ಸಾಸಿವೆಗಿಂತ ಗಾತ್ರದಲ್ಲಿ ಸ್ವಲ್ಪ ದೊಡ್ಡದಿರುವ ಆಳವಿಯ ಬೀಜಗಳನ್ನು ರಾತ್ರಿ ನೀರಿನಲ್ಲಿ ನೆನೆಸಿಟ್ಟು ಬೆಳಗ್ಗೆ ಹಾಲಿನಲ್ಲಿ ಬೇಯಿಸಿ, ಬೆಲ್ಲದ ಜೊತೆಯಲ್ಲಿ ಗರ್ಭಿಣಿಯರಿಗೆ ಕುಡಿಯಲು ಕೊಡಬೇಕು. ಇದನ್ನು ಕುಡಿಯುವುದರಿಂದ ತಂಪಾಗಿ ನಿದ್ದೆ ಬರುವುದಲ್ಲದೆ, ಹೊಟ್ಟೆ ತುಂಬಲು ಗಟ್ಟಿ ಆಹಾರ ಸೇವನೆ ಮಾಡಿದಂತೆಯೂ ಆಗುತ್ತದೆ. ಅಳವಿಯ ಕುರಿತು ಆತ್ಮಾ ಜಿ ಎಸ್ ಅವರು ಬರೆದಿರುವ ಆರೋಗ್ಯ ಮಾಹಿತಿಯನ್ನು ತಪ್ಪದೆ ಮುಂದೆ ಓದಿ….
“ತಾಯ್ತನ” ಹೆಣ್ಣಿಗೊಂದು ವಿಶಿಷ್ಟ ಅನುಭೂತಿ. ಹೆಣ್ಣಿನ ಬದುಕು ಪರಿಪೂರ್ಣ ಅನ್ನಿಸುವುದು ಆಕೆ ತಾಯಿಯಾದ ಘಳಿಗೆಯಿಂದಲೇ.ಸುಲಭಕ್ಕೆ ದೊರೆಯದ ಈ ಅನುಭೂತಿಗೆ, ಆಕೆ ಪಟ್ಟ ಪಡಿಪಾಟಲುಗಳು ಲೆಕ್ಕವಿಲ್ಲದಷ್ಟು.ತನ್ನೊಡಲು ತುಂಬಿದ ಅನುಭವಕ್ಕೆ ಬಂದ ದಿನದಿಂದ ,ಮಡಿಲಿಗೆ ಮಗು ಬರುವವರೆಗೂ ಹಲವಾರು ಏರಿಳಿತದ ಬದುಕು ಅಕೆಯದ್ದು.ಒಡಲಲ್ಲಿ ಮಗುವಿರುವಾಗ ಒಂದು ರೀತಿ ಕಾಳಜಿ ವಹಿಸಿದರೆ ಮಗು ಮಡಿಲಿಗೆ ಬಂದಿದ್ದೆ ಆಕೆಯ ದಿನಚರಿ, ಆಹಾರ, ವಿಹಾರ ಎಲ್ಲವೂ ಬದಲಾಗುತ್ತದೆ.ಕೆಲವೊಂದು ಆಹಾರಗಳು ಆಕೆಗೆ ವರ್ಜ್ಯವಾದರೆ ಇನ್ನೂ ಕೆಲವು ಆಹಾರಗಳು ಇಷ್ಟವೋ ಕಷ್ಟವೋ ಆಕೆ ಒಗ್ಗಿಕೊಳ್ಳಲೇ ಬೇಕು. ಹಾಗಾಗಿಯೇ ಮನೆಯಲ್ಲಿ ಬಾಣಂತಿ ಇದ್ದರೆ, ಹೊತ್ತು ಮೂಡು ವುದರಿಂದ ಹಿಡಿದು ಹೊತ್ತು ಮುಳುಗುವವರೆಗೂ ಮುಗಿಯದ ಕೆಲಸ. ಮನೆಯ ಹಿರಿಯ ಹೆಣ್ಣುಮಗಳು ಅಥವಾ ತಾಯಿ ಆಕೆಯ ಆಹಾರ ತಯಾರಿಯಲ್ಲಿ ಸದಾ ಟೊಂಕ ಕಟ್ಟಿ ನಿಲ್ಲುವುದೇ ಸರಿ.ಬಾಣಂತಿಯ ಆರೋಗ್ಯವೂ ಮಗುವಿನ ಆರೋಗ್ಯಕ್ಕೂ ಕಾರಣವಾದ್ದರಿಂದ ಕಾಳಜಿವಹಿಸಲೇಬೇಕು.ಸುಮಾರು ಮೂರು ತಿಂಗಳವರೆಗೆ ಬಾಣಂತಿಗೆಂದೆ ಕೆಲವು ಕಟ್ಟುನಿಟ್ಟಿನ ಆಹಾರ ಕ್ರಮವನ್ನು ಅನುಸರಿಸುತ್ತಾರೆ.ಕೆಲವು ಆಹಾರ ಎಲ್ಲಾ ಕಡೆಯಲ್ಲಿ ಏಕರೂಪದಲ್ಲಿ ಬಳಕೆಯಾದರೆ ಇನ್ನೂ ಕೆಲವು ಪ್ರಾಂತೀಯವಾಗಿ ಬದಲಾವಣೆಯಿದೆ. ಬಾಣಂತಿಯರಿಗೆ ಕೊಡುವ ಇಂತಹ ಆಹಾರದ ಪಟ್ಟಿಯಲ್ಲಿ “ಆಳವಿ ” ಸಹಾ ಸೇರುತ್ತದೆ.
ನೋಡಲು ಸಾಸಿವೆಗಿಂತ ಗಾತ್ರದಲ್ಲಿ ಸ್ವಲ್ಪ ದೊಡ್ಡದು ಅನ್ನಿಸುವ ಕಂದು ಬಣ್ಣದ ಈ ಪುಟ್ಟ ಪುಟ್ಟ ಏಕದಳ ಧಾನ್ಯದ ಶಕ್ತಿ ಅಪಾರ. ಹಳ್ಳಿಕಡೆಯಲ್ಲಿ ಕುರ್ತಿಕೆ ಎಂದು ಕರೆದರೆ ಇದರ ಆಕರ್ಷಕ ಬಣ್ಣದಿಂದಲೇ ಇರಬಹುದೋ ಏನೋ ಚಂದ್ರಿಕಾ ಎಂದೇ ಪ್ರತೀತಿ ಸಂಸ್ಕೃತದಲ್ಲಿ. ಕಬ್ಬಿಣ, ಫೈಬರ್, ವಿಟಮಿನ್ ಎ.ಸಿ. ಇ ಹೆಚ್ಚು ಹೊಂದಿರುವ ಈ ಕಾಳುಗಳಲ್ಲಿ ಶೇ 30 ರಷ್ಟು ಉತ್ತಮ ಗುಣಮಟ್ಟದ ಒಮೆಗಾ 3 ರ ಅಂಶವಿದೆ. ನಾರಿನಂಶ ಇರುವ ಆಹಾರವಾದ್ದರಿಂದ ಇದು ಪಚನಕ್ರಿಯೆಗೂ ಸಹಕಾರಿ.
ಫೋಟೋ ಕೃಪೆ : google (ಆಳವಿ ಬೀಜ)
* ಕೆಲವು ಮಹಿಳೆಯರಿಗೆ ಋತುಚಕ್ರದ ಸಮಯದಲ್ಲಿ ಸದಾ ಒಂದಿಲ್ಲೊಂದು ಸಮಸ್ಯೆ ಇದ್ದೇ ಇರುತ್ತದೆ. ಆ ದಿನಗಳಲ್ಲಿ ಹೆಚ್ಚಾಗಿ ಅನುಭವಿಸುವ ಸೊಂಟ ನೋವು ಕಾಲು ನೋವುಗಳಿಗೆ ಆಳವಿಯ ಸೇವನೆ ರಾಮಬಾಣ ದಂತೆ ಸಹಕಾರಿ.
* ನಾರಿನ ಅಂಶ ಹೆಚ್ಚಾಗಿ ಇರುವುದರಿಂದ ಪಚನಕ್ರಿಯೆ ಗೆ ಸಹಕಾರಿಯಾಗಿ, ಮಲಬದ್ಧತೆಯಿಂದ ಬಳಲುವವರು ಇದನ್ನು ಸೇವಿಸಿದರೆ ಉತ್ತಮ.
* ಮೂಳೆಯ ಮುರಿತವಾದಲ್ಲಿ ಇದನ್ನು ಸೇವಿಸಲು ನಾಟಿ ವೈದ್ಯರು ಸಲಹೆ ಮಾಡುತ್ತಾರೆ.ಇದು ಮೂಳೆಯನ್ನು ಗಟ್ಟಿಗೊಳಿಸುವುದು ಅಲ್ಲದೆ ದೇಹಕ್ಕೆ ಶಕ್ತಿಯನ್ನು ನೀಡುತ್ತದೆ.
* ಮಗು ಜನನವಾದ ಹದಿನೈದು ದಿನಗಳ ನಂತರ ಇದನ್ನು ಸೇವಿಸಲು ಬಾಣಂತಿಯರಿಗೆ ನೀಡುತ್ತಾರೆ.ಪುಟ್ಟ ಮಗುವನ್ನು ಎತ್ತಾಯಾಡಿಸಲು ತಾಯಿಯ ಸೊಂಟ ಗಟ್ಟಿ ಇರಲೇ ಬೇಕು. ಇದರ ಸೇವನೆಯಿಂದ ನಡು ಗಟ್ಟಿಯಾಗುವುದಲ್ಲದೇ ಎದೆಹಾಲು ವೃದ್ದಿಯಾಗಲೂ ಸಹಕಾರಿ.
ಫೋಟೋ ಕೃಪೆ : google (ಆಳವಿ ಗಿಡ )
ಬಳಸಲು ಹೀಗೆ ಮಾಡಿ :
ಬಾಣಂತಿ ಎಂದ ಮೇಲೆ ಆಕೆಯ ಆಹಾರದ ಹೆಚ್ಚಿನ ಪಾಲು ಹಾಲಿಗೆ ಮೀಸಲು. ಈ ಆಳವಿಯ ಬೀಜಗಳನ್ನು ರಾತ್ರಿ ನೀರಿನಲ್ಲಿ ನೆನೆಸಿಟ್ಟು ಬೆಳಗ್ಗೆ ಹಾಲಿನಲ್ಲಿ ಬೇಯಿಸಿ,ಬೆಲ್ಲದ ಜೊತೆಯಲ್ಲಿ ಕುಡಿಯಲು ಕೊಡಬೇಕು.ಬೆಳಿಗ್ಗೆ ಎದ್ದ ತಕ್ಷಣ ಕುಡಿದು ಮಲಗಿದರೆ ತಂಪಾಗಿ ನಿದ್ದೆಯೂ ಬರುವುದು ಹಾಗೂ ಹೊಟ್ಟೆ ತುಂಬಲು ಗಟ್ಟಿ ಆಹಾರ ಸೇವನೆ ಮಾಡಿದಂತೆಯೂ ಆಗುತ್ತದೆ. ಸುಮಾರು ಮೂರು ತಿಂಗಳವರೆಗೆ ಇದನ್ನು ನಿತ್ಯವೂ ಸೇವಿಸಲು ಕೊಡುತ್ತಾರೆ.ಅದರ ನಂತರ ಶಕ್ತಿವರ್ಧಕ ಎಂದೇ ಕೊಡುವ “ಅಂಟಿನ ಉಂಡೆಯಲ್ಲಿ ” ಹಲವಾರು ಒಣ ಹಣ್ಣುಗಳು ಮತ್ತು ಅಂಟಿನ ಜೊತೆಯಲ್ಲಿಯೇ ಈ ಆಳವಿಗೂ ಪ್ರಮುಖ ಸ್ಥಾನ.
ಬಾಣಂತಿ ಮತ್ತು ಮಗುವಿನ ಆರೋಗ್ಯ ಕಾಪಾಡುವಲ್ಲಿ ಆಕೆ ಸೇವಿಸುವ ಆಹಾರ ಪ್ರಮುಖ ಪಾತ್ರ ವಹಿಸುತ್ತದೆ. ಈ ಮೂರು ತಿಂಗಳಲ್ಲಿ ಸೇವಿಸಿದ ಆಹಾರ ಆಕೆಯ ಜೀವಮಾನಕ್ಕೇ ಸಹಕಾರಿಯಾಗುತ್ತದೆ ಎಂದರೂ ತಪ್ಪಲ್ಲ. ಈಗಂತೂ ಸಹಜ ಹೆರಿಗೆಗಿಂತಲೂ ಶಸ್ತ್ರ ಚಿಕಿತ್ಸೆಯ ಮೂಲಕ ಹೆರಿಗೆಯಾಗುವುದೇ ಹೆಚ್ಚು. . ತಾಯಿಯಾದ ಸಂಭ್ರಮಕ್ಕೆ ಒತ್ತು ಕೊಡುವ ಹೆಣ್ಣು ಎಷ್ಟೋ ವೇಳೆ ಆಹಾರ ರುಚಿಸದು ಎಂದೇ ತಾಯಿಯ ಮಾತನ್ನು ನಿರ್ಲಕ್ಷಿಸಿ, ಸರಿಯಾದ ರೀತಿಯಲ್ಲಿ ಆರೈಕೆ ಮಾಡಿಕೊಳ್ಳದೆ ಹೋದಲ್ಲಿ ಮುಂದೆ ವ್ಯತಿರಕ್ತ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ.ಹಾಗಾಗಿ ಉತ್ತಮ ಆಹಾರ ಕ್ರಮ ಪಾಲಿಸಿದಲ್ಲಿ ಶಕ್ತಿ ಕುಂದಿದ ನಂತರ ಕಾಡುವ ಹಲವಾರು ನೋವುಗಳಿಂದ ಮುಕ್ತಿ ಪಡೆಯಲು ಸಾಧ್ಯ.ಉತ್ತರ ಕರ್ನಾಟಕದ ಮಂದಿ ಈ ಧಾನ್ಯವನ್ನು ಬಳಸುವಷ್ಟು ಬೇರೆ ಕಡೆಯವರು ಬಳಸದೇ ಹೋದರೂ ಈಗೀಗ ಅವರಿವರಿಂದ ತಿಳಿದು ಬಳಸುವಂತಾಗಿದೆ. ಪ್ರಾಂತೀಯವಾಗಿ ಆಹಾರದ ಪದ್ಧತಿ ಬೇರೆ ಬೇರೆ ಇದ್ದರೂ ಕುಟುಂಬದ ಹಿರಿಯರು ಮಾಡಿ ಕೊಡುವ ತಲೆತಲಾಂತರದ ಬಾಣಂತಿ ಆಹಾರದ ಜೊತೆಯಲ್ಲಿಯೇ ಇದನ್ನೂ ಸೇವಿಸಿದಲ್ಲಿ ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿರಲು ಸಾಧ್ಯ.
- ಆತ್ಮಾ ಜಿ ಎಸ್