‘ಸವಿತಾ’ ಅವರ ವೀಲ್ ಚೇರ್ ಹಿಂದಿನ ನೋವಿನ ಕತೆ

ವೀಲ್ ಚೇರ್ ಹಿಂದೆ ಸಾಕಷ್ಟು ಸವಾಲುಗಳಿವೆ, ನೋವುಗಳಿವೆ ಆ ಕತೆಯನ್ನು ಛಲಗಾರ್ತಿ ಸವಿತಾ ಅವರು ಆಕೃತಿಕನ್ನಡದ ಜೊತೆ ತಮ್ಮ ನೋವು, ನಲಿವನ್ನು ಹಂಚಿಕೊಂಡಿದ್ದಾರೆ, ಮುಂದುವರೆದ ಭಾಗವನ್ನು ತಪ್ಪದೆ ಓದಿ…ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ…

ಈ ಹಿಂದೆ ಸವಿತಾ ಅವರ ಬಗ್ಗೆ ಏನೋ ಅವರ ಸ್ಫೂರ್ತಿ ಕತೆ ಬರೆದೆ. ಆದರೆ  ಆ ಕತೆ ಯಾಕೋ ಅಪೂರ್ಣವಾಗಿದೆ ಎಂದು ನನಗೆ ಕಾಡಲು ಶುರು ಮಾಡಿತು, ಹಾಗಾಗಿ ಮತ್ತೆ  ಅವರ ಕತೆಯನ್ನು ಮತ್ತೆ ಮುಂದೆವರೆತ್ತಿದ್ದೇನೆ.

ಸವಿತಾ ಅವರನ್ನು ಮೊದಲು ಭೇಟಿ ಮಾಡಿದ್ದು Association Of People With Disablity Horticulture Training ಸೆಂಟರ್ ನಲ್ಲಿ, ಆ ಸೆಂಟರ್ ಲ್ಲಿ ಏನಿದೆ? ಸವಿತಾ ಅವರು ಅಲ್ಲಿ ಯಾಕೆ ಇದ್ದಾರೆ? ಎನ್ನೋ ಪ್ರಶ್ನೆಗಳು ಮನಸ್ಸಲ್ಲೇ ಇತ್ತಾದರೂ ಅದು ಬಾಯಿಂದ ಹೊರಕ್ಕೆ ಬರಲಿಲ್ಲ. ಸುತ್ತಲೂ ನೋಡುತ್ತಾ ಸೆಂಟರ್ ಕಂಪೌಂಡ್ ನೊಳಗೆ ಕಾಲಿಟ್ಟಾಗ ಅಲ್ಲಿದ್ದ  ಸೆಕ್ಯೂರಿಟಿ ತಡೆದು ನಿಲ್ಲಿಸಿ, ನನ್ನ ಹೆಸರು, ಫೋನ್ ನಂಬರ್ ಬರೆಯುವಂತೆ ಬುಕ್ ಒಂದನ್ನು ನನ್ನ ಮುಂದೆ ತಂದಿಟ್ಟ. ಸೆಂಟರ್ ನಿಯಮ ಸೆಕ್ಯೂರಿಟಿ ಪಾಲಿಸುತ್ತಿದ್ದ ಅಷ್ಟೇ, ನಾನು ನನ್ನ ಹೆಸರು, ಫೋನ್ ನಂಬರ್ ಬರೆದು ಸವಿತಾ ಅವರನ್ನು ನೋಡಬೇಕು ಕರೀತೀರಾ?… ಅಂತ ಸೆಕ್ಯೂರಿಟಿ ಅವರಿಗೆ ಕೇಳಿದೆ. ಅಷ್ಟೋತ್ತಿಗಾಗಲೇ ನಾನು ಅಲ್ಲಿಗೆ ಬಂದ ವಿಷಯ ಸವಿತಾ ಅವರಿಗೆ ತಲುಪಿತ್ತು. ಸವಿತಾ ಅವರೇ ನನ್ನನ್ನು ಹುಡುಕಿಕೊಂಡು ಸೆಕ್ಯೂರಿಟಿ ಇದ್ದ ಸ್ಥಳಕ್ಕೆ ಬಂದರು. ನನ್ನ ಅವರ ಮೊದಲ ಭೇಟಿ ಆಗಿದ್ದು ಅಲ್ಲಿಯೇ.

ಸವಿತಾ ಅವರ ರೀಲ್ಸ್ ನಲ್ಲಿ ನೋಡಿದ್ದು ಬಿಟ್ಟರೆ ನೇರವಾದ ಪರಿಚಯವಿರಲಿಲ್ಲ. ಅವರನ್ನು ಮೊದಲ ಬಾರಿಗೆ ನೇರವಾಗಿ ಭೇಟಿಯಾದಾಗ ಅದರ ಅನುಭವವೇ ಬೇರೆ ಆಗಿತ್ತು. ವೀಲ್ ಚೇರ್ ನಲ್ಲಿ ಸವಿತಾ ಅವರನ್ನು ನೋಡಿದಾಗ ಸಾಮಾನ್ಯ ವ್ಯಕ್ತಿ ಖುರ್ಚಿಯಲ್ಲಿ ಕೂತಂತೆ ಕಂಡಿತು. ನನಗೆ ಅವರಲ್ಲಿ ಯಾವ ಸಮಸ್ಯೆಗಳು ಕಾಣಲಿಲ್ಲ. ಬಹುಶಃ ಅವರಲ್ಲಿದ್ದ ಒಂದು ಆತ್ಮ ವಿಶ್ವಾಸ ಅದನ್ನೆಲ್ಲ ಮರೆಮಾಚಿತೋ ಗೊತ್ತಿಲ್ಲ. ಸವಿತಾ ಅವರು ತಮ್ಮ ಮುಗ್ಧ ನಗುವಿನೊಂದಿಗೆ ನನ್ನನ್ನು ಸ್ವಾಗತಿಸಿ ಸೆಂಟರ್ ಒಳಗೆ ಕರೆದುಕೊಂಡು ಹೋದರು.

ಸೆಂಟರ್ ಸುತ್ತಲೂ ಗಿಡದ ನರ್ಸರಿ ಇತ್ತು, ಅಲ್ಲಿ ಗಿಡ ಕೊಂಡಾಗ ಅದರ ಹಣ Association Of People With Disablity Horticulture Training Centre ಗೆ ಬಳಸಲಾಗುತ್ತದೆ ಎನ್ನುವ ವಿಷಯ ತಿಳಿಯಿತು. ಸವಿತಾ ಹಾಗು ಆ ಜಾಗ ಎಲ್ಲೋ ಒಂದು ಕಡೆ ನನ್ನನ್ನು ಭಾವನಾತ್ಮಕವಾಗಿ ಕಟ್ಟು ಹಾಕಿತು ಎಂತಲೇ ಹೇಳಬಹುದು. ಸವಿತಾ ನಗುತ್ತಾ ನನ್ನ ಕತೆಯಲ್ಲಿ ಏನು ಹುರುಳಿಲ್ಲ, ಮುಗಿದು ಹೋದ ಅಧ್ಯಾಯ, ಇನ್ನು ಅದಕ್ಕೆ ಆರಂಭವೇ ಇಲ್ಲ, ಎಲ್ಲಿಂದ ಶುರು ಮಾಡಲಿ ಎಂದು ಯೋಚಿಸುತ್ತಾ ತಮ್ಮ ಕತೆಯನ್ನು ಹೇಳಲು ಶುರು ಮಾಡಿದರು.

ಆಗ ನನಗೆ ಜೀವನದ ಇನ್ನೊಂದು ಕಹಿ ಸತ್ಯ ಪರಿಚಯವಾಗುತ್ತಾ ಹೋಯಿತು. ಸಾಮಾನ್ಯರಂತೆ ಖುರ್ಚಿಯ ಮೇಲೆ ಕೂತಂತೆ ಕಾಣುತ್ತಿದ್ದ ಸವಿತಾಳ ಹಿಂದೆ ಅಡುಗಿದ್ದ ನಿಜವಾದ ನೋವನ್ನು ಅವರ ಮಾತಿನಿಂದ ಭಾವನಾತ್ಮಕವಾಗಿ ನಾನು ಕೂಡಾ ಅನುಭವಿಸ ತೊಡಗಿದೆ.

ಸವಿತಾ ಅವರ ಮೊದಲಿನ ಫೋಟೋ

‘ಶಾಲಿನಿ, ನಿಮಗೆ ಈ ನನ್ನ ಕಾಲು ಕಾಣುತ್ತಿದೆಯಲ್ಲ, ಇದು ಬರಿ ಶೋಕಿಗೆ ಇರೋದು, ಇದರಿಂದ  ಏನು ಪ್ರಯೋಜನವಿಲ್ಲ. ಇದಕ್ಕೆ ಸ್ವಾಧೀನವೇ ಇಲ್ಲ. ಯಾರದೋ ದೇಹ, ಯಾರದೋ ಕಾಲಿನ ಮೇಲೆ ಇಟ್ಟಂತೆ ಇದೆ. ಖುರ್ಚಿಯಲ್ಲಿ ಕೂರಬೇಕಾದರೆ ನನ್ನ ಕೈ ಬಲ ಬೇಕು, ನಾನು ಮುಂದೆ ಹೋಗಬೇಕೆಂದರು ನನ್ನ ಕೈ ಬಲ ಬೇಕು, ಅಷ್ಟೇ ಯಾಕೆ ನನ್ನ ಕಾಲನ್ನು ವಿಲ್ ಚೇರ್ ನಲ್ಲಿಡಲು ಇದೆ ಕೈ ಬಲ ಬೇಕು’ ಎಂದು ತಮ್ಮ ಅಸಹಾಯಕ ಕಾಲುಗಳನ್ನು ಶಪಿಸಿದರು.

ಮಾತು ಹೀಗೆ ಮುಂದೆವರೆಯಿತು ‘ಒಮ್ಮೊಮ್ಮೆ ಈ ಬದುಕು ನಮಗಲ್ಲ ಅನ್ನಿಸುವಷ್ಟು ಬೇಸರವಾಗುತ್ತದೆ. ಕೂತಲ್ಲೆ ಯೂರಿನ್ ಹೋಗುತ್ತದೆ, ಟಾಯ್ಲೆಟ್ ಹೋಗುತ್ತದೆ, ಇನ್ನು ಹೆಣ್ಮಕ್ಕಳಿಗೆ ತಿಂಗಳಿಗೇ ಆಗುವ ಋತುಸ್ರಾವವು ಕೂಡಾ ಗೊತ್ತಾಗೊಲ್ಲ,  ಇದಕ್ಕೆ ಕಾರಣ ನಮಗೆ ಕೆಳಭಾಗ ಪ್ರಜ್ಞೆ ಇಲ್ಲ, ಗಲೀಜ್ ಆದರೆ ಮುಜುಗುರಕ್ಕೆ ಒಳಗಾಗುತ್ತೇವೆ.ಹಾಗಾಗಿ ನಾವುಗಳು ಹೊರಗೆ ಎಲ್ಲೆಂದರಲ್ಲಿ ಓಡಾಡಲು ಆಗೋದಿಲ್ಲ. ಪ್ರಜ್ಞೆ ಇಲ್ಲದ ಕಾರಣಕ್ಕೆ ಗಲೀಜ್ ಆದಾಗ ಕನ್ನಡಿ ಹಿಡಿದು ಸ್ವಚ್ಛ ಮಾಡ್ಕೋಬೇಕು. ಹೊರಗೆ ಹೋಗಬೇಕಾದ ಸಂದರ್ಭದಲ್ಲಿ ಬೆಳಗ್ಗೆಯಿಂದಲೇ ನೀರು, ತಿಂಡಿ ಬಿಟ್ಟಿ ಓಡಾಡುತ್ತೇವೆ, ಹೊರಗೆ ಹೋದಾಗ ಮತ್ತೆಲ್ಲಿ ಮುಜುಗರಕ್ಕೆ ಒಳಗಾಗುತ್ತೇವೆ ಎನ್ನುವ ಭಯ ನಮ್ಮನ್ನು ಕಾಡುತ್ತಲೇ ಇರುತ್ತದೆ ಎನ್ನುವಾಗ ಅವರ ಕಣ್ಣುಗಳಷ್ಟೇ ಅಲ್ಲ, ನನ್ನ ಕಣ್ಣುಗಳಲ್ಲಿಯೂ ನೀರು ತೊಟ್ಟಕ್ಕಿತು.

‘ವೀಲ್ ಚೇರ್ ನಲ್ಲಿ ಓಡಾಡೋರ ಪಾಡು ನರಕಯಾತನೆ. ಇಲ್ಲಿಯ ರಸ್ತೆಗಳಾಗಲಿ, ಮೆಟ್ರೋ ಗಳಲ್ಲಾಗಲಿ, ಬಸ್ ವ್ಯವಸ್ಥೆಗಳಾಗಲಿ ನಮ್ಮಂತವರಿಗೆ ಓಡಾಡಲು ಅನುಕೂಲವಾಗಿಲ್ಲ, ಮೆಟ್ರೋ ಸ್ಟೇಷನ್ ಗಳಲ್ಲಿ ಸ್ವಚ್ಛ ಮಾಡ್ಕೋಕೆ ನಮಗಾಗಿ ಪ್ರತ್ಯೇಕ ವಾಷ್ ರೂಮ್ ಗಳಿಲ್ಲ. ಯಾರಿಗೆ ನಮ್ಮ ಕಷ್ಟ ಹೇಳೋದು’ ಎಂದು ನೆಲ ನೋಡುತ್ತಾ ದುಃಖಿಸಿದಾಗ ದೇವರು ಇಷ್ಟೊಂದು ಕ್ರೂರಿನಾ ಅನಸಿದ್ದು ನಿಜ.

ಒಂದು ಕೈ ಅಥವಾ ಒಂದು ಕಾಲು ಕಳೆದುಕೊಂಡರೆ ಬದುಕು ಶೂನ್ಯವಾಗುತ್ತದೆ, ಅಂತದರಲ್ಲಿ ದೇಹದ ಅರ್ಧ ಭಾಗ ಪ್ರಜ್ಞೆಯನ್ನು ಕಳೆದುಕೊಂಡರೆ ಏನಾಗಬಹುದು ಎನ್ನುವ ಕಹಿ ಸತ್ಯ ಅಂದು ನನಗೆ ತಿಳಿಯಿತು. ಆ ನೋವಿನಲ್ಲಿ ಬದುಕು ಕಟ್ಟಿಕೊಳ್ಳಲು ಹರಸಾಹಸ ಪಡುತ್ತಿರುವ ಸವಿತಾ ಅವರ ಛಲಕ್ಕೆ ನನ್ನದೊಂದು  ಸಲಾಂ ಹೇಳಿ ಅಲ್ಲಿಂದ ನಾನು ಹೊರಟೆ,  ಹೊರಡುವಾಗ ಸವಿತಾ ಅವರಿಗೆ ಗಟ್ಟಿಯಾಗಿ ತಬ್ಬಿಕೊಂಡು ಅಳಬೇಕು ಎನಿಸಿತು, ಆದರೆ ಧೈರ್ಯವಾಗಿ ನಿಂತವರ ಮುಂದೆ ಕಣ್ಣೀರು ಹಾಕಿ ಅವರನ್ನು ಅಶಕ್ತರನ್ನಾಗಿ ಮಾಡಬಾರದು ಎನ್ನುವ ಕಾರಣಕ್ಕೆ ನನ್ನ ದುಃಖವನ್ನು ತಡೆದು ಅಲ್ಲಿಂದ ಬೈ ಹೇಳಿ ಹೊರಟೆ.

ದಾರಿಯುದ್ದಕ್ಕೂ ನನ್ನ ಮನಸ್ಸಲ್ಲಿ ಸವಿತಾ ಅವರೇ ಆವರಿಸಿದ್ದರು. ಬದುಕಿಗೆ ಸವಾಲು ಹಾಕಿದ ಒಬ್ಬ ಗಟ್ಟುಗಿತ್ತಿಯನ್ನು ಸವಿತಾರಲ್ಲಿ ಕಂಡೆ. ಎಲ್ಲವೂ ಸರಿ ಇದ್ದಾಗ ಕುಟುಂಬದ ಸಮಸ್ಯೆ, ಅತ್ತೆ – ಮಾವನ ಸಮಸ್ಯೆ, ಸಣ್ಣ ಪುಟ್ಟ ಸಮಸ್ಯೆ ಹೇಳಿ ಗೋಳಾಡುವ ಹೆಣ್ಮಕ್ಕಳ ಮಧ್ಯೆ ಸವಿತಾ ಮಿನುಗು ತಾರೆಯಂತೆ ನನಗೆ ಕಂಡರು. ಜೀವನದಲ್ಲಿ  ನಮಗೆ ಸಮಸ್ಯೆ ಎಂದಾಕ್ಷಣ ಒಮ್ಮೆ ಮಿನುಗುವ ಸವಿತಾ ಅವರನ್ನು ನೆನೆಸಿಕೊಂಡರೆ ಸಾಕು, ಜೀವನದಲ್ಲಿ ಉತ್ಸಾಹ ತುಂಬುತ್ತದೆ ಎನ್ನುವುದರಲ್ಲಿ ಸಂಶಯವೇ ಇಲ್ಲಾ.

ಸದಾ ಹಸನ್ಮುಖಿಯಾಗಿರುವ ಸವಿತಾ ಅವರ ಬಾಳು ಸುಂದರವಾಗಿರಲಿ ಮತ್ತು  ಅವರ ಕತೆ ಇಲ್ಲಿಗೆ ಅಂತ್ಯವಾಗಿಲ್ಲ, ಇಲ್ಲಿಂದ ಕತೆ ಆರಂಭವಾಗಿದೆ ಎಂದು ಹೇಳುತ್ತಾ ಅವರಿಗೆ ಆಕೃತಿಕನ್ನಡ ಶುಭ ಹಾರೈಸುತ್ತದೆ.

*****

 ಸಂಸ್ಥೆಯ ವಿಳಾಸ :

Association Of People With Disablity Horticulture Training Centre
Lic Colony, Hal, 9th B Main Road, Hal 3rd Stage, Jeevan Bima Nagar, Bengaluru, Karnataka 560075

080 2528 8672

https://maps.app.goo.gl/cg8FjBxNw5mc9AGZ6

(ಸ್ಪೈನಲ್ ಕಾರ್ಡ್ ನಿರಾಶ್ರಿತರಿಗೆ ಈ ಸಂಸ್ಥೆ ತರಬೇತಿಯನ್ನ ಕೊಟ್ಟು ಸಾಕಷ್ಟು ಜನರ ಬಾಳಿಗೆ ದಾರಿ ದೀಪವಾಗಿದೆ. ಯಾರಾದ್ರೂ ಈ ಸಂಸ್ಥೆಯ ಬಗ್ಗೆ  ಹಾಗು ಸವಿತಾವರಿಗೆ ನೇರವಾಗಿ ಸಹಾಯ ಮಾಡಲು ಇಚ್ಛಿಸುವ ಮನಸ್ಥಿತಿ ಇರುವವರು ಮಾತ್ರ ಅವರ ದೂರವಾಣಿ ಸಂಖ್ಯೆಗೆ ಕರೆಮಾಡಬಹುದು, ಅವರ ದೂರವಾಣಿ ಸಂಖ್ಯೆ : 9731830154 .)


3 2 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW