ಸತ್ವರಹಿತವಾದದ್ದೇನಲ್ಲ. ಅನೇಕ ಪ್ರತಿಭಾವಂತ ಉದಯೋನ್ಮುಖ ಬರಹಗಾರರಿಗೆ ತಮ್ಮ ಪ್ರತಿಭಾ ಪ್ರದರ್ಶನಕ್ಕೆ ಈ ಮೂಲಕ ಒಂದು ವೇದಿಕೆ ಸಿಕ್ಕಂತಾಗಿದೆ. ಆದರೂ ಸುಲಭವಾಗಿ ಸಿಗುವ ಯಾವುದಕ್ಕೇ ಆದರೂ ನಮ್ಮಲ್ಲಿ ಬೆಲೆ ಅಥವಾ ಮೌಲ್ಯ ಕಡಿಮೆ ಎನ್ನುವುದು ರೂಢಿಯೊಳಗೆ ಬಂದು ನಿಂತಿದೆಯಲ್ಲವೇ…?
ಫೋಟೋ ಕೃಪೆ : google
ಯಾವ ವಸ್ತುವೇ ಆಗಲೀ ಸುಲಭಕ್ಕೆ ಅಥವಾ ಉಚಿತವಾಗಿ ಕೈಗೆಟುಕುವಂತಿದ್ದು, ಅದು ಹಲವರಿಗೆ ಜೀವನದಲ್ಲಿ ಉಪಕಾರವಾಗುವಂತಿದ್ದರೂ ಕೂಡ ಅಂಥವುಗಳನ್ನು ಹಿಂದೆ ಮುಂದೆ ನೋಡದೇ ಬಿಟ್ಟಿ ಎಂಬ ಪದ ಪ್ರಯೋಗ ಮಾಡಿ ಅವಹೇಳನ ಮಾಡಿ ಝಾಡಿಸುವುದು ನಮ್ಮಲ್ಲಿ ಕೆಲವರ ಅಭ್ಯಾಸ . ಫ಼ೇಸ್ ಬುಕ್ಕಲ್ಲಿ ಪೋಸ್ಟ್ ಆಗುವ ಅನೇಕರ ಪ್ರಬುದ್ಧ ಕತೆ, ಕಾದಂಬರಿ, ಕವನಗಳು ಅಥವಾ ಪ್ರಬಂಧಗಳ ಕಂಟೆಂಟನ್ನೇ ಒಂದು ಸೊಗಸಾದ ರಕ್ಷಾ ಕವಚವಿರುವ ಆಕರ್ಷಕ ಪುಸ್ತಕ ಮಾಡಿ ಅದಕ್ಕೆ ಒಂದಷ್ಟು ಬೆಲೆ ನಿಗದಿ ಮಾಡಿ ಮಾರಾಟಕ್ಕಿಟ್ಟಾಗ ಅದನ್ನೇ ದುಡ್ಡು ಕೊಟ್ಟುಕೊಂಡು ಓದಿ ಅಥವಾ ಓದದೆಯೂ ಜನ ಖುಷಿಪಡುತ್ತಾರೆ. ಆಗ ಅಂತಹ ಬರಹಗಳಿಗೆ ಒಂದು ಬೆಲೆ ಅಥವಾ ಘನತೆ ಅಂತಾನೂ ಪ್ರಚಾರಕ್ಕೆ ಬರಬಹುದು. ! ಒಟ್ಟಾರೆಯಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಆಗುವ ಬರಹಗಳ ಮೌಲ್ಯ ಎಷ್ಟೇ ಉತ್ತಮವಾಗಿದ್ದರೂ ಅವು ಒಂಥರಾ ” ಬೇಲಿಯ ಹೂ ” ಗಳಿದ್ದಂತೆ !
ಅದಿರಲಿ, ವಿಷಯಾಂತರ ಮಾಡದೇ ನೇರವಾಗಿ ಈಗಿನ ವಿಷಯಕ್ಕೇ ಬರುತ್ತೇನೆ.
ಈ ಸಾಮಾನ್ಯ ತಿಳಿವಳಿಕೆಯ ಪರಿಧಿಯಲ್ಲೇ ಹೇಳುವುದಾದರೆ ನಮ್ಮ ನಿತ್ಯ ಬದುಕಿನಲ್ಲಿ ಜರುಗುವ ಹತ್ತಾರು ಘಟನೆಗಳೇ ನನ್ನ ಬರಹದ ವಸ್ತು ವಿಷಯ ಎಲ್ಲವೂ ! ಒಬ್ಬ ಬರಹಗಾರನಾದವನು ಒಳ್ಳೆಯ ಓದುಗನೂ ಆಗಿದ್ದಿರಬೇಕು ಎಂಬ ಅರ್ಥಗರ್ಭಿತವಾದ ಮಾತಿದೆ. ಅದು ಸಾಹಿತ್ಯವನ್ನು, ಬರವಣಿಗೆಯನ್ನು ಗಂಭೀರವಾಗಿ ಸ್ವೀಕರಿಸಿ ಅದರಲ್ಲೇ ಸಾಧನೆ ಮಾಡಿದ ಅಥವಾ ಸಾಧಿಸುವ ಛಲವುಳ್ಳವರ ಮಾತುಗಳು. ಹೀಗಾಗಿಯೇ ಒಂದು ಉತ್ತಮ ಕೃತಿ ನಿಮ್ಮಿಂದ ಹೊರಬರಬೇಕಾದರೆ ಅಂತಹಾ ಹತ್ತಾರು ಪುಸ್ತಕಗಳನ್ನು ಓದಿ ಜ್ಞಾನ ಸಂಪಾದನೆ ಮಾಡುವುದು ಅಷ್ಟೇ ಅವಶ್ಯ ಎಂಬುದು ಈ ಮಾತಿನ ತಾತ್ಪರ್ಯ ಹಾಗೂ ಸತ್ಯ.
ಆದರೆ ಒಬ್ಬ ಗಂಭೀರ ಬರಹಗಾರನಲ್ಲದ ನನ್ನಂಥವರ ಪಾಲಿಗೆ , ನಮ್ಮ ಜೀವನಕ್ಕಿಂತ ದೊಡ್ಡ ವಿಶ್ವ ವಿದ್ಯಾಲಯವಿಲ್ಲ, ನಮ್ಮ ಕುಟುಂಬಕ್ಕಿಂತ ಉತ್ತಮ ಅಧ್ಯಾಪಕರಿಲ್ಲ, ನಮ್ಮ ಸುತ್ತ ಮುತ್ತಲ ಜನಗಳು ಕಲಿಸುವ ಪಾಠಗಳಿಗಿಂತ ಒಳ್ಳೆಯ ಲೆಸನ್ ಗಳಿಲ್ಲ, ಹಲವು ಊರು ಕೇರಿ ಭಾಷೆಗಳು ಕೊಡುವ ಮಹತ್ವದ ಅನುಭವವಿಲ್ಲ, ಈ ಸಮಾಜಕ್ಕಿಂತ ಅರ್ಥಪೂರ್ಣ ಸಿಲ್ಲಬಸ್ ಇಲ್ಲ ಹಾಗೂ ಬದುಕಿನಲ್ಲಿ ಬರುವ ಕಷ್ಟಗಳಿಗಿಂತ ದೊಡ್ಡ ಪರೀಕ್ಷೆಗಳಿಲ್ಲ ಎಂಬುದು ನಾನು ಅರ್ಥೈಸಿಕೊಂಡ ಅರಿವು, ಕಂಡುಕೊಂಡ ಸತ್ಯ.
ಇಂತಹ ಒಂದು ಸೆಲ್ಫ್- ರಿಯಲೈಸೇಶನ್ ನೊಂದಿಗೆ ಜೀವನದ ಪ್ರತೀ ಹಂತದಲ್ಲೂ ಎದುರಾಗುವ ಅನೇಕ ಸವಾಲುಗಳು , ಅವುಗಳು ತಂದೊಡ್ಡುವ ಸಮಸ್ಯೆಗಳು ಮತ್ತವುಗಳಿಗೆ ಆಯಾ ಕಾಲಘಟ್ಟದಲ್ಲಿ ಜನರು ಹೇಗೆ ರಿಯಾಕ್ಟ್ ಆಗುತ್ತಾರೆಂಬ ವಾಸ್ತವಗಳನ್ನು ಸೂಕ್ಷ್ಮವಾಗಿ ಅರ್ಥೈಸಿ ಬರಹಕ್ಕಿಳಿಸಿಸುವುದು ಸಹಾ ಒಂದರ್ಥದಲ್ಲಿ ಸಾಮಾಜಿಕ ಹೊಣೆಗಾರಿಕೆಯ ಭಾಗ ಎಂದು ನಂಬಿ ಬರೆಯುವವರೂ ಇದ್ದಾರೆ. ಹೀಗಾಗಿಯೇ ಕಣ್ಣಿಗೆ ಬಿದ್ದದ್ದೆಲ್ಲವೂ ಅನುಭವಾಧಾರಿತ ವಿಷಯವಾಗಿ ಪರಿವರ್ತನೆಯಾಗಿ ಆನಂತರ ಅಂತಹಾ ವಿಚಾರಗಳು ನೇರವಾಗಿ ಎದೆಗೇ ಬಿದ್ದು ಅಲ್ಲಿಂದ ಅಕ್ಷರರೂಪ ತಾಳಿ ಬರಹದ ರೂಪಕ್ಕಿಳಿಯ ಬಹುದು.!
ಈ ಹಿನ್ನೆಲೆಯಲ್ಲಿಯೇ ಪುಸ್ತಕಗಳ ಓದಿಗಿಂತಲೂ ನನ್ನಂಥವರ ಕಣ್ಣಿಗೆ ನಿತ್ಯ ಕಂಡದ್ದೆಲ್ಲವೂ ಬರಹದ ವಸ್ತು- ವಿಷಯವಾದರೆ , ತನ್ಮೂಲಕ ಎದೆಗೆ ಬಿದ್ದದ್ದು ಅಕ್ಷರವಾಗಿ ಹೊರಹೊಮ್ಮು ವಂತಾಗುತ್ತದೆ…!
ಫೋಟೋ ಕೃಪೆ : google
ಮರೆಯುವ ಮುನ್ನ
ಕಣ್ಣಿಗೆ ಬಿದ್ದದ್ದೆಲ್ಲವೂ ವಿಷಯವಾಗೋದೇನೋ ಸರಿ. ಹಾಗಂತ ಆ ವಿಷಯದಲ್ಲಿ ಹೂರಣವಿಲ್ಲದ್ದಾಗ , ಸಾಮಾಜಿಕ ಬದ್ಧತೆ ಇಲ್ಲದಾಗ, ನೈಜತೆ, ಪಾರದರ್ಶಕತೆ ಅಥವಾ ವಾಸ್ತವತೆಯ ಅಂಶಗಳು ಅಲ್ಲಿ ಮರೆಯಾಗಿದ್ದಾಗ ಅಂಥವುಗಳನ್ನು ಬರೆದರೂ, ಬರೆಯದೇ ಇದ್ದರೂ ಏನೂ ವ್ಯತ್ಯಾಸವಾಗೋಲ್ಲ. ನೀವು ಓದಿ ಬರೆಯುವಿರೋ ಅಥವಾ ಓದದೇ ಬರೆಯುವಿರೋ ಎನ್ನುವುದಕ್ಕಿಂತ ನೀವು ಬರೆದಿರುವುದು ನಾಲ್ಕಾರು ಜನರಿಗೆ ಹೇಗೆ ಮುಟ್ಟಬಲ್ಲದು ಅಥವಾ ಉಪಯುಕ್ತವಾಗ ಬಲ್ಲದೆಂಬುದೇ ಕೊನೆಗೆ ಮ್ಯಾಟರ್ ಆಗೋದು. ಹೀಗಾಗಿ ನೀವು ಬರೆದ ಬರಹ “ಸತ್ವಯುತ” ವಾಗಿರಬಲ್ಲದೋ ಇಲ್ಲವೋ ಗೊತ್ತಿಲ್ಲ, ಆದರೆ ಆದಷ್ಟೂ “ಸತ್ಯಯುತ” ವಾಗಿದ್ದಲ್ಲಿ ಹೆಚ್ಚುಕಾಲ ನಿಲ್ಲಬಲ್ಲದು.
ಕಣ್ಣಿಗೆ ಬಿದ್ದ ವಿಚಾರಗಳನ್ನು ಆರಿಸಿ ಶೋಧಿಸಿ ಅದರಲ್ಲಿ ಸರಿ ಅನಿಸಿದ್ದನ್ನು ಬರಹಕ್ಕಿಳಿಸುವ ಹಾದಿಯಲ್ಲಿ ಆತ್ಮತೃಪ್ತಿಯಿದೆ, ನೇರವಂತಿಕೆಯಿದೆ, ನಮ್ಮ ಗುಣ ಸ್ವಭಾವದ ಸಿಂಚನವಿದೆ ಹಾಗೂ ಎಲ್ಲಕ್ಕಿಂತ ಮಿಗಿಲಾಗಿ ಜೀವನೋತ್ಸಾಹದ ಚಿಲುಮೆಯೂ ಇದೆ.
ಕಣ್ಣಿಗೆ ಕಾಣಿಸಲಿ ವಿಷಯ ; ಎದೆಗೆ ಬೀಳಲಿ ಅಕ್ಷರ !!
ಲಾಸ್ಟ್ ಪಂಚ್ :
ನೂರು ಫ಼ೇಕ್ ಸುದ್ದಿಗಳನ್ನು ಶೇರ್ / ಫ಼ಾರ್ವರ್ಡ್ ಮಾಡುವ ಬದಲು ಮೂರುಸಾಲು ಒಳ್ಳೆಯ ಸುದ್ದಿಗಳನ್ನು ಸ್ವಂತವಾಗಿ ರಚಿಸಿ ಹಂಚಿಕೊಂಡಾಗ ಅದು ಕೊಡುವ ಆತ್ಮ ತೃಪ್ತಿಯೇ ಬೇರೆ !
ಪ್ರೀತಿಯಿಂದ……
- ಹಿರಿಯೂರು ಪ್ರಕಾಶ್