‘ಏಕತಾ ಪ್ರತಿಮೆ’ ಹಿಂದಿರುವ ಮೂಲ ಶಿಲ್ಪಿಯೇ ೯೩ ವರ್ಷದ ರಾಮ್ ವಾಂಜಿ ಸುತಾರ್ . ಜೀವನ ಓಡುತ್ತಿರಬೇಕು, ಅದು ನಿಲ್ಲಬಾರದು. ನಿಂತರೆ ತುಕ್ಕು ಹಿಡಿದ ಗಾಡಿಯಂತೆ ಎನ್ನುವುದು ಅವರ ಮಾತು. ಅವರ ಮಾತಿನಂತೆ ಅವರ ಇಳಿಯ ವಯಸ್ಸಿನಲ್ಲಿ ಯಾರ ಆಸರೆಯಿಲ್ಲದೆ ಈಗಲೂ ಸುಂದರ ಪ್ರತಿಮೆಗಳನ್ನು ಸ್ವತಂತ್ರವಾಗಿ ನಿರ್ಮಿಸಬಲ್ಲರು.
ಫೆಬ್ರವರಿ ೧೯, ೧೯೨೫ ರಂದು ಧುಲೇ ಜಿಲ್ಲೆಯ ಗೋಂದುರ್ ನಲ್ಲಿ ರಾಮ್ ವಾಂಜಿ ಸುತಾರ್ ಅವರ ಜನನವಾಯಿತು. ಅವರು ಹುಟ್ಟು ಪ್ರತಿಭೆಯಾದ್ದರಿಂದ ಬಾಲ್ಯದಿಂದಲೇ ಶುರುವಾದ ಕಲಾ ಪಯಣ ಈಗಲೂ ನಿರಂತರವಾಗಿ ಸಾಗಿದೆ. ಸುತಾರ್ ಅವರುಕೈ ಇಟ್ಟಿದ್ದೆಲ್ಲ ಸುಂದರ ಕಲಾಪ್ರತಿಮೆಗಳಾಗಿ ಅರಳಿದವು. ಸುತಾರ್ ಅವರ ಗುರುಗಳಾದ ಶ್ರೀರಾಮ್ ಕೃಷ್ಣ ಜೋಶಿ ಅವರು ಸುತಾರ್ ಅವರಲ್ಲಿನ ಪ್ರತಿಭೆಯನ್ನು ಗುರುತಿಸಿ ಕಲೆಗೆ ಇನ್ನಷ್ಟು ಪ್ರೋತ್ಸಾಹಿಸಿದರು.
ಬಾಲ್ಯದಲ್ಲಿ ತಂದೆ -ತಾಯಿ, ಗುರು- ಹಿರಿಯರ ಪ್ರೋತ್ಸಾಹದಿಂದ ತಮ್ಮಲ್ಲಿನ ಪ್ರತಿಭೆಯನ್ನು ತಾವೇ ಬಲಗೊಳಿಸುತ್ತ ಹೋದರು. ತಮ್ಮ ಮೊದಲ ಪ್ರತಿಮೆ ಸಾಬೂನಿನ ಮೇಲಿನ ಆಮೆಯ ಚಿತ್ರಣ ಎಂದು ನೆನೆದು ಮುಗುಳ್ನಗೆ ಬಿರುತ್ತಾರೆ ಸುತಾರ್ .
ಮುಂದೆ 1952ರಲ್ಲಿ ಮುಂಬಯಿಯ ಜೆಜೆ ಸ್ಕೂಲ್ ಆಫ್ ಆರ್ಟ್ಸ್ ಡಿಪ್ಲೊಮಾದಲ್ಲಿ ಚಿನ್ನದ ಪದಕವನ್ನು ಪಡೆದರು. ಭಾರತೀಯ ಪುರಾತತ್ವ ಇಲಾಖೆಯು ಅವರನ್ನು ಮಹಾರಾಷ್ಟ್ರದ ಅಜಂತಾ- ಎಲ್ಲೋರಾ ಗುಹೆಗಳ ಪುನರುತ್ಥಾನದ ಕೆಲಸಕ್ಕೆ ನೇಮಿಸಿತು. ಪ್ರಧಾನಿ ಜವಾಹರಲಾಲ್ ನೆಹರೂ ಅವರು ರಾಮ್ ವಾಂಜಿಯನ್ನು ಭೇಟಿ ಮಾಡಿದ್ದು ಇಲ್ಲೇ. ನೆಹರೂ ಅವರಿಗೆ ಶಿಲ್ಪಕಲೆಯ ಬಗ್ಗೆ ಆಸಕ್ತಿ ಇದ್ದಕಾರಣ ವಾಂಜಿ ಇನ್ನಷ್ಟು ಅವರಿಗೆ ಹತ್ತಿರವಾದರು. ನೆಹರೂ ಕಾಲವಾದ ಬಳಿಕ, ಅವರ ಒಂಬತ್ತು ಮೂರ್ತಿಗಳನ್ನು ಸುತಾರ್ ಅವರು ದೇಶದ ನಾನಾ ಕಡೆ ನಿಲ್ಲಿಸಿದರು.
ಕೊನೆಗೆ ಇಲಾಖೆಗೆ ಸ್ವನಿವೃತ್ತಿಯನ್ನು ಘೋಷಿಸಿ. 1959ರಲ್ಲಿ ಸ್ವಂತ ಕಾಯಕವನ್ನು ಆರಂಭಿಸಿದರು. ವಾಂಜಿ ನಿರ್ಮಿಸಿದ ಪ್ರತಿಮೆಗಳ ಸಂಖ್ಯೆ 8000 ದಾಟಿವೆ. ಅವುಗಳಲ್ಲಿ ಶೇಕಡಾ 50ರಷ್ಟು ಬೃಹತ್ ಸ್ಮಾರಕಗಳಾಗಿವೆ.
ಅವರ ಮಾತುಗಳಿಗಿಂತ, ಅವರ ಕೈಯಲ್ಲಿ ಮೂಡಿ ಬಂದಿರುವ ಪ್ರತಿಮೆಗಳೇ ಹೆಚ್ಚಾಗಿ ಮಾತಾಡುತ್ತವೆ. ಅವರು ಗಾಂಧಿಯವರ ನಡೆ ನುಡಿಯನ್ನು ಹತ್ತಿರದಿಂದ ಕಂಡವರಾದ್ದರಿಂದ ಅವರ ಕೈಯಲ್ಲಿ ಮೂಡಿದ ಗಾಂಧಿ ಪ್ರತಿಮೆಗಳು ಹೆಚ್ಚು ನೈಜ್ಯವಾಗಿ ಕಾಣುತ್ತವೆ. ಅದಕ್ಕೆ ಸಾಕ್ಷಿ ಎಂಬಂತೆ ಪಾರ್ಲಿಮೆಂಟ್ ನಲ್ಲಿರುವ ಗಾಂಧಿ ಪ್ರತಿಮೆಯೂ ಕೂಡ ಒಂದು. 1948ರಲ್ಲಿ ಸುತಾರ್ ನಿರ್ಮಿಸಿದ ಮಹಾತ್ಮ ಗಾಂಧೀಜಿಯವರ ಮೊದಲ ಪ್ರತಿಮೆಯನ್ನು ಮಹಾರಾಷ್ಟ್ರದ ಧುಲಿಯಾ ಎಂಬಲ್ಲಿನ ಸರಕಾರಿ ಶಾಲೆಯ ಮುಂದೆ ಸ್ಥಾಪಿಸಲಾಯಿತು.
ರೂಸ್, ಫ್ರಾನ್ಸ್ , ಇಟಲಿ, ಮಲೇಷಿಯಾ ಸೇರಿದಂತೆ ಹಲವಾರು ದೇಶಗಳಲ್ಲಿ ಒಟ್ಟು 350 ಗಾಂಧಿ ಪ್ರತಿಮೆಗಳನ್ನು ಅವರು ಈಗಾಗಲೇ ನಿರ್ಮಿಸಿದ್ದಾರೆ. ಸಂಸತ್ತಿನ ಆವರಣದಲ್ಲಿ ಇಂದಿರಾ ಗಾಂಧಿ, ಮೌಲಾನಾ ಆಜಾದ್, ಜವಾಹರ್ ಲಾಲು ನೆಹರು ಸೇರಿದಂತೆ ಒಟ್ಟು 16 ಪ್ರತಿಮೆಗಳಲ್ಲಿ ಸುತಾರ್ ಅವರ ಕೈಚಳಕವನ್ನು ಕಾಣಬಹುದು.
ಸರ್ದಾರ ವಲ್ಲಭಯ ಪಟೇಲ್ ಅವರ ‘ಏಕತಾ ಪ್ರತಿಮೆ’ :
ಗುಜರಾತಿನ ಕೆವಾಡಿಯದ ಸರ್ದಾರ್ ಸರೋವರ್ ಡ್ಯಾಮ್ ಗೆ ಕಟ್ಟಲಾಗಿರುವ ಸರ್ದಾರ ವಲ್ಲಭಾಯಿ ಪಟೇಲ್ ಅವರ ‘ಏಕತಾ ಪ್ರತಿಮೆ’ ರಾಮ್ ವಾಂಜಿ ಸುತಾರ್ ಅವರ ಕೈ ಚಳಕದಿಂದ ಮೂಡಿದ ಅದ್ಬುತ ಶಿಲ್ಪಕಲಾಕೃತಿ. ನೋಡಲು ಕೇವಲ ಸುಂದರವಿದೆ ಎಂದು ಒಂದೇ ಸಾಲಿನಲ್ಲಿ ಹೇಳಿ ಮುಗಿಸಲಾಗದು. ಅದರ ರೂಪವೇ ಅಂಥದ್ದು. ಪ್ರತಿಮೆಯಲ್ಲಿ ಹಿಡಿದಿಡಲಾದ ಸೂಕ್ಷ್ಮತೆಗಳನ್ನು ಗಮನಿಸಿದರೆ ಪ್ರತಿಮೆಯ ಹಿಂದಿರುವ ಸುತಾರ್ ಅವರ ಶ್ರಮ ಎದ್ದು ಕಾಣುತ್ತದೆ. ಮನುಷ್ಯನಲ್ಲಿ ಕಾಣುವ ನರ-ನಾಡಿಗಳು ಈ ಪ್ರತಿಮೆಯಲ್ಲಿ ಕಾಣುತ್ತವೆ. ಸುತಾರ್ ಅವರ ಶ್ರಮದ ಜೊತೆಗೆ ತಾಳ್ಮೆಯನ್ನು ಕೂಡ ಅವರ ಶಿಲ್ಪಕೃತಿಯಲ್ಲಿ ಕಾಣಬಹುದು. ಪ್ರತಿಮೆಯನ್ನು ಕೆಳಗೆ ನಿಂತು ಮೇಲಕ್ಕೆ ನೋಡುತ್ತಾ ಹೋದರೆ ಕಣ್ಣಿಗೂ ನಿಲುಕದಷ್ಟು ಎತ್ತರವಾಗಿವಾಗಿದೆ ‘ಏಕತಾ ಪ್ರತಿಮೆ’ ಕಾಣುತ್ತದೆ.
ಸರ್ದಾರ ವಲ್ಲಭಯ ಪಟೇಲ್ ಅವರ ಪ್ರತಿಮೆಯನ್ನು ನಿರ್ಮಿಸುವ ಪೂರ್ವದಲ್ಲಿ ಮೊದಲು ಅವರು ಮೂರೂ ಅಡಿಯ ಪ್ರತಿಮೆಯನ್ನು, ತದನಂತರ ಹದಿನೆಂಟು ಅಡಿ ಎತ್ತರದ ಪ್ರತಿಮೆಯ ಮಾದರಿಯನ್ನು ತಯಾರಿಸಿದ್ದರು. ಪಟೇಲ್ ಅವರು ನಡೆಯುವಾಗ ಮುಖದ ಹಾವ -ಭಾವ ಹೇಗಿರಬಹುದು ಎನ್ನುವ ಕುರಿತು ಸುಮಾರು 2000 ಭಾವಚಿತ್ರಗಳನ್ನು ಅಧ್ಯಯನ ಮಾಡಿದ ನಂತರ ಸರ್ದಾರ ವಲ್ಲಭಯ ಪಟೇಲ್ ಅವರ ದೊಡ್ಡ ಶಿಲ್ಪಕಲೆಯನ್ನು ನಿರ್ಮಿಸಲಾಯಿತು ಎಂದು ರಾಮ್ ಸುತಾರ್ ಅವರು ತಮ್ಮ ಅನುಭವನ್ನು ಹಂಚಿಕೊಳ್ಳುತ್ತಾರೆ .
ಪ್ರತಿಮೆಯ ಎತ್ತರ 182 ಮೀಟರ್ (ಸುಮಾರು 597 ಅಡಿ). ಜಗತ್ತಿನಲ್ಲಿಯೇ ಯಾವ ಪ್ರತಿಮೆಯೂ ಅದಕ್ಕೆ ಸರಿ ಸಾಟಿಯಿಲ್ಲ. ಸರ್ದಾರ ವಲ್ಲಭಯ ಪಟೇಲ್ ಅವರ ೧೪೩ ನೇಯ ಹುಟ್ಟುಹಬ್ಬವಾದ ಅಕ್ಟೋಬರ್ ೩೧, ೨೦೧೮ ರಂದು ಜಗತ್ತಿಗೆ ಈ ಪ್ರತಿಮೆಯನ್ನು ಅನಾವರಣಗೊಳಿಸಲಾಯಿತು. ಜಗತ್ತಿನಲ್ಲಿಯೇ ಅತಿ ಎತ್ತರದ ಪ್ರತಿಮೆ ಎನ್ನುವ ಕೀರ್ತಿ ಇದರದ್ದಾದರೆ, ಜಗತ್ತಿನಲ್ಲಿ ಅತಿ ಕಿರಿಯದಾದ ಪ್ರತಿಮೆ ಬ್ರೆಸಿಲ್ ನ ಕ್ರಿಸ್ಟ್ ದಿ ರೋಮರ್ ದ್ದಾಗಿದೆ . ಅದರ ಎತ್ತರ ಕೇವಲ ೧೨೪ ಮೀಟರ್ ದ್ದಾಗಿದೆ.
ಪಟೇಲ ಅವರ ಪ್ರತಿಮೆಯ ನಿರ್ಮಾಣಕ್ಕಾಗಿ 5 ಸಾವಿರ ಕ್ಯೂಬಿಕ್ ಮೀಟರ್ ಕಾಂಕ್ರಿಟ್, 5700 ಮೆಟ್ರಿಕ್ ಟನ್ ಕಬ್ಬಿಣ, 18,500 ಉಕ್ಕು, 22,500 ಕಂಚು ಸೇರಿದಂತೆ ಮತ್ತಿತರ ವಸ್ತುಗಳನ್ನು ಬಳಸಿದ್ದಾರೆ. 3400 ನೌಕರರು, 250 ಇಂಜಿನಿಯರ್ ಗಳು ಸತತವಾಗಿ ಮೂರು ವರ್ಷಗಳ ಕಾಲ ಅದರ ನಿರ್ಮಾಣ ಕೆಲಸದಲ್ಲಿ ಹಗಲಿರುಳು ದುಡಿದ್ದಿದ್ದಾರೆ. ಪ್ರತಿಮೆಯನ್ನು ನೋಡುವಾಗ ಸಂತೋಷದ ಜೊತೆಗೆ ಇದರ ಹಿಂದಿರುವ ಮೂಲ ಶಿಲ್ಪಿ ರಾಮ್ ವಂಜಿ ಸುತಾರ್ ಅವರ ಬಗ್ಗೆ ಕುತೂಹಲವು ಹುಟ್ಟಿಸುತ್ತದೆ .
(ರಾಮ್ ವಾಂಜಿ ಸುತಾರ್ ಅವರೊಂದಿಗೆ ಮಗ ಅನಿಲ್ ಸುತಾರ )
ರಾಮ್ ವಾಂಜಿ ಸುತಾರ್ ಅವರ ಪ್ರತಿಭೆಗೆ ಭಾರತ ಸರ್ಕಾರವು ಪದ್ಮಭೂಷಣ ಮತ್ತು ಪದ್ಮಶ್ರೀ ಪುರಸ್ತಾರಗಳನ್ನು ನೀಡಿ ಗೌರವಿಸಲಾಗಿದೆ.
ಸುತಾರ್ ಅವರ ಮುಂದಿನ ಕನಸ್ಸು ಮಾರ್ಡನ್ ಆರ್ಟ್ ನಲ್ಲಿ ಒಂದು ಸುಂದರ ಶಿಲ್ಪಕಲಾಕೃತಿಯನ್ನು ರಚಿಸಬೇಕೆನ್ನುವ ಆಶಯ. ಅವರ ಕೆಲಸದಲ್ಲಿ ಮಗ ಅನಿಲ್ ಸುತಾರ್ ಕೂಡ ತಂದೆಯಂತೆ ಹುಟ್ಟು ಪ್ರತಿಭೆ. ತಂದೆಗೆ ತಕ್ಕ ಮಗನಾಗಿ ಅವರು ಕೂಡ ಶಿಲ್ಪಕಲೆಯಲ್ಲಿ ಸಾಥ್ ನೀಡುತ್ತಿದ್ದಾರೆ. ಇಲ್ಲಿಯವರೆಗೂ ಒಬ್ಬರಿಗೊಬ್ಬರು ಕಲೆಯನ್ನು ಪೋಷಿಸುತ್ತಾ ಬಂದಿದ್ದಾರೆ. ಅವರಿಗೆ ಇನ್ನಷ್ಟು ಪ್ರತಿಮೆಗಳನ್ನು ರಚಿಸುವ ಶಕ್ತಿ ಭಗವಂತ ದಯಪಾಲಿಸಲಿ ಎಂದು ಆಕೃತಿಕನ್ನಡ ಶುಭಕೋರುತ್ತದೆ .
ಲೇಖನ : ಶಾಲಿನಿ ಹೂಲಿ ಪ್ರದೀಪ್
( ಸೂಚನೆ : ಕತೆ, ಕವನ, ಲೇಖನ ಬರೆಯುವ ಆಸಕ್ತಿಯುಳ್ಳವರು ಇ – ಮೇಲ್ aakrutikannada@gmail.com ಮಾಡಬಹುದು. ಮತ್ತು ನಿಮ್ಮ ಅಭಿಪ್ರಾಯವನ್ನು ಮೇಲಿನ ಕಾಮೆಂಟ್ ಬಾಕ್ಸ್ ಮೂಲಕ ಹಂಚಿಕೊಳ್ಳಬಹುದು)
ಹಿಂದಿನ ಬರಹಗಳು :
- ಅಂಗವೈಕಲ್ಯ ಮನಸ್ಸಿಗೆ ಹೊರತು ದೇಹಕ್ಕಲ್ಲ – ಅರುಣಿಮಾ ಸಿನ್ಹಾ
- ಒಬ್ಬ ಸಾಧಕನಿಗೆ ಪ್ರಶಸ್ತಿಯೇ ಕೈಗನ್ನಡಿಯೇ ?
- ಸ್ತಬ್ದತೆ ಜಗತ್ತಿಗೆ ಆದರೆ ಗೃಹಿಣಿಗಲ್ಲ
- ಹೊಸ ನೋಟದ ನಿರ್ದೇಶಕ ಟಿ.ಎಸ್. ನಾಗಾಭರಣ
- ಧಾರಾವಾಹಿಗಳು ಸಮಾಜಕ್ಕೆ ನೀಡುವ ಸಂದೇಶವೇನು?