“ಇದು ಪ್ರೀತಿಯೆಂಬ ಅಮೂರ್ತ ರೂಪದ ಅನಾವರಣದ ಕವಿತೆ. ಪ್ರೇಮವೆಂಬ ದಿವ್ಯಾನುಭೂತಿಯ ನಿತ್ಯ ಸತ್ಯ ರಿಂಗಣಗಳ ಭಾವಗೀತೆ. ಪ್ರೀತಿ, ಒಲವು, ಪ್ರೇಮ, ಅನುರಾಗ ಹೀಗೆ ನಾಮ ಹಲವು. ನೇಮ ಒಂದೆ. ಇದು ಕೇವಲ ಜೀವದ ಕ್ರಿಯೆಯಲ್ಲ, ಬದುಕಿನ ಪ್ರಕ್ರಿಯೆಯೂ ಅಲ್ಲ. ಅದು ಜೀವ-ಜೀವಗಳ ನಡುವಿನ ಅವಿನಾಭಾವ. ವರ್ಣನೆಗೂ ನಿಲುಕದ ದಿವ್ಯಾನುಭಾವ. ಅದು ಅನುಭವಕ್ಕಷ್ಟೇ ದಕ್ಕುವ ಅಪೂರ್ವ ಅನನ್ಯ ಜೀವಭಾವ ಸಂವೇದನೆ. ಏನಂತೀರಾ..?” – ಪ್ರೀತಿಯಿಂದ ಎ.ಎನ್.ರಮೇಶ್. ಗುಬ್ಬಿ.
ಬಿಡುವಿದ್ದಾಗ ಮಾಡುವುದಲ್ಲ ಪ್ರೀತಿ
ಬಿಡುವು ಮಾಡಿಕೊಂಡು ಬಂಧಿಸುತ
ಬಿಡುಗಡೆಯಿರದೆ ಬಂಧಿಯಾಗುವುದು ಪ್ರೀತಿ.!
ಗಡುವಿಟ್ಟುಕೊಂಡು ಮಾಡುವುದಲ್ಲ ಪ್ರೀತಿ
ಗಡುವುಗಳ ಬೇಡಿ ಬಂಧನಗಳಿಲ್ಲದೆ
ಗಡಿಬಿಡಿಯಿರದೆ ಗಟ್ಟಿಯಾಗುವುದು ಪ್ರೀತಿ.!
ಕಾಲ ಕಳೆಯಲು ಮಾಡುವುದಲ್ಲ ಪ್ರೀತಿ
ಹಗಲಿರುಳ ಹರಿವು ಪರಿವೆಗಳಿಲ್ಲದೆ
ಕಾಲಾತೀತವಾಗಿ ಕಲೆತು ಕೂಡುವುದು ಪ್ರೀತಿ.!
ಬಲದಿ ಬಲವಂತದಿ ಮಾಡುವುದಲ್ಲ ಪ್ರೀತಿ
ಒಲಿದು ಒಲುಮೆಯಲಿ ಒಲಿಸಿಕೊಂಡು
ಒಲವಿಂದ ಒಮ್ಮತದಿ ಒಟ್ಟಾಗುವುದು ಪ್ರೀತಿ.!
ನಲಿವಿದ್ದಾಗ ನುಲಿದು ಮಾಡುವುದಲ್ಲ ಪ್ರೀತಿ
ನೋವು ನಲಿವುಗಳ ನೆಪ ಜಪಗಳಿಲ್ಲದೆ
ನಿರಂತರ ಎಡಬಿಡದೆ ಬೆರೆಯುವುದು ಪ್ರೀತಿ.!
ಬೇಕೆನಿಸಿದಾಗ ಅರಸಿ ಮಾಡುವುದಲ್ಲ ಪ್ರೀತಿ
ಬೆಸುಗೆ ಒಸುಗೆಗಳ ಹಂಗು ಹಂಬಲವಿರದೆ
ನಿತ್ಯ ನಿರತ ಬಯಸಿ ಬೆಸೆಯುವುದು ಪ್ರೀತಿ.!
ಅರಿವು ಅಂದಾಜಿಟ್ಟು ಮಾಡುವುದಲ್ಲ ಪ್ರೀತಿ
ಅರಿವು ಅಂದಾಜುಗಳಿಲ್ಲದೆ ಅನುರಕ್ತರಾಗಿ
ಅನುಕ್ಷಣ ಅನುರಾಗದಿ ಆರಾಧಿಸುವುದು ಪ್ರೀತಿ.!
ನಿರೀಕ್ಷೆ ಅಪೇಕ್ಷೆಗಳಿಟ್ಟು ಮಾಡುವುದಲ್ಲ ಪ್ರೀತಿ
ಆಸೆ ಆಕಾಂಕ್ಷೆಗಳಿಲ್ಲದೆ ಆಸ್ಥೆ ಅಂತಃಕರಣದಿ
ಐಕ್ಯವಾಗಿ ಆತ್ಮಸಮಾಗಮವಾಗುವುದು ಪ್ರೀತಿ.!
- ಎ.ಎನ್.ರಮೇಶ್. ಗುಬ್ಬಿ