ನಮ್ಮ ಕಂಟ್ರಾಕ್ಟರ್ ಮಹಾಶಯನಿಗೆ ‘ ಕಂಟ್ರಾಕ್ಟರ್ ಶ್ರೀ ‘ ಅನ್ನು ಬಿರುದಾದರೂ ಕೊಡಬೇಡವೇ ನೀವೇ ಹೇಳಿ?….ಯಾಕೆ ಅಂತ ಖ್ಯಾತ ಲೇಖಕಿ ಶಾಂತ ನಾಗರಾಜ್ ಅವರು ಬರೆದಿರುವ ಈ ಕತೆಯನ್ನು ತಪ್ಪದೆ ಓದಿ…
ಯಾವ ಪುಣ್ಯಾತ್ಮ ಹೇಳಿದನೋ fools build the house and wise live in that ಅಂತ. ನಾವೇ ಕಟ್ಟಿದ ಮನೆಯಲ್ಲಿ ನಾವೇ ಇರುತ್ತಾ ಫೂಲ್ಸೂ ನಾವೇ ವೈಸೂ ನಾವೇ ಆಗಿರುವ ಸಂದರ್ಭದಲ್ಲಿ ವೈಸ್ ನ ಸಂಭ್ರಮವನ್ನೂ ಫೂಲ್ಸ್ ನ ಸಂಕಟವನ್ನೂ ಒಟ್ಟಿಗೇ ಅನುಭವಿಸುತ್ತೇವಲ್ಲ, ಅದು ನಿಜಕ್ಕೂ ಕೌತುಕವೇ ಸರಿ. ಇಂಥಾ ಸಂಭ್ರಮ ಮತ್ತು ಸಂಕಟಗಳನ್ನು ಕೊಟ್ಟ ಮತ್ತು ಹಗಲೂ ರಾತ್ರಿ ನಮ್ಮ ಮನೆ ಕಟ್ಟಲು ಶ್ರಮಿಸಿದ ಈ ಜನಕ್ಕೆ ಕೆಲವಾದರೂ ಪ್ರಶಸ್ತಿಗಳನ್ನು ಸ್ಥಾಪಿಸುವುದು ಸೂಕ್ತ ಎಂದು ನನ್ನ ಅಭಿಪ್ರಾಯ. ಏಕೆಂದರೆ ನಾಡು ನುಡಿಯನ್ನು ಕಟ್ಟಿದ ಅನೇಕ ಮೇಧಾವಿಗಳಿಗೆ ಅನೇಕ ಪ್ರಶಸ್ತಿ ಪುರಸ್ಕಾರಗಳನ್ನಿತ್ತು ಸನ್ಮಾನ ಸಮಾರಂಭಗಳನ್ನು ಮಾಡಿ ಸಂತೋಷ ಪಡುತ್ತೇವೆ. ಪಾಪ ಮನೆ ಕಟ್ಟಿ ಮನುಷ್ಯರು ತಂಪಾಗಿ ಬದುಕುವುದಕ್ಕೆ ಶ್ರಮಿಸುವ ಈ ಮಂದಿಗೂ ಕೆಲವು ಪುರಸ್ಕಾರಗಳು ಸಲ್ಲಬೇಕು.
ಈಗ ನಮ್ಮನೆಯನ್ನೇ ಉದಾಹರಣೆಗೆ ತೆಗೆದುಕೊಂಡರೆ , ನಾವು ಮನೆ ಕಟ್ಟಿದ ಸಮಯದಲ್ಲಿ ಅಡುಗೆಮನೆಯನ್ನು ‘ ಇಟಾಲಿಯನ್ ಕಿಚನ್ ‘ ಮಾಡಿಕೊಳ್ಳಬೇಕೆಂಬ ಇರಾದೆ ನಮಗೇನೂ ಇರಲಿಲ್ಲ. ಆದರೆ ಈ ಮನೆಕಟ್ಟುವ ಕೈಂಕರ್ಯದಲ್ಲಿ ನಮ್ಮ ಇರಾದೆಯೇ ಅಂತಿಮವಾಗಿರುವುದಿಲ್ಲ. ಕೊನೆಗೆ ನಡೆಯುವುದು ಕಂಟ್ರಾಕ್ಟರ್ ನ ಇರಾದೆಯೇ. ಉದಾಹರಣೆಗೆ ನನಗೆ ಅಡುಗೆ ಮನೆಯಲ್ಲಿ ಕಟ್ಟೆಯ ಎಡ ಮೂಲೆಯಲ್ಲಿ ಸಿಂಕ್ ಇರಿಸಿ ಕೊಂಡರೆ, ನೀರು ಬಿಟ್ಟಾಗ ಕಟ್ಟೆಯ ಮೇಲಿಟ್ಟ ವಸ್ತುಗಳಿಗೆ ನೀರು ಸಿಡಿಯುವುದಿಲ್ಲ, ಹೇಗಿದ್ದರೂ ಸಿಂಕಿನ ಎಡ ಮತ್ತು ಹಿಂದೆ ಗೋಡೆ ಇರುತ್ತದೆ ಎಂದು ನನ್ನ ಇರಾದೆ. ಇದನ್ನು ಆ ಕಂಟ್ರಾಕ್ಟರ್ ಮಹಾಶಯ ಒಪ್ಪಿದ್ದರೆ ಕೇಳಿ! ಏನೇನೋ ತಾಂತ್ರಿಕ ಕಾರಣಗಳನ್ನು ಕೊಟ್ಟು, ಸಿಂಕನ್ನು ಕಟ್ಟೆಯ ಮಧ್ಯದಲ್ಲಿಟ್ಟ. ಈಗ ನಲ್ಲಿ ತಿರುಗಿಸಿದರೆ ಬಲಕ್ಕಿಟ್ಟ ಗ್ಯಾಸ್ ಸ್ಟೋವಿನ ಮೇಲೂ ಎಡಕ್ಕೆ ತೊಳೆದಿಟ್ಟ ಪಾತ್ರೆಗಳ ಮೇಲೂ ಸಿಡಿಯುತ್ತದೆ. ಅದಕ್ಕೆ ನಾನು ಕರೊನಾ ಬರುವುದಕ್ಕೂ ಎಷ್ಟೋ ವರ್ಷಗಳ ಕೆಳಗೇ ನಮ್ಮ ನಲ್ಲಿ ಮೂತಿಗೆ ನೀರು ಸಿಡಿಸದಂತೆ ಬಟ್ಟೆಯ ಮಾಸ್ಕ್ ಹಾಕಿಟ್ಟಿದ್ದೇನೆ.
ಫೋಟೋ ಕೃಪೆ : google
ಈಗ ನಮ್ಮ ಗ್ರೇಟ್ ಇಟಾಲಿಯನ್ ಕಿಚನ್ ವಿಚಾರಕ್ಕೆ ಬರುತ್ತೇನೆ. ಆಗ ಇನ್ನೂ ಇಂಥಾ ಕಿಚನ್ ಕಟ್ಟಲು ಬೇಕಾಗುವ ರೆಡಿಮೇಡ್ ವಸ್ತುಗಳು ಮಾರುಕಟ್ಟೆಗೆ ಬಂದಿರಲಿಲ್ಲ. ನಮ್ಮ ಕಂಟ್ರಾಕ್ಟರ್ ಭೂಷಣನಿಗೆ ತಾನು ಮೊದಲು ಕಟ್ಟಿ ಅದನ್ನು ಜಾಹೀರು ಪಡಿಸಿಕೊಳ್ಳುವ ಉತ್ಸಾಹ. ನಾವು ಬಕರಾಗಳು ಅವನ ಕೈಗೆ ಸುಲಭವಾಗಿ ಸಿಕ್ಕಿ ಬಿದ್ದೆವು. ಅವನು ಅಂಥಾ ಕಿಚನ್ ಅನ್ನು ಯಾವುದೋ ಇಂಗ್ಲೀಷ್ ಸಿನಿಮಾದಲ್ಲೋ ಅಥವಾ ಯಾವುದೋ ಜಾಹೀರಾತಿನಲ್ಲೋ ನೋಡಿದ್ದ. ಅದನ್ನು ನಮ್ಮ ಮನೆಯಲ್ಲಿ ಪ್ರಯೋಗಿಸಲು ಸಿದ್ಧನಾಗಿಯೇ ಬಿಟ್ಟಿದ್ದ. ಒಬ್ಬ ಮಹಾ ಚತುರ ಕಾರ್ಪೆಂಟರ್ ನನ್ನು ಕರೆತಂದ. ಅವನಿಗೆ ತನ್ನ ಬಳಿ ಇದ್ದ ಚಿತ್ರ ತೋರಿಸಿ ಅಡುಗೆ ಕಟ್ಟೆಯ ಕೆಳಗಿನ ಜಾಗದ ಅಳತೆ ತೆಗೆದು ಕೊಂಡು ಹೇಗೋ ಒಂದಿಷ್ಟು ಖಾನೆಗಳನ್ನು ಮಾಡಿ ಅದಕ್ಕೆ ಡ್ರಾವರ್ ಗಳನ್ನು ಮಾಡಿಸಿ ಜೋಡಿಸಿಟ್ಟ. ಗೃಹಪ್ರವೇಶಕ್ಕೆ ಬಂದವರೆಲ್ಲಾ ನಮ್ಮ ಅಡುಗೆಮನೆಯ ಚೆಂದ ನೋಡಿ ಬಾಯಿ ಬಿಟ್ಟಿದ್ದೇನು? ಹೊಗಳಿದ್ದೇನು? ಚಕಿತರಾಗಿದ್ದೇನು? ನಾವೂ ಹೆಮ್ಮೆಯಿಂದ ಎದೆಯುಬ್ಬಿಸಿದ್ದೇನೂ? ಇವೆಲ್ಲಾ ಸಂಭ್ರಮವಾಯಿತಲ್ಲ! ಈಗ ಸಂಕಟದ ಸುದ್ದಿಗೆ ಬರುತ್ತೇನೆ. ಆ ಕಾಲದಲ್ಲಿ ಚೆಂದದ ಪ್ಲೈ ವುಡ್ ಅಷ್ಟೊಂದು ಬಳಕೆಯಲ್ಲಿಲ್ಲದ ಕಾರಣ ಮತ್ತಿ ಮರದ ಹಲಗೆಯನ್ನೊ ಹಲಸಿನ ಮರದ ಹಲಗೆಯನ್ನೊ ಬಳಸಿ, ಡ್ರಾವರ್ ಒಳಗೆ ಕಬ್ಬಿಣದ ತಂತಿಗಳ ಬದಲು ಮರದ ಹಲಗೆಯನ್ನೇ ಸೇರಿಸಿ ಹಳೆಯ ಕಾಲದ ಮೇಜಿನ ಡ್ರಾವರ್ ಗಳಂತೆ ಮಾಡಿದ್ದಾನೆ. ಅದರಲ್ಲಿ ತೊಳೆದ ಪಾತ್ರೆಗಳನ್ನು ಇಟ್ಟ ಕಾರಣ ಹಲವು ಡ್ರಾವರ್ ಗಳು ನೀರಿನ ಪಸೆ ಹೀರಿ ಉಬ್ಬಿಕೊಂಡು ಅದರ ಬಾಗಿಲುಗಳನ್ನು ತೆಗೆಯಲಾರದ ಸ್ಥಿತಿಗೆ ಬಂದು, ಅದರಲ್ಲಿಟ್ಟಿರುವ ಡಜನ್ ಗಟ್ಟಲೇ ಸೌಟು ಚಮಚೆ ಸ್ಟೀಲ್ ಲೋಟಗಳು, ಕಪ್ಪುಗಳು ಇತ್ಯಾದಿಗಳು ಇಟ್ಟಲ್ಲೇ ಸಮಾಧಿಯಾಗಿ, ನಾವೀಗ ಬಳಸಲು ಬೇರೆ ಸೆಟ್ ಗಳನ್ನು ತಂದು ಕೊಂಡಿದ್ದೇವೆ. ದೊಡ್ಡ ಎರಡು ಖಾನೆಗಳಲ್ಲಿ ಇಟ್ಟಿದ್ದ ದೊಡ್ಡ ಪಾತ್ರೆ ತೆಗೆದುಕೊಳ್ಳಲು ನಾನು ಬಾಗಿಲು ತೆಗೆದಾಗ ಬಾಗಿಲೇ ನನ್ನ ಕೈಗೆ ಬಂದು ಅವೆರಡೂ ಖಾನೆಗಳು ಎಂದೆಂದಿಗೂ ಹಸಿವೆಯೇ ತೀರದಂಥಾ ಬಾಯಿತೆರೆದ ಹಕ್ಕಿಗಳ ಹಾಗೆ ಬಾಯಿಬಿಟ್ಟುಕೊಂಡು ಕೂತಿವೆ.
ಯಾರಾದರೂ ಹೊಸಬರು ಮನೆಗೆ ಬಂದು ಅಡುಗೆ ಮನೆ ನೋಡಿದರೆ ಅವಮಾನವೆಂದು ಅವುಗಳಿಗೆ ನನ್ನ ಹಳೆಯ ನೈಲಾನ್ ಸೀರೆಯಲ್ಲಿ ಕರ್ಟನ್ ಹೊಲೆದು ಹಾಕಿದ್ದೇನೆ. ಇಂಥಾ ಅಡುಗೆಮನೆಯ ಕನಸು ಕಂಡ ನಮ್ಮ ಕಂಟ್ರಾಕ್ಟರ್ ಮಹಾಶಯನಿಗೆ ‘ ಕಂಟ್ರಾಕ್ಟರ್ ಶ್ರೀ ‘ ಅನ್ನು ಬಿರುದಾದರೂ ಕೊಡಬೇಡವೇ ನೀವೇ ಹೇಳಿ? ಮತ್ತು ಹಗಲೂ ರಾತ್ರೀ ಶ್ರಮ ಪಟ್ಟ ಕಾರ್ಪೆಂಟರ್ ಗೆ ‘ ಮರಗೆಲಸ ಧುರೀಣ’ ಅನ್ನುವ ಬಿರುದನ್ನಾದರೂ ಕೊಡಲೇ ಬೇಕು. ಏನಂತೀರಿ? ಇದರ ಜೊತೆಗೆ ಇನ್ನೂ ಒಂದು ಗಮ್ಮತ್ತುಂಟು! ಬಾಗಿಲು ಕಿತ್ತು ಹೋದ ಖಾನೆಯಲ್ಲಿ ಹೇಗೋ ಒಂದು ಇಲಿಸುಂಡ ಬಂದು ಸೇರಿಕೊಂಡು ಬಿಟ್ಟಿದೆ! ಇದನ್ನು ನಮಗಿಂತಾ ಮೊದಲು ಗುರುತಿಸಿದ್ದು ನಮ್ಮ ಪಕ್ಕದ ಮನೆಯ ಬೆಕ್ಕು. ಅದು ಆಗಾಗ್ಗೆ ಬಂದು ಇದರ ಜೊತೆ ಜೂಟಾಟವಾಡುತ್ತದೆ. ಈಗ ನಿಮ್ಮ ಮನದಲ್ಲಿ ಒಂದು ಚಿತ್ರ ಕಲ್ಪಿಸಿಕೊಳ್ಳಿ. ಮಾಸ್ಕ್ ಹಾಕಿದ ನಲ್ಲಿ, ಅರ್ಧ ಮುಚ್ಚಿದ ಮರದ ಬಾಗಿಲುಗಳು ಅರ್ಧ ಹಳೆಸೀರೆ ಕರ್ಟನ್ ಕಟ್ಟಿಕೊಂಡ ಗ್ರೇಟ್ ಇಟಾಲಿಯನ್ ಕಿಚನ್, ಮಧ್ಯದಲ್ಲಿ ನೈಟಿಧಾರಿಣಿಯಾದ ಮತ್ತು ಹೆದರಿ ಕಂಗಾಲಾಗಿ ತೆರೆದ ಬಾಯಿಂದ ಸ್ವರವೂ ಬರದಂತೆ ನಿಂತ ನಾನು, ನನ್ನ ಸುತ್ತಾ ಮುತ್ತಾ ಸುತ್ತುತ್ತಿರುವ ‘ ಟಾಮ್ ಅಂಡ್ ಜೆರ್ರಿ ‘ ಲೈವ್ ಶೋ! ಈ ಚಿತ್ರಣವನ್ನು ಕಲ್ಪಿಸಿಕೊಂಡ ನಿಮ್ಮ ಮುಖದ ಮೇಲೆ ಮಂದಹಾಸವೊಂದು ಸುಳಿಯದಿದ್ದರೆ ನನಗೆ ಬೇರೆ ಹೆಸರಿಡಿ!
ಫೋಟೋ ಕೃಪೆ : google
ಇನ್ನು ನಮ್ಮ ಬಚ್ಚಲು ಮನೆಯ ಸಂಭ್ರಮ ಮತ್ತು ಸಂಕಟಗಳನ್ನು ವರ್ಣಿಸಲು ಈ ಭಾಷೆ ಎನ್ನುವ ವಸ್ತುವಿಗೆ ಸಾಧ್ಯವಾಗುತ್ತದೋ ಇಲ್ಲವೋ ಎನ್ನುವ ಅನುಮಾನ ನನಗೆ. ಏಕೆಂದರೆ ಬಚ್ಚಲು ಮನೆಯ ನನ್ನ ಅನುಭವ ಅಷ್ಟೊಂದು ಆಳವೂ ಅಗಲವೂ ಆಗಿರುವ ಕಾರಣ ಮತ್ತು ಅದರ ಭಾವಗಳೆಲ್ಲಾ ಒಟ್ಟೊಟ್ಟಿಗೇ ಉಕ್ಕಿ ಬರುವುದರಿಂದ ಈ ಪದಗಳೆಂಬ ಚೌಕಟ್ಟಿನಲ್ಲಿ ಎಷ್ಟು ಹಿಡಿಸಲು ಸಾಧ್ಯವೋ ಅಷ್ಟನ್ನು ಅಡ್ಜೆಸ್ಟ್ ಮಾಡಲು ಪ್ರಯತ್ನಿಸುತ್ತೇನೆ. ಬಚ್ಚಲು ಮನೆಯ ಬಾಗಿಲು ತೆರೆದು ನೋಡಿದವರೆಲ್ಲಾ ಮೊದಲ ನೋಟಕ್ಕೇ “ ವಾವ್ “ ಎಂದೇ ಉದ್ಗರಿಸುತ್ತಾರೆ!! ಅದು ಅಷ್ಟು ವಿಶಾಲವಾಗಿಯೂ, ಗೋಡೆಗಳಿಗೆ ನೆಲದಿಂದ ತಾರಸಿಯ ವರೆಗೆ ಥಳಥಳ ಹೊಳೆಯುವ ಟೈಲ್ಸ್ ಧರಿಸಿರುವುದಾಗಿಯೂ, ಸಿಂಕು ಮತ್ತು ಅದರ ಸುತ್ತ ಅಗಲವಾದ ಕಪ್ಪು ಗ್ರಾನೈಟ್ ಹಾಗೂ ಗೋಡೆಗೆ ದೊಡ್ಡ ಕನ್ನಡಿಯನ್ನು ಹೊಂದಿಸಿರುವುದಾಗಿಯೂ ಮೂಲೆಯಲ್ಲಿ ಹೊಳೆಯುವ ಬಾತ್ ಡಬ್ ಸಿಂಗಾರಗೊಂಡಿರುವುದಾಗಿಯೂ, ಸ್ನಾನ ಮತ್ತು ಬಾತ್ ಟಬ್ ಜಾಗಗಳನ್ನು ಮುಚ್ಚಲು ಗಾಜಿನ ಪಾರದರ್ಶಕ ಗೋಡೆ ಬಾಗಿಲುಗಳು ಇರುವುದರಿಂದಲೂ ನೋಡಿದ ಕೂಡಲೇ ಸೆವೆನ್ ಸ್ಟಾರ್ ಹೊಟೆಲಿನ ಬಾತ್ ರೂಂಗೆ ಬಂದಂತಾಗುತ್ತದೆ. ಇದು ನಮಗೆಲ್ಲಾ ಸಂಭ್ರಮವೇ ಬಿಡಿ. ಆದರೆ ಸಂಕಟವಿಲ್ಲವೇ? ಅದಿರದಿದ್ದರೆ ಮನೆ ಎಂದು ಹೇಗೆ ಕರೆಸಿಕೊಳ್ಳುತ್ತದೆ ನೀವೇ ಹೇಳಿ? ನಮ್ಮ ಬಚ್ಚಲು ಮನೆಯ ನೆಲಕ್ಕೆ ಟೈಲ್ಸ್ ಕೂಡಿಸಿದವನನ್ನು ನಾನು ಹಲವು ವರ್ಷಗಳಿಂದ ಹುಡುಕುತ್ತಲೇ ಇದ್ದೇನೆ. ಅವನಿಗೊಂದು ಪಾದಪೂಜೆ ಮಾಡುವ ಅಭಿಲಾಷೆ ನನಗೆ. ಅಲ್ಲದೇ ಅವನಿಗೆ ‘ ಆಧುನಿಕ ಉಲ್ಟಾ ಭಗೀರಥ ‘ ಎನ್ನುವ ಬಿರುದನ್ನೂ ಕೊಡಲೇ ಬೇಕು ಗೊತ್ತಾ? ಅವನು ಮಾಡಿರುವ ಕೆಲಸವನ್ನು ಹೇಳಿದರೆ ನೀವೂ ಕುಮಾರವ್ಯಾಸ ಹೇಳುವಹಾಗೆ “ ಮೂಗಿನಲಿ ಬೆರಳಿಟ್ಟು ಮಕುಟವ ತೂಗಿದನು “ ಅಂತ ಮಕುಟವ ತೂಗುತ್ತೀರಿ ಖಂಡಿತಾ. ಜಾರುವಿಕೆ ಇದ್ದೆಡೆ ಹರಿಯುವುದು ನೀರಿನ ಸಹಜ ಸ್ವಭಾವ ತಾನೆ? ಈ ನಮ್ಮ ಪುಣ್ಯಾತ್ಮ ನೀರಿಗೆ ಜಾರುವ ಸಹಜ ಗುಣವನ್ನೇ ಮರೆಯುವಂತೆ ಮಾಡಿಬಿಟ್ಟಿದ್ದಾನೆ!!! ಬಚ್ಚಲು ಮನೆಯ ಟೈಲ್ಸ್ ಗಳನ್ನು ಅದ್ಯಾವ ಪರಿ ಕೂಡಿಸಿದ್ದಾನೆಂದರೆ , ಅತ್ಯಂತ ಸಮತಟ್ಟು! ನೀವು ಬಚ್ಚಲಿನಲ್ಲಿ ಎಲ್ಲೇ ನೀರು ಹಾಕಿ ಅದು ಹಾಕಿದಲ್ಲೇ ಇರುತ್ತದೆ. ಒಂದಿಂಚೂ ಅಲುಗಾಡುವುದಿಲ್ಲ ಮರಾಯರೆ! ಪ್ರತಿಯೊಬ್ಬರೂ ಸ್ನಾನವಾದನಂತರ ಮಾಪ್ ಸ್ಟಿಕ್ಕಿನಲ್ಲಿ ನೀರನ್ನು ತಳ್ಳಿ ಮೂಲೆಯಲ್ಲಿರುವ ಚೇಂಬರಿನಲ್ಲಿ ಪೂರಾ ಕೆಳಗಿಳಿಸಿ ಬಂದರೇ ಮತ್ತೊಬ್ಬರು ಅಲ್ಲಿ ಹೋಗಿ ಸ್ನಾನ ಮಾಡಲು ಸಾಧ್ಯ. ಇಲ್ಲದಿದ್ದರೆ ಒಬ್ಬರು ಸ್ನಾನ ಮಾಡಿದ ನೀರನ್ನು ಮತ್ತೊಬ್ಬರು ಬಾತ್ ಟಬ್ ನಂತೆ ಬಳಸಬೇಕಾಗುತ್ತದೆ. ಇವನು ಭಗೀರಥನ ವಂಶಜನೇ ಇರಬಹುದಲ್ಲವೇ? ಅವನು ನೀರಿಗೆ ಹರಿವನ್ನು ಕಲಿಸಿದ ಇವನು ನಿಲುವನ್ನು ಕಲಿಸಿದ್ದಾನೆ!
ನಾನು ಆಗಲೇ ಹೇಳಿದಂತೆ ನಮ್ಮ ಮನೆ ಕಟ್ಟುವಿಕೆ ನಮ್ಮ ಕಂಟ್ರಾಕ್ಟರ್ ಗೆ ಹಲವು ಪ್ರಯೋಗಗಳಿಗೆ ಆಡುಂಬೋಲವಾಗಿತ್ತು. ನಮ್ಮ ಮನೆಯ ಸದಸ್ಯರ ಮೂಗಿಗೆ ಚೆನ್ನಾಗಿ ತುಪ್ಪವನ್ನು ಸವರಿ ನಯವಾದ ಮಾತುಗಳಿಂದ ತನ್ನ ವಶ ಮಾಡಿಕೊಂಡು ಬಿಟ್ಟಿದ್ದ. ನಾನೊಬ್ಬಳೇ ಇವರಿಗೆಲ್ಲಾ ಅಪೊಸಿಷನ್ ಪಾರ್ಟಿಯ ನಾಯಕಿಯಂತೆ ಕಾಣಿಸುತ್ತಿದ್ದೆ. ನನಗೆ ಕಡಿಮೆ ಬೆಲೆಯ ಮತ್ತು ಹೆಚ್ಚುಕಾಲ ಬಾಳಿಕೆ ಬರುವ ಸ್ವದೇಶೀ ವಸ್ತುಗಳು ಬೇಕು. ಈ ಗಂಡಸರಿಗೊ ಹೆಚ್ಚು ಬೆಲೆಯ ವಿದೇಶಿಯ ದುಬಾರಿ ವಸ್ತುಗಳ ಮೇಲೆ ಮೋಹ. ಈ ವೀಕ್ನೆಸ್ ತಿಳಿದ ಆ ಭೂಪ ಇವರಿಗೆ ತೊಡಿಸಲು ವಿಧವಿಧ ಟೋಪಿಗಳನ್ನು ಸಿದ್ಧ ಪಡಿಸಿಟ್ಟುಕೊಂಡಿದ್ದ. ಈ ನಿಟ್ಟಿನಲ್ಲೇ ಬಂದದ್ದು ನಮ್ಮ ಮನೆಯ ಬಚ್ಚಲು ಮನೆಗಳ ದುಬಾರಿ ನಲ್ಲಿಗಳು. “ ಬೇಕಿದ್ದರೆ ಇಡೀ ಬೆಂಗಳೂರಿನಲ್ಲಿ ಹುಡುಕಿ. ಇಂಥಾ ನಲ್ಲಿಗಳನ್ನು ಯಾರೂ ಇನ್ನೂ ಹಾಕಿಸಿಲ್ಲ “ ಎನ್ನುವ ಸಬ್ ಟೈಟಲ್ ಅವನಿಂದ ಪದೇಪದೇ ಉದುರಿ ನಮ್ಮವರೆಲ್ಲಾ ಭಾವಪರವಶರಾದರು! ಸರಿ ಊರಲ್ಲೇ ಇಲ್ಲದ ನಲ್ಲಿಗಳು ಮನೆಯಲ್ಲಿ ಪ್ರತ್ಯಕ್ಷವಾದವು. ಈಗ ಬಿಡಿ ಎಲ್ಲರ ಮನೆಯಲ್ಲೂ ಇಂಥಾ ನಲ್ಲಿಗಳಿವೆ. ನಾನು ಹೇಳುತ್ತಿರುವುದು 35-40 ವರ್ಷದ ಹಿಂದಿನ ಕಥೆ.
ಫೋಟೋ ಕೃಪೆ : google
ಒಂದು ನಲ್ಲಿ, ಅದಕ್ಕೆ ಅಡ್ಡಡ್ಡಲಾಗಿ ಮೂರು ತಿರುಪು. ಎಡದ್ದು ಬಿಸಿನೀರು. ಬಲದ್ದು ತಣ್ಣೀರು. ಮಧ್ಯದ ತಿರುಪನ್ನು ಎಡಕ್ಕೆ ತಿರುಗಿಸಿದರೆ ನಲ್ಲಿಯಲ್ಲಿ ನೀರು ಪ್ರತ್ಯಕ್ಷ. ಬಲಕ್ಕೆ ತಿರುಗಿಸಿದರೆ ಮೇಲಿನ ಶವರಿನಲ್ಲಿ ಸುರಿಮಳೆ. ನಲ್ಲಿಯ ಮಧ್ಯದಲ್ಲೊಂದು ತಿರುಪು. ಅದನ್ನು ಮೇಲೆತ್ತಿದರೆ ಹ್ಯಾಂಡ್ ಶವರಿನಲ್ಲಿ ಮಳೆ. ಆ ಹ್ಯಾಂಡ್ ಶವರ್ ತಗುಲಿಸಲು ಗೋಡೆಯಲ್ಲೊಂದು ಸ್ಟ್ಯಾಂಡು!!! ತಾರಸಿಯ ಅಟ್ಟದಲ್ಲಿ ಗೀಸರ್. ಅದು ಕಾಣದ ಹಾಗೆ ಅದಕ್ಕೆ ಬಾಗಿಲುಗಳು!! ಏನು ಹೇಳುತ್ತೀರಿ ? ಸ್ವರ್ಗವೇ ಧರೆಗಿಳಿದು ನಮ್ಮ ಬಚ್ಚಲು ಮನೆ ಸೇರಿಬಿಟ್ಟಂಥಾ ಸಂಭ್ರಮ! ಹತ್ತು ನಿಮಿಷದಲ್ಲಿ ಸ್ನಾನ ಮುಗಿಸುತ್ತಿದ್ದವರೂ ಈ ಬಚ್ಚಲಿಂದ ಒಂದು ಗಂಟೆಯಾದರೂ ಹೊರಗೆ ಬರೋಣವೇ ಇಲ್ಲ!!
ಮನೆ ಕಟ್ಟಿದ ಹೊಸತರಲ್ಲಿ ಮನೆಗೆ ಬಂದ ಅತಿಥಿಗಳು ಕಾಲು ತೊಳೆದು ಬರಲು ಬಚ್ಚಲು ಮನೆಗೆ ಹೋಗಿ, ಈ ನಲ್ಲಿಯನ್ನು ಕಂಡು ಹೈರಾಣಾಗಿ ಹೇಗೆ ಹೇಗೋ ತಿರುಗಿಸಿ, ಕೆಳಗೆ ನೀರು ಸುರಿಯುತ್ತದೆ ಎಂದು ತಲೆ ಬಗ್ಗಿಸಿ ನೋಡುವಾಗ ತಾರಸಿಗೆ ಸಿಕ್ಕಿಸಿದ ಶವರಿನಿಂದ ನೀರು ಸುರಿದು, ಬೇಡ ಅವರ ಫಜೀತಿ! ನಮ್ಮ ಮನೆ ಮಕ್ಕಳಿಗೆ ನಗುವಿಗೊಂದು ನೆವ! ಈಗ ಈ ನಮ್ಮ ನಲ್ಲಿಗಳೇ ಹೈರಾಣಾಗಿವೆ. ನಮಗೆಲ್ಲರಿಗೂ ಹ್ಯಾಂಡ್ ಶವರಿನಲ್ಲಿ ನಮಗೆ ಬೇಕಾದ ಎತ್ತರಕ್ಕೆ ಜೋಡಿಸಿಕೊಂಡು ಹದವಾಗಿ ತಣ್ಣೀರು ಬಿಸಿನೀರುಗಳನ್ನು ಬರುವಂತೆ ಮಾಡಿಕೊಂಡು ಎರಡೂ ಕೈಗಳೂ ಬಿಡುವಾಗಿ ಸೋಪು ಇತ್ಯಾದಿಗಳ ಸೇವೆಯನ್ನು ಶರೀರಕ್ಕೊದಗಿಸಿ ಹಿತವಾದ ಬಿಸಿ ನೀರಿನ ಮಳೆಯಲ್ಲಿ ನೆನೆದಂತೆ ಮಾಡುವ ಸ್ನಾನದ ಸುಖ ಅಭ್ಯಾಸವಾಗಿ ಹೋಗಿದೆ. ಆದರೀಗ ನಲ್ಲಿಯ ತಿರುಪುಗಳು ಹುಚ್ಚುಕೀಲುಗಳಾಗಿ ಹೋಗಿವೆ. ಬಿಸಿ ಮತ್ತು ತಣ್ಣೀರುಗಳನ್ನು ಹದ ಮಾಡಿಕೊಂಡು ಸ್ನಾನ ಮಾಡುತ್ತಿರುವಾಗ ಮತ್ತು ಸೋಪಿನ ನೊರೆಯಿಂದ ಕಣ್ಣು ಬಿಡಲಾಗದ ಸ್ಥಿತಿಯಲ್ಲೇ ಇರುವಾಗ ಇದ್ದಕ್ಕಿದ್ದಂತೇ ಕುದಿನೀರು ಬರತೊಡಗಿ ಬಚ್ಚಲಿನಲ್ಲೇ ತಕ್ಕ ಥೈ ಎಂದು ನೃತ್ಯಾಭ್ಯಾಸಕ್ಕೆ ತೊಡಗುವಂತಾಗುತ್ತದೆ. ಹಾಳಾಗಲಿ ಎಂದು ತಣ್ಣೀರಿನ ಕಡೆ ತಿರುಗಿಸಿದಿರೋ ಕೊರೆಯುವ ತಣ್ಣೀರು ಸುರಿದು ದೇಹವನ್ನು ನಡುಗಿಸುತ್ತದೆ. ಸ್ನಾನ ಮುಗಿಯುವುದರಲ್ಲಿ ಈ ತಿರುಪುಗಳನ್ನು ತಂಬೂರಿ ಶೃತಿ ಮಾಡುವ ಹಾಗೆ ಅರ್ಧ ಸೆಂಟಿಮೀಟರ್ ಅತ್ತ, ಕಾಲು ಸೆಂಟಿಮೀಟರ್ ಇತ್ತ ತಿರುಗಿಸಿ ಸ್ನಾನ ಮುಗಿಸುವ ಹೊತ್ತಿಗೆ ಕೈಕಾಲುಗಳು ಬಿದ್ದು ಹೋಗಿರುತ್ತದೆ. ಬೇರೆ ತಿರುಪುಗಳನ್ನು ಹಾಕಿಸೋಣವೆಂದರೆ ಇಂಥಾ ನಲ್ಲಿಗಳೀಗ ಮಾರುಕಟ್ಟೆಯಲ್ಲೇ ಇಲ್ಲವಂತೆ. ಇದಕ್ಕಿಂತಾ ದುಬಾರಿಯಾದ ಮತ್ತೆಂಥದೋ ನಲ್ಲಿ ಬಂದಿದೆಯಂತೆ! ಈಗ ಹೇಳಿ ಇಂಥಾ ‘ ನಳ ‘ ( ದಮಯಂತಿಯ ಗಂಡ ಅಲ್ಲ. ಧಾರವಾಡ ಭಾಷೆಯ ನಲ್ಲಿ ) ತಯಾರಿಸಿದ , ಹಾಕಿಸಿದ ಮತ್ತು ಹಾಕಿದ ಜಾಣರಿಗೆ ‘ ನಳಪಂಡಿತ ‘ ಎನ್ನುವ ಬಿರುದು ತಕ್ಕುದಲ್ಲವೇ?
ಫೋಟೋ ಕೃಪೆ : google
ನಾನು ಹೀಗೆಲ್ಲಾ ಬರೆದೆನೆಂದು ಮನೆ ಕಟ್ಟುವವರ ಬಗ್ಗೆ ನನಗೆ ಗೌರವವಿಲ್ಲವೆಂದು ದಯವಿಟ್ಟು ತಿಳಿಯಬೇಡಿ. ತಾವೇ ಶೀಟ್ ಮನೆಗಳಲ್ಲಿದ್ದುಕೊಂಡು, ನಮಗೆ ತಾರಸಿ ಮನೆಯನ್ನು ಕಟ್ಟಿಕೊಡುವ, ತಾವೇ ಬೀದಿಯ ಬೋರ್ ವೆಲ್ಲಿನಿಂದ ನೀರು ತಂದುಕೊಂಡು ನಮಗೆ ಬೇಕಾದಲ್ಲಿ ನಲ್ಲಿಗಳನ್ನು ಇಟ್ಟುಕೊಡುವ, ತಾವೇ ಒರಟು ಗಾರೆಯ ನೆಲದಲ್ಲಿ ವಾಸಿಸುತ್ತಾ ನಮಗೆ ಹೊಳಪಿನ ಟೈಲ್ಸ್ ಕೂರಿಸಿಕೊಡುವ ಈ ಶ್ರಮ ಜೀವಿಗಳಿಗೆ ಎಷ್ಟು ಕೃತಜ್ಞತೆಯನ್ನು ಅರ್ಪಿಸಿದರೂ ಸಾಲದು. ಇವತ್ತು ‘ ನಮ್ಮ ಮನೆ ‘ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ಈ ತಂಪಿನ ತಾಣ ಅವರ ಶ್ರಮದಿಂದ ಉದ್ಭವವಾದದ್ದು. ಅವರನ್ನು ತಂಪು ಹೊತ್ತಲ್ಲಿ ನೆನೆಯೋಣ. ಅವರ ಬದುಕು ನೆಮ್ಮದಿಯಾಗಿರಲಿ ಎಂದು ಹಾರೈಸೋಣ.
- ಶಾಂತ ನಾಗರಾಜ್