ಜೂನ್ 27 ರಂದು ವರ್ಷದ ಜಗನ್ನಾಥ ಯಾತ್ರೆ ಆರಂಭಗೊಳ್ಳುತ್ತದ್ದು, ಆಷಾಢ ಮಾಸದಲ್ಲಿ ನಡೆಯುವ ಈ ಉತ್ಸವ ಕಣ್ತುಂಬಿಕೊಳ್ಳಲು ಲಕ್ಷಾಂತರ ಭಕ್ತರು ಸೇರುತ್ತಾರೆ.ಇಲ್ಲಿಯ ವಿಶೇಷತೆಯ ಕುರಿತು ಡಾ. ಗುರುಪ್ರಸಾದ ರಾವ್ ಹವಲ್ದಾರ್ ಅವರ ಈ ಲೇಖನವನ್ನು ತಪ್ಪದೆ ಮುಂದೆ ಓದಿ…
ರಥೋತ್ಸವ ಎಂದೂ ಕರೆಯಲ್ಪಡುವ ಈ ರಥದಲ್ಲಿ ಜಗನ್ನಾಥನ ವಿಗ್ರಹ ಸಹೋದರ ಬಲಭದ್ರ ಮತ್ತು ಸಹೋದರಿ ಸುಭದ್ರೆಯರ ವಿಗ್ರಹಗಳನ್ನು ರಥದ ಎಳೆಯಲಾಗುತ್ತದೆ.ಪುರಿ ಜಗನ್ನಾಥನ ದೇವಾಲಯ ಇಡೀ ವಿಶ್ವದಲ್ಲೇ ಪ್ರಸಿದ್ಧ ದೇವಾಲಯ. ಹಾಗೆ ಹಿಂದೂಗಳ ಪವಿತ್ರ 4 ಧಾಮಗಳಲ್ಲಿ ಜಗನ್ನಾಥ ಧಾಮ ಕೂಡ ಒಂದಾಗಿದೆ.ಜಗನ್ನಾಥ. ಬಲಭದ್ರ, ಸುಭದ್ರರನ್ನು ಹೊತ್ತುಕೊಂಡ ರಥಗಳನ್ನು ಎಳೆಯುವುದನ್ನು ಕಣ್ತುಂಬಿಕೊಳ್ಳಂದೇ ಲಕ್ಷಾಂತರ ಭಕ್ತರು ಒಡಿಶಾಗೆ ಆಗಮಿಸುತ್ತಾರೆ.
ಇಲ್ಲಿಯ ವಿಶೇಷತೆಯೆಂದರೆ ಈ ಮೂರು ಮೂರ್ತಿಗಳು ದೇವಾಲಯದಿಂದ ಹೊರಬರುವುದು ಈ ದಿನ ಮಾತ್ರ. ಹೀಗಾಗಿ ದೇವರ ಕಣ್ತುಂಬಿಕೊಳ್ಳಲು ಲಕ್ಷಾಂತರ ಮಂದಿ ರಥಯಾತ್ರೆಯಲ್ಲಿ ಭಾಗಿಯಾಗುತ್ತಾರೆ. ಇದಲ್ಲದೆ ಹಲವು ರೀತಿಯ ಕಥೆಗಳು, ಪುರಾಣಗಳಲ್ಲಿ ಈ ದೇವಾಲಯದ ಮಹತ್ವವನ್ನು ನೋಡಬಹುದು.

ಪುರಿ ಜಗನ್ನಾಥನ ನಂಬಿಕೆ ಇತಿಹಾಸ
ಪುರಾಣಗಳ ಪ್ರಕಾರ, ಭಗವಾನ್ ವಿಷ್ಣುವು ಮೊದಲು ಬದರಿನಾಥಕ್ಕೆ ಆಗಮಿಸುತ್ತಾರೆ. ಅಲ್ಲಿ ಮಜ್ಜನ ಮುಗಿಸಿದ ವಿಷ್ಣು ನಂತರ ಗುಜರಾತ್ (ದ್ವಾರಕೆ)ಗೆ ಆಗಮಿಸಿ ವಸ್ತ್ರಗಳನ್ನು ಧರಿಸುತ್ತಾರೆ. ಅಲ್ಲಿಂದ ಮುಂದೆ ಒಡಿಶಾದ ಪುರಿಗೆ ಬಂದು ಆಹಾರ ಸೇವಿಸುತ್ತಾರೆ. ನಂತರ ತಮಿಳುನಾಡಿನ ರಾಮೇಶ್ವರಂಗೆಬಂದು ಅಲ್ಲಿ ವಿಶ್ರಾಂತಿ ಪಡೆದಿದ್ದಾರೆ ಎಂಬುದು ನಂಬಿಕೆ. ಹೀಗೆ ಚಾರ್ ಧಾಮಗಳು ಸೃಷ್ಟಿಯಾಗಿವೆ ಎನ್ನಲಾಗುತ್ತದೆ.
ಹಿಂದೂ ಧರ್ಮದಲ್ಲಿ, ಭೂಮಿಯ ವೈಕುಂಠ ಎಂದು ಕರೆಯಲ್ಪಡುವ ಜಗನ್ನಾಥ ಪುರಿಗೆ ಬಹಳ ವಿಶೇಷ ಪ್ರಾಮುಖ್ಯತೆಯನ್ನು ಪರಿಗಣಿಸಲಾಗಿದೆ. ಇಲ್ಲಿ ಭಗವಾನ್ ಶ್ರೀ ಕೃಷ್ಣ, ಸುಭದ್ರ ಮತ್ತು ಬಲರಾಮರನ್ನು ಧಾರ್ಮಿಕ ವಿಧಿಗಳೊಂದಿಗೆ ಪ್ರತಿದಿನ ಪೂಜಿಸಲಾಗುತ್ತದೆ.
ಪುರಾಣಗಳ ಪ್ರಕಾರ, ಭಗವಾನ್ ಶ್ರೀಕೃಷ್ಣ ತನ್ನ ದೇಹವನ್ನು ತೊರೆದ ನಂತರ ದಹನ ಮಾಡಿದಾಗ, ಅವರ ಒಂದು ಭಾಗವನ್ನು ಹೊರತುಪಡಿಸಿ ಸಂಪೂರ್ಣ ದೇಹವು ಪಂಚಭೂತಗಳಲ್ಲಿ ಬೆರೆತುಹೋಯಿತು. ಆ ಸಮಯದಲ್ಲಿ ಶ್ರೀ ಕೃಷ್ಣನ ಹೃದಯವು ಬಡಿಯುತ್ತಿತ್ತು ಎಂದು ಹೇಳಲಾಗುತ್ತದೆ. ಅದೇ ಹೃದಯವನ್ನು ಪುರಿಯಲ್ಲಿ ಜಗನ್ನಾಥನ ಪ್ರತಿಮೆಯೊಳಗೆ ಇಂದಿಗೂ ಸುರಕ್ಷಿತವಾಗಿರಿಸಿ ನಿತ್ಯ ಪೂಜಿಸಲಾಗುತ್ತದೆ.
ಈ ಜಗನ್ನಾಥ ದೇವಾಲಯನ್ನು ಕ್ರಿ.ಶ 12ನೇ ಶತಮಾನದಲ್ಲಿ ಅನಂತ ಬರ್ಮ ಚೋಡಗಂಗಾ ದೇವ್ ನಿರ್ಮಿಸಿದರು. ಆದರೆ ಅನಂತ ಭೀಮ ದೇವ್ ಈ ದೇವಾಲಯವನ್ನು ಪೂರ್ಣಗೊಳಿಸಿದರು ಎಂಬ ಉಲ್ಲೇಖವಿದೆ. ಹಾಗೆ ಇದು ಸಹ ಅತ್ಯಂತ ಎತ್ತರದ ಗೋಪುರ ಹೊಂದಿರುವ ದೇವಾಲಯಗಳಲ್ಲಿ ಸ್ಥಾನ ಪಡೆದಿದೆ. ಈ ಜಗನ್ನಾಥನು ವಿಷ್ಣುವಿನ ಅವತಾರವೆಂದು ಪರಿಗಣಿಸಲಾಗುತ್ತದೆ. ಹಾಗೆ ಶ್ರೀಕೃಷ್ಣನ ಅವತಾರವೆಂದು ಕೂಡ ಕರೆಯಲಾಗಿದೆ. ಜಗನ್ನಾಥನ ದೈವಿಕ ರೂಪವನ್ನು ಸ್ಕಂದ ಪುರಾಣ ಮತ್ತು ಬ್ರಹ್ಮ ಪುರಾಣದಲ್ಲಿಯೂ ವಿವರಿಸಲಾಗಿದೆ.

ಇಲ್ಲಿ ಜಗನ್ನಾಥನ ವಿಗ್ರಹವು ಮರದಿಂದ ಮಾಡಲಾಗಿದೆ. ಮೂರು ವಿಗ್ರಹಗಳನ್ನು 12 ವರ್ಷಗಳಿಗೊಮ್ಮೆ ಬದಲಾಯಿಸಲಾಗುತ್ತದೆ. ಇದು ಈ ದೇವಾಲಯದ ಅಚ್ಚರಿಯ ಸಂಗತಿಗಳಲ್ಲಿ ಒಂದಾಗಿದೆ. 12 ವರ್ಷದಲ್ಲಿ ಒಮ್ಮೆ ಈ ಮೂರ್ತಿಗಳ ಬದಲಾಯಿಸುವಾಗ ಅರ್ಚಕರು ಮಾತ್ರ ದೇವಾಲಯದಲ್ಲಿ ಇರಲಿದ್ದಾರೆ. ಹಾಗೆ ಇಡೀ ನಗರ ಕತ್ತಲೆಯಿಂದ ಕೂಡಿರಲಿದೆ ಎನ್ನಲಾಗಿದೆ. ಏಕೆಂದರೆ ವಿಷ್ಣು ರಾಜ ಇಂದ್ರದ್ಯುಮ್ನನ ಕನಸಿನಲ್ಲಿ ಬಂದು ಸಮುದ್ರದ ಆಳದಿಂದ ಮರಗಳ ದಿಮ್ಮಿಯನ್ನು ತಂದು ಈ ಮೂರ್ತಿಗಳ ಕೆತ್ತುವಂತೆ ಹೇಳಿದ್ದನಂತೆ.
ಆದರೆ ಮೂರ್ತಿ ಕೆತ್ತನೆ ಮಾಡುವಾಗ ಯಾರೊಬ್ಬರು ಅದನ್ನು ನೋಡಬಾರದು ಎಂದನಂತೆ. ಹೀಗಾಗಿ ಇಡೀ ನಗರ ಕತ್ತಲೆಯಲ್ಲಿ ಮುಳುಗಿತ್ತಂತೆ. ಹಗಲಿನಲ್ಲಿ ಕತ್ತಲು ಕವಿದಿದ್ದರಿಂದ ಭಯ ಆವರಿಸಿ ಯಾರೊಬ್ಬರು ಮನೆಯಿಂದ ಹೊರಬರಲಿಲ್ಲ ಎಂಬ ಪುರಾತನ ಕಥೆಯೊಂದಿದೆ.
ಪುರಿ ಜಗನ್ನಾಥ ದೇವಾಲಯದಲ್ಲಿ ಸಿಗುವ ಪ್ರಸಾದವನ್ನು ಮಹಾಪ್ರಸಾದ ಎಂದು ಕರೆಯುತ್ತಾರೆ. ಈ ಪ್ರಸಾದದ ವಿಶೇಷತೆ ಏನೆಂದರೆ ಇದನ್ನು ಮಣ್ಣಿನ ಪಾತ್ರೆಯಲ್ಲಿ ಮಾತ್ರ ತಯಾರಿಸಲಾಗುತ್ತದೆ. ಇದಷ್ಟೇ ಅಲ್ಲದೆ, ಒಲೆಯಲ್ಲೇ ಇದನ್ನು ತಯಾರಿಸಲಾಗುತ್ತದೆ. ಇನ್ನು ಪ್ರಸಾದ ತಯಾರಿಸುವಾಗ ಪಾತ್ರೆಗಳನ್ನು ಒಂದರ ಮೇಲೊಂದರಂತೆ ಇಡುತ್ತಾರೆ. ಆದರೆ ಈ ಸಂದರ್ಭದಲ್ಲಿ ಮೊದಲು ಆಹಾರ ಸಿದ್ಧವಾಗುವುದು ಮೊದಲ ಮಡಿಕೆಯಲ್ಲಿರುವ ಆಹಾರ. ಲಕ್ಷಾಂತರ ಜನರಿಗೆ ಪ್ರಸಾದ ವಿತರಣೆ ಕಾರ್ಯ ನಡೆಯುತ್ತಾಲೇ ಇರುತ್ತದೆ.
ಇನ್ನು ಈ ದೇವಾಲಯದಲ್ಲಿ ವಿಜ್ಞಾನಗಳಿಗೆ ಸವಾಲು ಹಾಕುವಂತಹ ಗಲವು ವಿದ್ಯಮಾನಗಳು ನಡೆಯುತ್ತಲೇ ಇರಲಿದೆ. ದೇವಾಲಯದ ಮೇಲಿನ ಬಾವುಟವು ಗಾಳಿಗೆ ವಿರುದ್ಧ ದಿಕ್ಕಿನಲ್ಲಿ ಹಾರಾಡುವುದು, ದೇವಾಲಯದ ನೆರಳು ಬೀಳದೆ ಇರುವುದು, ದೇವಾಲಯದ ಮೇಲೆ ಪಕ್ಷಿಗಳು ಹಾರಾಡದೆ ಇರುವುದು ಇಂತಹ ಹತ್ತು ಹಲವು ವಿಸ್ಮಯಗಳು ಇಂದಿಗೂ ಅಚ್ಚರಿ ಮೂಡಿಸುತ್ತದೆ.
ಭಕ್ತರು ವರ್ಷವಿಡೀ ಜಗನ್ನಾಥನ ದರ್ಶನ ಪಡೆಯಬಹುದು. ಆದರೆ ರಥಯಾತ್ರೆಗೂ ಮುನ್ನ ಭಕ್ತರಿಗೆ ದೇವರ ದರ್ಶನವನ್ನು ನಿಷೇಧಿಸಲಾಗಿದೆ. ಈ ಯಾತ್ರೆ ಪ್ರಾರಂಭವಾಗುವ ಮೊದಲು ಜಗನ್ನಾಥ ದೇವರು ಪ್ರತಿ ವರ್ಷ ಅನಾರೋಗ್ಯಕ್ಕೆ ಒಳಗಾಗುತ್ತಾನೆ ಎಂದು ನಂಬಲಾಗಿದೆ. ಮೊದಲ ಹುಣ್ಣಿಮೆಯ ದಿನ, ಜಗನ್ನಾಥ ದೇವರಿಗೆ 100 ಕಳಸ ನೀರಿನಿಂದ ಸ್ನಾನ ಮಾಡಿಸಲಾಗುತ್ತದೆ. ಈ ಸಮಯದಲ್ಲಿ ಭಕ್ತಾದಿಗಳ ದರ್ಶನಕ್ಕೆ ಅವಕಾಶವಿರುವುದಿಲ್ಲ. ಹಾಗೇ ಇದೇ ವೇಳೆ ಜಗನ್ನಾಥ ಸ್ವಾಮಿಗೆ ಗಿಡಮೂಲಿಕೆ ಔಷಧಿಗಳೊಂದಿಗೆ ಚಿಕಿತ್ಸೆ ನೀಡಲಾಗುತ್ತದೆ. ಈ ಸಮಯದಲ್ಲಿ ಭಗವಂತ ವಿಶ್ರಾಂತಿ ಪಡೆದ ನಂತರ ರಥಯಾತ್ರೆಗೆ ಸಿದ್ಧನಾಗುತ್ತಾನೆ ಎಂಬುದು ಭಕ್ತರ ನಂಬಿಕೆ. ಜಗನ್ನಾಥ ರಥಯಾತ್ರೆಯಲ್ಲಿ ಭಕ್ತರು ತಮ್ಮ ಜೀವನದಲ್ಲಿ ಒಮ್ಮೆಯಾದರೂ ರಥವನ್ನು ಎಳೆಯಲು ಬಯಸುತ್ತಾರೆ. ಹೀಗೆ ಮಾಡಿದರೆ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂಬುದು ಭಕ್ತರ ನಂಬಿಕೆ.
- ಡಾ. ಗುರುಪ್ರಸಾದ ರಾವ್ ಹವಲ್ದಾರ್
