ಅಂತಾರಾಷ್ಟ್ರೀಯ ಕುಂಬಳಕಾಯಿ ಕಥೆಗಳು, ಅಂತಾರಾಷ್ಟ್ರೀಯ ಕುಂಬಳಕಾಯಿ, ವೈದ್ಯಲೋಕದ ಕಥೆಗಳು, ಬದುಕು ಜಟಕಾಬಂಡಿ, ಮಾಕೋನ ಏಕಾಂತ ಈ ಐದು ಪುಸ್ತಕದ ಕುರಿತು ಪತ್ರಕರ್ತರಾದ ಮಾಕೋನಹಳ್ಳಿ ವಿನಯ್ ಮಾಧವ ಅವರು ಬರೆದಿರುವ ಪುಸ್ತಕ ಪರಿಚಯವನ್ನು ತಪ್ಪದೆ ಮುಂದೆ ಓದಿ…
ತೊಂಬತ್ತರ ದಶಕದ ಕೊನೆ ಭಾಗದಲ್ಲಿ, ʻಕೌನ್?ʼ ಎಂಬ ಸಿನೆಮಾ ಬಂದಿತ್ತು. ಊರ್ಮಿಳಾ ಮತೋನ್ಕರ್ ಮತ್ತು ಮನೋಜ್ ಬಾಜ್ಪೈ ನಟಿಸಿದ, ʻಸಸ್ಪೆನ್ಸ್ ಕ್ರೈಂ ಥ್ರಿಲ್ಲರ್ʼ
ಅದೇ ಸಮಯದಲ್ಲಿ ಕುಚೇಷ್ಟೆಗೆ ಹೆಸರಾಗಿದ್ದ ನನ್ನ ದೊಡ್ಡಪ್ಪನ ಮಗ ದೇವಿ ಪ್ರಸಾದ್ ಮದುವೆ ಗೊತ್ತಾಗಿತ್ತು. ಒಂದು ದಿನ ಅವನ ಮದುವೆಯಾಗುವ ಹುಡುಗಿ ಸಾಂಚಿತ ಫೋನ್ ಮಾಡಿ, ತಾನು ಮತ್ತು ತನ್ನ ಅಕ್ಕ ʻಕೌನ್ʼ ಸಿನೆಮಾಗೆ ಹೋಗುವುದಾಗಿ ಹೇಳಿದಳು. ತಕ್ಷಣವೇ ದೇವಿ ಪ್ರಸಾದ್, ʻಹೋಗಿ, ಬಹಳ ಚೆನ್ನಾಗಿದೆ. ಸಿನೆಮಾದ ಕೊನೆಯವರೆಗೆ ಊರ್ಮಿಳಾನೇ ಕೊಲೆಗಾರ್ತಿ ಅಂತ ಗೊತ್ತಾಗೋದೇ ಇಲ್ಲ,ʼ ಎಂದು ಹೇಳಿದ. ಸಾಂಚಿತ ಮತ್ತು ಅವಳ ಅಕ್ಕ ಸಮನ್ವಿತ ಆ ಚಿತ್ರ ನೋಡಲೇ ಇಲ್ಲ.
ಅದೇ ಸಮಯದಲ್ಲಿ, ಬಸವೇಶ್ವರ ನಗರದಲ್ಲಿರುವ ದೊಡ್ಡಪ್ಪನ ಮನೆಗೆ ಹೋಗಿದ್ದೆ. ಆಗಿನ್ನೂ ವಿಡಿಯೋ ಕ್ಯಾಸೆಟ್ ಗಳು ಚಾಲ್ತಿಯಲ್ಲಿದ್ದ ಕಾಲ. ಮನೆಯ ವಿಡಿಯೋ ಮೇಲೆ ಒಂದು ಕ್ಯಾಸೆಟ್ ಇತ್ತು. ಎತ್ತಿ ನೋಡಿದರೆ, ʻಗುಪ್ತ್ʼ ಅಂತ ಬರೆದಿತ್ತು ಮತ್ತು ಅದು ಕೃತಿಚೌರ್ಯ ಮಾಡಿದ ಕ್ಯಾಸೆಟ್ ಅಂತ ಗೊತ್ತಾಯಿತು. ಆ ಸಿನೆಮಾ ಬಹಳ ಹಿಟ್ ಆಗಿದ್ದರಿಂದ ನೋಡೋಣ ಅಂತ ಕುಳಿತೆ. ಅಷ್ಟರಲ್ಲಿ ಸ್ನಾನದಿಂದ ಬಂದ ದೇವಿ ಪ್ರಸಾದ್, ʻವಿನಯಣ್ಣ… ತುಂಬಾ ಚೆನ್ನಾಗಿದೆ ಕಣೋ. ಕೊನೆಯವರೆಗೆ ಕಾಜೋಲ್ ಕೊಲೆ ಮಾಡೋದು ಅಂತ ಗೊತ್ತೇ ಆಗದ ಹಾಗೆ ತೆಗೆದಿದ್ದಾನೆ,ʼ ಎಂದೇ ಬಿಟ್ಟ.
ನಾನು ವೀಡಿಯೋ ಆರಿಸಿ ಬಾಲ್ಕನಿಗೆ ಸಿಗರೇಟ್ ಸೇದಲು ಹೋದೆ. ಎಷ್ಟೋ ವರ್ಷಗಳ ನಂತರ ಈ ಸಿನೆಮಾ ಟೀವಿಯಲ್ಲಿ ಬಂದಾಗ ನೋಡಿದೆ.
ಈ ಸಿನೆಮಾಗಳು ಸಣ್ಣ ಕಥೆಗಳಿದ್ದ ಹಾಗೆ. ಅದರ ಕ್ಲೈಮ್ಯಾಕ್ಸ್ ಗೊತ್ತಾದರೆ ಸಾಕು, ಓದುವ ಹುಮ್ಮಸ್ಸೇ ಹೊರಟು ಹೋಗುತ್ತದೆ. ಏಕೆಂದರೆ, ಸಣ್ಣ ಕಥೆಗಳ ಆತ್ಮವೇ ಈ ಕ್ಲೈಮ್ಯಾಕ್ಸ್. ಓ ಹೆನ್ರಿ, ಖುಷ್ವಂತ್ ಸಿಂಘ್, ಜೆಫ್ರಿ ಆರ್ಚರ್ ಮುಂತಾದವರ ಕ್ಲೈಮ್ಯಾಕ್ಸ್ ಕೊನೆಯ ಒಂದು ವಾಕ್ಯದಲ್ಲೇ ಅಡಕವಾಗಿರುತ್ತವೆ. ಹೆಚ್ಚಿನ ಲೇಖಕರ ಕಥೆಗಳಲ್ಲಿ, ಕಥೆ ಸಾಗುತ್ತಾ, ಇನ್ನುಳಿದವರ ಕಥೆಗಳಲ್ಲಿ ಕೊನೆಯ ಹಂತ ತಲುಪುವಾಗ ಕಥಾಹಂದರ ಅನಾವರಣಗೊಂಡಿರುತ್ತವೆ.
ಇತ್ತೀಚಿನ ಸಿನೆಮಾಗಳಲ್ಲಿ ಅವುಗಳ ಕಥೆಯಷ್ಟೇ ಸಿನೆಮೆಟೋಗ್ರಫಿ, ಸ್ಪೆಷಲ್ ಎಫೆಕ್ಟ್ಸ್, ಹಾಡುಗಳು ಮತ್ತು ಇನ್ನೂ ಕೆಲವು ತಾಂತ್ರಿಕ ಅಂಶಗಳು ಪ್ರೇಕ್ಷಕರನ್ನು ಸೆಳೆಯಬಹುದು. ಆದರೆ ಸಣ್ಣ ಕಥೆಗಳು ಹಾಗಲ್ಲ. ಹೇಳುವ ಶೈಲಿ ಮತ್ತು ಪದಗಳ ಜೋಡಣೆಗಳಲ್ಲೇ ಕಥೆಗಾರ ಆಟವಾಡಬೇಕು. ಅವುಗಳಲ್ಲಿ ಒಂದು ಏರುಪೇರಾದರೂ, ಓದುಗರನ್ನು ಸೆಳೆಯಲು ವಿಫಲವಾಗುತ್ತವೆ.
ಇಂತಹ ಸಣ್ಣ ಕಥೆಗಳನ್ನು ಓದುವ ಮುಂಚೆಯೇ ಕಥಾಹಂದರ ಅನಾವರಣಗೊಂಡರೆ, ಆ ಕಥೆಗಳನ್ನು ಓದುವ ಉತ್ಸಾಹ ಉಡುಗುತ್ತದೆ. ಇತ್ತೀಚೆಗೆ ಸಮಯಾಭಾವದಿಂದ ಅಂತ ಕಾಣುತ್ತೆ, ಒಂದರ ಹಿಂದೊಂದರಂತೆ ಐದು ಕಥಾ ಸಂಕಲನಗಳನ್ನು ಓದಿದೆ. ಎಲ್ಲವೂ ವಿಭಿನ್ನ ಅನುಭವ ಮತ್ತು ವಿಭಿನ್ನ ಚಿಂತನೆ ನೀಡಿತು.
ಮೊದಲನೆಯದಾಗಿ, ಅಬ್ದುಲ್ ರಶೀದ್ ಅವರ ʻಅಂತಾರಾಷ್ಟ್ರೀಯ ಕುಂಬಳಕಾಯಿ ಕಥೆಗಳುʼ ಪುಸ್ತಕವನ್ನು ತರಿಸಿ, ಇನ್ನೇನು ಓದಲು ಕೂರಬೇಕು ಎನ್ನುವಾಗ ಆ ಪುಸ್ತಕದ ಬಗ್ಗೆ ವಿಮರ್ಶೆಗಳು ಒಂದರ ಹಿಂದೊಂದರಂತೆ ಬರಲು ಆರಂಭಿಸಿದವು. ಒಂದೊಂದು ವಿಮರ್ಶೆಗಳಲ್ಲಿ ಕಥೆಗಳ ಒಂದೊಂದು ವಿಷಯ ಅನಾವರಣಗೊಳ್ಳಲು ಆರಂಭಿಸಿದವು. ನಾನು ಪುಸ್ತಕವನ್ನು ಬದಿಗಿಟ್ಟು, ಕಾವ್ಯ ಕಡಮೆ ಬರೆದ ʻಮಾಕೋನ ಏಕಾಂತʼ ಕೈಗೆತ್ತಿಕೊಂಡೆ. ಆದರೆ ನಾನು ಮಾಡಿದ ತಪ್ಪು ಎಂದರೆ, ಆ ಪುಸ್ತಕದ ಮುನ್ನುಡಿಯನ್ನು ಓದಿದ್ದು. ಹೆಚ್ಚೂ ಕಡಿಮೆ, ಎಲ್ಲಾ ಕಥೆಗಳ ಹಂದರವನ್ನೂ ಮುನ್ನುಡಿಯಲ್ಲಿ ಉಲ್ಲೇಖಿಸಲಾಗಿದೆ. ಹಾಗಾಗಿ, ಆ ಪುಸ್ತಕವನ್ನೂ ಕೂಡ ಸ್ವಲ್ಪ ದಿನಗಳ ಮಟ್ಟಿಗೆ ಬದಿಗಿಟ್ಟು, ಕೆಲವು ದಿನಗಳ ಮಟ್ಟಿಗೆ ಪುಸ್ತಕ ಓದುವುದಕ್ಕೆ ತಿಲಾಂಜಲಿ ಇಟ್ಟೆ. ಅಷ್ಟರಲ್ಲಿ ಕಿರಿಯ ಮಿತ್ರ ಅನಂತ ಕುಣಿಗಲ್ ಮತ್ತು ಮಡಿಕೇರಿಯ ಹಿರಿಯ ಮಿತ್ರರಾದ ಡಾ ಸೂರ್ಯಕುಮಾರ್ ತಮ್ಮ ಕಥಾ ಸಂಕಲನಗಳನ್ನು ನನಗೆ ತಲುಪಿಸಿದರು.
ಏನು ಮಾಡಬೇಕು ಎಂದು ಯೋಚಿಸುತ್ತಾ ಕಥಾ ಕೂಟ ವಾಟ್ಸಾಪ್ ಗುಂಪಿನ ಸದಸ್ಯರು ಬರೆದು ಹೊರ ತಂದಿರುವ ʻಒಲವು ತುಂಬುವುದಿಲ್ಲʼ ಕಥಾ ಸಂಕಲನವನ್ನು ಓದಲು ಆರಂಭಿಸಿದೆ. ಒಬ್ಬರೇ ಬರೆದ ಕಥಾ ಸಂಕಲನದಲ್ಲಿ ಕೆಲವೊಮ್ಮೆ ಒಂದು ಏಕತಾನವಿರುತ್ತದೆ. ಅದು ಪರಿಸರದ ಏಕತಾನವಿರಬಹುದು ಅಥವಾ ಕಥಾ ಹಂದರದಲ್ಲೇ ಅದು ಅಡಕವಾಗಬಹುದು. ಕೆಲವು ಪಾತ್ರಗಳು ಪ್ರತೀ ಕಥೆಯಲ್ಲೂ ಇಣುಕಿ ನೋಡಿದಂತೆ ಭಾಸವಾಗಲೂ ಬಹುದು. ಆದರೆ, ಮೂವತ್ತು ಲೇಖಕ, ಲೇಖಕಿಯರು ಬರೆದಿರುವ ಈ ಕಥಾ ಸಂಕಲನದಲ್ಲಿ ಯಾವುದೇ ಏಕತಾನ ಬರಲು ಸಾಧ್ಯವಿಲ್ಲ.
ಅತೀ ಕಿರಿಯ ಸದಸ್ಯರಾದ ನಂದ ಕುಮಾರ ಅಥವಾ ಪ್ರಮೋದ್ ಹೆಗಡೆಯಿಂದ ಹಿಡಿದು, ಮಾಗಿದ ಸಂಪಾದಕರಾದ ಗೋಪಾಲಕೃಷ್ಣ ಕುಂಟಿನಿ, ಜೋಗಿಯವರೆಗೆ ಎಲ್ಲರೂ ಒಂದೊಂದು ಕಥೆ ಬರೆದಿದ್ದಾರೆ. ಕುಂಟಿನಿಯವರು ತಮ್ಮ ಬರವಣಿಗೆಯಲ್ಲಿ ಲೌಕಿಕ ಮತ್ತು ಅಲೌಕಿಕವನ್ನು ಎದುರು-ಬದುರು ನಿಲ್ಲಿಸುವ ಪರಿ ಬಹಳ ಇಷ್ಟವಾಗುತ್ತದೆ. ಕೆಲವು ಕಥೆಗಳ ಹಂದರಗಳು ಕೆಲವು ಸಾಲಿನಲ್ಲೇ ಅನಾವರಣಗೊಂಡರೆ, ಹೆಚ್ಚಿನ ಕಥೆಗಳು ಬೆರಗು ಮೂಡಿಸುತ್ತವೆ. ಕೆಲವು ಕಥೆಗಳು ಮಾತ್ರ ಅದ್ಭುತ ಎನಿಸುತ್ತದೆ.
ಎಲ್ಲಾ ಕಥೆಗಳ ಹೆಸರು ಹೇಳಲು ಸಾಧ್ಯವಾಗದಿದ್ದರೂ, ನನಗೆ ಬಹಳ ಇಷ್ಟವಾದ ಕೆಲವು ಕಥೆಗಳೆಂದರೆ, ಅಹಲ್ಯೆ ಎಂಬ ಕರಗದ ಕಲ್ಲು (ಶುಭಶ್ರೀ ಭಟ್) ಅಜ್ಞಾತವಾಸ (ಶ್ವೇತಾ ಹೊಸಬಾಳೆ), ಮಂಜರಿ (ಡಾ ನಿಂ ಶ್ರೀಕಂಠಮೂರ್ತಿ), ವ್ಯಕ್ತ, ಅವ್ಯಕ್ತ (ಅನನ್ನಯ ತುಷೀರಾ). ಆದರೆ, ಕಾಡ ಮೂಲೆಯ ಬೆಳಕು (ಡಿ ಎನ್ ಮೋಹನ್ ಕುಮಾರ್) ಮತ್ತು ಬೀಳುವ ನಕ್ಷತ್ರಗಳು (ಸಂಜೋತಾ ಪುರೋಹಿತ್) ಕಥೆಗಳನ್ನು ಓದಿದ ನಂತರ, ಸ್ವಲ್ಪ ಹೊತ್ತು ಪುಸ್ತಕವನ್ನು ಮುಚ್ಚಿಟ್ಟು, ಹಾಗೆಯೇ ಕಿಟಕಿಂದ ಹೊರಗೆ ನೋಡಿದ್ದೆ.
ಸ್ವಲ್ಪ ಸಮಯ ಇದ್ದುದಿಂದ ಕಾವ್ಯಾ ಕಡಮೆ ಬರೆದ ಮಾಕೋನ ಏಕಾಂತ ಪುಸ್ತಕ ಕೈಗೆತ್ತಿಕೊಂಡೆ. ಕಥಾ ಹಂದರವನ್ನು ಮುನ್ನುಡಿಯಲ್ಲಿ ಓದಿದ ಬೇಸರವಿದ್ದರೂ, ಛಂದ ಪುಸ್ತಕ ಬಹುಮಾನ ಪಡೆದ ಕೃತಿ ಎಂಬ ಹೆಗ್ಗಳಿಕೆ ಇದ್ದ ಪುಸ್ತಕ ಅದು. ಎಂಟು ಕಥೆಗಳ ಒಂದು ಗುಚ್ಚ. ಓದಲು ಆರಂಭಿಸಿದ ತಕ್ಷಣ ಆವರಿಸಿಕೊಳ್ಳಲು ಆರಂಭಿಸಿತು. ನಾನು ಓದಿದ ಪುಸ್ತಕಗಳಲ್ಲಿ, ಅಮೇರಿಕಾದಲ್ಲಿ ಕುಳಿತು ಕನ್ನಡ ಸಾಹಿತ್ಯ ಕೃಷಿ ಮಾಡುತ್ತಿರುವ ಎರಡನೇ ಹುಡುಗಿಯ ಕಥಾ ಸಂಲನ ಇದು.
ಮೊದಲನೆಯದು, ಶಾಂತಲಾ ಭಂಡಿ ಬರೆದ ʻಚಂದಮಾಮ ಮಲಗಿದ್ದಾನೆʼ. ಭಾವುಕತೆಯ ಮಹಾಪೂರವೇ ಹರಿದಂತಿದ್ದ ಆ ಕಥೆಗಳನ್ನು ಓದಿದ ತಕ್ಷಣ, ಜೋಗಿಯವರಿಗೆ ಒಂದು ಮಾತು ಕೇಳಿದ್ದೆ: ʻಈ ಶಾಂತಲಾ ಭಂಡಿ ಜೀವನದಲ್ಲಿ ಬಹಳ ಕಷ್ಟ ಅನುಭವಿಸಿದ್ದಾರೆಯೇ?ʼ ಎಂದು. ಜೋಗಿ ನಕ್ಕುಬಿಟ್ಟಿದ್ದರು. ಒಲವು ತುಂಬುವುದಿಲ್ಲ ಕಥಾ ಸಂಕಲನದಲ್ಲೂ ಶಾಂತಲಾ ಅವರ ʻರಾಮಾಕೃಷ್ಣ ಇಸ್ ನಾಟ್ ಅವೇಲಬಲ್ ಇನ್ ದ ಮಾರ್ಕೆಟ್ʼ ಎನ್ನುವ ಸುಂದರವಾದ ಕಥೆ ಬರೆದಿದ್ದಾರೆ.
ಆದರೆ ಕಾವ್ಯಾ ಬರಹ ಇನ್ನೊಂದು ಛಾಪು ಇದೆ. ಭಾವನೆಗಳ ತಾಕಲಾಟಗಳ ಮಧ್ಯೆ, ಮುಂದೇನು? ಎನ್ನುವ ಪ್ರಶ್ನೆ ಮತ್ತು ಬದುಕುವ ಛಲ ಎದ್ದು ಕಾಣುತ್ತದೆ. ಸಂದಿಗ್ಧ ಪರಿಸ್ಥಿತಿಯಲ್ಲಿ ಕಾಲದ ಉತ್ತರ ನವಿರಾದ ಭಾವನೆಗಳನ್ನು ಮೂಡಿಸುತ್ತದೆ. ಶಾಂತಲಾ ಅವರ ಬರವಣಿಗೆ ಸ್ವಲ್ಪ ಓ ಹೆನ್ರಿಯ ಬರವಣಿಗೆ ನೆನಪಿಸಿದರೆ, ಕಾವ್ಯ ಅವರ ಬರವಣಿಗೆ ಜೆಫ್ರಿ ಆರ್ಚರ್ ನೆನಪಿಸುತ್ತದೆ. ಆದರೆ, ಇಬ್ಬರೂ ಆ ಮಹಾನ್ ಸಣ್ಣ ಕಥೆಗಾರರ ನೆರಳಿನ ಹಂಗಿನಲ್ಲಿ ಬರೆದಿಲ್ಲ ಎನ್ನುವುದು ನಿಚ್ಚಳವಾಗಿ ಕಾಣಿಸುತ್ತದೆ.
ಅಬ್ದುಲ್ ರಶೀದ್ ಅವರನ್ನು ಒಮ್ಮೆ ಯಾವುದೋ ಸಮಾರಂಭದಲ್ಲಿ ಭೇಟಿಯಾಗಿದ್ದೆ. ಮಾತನಾಡಿಸಿದಾಗ ಸ್ವಲ್ಪ ಅಂತರ ಕಾಯ್ದುಕೊಳ್ಳುವ ವ್ಯಕ್ತಿ ಎಂದೆನಿಸಿತು. ಸುಮ್ಮನಾದೆ. ಅವರ ʻಹೊತ್ತು ಗೊತ್ತಿಲ್ಲದ ಕಥೆಗಳುʼ ಪುಸ್ತಕ ಓದಿದಾಗ ನನ್ನ ಅಭಿಪ್ರಾಯ ತಪ್ಪಿರಬಹುದು ಎಂದೆನಿಸಿತು. ಹಾಗಾಗಿ, ಫೇಸ್ಬುಕ್ಕಿನಲ್ಲಿ ಅವರ ಪೋಸ್ಟ್ ಗಳನ್ನು ಓದುತ್ತಾ ಹೋದೆ. ನನ್ನ ತಿಳುವಳಿಕೆ ತಪ್ಪು ಎನ್ನುವುದು ಬಹುತೇಕ ಖಾತರಿಯಾಯಿತು. ಅವರ ನವಿರಾದ ಹಾಸ್ಯ ಪ್ರಜ್ಞೆ ಬಹಳ ಇಷ್ಟವಾಗಿತ್ತು.
ಆದರೆ, ಅವರ ಇತ್ತೀಚಿನ ಕಥಾ ಸಂಕಲನ ʻಅಂತಾರಾಷ್ಟ್ರೀಯ ಕುಂಬಳಕಾಯಿʼ ಬರೆಯಲು ಹದಿನೈದು ದಿನ ಏಕೆ ತೆಗೆದುಕೊಂಡರು? ಮತ್ತು ಅದನ್ನು ಏಕೆ ಹೇಳಿಕೊಂಡರು ಎನ್ನುವುದು ಅರ್ಥವಾಗಲಿಲ್ಲ. ಇನ್ನೂ ಸ್ವಲ್ಪ ಸಮಯ ತೆಗೆದುಕೊಂಡು ಬರೆದಿದ್ದರೆ ಹೆಚ್ಚಿನ ಕಥೆಗಳು ಬರುತ್ತಿದ್ದವೇ ಹೊರತು, ಬರೆದಿರುವ ಕಥೆಗಳಲ್ಲಿ ಹೆಚ್ಚೇನೂ ಬದಲಾವಣೆ ಕಾಣುತ್ತಿರಲಿಲ್ಲ ಎಂದೆನಿಸಿತು.
ಬಹಳವಾಗಿ ಕಾಡಿದ್ದು ಕರ್ತ್ಯಾಯಿನಿ. ಆದರೆ, ಕಾಮ್ರೇಡ್ ಆಲಿ ರೈಟರು, ಕವಿ ಸಾಮ್ರಾಟರು, ಲಾಮಾ ಕಥೆಯ ಹೆಸರಿಲ್ಲದ ಮಾಜಿ ಸೈನಿಕನ ಹೆಂಡತಿ ಮತ್ತು ಅಮವಾಸ್ಯೆಯ ಇರುಳಲ್ಲಿ ಮಿನುಗುವ ಅಸಂಖ್ಯ ನಕ್ಷತ್ರಗಳು ಬಿಟ್ಟೂ ಬಿಡದಂತೆ ಕಡುತ್ತವೆ.
ಇವೆಲ್ಲಾ ಒಂದು ಗುಂಪಿಗೆ ಸೇರಿದರೆ, ಅನಂತ್ ಕುಣಿಗಲ್ ಬರೆದ ʻಬದುಕು ಜಟಕಾಬಂಡಿʼ ಮತ್ತು ಡಾ ಸೂರ್ಯಕುಮಾರ್ ಅವರ ʻವೈದ್ಯಲೋಕದ ಕಥೆಗಳುʼ ಬೇರೆಯ ಭಾವನೆ ನೀಡುತ್ತಾ ಹೋಯಿತು. ಡಾ ಸೂರ್ಯಕುಮಾರ್ ಅವರ ಮೊದಲ ಪುಸ್ತಕ ʻವೈದ್ಯಲೋಕದ ವಿಸ್ಮಯʼ ಇಷ್ಟಪಟ್ಟಿದ್ದೆ. ಎರಡನೇ ಪುಸ್ತಕ ಓದುತ್ತಾ ಹೋದಂತೆ, ಲೇಖಕರು ಎಲ್ಲೋ ಸ್ವಲ್ಪ ಗೊಂದಲದಲ್ಲಿ ಸಿಕ್ಕಿಕೊಂಡಂತೆ ಕಾಣಿಸಿತು.
ಕಾರಣವಿಷ್ಟೆ…. ಈ ಪುಸ್ತಕದಲ್ಲಿ ಮೂರು ಅಂಗಗಳಿವೆ. ಮೊದಲನೆಯದು, ಇವರ ವೈದ್ಯಕೀಯ ಜೀವನದ ಕುತೂಹಲಕಾರಿ ಅನುಭವಗಳು. ಎರಡನೆಯದು, ತಲೆ ನೋವು ಮತ್ತು ಮಿತ್ರನಿಗೆ ಹೊಡೆದ ಶಾಕ್ ಎಂಬ ವೈದ್ಯಕೀಯ ವಿಜ್ಞಾನಕ್ಕೆ ಸಂಬಂಧ ಪಟ್ಟ ಲೇಖನಗಳೂ ಈ ಪುಸ್ತಕದೊಳಗೆ ತೂರಿಕೊಂಡಿವೆ. ಮೂರನೆಯದು, ಹೇಳಲಾಗದ ಕೆಲವು ಘಟನೆಗಳು ಸಣ್ಣ ಕಥೆಗಳ ರೂಪದಲ್ಲಿ ಸೇರಿಕೊಂಡಿವೆ. ಇವುಗಳ ವಿಂಗಡಣೆ ಸರಿಯಾಗಿ ಪುಸ್ತಕದಲ್ಲಿ ಆಗಿಲ್ಲವಾದ್ದರಿಂದ, ಓದುವ ಲಯ ತಪ್ಪಿ, ಹೊಸ ಓದುಗರನ್ನು ದೂರ ಸರಿಸುವ ಅಪಾಯವಿದೆ.
ʻದಾರಿ ಯಾವುದಯ್ಯ ಜೀವನದಲ್ಲಿʼ, ʻಕಾಣದಂತೆ ಮಾಯವಾದನುʼ, ʻಹೇಗಾದರೂ ಬದುಕಿರುತ್ತೇನೆʼ, ʻಮೂಕ ಮೌನʼ, ʻಟ್ರಿಣ್ ಟ್ರಿಣ್ ಟ್ರಿಣ್,ʼ ʻಹತಭಾಗ್ಯನ ಆತ್ಮ ಕಥೆ..ʼ ಮತ್ತು ʻಗೇಟಿಗೆ ಬೀಗʼ ಎಂಬ ಆರು ಕಥೆಗಳ ಜೊತೆಗೆ ಇನ್ನಷ್ಟು ಸಮಯ ಕಳೆದು, ಅದನ್ನೇ ಒಂದು ಕಥಾ ಸಂಕಲನ ಮಾಡಿದ್ದರೆ, ಅದೊಂದು ಅದ್ಭುತವಾದ ಕಥಾ ಸಂಕಲನವಾಗುತ್ತಿತ್ತು ಎಂದು ಅನಿಸಿತು.
ಕೊನೆಯದಾಗಿ ಅನಂತ ಕುಣಿಗಲ್ ಬರೆದ ʻಬದುಕು ಜಟಕಾಬಂಡಿʼ ಓದುತ್ತಾ ಹೋದಂತೆ, ಯಾವುದೋ ಹೊಸ ಜಗತ್ತಿಗೆ ಪ್ರವೇಶಿಸಿದ ಅನುಭವವಾಯಿತು. ʻಒಂದು ಹೋರಾಟದ ಕತೆʼ, ʻಟ್ಯಾಗ್ʼ, ʻದೇಹ ದೇಗುಲʼ, ʻವಿಸರ್ಜನೆʼ, ʻಕೆಂಪು ಬಸ್ಸಿನ ನೀಲಿ ಸೀಟುʼ, ʻಬೆಂಗಳೂರಿಗೆ ಬಂದ ಬೋರೇಗೌಡʼ ಮುಂತಾದ ಸಣ್ಕತೆಗಳೂ ಮತ್ತು ʻನಾಳೆ ಬಾʼ, ʻಪರ್ಫೆಕ್ಷನ್ʼ, ʻಡ್ರೈಫ್ರೂಟ್ಸ್ ದೆವ್ವʼ ಎಂಬ ಪುಟ್ಕತೆಗಳೂ ಮುದ್ದಾಗಿವೆ ಎನ್ನಿಸಿತು.
ಆದರೂ ಈ ಕಥೆಗಳ ನಿರೂಪಣೆಯಲ್ಲಿ ಏನೋ ಸ್ವಲ್ಪ ಕಡಿಮೆಯಾಗಿದೆ ಎನ್ನಿಸಿತ್ತು. ಈ ಕಿರಿಯ ಗೆಳೆಯ ನಿರೂಪಣೆಗಾಗಿ ಇನ್ನೂ ಸ್ವಲ್ಪ ಹೊತ್ತು ಈ ಕಥೆಗಳ ಜೊತೆಯಲ್ಲಿ ಕಳೆಯಬೇಕಿತ್ತೇ? ಎಂದೆನಿಸಿದ್ದೂ ಸುಳ್ಳಲ್ಲ.
ಪುಸ್ತಕ ಓದಿದ ನಂತರ ಕುಸುಮ ಆಯರಳ್ಳಿ ಬರೆದ ಮುನ್ನುಡಿಯನ್ನು ಓದಿದೆ. ಅದರಲ್ಲಿ ನನ್ನ ಪ್ರಶ್ನೆಗೆ ಉತ್ತರ ತಣ್ಣಗೆ ಕುಳಿತಿತ್ತು. ʻಎಲ್ಲಾ ಸಾಮಗ್ರಿಗಳೂ ಇದ್ದ ಮಾತ್ರಕ್ಕೇ ಅಡುಗೆಯಾಗಬಹುದೇ? ಒಂದಷ್ಟು ಕಾಯಬೇಕು ಬೇಯಲು. ಬೇಯುವುದೂ ಒಂದು ಹದ ಕಡಿಮೆಯಾಗಲೂಬಾರದು.. ಹೆಚ್ಚಾಗಲೂಬಾರದು. ಕತೆಗಾರನಿಗೆ ನೀರೊಳಗಿನ ಸಕ್ಕರೆ ಕುದ್ದು ಒಂದೆಳೆ ಪಾಕವಾಯ್ತೋ ಎಂದು ಪರೀಕ್ಷಿಸಿಕೊಳ್ಳುವುದು ಗೊತ್ತಿರಬೇಕುʼ, ಎಂದು ಕುಸುಮ ಬರೆದಿದ್ದಾಳೆ.
ಅದನ್ನು ನಾನೂ ಒಪ್ಪಿದೆ. ಆದರೆ, ಅನಂತ ನಮ್ಮ ಮೈಸೂರು ಪಾಕು ಹುಡುಗ ಪ್ರಮೋದ ಹೆಗಡೆ (ಪದ ಚಿನ್ಹ) ನಂತೆ ಬಹಳ ಕಿರಿಯವನು. ಮುಂದೆ ಬರೆಯುತ್ತಾ ಹೋದಂತೆ, ಮಾಗಿ ಅದ್ಭುತವಾದ ಬರಹಗಾರ ಆಗುವುದರಲ್ಲಿ ಯಾವುದೇ ಸಂಶಯವಿಲ್ಲ. ಹೊಸ ಮತ್ತು ಹಳೇ ತಲೆಗಳ ಈ ಕಥಾ ಪ್ರಪಂಚ ನನ್ನ ದೈನಂದಿನ ಜೀವನದ ಒತ್ತಡವನ್ನು ಕಡಿಮೆ ಮಾಡಿದ್ದು ಮಾತ್ರ ಸುಳ್ಳಲ್ಲ.
- ಮಾಕೋನಹಳ್ಳಿ ವಿನಯ್ ಮಾಧವ