ಮರ್ಸಿಡಿಸ್ ಅವನನ್ನ ನಂಬಿದ ಹಾಗೆ, ಸಂಪೂರ್ಣವಾಗಿ, ನೈಜವಾಗಿ, ಯಾವ ಅಭಿಮಾನಗಳಿಲ್ಲದೆ. ತನ್ನ ಪರ್ಸಿನಲ್ಲಿ ಒಂದೇ ಒಂದು ಬಿಡಿಗಾಸು ಇಲ್ಲದ ದಿನಗಳಲ್ಲಿ, ತಾನು ಒಂದೇ ಒಂದಕ್ಷರವನ್ನು ಓದಿರದ ಆ ಕಾದಂಬರಿಯನ್ನು ಜೀವಂತವಾಗಿರಿಸಲು ತನ್ನ ಹೇರ್ ಡ್ರೈಯರ್ ಸಹ ಮಾರಿದ್ದಳು. ದೀಪಾಜಿ ಅವರು ಕನ್ನಡಕ್ಕೆ ಅನುವಾದಿಸಿರು ಈ ಲೇಖನವನ್ನು ತಪ್ಪದೆ ಮುಂದೆ ಓದಿ…
490 ಪುಟದ ಕಟ್ಟೊಂದನ್ನು ಹಿಡಿದುಕೊಂಡು ಅವರಿಬ್ಬರು ಪೋಸ್ಟಾಫೀಸಿನ ಕೌಂಟರಿನ ಎದುರಿಗೆ ನಿಂತಿದ್ದರು. 18 ತಿಂಗಳು ಕೂತು ಬರೆದದ್ದು, ಸಂಸಾರ $ 12000 ಡಾಲರ್ ಸಾಲದಲ್ಲಿತ್ತು. ಅವನು ನಡೆಯುತ್ತಿದ್ದ ದಾರಿಯಿಂದ ಹಿಂದಿರುಗಿ ನೋಡಿರಲೇ ಇಲ್ಲ.
ಕೌಂಟರಿನೊಳಗೆ ಕುಳಿತ ಕ್ಲರ್ಕು ಆ 490 ಪುಟದ ಪ್ಯಾಕನ್ನು ತೂಕ ಮಾಡಿದ. “Eighty two pesos” ಎಂದ. ಇವರ ಬಳಿ 50 pesos ಇದ್ದವು. ಗಾರ್ಸಿಯಾ ಮಾರ್ಕ್ವೇಸನು ತನ್ನ ಹೆಂಡತಿ ಮರ್ಸಿಡಿಸಳ ಪರ್ಸನ್ನು ತಡಕಾಡುತ್ತಿರುವುದನ್ನ ಗಮನಿಸಿದ.
ಪೋಸ್ಟ್ ಆಫೀಸ್ ನತ್ತ ಕಾಯುತ್ತಿದ್ದ. ಆ ಪರ್ಸಿನೊಳಗೆ ಮತ್ತೇನೂ ಉಳಿದಿರಲಿಲ್ಲ. ಗಾರ್ಸಿಯಾ ಆ ಪ್ಯಾಕಿನ ಕೆಲವು ಹಾಳೆಗಳನ್ನು ಬೇನಕ್ ತುಂಡುಗಳ ಹಾಗೆ ಕತ್ತರಿಸಿ ಕೊಡಲು ಹೇಳಿದ. ‘ಈ ಹಣದಲ್ಲಿ ಅಂಚೆ ವೆಚ್ಚಕ್ಕೆ ಸರಿ ಹೊಂದುವಷ್ಟು ಹಾಳೆಗಳನ್ನು ಕಿತ್ತುಬಿಡಿ ಸರ್,’ ಎಂದನು ಮಾರ್ಕ್ವೇಸ್ ಮೆಲ್ಲನೆ.ಅರ್ಧ ಹಸ್ತಪ್ರತಿ ಮಾತ್ರ ಅವರು ಬ್ಯುನೋಸ್ ಏರ್ಸ್ ಗೆ ಕಳಿಸಿ ಮನೆಕಡೆ ಹೊರಟರು. ಮರ್ಸಿಡಿಸ್ ಮನೆಯಲ್ಲಿ ಉಳಿದ ಒಂದು ಹೀಟರ್, ಒಂದು ಬ್ಲೆಂಡರ್, ಮತ್ತು ಆಕೆಯ ಒಂದು ಹೇರ್ ಡ್ರೈಯರ್ ಕಂಡಳು.
ಈ ಹದಿನೆಂಟು ತಿಂಗಳಲ್ಲಿ ಮಾರದೇ ಉಳಿದ, ಸಾಲಗಾರರಿಗೆ ತಲುಪಿಸದೆ ಉಳಿಸಿಕೊಂಡ, ಬದುಕಿನ ಕೊನೆಯ ಕಂಫರ್ಟಗಾಗಿ ಉಳಿಸಿಕೊಂಡ ಕೊನೆಯ ವಸ್ತುಗಳಾಗಿದ್ದವು ಇವಿಷ್ಟು. ಜೊತೆಗೆ ತನ್ನ ಸಂಗಾತಿಯ ಚಿತ್ತ ಇತ್ತ ತಿರುಗದಂತೆ ಕಾದಿದ್ದಳು ಆತನ ಏಕಾಂತವನ್ನ. ಆತ ಬರೆಯುತ್ತಿದ್ದ ಕಾದಂಬರಿಯ ಒಂದೇ ಒಂದು ಶಬ್ದವನ್ನು ಓದದೇ ಉಳಿಸಿಕೊಂಡಿದ್ದ ಕೊನೆಯ ಮೂರು ವಸ್ತುಗಳನ್ನು ಮಾರಿಬಿಟ್ಟಳು. ಮತ್ತೆ ಅಂಚೆ ಕಚೇರಿ ತಲುಪಿ ಉಳಿದ ಹಸ್ತಪ್ರತಿ ಹಾಳೆಗಳನ್ನು ಅಂಚೆ ಮಾಡಿಬಿಟ್ಟಿರು.
ಖಾಲಿ ಕಿಸೆಯಲ್ಲಿ ಆ ಕಚೇರಿಯಿಂದ ಆಚೆ ಬಂದು ಮ್ಯಾಕ್ಸಿಕೋ ಸಿಟಿಯ ರಸ್ತೆಗಳಲ್ಲಿ ನಡೆಯುತ್ತಾ ಮರ್ಸಿಡಿಸ್ ಸಂಗಾತಿಯ ಕಡೆಗೆ ತಿರುಗಿದಳು.
” ಈಗ ಅದೆಲ್ಲವು ಹೋಯಿತು”
” ಆ ಕಾದಂಬರಿ ಕೊನೆಗೆ ಚೆನ್ನಾಗಿರಲಿಲ್ಲವಾ?” ಎಂದಳು.
ಕೊನೆಗದು ಕೆಟ್ಟದ್ದೇನಾಗಿರಲಿಲ್ಲ.

ಅವರ ಕತೆ ಈ ಮುಂಚೆಯೇ ಆರಂಭವಾಗಿತ್ತು. ಕೊಲಂಬಿಯಾದ ಸಕ್ರನ ನೃತ್ಯ ಶಾಲೆಯಲ್ಲಿ ಅವರ ಭೇಟಿಗೆ ವೇದಿಕೆ ಸಿದ್ಧವಾಗಿಸಿತ್ತು. ಬದುಕು ಗಾರ್ಸಿಯಾ ಮಾರ್ಕ್ವೇಸ್ ಒಬ್ಬ ತರುಣನಾಗಿದ್ದ ಮತ್ತು ಮರ್ಸಿಡಿಸ್ ಎಳೆ ಹುಡುಗಿಯಾಗಿದ್ದಳು. ಒಬ್ಬ ಫಾರ್ಮಸಿಸ್ಟನ ಮಗಳಾಗಿದ್ದಳು. ನೃತ್ಯ ಶಾಲೆಯ ಒಂದು ಕೋಣೆಯಲ್ಲಿ ನೃತ್ಯ ಮಾಡುವುದರಲ್ಲಿ ತಲ್ಲೀಣಳಾಗಿದ್ದಳು. ಯಾವೊಬ್ಬ ಕೊಲಂಬಿಯಾ ಹುಡಗನು ಆಗಷ್ಟೆ ಕಂಡ ಯುವತಿಗೆ ಹೇಳಲಾಗದ ಮಾತೊಂದನ್ನ ಮಾರ್ಕ್ವೇಸ್ ಮರ್ಸಿಡಿಸಳಿಗೆ ಹೇಳಿದ್ದ.
“ನಾನು ಇಷ್ಟು ಕಾಲ ಬರೆದದ್ದೆಲ್ಲವು ನಿನಗೆ ಎಂದು ಅನಿಸುತ್ತಿದೆ. ನಾ ಬರೆದದ್ದೆಲ್ಲವನ್ನ ನಿನಗೆ ಅರ್ಪಿಸುವೆ ನನ್ನ ಮದುವೆಯಾಗು” ಎಂದ. ಆಕೆ ತುಸುವು ವಿಚಲಿತಳಾಗದೆ ಅವನೆಡೆಗೆ ನೋಡಿದಳು.
“ನನಗೆ ಒಪ್ಪಿಗೆ ಇದೆ” ಎಂದಳು.
” ಆದರೆ, ನೀ ನನಗೆ ಅವಕಾಶ ನೀಡಿದರೆ ಮೊದಲು ನನ್ನ ವಿದ್ಯಾಭ್ಯಾಸ ಮುಗಿಸಿಕೊಂಡು ಬಿಡ್ತಿನಿ” ಅಂತಲೂ ಹೇಳಿದಳು. ಸ್ಕಾಲರ್ಶಿಪ್ ಸಹಾಯದಿಂದ ಕಲಿಯುತ್ತಿದ್ದ, ಕರಾವಳಿಯ ಬಡ ಅರಾಕಾಟಾಕಾ ನಗರದವನಾಗಿದ್ದ ಅವನು.
ಅವಳು ಶಾಂತವಾದ, ಸಂಯಮದ ಮತ್ತು ಅವನ ಪ್ರೌಢ ಮಾತುಗಳಿಂದ ಸ್ವಲ್ಪವೂ ಇಂಪ್ರೆಸ್ ಆಗದ ಮೆಚ್ಯೂರ್ಡ್ ಹುಡುಗಿಯಾಗಿದ್ದಳು. ಅವರು ಆಗಾಗ ಭೇಟಿಯಾಗುತ್ತಿದ್ದರು. ವರುಷಗಳು ಉರುಳಿದವು. ಈ ನಡುವೆ ಆತ ತನ್ನ ಕಾನೂನು ವಿದ್ಯಾಭ್ಯಾಸ ಅರ್ಧಕ್ಕೆ ನಿಲ್ಲಿಸಿದ್ದ. ಜರ್ನಲಿಸ್ಟ್ ಆದ. ಯುರೋಪಿಗೆ ಹೋದ. ಜನ ಓದದ ಕತೆಗಳನ್ನ ಬರೆದು ಪ್ರಕಟಿಸಿದ.
1958ರಲ್ಲಿ ಬರಂಕ್ವಿಲ್ಲಾಗೆ ಮರಳಿ ಬಂದು ಮತ್ತೆ ಆಕೆಯನ್ನ ಪ್ರಶ್ನಿಸಿದ. ಆಗಲೂ ಆಕೆ ” Yes” ಎಂದಳು.
21 ಮಾರ್ಚ್, 1958 ರಲ್ಲಿ ಮುಂಜಾನೆ ಹನ್ನೊಂದು ಗಂಟೆಗೆ ದಾಂಪತ್ಯವೆಂಬ ದಾರಿಯಲ್ಲಿ ನಡೆಯ ತೊಡಗಿದರು. ಮಾರ್ಕ್ವೇಸ್ ಸಣ್ಣವನಿದ್ದಾಗ, ಸರಿಯಾಗಿ ಹನ್ನೊಂದು ಗಂಟೆಗೆ ಹಳದಿ ರೈಲೊಂದು ಅರಾಕಾಟಾಕಾ ಕಡೆ ಚಲಿಸುತ್ತಿತ್ತು . ಇಬ್ಬರು ಗಂಡು ಮಕ್ಕಳು, ನಿರಂತರ ಬೆಂಬಿಡದ ಬಡತನ, ಕೆಲವು ಘಟನೆಗಳ ತರುವಾಯ 1961 ರಲ್ಲಿ ಬದುಕು ಅವರನ್ನು ಮೆಕ್ಸಿಕೋ ಸಿಟಿಯತ್ತ ಮುಖ ಮಾಡುವಂತೆ ಪ್ರೇರೆಪಿಸಿತು. ಜರ್ನಲಿಸ್ಮನಿಂದ ಬಂದ ಹಣದಲ್ಲಿ ಬದುಕು ಹೇಗೊ ನಡೆಯುತ್ತಿತ್ತು. ಸಾಹಿತ್ಯಿಕ ಬರವಣಗೆಯಿಂದ ನಯಾ ಪೈಸೆ ಲಾಭವಿರಲಿಲ್ಲ.
1965 ಜನೆವರಿಯಲ್ಲಿ ಕುಟುಂಬಸಹಿತರಾಗಿ ಅಕಾಪುಲ್ಕೊ ಕಡೆ ಪ್ರಾಯಣಿಸುತ್ತಿದ್ದಾಗ ಆಕಸ್ಮಿಕವಾಗಿ ಏನೋ ಹೊಳೆದಂತಾಗಿ ಒಮ್ಮೆಲೆ “ಯಾಕಂತ ಗೊತ್ತಿಲ್ಲ, ನನಗೆ ಪುಸ್ತಕ ಬರೆಯುವುದು ಹೇಗೆಂದು ತಿಳಿಯಿತು” ಎಂದ ಮಾರ್ಕ್ವೇಸ್.
” ಮೊದಲ ಅಧ್ಯಾಯದ ಪ್ರತಿ ಪದವನ್ನು ಈ ಕೂಡಲೇ ಟೈಪಿಸ್ಟ್ ಗೆ ಹೇಳಿ ಬರೆಸ ಬಲ್ಲೆ ” ಎಂದ. ತನ್ನ ಕಾರನ್ನು ಮನೆ ಕಡೆಗೆ ತಿರುಗಿಸಿದ. ಮರ್ಸಿಡಿಸ್ ವಾದಿಸಲಿಲ್ಲ. ರಜಾ ದಿನಗಳ ಪ್ರಯಾಣವನ್ನ ರದ್ದುಗೊಳಿಸಿದಳು. ಬರುವ ದಿನಗಳಿಗಾಗಿ ತಯಾರಾದಳು. ನಂತರದ 18 ತಿಂಗಳು ಗಾರ್ಸಿಯಾ ಮಾರ್ಕ್ವೇಸ್ ಹೋಗಿ ಬಿಟ್ಟಿದ್ದ. ತನು ಅಲ್ಲೆ ಇತ್ತಾದರು ಮನಸ್ಸು ಮತ್ತೆಲ್ಲೊ, ಕತೆಯ ಒಳಗಿನ ಕುಟುಂಬ, ಕಾಲ್ಪನಿಕ ಊರೊಳಗಿನ ಬುಯಂಡಿಯಾ ಕುಟುಂಬದೊಳಗೆ. ತನ್ನ ಅಜ್ಜಿಯ ದನಿಯಲ್ಲಿ ಬರೆದ ಕತೆಯೊಳಗೆ. ನಿಜಕ್ಕೂ ಅವಸರವಿಲ್ಲದೆ, ಅತ್ಯಂತ ಅದ್ಬುತವಾದ ವಿಷಯಗಳನ್ನು ಸರಳವಾಗಿ ಸ್ಪಷ್ಟವಾಗಿ ನಿರೂಪಿಸಿದ್ದ.

ಚೀಫ್ ಆಫ್ ಸ್ಟಾಫ್ ನಲ್ಲಿ ಅವರ ಮಗ ಹೇಳಿದಂತೆ ಮರ್ಸಿಡಿಸ್ ಪ್ರತಿಯೊಂದನ್ನು ನಿಭಾಯಿಸಿದ್ದಳು. ಮನೆಯ ಓನರ್ ಗೆ ಕೊಡಬೇಕಿದ್ದ ಬಾಡಿಗೆ ಕಂತುಗಳು, ಸಾಲ ಕೊಟ್ಟವರನ್ನು ಸಮಾಧಾನಿಸಿ ಸಂಭಾಳಿಸುವುದು, ಕೇಳಿಕೊಂಡು ಬರುತ್ತಿದ್ದ ಗೆಳೆಯರನ್ನ ಮಾತಾನಾಡಿಸಿ ಮರಳಿ ಕಳಿಸಿಬಿಡುವುದು, ಬೆಳೆಯುವ ಮಕ್ಕಳನ್ನ ನೋಡಿಕೊಳ್ಳುವುದು. ಅವನ ಏಕಾಂತಕ್ಕೆ ಭಂಗಬಾರದಂತೆ ನಿಶ್ಯಬ್ಧತೆ ಕಾಯುವುದು. ಜಗತ್ತು ಮತ್ತು ಆತನ ನಡುವೆ ಅವಳು ಗೋಡೆಯಾಗಿ ಅಡ್ಡ ನಿಂತಿದ್ದಳು. ನಿತ್ಯದ ಜಗತ್ತಿನ ಜಂಜಾಟಗಳು ಅವನನ್ನ ತಲುಪದಂತೆ ಕಾಯ್ದಳು.
ಕಡೆಗೆ ಅವನು 1966 ರಲ್ಲಿ ಹೊರಬಂದ. ದಣಿದಿದ್ದ, ಬಡಕಲಾಗಿದ್ದ, ಧೂಮದ ಹೊಗೆ ಅವನೊಳಗೆ ದಟ್ಟವಾಗಿ ಆವರಿಸಿತ್ತು.
” ನೀ ನಿಜವಾಗಿಯೂ ಬರೆದು ಮುಗಿಸಿದೆಯಾ?” ಎಂದಳು ಮರ್ಸಿಡಿಸ್. “ನಾವು $12000 ಡಾಲರ್ ಪಡಿತಿವಾ?” ಹೌದು, ಅವನು ನಿಜಕ್ಕೂ ಬರೆದು ಮುಗಿಸಿದ್ದ. ಅದರ ನಂತರವಷ್ಟೆ ಅಂಚೆ ಕಚೇರಿಗೆ ಬಂದಿದ್ದರು ಮತ್ತು 82 ಪೆಸೊಸ್ ಹಾಗೂ ಒಂದು ಹೇರ್ ಡ್ರೈಯರ್.
” ನೂರು ವರ್ಷಗಳ ಏಕಾಂತ” 1967ರ ಜೂನಲ್ಲಿ ಬ್ಯೂನೋಸ್ ಏರ್ಸ್ ಅವರಿಂದ ಪ್ರಕಟಿಸಲಾಯಿತು. ಪ್ರಕಾಶಕರು ಅಂಜುತ್ತಲೇ 8000 ಪ್ರತಿಗಳನ್ನು ಪ್ರಕಟಿಸಿದ್ದರು. ಗಾರ್ಸಿಯಾ ಮಾರ್ಕ್ವೇಸ್ ಅವರ ಹಳೆಯ ಕತೆಗಳು 700 ಪ್ರತಿಗಳಿಗಿಂತ ಹೆಚ್ಚು ಮಾರಾಟವಾಗಿರಲಿಲ್ಲ. 8000 ಪ್ರತಿಗಳು ವಾರದೊಳಗೆ ಮಾರಾಟವಾಗಿ ಬಿಟ್ಟವು. ತಿಂಗಳೊಳಗಾಗಿ ಪುಸ್ತಕವನ್ನ ಡಾನ್ ಕ್ವೆಕ್ಸೊಟ್ ನೊಂದಿಗೆ ಹೋಲಿಸಲಾಯಿತು.
ವರ್ಷದೊಳಗಾಗಿ ಡಜನ್ನಿಗೂ ಅಧಿಕ ಭಾಷೆಗಳಿಗೆ ಅನುವಾದಗೊಂಡಿತು. ಜನತ್ತಿನ ಮಿಲಿಯನ್ನುಗಟ್ಟಲೇ ಓದುಗರಿಂದ ಪ್ರಶಂಸೆ ಪಡೆಯಿತು.
*
1982 ರಲ್ಲಿ ಗಾರ್ಸಿಯಾ ಮಾರ್ಕ್ವೇಸರಿಗೆ ಸಾಹಿತ್ಯಕ್ಕಾಗಿ ನೋಬೆಲ್ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಬದುಕಿನ ಉಳಿದ ದಿನಗಳಲ್ಲಿ ಅವರು ತನ್ನ ಮತ್ತು ಅವಳ ಕುರಿತು ಅವವೇ ಮಾತುಗಳನ್ನು ಹೇಳುತ್ತಿದ್ದರು.
” ಮರ್ಸಿಡಿಸ್ ನನ್ನೆಲ್ಲಾ ಪುಸ್ತಕಗಳಲ್ಲಿ ವ್ಯಾಪಿಸಿಕೊಂಡಿದ್ದಾಳೆ. ಅಲ್ಲೆಲ್ಲ ನೀವವಳನ್ನ ಕಾಣಬಹುದು”. ಒಮ್ಮೆ ಸಂದರ್ಶಕ ಕೇಳಿದ ” ನಿಮ್ಮ ಜೀವನದಲ್ಲಿ ಭೇಟಿಯಾದ ಅತ್ಯಂತ ಆಸಕ್ತಿಕರ ವ್ಯಕ್ತಿ ಯಾರು!?” ಎಂದು. ಒಂದು ಕ್ಷಣವೂ ಯೋಚಿಸದೆ ಮಾರ್ಕ್ವೇಸ್ ಉತ್ತರಿಸಿದ್ದರು “ನನ್ನ ಮಡದಿ”.
*
56 ವರ್ಷ ಅವರು ಕೂಡಿ ಬಾಳಿದರು. ಆತನ ಮರಣದ ತನಕ- 2014 ಎಪ್ರಿಲ್. ಮರ್ಸಿಡಿಸ್ ಆರು ವರ್ಷಗಳ ಬಳಿಕ 2020 ರಲ್ಲಿ ಮಡಿದಳು. ತನ್ನ ಎಂಬತ್ತೇಳರಲ್ಲಿ. “ನೂರು ವರ್ಷಗಳ ಏಕಾಂತ” ಪುಸ್ತಕದ ಮೊದಲ ವಾಕ್ಯ ಸಾಹಿತ್ಯದಲ್ಲಿ ಇತಿಹಾಸವೇ ಸೃಜಿಸುವಂತೆ ಆರಂಭವಾಗುತ್ತದೆ.
ಬಹಳಷ್ಟು ವರ್ಷಗಳ ನಂತರ; ಆತ ಗುಂಡಿನ ಪಡೆಯನ್ನ ಸೆಣಸಲು ಎದುರು ನಿಂತಾಗ, ಕೊಲೊನೆಲ್ ಆರಿಲಿಯಾನೋ ಬುಯೆಂಡಿಯಾ ತನ್ನ ತಂದೆ ಮೊದಲ ಸಲ ಹಿಮವನ್ನು ನೋಡಲು ಕರೆದುಕೊಂಡು ಹೋದ ಆ ಹಳೆಯ ಮಧ್ಯಾಹ್ನವನ್ನು ನೆನಪಿಸಿಕೊಳ್ಳುತ್ತಲಿದ್ದ. ಅದ್ಬುತವಾದ ಘಟನೆಗಳನ್ನು ಮಾಯೆಯಂತೆ ಹೇಳುವ ಶೈಲಿ ಅದು. ಆತನ ಅಜ್ಜಿ ಕತೆ ಹೇಳುವ ರೀತಿಯಂತೆಯೇ.
ಮರ್ಸಿಡಿಸ್ ಅವನನ್ನ ನಂಬಿದ ಹಾಗೆ, ಸಂಪೂರ್ಣವಾಗಿ, ನೈಜವಾಗಿ, ಯಾವ ಅಭಿಮಾನಗಳಿಲ್ಲದೆ. ತನ್ನ ಪರ್ಸಿನಲ್ಲಿ ಒಂದೇ ಒಂದು ಬಿಡಿಗಾಸು ಇಲ್ಲದ ದಿನಗಳಲ್ಲಿ, ತಾನು ಒಂದೇ ಒಂದಕ್ಷರವನ್ನು ಓದಿರದ ಆ ಕಾದಂಬರಿಯನ್ನು ಜೀವಂತವಾಗಿರಿಸಲು ತನ್ನ ಹೇರ್ ಡ್ರೈಯರ್ ಸಹ ಮಾರಿದ್ದಳು. ಆ ಹೇರ್ ಡ್ರೈಯರ್ ಅಂಚೆ ವೆಚ್ಚಕ್ಕಾಗಿತ್ತು. ಆಕೆಯ ನಂಬಿಕೆ ಮಿಕ್ಕೆಲ್ಲವನ್ನು ತಂದುಕೊಟ್ಟಿತ್ತು.
ಮೂಲ : ಇಂಗ್ಲಿಷ್
- ಕನ್ನಡಕ್ಕೆ : ದೀಪಾ ಜಿ
