‘ಏರುತ್ತಿರುವ ಕಾಂಪೌಂಡ್’ ಕವನ – ಬಸವನಗೌಡ ಹೆಬ್ಬಳಗೆರೆ

‘ಪಾಪ ಗಿಡಕ್ಕೇನು ಗೊತ್ತು?….ನಂದೂ ನೆರಮನೆಯವನದ್ದೂ ಹಾವು ಮುಂಗುಸಿಯ ಸಂಬಂಧವೆಂದು !’…ಬಸವನಗೌಡ ಹೆಬ್ಬಳಗೆರೆ ಲೇಖನಿಯಲ್ಲಿ ಮೂಡಿಬಂದ ಮನುಷ್ಯನ ಸ್ವಾರ್ಥತೆ ಬಗ್ಗೆ ಒಂದು ಅರ್ಥಪೂರ್ಣ ಕವಿತೆ ತಪ್ಪದೆ ಮುಂದೆ ಓದಿ…

ಪಕ್ಕದ ಮನೆಯ ಕಾಂಪೌಂಡಿನ
ಗಿಡವೊಂದು ಬಾಗಿ
ನನ್ನ ಮನೆಯ ಜಾಗದ ಪರಿಧಿಯೊಳಗೆ
ಬಾಗಿ ಹೂ ಬಿಟ್ಟು ನಗುತ್ತಿದೆ…
ಪಾಪ ಗಿಡಕ್ಕೇನು ಗೊತ್ತು?
ನಂದೂ ನೆರಮನೆಯವನದ್ದೂ
ಹಾವು ಮುಂಗುಸಿಯ ಸಂಬಂಧವೆಂದು!

ನೆರಮನೆಯ ಹಣ್ಣಿನ ಮರದ ಘಮ
ಮಲ್ಲಿಗೆ ಸಂಪಿಗೆ ಪರಿಮಳ
ಮನಸ್ಸಿಗೆ ಮುದ ನೀಡುತ್ತಿದೆ
ಮರ ನೆರಳನ್ನೀಯುತ್ತಿದೆ..
ಅವುಗಳಿಗ್ಹೇಗೆ ಗೊತ್ತಾಗಬೇಕು?
ನಮ್ಮ ಸಂಬಂಧ ಸತ್ತಿದೆಯೆಂದು!
ದ್ವೇಷಿಸಲು ಅವೇನು ಮನುಜರಾ?

ಮರಗಳಿಗೆ ಯಾರೂ ಬೋಧಿಸಲಿಲ್ಲ
‘ಬಾಳೊಂದು ಮೂರು ದಿನದ ಸಂತೆ
ಖುಷೀಲಿ ಬಾಳು ಸುಟ್ಟು ದ್ವೇಷದ ಕಂತೆ’..
ನಾನು ಡಿಗ್ರಿ ಪಡೆದವ,
ಪಕ್ಕದವನದ್ದೂ ಮಾಸ್ಟರ್ ಡಿಗ್ರಿ ಜೊತೆ
ಡಾಕ್ಟರೇಟ್ ಪದವಿ ; ಪಡೆದದ್ದು ‘ಮಾನವ ಸಂಬಂಧಗಳು’
ವಿಷಯದ ಮೇಲಂತೆ!!

ಜನರ ದೃಷ್ಟೀಲಿ ನಮ್ಮದು
ಸೈಲೆಂಟ್ ಏರಿಯಾ..ಸುಶಿಕ್ಷಿತರ ಏರಿಯಾ..
ಮಾತಿದ್ದರೆ ತಾನೆ ಗೌಜು ಗದ್ದಲ?
ಬಹುತೇಕ ಏರಿಯಾಗಳು ಹೀಗೇ ಅಂತೆ..
ಸ್ವಾರ್ಥಿಗಳ ಪರಪಂಚ!

ಇಲ್ಲಿ ಪ್ರತೀ ಮನೆಯಲ್ಲೂ
ಕ್ವಾಲಿಫೈಡ್ ಇದ್ದಾರೆ!
ಕ್ವಾಲಿಫಿಕೇಷನ್ ಹೆಚ್ಚಿದಂತೆ
ಕಾಂಪೌಂಡ್ ಗಳು ಎತ್ತರೆತ್ತರಕ್ಕೆ ಏರುತ್ತಿವೆ
ಮನದ ಕಾಂಪೌಂಡುಗಳೂ ಸಹ!

ಗಿಡ ಮರಗಳು ಮಾತ್ರ
ಕಾಂಪೌಂಡುಗಳನು ಮೀರಿ ಬೆಳೆದು
ಪಕ್ಕದ ಮನೆಯವನ ಗಿಡಗಳ ಜೊತೆ
ಸಂಭಾಷಿಸುವಂತೆ ಕಾಣುತ್ತಿವೆ..
ಚೆಂದಿತ್ತು
ಮನುಷ್ಯ ತನ್ನ ದುರ್ಗುಣಗಳನು
ಕತ್ತರಿಸಿ ಬಾಳಿದ್ದರೆ…
ವಿಪರ್ಯಾಸವೆಂದರೆ
ಮರಗಳ ಈ ಔದಾರ್ಯತೆ
ಸಹಿಸಲಾಗದ ಮನುಷ್ಯ
ಕಾಂಪೌಂಡಿನ ಗಿಡಮರಗಳನ್ನು
ಕತ್ತರಿಸಲು ಮುಂದಾಗಿದ್ದಾನೆ…


  • ಬಸವನಗೌಡ ಹೆಬ್ಬಳಗೆರೆ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading