‘ಈ ನೆಲಕ್ಕೆ ನಾನು ಕೊಟ್ಟಿದ್ದಾದರೂ ಏನು?…ಕಾಡುವ ಪ್ರಶ್ನೆಗೆ ಉತ್ತರವಿಲ್ಲದೆ, ಈಗಲೂ ಒಳಗೊಳಗೇ ಅಳುತ್ತಿದ್ದೇನೆ’… ಕವಿ ಬೆಂಶ್ರೀ ರವೀಂದ್ರ ಅವರು ಬರೆದಿರುವ ಈ ಸುಂದರ ಸಾಲುಗಳನ್ನು ತಪ್ಪದೆ ಮುಂದೆ ಓದಿ…
ಬರುವುದೇನೋ ಬಂದೆ
ಭುವಿಗೆ ಬಿದ್ದಾಗ
ಒಂದಷ್ಟು ಅತ್ತಿರಬಹುದು
ಎಷ್ಟೇ ಗಾಳಿ ಬೆಳಕು ಇದ್ದರೂ
ಉಸಿರು ಕಟ್ಟಿದಂತಾಗಿ
ಬೆಟ್ಟದ ಮೇಲಿಂದ
ಪ್ರಪಾತಕ್ಕೆ ಬಿದ್ದಂತಾಗಿ
ಗಟ್ಟಿಯಾಗಿ ಕಿರುಚಿರಬಹುದು.
ಮರುಕ್ಷಣ
ಬೆಚ್ಚಗಿನ ತಾಯಿ ಮಡಿಲು
ಅಮೃತದ ಹಾಲಿನ ಕಡಲು
ಸವಿದು ಸುಮ್ಮನೆ ಆಗಿರಬಹುದು.
ಕಾಲ ಕಳೆದು
ತೆವಳುತ್ತಾ, ಕುಂಟುತ್ತಾ
ಓಡುತ್ತಾ ವರುಷಗಳ ಉರುಳಿಸಿ
ಬಾಳು ಕಟ್ಟಿಕೊಂಡಿರಬಹುದು
ಈಗಲೂ ಒಳಗೊಳಗೇ ಅಳುತ್ತಿದ್ದೇನೆ
ನಾನು ಇಲ್ಲಿ ಕಟ್ಟಿದ್ದಾದರೂ ಏನು?
ಈ ನೆಲಕ್ಕೆ ನಾನು ಕೊಟ್ಟಿದ್ದಾದರೂ ಏನು?
ಕಾಡುವ ಪ್ರಶ್ನೆಗೆ ಉತ್ತರವಿಲ್ಲದೆ
ಈಗಲೂ ಒಳಗೊಳಗೇ ಅಳುತ್ತಿದ್ದೇನೆ.
- ಬೆಂಶ್ರೀ ರವೀಂದ್ರ