“ಸಿ. ಕೆ. ಜಿ ಸ್ಪೋರ್ಟ್ಸ್ ಕ್ಲಬ್ ಮಾಕೋನಹಳ್ಳಿ” ಪರಿಚಯ

ಪತ್ರಕರ್ತ ವಿನಯ್ ಮಾಧವ್ ಮಾಕೋನಹಳ್ಳಿ ಅವರ “ಸಿ. ಕೆ. ಜಿ ಸ್ಪೋರ್ಟ್ಸ್ ಕ್ಲಬ್ ಮಾಕೋನಹಳ್ಳಿ” ಪುಸ್ತಕದ ಕುರಿತು ಮತ್ತೊಬ್ಬ ಕಾದಂಬರಿಕಾರ ನೌಶಾದ್ ಜನ್ನತ್ತ್ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ ತಪ್ಪದೆ ಓದಿ…

ಕೃತಿಯ ಹೆಸರು : “ಸಿ. ಕೆ. ಜಿ ಸ್ಪೋರ್ಟ್ಸ್ ಕ್ಲಬ್ ಮಾಕೋನಹಳ್ಳಿ”
ಪ್ರಕಾಶನ : ಸಪ್ನ ಬುಕ್ ಹೌಸ್
ಲೇಖಕರು : ವಿನಯ್ ಮಾಧವ್ ಮಾಕೋನಹಳ್ಳಿ
ಬೆಲೆ : ೧೬೦ /

ವಿನಯ್ ಮಾಧವ್ ಅವರ ನೂತನ “ಸಿ. ಕೆ. ಜಿ ಸ್ಪೋರ್ಟ್ಸ್ ಕ್ಲಬ್ ಮಾಕೋನಹಳ್ಳಿ” ಎಂಬ ಕೃತಿ, ನಾನು ಓದುವ ಹೊಸ ವರ್ಷದ ಪ್ರಥಮ ಪುಸ್ತಕವಾಗಲಿ ಎಂದುಕೊಂಡಿದ್ದೆ. ಅದನ್ನು ಅವರ ಬಳಿ ಹೇಳಿದ್ದೆ ಕೂಡ. ಪುಸ್ತಕ ತಲುಪಿದಾಗ ಆ ಕೃತಿಯ ಚಂದದ ಮುಖಪುಟವನ್ನು ಕಂಡು ಅದರ ಮೇಲೊಮ್ಮೆ ಕೈಯಾಡಿಸುವ ಮನಸ್ಸಾಯಿತು. ಆ ನಡುವೆ “ಒಕ್ಕೊಲೊಂದರ ಆತ್ಮಕಥೆ” ಎಂಬ ಅಡಿ ಬರಹವನ್ನು ಕಂಡಾಗ ಸುಮ್ಮನೆ ಒಮ್ಮೆ ಒಳಗೆ ಕಣ್ಣಾಡಿಸತೊಡಗಿದೆ. ಮುನ್ನುಡಿ, ಲೇಖಕರ ಮಾತನ್ನೆಲ್ಲ ಸರಿಸಿದರೆ ಅಲ್ಲಿ “ಅಲಮೇಲಮ್ಮನ ಶಾಪ!” ಮೈಸೂರಿನ ರಾಜವಂಶಸ್ಥರಿಗೆ ಅಲಮೇಲಮ್ಮ ಕೊಟ್ಟ ಶಾಪಕ್ಕೂ ಈ ಕೃತಿಗೂ ಎತ್ತಣಿಂದೆತ್ತ ಸಂಬಂಧವಯ್ಯ ಎಂದು ಕುತೂಹಲದಿಂದ ಓದಲು ಶುರು ಮಾಡಿದೆ ಸುಮ್ಮನೆ ಆವರಿಸಿಕೊಳ್ಳಲು ಪ್ರಾರಂಭಮಾಡಿತು.

ಕೃತಿಗಾಗಿ ಅರವತ್ತು, ಎಪ್ಪತ್ತರ ದಶಕದ ಜಾಡು ಹಿಡಿದು ಹೊರಟರು ಎಡವುವವರ ನಡುವೆ, ಸುಮಾರು ನಾನೂರಕ್ಕು ಹೆಚ್ಚು ವರ್ಷಗಳ ಕಾಲ ತಮ್ಮ ವಂಶವೃಕ್ಷ ನಡೆದುಬಂದ ಹಾದಿಯನ್ನು ಒಂದು ಕೃತಿಯಾಗಿ ಓದುಗರ ಮುಂದೆ ತರಲು ಸಾಧ್ಯವಾಗಿರುವುದು ಒಂದು ಅಚ್ಚರಿಯೇ ಸರಿ! ಮಾಧವರ ಪುಸ್ತಕಗಳೆಂದರೆ ಹಾಗೆಯೇ! ಅಲ್ಲಿ ನೈಜತೆಗೆ ಹೆಚ್ಚಿನ ಒತ್ತು. ಈ ಮೊದಲಿನ ಎರಡು ಕೃತಿಗಳಲ್ಲಿಯೂ ಅದು ಸಾಬೀತಾಗಿದೆ.

“ಸಿ. ಕೆ. ಜಿ ಸ್ಪೋರ್ಟ್ಸ್ ಕ್ಲಬ್ ಮಾಕೋನಹಳ್ಳಿ” ಲೇಖಕರು ವಿನಯ್ ಮಾಧವ್ ಮಾಕೋನಹಳ್ಳಿ

ಅಲಮೇಲಮ್ಮನಿಂದ ಪ್ರಾರಂಭವಾಗಿ ವಿಜಯನಗರದ ಅರಸರು ಹಾಗು ರಾಜ ವಂಶಸ್ಥರಿಂದ ಪಡೆದಿದ್ದ ಮಂದೇ ಪಟೇಲಿಕೆಯನ್ನು ಉಳಿಸಿಕೊಳ್ಳುವ ಸಲುವಾಗಿನ ದಾಯಾದಿ ಕಲಹ, ಬೈರಾಗಿಗಳು ಮತ್ತು ಸನ್ಯಾಸಿಗುಡ್ಡ, ಮಾಕೋಡನಹಳ್ಳಿ ಕುಟುಂಬದ ರಕ್ಷಣೆಗಾಗಿ ಟೊಂಕಕಟ್ಟಿ ನಿಂತ ಬಿಲ್ಲವರ ಪೆಡಕ್ಕಿ ಕರಿಯ ಮತ್ತವನ ಕುಟುಂಬ, ಇತ್ತ ರಾಜವಂಶಗಳನ್ನು ಮೂಲೆಗೆ ಸರಿಸಿ, ಬ್ರಿಟಿಷರು ಆಡಳಿತ ಚುಕ್ಕಾಣಿ ಹಿಡಿದಿದ್ದರೂ ಮಂದೆಪಟೇಲಿಕೆಯನ್ನು ಕನವರಿಸುತ್ತಾ ಐದು ತಲೆಮಾರುಗಳಿಂದ ಯಾರೂ ಕಂಡಿರದ, ರಾಜಕುಟುಂಬ ಅಧಿಕಾರದ ಕುರುಹಾಗಿ ಕೊಟ್ಟಿದ್ದ ಛತ್ರಿ, ಮುದ್ರೆ ಮತ್ತು ಲಾಂಛನದ ಕನಸು ಕಾಣುತ್ತಾ ಕುಳಿತಿದ್ದ ತಮ್ಮ ಹಿರಿಕರು , ಕುಟುಂಬದ ಶ್ರೇಯಸ್ಸಿಗಾಗಿ ಚೌಡಿ ಬನದಲ್ಲಿ ಹೂತಿಟ್ಟಿದ್ದ ನಿಧಿ, ಚುರ್ಚೆ ಪೊದೆಯ ಬಳಿ ಹೋಗುತ್ತಿದ್ದಂತೆ ಕಣ್ಮರೆಯಾಗುತ್ತಿದ್ದ ಕಾಳೇಗೌಡ ಮತ್ತು ಅವನನ್ನು ಅಷ್ಟರ ಮಟ್ಟಿಗೆ ಪರಿಣಿತಿಗೊಳಿಸಿದ ಮೆಮ್ಮೆ, ದೊಡ್ಡಗೌಡರ ವ್ಯಾಪಾರಿ ಮನೋಭಾವ, ದೊರೆಗಳ ಕಾಫಿತೋಟ, ಹೊಳೆಗದ್ದೆ ಮಾರಮ್ಮ, ಬೆಣ್ಣೆ ಮಾರಿ ಬದುಕುತ್ತಿದ್ದ ಸೂರಪ್ಪನಹಳ್ಳಿಯ ಅಮ್ಮ ಕೊರವಂಜಿಯ ಭವಿಷ್ಯದಂತೆ ಸಾವಿರ ಏಕರೆಯ ಒಡತಿಯಾಗಿದ್ದು, ದೊರೆಗಳನ್ನು ಸದಾ ಕಾಡುತ್ತಿದ್ದ ಜೂಲಣ್ಣ, ಮಾಕೋಡನ ಹಳ್ಳಿ ಮಾಕೋನಹಳ್ಳಿಯಾಗಿ ಮತ್ತು ವೇಲಾಪುರಿ ಬೇಲೂರಾಗಿ ಸದ್ದಿಲ್ಲದೇ ಬದಲಾದದ್ದು ಮತ್ತು ಕೊನೆಯಲ್ಲಿ ಸಂಬಂಧಗಳನ್ನು ಉಳಿಸಿ ಬೆಳೆಸುವ ಸಲುವಾಗಿ ಕಟ್ಟಿಕೊಂಡ ಸಿ. ಕೆ. ಜಿ ಸ್ಪೋರ್ಟ್ಸ್ ಕ್ಲಬ್ ಹೀಗೆ ಆ ಕುಟುಂಬದ ಹಲವು ಏಳುಬೀಳುಗಳನ್ನು ನಮ್ಮ ಮುಂದೆ ಮಾಧವರು ತಣ್ಣಗೆ ಕಟ್ಟುತ್ತಾ ಹೋಗಿದ್ದಾರೆ.

ಓದುತ್ತಾ ಹೋದಂತೆ ಮುಗಿದದ್ದೇ ತಿಳಿಯಲಿಲ್ಲ.ಹೀಗೆ ಇಪ್ಪತ್ಮೂರರ ಮೊದಲ ಪುಸ್ತಕವಾಗಬೇಕಿದ್ದ “ಒಕ್ಕಲೊಂದರ ಆತ್ಮಕಥೆ” ಕಡೆಗೆ ಇಪ್ಪತ್ತೆರಡರ ಕೊನೆಯ ಪುಸ್ತಕವಾಗಿ ಮಾರ್ಪಟಾಯಿತು. ಎಲ್ಲರಿಗೂ ತಮ್ಮ ಪೂರ್ವಜರ ಇತಿಹಾಸವನ್ನು ಅರಿಯಬೇಕು ಮತ್ತು ಅದನ್ನು ಅಜರಾಮರ ಗೊಳಿಸಬೇಕು ಎಂಬ ಆಸೆ ಇದ್ದೇ ಇರುತ್ತದೆ. ಅದು ಎಲ್ಲರಿಂದಲೂ ಸಾಧ್ಯವಿಲ್ಲ. ಆದರೆ ಮಾಧವರು ಈ ಮೂಲಕ ಅದನ್ನು ಸಾಧಿಸಿದ್ದಾರೆ.

ಪುಸ್ತಕ ಇನ್ನಷ್ಟು ಓದುಗರನ್ನು ತಲುಪಲಿ ಎಂದು ಈ ಮೂಲಕ ಆಶಿಸುತ್ತೇನೆ.


  • ನೌಶಾದ್ ಜನ್ನತ್ತ್ – ಕಾದಂಬರಿಕಾರರು, ಲೇಖಕರು

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading