ಮತ್ತೆ ಕೋವಿಡ್ !!? ಭಯ ಪಡಬೇಕೆ ? – ಶರದ್ ಕುಮಾರ್ ಎಂ

ಕೋವಿಡ್ ಬಗ್ಗೆ ಮಾಹಿತಿ ಇದ್ದರು ಅದಕ್ಕೆ ಸಂಬಂಧ ಪಟ್ಟ ಸಂದೇಶಗಳು ಬಂದರೆ ಸಾಕು, ಎಲ್ಲಿಲ್ಲದ ಕುತೂಹಲ ಹಾಗು ಆತಂಕ. ಕುತೂಹಲ ಸಹಜ, ಆದರೆ ಆತಂಕ ಬೇಕೆ ? ಮುಂದೆ ತಪ್ಪದೆ ಓದಿ ಡಾ.ಶರದ್ ಕುಮಾರ್ ಎಂ ಅವರು ಕೋವಿಡ್ ಕುರಿತು ಆಪ್ತ ಬರಹವೊಂದನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ.

ಇದನ್ನು ಓದುತ್ತಿರುವ ಎಲ್ಲರೂ ತಮ್ಮ ಸುತ್ತಮುತ್ತ, ಯಾರೊಬ್ಬರಾದರು ಕೋವಿಡ್ ಸಮಯದಲ್ಲಿ ಹೆಚ್ಚು ಭಯದಿಂದ, ಆತಂಕದಿಂದ ಅಕಾಲಿಕ ಮರಣ ಹೊಂದಿರುವ ಘಟನೆಗಳನ್ನು ಗಮನಿಸಿರುತ್ತಾರೆ. ಆದರೂ ತಿಳಿದೋ ತಿಳಿಯದೆಯೋ ಭಯ ಪಟ್ಟು, ಪರರಲ್ಲು ಭಯೋತ್ಪಾದನೆ ಮಾಡುವ ಕೆಲಸ ಸತತವಾಗಿ ಮಾಡಿ ಬಿಡುತ್ತೇವೆ.

ಆಯುರ್ವೇದದ ಪ್ರಮುಖ ಗ್ರಂಥವಾದ ಚರಕ ಸಂಹಿತದಲ್ಲಿ ‘ವಿಷಾದೋ ರೋಗವರ್ಧನಾನಾಂ’ ಎಂದು ಸಾವಿರಾರು ವರ್ಷಗಳ ಹಿಂದೆಯೇ ಹೇಳಿದ್ದಾರೆ. ಅಂದರೆ ವಿಷಾದಿಸುವುದು, ದುಃಖಿಸುವುದು,ಆತಂಕ ಪಡುವುದು ರೋಗವನ್ನು ಹೆಚ್ಚಿಸುತ್ತದೆ. ‘ಶೋಕಃ ಶೋಷಣಾನಾಂ’ ಎಂದರೆ ಶೋಕಿಸುವುದು ದೇಹವನ್ನು ಶೋಷಿಸುತ್ತದೆ ಅಥವಾ ಸೊರಗಿಸುತ್ತದೆ. ಇದನ್ನೇ ನಾವು ಕಳೆದ ಕೋವಿಡ್ ನಲ್ಲಿ ಪ್ರತ್ಯಕ್ಷವಾಗಿ ಕಂಡಿದ್ದೇವೆ.’ದೃಷ್ಟಕರ್ಮತಾ ನಿಃಸಂಶಯಕರಾಣಾಂ’ ಪ್ರತ್ಯಕ್ಷವಾಗಿ ಕಂಡುಕೊಂಡ ಅಥವಾ ಕಲಿತ ವಿಷಯಗಳಲ್ಲಿ ಸಂಶಯ ಪಡಬಾರದು. ಶೋಕದಿಂದ ರೋಗ ದೂರವಾಗುವುದಿದ್ದರೆ ವೈದ್ಯ ಸಮೂಹವೇ ಇದನ್ನು ಎಸ್.ಓ.ಪಿಯಲ್ಲಿ ಸೇರಿಸುತ್ತಿದ್ದರು. ‘ವೈದ್ಯ ಸಮೂಹೋ ನಿಃಸಂಶಯಕರಾಣಾಂ’ ಎಂದು ಆಚಾರ್ಯ ಚರಕರು ಅಭಿಪ್ರಾಯ ಪಟ್ಪಿದ್ದಾರೆ. ಸಂಶಯ ದೂರ ಮಾಡಲು ವೈದ್ಯ ಸಮೂಹವೇ ಶ್ರೇಷ್ಠ. ಅಂದರೆ ವೈದ್ಯ ಸಮೂಹದ ಮಾತುಗಳಲ್ಲಿ ಸಂಶಯವಿರಬಾರದು. ಆದರೆ ಕಳೆದ ಕೋವಿಡ್ ನಲ್ಲಿ ವೈದ್ಯಸಮೂಹದ ಮೇಲೆಯೇ ಹಲವರು ಸಂಶಯ ಪಡುವಂತ ಸ್ಥಿತಿ ನಿರ್ಮಾಣವಾಗಿತ್ತು. ಇಲ್ಲಿ ಚಿಕಿತ್ಸೆಗೆ ಮತ್ತೆ ಜನರ ಮುಂದೆ ಎರಡು ಆಯ್ಕೆಗಳಿವೆ. ಇದು ಮತ್ತೆ ಎಲ್ಲರಲ್ಲು ಸಂಶಯ ಸೃಷ್ಟಿಸುತ್ತದೆ. ಆಯುರ್ವೇದವೋ ಅಥವಾ ಆಧುನಿಕ ಪದ್ಧತಿಯೋ ? ಆಚಾರ್ಯ ಚರಕರು ‘ಆಯುರ್ವೇದೋ ಅಮೃತಾನಾಂ’ ಎಂದಿದ್ದಾರೆ.ಕಳೆದ ಕೋವಿಡ್ ನಲ್ಲಿ ಆಯುರ್ವೇದ ಬಳಸಿ ಮೃತರಾದವರು ತುಂಬಾ ಕಡಿಮೆ.

ಫೋಟೋ ಕೃಪೆ : The Indian Express

ಆಯುರ್ವೇದ ಅಮೃತವಾಗಿದ್ದನ್ನು ಕೂಡ ಪ್ರತ್ಯಕ್ಷವಾಗಿ ಕಂಡಿದ್ದೇವೆ. ಅಂದರೆ ಆಯುರ್ವೇದವು ಕೋವಿಡ್ ನಿಯಂತ್ರಿಸಲು ಹಾಗೂ ಗುಣಪಡಿಸಲು ಸಮರ್ಥವಾಗಿದೆ. ‘ಅಸಮರ್ಥತಾ ಭಯಕರಾಣಾಂ’ ಅಂದರೆ ಅಸಮರ್ಥತೆ ಭಯದ ವಾತಾವರಣ ಸೃಷ್ಟಿಸುತ್ತದೆ. ಕಳೆದ ಕೋವಿಡ್ ನಲ್ಲಿ ಆಧುನಿಕ ಪದ್ಧತಿಯ ಅಸಮರ್ಥತೆ ಎದ್ದು ಕಾಣಿಸಿಕೊಂಡಿದೆ. ಆದರೆ ಇಂತಹ ಸಂದರ್ಭದಲ್ಲಿ ‘ವಿಜ್ಞಾನಂ ಔಷಧೀನಾಂ’ ಎಂಬುದನ್ನು ಅರಿಯಬೇಕು. ಎಂದರೆ ವಿಜ್ಞಾನ ಎಂದರೆ ಇಲ್ಲಿ ಸೈನ್ಸ್ ಅಲ್ಲ. ವಿಶೇಷವಾದ ಜ್ಞಾನವೇ ವಿಜ್ಞಾನ. ಅಂದರೆ ಸರಿಯಾದ ಮಾಹಿತಿ ,ನಿಖರವಾದ ಜ್ಞಾನ. ತಪ್ಪು ಮಾಹಿತಿಗಳು ದಿಕ್ಕು ತಪ್ಪಿಸಿ ಭಯ ಸೃಷ್ಟಿಸುತ್ತದೆ. ಆದ್ದರಿಂದ ಯಾವುದೇ ಸಂಶಯವಿಲ್ಲದೆ ಆಯುರ್ವೇದದಲ್ಲಿ ತಿಳಿಸಿದ ಆರೋಗ್ಯಕರ ಜೀವನಶೈಲಿಯ ಮಾಹಿತಿ ಪಡೆದು ಅರಿತು, ಅನುಸರಿಸಿ ಅಳವಡಿಸಿಕೊಳ್ಳಬೇಕು. ಏಕೆಂದರೆ ಚರಕರು ‘ಸದ್ವಚನಂ ಅನುಷ್ಠೇಯಾನಾಂ’ ಎಂದು ಹೇಳಿದ್ದಾರೆ. ಅಂದರೆ ಒಳ್ಳೆಯ ಮಾತುಗಳನ್ನು ಅನುಷ್ಠಾನಕ್ಕೆ ತರಬೇಕು. ಇಷ್ಟೆಲ್ಲಾ ತಿಳಿದರು ಆತಂಕ ಪಡಬೇಕೆ ? ಆದರೂ ಆತಂಕ ಪಡಲು ಕಾರಣ ಇದೆ. ‘ಮಿಥ್ಯಾಯೋಗೋ ವ್ಯಾಧಿಕರಾಣಾಂ’ ಅಂದರೆ ತಪ್ಪು ಕ್ರಮಗಳನ್ನು ಅನುಸರಿಸುವುದು ರೋಗವನ್ನು ಸೃಷ್ಟಿಸುತ್ತದೆ. ನಮಗೇ ಸರಿ ಮತ್ತು ತಪ್ಪಿನ ಕುರಿತ ಬುದ್ಧಿ ಇಲ್ಲದಿರುವುದು. ಸರಿ ತಪ್ಪನ್ನು ನಿರ್ಧರಿಸುವ ಕೆಲಸ ಬುದ್ಧಿ ಎನ್ನುವ ತತ್ವದ್ದು. ಆದರೆ ಈ ಬುದ್ಧಿ ತತ್ವವನ್ನು ನಾವು ಕಡೆಗಣಿಸಿ ಅತೀ ಬುದ್ಧಿವಂತರಂತೆ ವರ್ತಿಸಿ ಆತಂಕದಲ್ಲಿ ಕೋವಿಡ್ ಎಂಬುವ ರೋಗವೇ ಸುಳ್ಳು ಎಂದಿದ್ದೇವೆ. ಹಾಗಿದ್ದರೆ ಈ ಬುದ್ಧಿ ಸರಿಪಡಿಸಲು ಏನು ಮಾಡಬೇಕು? ಅದಕ್ಕೆ ಆಚಾರ್ಯ ಚರಕರು ‘ತದ್ವಿಧ್ಯ ಸಂಭಾಷಾ ಬುದ್ಧಿವರ್ಧನಾನಾಂ’ ಎಂದಿದ್ದಾರೆ. ಎಂದರೆ ಒಂದು ವಿಷಯದ ಬಗ್ಗೆ ಸರಿಯಾದ ಮಾಹಿತಿಯನ್ನು ಪಡೆಯಲು, ಸರಿಯಾಗಿ ಮಾಹಿತಿ ಇರುವವರೊಡನೆ ಆರೋಗ್ಯಕರವಾಗಿ ಚರ್ಚಿಸುವುದು. ಆದರೆ ನಾವು ಅರೆಬೆಂದ ಮಾಹಿತಿಯನ್ನು ಸೇವಿಸುವುದಲ್ಲದೆ ಇತರರಿಗೂ ಹಂಚುತ್ತೇವೆ. ಅರೆಬೆಂದ ಅನ್ನ ಅಜೀರ್ಣಕ್ಕೆ ಎಡೆ ಮಾಡಿದಂತೆ, ಅರೆಬೆಂದ ಮಾಹಿತಿ ಆತಂಕ ಸೃಷ್ಟಿಸುತ್ತದೆ. ಆದ್ದರಿಂದ ಆತಂಕ ಸೃಷ್ಟಿಸುವ ಕೆಲವು ಮಾಧ್ಯಮಗಳಿಗೆ ಎಚ್ಚರಿಕೆ ಕೊಟ್ಟು ತಿಳಿ ಹೇಳಿ ಹಾಗೂ ಈ ಸಂದೇಶವನ್ನು ಅಂತಹ ಮಾಧ್ಯಮದವರಿಗೆ ಮೊದಲು ಶೇರ್ ಮಾಡಿ.

ಫೋಟೋ ಕೃಪೆ : executiveoffice

ಇಷ್ಪೆಲ್ಲ ತಿಳಿಸಿದ ಮೇಲೂ ಆಯುರ್ವೇದದ ನಮ್ಮ ಪೂರ್ವಜರು ತಿಳಿಸಿದ ಆರೋಗ್ಯ ಸೂತ್ರ ಪಾಲಿಸದೆ ಕೋವಿಡ್ ಬಂದರೆ ಏನು ಮಾಡಬೇಕು? ‘ನಿರ್ದೇಶಕಾರಿತ್ವಂ ಆತುರಗುಣಾನಾಂ’.ಅಂದರೇ ವೈದ್ಯರು ಕೊಡುವ ನಿರ್ದೇಶನಗಳನ್ನು ಚಾಚು ತಪ್ಪದೇ ಪಾಲಿಸುವುದು ರೋಗಿಯ ಉತ್ತಮ ಗುಣ. ಅಂತೆಯೇ ವೈದ್ಯರ ಮೇಲೆ ಭರವಸೆ ಇಡಬೇಕು. ರೋಗಿಯನ್ನು ಗುಣಪಡಿಸಲು ವೈದ್ಯರು ಚಿಂತಿಸಬೇಕೆ ವಿನಃ ಸ್ವತಃ ರೋಗಿ ಚಿಂತಿಸಿದರೆ ಪರಿಸ್ಥಿತಿ ಚಿಂತಾಜನಕವಾಗುತ್ತದೆ.

ಕೋವಿಡ್ ನಂತಹ ಸಾವಿರಾರು ರೋಗಗಳು ಬಂದರೂ ಅದನ್ನು ಸಮರ್ಥವಾಗಿ ಎದುರಿಸುವ ಸಾಮರ್ಥ್ಯ ಆಯುರ್ವೇದಕ್ಕಿದೆ. ಆದರೆ ಆಯುರ್ವೇದ ಮರೆತು ಆಯಸ್ಸು ಕ್ಷೀಣಿಸುವ ಆಧುನಿಕ ಜೀವನಶೈಲಿಯನ್ನು ಆಲಂಗಿಸಿರುವ ನಾವೆಲ್ಲರೂ ರೋಗದಿಂದ ಬಳಲುವ ಆತಂಕದಲ್ಲಿರುವುದು ಸತ್ಯ. ಇಲ್ಲಿ ಸಮಸ್ಯೆ ಆಯುರ್ವೇದ ಶಾಸ್ತ್ರದ್ದಲ್ಲ. ಅದನ್ನು ಜೊತೆಗಿದ್ದರು ಮಲತಾಯಿಯಂತೆ ಕಾಣುವ ನಮ್ಮ ಧೋರಣೆಯದ್ದು. ಇಷ್ಟೆಲ್ಲ ಆದರೂ ಆಯುರ್ವೇದ, ತಾಯಿಯಂತೆ ನಮ್ಮ ಕೈಬಿಡುವುದಿಲ್ಲ. ನಾವು ತಾಯಿಯ ಮಾತನ್ನು ಅನುಸರಿಸಬೇಕಷ್ಟೆ. ನೆನಪಿಡಿ ತಾಯಿ ಎಂದಿಗೂ ಕೆಡುಕು ಬಯಸುವುದಿಲ್ಲ. ತಾಯಿ ಧೈರ್ಯ ನೀಡಿ ನೇವರಿಸುತ್ತಾಳೆ. ಆತಂಕ ಸೃಷ್ಟಿಸುವುದಿಲ್ಲ. ಏನೇ ಆಗಲಿ ಮುಂದೆ ಕೋವಿಡ್ ಬಂದರೂ ಬರದಿದ್ದರೂ ಭಯ ಪಡುವುದಿಲ್ಲ ಹಾಗೂ ಭಯ ಪಡಿಸುವುದಿಲ್ಲ ಎಂದು ಸಂಕಲ್ಪ ಮಾಡಿ. ಏಕೆಂದರೆ ‘ಸಂಕಲ್ಪೋ ವೃಷ್ಯಾನಾಂ’ ಅಂದರೆ ಸಂಕಲ್ಪ ಮಾಡುವುದು ವೀರ್ಯತ್ವವನ್ನು ಮತ್ತು ವೀರತ್ವವನ್ನು ಹೆಚ್ಚಿಸುವಲ್ಲಿ ಶ್ರೇಷ್ಠ. ಕೋವಿಡ್ ಎದುರಿಸಲು ವೀರರಾಗಿ, ಕೋವಿಡ್ ಹೆದುರಿಸಲು ಸಂಕಲ್ಪ ಮಾಡಿ. ಆತಂಕ ಬೇಡ ಆಯುರ್ವೇದವನ್ನು ಅನುಸರಿಸಿ.

ಈ ಲೇಖನ ಇಷ್ಟವಾಗಿ ಆಯುರ್ವೇದದ ಜೀವನಶೈಲಿ ಅರಿಯಬೇಕಿದ್ದರೆ ‘ಆಪ್ತಾಸ್ ಆಯುರ್ವೇದ’ ದ ಸಾಮಾಜಿಕ ಜಾಲತಾಣಗಳನ್ನು ಹಿಂಬಾಲಿಸಿ ಅಥವಾ ಹತ್ತಿರದಲ್ಲಿರುವ ಆಯುರ್ವೇದ ಚಿಕಿತ್ಸಾ ಪದ್ಧತಿ ಅನುಸರಿಸುವ ವೈದ್ಯರನ್ನು ಭೇಟಿ ಮಾಡಿ.

ನೀವು ನೂರು ಜನರನ್ನು ಆನ್ಲೈನ್ ವೇದಿಕೆಗಳಲ್ಲಿ ಸೇರಿಸಿದರೆ ಆಪ್ತಾಸ್ ತಂಡದ ನುರಿತ ವೈದ್ಯರು ಧೈರ್ಯ ತುಂಬಲು ಹಾಗೂ ಹಿತಕರ ಮಾಹಿತಿ ಒದಗಿಸಲು ಸಿದ್ಧರಿದ್ದಾರೆ. ನಮ್ಮ ಸೇವೆಯ ಸದ್ಬಳಕೆ ಮಾಡಿಕೊಳ್ಳಿ.

ಕಾರ್ಯಕ್ರಮ ಆಯೋಜನೆಗೆ ಸಂಪರ್ಕಿಸಿ-8762242151


  • ಶರದ್ ಕುಮಾರ್ ಎಂ – ಸಹಾಯಕ ಪ್ರಾಧ್ಯಾಪಕ, ಸಂಹಿತ ಸಿದ್ದಾಂತ ವಿಭಾಗ, ಸಿಂದಗಿ ಶಾಂತವೀರೇಶ್ವರ ಆಯುರ್ವೇದ ಮಹಾವಿದ್ಯಾಲಯ, ಹಾವೇರಿ.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading