ಹೆತ್ತವರೂ ತಮ್ಮ ಮಕ್ಕಳು ಪರೀಕ್ಷೆಯಲ್ಲಿ ಚೆನ್ನಾಗಿ ಮಾಡಲಿ ಎಂದು ಆಶಿಸುವುದು ಸಹಜ. ಆದರೆ ಮಕ್ಕಳು ಮತ್ತು ಹೆತ್ತವರು ಪರೀಕ್ಷೆಯನ್ನು ಯುದ್ಧದ ರೀತಿಯಲ್ಲಿ ಎದುರಿಸುವುದು ಬಹುದೊಡ್ಡ ತಪ್ಪು. ಎಲ್ಲೆಡೆ ಪರೀಕ್ಷಾ ವಾತಾವರಣ ಈ ಸಂದರ್ಭದಲ್ಲಿ ಶಿಕ್ಷಕಿ ಸೌಮ್ಯ ಸನತ್ ಅವರು ತಮ್ಮ ಲೇಖನದ ಮೂಲಕ ಪಾಲಕರಿಗೆ ಮತ್ತು ಮಕ್ಕಳಿಗೆ ಧೈರ್ಯ ತುಂಬುವ ಪ್ರಯತ್ನ ಮಾಡಿದ್ದಾರೆ. ತಪ್ಪದೆ ಮುಂದೆ ಓದಿ…
ಪರೀಕ್ಷೆಯಲ್ಲಿ ಪಾಸಾಗುತ್ತೇನಾ? ಫೇಲಾಗುತ್ತೇನಾ? ಹೈ ಫಸ್ಟ್ ಕ್ಲಾಸ್ ಮಾರ್ಕ್ಸ್ ಬರುತ್ತಾ? ಯಾವ ಪ್ರೆಶ್ನೆ ಪತ್ರಿಕೆ ಕಠಿಣವಾಗಿರುತ್ತದೆ? ನನ್ನ ಸ್ನೇಹಿತರೆಲ್ಲ ಚೆನ್ನಾಗಿ ಸಿದ್ಧತೆ ಮಾಡಿದ್ದಾರೆ, ನನ್ನ ಸಿದ್ಧತೆ ಸಾಲದು. ಫೇಲಾದರೆ? ಥರ್ಡ್ ಕ್ಲಾಸ್ನಲ್ಲಿ ಪಾಸಾದರೆ ಎಷ್ಟು ಅವಮಾನ ಹೀಗೆ ವಿದ್ಯಾರ್ಥಿಗಳು ಚಿಂತಿಸುತ್ತಾ ಭಯ ಪೀಡಿತರಾಗುತ್ತಿರುತ್ತಾರೆ ಭಯದಿಂದ ಊಟ ಸೇರದು ನಿದ್ರೆ ಬಾರದು, ಫೋಕಸ್ ಮಾಡಿ ಓದಲಾಗದು, ಅತಿ ಭಯದಿಂದ ಪರೀಕ್ಷಾ ಸಮಯದಲ್ಲೇ ಜ್ವರ, ತಲೆನೋವು ಅತಿಸಾರ ಕಾಣಿಸಿಕೊಳ್ಳುತ್ತದೆ. ಪರೀಕ್ಷಾ ದಿನ ಮನಸ್ಸು ಅಯೋಮಯವಾಗುತ್ತದೆ. ಪರೀಕ್ಷಾ ಹಾಲಿನಲ್ಲಿ ಮೈ ಬೆವರು ಬಂದು ತಲೆ ಸುತ್ತು ಬಂದು ಬೀಳುವಂತಾಗುತ್ತದೆ, ಪದೇ ಪದೇ ಮೂತ್ರ ವಿಸರ್ಜನೆಗೆ ಅವಸರವಾಗುತ್ತದೆ. ಪ್ರೆಶ್ನೆಗಳು ಸುಲಭವಾಗಿದ್ದರೂ ಉತ್ತರಗಳು ನೆನಪಿಗೆ ಬರುವುದಿಲ್ಲ.
ಹೌದು!! ಪರೀಕ್ಷೆ ಎನ್ನುವುದು ಪ್ರತಿಯೊಬ್ಬ ವಿದ್ಯಾರ್ಥಿಯ ಜೀವನ ಘಟ್ಟದಲ್ಲಿ ಬರುವ ಮಹತ್ತರವಾದ ಮೈಲುಗಲ್ಲು. ಪ್ರತಿಯೊಬ್ಬ ಹೆತ್ತವರೂ ತಮ್ಮ ಮಕ್ಕಳು ಪರೀಕ್ಷೆಯಲ್ಲಿ ಚೆನ್ನಾಗಿ ಮಾಡಲಿ ಎಂದು ಆಶಿಸುವುದು ಸಹಜ. ಜೀವನದ ಪರೀಕ್ಷೆಯಲ್ಲಿ ಈಜಾಡಿ ಜಯಿಸಬೇಕಾದರೆ, ವಿದ್ಯಾಭ್ಯಾಸದ ಹಂತದ ಎಸ್ಸೆಸೆಲ್ಸಿ ಮತ್ತು ಪಿ.ಯು.ಸಿ ಪರೀಕ್ಷೆಯನ್ನು ವಿದ್ಯಾರ್ಥಿಗಳು ಚೆನ್ನಾಗಿ ಮಾಡಲೇಬೇಕಾದ ಅನಿವಾರ್ಯತೆ ಇದೆ. ಚೆನ್ನಾಗಿ ಮಾಡುವುದು ಎಂದರೆ ಬರೀ ಹೆಚ್ಚು ಮಾರ್ಕ್ಸ್ ತೆಗೆದುಕೊಳ್ಳುವುದು ಎಂದಲ್ಲ. ಯಾವ ರೀತಿ ತನ್ನನ್ನು ಮಾನಸಿಕವಾಗಿ ಮತ್ತು ದೈಹಿಕವಾಗಿ ಪರೀಕ್ಷೆಯ ಸಮಯದಲ್ಲಿ ತೊಡಗಿಸಿಕೊಳ್ಳುತ್ತಾನೆ ಮತ್ತು ಮನಸ್ಸಿನ ಚಂಚಲತೆಯನ್ನು ಹೋಗಲಾಡಿಸಿ ಏಕಾಗ್ರತೆಯನ್ನು ನಿಟ್ಟಿಸುತ್ತಾರೆ ಎಂಬುದರ ಮೇಲೆ ವಿದ್ಯಾರ್ಥಿಯ ಭವಿಷ್ಯ ಅಡಗಿರುತ್ತದೆ.

ಫೋಟೋ ಕೃಪೆ : google
ಪರೀಕ್ಷಾ ಭಯ ನಿವಾರಿಸಲು ಹೀಗೆ ಮಾಡಿ
ಸಮಯ ಪಾಲನೆ ಮತ್ತು ವೇಳಾಪಟ್ಟಿ :
* ಬೆಳಿಗ್ಗೆ ನಸುಕಿನ ಜಾವವೇ ಎದ್ದು ಪ್ರತಿಯೊಂದು ಚಟುವಟಿಕೆಯನ್ನು ನಿರ್ದಿಷ್ಟ ಸಮಯಕ್ಕೆ ಮಾಡಬೇಕು.
* ಅಧ್ಯಯನಕ್ಕೆ ಸಮಯವನ್ನು ನಿಗದಿ ಮಾಡಿಕೊಳ್ಳುವುದು.
* ಆಟ ಮನರಂಜನೆಗೆ ದಿನಕ್ಕೆ ಒಂದು ಗಂಟೆ ಅಥವಾ ಒಂದೂವರೆ ಗಂಟೆ ನಿಗದಿ ಮಾಡಿಕೊಳ್ಳುವುದು.
* ಹವ್ಯಾಸ, ಸಂಗೀತ, ಕಲಿಕೆ, ನೃತ್ಯ, ಕಲಿಕೆ ಮತ್ತು ಚಿತ್ರಕಲೆ ಇತ್ಯಾದಿಗಳಿಗೆ ವಾರಕ್ಕೆ ಎರಡು ಮೂರು ದಿವಸ ಸ್ವಲ್ಪ ಸಮಯವನ್ನು ವ್ಯಯಿಸುವುದು. (ಕೋರ್ಸ್ ಶುರುವಾದಾಗಿನಿಂದ ಸಿದ್ಧ ಪಡಿಸುವ ವೇಳಾಪಟ್ಟಿ )
* ತನ್ನ ಎಲ್ಲಾ ವಸ್ತುಗಳನ್ನು ಒಂದು ನಿರ್ದಿಷ್ಟ ಜಾಗದಲ್ಲಿಟ್ಟು ಹುಡುಕಾಡಲು ಸಮಯವನ್ನು ವ್ಯರ್ಥ ಮಾಡಬಾರದು.
* ಯಾವ ಚಟುವಟಿಕೆಗೆ ಆದ್ಯತೆ, ಯಾವುದಕ್ಕೆ ಎಷ್ಟು ಸಮಯ ಎಂದು ಆಲೋಚಿಸುವುದು ಅಗತ್ಯ.
* ಅನಾರೋಗ್ಯವಾದಾಗ ತಡ ಮಾಡದೆ ಚಿಕಿತ್ಸೆ ಪಡೆಯುವುದು.
* ಮಾಡುವ ಕೆಲಸವನ್ನು ಖುಷಿಯಿಂದ ಉತ್ಸಾಹದಿಂದ ಮಾಡಿದರೆ ಸರಿಯಾದ ಸಮಯದಲ್ಲಿ ಅದನ್ನು ಮುಗಿಸಬಹುದು.

ಫೋಟೋ ಕೃಪೆ : google
ಅಧ್ಯಯನ ವಿಧಾನ :
* ಪ್ರಶಾಂತವಾದ ಸ್ಥಳ ಮತ್ತು ಸಮಯವನ್ನು ಆಯ್ಕೆ ಮಾಡಿ. ಹಿತಮಿತವಾದ ಆಹಾರವನ್ನು ಸೇವಿಸಿ ಅಧ್ಯಯನ ಮಾಡವುದು ಒಳ್ಳೆಯದು. ಓದಿಗೆ ಅತ್ಯಂತ ಪ್ರಶಸ್ತವಾದ ಕಾಲ ಬೆಳಗಿನ ಸಮಯ.
* R = Read : ಏಕಾಗ್ರತೆಯಿಂದ ಮನಸ್ಸಿಟ್ಟು 30 ನಿಮಿಷಗಳ ಕಾಲ ಓದಬೇಕು ನಂತರ ಓದಿದ್ದನ್ನು ಅರ್ಥಮಾಡಿಕೊಳ್ಳಬೇಕು.
* Recall & Write : ಪುಸ್ತಕವನ್ನು ಮುಚ್ಚಿ ಓದಿದ ವಿಷಯವನ್ನು ನೆನಪಿಸಿಕೊಳ್ಳಬೇಕು ಆದಷ್ಟು ಮುಖ್ಯಾoಶಗಳನ್ನು ಬರೆದಿಟ್ಟುಕೊಳ್ಳುವುದು ಬಹಳ ಉಪಯುಕ್ತವಾದುದು .
* Relax : ಬಿಟ್ಟುಬಿಡದೆ ಸತತವಾಗಿ ಅಭ್ಯಾಸ ಮಾಡುವುದು ಮನಸ್ಸಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಒಂದು ಗಂಟೆ ಓಡಾಡಿದ ಮೇಲೆ ಕನಿಷ್ಠ ಐದು ನಿಮಿಷ ವಿರಾಮಕ್ಕೆ ಅವಕಾಶ ಇಟ್ಟುಕೊಂಡು ನಂತರದ ಓದು ಪರಿಣಾಮಕಾರಿಯಾಗಿರುತ್ತದೆ.
* Recall & Repeat : ಆಗಾಗ ಓದಿದ್ದನ್ನು ಮತ್ತು ಕಲಿತಿದ್ದನ್ನು ನೆನಪಿಸಿಕೊಳ್ಳುತ್ತಿರಬೇಕು. ಸಹಪಾಠಿಗಳೊಂದಿಗೆ ಚರ್ಚಿಸಿವುದು ಬಹಳ ಕಾಲ ನೆನಪಿನಲ್ಲಿ ಉಳಿಯುತ್ತದೆ. ಮರೆತು ಹೋದ ಅಂಶಗಳನ್ನು ಮತ್ತೆ ಓದಿ ಮನನ ಮಾಡಿಕೊಳ್ಳುವುದು ಉತ್ತಮ.
* Rehearsal : ಪ್ರಶ್ನೆಗೆ ಉತ್ತರ ಬರೆಯುವುದು ಒಂದು ಕಲೆ ಸಂಕ್ಷಿಪ್ತವಾಗಿ ಸ್ಪುಟವಾಗಿ ಮುಖ್ಯ ಅಂಶಗಳನ್ನು ಬಿಡದೆ ಬರೆಯುವ ಅಭ್ಯಾಸ ಮಾಡಿಕೊಳ್ಳಬೇಕು. ಪರೀಕ್ಷೆ ಹತ್ತಿರ ಬರುತ್ತಿದ್ದಂತೆ Rehearsal ಮತ್ತು Revise ಮಾಡುತ್ತಾ ನೆನಪಿನಲ್ಲಿ ಎಲ್ಲಾ ಮಾಹಿತಿ ಉಳಿಯುವಂತೆ ನೋಡಿಕೊಳ್ಳಬೇಕು.
* ಅಧ್ಯಯನ ಯಾವತ್ತು ಗಿಳಿ ಪಾಠವಾಗಬಾರದು ಮಾಹಿತಿಯ ಅರ್ಥ, ಉಪಯೋಗವನ್ನು ಅರ್ಥಮಾಡಿಕೊಂಡು ಹತ್ತಾರು ಬಾರಿ ಓದಿ ಕಂಠಪಾಠ ಮಾಡದೆ ಒಂದೆರಡು ಬಾರಿ ಬರೆದು ಅರ್ಥೈಸಿಕೊಳ್ಳವುದು ಒಳ್ಳೆಯದು.

ಫೋಟೋ ಕೃಪೆ : google
ಉಟೋಪಚಾರ :
* ಸಾಮಾನ್ಯವಾಗಿ ಪರೀಕ್ಷೆ ಕಡು ಬೇಸಿಗೆಯ ಮಾರ್ಚ್ ಮತ್ತು ಏಪ್ರಿಲ್‌ನಲ್ಲಿ ಬರುವುದರಿಂದ ದೇಹಕ್ಕೆ ನೀರಿನ ಅಗತ್ಯ ಅತಿಯಾಗಿರುತ್ತದೆ.
* ತಾಜಾ ಹಣ್ಣಿನ ರಸ (ಕೃತಕ ಹಣ್ಣಿನ ರಸಬೇಡ) ಮತ್ತು ಜ್ಯೂಸ್, ತರಕಾರಿ ಜ್ಯೂಸ್, ಮಜ್ಜಿಗೆ, ಎಳನೀರು ಮುಂತಾದ ಪಾನೀಯಗಳು ಬಹಳ ಉತ್ತಮ.
* ಇಂಗಾಲಯುಕ್ತ ಪೆಪ್ಸಿ ಕೋಕ್ ಪಾನೀಯಗಳು ಯಾವತ್ತೂ ಉಪಯೋಗಿಸಬಾರದು.
* ಏನಿಲ್ಲವೆಂದರೂ ದಿನಕ್ಕೆ 3 ರಿಂದ 4 ಲೀಟರ್ ನೀರು ಕುಡಿದಲ್ಲಿ ಜ್ಞಾಪಕ ಶಕ್ತಿ ಮತ್ತು ಆರೋಗ್ಯ ಚೆನ್ನಾಗಿರುವುದರಲ್ಲಿ ಸಂಶಯವೇ ಇಲ್ಲ.
* ಜಂಕ್‌ಪುಡ್‌ಗಳಾದ ಕುರುಕುರೆ, ಲೇಸ್, ಕರಿದ ಮಸಾಲೆಯುಕ್ತ ಪದಾರ್ಥಗಳನ್ನು ತಿನ್ನುವುದು ಅನಾರೋಗ್ಯಕರ .
* ಪ್ರೊಟೀನ್ ನಿಂದ ಕೂಡಿದ ಹಸಿತರಕಾರಿ, ಮೊಳಕೆ ಬರಿಸಿದ ಕಾಳುಗಳು, ತಾಜಾ ಹಣ್ಣುಗಳು, ಹಸಿರು ತರಕಾರಿಗಳನ್ನು ಹೆಚ್ಚು ಹೆಚ್ಚು ಬಳಸಬೇಕು. ಇವೆಲ್ಲವೂ ಪರೀಕ್ಷೆ ಸಮಯದಲ್ಲಿ ಮಕ್ಕಳ ದೈಹಿಕ ಮತ್ತು ಮಾನಸಿಕ ಶಕ್ತಿಯನ್ನು ವೃದ್ಧಿಸುವ ಆಹಾರಗಳಾಗಿವೆ. ಮನೆ ಆಹಾರವೇ ಹೆಚ್ಚು ಆರೋಗ್ಯಕರ ಯಾವತ್ತಿಗೂ ಮನೆಯಲ್ಲಿ ಅಮ್ಮ ಮಾಡಿದ ತಿಂಡಿ ಮತ್ತು ಕೈ ತುತ್ತು ಅಮೃತಕ್ಕಿಂತಲೂ ಅಮೂಲ್ಯವಾದದ್ದು.
***
ಪರೀಕ್ಷಾ ಸಮಯದಲ್ಲಿ ಹೀಗಿರಿ :
* ಅಧ್ಯಯನಕ್ಕೆ ಯಾವ ಸಮಯದಲ್ಲಿ ಯಾವ ವಿಷಯಗಳನ್ನು ಓದಬೇಕು ಎಂಬುದನ್ನು ವೇಳಾಪಟ್ಟಿ ಹಾಗೂ ಪರೀಕ್ಷಾ ವೇಳಾಪಟ್ಟಿಯನ್ನು ಕಾಣುವಂತೆ ಗೋಡೆಗೆ ಅಂಟಿಸಿಕೊಳ್ಳುವುದು ಉತ್ತಮವಾದುದು.
* ನಕ್ಷೆ, ಪ್ರಮೇಯಗಳು (Theorems), ಸೂತ್ರಗಳು (formulae ) ಗಳ ಚಿತ್ರಗಳನ್ನು ಕಣ್ಣಿಗೆ ಕಾಣುವ ಹಾಗೆ ಗೋಡೆಗೆ ಅಂಟಿಸಿ ದಿನವೂ ಕಣ್ಣಾಡಿಸಿ ಮನನ ಮಾಡಿಕೊಳ್ಳುವುದು.
* ಓದಿನ ನಡುವೆ ಗಂಟೆಗೊಮ್ಮೆ ಐದು ನಿಮಿಷಗಳ ವಿಶ್ರಾಂತಿ ಇರಲಿ.
* ದೇವರಲ್ಲಿ ನಂಬಿಕೆ ಇದ್ದರೆ ಮಂತ್ರ–ಸ್ತೋತ್ರ ಹೇಳಿಕೊಳ್ಳಿ. ಇಲ್ಲದಿದ್ದರೆ ಒಳ್ಳೇ ಸಂಗೀತ ಕೇಳಿ.
* ಕನಿಷ್ಠ ಏಳು ತಾಸು ನಿದ್ದೆ ಮಾಡಲೇಬೇಕು. ಓದುವ ಅವಧಿ ಹೆಚ್ಚು ಕಡಿಮೆಯಾದರೂ ಪರವಾಗಿಲ್ಲ. ನಿದ್ದೆಯ ಅವಧಿಯಲ್ಲಿ ಕಡಿತ ಸಲ್ಲದು.
* ಓದುವ ಅಭ್ಯಾಸ (ಪ್ಯಾಟರ್ನ್) ಬದಲಿಸಬೇಡಿ. ಕೆಲವು ಮಕ್ಕಳಿಗೆ ತಡರಾತ್ರಿಯವರೆಗೆ ಓದುವ ಹವ್ಯಾಸ ಇರುತ್ತೆ. ಕೆಲವರಿಗೆ ಮುಂಜಾನೆ ಬೇಗ ಎದ್ದು ಓದುವ ಅಭ್ಯಾಸ. ಪರೀಕ್ಷೆ ಅವಧಿಯಲ್ಲಿ ಪ್ಯಾಟರ್ನ್ ಬದಲಿಸುವುದರಿಂದ ಹೆಚ್ಚೇನೂ ಪ್ರಯೋಜನವಾಗದು.
* ಮೊಬೈಲ್ ಬಳಕೆ ಆದಷ್ಟು ಕಡಿಮೆ ಮಾಡಿ ಓದುವ ಕೊಠಡಿಗೆ ತೆಗೆದುಕೊಂಡು ಹೋಗದೇ ಇರುವುದು ಉತ್ತಮ.
* ಯಾರು ಒತ್ತಡ ಹಾಕುತ್ತಾರೋ ಅವರಿಗೆ ಪ್ರೋತ್ಸಾಹದ ಮಾತುಗಳನ್ನು ಆಡಲು ವಿನಂತಿಸಿ. ಪ್ರಯತ್ನ ಮಾಡುತ್ತೇನೆ ಎನ್ನುವ ಆತ್ಮ ವಿಶ್ವಾಸವನ್ನು ಬೆಳಸಿಕೊಳ್ಳಿ.
* ಪರೀಕ್ಷೆ ಬರೆಯಲು ತೆಗೆದುಕೊಳ್ಳುವ ಸಮಯವನ್ನು ತಿಳಿಯಲು ಮಾದರಿ ಪ್ರಶ್ನೆ ಪತ್ರಿಕೆಗಳಿಗೆ ಉತ್ತರಿಸಿ. ಪ್ರತೀ ಪ್ರಶ್ನೆಯನ್ನು ಪೂರೈಸಲು ತೆಗೆದುಕೊಳ್ಳುವ ಸಮಯವನ್ನು ಅಂದಾಜಿಸಿ. ಈ ರೀತಿ ನೀವು ಬರವಣಿಗೆ ಸಿದ್ಧತೆ ಮಾಡಿದ್ದರೆ, ನಿಗದಿತ ಸಮಯದಲ್ಲಿ ಎಲ್ಲಾ ಪ್ರಶ್ನೆಗಳನ್ನು ಉತ್ತರಿಸಲು ಸಹಾಯವಾಗುತ್ತದೆ.
* ಪರೀಕ್ಷೆಗೆಂದು ಹೊರಡುವ ಮೊದಲು ‘ಹಾಲ್ ಟಿಕೆಟ್’ ಇಟ್ಟುಕೊಂಡಿರುವುದು ಖಾತ್ರಿಪಡಿಸಿಕೊಳ್ಳಿ. ಅರ್ಧಗಂಟೆ ಮುಂಚೆ ಪರೀಕ್ಷಾ ಕೇಂದ್ರ ತಲುಪಿ.
* ಪರೀಕ್ಷಾ ಹಾಲಿನಲ್ಲಿ ಆದಷ್ಟು ಶಾಂತವಾಗಿ ಪ್ರೆಶ್ನೆ ಪತ್ರಿಕೆಯನ್ನು ನಿಧಾನವಾಗಿ ಎರೆಡೆರಡು ಸಲ ಓದಿ ಸುಲಭ ಪ್ರೆಶ್ನೆಗಳಿಗೆ ಮೊದಲು ಉತ್ತರ ಬರೆದು ಅನಂತರ ಕಡೆಯಲ್ಲಿ ಕಷ್ಟಕರವಾದ ಪ್ರೆಶ್ನೆಗೆ ಉತ್ತರಿಸಿ.
* ನಿಮ್ಮ ಉತ್ತರವನ್ನು ಸರಿಯಾದ ಸ್ಥಳದಲ್ಲಿ ಸ್ಪಷ್ಟವಾಗಿ ಬರೆಯಿರಿ. ಎಲ್ಲಾ ಪ್ರಶ್ನೆಗಳಿಗೂ ಉತ್ತರ ಬರೆಯಿರಿ. ಗೊತ್ತಿಲ್ಲದ ಪ್ರಶ್ನೆಗಳಿಗೆ ಉತ್ತರವನ್ನು ಊಹೆಯಾಗಿದ್ದರೂ ಪರವಾಗಿಲ್ಲ, ಉತ್ತರಿಸಲು ಪ್ರಯತ್ನಿಸಿ. ಸುಲಭವಾದ ಪ್ರಶ್ನೆಗಳಿಗೆ ಮೊದಲು ಉತ್ತರಿಸಿ. ಕಷ್ಟವೆನಿಸಿದ ಪ್ರಶ್ನೆಗಳಿಗೆ ಕೊನೆಯಲ್ಲಿ ಬರೆಯಿರಿ. ಉತ್ತರವು ಹೆಚ್ಚು ಸ್ಪಷ್ಟವಾಗಿ ಮತ್ತು ಆಕರ್ಷಣೀಯವಾಗಿರುವಂತೆ ವಿವರಿಸಲು ಪ್ರಯತ್ನಿಸಿ
ಎಲ್ಲಾ ಉತ್ತರವನ್ನು ಅಂತಿಮವಾಗಿ ಮಗದೊಮ್ಮೆ ಸರಿಯಾಗಿ ಪರಾಮರ್ಶಿಸಬೇಕು.
* ಪರೀಕ್ಷಾ ಕೊಠಡಿಯಲ್ಲಿ ಯಾವುದೇ ರೀತಿಯ ನಕಲು ಮತ್ತು ಅಕ್ರಮ ಚಟುವಟಿಕೆಗಳಲ್ಲಿ ತೊಡಗಬೇಡಿ. ಈ ರೀತಿ ನೀವು ನಿಮ್ಮನ್ನೇ ಮೋಸ ಮಾಡಿಕೊಂಡಲ್ಲಿ ನಿಮ್ಮ ಭವಿಷ್ಯವನ್ನು ನೀವೇ ಹೊಸಕಿ ಹಾಕಿದಂತೆ. ಪ್ರಶ್ನೆಗೆ ಉತ್ತರ ಗೊತ್ತಿಲ್ಲದಿದ್ದಲ್ಲಿ ನಿಮಗೆ ತಿಳಿದಷ್ಟನ್ನು ಪ್ರಾಮಾಣಿಕವಾಗಿ ಬರೆಯಿರಿ. ಬರೆದ ಉತ್ತರವನ್ನು ಸೂಕ್ತವಾಗಿ ಸ್ಪಷ್ಟವಾಗಿ ಬರೆಯಿರಿ. ಎಷ್ಟೋ ಬಾರಿ ಉತ್ತರ ಸರಿಯಾಗಿದ್ದರೂ ಸ್ಪಷ್ಟವಾಗಿಲ್ಲದ ಕಾರಣ ಅಂಕಗಳನ್ನು ಕಳೆದುಕೊಂಡ ಉದಾಹರಣೆ ನಮ್ಮ ಮುಂದೆ ಇದೆ.

ಫೋಟೋ ಕೃಪೆ : google
ಪೋಷಕರಿಗೊಂದು ಕಿವಿ ಮಾತು
ಮಕ್ಕಳು ಮತ್ತು ಹೆತ್ತವರು ಪರೀಕ್ಷೆಯನ್ನು ಯುದ್ಧದ ರೀತಿಯಲ್ಲಿ ಎದುರಿಸುವುದು ಬಹುದೊಡ್ಡ ತಪ್ಪು. ಯುದ್ಧಕಾಲದಲ್ಲಿ ಶಸ್ತ್ರಾಭ್ಯಾಸ ಎಂಬಂತೆ ಕೊನೆಗಳಿಗೆಯಲ್ಲಿ ಉಸಿರುಗಟ್ಟಿ ನಿದ್ದೆ, ಅನ್ನ ಆಹಾರ ಬಿಟ್ಟು ಓದುವುದು ಸರ್ವತಾ ಸಮ್ಮತವಲ್ಲ. ಪರೀಕ್ಷೆ ಕೂಡ ಬದುಕಿನ ಒಂದು ಭಾಗ. ನಿನ್ನ ಅಪ್ಪ–ಅಮ್ಮ, ಟೀಚರ್‌ಗಳೆಲ್ಲಾ ಪರೀಕ್ಷೆ ಬರೆದಿದ್ದಾರೆ. ಇದೊಂದು ಸಹಜ ಪ್ರಕ್ರಿಯೆ ಎನ್ನುವುದನ್ನು ಪೋಷಕರು ನಾಟುವಂತೆ ಮಕ್ಕಳಿಗೆ ವಿವರಿಸಿಬೇಕು.
ಪಾಸು ಫೇಲುಗಳಾಚೆಯೂ ಬದುಕು ಇದೆ. ಭವಿಷ್ಯವೂ ಇದೆ. ಎಷ್ಟೋ ಭಾರೀ ಪರೀಕ್ಷೆಯಲ್ಲಿ ಫೇಲಾದ ವಿದ್ಯಾರ್ಥಿ ಜೀವನದ ಪರೀಕ್ಷೆಯಲ್ಲಿ ಗೆದ್ದ ಉದಾಹರಣೆ ಉಂಟು. ಅದೇ ರೀತಿ ಪರೀಕ್ಷೆಯಲ್ಲಿ Rank ಗಳಿಸಿದ ವಿದ್ಯಾರ್ಥಿ ನಿಜ ಜೀವನದ ಪರೀಕ್ಷೆಯಲ್ಲಿ ಮುಗ್ಗರಿಸಿದ್ದುಂಟು. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳ ಭವಿಷ್ಯಕ್ಕೆ ಅಂಕಗಳೇ ಮಾನದಂಡ ಎಂಬುದೇನೋ ನಿಜ. ಆದರೆ ಅದೊಂದರಿಂದಲೇ ಬದುಕು ನಿರ್ಣಯವಾಗುವುದಿಲ್ಲ ಎನ್ನುವುದು ಅಷ್ಟೇ ಸತ್ಯ. ಪಾಸು ಫೇಲು ಪರೀಕ್ಷೆಯಲ್ಲಿ ಸಾಮಾನ್ಯ. ಅದ್ದರಿಂದಲೇ ಪೋಷಕರು ತಮ್ಮ ಮಕ್ಕಳು ತಮ್ಮ ನಿರೀಕ್ಷೆಯಂತೆ ಪರೀಕ್ಷೆಯಲ್ಲಿ ಅಂಕಗಳಿಸದಿದ್ದಾಗ ಆಕಾಶವೇ ಕಳಚಿ ಬಿದ್ದಂತೆ ವರ್ತಿಸಬಾರದು. ಅವರ ಬದುಕು ಮುಗಿದೇ ಹೋಯಿತೆಂದು ಗೋಳಿಡಬೇಡಿ. ಮಕ್ಕಳಿಗೆ ಮಾನಸಿಕ ಧೈರ್ಯ, ಸ್ಥೈರ್ಯ ತುಂಬಿ ಸಮಾಧಾನ ಮಾಡಿ ಅವರ ಮನ ಒಲಿಸಿ ಭವಿಷ್ಯದ ಕುರಿತು ತಿಳಿ ಹೇಳಬೇಕು. ಮಕ್ಕಳ ಆಸಕ್ತಿ ಅಭಿರುಚಿಗೆ ತಕ್ಕಂತೆ ಪ್ರೋತ್ಸಾಹ ನೀಡಬೇಕು. ಹಾಗೇ ಮಾಡಿದ್ದಲ್ಲಿ ನಿಮ್ಮ ಮಕ್ಕಳ ಬದುಕು ಬಂಗಾರವಾಗುವುದರಲ್ಲಿ ಎಳ್ಳಷ್ಟು ಸಂಶಯವೇ ಇಲ್ಲ. ಅದರಲ್ಲಿಯೇ ನಮ್ಮ ಸಮಾಜದ ನಿಮ್ಮ ಕುಟುಂಬದ ಮತ್ತು ನಿಮ್ಮ ವೈಯುಕ್ತಿಕ ಹಿತಾಸಕ್ತಿಯೂ ಅಡಗಿದೆ ಮತ್ತು ಅದುವೇ ಮಕ್ಕಳ ಉಜ್ವಲ ಭವಿಷ್ಯಕ್ಕೆ ಭದ್ರ ಬುನಾದಿಯಾಗಬಹುದು.
- ಸೌಮ್ಯ ಸನತ್
