ಖ್ಯಾತ ಕಾದಂಬರಿಗಾರ್ತಿ ರೇಖಾ ಕಾಖಂಡಕಿ ಕಿರುಪರಿಚಯ

ರೇಖಾ ಕಾಖಂಡಕಿ ಇವರು ಬಾಗಲಕೋಟೆ ಮೂಲದ ಲೇಖಕಿ. ಅವರ ಒಂದು ಕಿರುಪರಿಚಯವನ್ನು ವಸಂತ ಗಣೇಶ್ ಅವರು ಓದುಗರೊಂದಿಗೆ ಹಂಚಿಕೊಂಡಿದ್ದಾರೆ ತಪ್ಪದೆ ಓದಿ….

ಸ್ಥಳ: ಬಾಗಲಕೋಟೆಯ ಬೊಮ್ಮಣಗಿ
ತಂದೆ: ಮಧ್ವರಾವ್ ಕುಲಕರ್ಣಿ
ತಾಯಿ: ವತ್ಸಲಾ ಬಾಯಿ
ಪತಿ : ಸುಭಾಷ್ ಕಾಖಂಡಕಿ
ಮಕ್ಕಳು: ಕೋಕಿಲ, ಶಿಲ್ಪ

ತಂದೆ ಶಾನುಭೋಗರಾಗಿದ್ದರು. ಇವರ ಒಂಬತ್ತು ಮಕ್ಕಳಲ್ಲಿ ಕೊನೆಯವರು ರೇಖಾ ಕಾಖಂಡಕಿ. ಸಂಜೆ ಮನೆಗೆ ಬರುವಾಗ ಓಡಾಟದಿಂದ ಆದ ಕಾಲು ನೋವಿಗೆ ಮಕ್ಕಳಿಂದ ಕಾಲು ಒತ್ತಿಸಿಕೊಳ್ಳುತ್ತಾ ಸುತ್ತ ಮುತ್ತಲಿನಲ್ಲಿ ನಡೆದ ವಿಷಯಗಳನ್ನು ಕಥೆಯ ರೂಪದಲ್ಲಿ ಹೇಳುತ್ತಿದ್ದರು. ಆಲ್ಲಿಂದಲೆ ಕಥೆಯತ್ತ ಒಲವು ಮೂಡಿತ್ತು ರೇಖಾ ಕಾಖಂಡಕಿ ಅವರಿಗೆ.

ರೇಖಾ ಅವರ ತಾಯಿ ಅಂತಃಕರಣ ಹೆಂಗಸು. ಇದಕ್ಕೊಂದು ಉದಾಹರಣೆ ಎಂದರೆ ಅವರು ವಾಸವಿದ್ದ ಕೇರಿಯ ಬಸವ್ವ ಎನ್ನುವ ಹೆಂಗಸಿನ ಎಳೆಯ ಮಗು ತೀರಿ ಹೋದಾಗ ಗೋಳಾಡುವ ಆಕೆಯನ್ನು ಕರೆದು ಆಕೆಯ ಮಡಿಲಿಗೆ ತಮ್ಮ ಮಗುವನ್ನು ಹಾಕಿ ಮಗುವಿಗೆ ಹಾಲು ಕುಡಿಸಲು ಹೇಳುತ್ತಾರೆ. ಜಾತಿಯ ಪ್ರಶ್ನೆಯನ್ನು ಬಸವ್ವ ಎತ್ತಿದಾಗ ತಾಯಿ ಹಾಲಿಗೆ ಯಾವ ಜಾತಿಯೂ ಇಲ್ಲ, ನಿನ್ನದೇ ಮಗು ಎಂದು ತಿಳಿ, ಹಾಲು ಕುಡಿಸು ಎಂದು ಹೇಳಿದ್ದರಂತೆ.

ಇಂತಹ ತಂದೆ ತಾಯಿಯರ ಮಗಳಾದ ಇವರಿಗೆ ಲೇಖಕಿ ಆಗಲು ಸ್ಪೂರ್ತಿ ತಂದೆಯಾದರೆ, ಮೂಲ ದ್ರವ್ಯ ತಾಯಿ ಎಂದರೆ ತಪ್ಪಾಗಲಾರದು.

ಫೋಟೋ ಕೃಪೆ : google

ಬಾಗಲಕೊಟೆಯ ಪಾಣಿ ಮಹಲ್ ಶಾಲೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಪೂರೈಸಿದ ಇವರ ಪ್ರೌಢಶಾಲಾ ಶಿಕ್ಷಣ ಬೆಂಗಳೂರಿನಲ್ಲಿ ನಡೆಯಿತು. ಬಿಡುವಿನ ವೇಳೆಯಲ್ಲಿ ಅನಕೃ, ತರಾಸು, ಬೈರಪ್ಪ ತ್ರಿವೇಣಿ ಅವರ ಕೃತಿಗಳನ್ನು ಓದುತ್ತಾ ಪ್ರಭಾವಿತರಾಗಿದ್ದರು. ಅದರ ಪ್ರಭಾವದಿಂದ ಇವರು ವಿವಿಧ ದೃಷ್ಟಿಕೋನಗಳಿಂದ ಜೀವನವನ್ನು ನೋಡಲು ಆರಂಭಿಸುತ್ತಾರೆ. ಮದುವೆಯ ನಂತರ ಬಿ ಎ ಪದವಿ ಪಡೆದ ಇವರು ಎರಡನೇ ಮಗಳು ಹುಟ್ಟಿದ ನಂತರ ಎಂ ಎ ಪದವಿ ಪಡೆದರು. ಮೊಮ್ಮಕ್ಕಳು ಹುಟ್ಟಿದ ಮೇಲೆ Ph D ಮಾಡಿದ ಇವರು ವಿದ್ಯೆಗೆ ವಯಸ್ಸಿನ ಹಂಗಿಲ್ಲ ಎನ್ನುವುದಕ್ಕೆ ಸೂಕ್ತ ಉದಾಹರಣೆ.

ಇವರು ಬರೆಯಲು ಆರಂಭಿಸಿದ್ದು 17 ನೆಯ ವಯಸ್ಸಿಗೆ. ಮಾಸ್ತಿ ಅವರ ಮನೆ ಇವರ ಮನೆಯ ಹತ್ತಿರವೇ ಇತ್ತಂತೆ. ಇವರು ತಾವು ಬರೆದ ಕಥೆಗಳನ್ನು ತೆಗೆದುಕೊಂಡು ಮಾಸ್ತಿ ಅವರ ಮನೆಗೆ ಹೋದಾಗ ಅವರು ಎಂ.ವಿ. ಸೀತಾರಾಮಯ್ಯ ಅವರ ಹತ್ತಿರ ಹೋಗಲು ಹೇಳುತ್ತಾರೆ. ನಾಲ್ಕು ದಿನಗಳ ನಂತರ ಬರಲು ಹೇಳಿದ ಸೀತಾರಾಮಯ್ಯನವರು ಇವರು ಬರೆದ ಕಥೆಗಳನ್ನು ಓದಿ ಸೂಕ್ತ ಸಲಹೆ ಮಾರ್ಗದರ್ಶನಗಳನ್ನು ನೀಡಿ, ಹರಸಿ ಕಳುಹಿಸುತ್ತಾರೆ. ಮುಂದೆ ಇವರಿಗೆ ಲೇಖಕಿ ಎಚ್.ಎಸ್. ಪಾರ್ವತಿ ಅವರ ಪರಿಚಯ ಆಗುತ್ತದೆ.

ಇವರ ಅನೇಕ ಕಾದಂಬರಿಗಳು ಜನಪ್ರಿಯವಾಗಿವೆ. ಇವರ ಕಾದಂಬರಿ “ಇದ್ದೂ ಇಲ್ಲದ ಸಂಬಂಧಗಳು” ಇದರಲ್ಲಿ ಆಲಮಟ್ಟಿ ಆಣೆಕಟ್ಟಿನ ಹಿನ್ನೀರಿನಲ್ಲಿ ಮುಳುಗಡೆಯಾದ ಬಾಗಲಕೋಟೆಯ ಜನಜೀವನದ ದೈಹಿಕ ಹಾಗೂ ಮಾನಸಿಕ ಸಂಕಟಗಳನ್ನು ಸ್ಪಷ್ಟವಾಗಿ ಚಿತ್ರಿಸಿದ್ದಾರೆ.

ಇವರು ಹಲವಾರು ಕೃತಿಗಳನ್ನು ರಚಿಸಿದ್ದಾರೆ. ಇವರು ಬರೆದ ಕಥೆಗಳು ಮಲ್ಲಿಗೆ, ಜನಪ್ರಗತಿ, ಪ್ರಜಾಮತ ಮುಂತಾದ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಇವರು ಕಾಲೇಜಿನಲ್ಲಿ ವ್ಯಾಸಂಗ ಮಾಡುವಾಗಲೇ “ಕೋಟಿ” ಎನ್ನುವ ಕಾದಂಬರಿ ಬರೆದಿದ್ದರು. ಇದರಲ್ಲಿ ಬಾಗಕೋಟೆಯ ಪರಿಸರವನ್ನು ಚಿತ್ರಿಸಿದ್ದಾರೆ. ಇದು ಮಲ್ಲಿಗೆ ಮಾಸಪತ್ರಿಕೆಯ ಕಾದಂಬರಿ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಪಡೆಯಿತು.

ಫೋಟೋ ಕೃಪೆ : google

ನಂತರ ಹಲವಾರು ಕಾದಂಬರಿಗಳನ್ನು ಬರೆದಿದ್ದಾರೆ. ಬಂಧನ, ಹೊಂಬೆಳಕು, ಅಭೇಧ್ಯ, ತೇಲಿ ಹೋದ ನೌಕೆ, ನೀನಿಲ್ಲದ ಜೀವನ, ಮುತ್ತಾದ ಕಂಬನಿ, ಸಂಭವಾಮಿ ಯುಗೇ ಯುಗೇ, ಚಾರುಲತಾ, ಬಾಳೆಂಬ ಆಗಸದಿ, ಆಶಾಕಿರಣ, ಉದಯದೆಡೆಗೆ ವಸಂತರಾಗ, ಹೊಸ ಹೆಜ್ಜೆ,
ನಿರ್ಣಾಯಕನಾರು, ಅರುಣರಾಗ, ಪೃಥೆ, ಪ್ರೇಮದ ಬಲೆ, ನನ್ನ ನಿನ್ನ ನಡುವೆ, ಹೃದಯದ ಹಾಡು, ಕಪ್ಪು ತೆರೆ, ಆಡಿಸಿದಳೆಶೋಧೆ, ಪಯಣದ ಹಾದಿಯಲ್ಲಿ,ಬಂಧನ, ವೈವಸ್ವತ ಮುಂತಾದವುಗಳು.

ಇವರ ಹಲವಾರು ಕಾದಂಬರಿಗಳಲ್ಲಿ ಪ್ರಾದೇಶಿಕ ಭಾಷೆಯ ಸೊಗಡು, ಅನುಭವ ಸಾಮಾಜಿಕ ಸ್ಥಿತ್ಯಂತರಗಳೇ ವಸ್ತುಗಳಾಗಿವೆ.

ಇವರ ಆರುಣರಾಗ ಕಾದಂಬರಿ ಅನಂತನಾಗ್ ಹಾಗೂ ಗೀತಾ ಅವರ ಅಭಿನಯದಲ್ಲಿ ಚಲನಚಿತ್ರವಾಗಿ ಪ್ರಖ್ಯಾತವಾಗಿದೆ. “ಹೊಸ ಹೆಜ್ಜೆ” ಲಂಬಾಣಿಗಳ ಬದುಕಿನ ನೈಜ ಚಿತ್ರಣವನ್ನು ನೀಡಿರುವ ಕಾದಂಬರಿ. ಇದು ಬೆಳಗಾವಿಯಲ್ಲಿ ನಡೆದ ವಿಶ್ವಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬಹುಮಾನ ಪಡೆದಿದ್ದು, ಧಾರವಾಹಿಯಾಗಿಯೂ ಮೆಚ್ಚುಗೆ ಗಳಿಸಿತು. ಈವರೆಗೆ ಒಟ್ಟು 36 ಕಾದಂಬರಿಗಳು, 3 ಕಥಾಸಂಕಲನಗಳು, 10 ಗ್ರಂಥ ಸಂಪಾದನೆ ಮತ್ತು ಹಲವಾರು ಕವನಗಳು ಪ್ರಕಟವಾಗಿವೆ.

“ಸದು ಎಂಬ ಬ್ರಹ್ಮಾಂಡ” ಮತ್ತು “ಬದುಕು ಪಾರಿಜಾತದ ಹೂವಲ್ಲ” ಕೃತಿಗಳು ಮರಾಠಿ ಭಾಷೆಗೆ ಅನುವಾದಗೊಂಡಿವೆ.

ಇವರನ್ನು ಅರಸಿ ಬಂದಿರುವ ಪ್ರಶಸ್ತಿಗಳಲ್ಲಿ “ವರ್ಧಮಾನ ಸಾಹಿತ್ಯ ಪ್ರಶಸ್ತಿ”, “ಹಾವನೂರ ಸಾಹಿತ್ಯ ಪ್ರಶಸ್ತಿ”, “ಸತ್ಯಕಾಮ ಪ್ರತಿಷ್ಠಾನ ಪ್ರಶಸ್ತಿ”, “ಶ್ರೀಮತಿ ಸುಧಾಮೂರ್ತಿ ಇನ್‌ಫೋಸಿಸ್ ಸಾಹಿತ್ಯ ಪ್ರಶಸ್ತಿ”, “ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ”, “ಗೀತಾ ದೇಸಾಯಿ ದತ್ತಿನಿಧಿ ಪ್ರಶಸ್ತಿ” ಮಾಸ್ತಿ ಪ್ರಶಸ್ತಿ, ಹೀಗೆ 22 ಕ್ಕು ಹೆಚ್ಚು ಪ್ರಶಸ್ತಿಗಳನ್ನು ಪಡೆದಿದ್ದಾರೆ.

ಇವುಗಳಲ್ಲದೆ ಇವರು ಬರೆದ ಕಾದಂಬರಿಗಳಿಗೆ ಒಂದೊದಕ್ಕೆ ನಾಲ್ಕೈದು ಬೇರೆ ಬೇರೆ ಪ್ರಶಸ್ತಿಗಳು ದೊರೆತಿವೆ.

ಫೋಟೋ ಕೃಪೆ : youtube

ಇವುಗಳಲ್ಲದೆ “ನಾರ್ಥ್ ಕ್ಯಾಲಿಫೋರ್ನಿಯಾ ಕನ್ನಡ ಸಂಘ”, “ಮಿನಿಯಾ ಪೊಲೀಸ್ ಕನ್ನಡ ಸಂಘ”, ಅಮೆರಿಕಾ ಮುಂತಾದ ವಿದೇಶಿ ಸಂಘ-ಸಂಸ್ಥೆಗಳಿಂದಲೂ ಸನ್ಮಾನಿತರಾಗಿದ್ಧಾರೆ.

ಮೈಸೂರಿನ ಡಾ.ಕಾವ್ಯ ಅವರು ಇವರ ಕೃತಿಗಳ ಕುರಿತು phd ಮಾಡುತ್ತಿದ್ದಾರೆ.

ಇವರು ಸಾಮಾಜಿಕ ಕಾದಂಬರಿಯ ಜೊತೆಗೆ ದಾಸ ಸಾಹಿತ್ಯವನ್ನೂ ಕುರಿತು ಬರೆದಿದ್ದಾರೆ. ಪ್ರಸನ್ನವೆಂಕಟದಾಸರ ಕುರಿತು ಬರೆದ ಕೃತಿ ಚಲನಚಿತ್ರ ಕೂಡ ಆಗಿದೆ. ಇದಕ್ಕೆ ಇವರೇ ಚಿತ್ರಕಥೆ ಸಂಭಾಷಣೆ ಬರೆದಿದ್ದಾರೆ. ಇದೇ ವಿಷಯ ಕುರಿತು phd ಸಂಶೋಧನಾ ಕೃತಿ ಬರೆದಿರುವ ಇವರು ಡಾಕ್ಟರೇಟ್ ಕೂಡ ಪಡೆದಿದ್ದಾರೆ.

ಸಧ್ಯ ಬೆಂಗಳೂರಿನಲ್ಲಿ ವಾಸವಿರುವ ಸಾಹಿತ್ಯದ ಗಟ್ಟಿ ಧ್ವನಿಯ ಲೇಖಕಿಯಾದ ಶ್ರೀಮತಿ #ರೇಖಾ_ಕಾಖಂಡಕಿ ಅವರಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ. ಅವರಿಗೆ ಬಳಗದ ಪರವಾಗಿ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು. ಅವರಿಂದ ಇನ್ನಷ್ಟು ಕೃತಿಗಳ ರಚನೆಯಾಗಲಿ, ಅವುಗಳನ್ನು ಓದುವ ಭಾಗ್ಯ ನಮ್ಮೆಲ್ಲರದಾಗಲಿ.


  • ವಸಂತ ಗಣೇಶ್

 

0 0 votes
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW