ದೇಹ ರಚನೆ ಕೊಳವೆಯಾಕಾರದಂತಿರುವ ಶತಪದಿ, ಸಹಸ್ರಪದಿ ಹುಳುಗಳು ಮಿಲಿಯನ್ ವರ್ಷಗಳ ಹಿಂದಿನಿಂದಲೂ ಭೂಮಿಯ ಮೇಲಿವೆ. ಇವುಗಳಲ್ಲಿಯೇ 10,000 ಪ್ರಭೇದಗಳಿವೆ. ಸಹಸ್ರಪದಿ ಕುರಿತು ಉಪನ್ಯಾಸಕರಾದ ಸಿದ್ಧರಾಮ ಕೂಡ್ಲಿಗಿ ಅವರು ಕ್ಯಾಮೆರಾ ಕೈಗೆ ಹಿಡಿದು ಬೆನ್ನು ಹತ್ತಿ ಹೋದಾಗ ಫೋಟೋ ಹಾಗೂ ಕೆಲವು ಮಾಹಿತಿ ಸಿಕ್ಕಿತು ಅದನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಓದಿ….
ಮೊನ್ನೆ ಊರಿಗೆ ಹೊರಟಾಗ ರಸ್ತೆಯ ಪಕ್ಕದಲ್ಲಿಯೇ ಹುಲ್ಲು, ಎಲೆಗಳಿರುವ ಜಾಗೆಯಲ್ಲಿ ಗುಂಪು ಗುಂಪಾತಿ ಒತ್ತೊತ್ತಾಗಿ ಈ ಹುಳುಗಳು ಕಂಡವು. ನೂರಾರು ಸಂಖ್ಯೆಯಲ್ಲಿದ್ದ ಇವುಗಳು ಒಂದೆಡೆಯೇ ಗುಂಪಾಗಿ ಚಲಿಸುತ್ತಿದ್ದವು. ಎಲ್ಲವುಗಳಿಗೂ ಅಸಂಖ್ಯ ಕಾಲುಗಳು.
–
ಸಹಸ್ರಪದಿ ಎಂದೇ ಕರೆಯಲ್ಪಡುವ ಇವುಗಳ ದೇಹ ರಚನೆ ಕೊಳವೆಯಾಕಾರದಿದ್ದು, ಹೆಸರಿಟ್ಟಿರುವಂತೆ ಸಾವಿರ ಕಾಲುಗಳಿರುವುದಿಲ್ಲ. 700ಕ್ಕೂ ಮಿಕ್ಕು ಕಾಲುಗಳಿರುವುದಿಲ್ಲವಾದರೂ ಅಸಂಖ್ಯ ಕಾಲುಗಳು ಕಂಡುಬಂದಂತಿರುವುದರಿಂದ ಸಹಸ್ರಪದಿ ಎಂಬ ನಾಮಕರಣ ಆಗಿರಬಹುದು. ಜಗತ್ತಿನ ಎಲ್ಲೆಡೆ ಸಾಮಾನ್ಯವಾಗಿ ಕಂಡುಬರುವ ಇವುಗಳಲ್ಲಿಯೇ 10,000 ಪ್ರಭೇದಗಳಿವೆ.
–
ಮಳೆಗಾಲದಲ್ಲಿಯೇ ಹೆಚ್ಚು ಕಂಡುಬರುವ ಇವುಗಳಿಗೆ ತೇವಾಂಶ ಬೇಕು. ಮಳೆಗಾಲವನ್ನು ಹೊರತುಪಡಿಸಿ ಉಳಿದ ದಿನಗಳಲ್ಲಿ ಇವು ತೇವಾಂಶ ಇರುವ ಕಲ್ಲು ಬಂಡೆಯ ಕೆಳಗೋ, ಕೊಳೆತ ಎಲೆಗಳ ಕೆಳಗೋ ಸೇರಿಕೊಂಡಿರುತ್ತವೆ. ಕೊಳೆತ ಎಲೆಗಳು, ಸಸ್ಯಗಳು ಇವುಗಳ ಆಹಾರ. ಇವು ನಿರುಪದ್ರವಿ ಜೀವಿಗಳು. ಬೇಗನೆ ಓಡಲಾಗುವುದಿಲ್ಲ, ರಕ್ಷಣೆಗೆ ಬೇರೆ ಯಾವ ಅಸ್ತ್ರಗಳೂ ಇಲ್ಲವಾದ್ದರಿಂದ ಇವುಗಳನ್ನು ತಿಂದು ಬದುಕುವ ಜೀವಿಗಳಿಗೆ ಇವು ಸರಳವಾಗಿಯೇ ಸಿಕ್ಕುಬಿಡುತ್ತವೆ. ಆದರೂ ಇವು ತಮ್ಮ ಮೈ ಸುತ್ತ ಸುರುಳಿ ಸುತ್ತಿಕೊಂಡು ವೈರಿಗಳಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತವೆ. ಕೆಲವು ಪ್ರಭೇದಗಳಲ್ಲಿ ವೈರಿಗಳಿಂದ ಪಾರಾಗಲು ರಾಸಾಯನಿಕ ದ್ರವವನ್ನು ಚಿಮ್ಮಿಸುತ್ತವೆ.
–
ಸಹಸ್ರಪದಿಗಳು ಸಾಮಾನ್ಯವಾಗಿ 2 ರಿಂದ 280 ಮಿ.ಮೀ ನಷ್ಟು ಉದ್ದ ಇರುತ್ತವೆ. ಅತ್ಯಂತ ಉದ್ದದ ಸಹಸ್ರಪದಿ ಆಫ್ರಿಕಾದಲ್ಲಿ ಕಂಡುಬಂದಿದ್ದು, ಇದರ ಉದ್ದ 280 ಮಿ.ಮೀ.
–
ಇವೆಂತ ಹುಳುಗಳು ಯಾಕಾಗಿ ಇವೆಯೇನೋ ಎನ್ನದಿರಿ. ಇವು ಭೂಮಿಯ ಮೇಲೆ ಮನುಕುಲ ಉಗಮವಾಗುವುದಕ್ಕಿಂತ ಸಹಸ್ರ ಸಹಸ್ರ ವರ್ಷಗಳಿಂದಲೂ ಭೂಮಿಯ ಮೇಲಿವೆ. ಅಂದ ಹಾಗೆ ಈ ಶತಪದಿ, ಸಹಸ್ರಪದಿ ಹುಳುಗಳು ಮಿಲಿಯನ್ ವರ್ಷಗಳ ಹಿಂದಿನಿಂದಲೂ ಭೂಮಿಯ ಮೇಲಿರುವುದರಿಂದ ಇವು ನಮಗಿಂತಲೂ ಪ್ರಾಚೀನ ಜೀವಿಗಳು. ಈ ಹುಳಕ್ಕೆ ಸಂಬಂಧಿಸಿದ ಪಳೆಯುಳಿಕೆಯೊಂದು ದೊರೆತಿದ್ದು, ಅದರ ಆಧಾರದ ಮೇಲೆ ಜೀವ ವಿಜ್ಞಾನಿಗಳ ಹೇಳಿಕೆಯೆನೆಂದರೆ, ದೊರೆತ ಪಳೆಯುಳಿಕೆಯ ಹುಳುವಿನ ಉದ್ದ ಅಂದಾಜು 2 ಮೀ. ಅಂದರೆ 6.6 ಫೀಟ್ ಇರಬಹುದು ಅಂತ. ಮತ್ತೊಂದು ವಿಷಯವೇನೆಂದರೆ ಹೀಗೆ ದೊರೆತ ಪಳೆಯುಳಿಕೆಯ ಕಾಲ 359.2 ಮಿಲಿಯನ್ ನಿಂದ 299 ಮಿಲಿಯನ್ ವರ್ಷಗಳ ಹಿಂದೆ.
–
ಉಫ್… ಸುಮ್ಮನೆ ಸಾಮಾನ್ಯ ಹುಳುವೆಂದು ನೋಡಹೋಗಿ ಇವುಗಳ ಇತಿಹಾಸ ಕೆದಕಿದಂತೆಲ್ಲ ನಾನೇ ಸಹಸ್ರಪದಿಯಾಗಿ ಓಡಾಡಿದಂತಾಯ್ತು.
- ಕ್ಯಾಮೆರಾ ಹಿಂದಿನ ಕಣ್ಣು ಮತ್ತು ಲೇಖನ : ಸಿದ್ಧರಾಮ ಕೂಡ್ಲಿಗಿ