ಎಸ್.ವಿ.ಪ್ರಭಾವತಿ ಅವರು ಸಂಸಾರದ ತೇರನ್ನೆಳೆಯುತ್ತಲೇ ಸಾಹಿತ್ಯದ ಬದುಕನ್ನು ಬೆಳೆಸಿದ ಪರಿಯನ್ನು ನೋಡಿ ನಮ್ಮ ಯುವ ಜನತೆ.. ವಿಶೇಷವಾಗಿ ಮಹಿಳೆಯರು ಕಲಿಯುವುದು ಸಾಕಷ್ಟಿದೆ. ಎಸ್.ವಿ.ಪ್ರಭಾವತಿ ಅವರ ‘ಎನ್ನ ಪಾಡೆನಗಿರಲಿ’ ಪುಸ್ತಕದ ಕುರಿತು ಮಧುರಾ ಕರ್ಣಮ್ ಅವರು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ. ತಪ್ಪದೆ ಮುಂದೆ ಓದಿ…
ಪುಸ್ತಕ : ಎನ್ನ ಪಾಡೆನಗಿರಲಿ
ಲೇಖಕಿ : ಎಸ್.ವಿ.ಪ್ರಭಾವತಿ
ಪ್ರಕಾಶನ : ಶ್ರೀನಿವಾಸ ಪುಸ್ತಕ ಪ್ರಕಾಶನ
ಪ್ರಕಾರ : ಆತ್ಮಕಥನ
ಕಹಿ ಉಂಡು ಸಿಹಿ ಹಂಚುವ ಹಾಡು
ಮುಕ್ತ ಮನದ ತಹತಹಿಕೆ ಮಾತಾಗಿದೆ……ಮುತ್ತಾಗಿದೆ. ಎಸ್.ವಿ.ಪ್ರಭಾವತಿಯವರು ತಮ್ಮ ಜೀವನದಲ್ಲಿ ಎಡವಿದ ಕಲ್ಲುಗಳು.. ಅರಳಿದ ಹೂಗಳನ್ನಷ್ಟೇ ಅಲ್ಲ.. ಆಗ ಸ್ಥಿತವಾಗಿದ್ದ ಸಾಹಿತ್ಯಕ ಪರಿಸರ, ಅಕಾಡೆಮಿಕ್ ವಲಯವನ್ನು ಇಲ್ಲಿ ಚೆನ್ನಾಗಿ ಚಿತ್ರಿಸಿದ್ದಾರೆ. ಗಣ್ಯ ಸಾಹಿತಿಗಳು, ಅವರ ವಿಚಾರಧಾರೆಗಳು, ಅಲ್ಲಿ ನಡೆಯುವ ವಿಸ್ಮಯಕಾರಿ ಘಟನೆಗಳಿಂದ ಅವರ ಆತ್ಮಕಥನ “ಎನ್ನ ಪಾಡೆನಗಿರಲಿ” ರೋಚಕವಾಗಿದೆ. ಹೊಸಹೊಳಲಿನಿಂದ ನಡೆದು ಬಂದ ಪಯಣ ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಯಾಗಿದೆ. ಎಲ್ಲೂ ನೀರಸವೆನ್ನಿಸದ.. ಕ್ಷಣಕಣಕ್ಕೂ ಬದಲಾಗುವ ಬದುಕಿನ ಪ್ರವಾಹವನ್ನು ಅಲ್ಲಲ್ಲಿ ಕಟ್ಟೆ ಕಟ್ಟಿ ತೋರಿಸುತ್ತಾ ಸಾಗಿದ್ದಾರೆ.
ಮುನ್ನುಡಿಯಲ್ಲಿ ಶ್ರೀಯುತ ಸತೀಶ್ ಕುಲಕರ್ಣಿಯವರು ಹೇಳಿರುವಂತೆ ಕನ್ನಡದಲ್ಲಿ ಇತ್ತೀಚೆಗೆ ಮಹಿಳೆಯರು ಆತ್ಮಕಥನ ಬರೆಯುವ ಪರಿಪಾಠ ಹೆಚ್ಚಿದೆ. ಪ್ರಭಾವತಿಯವರ ಆತ್ಮಕಥೆ ಬರೀ ಅವರ ಜೀವನದ ವಿವರಗಳನ್ನೊದಗಿಸುವ ಪುಸ್ತಕವಾಗದೇ ಅವರ ತಪ್ಪು.. ಒಪ್ಪುಗಳನ್ನು ತಪ್ಪಿಲ್ಲದೇ ದಾಖಲಿಸಿದೆ. ಸಂಸಾರದ ತೇರನ್ನೆಳೆಯುತ್ತಲೇ ಸಾಹಿತ್ಯದ ಬದುಕನ್ನು ಬೆಳೆಸಿದ ಪರಿಯನ್ನು ನೋಡಿ ನಮ್ಮ ಯುವ ಜನತೆ.. ವಿಶೇಷವಾಗಿ ಮಹಿಳೆಯರು ಕಲಿಯುವುದು ಸಾಕಷ್ಟಿದೆ. ಅಪರೂಪದ ಬಾಲ್ಯ ಅವರದಾಗಿಲ್ಲದಿದ್ದರೂ ನೆನಪಿಡುವ.. ಬದುಕಿನ ಬುತ್ತಿಗೆ ಉಪ್ಪಿನಕಾಯಿಯಾಗುವ ಘಟನೆಗಳು ಬೇಕಾದಷ್ಟು. ಅವರೇ ಹೇಳುವಂತೆ ಐವತ್ತು ಮಕ್ಕಳ ಕೂಡು ಕುಟುಂಬದಲ್ಲಿ ಮಗಳು ತಿಂದಳೋ..ಉಂಡಳೋ.. ನೋಡಲೂ ಪುರುಸೊತ್ತಿರಲಿಲ್ಲ ಹೆತ್ತವರಿಗೆ. ಅಟ್ಟದ ಮೇಲೆ ಗುಟ್ಟಾಗಿ ಕಾದಂಬರಿ ಓದುವುದರಿಂದ ಎಳವೆಯಲ್ಲಿಯೇ ಆರಂಭವಾದ ಓದಿನ ಹುಚ್ಚು ಮುಂದಿನ ಸಾಹಿತ್ಯ ಜೀವನಕ್ಕೆ ನಾಂದಿ ಹಾಡಿರಬಹುದು. ಆಗಲೇ ಕನ್ನಡ ಸರಾಗವಾಗಿ.. ಗಣಿತ ಕಬ್ಬಿಣದ ಕಡಲೆ ಎನಿಸುವುದು ಮುನ್ಸೂಚನೆಯಾಗಿರಬಹುದು.

ಎತ್ತಿನ ಬಂಡಿಯ ಪಯಣ, ಸೋದರತ್ತೆಯ ಮಗನ ಬಗೆಗಿನ ಮೃದು ಭಾವನೆ, ಟೆಂಟ್ ಸಿನಿಮಾ ನೋಡಿ ಚಿಕ್ಕಪ್ಪನಿಂದ ಹೊಡೆತ ತಿನ್ನುವುದು, ಅಭ್ಯಾಸ ಹೇಳಿಕೊಟ್ಟ ಗೆಳತಿ ರಾಜಲಕ್ಷ್ಮಿ.. ರಾಜಿ ಫೇಲಾಗಿ ಇವರು ಪಾಸಾದದ್ದು.. ಇತ್ಯಾದಿಗಳು ಹೂವು ಅರಳುವಷ್ಟೇ ಸುಂದರವಾಗಿ ಪಕಳೆಗಳು ಬಿರಿದಂತೆ ಮೂಡಿಬಂದಿವೆ. ಇವು ಕೇವಲ ನೆನೆಪುಗಳಾಗಿ ಉಳಿಯದೇ ಅಂದಿನ ಸಾಮಾಜಿಕ ಸ್ಥಿತಿಗತಿಗಳನ್ನು ದಾಖಲಿಸುತ್ತವೆ. ಸದಾ ರಾಜಕುಮಾರ್ ಲೀಲಾವತಿ ಜೋಡಿ ನೋಡಿ ಅಭ್ಯಾಸವಾದವರಿಗೆ ಒಂದು ಚಿತ್ರದಲ್ಲಿ ಲೀಲಾವತಿ ರಾಜಕುಮಾರನ ತಂಗಿಯ ಪಾತ್ರ ಮಾಡಿದ್ದು ಅರಗಿಸಿಕೊಳ್ಳಲಾರದ ಸಂಗತಿ ಎನಿಸಿದಾಗ ಮಾಮೂಲಿಯಾಗಿ ನಗು ಬರುವುದುಂಟು. ಆದರೆ ಅದರ ಅನುಭವ ನನಗೂ ಆಗಿದೆ. ನಾವು ಚಿಕ್ಕವರಿದ್ದಾಗ ರಾಜಕುಮಾರನ ‘ಭಾಗ್ಯವಂತರು’ ಚಿತ್ರ ಬಂದಿತ್ತು. ಅದರಲ್ಲಿ ರಾಜಕುಮಾರ್ ಮತ್ತು ಬಿ.ಸರೋಜಾದೇವಿ ಕೊನೆಯಲ್ಲಿ ಸಾಯುವ ದೃಶ್ಯ. ನಮ್ಮ ಎಳೆಯ ಸ್ನೇಹಿತರ ಗುಂಪು ಅದನ್ನು ನೋಡಿ ಜೀರ್ಣಿಸಿಕೊಳ್ಳಲಾಗದೇ ದಿಗ್ಮೂಢರಾಗಿ ಎರಡು ದಿನ ಅತ್ತಿದ್ದೆವು. ಕೊನೆಗೆ ದೊಡ್ಡವರು “ರಾಜ್‍ಕುಮಾರ್ ಚಿತ್ರದ ಪಾತ್ರದಲ್ಲಿ ಮಾತ್ರ ಸತ್ತದ್ದು.. ನಿಜವಾಗಿಯೂ ಚೆನ್ನಾಗೇ ಇದ್ದಾರೆ”ಎಂದು ಮನವರಿಕೆ ಮಾಡಿಕೊಟ್ಟಮೇಲೆ ಸುಮ್ಮನಾಗಿದ್ದೆವು. ಬೆಳಗಾವಿಯಂಥ ಗಡಿಭಾಗದಲ್ಲೇ ಇಂಥ ಪರಿಸ್ಥಿತಿಯಾದರೆ ಮಿಕ್ಕ ಸ್ಥಳಗಳಲ್ಲಿ ಹೇಗಿರಬಹುದು ಊಹಿಸಿ. ಅಂತೂ ರಾಜಕುಮಾರ್ ನಮ್ಮೆಲ್ಲರ ಮನೆಮನಗಳಲ್ಲಿ ಅಚ್ಚೊತ್ತಿದ್ದು ಸುಳ್ಳಲ್ಲ.
ಈ ಆತ್ಮಕಥನ ಬೇಕಾದದ್ದನ್ನಷ್ಟೇ ಹೇಳಿ.. ಬೇಡವಾದ ಅಪಮಾನಗಳನ್ನ ಮುಚ್ಚಿಡುವುದಿಲ್ಲ. ತೆರೆದಿಟ್ಟ ಪುಸ್ತಕವಾಗಿದೆ ಜೀವನ. ಪುಟಪುಟಗಳಲ್ಲೂ ನೆನಪು ತೇಲಿವೆ. ಆದರೆ ಎಲ್ಲೂ ಅತಿರೇಕವಾಗಿಲ್ಲ ಎನ್ನುವುದು ಗಮನಿಸಬೇಕಾದ ಸಂಗತಿ. ಅಂದಿನ ತಪ್ಪಿಗೆ ಇಂದಿಗೂ ಶಿಕ್ಷೆ ಅನುಭವಿಸುತ್ತಿರುವ ಅಪರಾಧಿ ಭಾವವಿದೆ. “ಕಾಲೇಜಿನ ದಿನಗಳಲ್ಲಿ ಚೆನ್ನಾಗಿ ಓದುತ್ತಿದ್ದರೂ ವಿನಯವಿರಲಿಲ್ಲ”ಎಂಬ ಹೇಳಿಕೆಯನ್ನು “ಕನ್ನಡದಲ್ಲಿ ಎರಡು ವರ್ಷ ಹತ್ತನೇ ರ್ಯಾಂಕ್ ಬಂದವಳು ಇಂಗ್ಲಿಷ್‍ನಲ್ಲಿ 4 ಅಂಕಗಳಿಂದ ಫೇಲಾಗಿದ್ದೆ”ಎಂಬ ನೋವಿನ ಸಂಗತಿಂiÀiನ್ನು, ಆಗ ಅನುಭವಿಸಿದ ನರಕ ಯಾತನೆಯನ್ನು.. ಸಹಜವಾಗಿ ಹೇಳಿಕೊಂಡಿದ್ದಾರೆ. ಆದರೆ “ಮುಂದೆ ಹಠ ಹಿಡಿದವಳಂತೆ ಓದಿ ಪಾಸಾದೆ”ಎಂಬುದು ಗಮನಿಸಬೇಕಾದ.. ಅನುಕರಿಸಬೇಕಾದ ಅಂಶ. ಅವರ ಈ ಗುಣವೇ ಅವರನ್ನು ಕೈಹಿಡಿದು ಸಾಹಿತ್ಯದ ಶಿಖರದತ್ತ ಮುನ್ನಡೆಸಿದೆ. ಹದಿನಾರು ವರ್ಷಗಳ ಕಾಲ ಪಿ.ಎಚ್.ಡಿ. ಮಾಡಿದ್ದಾಗಲೀ, ಬೆಳಗಾವಿಯಲ್ಲಿ ಪ್ರಥಮ ಬಾರಿಗೆ ‘ಮಹಿಳಾ ಕಥಾಸಾಹಿತ್ಯ’ದ ಬಗ್ಗೆ ಮಾತನಾಡಿದಾಗ ನಂಜನಗೂಡು ತಿರುಮಲಾಂಬಾ ಅವರನ್ನು ಕೈಬಿಟ್ಟು ನಂತರ ಟೀಕೆಗೊಳಗಾದದ್ದನ್ನಾಗಲೀ.. ಸಂಕೋಚವಿಲ್ಲದೇ ಹೇಳಿಕೊಂಡಿದ್ದಾರೆ. ಈ ಆತ್ಮಕಥನ ತಪ್ಪು, ಒಪ್ಪುಗಳ ದಾಖಲಿಕೆಯಲ್ಲಿ ಒಳ್ಳೆಯ ಸಂಗತಿಗಳಿಗಾಗಿ ಸಂತೋಷಿಸುವಂತೆ ತಪ್ಪುಗಳಿಗಾಗಿ ಮರುಗುವಂತೆಯೂ ಮಾಡಿದೆ. ಹಾಗೆಂದು ವಯೋಸಹಜ ಆಸೆ, ಆಕಾಂಕ್ಷೆಗಳು ಇರಲಿಲ್ಲವೆಂದಲ್ಲ. ಪಾಠ ಮಾಡುವ ಅಮೃತಾ ಮೇಡಮ್ ಬಳಿ 90 ಮೈಸೂರ್ ಸಿಲ್ಕ ಸೀರೆಗಳಿದ್ದುದನ್ನೂ.. ಅದನ್ನು ತಾವು ವಿದ್ಯಾರ್ಥಿನಿಯರು ಎಣಿಸುತ್ತಿದ್ದುದನ್ನೂ ಹೇಳಿಕೊಂಡಿದ್ದಾರೆ. ವೈಯಕ್ತಿಕ ಬದುಕು ಅನಾವರಣವಾಗುತ್ತಾ ತಂಗಿಯನ್ನು ಅತ್ತೆಯ ಮಗ ಒಲಿಸಿಕೊಂಡಿದ್ದರ ಬಗ್ಗೆ ಹೇಳುತ್ತಾರೆ. ಎಂ.ಎ. ಓದಿದ ಹುಡುಗಿಗೆ ಅವರ ಸಮುದಾಯದಲ್ಲಿ ಸಂಬಂಧ ದೊರಕುವುದು ಕಷ್ಟವಾಯಿತಂತೆ. ಅಂದಿನ ಸಾಮಾಜಿಕ ಪರಿಸ್ಥಿತಿ ಹೇಗಿರಬಹುದು ಎಂಬುದನ್ನು ನಾವು ಊಹಿಸಬಹುದು.
ತಮ್ಮ ಗುಣಾವಗುಣಗಳ ಅವಲೋಕನದಲ್ಲಿ ಬರದೇ ಇದ್ದುದನ್ನು ಹಠ ಹಿಡಿದು ಕರಗತ ಮಾಡಿಕೊಂಡ ಒಳ್ಳೆಯ ಗುಣವನ್ನು ಅವರು ವಿವರಿಸಿದ್ದಾರೆ. ತಮ್ಮ ‘ಬೆರಳು ತೋರಿಸಿದರೆ ಹಸ್ತ ನುಂಗುವ ಚಾಣಾಕ್ಷತೆ’ಯ ಬಗ್ಗೆ ಹೆಮ್ಮೆ ಪಡುತ್ತಾರೆ. ಜಿ.ಎಸ್.ಶಿವರುದ್ರಪ್ಪನವರ ಬಗ್ಗೆ ಬರೆದ ಕವಿತೆ ಗುರುಕಾಣಿಕೆಯಾಗಿ ಅನೇಕ ಪತ್ರಿಕೆಗಳಲ್ಲಿ ಬಂದದ್ದು.. ಸಿ.ಪಿ.ಕೆ.ಯವರ ಬಗ್ಗೆ ಕವಿತೆ ಬರೆದು ಕಾವ್ಯ ಪ್ರಕಾರವನ್ನು ಆರಂಭಿಸಿದ್ದು.. ಎಲ್ಲ ಸವಿನೆನಪುಗಳೇ. ಅಂದು ಕವಿ, ಸಾಹಿತಿಗಳ ಮಧ್ಯೆ ಇದ್ದ ವೃತ್ತಿಮಾತ್ಸರ್ಯವೂ ಇಲ್ಲಿ ಅನಾವರಣವಾಗಿದೆ. ಹಾ.ಮಾ.ನಾಯಕರನ್ನು ಕಳೆದುಕೊಂಡ ಸಮಯದಲ್ಲಿ ಪಾಠ ಮಾಡುವಾಗ “ಹಾ.ಮಾ.ನಾ. ಇಲ್ಲದ ಮೇಲೆ ಏನಿದೆ?”ಎಂದು ಹೇಳುವಷ್ಟು ನೋವು. ಕ್ರಮೇಣ ಭೈರಪ್ಪನವರ ಕೃತಿಗಳತ್ತ ವಾಲುವಿಕೆ ಮತ್ತು ಅವರನ್ನು ಸಾಹಿತ್ಯರಂಗದ ‘ದೈತ್ಯ ಪ್ರತಿಭೆ’ಎನ್ನುವಷ್ಟರ ಮಟ್ಟಿಗೆ ಬೆಳೆಯುತ್ತದೆ. ಭೈರಪ್ಪನವರೇ ಸೂಚಿಸಿದಂತೆ ಅವರ ಕೃತಿಗಳಿಗೆ ವಿಮರ್ಶೆ ಬರೆಯಲು ಆರಂಭಿಸುತ್ತಾರೆ. ಇದು ಅವರಿಗೆ ಸಂತೋಷದ ಸಂಗತಿಯಾಗಿ ಜೀವಮಾನವಿಡೀ ನೆನಪಿನಲ್ಲುಳಿಯುತ್ತದೆ. ನಿಮ್ಮ ಆರಾಧ್ಯ ಸಾಹಿತಿಯ ಕೃತಿಗೆ ವಿಮರ್ಶೆ ಬರೆದು ಅವರಿಂದಲೇ ಭೇಷ್ ಎನಿಸಿಕೊಳ್ಳುವುದು ಸಾಧನೆಯೇ ಸರಿ. ಅವರ ಪುಸ್ತಕಗಳಲ್ಲಿ ಇವರ ಹೆಸರೂ ಸೇರಿದಾಗ ಕಿರೀಟದಲ್ಲೊಂದು ಗರಿ. ತಮಗೆ ಸಾಹಿತ್ಯ ರಂಗದಲ್ಲಾದ ಅನೇಕ ಅನುಭವಗಳನ್ನು ಹೇಳುತ್ತಾ “ಇಡೀ ಜಗತ್ತು ಒಂದು ಕಾಡಿದ್ದ ಹಾಗೆ. ಎಲ್ಲಾ ತರದ ಪ್ರಾಣಿಗಳೂ ಇವೆ. ಡಾರ್ವಿನ್‍ನ ವಿಕಾಸವಾದ ಇಲ್ಲಿ ಕೆಲಸ ಮಾಡುತ್ತದೆ. ಬಲಿಷ್ಠವಾದದ್ದು ಉಳಿದುಕೊಳ್ಳುತ್ತದೆ.”ಎನ್ನುವುದು ಗಮನಾರ್ಹ ಹೋಲಿಕೆ.
ಅಭಿನಯದ ಬಗ್ಗೆ ಅಪಾರ ಪ್ರೀತಿಯನ್ನು ಇಟ್ಟುಕೊಂಡಿದ್ದ ಪ್ರಭಾವತಿಯವರು ತಾವು ರಂಗಭೂಮಿಯಲ್ಲಿ ಬೆಳೆದುಬಂದ ದಾರಿಯನ್ನು ವಿವರಿಸುತ್ತಾರೆ. ತಮ್ಮ ಕಾಲೇಜು ವಿದ್ಯಾರ್ಥಿಗಳಿಗೆ ಮಾರ್ಗದರ್ಶಿಯಾಗಿ ಅನೇಕ ವರ್ಷಗಳವರೆಗೆ ನಾಟಕ ಮಾಡಿಸಿದ್ದು.. ರಂಗಭೂಮಿಯ ಮೋಹ ಹೆಚ್ಚಿ ತಾವೂ ಪಾತ್ರ ಮಾಡಿದ್ದನ್ನು ನೆನೆಯುತ್ತಾರೆ. ತನ್ಮೂಲಕ ಅಂದಿನ ದಿನಗಳಲ್ಲಿ ಕರ್ನಾಟಕದಲ್ಲಿ ರಂಗಭೂಮಿಯ ಪರಿಸರ..ಪರಿಸ್ಥಿತಿಗಳನ್ನು ಕಟ್ಟಿಕೊಡುತ್ತಾರೆ. ಅನುಮತಿ ಕೇಳದೇ ತಾಲೀಮು ಆರಂಭಿಸಿದ್ದಕ್ಕೆ ಪರ್ವತವಾಣಿಯವರು ಬೈದು ಅನುಮತಿ ನೀಡಿದ್ದು.. ಲಂಕೇಶರು ‘ನೀವು ನಾಟಕ ಮಾಡುವುದೇ ಹೆಚ್ಚು. ಇದನ್ನೇ ಅನುಮತಿ ಎಂದು ಭಾವಿಸಿ’ಎಂದು ಸಂತೋಷದಿಂದಲೇ ಸಮ್ಮತಿಸಿದ್ದು..ಎಲ್ಲ ದಾಖಲಾಗಿವೆ. “ರಂಗಭೂಮಿ ಮೊದಲು ಸೋಲು ಒಪ್ಪಿಕೊಳ್ಳುವುದನ್ನು ಕಲಿಸುತ್ತದೆ. ನಂತರ ಅರಿವು ಮೂಡಿಸುತ್ತದೆ. ಆಗ ವಿದ್ಯಾರ್ಥಿಗಳೇ ತಮ್ಮ ಬದುಕಿನ ಮೌಲ್ಯಮಾಪನ ಮಾಡಿಕೊಳ್ಳುತ್ತಾರೆ”ಎನ್ನುವುದು ಸತ್ಯವಾದ ಮಾತು. ಸೋಲನ್ನು ಗೆಲುವಿನ ಮೆಟ್ಟಿಲಾಗಿ ಪರಿವರ್ತಿಸುವುದರಲ್ಲೇ ಬಾಳಿನ ಸಾರ್ಥಕತೆ ಅಡಗಿದೆಯಲ್ಲವೇ?.

ತಮ್ಮ ವೈಯಕ್ತಿಕ ಬದುಕಿನ ಬಗ್ಗೆ ಹೇಳುವಾಗ ಭಾವುಕರಾಗುವ ಪ್ರಭಾವತಿ ಮಕ್ಕಳನ್ನು ಬೆಳೆಸುವ ನಿಟ್ಟಿನಲ್ಲಿ ಅನುಭವಿಸಿದ ತೊಂದರೆಗಳ ಬಗ್ಗೆ ಹೇಳುತ್ತಾರೆ. ಅತ್ತೆ, ಮಾವ, ಪತಿ.. ಒಮ್ಮೊಮ್ಮೆ ವಿರುದ್ಧ ದಿಕ್ಕಿನಲ್ಲಿ ಸಾಗುವ ಅವರ ಆಲೋಚನೆಗಳಿಂದ ಮನೆಯ ವಾತಾವರಣ ಕೆಲವೊಮ್ಮೆ ಅಸಹನೀಯವಾಗಿತ್ತಂತೆ. ಮಧ್ಯೆ ನಲುಗುವ ಮಕ್ಕಳು. ಪ್ರೋತ್ಸಾಹದ ಕೊರತೆ.. ದೂರದೂರಿನ ಕಾರ್ಯಕ್ರಮಗಳಿಗೂ ಒಬ್ಬಳೇ ಹೋಗಿ ಮಧ್ಯರಾತ್ರಿ ಮನೆಗೆ ಬಂದಿದ್ದನ್ನು ಸಂತಪ್ತ ಮನಸ್ಥಿತಿಯಿಂದ ಬರೆಯುತ್ತಾರೆ. “ಮನೆಯ ನಾಲ್ಕು ಗೋಡೆಗಳು.. ಕಾಲೇಜಿನ ನಾಲ್ಕು ಗೋಡೆಗಳು.. ಇವು ಕವಿತೆಯನ್ನು ಹುಟ್ಟಿಸಲಾರವು. ಕೊಲ್ಲಬಹುದಷ್ಟೇ..”ಎನ್ನುವ ಮಾತುಗಳಲ್ಲಿ ತಮ್ಮ ನೋವು..ಉಮ್ಮಳವನ್ನೆಲ್ಲ ಹೊರಹಾಕಿದ್ದಾರೆ. ಆಗ ಆತ್ಮೀಯ ಗೆಳತಿ ಸರಸ್ವತಿ ಗೌಡ ಜೀವನೋತ್ಸಾಹವನ್ನು ಬೆಳೆಸಿ ಬದುಕು ಏನೆಂದು ತೋರಿಸಿಕೊಟ್ಟದ್ದನ್ನು ಪ್ರೀತಿಯಿಂದ ಸ್ಮರಿಸಿಕೊಳ್ಳುತ್ತಾರೆ. ನಿಜವಾಗಿಯೂ ಕತ್ತಲೆಯ ಜೀವನಕ್ಕೊಂದು ಬೆಳಖಿಂಡಿ ಬೇಕೇಬೇಕು. ಆ ಸ್ಫೂರ್ತಿ ಯಾರ ರೂಪದಲ್ಲಿ ಬಂದರೂ ಸರಿಯೇ..
ತಮ್ಮನ್ನು ಟೀಕಿಸಿದವರನ್ನು ಗೌರವಿಸಿ.. ‘ಅವರಿಂದಲೇ ನಾನು ಬೆಳೆದು ಬಂದಿದ್ದು..’ ಎಂದು ಹೇಳುವುದಿದೆಯಲ್ಲ.. ಅದು ದೊಡ್ಡ ಮಾತು. ಟೀಕಿಸಿದವರೇ ಹೊಗಳುವಂತೆ ಮುಂದಿನ ಹತ್ತು ವರ್ಷಗಳಲ್ಲಿ ಬೆಳೆದು ನಿಂತದ್ದು ಮನದೊಳಗಿನ ಹಠ, ಛಲಗಳ ಪ್ರಭಾವ. ‘ನಿಂದಕರಿರಬೇಕು..’ ಎಂಬ ಪುರುಂದರದಾಸರ ಉಕ್ತಿಯನ್ನು ಸೂಕ್ತವಾಗಿ ಪ್ರಸ್ತಾಪಿಸಿದ್ದಾರೆ. ಸಾಧನೆಯ ಮೆಟ್ಟಿಲೇರುವುದು ಮುಖ್ಯ. “ಬಾಳು ಒಂದು ಬೆಳೆ ಇದ್ದಂತೆ. ಜೊತೆ ‘ಕಳೆ’ ಇರುವುದಿಲ್ಲವೆಂದೇನಿಲ್ಲ. ನಾವು ಬೇಸಾಯಗಾರರಾಗಲೇಬೇಕು. ಹೊಲದ ಮಣ್ಣಿನ ಸಾರವನ್ನು ಹೀರಬಯಸುತ.. ಆದರೆ ಪ್ರತಿಫಲವಾಗಿ ಧಾನ್ಯ ಕೊಡದೇ ಕಳೆ ಕೊಡುವ ಗಿಡವನ್ನು ಕೀಳಬೇಕು”ಎಂದು ಹೇಳುತ್ತಾರೆ. ಇದು ಅವರೊಬ್ಬರ ಬಾಳಿಗಲ್ಲ.. ನಮ್ಮೆಲ್ಲರ ಬಾಳಿಗೂ ಅನ್ವಯಿಸುತ್ತದೆ.
ತಮ್ಮ ಅಖಂಡ ನಲವತ್ತು ವರ್ಷಗಳ ಬೋಧನೆಯ ಬಗ್ಗೆ ಅವರಿಗೆ ಅಪಾರ ಹೆಮ್ಮೆಯಿದೆ. ಭಾರತೀಯ ಸಂಸ್ಕøತಿ ವಿದ್ಯಾಪೀಠವನ್ನು ‘ಕರ್ಮಭೂಮಿ’ಎಂದು ಕರೆಯುತ್ತಾ “ಹಸಿಹಸಿಯಾಗಿದ್ದ ನನ್ನನ್ನು..ಭೂಮಿಗೆ ಭಾರವಾಗಿದ್ದ ನನ್ನನ್ನು.. ಏನೇನೂ ಅಲ್ಲದ ನನ್ನನ್ನು ಒಬ್ಬ ಮನುಷ್ಯಳಾಗುವಂತೆ ರೂಪಿಸಿದ ಕರ್ಮಭೂಮಿ”ಎಂದು ನೆನೆಯುವುದು ತಮ್ಮ ವೃತ್ತಿಗೆ.. ತಮ್ಮನ್ನು ರೂಪಿಸಿದ ಕಾಲೇಜಿಗೆ ಸಲ್ಲಿಸುವ ಗೌರವ. ತಮ್ಮ ಏಳಿಗೆಗೆ ಕಾರಣರಾದ ಪ್ರತಿಯೊಬ್ಬರನ್ನೂ ಸ್ಮರಿಸುವ ಸದ್ಗುಣ. ತಾವು ಪಾಠ ಮಾಡುವ ಪರಿಯ ಬಗ್ಗೆ ಹೇಳುತ್ತಾ “ಅವನು ಯಾವುನೋ 13ನೇ ಶತಮಾನದಲ್ಲಿ ಬರೆದ ‘ರಗಳೆ’ಎಂಬ ಪದ್ಯವನ್ನು ನಾವು ಕಾಟಾಚಾರಕ್ಕೆ ಪಾಠ ಮಾಡಬಾರದು. ಹರಿಹರನ ಇಡೀ ವ್ಯಕ್ತಿತ್ವ ನಮ್ಮೊಳಕ್ಕಿಳಿಯಬೇಕು. ಆಗ ಇಳೆಯಾಂಡ ಗುಡಿಮಾರ, ಭಕ್ತ ಸಿರಿಯಾಳ, ಕುಂಬಾರ ಗುಂಡಯ್ಯ ನಮ್ಮವರಾಗುತ್ತಾರೆ. ಪದ್ಯವನ್ನೊಂದು ಬಾರಿ ಓದುವುದು..ಎರಡನೇ ಬಾರಿಗೆ ಪದವಿಭಾಗ ಮಾಡುವುದು.. ಮೂರನೇ ಬಾರಿಗೆ ಪದಗಳ ಅರ್ಥ ಹೇಳಿ ವಿವರಿಸಿ.. ಮತ್ತೆ ಪದ್ಯ ಓದಿ ನಂತರ ತಾತ್ಪರ್ಯವನ್ನು ವಿದ್ಯಾರ್ಥಿಗಳ ಕೈಲಿ ಓದಿಸುವುದು”..ಅವರ ಪಾಠದ ಕ್ರಮವಾಗಿತ್ತು. ನಿಜಕ್ಕೂ ಅವರ ವಿದ್ಯಾರ್ಥಿಗಳು ಪುಣ್ಯವಂತರೆನ್ನಬೇಕು. ಕೇಳಿದರೆ ಮನಸ್ಸು ತುಂಬಿ ಬರುತ್ತದೆ. ಈ ರೀತಿಯಾದ ಪಾಠ ಮನದಲ್ಲಷ್ಟೇ ಅಲ್ಲ.. ಹೃದಯದಾಳಕ್ಕೆ ಇಳಿದೀತು.
ತಾವು ಪಾಠ ಮಾಡಿದ ಅಂದಿನ ಪ್ರಮುಖ ಕವಿಗಳು.. ಮತ್ತವರ ಕೃತಿಗಳ ಬಗ್ಗೆ ಲೇಖಕಿ ಹೃದ್ಯವಾಗಿ ಹೇಳುತ್ತಾರೆ. ಒಂದು ರೀತಿಯಲ್ಲಿ ಕನ್ನಡ ಸಾಹಿತ್ಯ ಚರಿತ್ರೆಯ ಕೆಲವು ಪುಟಗಳನ್ನು ತಿರುವಿ ಹಾಕಿದಂತಾಗುತ್ತದೆ. ಹರಿಹರ, ನಾಗಚಂದ್ರ, ಪು.ತಿ.ನ., ಕುವೆಂಪು, ಬೇಂದ್ರೆ, ಕೆ.ಎಸ್.ನ., ಎಚ್.ಎಸ್.ವೆಂಕಟೇಶಮೂರ್ತಿ.. ಮುಂತಾದವರ ಪದ್ಯ, ಗದ್ಯಗಳನ್ನು ಹೃದ್ಯವಾಗಿ ಪಾಠ ಮಾಡುವುದು ಅವರಿಗೆ ಸಿಹಿ ತಿಂದಂತೆ. ವಚನಗಳೂ ನಾಲಿಗೆಯ ತುದಿಯಲ್ಲೇ ಇದ್ದವು. ಮೌಲ್ಯಮಾಪನದ ಬಗ್ಗೆ ಹೇಳಿದ್ದನ್ನು ಕೇಳಿದಾಗ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಗುರುಗಳ ಬಗ್ಗೆ ಮನದಲ್ಲಿ ಮೂರ್ತಿಯೊಂದು ನಿರ್ಮಾಣವಾಗುತ್ತದೆ. ವ್ಯಾಕರಣದ ಉತ್ತರಪತ್ರಿಕೆ ತಿದ್ದುವಾಗ ನಗೆಗಡಲಿನಲ್ಲಿ ತೇಲಾಡುವ ಪ್ರಸಂಗಗಳೂ ಸುಂದರ. ಮಗಳ ಮದುವೆಯ ಅವಸರದಲ್ಲಿ ದೊರೆತ ಎಲ್ಲ ಪತ್ರಿಕೆಗಳಿಗೂ 35 ಅಂಕ ಕೊಟ್ಟು ಹೋಗಿದ್ದ ಗುರುವಿನ ಬಗ್ಗೆ ರೋಷ ಉಕ್ಕುತ್ತದೆ. ಅವುಗಳನ್ನು ಲೇಖಕಿ ತಿದ್ದಿದಾಗ ಕೆಲವರಿಗೆ 90, 80, 100.. ಹೀಗೆಲ್ಲ ಅಂಕಗಳು ಬಂದಿದ್ದವಂತೆ. ದಾರಿ ತೋರುವ ಗುರುಗಳೇ ದಾರಿ ತಪ್ಪಿದರೆ ವಿದ್ಯಾರ್ಥಿಗಳ ಭವಿಷ್ಯದ ಬಗೆ ಹೇಗೆ?.
“ಸಾಹಿತ್ಯದ ನಂಟು ಬೆಳೆದ ಮೇಲೆ ಸಾಹಿತ್ಯ ಪರಿಷತ್ತು ಚಿರಪರಿಚಿತವಾಯಿತು. ರವೀಂದ್ರ ಕಲಾಕ್ಷೇತ್ರ, ಯುವನಿಕಾ, ಕೃಷ್ಣರಾಜ ಸಭಾಂಗಣ, ನಯನ ಸಭಾಂಗಣ, ಮಿಥಿಕ್ ಸೊಸೈಟಿಗಳೆಲ್ಲ ರಾಮ, ಕೃಷ್ಣ, ಶಿವ, ಆಂಜನೇಯರ ದೇವಾಲಯವಿದ್ದಂತೆ. ಅದೇ ಭಕ್ತಿ.. ಅದೇ ವ್ಯಾಮೋಹ. ದೇವರಿಗಾದರೆ ಹಣ್ಣು, ಕಾಯಿ ಒಡೆಯಬೇಕು. ಇಲ್ಲಿ ನಮ್ಮ ಜ್ಞಾನದ ಹಸಿವನ್ನು ಹಿಂಗಿಸಬೇಕು..”ಎಂದು ಅವರು ಹೇಳುವಲ್ಲಿ ಸಾಹಿತ್ಯದೊಂದಿಗಿನ ಅವರ ಜನ್ಮಕ್ಕಂಟಿದ ನಂಟನ್ನು ನೋಡಬಹುದು. ಸಾಹಿತ್ಯವನ್ನು ದೇವರ ಸ್ಥಾನದಲ್ಲಿಟ್ಟು ಪೂಜಿಸಿದ್ದು ಮಾರ್ಮಿಕವಾದದ್ದು. ಅದೆಷ್ಟೋ ವಿದ್ಯಾರ್ಥಿಗಳ ಜ್ಞಾನದಾಹವನ್ನು ಲೇಖಕಿ ತಣಿಸಿದರು. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪಿ.ಎಚ್.ಡಿ. ಗೈಡ್ ಆಗಿದ್ದು ಒಂದು ಗರಿಮೆ ಅವರಿಗೆ. ಆಗ ನಡೆದ ಸಂಗತಿಗಳನ್ನು ಹೇಳುತ್ತಾ ಶಿಕ್ಷಣ ಕ್ಷೇತ್ರದಲ್ಲಿನ ಧನಾತ್ಮಕ ಮತ್ತು ಋಣಾತ್ಮಕ ಅಂಶಗಳಿಗೆ ಕನ್ನಡಿ ಹಿಡಿದಿದ್ದಾರೆ.
ಚಂದ್ರನ ಹುಟ್ಟನ್ನು ಒಬ್ಬ ಸಂಶೋಧನಾ ವಿದ್ಯಾರ್ಥಿಯಂತೆ ಆರು ತಿಂಗಳ ಕಾಲ ಅಧ್ಯಯನ ನಡೆಸಿದರು. ಕೊನೆಗೆ ಅವರ ಆಲೋಚನೆಗಳು ಆಧ್ಯಾತ್ಮದತ್ತ ವಾಲಿದವು. ಸೂರ್ಯ, ಚಂದ್ರ, ನಕ್ಷತ್ರ ಇವೆಲ್ಲಾ ಶಾಶ್ವತವಂತೆ. ಭೂಮಿಯ ಪರಿಸರವನ್ನು ನಾವು ಹಾಳುಗೆಡವುತ್ತಿರುವುದರಿಂದ ಅದು ಬೇಗ ನಾಶವಾಗುತ್ತದಂತೆ. ಇದನ್ನೆಲ್ಲ ಅರಿತ ಮೇಲೆ “ನಾನು ಇರುವವರೆಗಾದರೂ ಭೂಮಿ ಇರಲಿ”ಎಂದು ಹೇಳುವ ವಾಸ್ತವವಾದ ನಗೆ ಉಕ್ಕಿಸುತ್ತದೆ.
ಸಾಮಾಜಿಕ ಕತೆಯಾಗಿ ಲೇಖಕಿ ತಮ್ಮ ಊರಿನ ಕತೆಯನ್ನು ಬರೆದಾಗ “ಊರಿನ ಬಗ್ಗೆ ಬರೆದರೆ ಕಾದಿದೆ ನಿನಗೆ ಗ್ರಹಚಾರ”ಎಂದು ಊರಿನ ಕೆಲವು ಜನ ಬಂದು ಹೆದರಿಸಿದಾಗ ಗಾಬರಿಯಾಗುತ್ತಾರೆ. ಜೊತೆಗೆ ಮನೆಯಿಂದಲೂ ಫೋನು. “ನಮ್ಮ ಕತೆ ಯಾಕೆ ಬರೆದೆ?”ಎಂಬ ಆಕ್ಷೇಪಣೆ. ಸಾಮಾಜಿಕ ಕಾದಂಬರಿಗಳ ಸಹವಾಸವನ್ನೇ ತೊರೆದು ಪೌರಾಣಿಕ ಕಾದಂಬರಿಗಳತ್ತ ಹೊರಳುತ್ತಾರೆ. ಸ್ತ್ರೀವಾದಿ ಲೇಖಕಿಯ ಪಟ್ಟ ತಾನಾಗಿ ಕಟ್ಟಿಕೊಳ್ಳುತ್ತದೆ. ಇದೇ ಧಾಟಿಯಲ್ಲಿ ನೆಲಮಂಗಲದಲ್ಲಿ ಭಾಷಣ ಮಾಡಿದಾಗ ಆತಂಕದ ವಾತಾವರಣವಿತ್ತಂತೆ. ಮಹಿಳೆಯರು ಹೊಡೆಯಲು ಬರುತ್ತಾರೆಂದು ಆಯೋಜಕರು ಸ್ಕೂಟರ್‍ನಲ್ಲಿ ಕೂರಿಸಿಕೊಂಡು ಬಂದು ಬೇಗ ಬಸ್ ಹತ್ತಿಸಿ ಕಳಿಸಿದ್ದು ಒಂದು ವಿಚಿತ್ರ ಅನುಭವವೇ. ಆದರೆ ಅವರೇ ಹೇಳುವಂತೆ ಅವರದು ಸೌಮ್ಯ ಸ್ತ್ರೀವಾದ. ಹೀಗಾಗಿ ಕುಟುಂಬಗಳೂ ಉಳಿದು.. ಸ್ನೇಹಿತರಾದ ಲೇಖಕರ ಹೆಂಡತಿಯರು ಅಕ್ಕತಂಗಿಯರಂತೆ ಭಾಸವಾಗುತ್ತಾರೆ. ‘ಇದು ಸ್ತ್ರೀವಾದವನ್ನು ಮೀರಿದ ಮಾನವತಾವಾದ..ಸೋದರಿತ್ವ’ ಎಂದಿದ್ದಾರೆ. ಸ್ತ್ರೀ..ಪುರುಷರನ್ನು ಸಮನಾಗಿ ಕಾಣುವ ನಿಟ್ಟಿನಲ್ಲಿ.. ಕುಟುಂಬಗಳನ್ನು ಒಗ್ಗೂಡಿಸುವ ದಿಸೆಯಲ್ಲಿ ಈ ಮಾನವತಾವಾದ ಬಹುಮುಖ್ಯವಾಗಿ ಕೆಲಸ ಮಾಡುತ್ತದೆ. ಇಂದಿನ ಸಮಾಜಕ್ಕೆ ಅತ್ಯಗತ್ಯವಾಗಿದೆ.
“ಹೆಣ್ಣು ಲೈಂಗಿಕ ಆಯ್ಕೆಯನ್ನು ಹೊಂದಿದ್ದಾಳೆ.. ಎಂದು ಇತ್ತೀಚೆಗೆ ಹೇಳಲಾರಂಭಿಸಿದ್ದೇವೆ. ಶಿವರಾಮ ಕಾರಂತರು ‘ಹೆತ್ತಳಾ ತಾಯಿ’ಯಲ್ಲಿ ‘ ಗರತಿಯೊಳಗೊಬ್ಬ ಸೂಳೆ ಇದ್ದಾಳೆ. ಸೂಳೆಯೊಳಗೊಬ್ಬ ಗರತಿ ಇದ್ದಾಳೆ’ಎಂದಾಗ ಯಾರೂ ಹುಬ್ಬೇರಿಸಲಿಲ್ಲ. ಕುವೆಂಪು ಅವರು ಕಾನೂರು ಹೆಗ್ಗಡಿತಿ ಸುಬ್ಬಮ್ಮನ ಪರ ಇದ್ದಾಗ, ಗೃಹಭಂಗದಲ್ಲಿ ಭೈರಪ್ಪನವರು ನಂಜಮ್ಮನ ಪರವಾಗಿದ್ದಾಗ ಯಾರೂ ಆಕ್ಷೇಪಿಸಲಿಲ್ಲ. ಆದರೆ ಲೇಖಕಿ ‘ಕುಂತಿ, ದ್ರೌಪದಿ’ ಬರೆದಾಗ ಹಸಿವು ಎಂದು ತಿಳಿದು ಹಿಂಗಿಸಲು ಬಂದವರಿದ್ದರಂತೆ. ಈ ಅನುಭವ ಸ.ಉಷಾ ಮತ್ತು ಪ್ರತಿಭಾ ಅವರಿಗೂ ಆಗಿದ್ದುಂಟು. ಇದು ನಮ್ಮ ಸಮಾಜ. ಅವರವರ ಭಾವನೆಗಳನ್ನು ಅಕ್ಷರ ರೂಪಕ್ಕಿಳಿಸುವ ಹಕ್ಕು ಎಲ್ಲರಿಗೂ ಇದೆ. ಆದರೂ ಲೇಖಕರನ್ನು ಮತ್ತು ಲೇಖಕಿಯರನ್ನು ಸಮಾಜ ಪರಿಭಾವಿಸಿವ ಪರಿಯೇ ಬೇರೆ. ಇದು ವಿಪರ್ಯಾಸವಲ್ಲವೆ?
ಗೆಲುವಿನಲ್ಲೂ ನೋವಿನ ಪೆಟ್ಟು ಲೇಖಕಿಗಿದ್ದೇ ಇದೆ. ಗೆಲುವನ್ನು ಪೂರ್ಣಪ್ರಮಾಣದಲ್ಲಿ ಅವರಿಗೆ ಸಂಭ್ರಮಿಸಲಾಗಿಲ್ಲ. ಪ್ರತಿ ಬಾರಿ ಏನೇನೋ ಅಡ್ಡಿ ಆತಂಕಗಳು. ಸಂಬಂಧಿಗಳು ತೀರಿಹೋಗುವುದು, ಮಗಳಿಗೆ ಜ್ವರ, ಗಂಡನಿಗೆ ಕಾಯಿಲೆ, ಸ್ವತಃ ಹುಶಾರು ತಪ್ಪುವುದು.. ಇತ್ಯಾದಿಗಳು ಬಂದು ಗೆಲುವಿನ ಸಂಭ್ರಮ ಸೋರಿಹೋಗುತ್ತಿದ್ದುದುಂಟು. ಇದು ಅನೇಕ ಜನರ ಅನುಭವ. ಖ್ಯಾತ ಲೇಖಕ ವಿಕ್ರಮ ಹತ್ವಾರ್ “ಪ್ರಶಸ್ತಿಗಳು ಬಂದಾಗ ಸಂತಸದೊಂದಿಗೆ ಆತಂಕವೂ ಇದ್ದೇ ಇದೆ. ವೈಯಕ್ತಿಕ ಬದುಕಿನಲ್ಲಿ ಏನು ತೊಂದರೆಯಾಗುವುದೋ..ಎಂಬ ಕಳವಳ ಗೆಲುವಿಗೆ ಹೆದರುವಂತೆ ಮಾಡಿದೆ” ಎಂದಿದ್ದನ್ನು ಇಲ್ಲಿ ಸ್ಮರಿಸಬಹುದು. “ಈಗ ಎಲ್ಲ ಉರಿದು ಬೂದಿಯಾದರೂ ಅದರಿಂದಲೇ ಎದ್ದು ಬರಲು ಪ್ರಯತ್ನಿಸುತ್ತಿದ್ದೇನೆ”ಎನ್ನುವುದು ಫೀನಿಕ್ಸ ಪಕ್ಷಿಯ ನೆನಪು ತರುತ್ತದೆ.
ಒಟ್ಟಾರೆಯಾಗಿ ನೋಡುವುದಾದರೆ ಲೇಖಕಿ ಬದುಕಿನಲ್ಲಿ ಬಂದ ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಂಡಿದ್ದಾರೆ. ಹೆಣ್ಣಿನ ಕರ್ತತ್ವ ಶಕ್ತಿಗೆ ಜ್ವಲಂತ ಉದಾಹರಣೆಯಾಗಿ ನಿಲ್ಲುತ್ತಾರೆ. ಚಿಕ್ಕ ಪುಸ್ತಕದ ಪುಟಪುಟವೂ ಆಸಕ್ತಿಯಿಂದ ಓದಿಸಿಕೊಳ್ಳುತ್ತದೆ. ಬದುಕಿಗೆ ಎಷ್ಟೊಂದು ರೂಪಕಗಳು..ಉಪಮೆಗಳು..ಎಲ್ಲ ಸಾಕಾರವಾಗಿ ನಿಂತಿವೆ. ಮುಖ್ಯವಾಗಿ ಓದುಗ ಅವರ ಎಷ್ಟೋ ಅನುಭವಗಳಲ್ಲಿ ತನ್ನನ್ನೇ ಕಂಡುಕೊಳ್ಳುತ್ತಾನೆ. ಅವರದೇ ಕವಿತೆಯ ಸಾಲುಗಳಲ್ಲಿ ಹೇಳುವುದಾದರೆ
“ತಿಂದ ಹೊಡೆತಗಳು.. ಬಿದ್ದ ಪೆಟ್ಟುಗಳು..
ಒಂದೊಂದೂ ಮೈ ಚರ್ಮ ಹದವಾಗಿಸಿದ ನೆನಪು.
ಕಹಿಯನ್ನೇ ಉಂಡು..ಕಹಿಯನ್ನೇ ಅರಗಿಸಿ ಸಿಹಿಯನ್ನೇ ಉಣಬಡಿಸುವ ಪವಾಡ ನಾನಾದ ನೆನಪು” ಎಂಬಲ್ಲಿ ಅವರ ಬದುಕನ್ನು ಪಕ್ಷಿನೋಟದಲ್ಲಿ ಗ್ರಹಿಸಬಹುದು. ಆದರೂ ‘ಎನ್ನ ಪಾಡೆನಗಿರಲಿ’ಎನ್ನುತ್ತ ಜಗಕೆಲ್ಲ ಸಿಹಿಯನ್ನೇ ಉಣಬಡಿಸುವುದು ದೊಡ್ಡ ಮಾತು.
- ಮಧುರಾ ಕರ್ಣಮ್
