ದೇಶದ ಬೆನ್ನೆಲುಬಾಗಿರುವ ಅನ್ನದಾತ ರೈತರಿಗೆ ರಾಷ್ಟ್ರೀಯ ರೈತ ದಿನಾಚರಣೆಯ ಶುಭಾಶಯ ಕೋರುತ್ತಾ, ಕವಿ ಚನ್ನಕೇಶವ ಜಿ ಲಾಳನಕಟ್ಟೆ ಅವರ ಒಂದು ಕವನ ಎಲ್ಲ ಆತ್ಮೀಯ ರೈತ ಬಾಂಧವರಿಗೆ ತಪ್ಪದೆ ಓದಿ…
ಖುಷಿಯಲಿ ರೈತನು
ಕೃಷಿಯನು ಮಾಡುತ
ಹಸಿವನು ನೀಗಿಸೊ ನಾಯಕನು
ಕೆಸರಿನ ಹೊಲದಲಿ
ಬಸಿರನು ತುಂಬಿಸಿ
ಹಸಿರನು ಹುಟ್ಟಿಸಿ ಬೆಳೆಸುವನು
ಉಳುಮೆಯ ಮಾಡಲು
ಮಳೆಯನು ನಂಬುತ
ಛಲದೊಳು ಬಗ್ಗುತ ದುಡಿಯುವನು
ಒಲವನು ಬೇಡುತ
ಬಲವನು ನಂಬುತ
ಹೊಲದಲಿ ಬೀಜವ ಬಿತ್ತುವನು
ಬಿತ್ತಿದ ಬೀಜದ
ನೆತ್ತಿಯು ಚಿಗುರಲು
ಮೆತ್ತಗೆ ಸಂತಸ ಪಡುತಿಹನು
ಮುತ್ತಿರೆ ಕಳೆಗಳು
ಕಿತ್ತೆಸೆಯುತ್ತಲಿ
ಬಿತ್ತನೆ ಸಸಿಗಳ ಪೊರೆಯುವನು
ರಾಗಿಯ ಭತ್ತವ
ಬೀಗುತ ಬೆಳೆವನು
ನೀಗಲು ಹಸಿವನು ಜಗದೊಳಗೆ
ಬಾಗುತ ಭೂಮಿಗೆ
ತಾಗಿಸಿ ಕೈಗಳ
ಬೇಗನೆ ನಮಿಸುವ ಮನದೊಳಗೆ.
- ಚನ್ನಕೇಶವ ಜಿ ಲಾಳನಕಟ್ಟೆ – ಕವಿಗಳು, ಲೇಖಕರು, ಬೆಂಗಳೂರು.
