ದೇವರಾಜ ಅರಸರು ಕಾರಿನಿಂದು ಇಳಿದು ಹಾಸ್ಟೇಲನ್ನು ಪ್ರವೇಶಿಸುತ್ತಿರುವಂತೆಯೇ “ದೇವರಾಜ ಅರಸು ಅವರಿಗೆ ಜಯವಾಗಲಿ” ಎಂದು ಘೋಷಣೆ ಕೂಗಿದೆವು. ನಮ್ಮ ಹಾಸ್ಟೇಲಿನ ಸಿಪಾಯಿ ಮಹದೇವಪ್ಪಾ ಒಂದು ಖಾದಿಯ ಲಡಿಯನ್ನು ತಂದು ನನ್ನ ಕೈಗೆ ಕೊಟ್ಟ.ಖಾದಿಯ ಲಡಿಯನ್ನು ಕೈಯಲ್ಲಿ ಹಿಡಿದುಕೊಂಡು ನೋಡುತ್ತೇನೆ, ಅದರ ಅಗಲ ತುಂಬಾ ಕಿರಿದಾಗಿತ್ತು. ಮುತ್ಸದ್ದಿ ದೇವರಾಜ ಅರಸು ಅವರ ತಲೆಯತ್ತ ಒಮ್ಮೆ ನೋಡಿದೆ. ಅವರ ತಲೆ ತುಂಬಾ ದೊಡ್ಡದಿತ್ತು. ಮುಂದೇನಾಯಿತು ತಪ್ಪದೆ ಓದಿ ನಿವೃತ್ತ ಗಣಿತ ಪ್ರಾಧ್ಯಾಪಕರಾದ ಕೊರಗಲ್ಲ ವಿರೂಪಾಕ್ಷಪ್ಪ ಅವರ “ಕೊಪ್ಪಳ-ಹಾವೇರಿಯ ನೆನಪಿನಂಗಳದಿಂದ” ಅಂಕಣ.
ನಾನು ಪದವಿಯಲ್ಲಿ ಓದುತ್ತಿದ್ದಾಗಿನ ಒಂದು ಘಟನೆಯಿದು. ಗದುಗಿನ ಜೆ.ಟಿ.ಕಾಲೇಜಿನಲ್ಲಿ ನಾನು ಓದುತ್ತಿದ್ದೆ. ಗದುಗಿನ ರೆಡ್ಡಿ ಹಾಸ್ಟೇಲಿನಲ್ಲಿ ಇರುತ್ತಿದ್ದೆವು. ಸ್ಥಳೀಯ ಸಹಕಾರಿ ಧುರಿಣರೂ, ಹೋರಾಟಗಾರರೂ ಮುತ್ಸದ್ದಿ ರಾಜಕಾರಣಿಯೂ ಆಗಿದ್ದ ಎಚ್.ಪಾಟೀಲರು ಆ ಹಾಸ್ಟೇಲದ ಅಧ್ಯಕ್ಷರಾಗಿದ್ದರು. ಆಗ ಕೆ.ಎಚ್.ಪಾಟೀಲರು ರಾಜಕೀಯವಾಗಿ ಅಷ್ಟು ಬೆಳದಿರಲಿಲ್ಲ. ೧೯೬೨ ರಲ್ಲಿ ನಡೆದ ವಿಧಾನ ಸಭಾ ಚುನಾವಣೆಗೆ ಸ್ವತಂತ್ರ ಅಭ್ಯರ್ಥಿಯಾಗಿ ನಿಂತು ಸೋಲು ಕಂಡಿದ್ದರು. ಆಗ ನಾವು ಪದವಿಯ ಕೊನೆಯ ವರ್ಷದಲ್ಲಿ ಓದುತ್ತಿದ್ದೆವು. ನಮ್ಮ ಹಾಸ್ಟೇಲಿನ ವಾರ್ಷಿಕೊತ್ಸವವನ್ನು ಪ್ರತಿ ವರ್ಷ ಅದ್ದೂರಿಯಿಂದ ಮಾಡುತ್ತಿದ್ದೆವು. ಆ ವರ್ಷದ ವಾರ್ಷಿಕೋತ್ಸವಕ್ಕೆ ಆಗಿನ ಸಾರಿಗೆ ಮಂತ್ರಿಗಳಾಗಿದ್ದ ದೇವರಾಜ ಅರಸು ಅವರನ್ನು ಕರೆಯಬೇಕೆಂದು ನಿರ್ಧರಿಸಿದ್ದೆವು. ಆಗ ದೇವರಾಜ ಅರಸರು ಒಬ್ಬ ಸಾಮಾನ್ಯ ಮಂತ್ರಿಗಳಾಗಿದ್ದರು. ಅಂದರೆ ರಾಜಕೀಯದಲ್ಲಿ ಅವರಿನ್ನೂ ಮೆಲ್ಲಡಿ ಇಡುತ್ತಿದ್ದ ರಾಜಕಾರಣಿ. ಆದರೆ ಆ ಮಹಾ ಮುತ್ಸದ್ದಿ ತದನಂತರ ಈ ನಾಡು ಕಂಡ ಶ್ರೇಷ್ಠ ಮುಖ್ಯ ಮಂತ್ರಿಗಳಲ್ಲೊಬ್ಬರು ಎಂದು ಖ್ಯಾತಿ ಪಡೆದದ್ದು ಇತಿಹಾಸ. ಕರ್ನಾಟಕದ ಮಟ್ಟಿಗೆ ಅಧಃಪತನಗೊಂಡಿದ್ದ ಇಂದಿರಾ ಕಾಂಗ್ರೆಸ್ಸನ್ನು ತಳಪಾಯದಿಂದ ಕಟ್ಟಿ ಭದ್ರಗೊಳಿಸಿದ ಕೀರ್ತಿ ದೇವರಾಜ ಅರಸರಿಗೆ ಸಲ್ಲಿದರೂ, ಇಂದಿರಾಗಾಂಧಿಯ ಸರ್ವಾಧಿಕಾರಿ ಧೋರಣೆ ಅವರನ್ನು ಅನಾಮತ್ತಾಗಿ ನೆಲಕ್ಕಪ್ಪಳಿಸಿ ಘಾಸಿ ಗೊಳಿಸಿಬಿಟ್ಟಿತು. ದೇವರಾಜ ಅರಸರು ಇನ್ನೂ ಒಂದು ಹತ್ತು ವರ್ಷ ಮುಖ್ಯ ಮಂತ್ರಿಯಾಗಿ ಮುಂದುವರಿದಿದ್ದರೆ, ಕೃಷಿ ಕಾರ್ಮಿಕರು ಭೂಮಿಯ ಒಡೆಯರಾಗುತ್ತಿದ್ದರು. ತುಳಿಯಲ್ಪಟ್ಟ ಸಮುದಾಯಕ್ಕೆ ಸಾಮಾಜಿಕ ನ್ಯಾಯ ಸಿಕ್ಕುತ್ತಿತ್ತು. ದಲಿತರು ಸವರ್ಣೀಯರ ಸಾಲಿನಲ್ಲಿ ಬಂದು ನಿಲ್ಲುತ್ತಿದ್ದರು. ಈಗಲೂ ಮಲ ಹೊರುವ ಕಾಯಕ ಮಾಡುತ್ತಿರುವ ಭಂಗಿಗಳಿಗೆ ಆಗಲೇ ಮುಕ್ತಿ ದೊರೆಯುತ್ತಿತ್ತು.ಅಂಥ ಶ್ರೇಷ್ಠ ರಾಜಕಾರಣಿ ದೇವರಾಜ ಅರಸರು ಕೆ.ಎಚ್.ಪಾಟೀಲರಿಗೆ ಅತ್ಯಂತ ಆತ್ಮೀಯರಾಗಿದ್ದರು. ಉತ್ತರ ಕರ್ನಾಟಕದ ಯಾವುದೇ ಊರಿಗೆ ಬಂದರೂ ಅವೆರು ಗದುಗಿಗೆ ಬಂದು ನಮ್ಮ ಮುಖಂಡರಾಗಿದ್ದ ಕೆ.ಎಚ್.ಪಾಟೀಲರನ್ನು ಮಾತಾಡಿಸಿಕೊಂಡು ಹೋಗುತ್ತಿದ್ದರು.
ಫೋಟೋ ಕೃಪೆ : google
ನಮ್ಮ ವಾರ್ಷಿಕೋತ್ಸವದ ದಿವಸ ಬೆಳಿಗ್ಗೆ ನಮ್ಮ ಹಾಸ್ಟೇಲಿನಲ್ಲಿಯೆ ಒಂದು ಉಪಹಾರಕೂಟ ಇದ್ದುದರಿಂದ ಅಂದು ದೇವರಾಜ ಅರಸು ಅವರು ಬೆಳಿಗ್ಗೆ ಹತ್ತು ಗಂಟೆಗೆ ನಮ್ಮ ಹಾಸ್ಟೇಲಿಗೆ ಬರುವವರಿದ್ದರು. ಕೆ.ಎಚ್ ಪಾಟೀಲರು ಖಾದಿ ಪ್ರೀಯರಾಗಿದ್ದುದರಿಂದ ಹಾಸ್ಟೇಲಿಗೆ ಯಾರು ಬಂದರೂ ಅವರಿಗೆ ಹೂವಿನ ಮಾಲೆ ಹಾಕದೆ ಖಾದಿ ನೂಲಿನ ಲಡಿಯನ್ನು ಮಾಲೆಯ ರೂಪದಲ್ಲಿ ಹಾಕುವುದು ಸಂಪ್ರದಾಯವಾಗಿತ್ತು. ಅಂದು ಸಹ ಅವರು ಬಂದ ಕೂಡಲೆ ಅವರ ಕೊರಳಿಗೆ ಒಂದು ಖಾದಿ ಲಡಿಯ ಮಾಲೆಯನ್ನು ಹಾಕಿ ಬರಮಾಡಿಕೊಳ್ಳುವುದೆಂದು ನಿರ್ಧರಿಸಲಾಗಿತ್ತು. ಕೆ.ಎಚ್.ಪಾಟೀಲರು ಹಿಂದಿನ ದಿವಸವೇ ನಮ್ಮನ್ನೆಲ್ಲಾ ಕರೆದು ಯರ‍್ಯಾರು ಏನೇನು ಕೆಲಸ ಮಾಡಬೇಕೆಂದು ಒಪ್ಪಿಸಿ ಕೊಟ್ಟಿದ್ದರು. ಹಾಗೆ ಖಾದಿ ಲಡಿಯನ್ನು ಅರಸು ಅವರ ಕೊರಳಿಗೆ ಹಾಕುವ ಜವಾಬುದಾರಿಯನ್ನು ಹಾಸ್ಟೇಲಿನ ಕಾರ್ಯದರ್ಶಿಯಾಗಿದ್ದ ನನಗೆ ಒಪ್ಪಿಸಿದ್ದರು.
ಬೆಳಿಗ್ಗೆ ಹತ್ತು ಗಂಟೆಯ ಸುಮಾರಿಗೆ ನಾವು ವಿದ್ಯಾರ್ಥಿಗಳೆಲ್ಲಾ ವೇದಿಕೆಯನ್ನು ಸಿಂಗರಿಸುವ ಕಾರ್ಯದಲ್ಲಿ ಮಗ್ನರಾಗಿರುವಂತೆಯೇ ಅತಿಥಿಗಳು ಬಂದರೆಂದು ತಿಳಿದು ಬಂತು. ನಾವು ಹುಡುಗರೆಲ್ಲಾ ಹಾಸ್ಟೇಲಿನ ಬಾಗಿಲಿಗೆ ಹೋಗಿ ನಿಂತುಕೊಂಡೆವು . ಅವರು ಕಾರಿನಿಂದು ಇಳಿದು ಹಾಸ್ಟೇಲನ್ನು ಪ್ರವೇಶಿಸುತ್ತಿರುವಂತೆಯೇ “ದೇವರಾಜ ಅರಸು ಅವರಿಗೆ ಜಯವಾಗಲಿ” ಎಂದು ಘೋಷಣೆ ಕೂಗಿದೆವು. ಅಷ್ಟರಲ್ಲಿ ನಮ್ಮ ಹಾಸ್ಟೇಲಿನ ಸಿಪಾಯಿ ಮಹದೇವಪ್ಪಾ ಒಂದು ಖಾದಿಯ ಲಡಿಯನ್ನು ತಂದು ನನ್ನ ಕೈಗೆ ಕೊಟ್ಟ. ಖಾದಿಯ ಲಡಿಯನ್ನು ಕೈಯಲ್ಲಿ ಹಿಡಿದುಕೊಂಡು ನೋಡುತ್ತೇನೆ, ಅದರ ಅಗಲ ತುಂಬಾ ಕಿರಿದಾಗಿತ್ತು. ಮುತ್ಸದ್ದಿ ದೇವರಾಜ ಅರಸು ಅವರ ತಲೆಯತ್ತ ಒಮ್ಮೆ ನೋಡಿದೆ. ಅವರ ತಲೆ ತುಂಬಾ ದೊಡ್ಡದಿತ್ತು. ಕೈಯಲ್ಲಿ ಲಡಿಯನ್ನು ಹಿಡಿದು ಒಮ್ಮೆ ದೇವರಾಜ ಅರಸು ಅವರನ್ನು ಮತ್ತೊಮ್ಮೆ ನಮ್ಮ ನಾಯಕರಾಗಿದ್ದ ಕಿಷ್ಟಗೌಡ (ಕೆ.ಎಚ್.ಪಾಟೀಲ)ರನ್ನು ನೋಡಿದೆ. ನನಗೆ ಪೇಚಿಗಿಟ್ಟುಕೊಂಡಿತು.
“ಹೂ ಹಾಕು’’ ಎನ್ನುವಂತೆ ಕೆ.ಎಚ್.ಪಾಟೀಲರು ಸನ್ನೆ ಮಾಡಿ ಹೇಳಿದರು. ಅರಸು ಅವರ ತಲೆಯನ್ನೂ ಕೈಯಲ್ಲಿದ್ದ ಖಾದಿ ಲಡಿಯನ್ನೂ ಮತ್ತೆ ಮತ್ತೆ ನೋಡಿ ಮಾಲೇ ಹಾಕಲಿಕ್ಕೆ ಹಿಂಜರಿಕೆ ತೋರುತ್ತಿರುವುದನ್ನು ನೋಡಿದ ಕ್ರಿಷ್ಟಗೌಡರು ನನ್ನ ಬೆನ್ನಿಗೆ ತಮ್ಮ ಕೈಯಿಂದ ತಿವಿದು ‘ಏ ಹಾಕು ಹಾಕೋ’ ಎಂದು ಪಿಸುಗುಟ್ಟಿದರು. ದೇವರ ಮೇಲೆ ಭಾರ ಹಾಕಿ ಖಾದಿ ಲಡಿಯನ್ನು ಅರಸು ಅವರ ಕೊರಳಿಗೆ ಹಾಕಿದೆ. ನಾನು ಲೆಕ್ಕ ಹಾಕಿದಂತೆ ಆ ಲಡಿ ಅವರ ಕೊರಳಿಗೆ ಹೋಗಲಿಕ್ಕೆ ಸುತರಾಂ ಒಪ್ಪಲಿಲ್ಲ. ತಲೆ ಎಷ್ಟಿತ್ತೊ ಕಟಾನ್ ಕಟಿಯಾಗಿ ಲಡಿಯೂ ಅಷ್ಟೇ ಇದ್ದುದರಿಂದ ಅದು ಅವರ ಕೊರಳಲ್ಲಿಯೇನೋ ಹೋಯಿತು ಆದರೆ ಕೊರಳಲ್ಲಿ ಹೋಗುತ್ತಿರುವಂತೆಯೇ ಅವರ ತಲೆಯ ಮೇಲಿದ್ದ ಗಾಂಧಿ ಟೊಪ್ಪಿಗೆಯನ್ನು ನೆಲಕ್ಕುರುಳಿಸಿ ಬಿಟ್ಟಿತು.ಅರಸು ಅವರ ಹಿಂದೆ ಇದ್ದ ಬಿಂಕದಕಟ್ಟಿಯ ಮೂಲಿಮನಿ ಮಾರ್ತಾಂಡಪ್ಪನವರು ಟೊಪ್ಪಿಗೆಯನ್ನು ಎತ್ತಿಕೊಂಡು ಮತ್ತೆ ಅರಸು ಅವರ ತಲೆಯ ಮೇಲೆ ಅದನ್ನು ಪ್ರತಿಷ್ಠಾಪಿಸುವ ಕಾರ್ಯ ಮಾಡಿದರು. ಅಷ್ಟರಲ್ಲಿ ಕಿಷ್ಟಗೌಡರು(ಕೆ.ಎಚ್.ಪಾಟೀಲರು) ಕೆಂಡ ಮಂಡಲವಾಗಿ ನನ್ನನ್ನು ದರ ದರದ ಎಳೆದುಕೊಂಡು ಪಕ್ಕಕ್ಕೆ ಸರಿದರು. ನಾನು ಪ್ಯಾ ಪ್ಯಾ ಎನ್ನುತ್ತಾ ಹಿಂದಕ್ಕೆ ಸರಿಯುತ್ತಾ “ಅಲ್ರಿ ಅವರ ತಲಿ ಭಾಳಾ ದೊಡ್ಡದಿತ್ತರಿ ಅದಕ್ಕ ಅದು ….’’ ಎಂದು ಹೇಳುತ್ತಿರುವಂತೆಯೆ “ಮಂಗ್ಯಾ ಹಳೆ ಮಂಗ್ಯಾ ಅದನ್ನು ಬಿಚ್ಚಿದರ ಎಷ್ಟ ಬೇಕು, ಅಷ್ಟು ದೊಡ್ಡದಾಗತ್ತ ಅನ್ನಾ ಜ್ಞಾನಯಿಲ್ಲಂದ್ರ ನಿನಗೇನ ಅನ್ನಬೇಕು’’ ಎಂದು ಕಪಾಳಕ್ಕೆ ಬಿಗಿಯಲಿಕ್ಕೆ ಕೈಯೆತ್ತುತ್ತಿದ್ದಂತಯೇ ಮೂಲಿಮನಿ ಮಾರ್ತಾಂಡಪ್ಪನವರು ಬಂದು ನನ್ನನ್ನು ಬಚಾವ ಮಾಡಿ ಕೆ.ಎಚ್.ಪಾಟೀಲರ ಕೈ ಹಿಡಿದು ಮುಂದಕ್ಕೆೆ ಕರೆದುಕೊಂಡು ಹೋದರು. ಆಗ ದೇವರಾಜ ಅರಸು ಅವರು ಹಿಂದುರಿಗಿ ನಿಂತು ನನ್ನನ್ನು ಕರೆದರು. ನಾನು ಅವರ ಹತ್ತಿರ ಹೋದ ಕೂಡಲೇ ನನ್ನ ಹೆಗಲ ಮೇಲೆ ಕೈ ಹಾಕಿ “ಇಲ್ಲಿ ನೋಡು ಇದನ್ನು ನನ್ನ ಕೊರಳಿಗೆ ಹಾಕಿದೆಲ್ಲಾ; ಅದನ್ನು ತೆಗೆಯುವ ಜವಾಬ್ದಾರಿಯೂ ನಿನ್ನದೆ” ಎಂದು ಹೇಳಿ ಆ ಖಾದಿ ಲಡಿಯನ್ನು ತಮ್ಮ ಕೊರಳಿನಿಂದ ತೆಗೆದು,ಅದು ಹೇಗೆ ಅಗಲವಾಗುತ್ತದೆಯೆಂಬುದನ್ನು ಬಿಚ್ಚಿ ತೋರಿಸಿನನ್ನ ಕೊರಳಲ್ಲಿ ಹಾಕಿದಾಗ ಹುಡುಗರೆಲ್ಲ ಚಪ್ಪಾಳೆ ಹೊಡೆದರು. ಸಿಟ್ಟಿನಿಂದ ಬುಸುಗುಡುತ್ತಿದ್ದ ಕೆ.ಎಚ್.ಪಾಟೀರನ್ನು ಸೇರಿ ಎಲ್ಲರೂ ನಗಲಾರಂಭಿಸಿದರು.
“ಕೊಪ್ಪಳ-ಹಾವೇರಿಯ ನೆನಪಿನಂಗಳದಿಂದ” ಅಂಕಣದ ಹಿಂದಿನ ಸಂಚಿಕೆಗಳು :
- ವಾಲಿಕಾರ ಮಲ್ಲೇಶಪ್ಪನ ಪಲ್ಲಕ್ಕಿ ಸೇವೆ – (ಭಾಗ೧)
- ಹಾವೇರಿಯ ನಕ್ಷತ್ರ ಚಂಪಾ – (ಭಾಗ೨)
- ಎಂ.ಎ. ಡಿಗ್ರಿಯ ಕಿಮ್ಮತ್ತು ಬರಿ ಒಂದು
- ಗುಡಾರ – (ಭಾಗ ೩)ಪ್ರಾಮಾಣಿಕ ಹುಚ್ಚ – (ಭಾಗ ೪)
- ಹಳ್ಳಿಯ ನಾಟಕದ ಸೂಳೆಯ ಪಾತ್ರ – (ಭಾಗ ೫)
- ಕೊರಗಲ್ಲ ವಿರೂಪಾಕ್ಷಪ್ಪ, ಹಾವೇರಿ