ಹೆಂಜೇರು ಹೇಮಾವತಿ ಸಿದ್ದೇಶ್ವರ ಕ್ಷೇತ್ರದಲ್ಲಿ…



ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಮಡಕಶಿರಾ ತಾಲ್ಲೂಕಿನ ಹೇಮಾವತಿ ಗ್ರಾಮದಲ್ಲಿ ರಾಜಾಶ್ರಯದ ಪೋಷಣೆಯಲ್ಲಿ ಬೆಳೆದ ಶಾಸ್ತ್ರ, ಸಾಹಿತ್ಯ, ಸಂಗೀತ, ಶಿಲ್ಪಕಲೆ ಮುಂತಾದವು ಇಂದಿಗೂ ಉಳಿದುಕೊಂಡಿವೆ.ಒಂದು ಕಾಲದಲ್ಲಿ ನೊಳಂಬರ ವೈಭವದ ರಾಜಧಾನಿ ಕೇಂದ್ರವಾಗಿದ್ದ ಹೇಮಾವತಿಯು ಈಗ ಕುಗ್ರಾಮವಾಗಿ ನೊಳಂಬರ ಗತವೈಭವದ ಶಿಲ್ಪಾವಶೇಷ ಸಂಪತ್ತಿನೊಂದಿಗೆ ಉಳಿದುಕೊಂಡಿದೆ.ಇನ್ನಷ್ಟು ವಿಷಯಗಳು ಖ್ಯಾತ ಚಿಂತನಕಾರ ಡಾ.ವಡ್ಡಗೆರೆ ನಾಗರಾಜಯ್ಯ ಅವರು ಓದುಗರೊಂದಿಗೆ ಹಂಚಿಕೊಂಡಿದ್ದಾರೆ.ಮುಂದೆ ಓದಿ…

ಕ್ರಿ.ಶ. ಒಂಭತ್ತು ಮತ್ತು ಹತ್ತನೇ ಶತಮಾನದಲ್ಲಿ ಪ್ರವರ್ಧಮಾನಕ್ಕೆ ಬಂದ ನೊಳಂಬ ಸಾಮ್ರಾಜ್ಯಕ್ಕೆ ಈಗಿನ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಮಡಕಶಿರಾ ತಾಲ್ಲೂಕಿನ ಹೇಮಾವತಿ ಗ್ರಾಮವು ರಾಜಧಾನಿಯಾಗಿತ್ತು. ರಾಜರು ಗತಿಸಿದರೂ, ರಾಜ್ಯಗಳು ಅಳಿದರೂ, ರಾಜಧಾನಿಗಳು ನಾಶವಾಗಿ ಹೋದರೂ ರಾಜಾಶ್ರಯದ ಪೋಷಣೆಯಲ್ಲಿ ಬೆಳೆದ ಶಾಸ್ತ್ರ, ಸಾಹಿತ್ಯ, ಸಂಗೀತ, ಶಿಲ್ಪಕಲೆ ಮುಂತಾದವು ಇಂದಿಗೂ ಉಳಿದುಕೊಂಡಿವೆ. ಅಂದಿನ ನೊಳಂಬ ರಾಜವಂಶ ಇಂದು ಉಳಿದಿಲ್ಲ. ಒಂದು ಕಾಲದಲ್ಲಿ ನೊಳಂಬರ ವೈಭವದ ರಾಜಧಾನಿ ಕೇಂದ್ರವಾಗಿದ್ದ ಹೇಮಾವತಿಯು ಈಗ ಕುಗ್ರಾಮವಾಗಿ ನೊಳಂಬರ ಗತವೈಭವದ ಶಿಲ್ಪಾವಶೇಷ ಸಂಪತ್ತಿನೊಂದಿಗೆ ಉಳಿದುಕೊಂಡಿದೆ.

ಕ್ರಿ.ಶ. 1937 ರಲ್ಲಿ ಮದ್ರಾಸ್ ಮ್ಯೂಸಿಯಂ ಪರವಾಗಿ ಹೇಮಾವತಿ ಗ್ರಾಮಕ್ಕೆ ಭೇಟಿ ನೀಡಿದ ಸಿ.ಶಿವಮೂರ್ತಿಯು (ವಾಸ್ತುಶಿಲ್ಪ, ಚಿತ್ರಕಲೆ, ವಾಸ್ತು ವಿನ್ಯಾಸದ ರಹಸ್ಯಗಳನ್ನು ಅರಿತಿದ್ದ ವಿದ್ವಾಂಸನೀತ. ವಿಶೇಷವಾಗಿ ದಕ್ಷಿಣ ಭಾರತದ ಶಿಲ್ಪಕಲಾ ರಾಚನಿಕ ಲಕ್ಷಣಗಳನ್ನು ವಿವರಿಸುವುದರಲ್ಲಿ ನಿಷ್ಣಾತನಾಗಿದ್ದವನು) ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಹಿಂದೂಪುರದಿಂದ ಮಡಕಶಿರಾಕ್ಕೆ ಹೋಗುವ ಬಸ್ಸಿನಲ್ಲಿ ಪ್ರಯಾಣ ಮಾಡಿ, ದಾರಿಯಲ್ಲೊಂದು ಕಡೆ ಬಸ್ಸಿಳಿದು, ಅಲ್ಲಿಂದ ಆರು ಮೈಲಿಗಳ ದೂರ ಕಾಲ್ನಡಿಗೆಯಲ್ಲಿಯೋ, ಎತ್ತಿನ ಗಾಡಿಯಲ್ಲೋ ಹೇಮಾವತಿ ಗ್ರಾಮಕ್ಕೆ ತಲುಪಿದನಂತೆ. ಹೇಮಾವತಿಯು ಹಿಂದೊಮ್ಮೆ ನೊಳಂಬರ ರಾಜಧಾನಿಯಾಗಿತ್ತೆಂಬ ಸಂಗತಿಯನ್ನು ಇಡೀ ಲೋಕವೇ ಮರೆತುಹೋಗಿದ್ದರೂ ಮದ್ರಾಸ್ ಮ್ಯೂಸಿಯಂನಿಂದ ಹೊರಟ ಪಿ.ಶಿವಮೂರ್ತಿಯು ಮಾತ್ರ ಹೇಮಾವತಿಯನ್ನು ಹುಡುಕುತ್ತಾ ಭಾರೀ ಶ್ರಮಪಟ್ಟುಕೊಂಡು ಹೇಮಾವತಿ ಗ್ರಾಮವನ್ನು ತಲುಪುತ್ತಾನೆ.

This slideshow requires JavaScript.

ಬಂಗಾರದ ಬೆಲೆ ಬಾಳುವ ಕಟ್ಟಡ ಸಮುಚ್ಚಯ, ಸರಿಸಾಟಿಯೇ ಇಲ್ಲದ ಶಿಲ್ಪಕಲಾ ಸಂಪತ್ತುಗಳನ್ನು ಅವನು ಅಲ್ಲಿರುವುದನ್ನು ಕಂಡುಕೊಳ್ಳುತ್ತಾನೆ. ಇಂತಹ ಸಂಪತ್ತು ಇದ್ದುದರಿಂದಲೇ ಅವನು ಶ್ರಮಪಟ್ಟು ಅಲ್ಲಿಗೆ ಹೋಗುತ್ತಾನೆ. ಅಲ್ಲಿದ್ದ ಶಿಲ್ಪಕಲಾ ವೈಭವವನ್ನು ನೋಡಿ ಮಾರುಹೋದ ಶಿವಮೂರ್ತಿ ಮಂತ್ರಮುಗ್ಧನಾಗಿ ನಿಂತುಕೊಂಡು ಸಕಲವನ್ನೂ ತನ್ನ ಕಣ್ತುಂಬಿಕೊಳ್ಳುತ್ತಾನೆ.
ನೊಳಂಬ ರಾಜರ ವಿರುದ್ಧ ಹೋರಾಡಿ ಗೆದ್ದ ಚೋಳರ ಅರಸ #ರಾಜ_ರಾಜೇಂದ್ರ_ಚೋಳನು, ನೊಳಂಬರು ಕಟ್ಟಿಸಿದ್ದ ದೇವಾಲಯಗಳಿಗೆ ಹಾಗೂ ಮಂಟಪಗಳಿಗೆ ಅಳವಡಿಸಿದ್ದ ಅನೇಕ ಶಿಲಾಸ್ತಂಭಗಳನ್ನು ಮತ್ತು ಗವಾಕ್ಷಿಗಳನ್ನು ತನ್ನ ರಾಜ್ಯಕ್ಕೆ ಕೊಂಡೊಯ್ದನೆಂಬ ಚರಿತ್ರೆ ಶಿವಮೂರ್ತಿಗೆ ತಿಳಿದುಬರುತ್ತದೆ. ಪಿ.ಶಿವಮೂರ್ತಿಯು ಹೇಮಾವತಿ ಗ್ರಾಮಕ್ಕೆ ಹೋಗಿ ತಲುಪಿದ್ದು ಕೂಡ ರಾಜರಾಜೇಂದ್ರ ಚೋಳನ ದಿಗ್ವಿಜಯದಂತೆಯೇ ಒಂದು ಜೈತ್ರಯಾತ್ರೆ! ತನಗೆ ಯಾವುದೇ ಸೈನ್ಯದ ಬಲವಿಲ್ಲದಿದ್ದರೂ ಸರ್ಕಾರಿ ಆದೇಶದ ಬಲವಿತ್ತು. ಆದ್ದರಿಂದಲೇ ಅವನು ಎಷ್ಟೆಲ್ಲಾ ಪ್ರತಿಕೂಲವಾದ ಪರಿಸ್ಥಿತಿಗಳು ಎದುರಾದರೂ ಲೆಕ್ಕಿಸದೆ ಎದುರಿಸಿ ನಿಂತು ಹೇಮಾವತಿಯಿಂದ ಕೆಲವು ಮುಖ್ಯ ಶಿಲ್ಪಗಳನ್ನು ಮದ್ರಾಸ್ ಮ್ಯೂಸಿಯಂಗಾಗಿ ಸಂಗ್ರಹಿಸಿ ತೆಗೆದುಕೊಂಡು ಹೋಗುತ್ತಾನೆ.
ಶಿವಮೂರ್ತಿಯು ಹೇಮಾವತಿಗೆ ಹೋದಾಗ ಅಲ್ಲಿನ ದೇವಾಲಯಗಳಲ್ಲಿದ್ದ ವಿಗ್ರಹಗಳಿಗೆ ಯಥಾಪ್ರಕಾರವಾಗಿ ಪೂಜೆ ಪುನಸ್ಕಾರಗಳು ನಡೆಯುತ್ತಿದ್ದರೂ, ದೇವಾಲಯಗಳು ಮಾತ್ರ ಶಿಥಿಲಾವಸ್ಥೆಯಲ್ಲಿರುವುದನ್ನು ನೋಡುತ್ತಾನೆ.



#ಹೇಮಾವತಿ_ಗ್ರಾಮದಲ್ಲಿ ಎತ್ತ ನೋಡಿದರತ್ತ ಯಾವುದೇ ಒಂದು ಮಣ್ಣಿನ ಗುಡ್ಡೆಯೊಳಗಿಂದಲೂ ಇವನ ಅರೆ ಮುಚ್ಚಿದ ಕಣ್ಣುಗಳಿಗೂ ಶಿಲ್ಪಕಲಾ ಸುರ ಸುಂದರಿಯರೋ ಅಥವಾ ಅರೆಕೊರೆ ಮುರಿದು ಮುಕ್ಕಾದ ಶಿಲಾಬಳ್ಳಿಯಲ್ಲಿಯೂ ಮೊಗ್ಗರಳಿ ಹೂವಾಗುವ ಮನೋಹರ ದೃಶ್ಯವೋ ಕಾಣಿಸುತ್ತಿತ್ತಂತೆ. ಮಣ್ಣಿನ ದಿಬ್ಬವನ್ನು ಕೆದಕಿದರೂ ಸಾಕು ಸೌಂದರ್ಯ ಚೆಲ್ಲುತ್ತಾ ಇಲ್ಲೊಂದು ಶಿಲಾಸ್ತಂಭ ಅಲ್ಲೊಂದು ಬಾಗಿಲುಗಂಬ, ಮತ್ತೊಂದು ಕಡೆಯಲ್ಲಿ ಗವಾಕ್ಷಿ, ಮಗದೊಂದು ಕಡೆಯಲ್ಲಿ ದಿಕ್ಪಾಲಕರ ಫಲಕ ಹೀಗೆ ಅವನಿಗೆ ಕಾಣಿಸುತ್ತಿದ್ದವು. ನೊಳಂಬರ ಗತಕಾಲದ ಆ ರಾಜಧಾನಿ ನಗರದಲ್ಲಿ, ಇವತ್ತಿನ ಆ ಕುಗ್ರಾಮದಲ್ಲಿ ಎತ್ತ ತಿರುಗಿದರತ್ತ ಶಿಲ್ಪಗಳ ರಾಶಿಗಳೇ ಕಾಣಿಸುತ್ತಿದ್ದವು. ಎತ್ತ ನೋಡಿದರೂ ಸೌಂದರ್ಯದ ಕುಪ್ಪೆಗಳೇ ಕಾಣಿಸುತ್ತಿದ್ದವು! ಮುಖಗಳು ಭಗ್ನಗೊಂಡಿದ್ದರೂ, ಕಿವಿಗಳು ಉದುರಿದ್ದರೂ, ಕೈಕಾಲುಗಳು ಮುರಿದು ಬಿದ್ದಿದ್ದರೂ, ಶಿಲ್ಪ ಶರೀರದ ಯಾವುದೇ ಅಂಗಗಳು ಊನಗೊಂಡಿ ದ್ದರೂ ಅವುಗಳೆಲ್ಲವೂ ನೊಳಂಬರ ಕಲಾನೈಪುಣ್ಯತೆಯಿಂದ ಅಮೂಲ್ಯವಾದವುಗಳೇ ಆಗಿದ್ದವು. ಅವುಗಳ ಪ್ರತಿಯೊಂದೊಂದು ಬಾಗುವಿಕೆಯಲ್ಲಿ, ರೂಪದಲ್ಲಿ, ಎತ್ತರದಲ್ಲಿ, ಕೆತ್ತನೆಯ ಕುಸುರಿಯಲ್ಲಿ ಸಿದ್ಧಹಸ್ತರಾಗಿದ್ದ ಮಹಾಶಿಲ್ಪಿಗಳ ಕಲಾ ಸಾಮರ್ಥ್ಯ ನೋಡುಗರಿಗೆ ಎದ್ದುಕಾಣುತ್ತಿತ್ತು. ಅವರ ಶಿಲ್ಪಕಲೆಯು ಪ್ರಧಾನವಾಗಿ ಪಲ್ಲವರ ಶೈಲಿ ಇರಬಹುದು. ಆದರೆ ಅದರಲ್ಲಿ ಚಾಲುಕ್ಯ, ರಾಷ್ಟ್ರಕೂಟ ಶಿಲ್ಪಕಲಾ ಶೈಲಿಗಳು ಪ್ರತಿಭಾಪೂರ್ವಕವಾಗಿ ಮೇಳೈಸಿವೆ. ಆಂಧ್ರಪ್ರದೇಶದ ಅಮರಾವತಿ ಶೈಲಿಯು ಕೂಡಾ ಅಂತರ್ವಾಹಿನಿಯಾಗಿ ನೊಳಂಬರ ಶಿಲ್ಪಕಲಾ ಶೈಲಿಯನ್ನು ಪ್ರಭಾವಿಸಿದೆ ಅನ್ನಿಸುತ್ತಿದೆ.
**************
(ದಿ: 6 ಜೂನ್ 1965, ‘ಆಂಧ್ರಜ್ಯೋತಿ’ ಪತ್ರಿಕೆಯಲ್ಲಿ ಪ್ರಕಟಿತವಾದ ‘ನೊಳಂಬರ ಶಿಲ್ಪಗಳು’ ಎಂಬ ಗ್ರಂಥ ಸಮೀಕ್ಷೆಯ ಟಿಪ್ಪಣಿಯಿಂದ)
ಸಂಗ್ರಹಾನುವಾದ : ಕಂಪಲಪ್ಪ ಚನ್ನಸಾಗರದಹಟ್ಟಿ


  • ಡಾ.ವಡ್ಡಗೆರೆ ನಾಗರಾಜಯ್ಯ (ಸರ್ಕಾರಿ ಕಾಲೇಜಿನ ಇಂಗ್ಲಿಷ್ ಉಪನ್ಯಾಸಕರು,ಚಿಂತಕರು, ಲೇಖಕರು)

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW