‘ಹಸಿವು’ ಎಂದರೆ ಹೊಟ್ಟೆಯದೊಂದೇ ಅಲ್ಲ- ವಸಂತ ಗಣೇಶ



ಹಸಿವು ಎಂದರೆ ತಟ್ಟನೆ ನೆನಪಾಗೋದು ಹೊಟ್ಟೆಯ ಹಸಿವು, ಆದ್ರೆ ಇದೊಂದೇ ಹಸಿವಲ್ಲ, ಭೂಮಿ ಮೇಲೆ ಇರೋದು. ಹಣದ ಹಸಿವು, ಕೀರ್ತಿಯ ಹಸಿವು, ದೇಹದ (ಕಾಮ)ಹಸಿವು. ಹಸಿವಿನ ನಾನಾ ಮುಖಗಳ ಬಗ್ಗೆ ಲೇಖಕಿ ವಸಂತ ಗಣೇಶ ಅವರು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ. ಹಸಿವಿನ ಮಹತ್ವ ತಿಳಿಯೋಣ ಬನ್ನಿ…

ಇಷ್ಟೆಲ್ಲ ಹಸಿವು ಇದ್ದರೂ ಸರತಿಯಲ್ಲಿ ಮೊದಲು ನಿಲ್ಲೋದು ಹೊಟ್ಟೆ ಹಸಿವು. ಈ ಹಸಿವು ಇಂಗಿದ ಮೇಲೇನೆ ಬೇರೆ ಹಸಿವುಗಳೂ ಇದೆ ಅಂತ ತಿಳಿಯುವುದು. ಹಸಿವಿಗೆ ಹಿಡಿ ಅನ್ನ ಸಿಕ್ಕದ ಭಿಕ್ಷುಕರು, ತಾಯ ಎದೆಯಲ್ಲಿ ಇಲ್ಲದ ಹಾಲಿಗೆ ಹಾತೊರೆಯುವ ಎಳೆ ಮಕ್ಕಳು, ಬೇರೆ ದಾರಿ ಕಾಣದೇ ವ್ಯಭಿಚಾರಕ್ಕೆ ಇಳಿದವರನ್ನು ನೋಡಿದಾಗ ಹಸಿವಿನ ತೀವ್ರತೆ ಎಷ್ಟೆನ್ನುವುದನ್ನು ತಿಳಿಯಲು ಸಾಧ್ಯ.

ಹೊಟ್ಟೆಗೆ ತಿನ್ನಲು ಹಿಡಿ ಅನ್ನವಿಲ್ಲದೆ ಇರುವವರಂತೆ ತಿಂದು ಹೆಚ್ಚಾಗಿ ಚೆಲ್ಲುವ ಜನರೂ ಇದ್ದಾರೆ. ಕೆಲವರು ತಟ್ಟೆಗೆ ಬೇಕಿದ್ದು ಬೇಡದೆ ಇದ್ದದ್ದು ಎಲ್ಲ ಬಡಿಸಿಕೊಂಡು ತಿನ್ನದೆ ಚೆಲ್ಲುವುದನ್ನು ನೋಡಿದ್ದೇವೆ. ಅದೊಂದು ರೀತಿಯಲ್ಲಿ ತಮ್ಮನ್ನು ತಾವು ಡಿಗ್ನಿಫೈಡ್ ಎಂದು ತೋರಿಸಿಕೊಳ್ಳುವ ವಿಧಾನ ಅಂದು ಕೊಂಡಿದ್ದಾರೆ. ಪ್ರತಿ ಒಂದು ಕಾಳು ಬೆಳೆಯಲು ರೈತರು ಎಷ್ಟು ಕಷ್ಟಪಡುತ್ತಾರೆ ಎನ್ನುವುದು ತಿಳಿದರೆ, ಇಂತಹವರು ಚೆಲ್ಲುವ ಅನ್ನದಲ್ಲಿ ನಾಲ್ಕು ಜನ ಹಸಿದವರ ಹೊಟ್ಟೆ ತುಂಬುತ್ತದೆ ಎನ್ನುವುದನ್ನು ಯೋಚಿಸಿದರೆ ಯಾವ ಮನುಷ್ಯನೂ ಹೀಗೆ ಮಾಡಲಾರ. ಹಣ ಅವರದು ಇರಬಹುದು ಆದರೆ ಅನ್ನ ಬೆಳೆಯುವ ರೈತನ ಶ್ರಮವನ್ನು ವ್ಯರ್ಥ ಮಾಡಿದಂತೆ ಅಲ್ಲವೇ. ಅವರು ತಟ್ಟೆಗೆ ಬಡಿಸಿಕೊಳ್ಳದೆ ಇದ್ದರೆ ಅದು ಬೇರೆ ಯಾರಾದರೂ ಅವಶ್ಯಕತೆ ಇರುವವರ ಕೈ ಸೇರಿ ಅವರ ಒಂದು ಹೊತ್ತಿನ ಹಸಿವು ನೀಗಿಸಲು ಸಹಾಯವಾಗುತ್ತಿತ್ತು.

ಫೋಟೋ ಕೃಪೆ : twitter

ಈಗಿನ ಕಾಲದವರೆಗೆ ಹಸಿವಿನ ಬೆಲೆ ಖಂಡಿತಾ ತಿಳಿದೇ ಇಲ್ಲ ಅನಿಸುತ್ತೆ. ಹಿಂದೆ ನಾವು ಮಕ್ಕಳಾಗಿದ್ದಾಗ ಮನೆಯಲ್ಲಿ ಮಾಡಿದ ಒಂದೇ ಅಡಿಗೆಯನ್ನು ಮಾತಿಲ್ಲದೆ ತಿಂದು ಹೋಗುತ್ತಿದ್ದೆವು. ಈಗ ಮನೆಯಲ್ಲಿ ಇರೋ ಮೂರು ನಾಲ್ಕು ಜನಕ್ಕೆ ಮೂರುನಾಲ್ಕು ವಿಧದ ಅಡಿಗೆ ಇದ್ದರೂ ಏನಾದರೂ ಕೊಂಕು ಇದ್ದೇ ಇರುತ್ತೆ. ನಮ್ಮ ಹಿಂದಿನ ಪೀಳಿಗೆ, ಅವರ ಹಿಂದಿನ ಪೀಳಿಗೆಯವರನ್ನ ಕೇಳಿದರೆ ಹೇಳುತ್ತಾರೆ ನೋಡಿ, ಅದೆಷ್ಟು ದಿನ ನೀರು ಕುಡಿದು ಹಸಿವು ನೀಗಿಸಿದ್ದಾರೆ, ಅದೆಷ್ಟು ತಾಯಂದಿರು ಹೊಲದಲ್ಲಿ ಸಿಕ್ಕುವ ಸೊಪ್ಪು, ಗೆಣಸು ತಂದು ಬೇಯಿಸಿ ಉಪ್ಪು ಖಾರವು ಇಲ್ಲದೆ ಮಕ್ಕಳಿಗೆ ತಿನ್ನಿಸಿದ್ದಾರೆ ಎಂದು.

ಈಗಲೂ ಸಹ ಪ್ರಪಂಚದಾದ್ಯಂತ ವರ್ಷಕ್ಕೆ ಅದೆಷ್ಟೋ ಮಕ್ಕಳು ಹೊಟ್ಟೆಗೆ ಅನ್ನವಿಲ್ಲದೇ ಸಾಯುವುದನ್ನು ಕೇಳುತ್ತಿರುತ್ತೇವೆ. ಕೆಲ ದೇಶಗಳಲ್ಲಿ ಅದೇನು ಆಹಾರದ ಅಭಾವವೋ ಅಥವಾ ಅವರ ಅತಿಯಾದ ಬಾಯಿ ಚಪಲ ಕ್ಕೊ ಸಿಕ್ಕಿ ಸಿಕ್ಕಿದ್ದನ್ನೆಲ್ಲ ತಿಂದು ತಮ್ಮ ಹಸಿವನ್ನು ಇಂಗಿಸಿಕೊಳ್ಳುತ್ತಾರಂತೆ. ಇಂತಹ ಸ್ಥಿತಿಯನ್ನು ನಾವು ತಂದುಕೊಳ್ಳುವ ಮುನ್ನ ಯೋಚಿಸಿ ಹಿತಮಿತವಾಗಿ ತಿಂದು ನಾವೂ ಆರೋಗ್ಯವಾಗಿ ಇರೋಣ. ಅನ್ನವನ್ನು ಚೆಲ್ಲದಿರೋಣ, ನಮಲ್ಲಿ ಹೆಚ್ಚಾಗಿದ್ದಾರೆ ಅವಶ್ಯಕತೆ ಇರುವವರಿಗೆ ಹಂಚೋಣ.

ಫೋಟೋ ಕೃಪೆ : financialexpress

ಹಣದ ಹಸಿವು :

ನಮ್ಮಲ್ಲಿ ಒಂದು ನಾಣ್ಣುಡಿ ಇದೆ. ‘ಊಟವಿಕ್ಕಿ ಸಾಕು ಅನ್ನಿಸಬಹುದು. ಕೊಟ್ಟು ಸಾಕು ಅನ್ನಿಸಲಾಗದು’ ಅಂತ. ನಿಜ… ಅಲ್ಲವೇ ಹೊಟ್ಟೆ ಹಸಿದವರಿಗೆ ಹೊಟ್ಟೆ ತುಂಬಾ ಅನ್ನವಿಟ್ಟರೆ ತೃಪ್ತಿಯಿಂದ ಸಾಕು ಎನ್ನುತ್ತಾರೆ. ಅದೇ ಹಸಿವು ಹಣದ್ದಾದರೆ ಇಲ್ಲ, ಆಸ್ತಿಯದಾದರೆ ಸಾಕು ಎನ್ನುವವರು ಯಾರೂ ಇಲ್ಲ. ಏನೂ ಇಲ್ಲದಾಗ ಊಟ ಸಿಕ್ಕಿದರೆ ಸಾಕು ಅನ್ನುವ ಮನುಷ್ಯನಿಗೆ ಅದು ಸಿಕ್ಕ ಮೇಲೆ, ಮನೆ, ಭೂಮಿ ಹಣ ಇನ್ನೇನೋ ಐಷಾರಾಮಿ ವಸ್ತುಗಳು ಬೇಕೆನಿಸುತ್ತದೆ. ಇದು ತಪ್ಪು ಅಂತ ಅಲ್ಲದಿದ್ದರೂ ಮಿತಿ ಮೀರಿ ಹಣ ಕೂಡಿಡುವುದು ನಮ್ಮ ಮುಂದಿನ ಪೀಳಗೆಯವರನ್ನ ಸೋಮಾರಿಗಳನ್ನಾಗಿ ಮಾಡಬಹುದು ಅಥವಾ ಅವರನ್ನು ಅದೇ ಹಣ ಕೆಟ್ಟದಾರಿಗೆ ಎಳೆಯಬಹುದು. ಇಂತಹ ಎಷ್ಟೋ ಉದಾಹರಣೆಗಳು ನಮ್ಮ ಮುಂದೆ ಇವೆ ಅಲ್ಲವೇ?.



ಕೀರ್ತಿಯ ಹಸಿವು :

ಇನ್ನು ಕೀರ್ತಿಯ ಹಸಿವು ಇರುವವರೇನು ಕಡಿಮೆ ಇಲ್ಲ. ತಮ್ಮ ಕೈ ಕೆಳಗಿನವರು ಮಾಡಿದ ಕೆಲಸಗಳನ್ನು ತಮ್ಮದು ಎಂದು ಹೇಳಿಕೊಂಡು ಕೆಲಸದಲ್ಲಿ ಮೇಲೆರುವವರನ್ನು ನೋಡಿದ್ದೇವೆ. ಯಾರದೋ ಶ್ರಮವನ್ನು ಕದ್ದು ತಾವು ಹೆಸರು ಮಾಡಿಕೊಳ್ಳುವವರು ಇದ್ದಾರೆ. ಹಾಗೆಯೇ ಹಣದಿಂದ ಕೀರ್ತಿ, ಹೆಸರನ್ನು ಗಳಿಸಿರುವವವರೂ ಕಮ್ಮಿಯಿಲ್ಲ ನಮ್ಮಲ್ಲಿ. ನಮ್ಮ ಶ್ರಮ ಬುದ್ಧಿವಂತಿಕೆಯಿಂದ ಗಳಿಸುವ ಕೀರ್ತಿ, ಹೆಸರಿಗೆ ಇರುವ ಬೆಲೆ ವಾಮ ಮಾರ್ಗದಿಂದ ಗಳಿಸಿದ್ದಕ್ಕೆ ಇರುವುದಿಲ್ಲ ಅಲ್ಲವೇ.

ಫೋಟೋ ಕೃಪೆ : HPCI

ದೇಶ ತಿರುಗು ಇಲ್ಲವೇ ಕೋಶ ಓದು ಎನ್ನುವಂತೆ, ಇವು ಎರಡರಿಂದ ನಮ್ಮ ಜ್ಞಾನ ವೃದ್ಧಿಯಾಗುತ್ತದೆ. ಯಾರಿಗೂ ದ್ರೋಹ ಮಾಡದ ಯಾರಿಗೂ ನೋವು ಕೊಡದ ಮತ್ತೊಂದು ಹಸಿವು ಎಂದರೆ ಇದೇ ಜ್ಞಾನದ ಹಸಿವು. ಈ ಪ್ರಪಂಚದಲ್ಲಿ ನಾವು ಇರುವವರೆಗೂ ತಿಳಿದರೂ, ಓದಿದರೂ ಅರಿಯುವುದು ಮುಗಿಯುವುದಿಲ್ಲ. ಹೆಚ್ಚು ಓದಿದಷ್ಟು ನಮ್ಮ ಜ್ಞಾನ ವೃದ್ಧಿಯಾಗುತ್ತದೆ. ಹಾಗೆ ದೇಶ ಸುತ್ತುವುದರಿಂದಲೂ ಜ್ಞಾನ ವೃದ್ಧಿಯಾಗುತ್ತದೆ. ನಮ್ಮ ಜೀವನದಲ್ಲಿ ಸಿಗುವ ಪ್ರತಿ ವ್ಯಕ್ತಿಯಿಂದ ಪ್ರತೀ ವಸ್ತುವಿನಿಂದ ಏನಾದರೂ ಕಲಿಯುವಿಕೆ ಇದ್ದೇ ಇರುತ್ತದೆ, ಅದನ್ನು ಅರಿಯುವ ಶಕ್ತಿ ನಮ್ಮಲ್ಲಿ ಇರಬೇಕು ಅಷ್ಟೆ. ಇದಕ್ಕೆ ಒಂದು ಉದಾಹರಣೆ ಅಂದರೆ ನಮ್ಮ ಸರ್ವಜ್ಞ ಕವಿ. ಈತನೇ ಹೇಳಿಕೊಳ್ಳುವಂತೆ ಎಲ್ಲರಿಂದಲೂ ಒಂದೊಂದು ನುಡಿಕಲಿತು ಸರ್ವಜ್ಞ ಎಂದೆನಿಸಿದರು.

ದೇಹದ ಹಸಿವು :

ಕೊನೆಯದಾಗಿ ದೇಹದ ಹಸಿವು (ಕಾಮ) ಇದರಿಂದಲೇ ಸೃಷ್ಟಿ. ಹಸಿವು ಬಾಯಾರಿಕೆಯ ರೀತಿ ಇದು ಕೂಡಾ ಪ್ರಾಣಿಗಳ ಜೀವನದಲ್ಲಿ ಮುಖ್ಯ ಸ್ಥಾನ ಪಡೆಯುತ್ತದೆ. ಆದರೆ ಬುದ್ಧಿಯಿಲ್ಲದ ಪ್ರಾಣಿಗಳಂತೆ ಮನುಷ್ಯ ನಡೆಯುವುದು ಸರಿಯಲ್ಲ. ಅದಕ್ಕೆಂದೇ ನಮ್ಮ ಹಿರಿಯರು ಮದುವೆ ಎಂಬ ಸುಂದರ ಚೌಕಟ್ಟಿನಲ್ಲಿ ಸ್ತ್ರೀ ಪುರುಷರನ್ನು ಬಂಧಿಸಿದ್ದಾರೆ. ಆ ಚೌಕಟ್ಟಿನೊಳಗೆ ಇದ್ದರೆ ಅದಕ್ಕೊಂದು ಅರ್ಥ. ಅದನ್ನ ಮೀರಿ ನಡೆದರೆ ಬುದ್ಧಿ ಇಲ್ಲದ ಮೃಗಗಳಿಗೂ ಮನುಷ್ಯರಿಗೂ ವ್ಯತ್ಯಾಸ ಇರುವುದಿಲ್ಲ ಅಲ್ಲವೇ?.

ಫೋಟೋ ಕೃಪೆ : Healthyplace

ಬೇರೆ ದಾರಿ ಕಾಣದೇ ವ್ಯಭಿಚಾರಕ್ಕೆ ಇಳಿಯುವವರ ಗೋಳು ಒಂದು ರೀತಿಯಾದರೆ, ನಮ್ಮ ಜೀವನ ನಮ್ಮ ಇಷ್ಟ ಎಂದು ಮನಬಂದಂತೆ ವರ್ತಿಸುವವರೂ ಏನೂ ಕಡಿಮೆ ಇಲ್ಲ. ಇನ್ನು ಕೆಲವರು ಹೆಣ್ಣು ಮಕ್ಕಳ ಅಸಹಾಯಕತೆಯನ್ನು ಉಪಯೋಗಿಸಿಕೊಂಡು ಅವರನ್ನು ಇಂತಹ ಪಾಪ ಕೂಪಕ್ಕೆ ತಳ್ಳಿ ತಮ್ಮ ಜೇಬು ತುಂಬಿಸಿಕೊಂಡು ಸಮಾಜದ ಎದುರಿನಲ್ಲಿ ಮರ್ಯಾದಾ ಪುರಷೋತ್ತಮರಂತೆ ತಲೆ ಎತ್ತಿ ತಿರುಗಾಡುವವರನ್ನು ಕಂಡಾಗ ಅಸಹ್ಯವೆನಿಸುತ್ತದೆ.

ಹಸಿದ ಜನರಿಗೆ ಅನ್ನ ಇಡೋಣ, ಜ್ಞಾನದ ಹಸಿವಿಗೆ ಉತ್ತಮೋತ್ತಮರ ಮಾರ್ಗದರ್ಶನ ಪಡೆದು ಉತ್ತಮ ಕೃತಿಗಳನ್ನು ಓದೋಣ. ಅವಕಾಶ ಸಿಕ್ಕಾಗ ದೇಶ ಸುತ್ತೋಣ. ಉಳಿದ ಹಸಿವುಗಳನ್ನು ನಮ್ಮ ಹಿಡಿತದಲ್ಲಿ ಇಟ್ಟುಕೊಂಡು, ಅನ್ಯರಿಗೆ ಕೆಡುಕು ಮಾಡದೆ, ಅದರಿಂದ ಬೇರೆಯವರಿಗೆ ತೊಂದರೆಯನ್ನು ಕೊಡದೆ ನಡೆ ಯುತ್ತ ಮುಂದಿನ ಜನಾಂಗಕ್ಕೆ ಒಳ್ಳೆಯ ಸಂದೇಶ ನೀಡೋಣ.


  • ವಸಂತ ಗಣೇಶ (ಲೇಖಕರು, ಸಾಹಿತಿಗಳು)

0 0 votes
Article Rating

Leave a Reply

0 Comments
Inline Feedbacks
View all comments
All Articles
Menu
About
Send Articles
Search
×
0
Would love your thoughts, please comment.x
()
x

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

Aakruti Kannada

FREE
VIEW