‘ಚುಟುಕು ಚಾಣಕ್ಯ’ ಪುಸ್ತಕ ಪರಿಚಯ

ಕವಿ ಗುರು ಹಿರೇಮಠ ‘ಬೆಳದಿಂಗಳು’ ಪುಸ್ತಕ ಕುರಿತು ಕವಿಯತ್ರಿ ಶೋಭಾ ನಾರಾಯಣ ಹೆಗಡೆ ಅವರು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

1.ನೋಡಿದ್ದು ಅವಳು
ಎಡವಿದ್ದು ನಾನು,
ನಕ್ಕಿದ್ದು ಜಗತ್ತು

2.ರುಚಿ ನೀಡುವ
ಉಪ್ಪಿನಲ್ಲಿ
ಸಕಲ ಜೀವರಾಶಿಗಳ
ಕಣ್ಣೀರಿದೆ….

3.ಇಡೀ ಜಗದ ಭಾವಗಳಲ್ಲಿ
ಕೇವಲ ಅವಳು
ಅವಳಾಗಿ ಉಳಿದು
ಉಸಿರಾದಳು ಪ್ರಕೃತಿ….

4.ಪ್ರತೀ ಸಾವಿನ ಎದುರು
ಯಮ ಅತ್ತಿದ್ದು
ಯಾರ ಕಣ್ಣಿಗೂ
ಕಾಣಿಸಲಿಲ್ಲ…….

5.ಎಲ್ಲವನ್ನೂ ಮೀರಿಸುವಾಕೆ ತಾಯಿ
ಎಲ್ಲವನ್ನೂ ಮರೆಸುವಾಕೆ ಮಡದಿ….

6.ಸಂಜೆ ಹೊತ್ತು
ದೀಪ ಹಚ್ಚಿಟ್ಟು ಹೋದ ಅಪ್ಪ
ಮರಳಿ ಬರಲೇ ಇಲ್ಲ;
ದೀಪ ಎಂದಿಗೂ ಆರಿಲ್ಲ……

7.ಬೆಳದಿಂಗಳು ಸೋತಿದೆ
ಅವಳ ಹೆಸರಿಗೆ
ಆ ಹೆಸರಲ್ಲಿ
ನನ್ನ ಬದುಕಿನ ಉಸಿರಿದೆ…

ಓದಿದ ತಕ್ಷಣ … ಅರಿವಾಗೋದು, ಗುರು ಹಿರೇಮಠ ಕವಿಗಳೇ ಈ ಕಾವ್ಯಗಳ ಜನಕರು ಎಂದು…ಚುಟುಕು ಕವಿಗಳೆಂದೇ ಹೆಸರಾದ,ಹತ್ತಾರು ಸಾಲುಗಳಲ್ಲಿ ಬರೆದು ವ್ಯಕ್ತ ಪಡಿಸುವ ಕಾವ್ಯವನ್ನು… ಕೇವಲ ಮೂರ್ನಾಲ್ಕು ಸಾಲುಗಳಲ್ಲಿ ತಿಳಿಸಿ ಬಿಡುವ ಚಾಕಚಕ್ಯತೆ ಇವರದು. ಇವರು ಚುಟುಕು ಚಾಣಕ್ಯರು ಬರಹದಲ್ಲಿ ನಿಜ. ಇದು, ನನ್ನ ಪ್ರೀತಿಯ ಸಹೋದರರಾದ ಶ್ರೀ ಗುರು ಹಿರೇಮಠ ಅವರು ಬರೆದ ಬೆಳದಿಂಗಳು ಬದುಕಿನ ದಾರಿಯುದ್ದಕ್ಕೂ.. ಎಂಬ ಕವನ ಸಂಕಲನದ ಹೊತ್ತಿಗೆಯಲ್ಲಿ ಮೂಡಿದ ಆಯ್ದ ಚುಟುಕುಗಳ ಭಾವ ಲಹರಿ.

ಇಲ್ಲಿ ಕವಿ, ತಾವು, ಪ್ರೇಮಕವಿಗಳೆಂದೇ ತೋರಿಸಿಕೊಂಡರೂ ಕೂಡಾ, ಎಲ್ಲಾ ವಿಧದ ಭಾವಗಳನ್ನು ತಮ್ಮ ಲೇಖನಿಯ ಮೂಲಕ ಓದುಗರ ಎದೆಯಗೂಡನ್ನು ಹೊಕ್ಕುತ್ತಾರೆ..ಅದೂ ತುಂಬಾ ಆಳವಾಗಿ ನಿಜ. ಇಲ್ಲಿನ ಪ್ರತೀ ಚುಟುಕುಗಳಲ್ಲೂ ಪ್ರೀತಿ ಮಾಡುವಾಗಿನ ಸಂಭ್ರಮವಿದೆ. ಕೈಕೊಟ್ಟ ಪ್ರೀತಿಯ ವಿಷಾದತೆಯಿದೆ. ಏಕಾಂಗಿಯಾಗಿ ಬದುಕುವ ಭರವಸೆಯಿದೆ.ಅಪ್ಪ ಅವ್ವನ, ಆತ್ಮ ಸಂಗಾತದ ಕಾವ್ಯವಿದೆ. ಮಡದಿಯ ಪ್ರೇಮ ಕಾವ್ಯವಿದೆ. ಪರಿಸರ, ಪಕೃತಿಯ ಸಿರಿ ವೈಭವವೂ ಇಲ್ಲಿದೆ.

ಸಹೋದರರ ವಿಚಾರ ಧಾರೆ ಅತ್ಯಂತ ಅಮೌಲ್ಯಯುತವಾದುದು.ಸಾಮಾಜಿಕ ಚಿಂತನೆಯ ಬರಹವೇ ಇವರ ನಾಜೂಕಿನ ಲೇಖನಿಗೆ ಆಹಾರ. ಅವರ ಮುಗ್ಧ ಮನದಂತೆ ಅವರ ಕಾವ್ಯ ಧಾರೆ ಕೂಡಾ ಅವಳ ಸುತ್ತಲೇ ಗಿರಕಿ ಹೊಡೆಯುತ್ತಾ, ಅವಳನ್ನೇ ಪ್ರಾಮುಖ್ಯವಾಗಿರಿಸಿ, ಬರೆಯುವ ಚುಟುಕು. ಮಾಣಿಕ್ಯಕ್ಕೆ ರತ್ನವನ್ನು ಸಿಂಗರಿಸಿದ ಹಾಗೆ. ಅವಳೆಂದರೆ ಇಲ್ಲಿ… ನದಿ,ಹಳ್ಳ,ಕೊಳ್ಳ,ತಾಯಿ, ಗೆಳತಿ, ಪ್ರಕೃತಿ. ಯಾವುದೂ ಆಗಬಹುದು.. ಇದೇ ಇಲ್ಲಿ ಹುಟ್ಟುವ ಸಮ್ಮಿಶ್ರ ಭಾವಗಳ ವಿಶೇಷ ಕಾವ್ಯ.

ಇವರದೊಂದು ವಿಶಿಷ್ಟ ವೈಶಿಷ್ಟ್ಯತೆ ಇವರು ಬರೆಯುವ ಕಾವ್ಯಗಳಲ್ಲಿ ಪ್ರತೀ ಬರಹ, ನಾನಾ ಮುಖಗಳನ್ನು ಹೊಂದಿರುತ್ತದೆ. ಗೂಡಾರ್ಥ ಕಾವ್ಯ ಇವರದು. ಓದುಗರು ಒಂದು ನಿರ್ಧಿಷ್ಟ ಭಾವಗಳನ್ನು ಆರಿಸಿಕೊಳ್ಳುವುದು ಕಷ್ಟ ಸಾಧ್ಯ ಬರಹದಲ್ಲಿ, ಪ್ರೇಮಿ, ಅಪ್ಪ, ಅವ್ವ, ಗೆಳತಿ, ಹೆಂಡತಿ, ಸಹೋದರ ಭಾವ, ಪ್ರಕೃತಿ, ಹೀಗೆ ಯಾರನ್ನಾದರೂ ಗುರುತಿಸಬಹುದು.ಓದುಗರ ಭಾವಕ್ಕೆ ನಿಲುಕುವಂತಹುದು ಆ ಕ್ಷಣದ ಚಿತ್ತಕ್ಕನುಗುಣವಾಗಿ…ಇವರ ಕಾವ್ಯದಲ್ಲಿ ನಿರ್ಧಿಷ್ಟ ಇಂತಹುದೇ ವಿಷಯ ಅಡಗಿದೆ ಎಂದು ಓದುಗ ಗುರುತಿಸಿ, ವಿಮರ್ಶೆ ಬರೆಯಲು ಮಾತ್ರ ಅಸಾಧ್ಯದ ಮಾತು.ಸಾಧಾರಣವಾಗಿ ಬರಹಗಾರರು ಬರೆದ ಬರಹ ಓದಿದಾಗ ಅರ್ಥ ಆಗಿ ಬಿಡುತ್ತದೆ. ಓದುಗನಿಗೆ ಓ ಇವರು ಈ ವಿಷಯಕ್ಕೆ ಸಂಬಂಧ ಪಟ್ಟು ಬರೆದಿದ್ದಾರೆ ಅಂತ ಆದರೆ ನಮ್ಮ ಸಹೋದರರು ಬರೆವ ಬರಹದಲ್ಲಿ, ಮೇಲ್ನೋಟಕ್ಕೆ ಪ್ರೀತಿ ಬಗ್ಗೆ ಬರೆದಿರಬಹುದು ಎಂದು ಯೋಚಿಸಿದರೂ ಕೂಡಾ, ಆಳಕ್ಕೆ ಹೋದಂತೆ ಬೇರೆ ಬೇರೆ ಭಾವಗಳು ಒರತೆಯುಕ್ಕಿ ಚಿಮ್ಮುವುದರಲ್ಲಿ ಸಂಶಯವಿಲ್ಲ.

ಬೆಳದಿಂಗಳು ಒಂದು ಹೊಸತನದ ಬೆಳಕನ್ನು ಮೂಡಿಸಿ..ಓದುಗರಿಗೆ ಅಕ್ಷರದ ಸವಿ ತುತ್ತು ಉಣಿಸುವುದರಲ್ಲಿ ಯಶಸ್ವಿಯಾಗಿದೆ.ಸಹೋದರರ ಅಕ್ಷರದ ಖದರ್ ಅಂತಹುದು. ಕವಿ, ಎಲ್ಲಾ ತರಹದ ಭಾವಗಳ ಭಾವನೆಗಳನ್ನು ಹೊರಹೊಮ್ಮಿಸಿ ಬರಹಕ್ಕೆ ನ್ಯಾಯ ಒದಗಿಸಬೇಕು…ಅದನ್ನು ಗುರು ಹಿರೇಮಠ ಅವರ ಬರಹದಲ್ಲಿ ಕಾಣಬಹುದಾಗಿದೆ. ನಮ್ಮ ಪ್ರೇಮಕವಿ,ಅದ್ಭುತ ಚುಟುಕು ಬರಹಗಾರ, ಹೀಗೇ ಸದಾ ಅಕ್ಷರದ ಬೆಳದಿಂಗಳು ಹುಣ್ಣಿಮೆಯಲಿ ಪ್ರಕಾಶಿಸುತ್ತಲಿರಲಿ ತಂಪಾದ ಹುಣ್ಣಿಮೆಯ ಬೆಳದಿಂಗಳ ಇಂಪಂತೆ…ಇನ್ನೂ ಹೆಚ್ಚಿನ ಹೊತ್ತಿಗೆ ಹೊರ ಬಂದು…..ಓದುಗರಿಗೆ ರಸದೌತಣ ನೀಡಲಿ….ಮನದುಂಬಿದ ಆಶೀರ್ವಾದದೊಂದಿಗೆ ಶುಭ ಹಾರೈಕೆ.


  • ಶೋಭಾ ನಾರಾಯಣ ಹೆಗಡೆ

0 0 votes
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW