ಜನಕ ಮಹಾರಾಜನಿಗೆ ಅದು ಸತ್ಯವೋ ಅಥವಾ ಇದು ಸತ್ಯವೋ ಎನ್ನುವ ಗೊಂದಲ ಸೃಷ್ಟಿಯಾದಾಗ ಗುರು ಅಷ್ಟಾವಕ್ರ ನೀಡಿದ ಉತ್ತರ ಅರ್ಥಪೂರ್ಣವಾಗಿದೆ. ಎಲ್ಲರೂ ಓದಲೇ ಬೇಕಾದ ಹಾಗು ತಿಳಿದುಕೊಳ್ಳಬೇಕಾದ ಜೀವನದ ಸಾರ…
ಜನಕ ಮಹಾರಾಜ ನಮ್ಮ ಭಾರತದ ಆಧ್ಯಾತ್ಮಿಕ ಜಗತ್ತಿನಲ್ಲಿ ಅತ್ಯಂತ ವಿಶಿಷ್ಟ ವ್ಯಕ್ತಿತ್ವ. ಅವನು ಪರಮ ಜ್ಞಾನಿ. ಅವನ ಗುರು ಅಷ್ಟಾವಕ್ರ. ಅಷ್ಟಾವಕ್ರ ಬಾಲಕ, ಆದರೆ ರಾಜಾ ಜನಕ ಪ್ರೌಢ ವಯಸ್ಸಿನ ಮನುಷ್ಯ. ಗೀತೆಯಲ್ಲಿ ಭಗವಾನ ಶ್ರಿಕೃಷ್ಣ ಅರ್ಜುನನಿಗೆ ಗೀತೋಪದೇಶ ಮಾಡಿದ. ಅಲ್ಲಿ ಶ್ರಿಕೃಷ್ಣ ಹಿರಿಯ. ಅರ್ಜುನ ಕಿರಿಯ. ಇಲ್ಲಿ ಕೂಡ ಅಷ್ಟಾವಕ್ರ ಜನಕನಿಗೆ ಉಪದೇಶ ಮಾಡಿದ.
ಅದು ಅಷ್ಟಾವಕ್ರಗೀತೆ ಅಂತ ಪ್ರಸಿದ್ಧವಾಗಿದೆ. ಇಲ್ಲಿ ಗುರು ಚಿಕ್ಕವನಾಗಿದ್ದಾನೆ. ರಾಜ ವಯಸ್ಸಿನಲ್ಲಿ ಹಿರಿಯ ಆಗಿದ್ದಾನೆ.
ಫೋಟೋ ಕೃಪೆ : dnaofhinduism
ಒಮ್ಮೆ ಜನಕ ರಾಜ್ಯಭಾರ ಮಾಡುತ್ತಿರಬೇಕಾದರೆ, ಸೇನಾಪತಿ ಅತ್ಯಂತ ಗಡಿಬಿಡಿಯಲ್ಲಿ ಬಂದು, ನೆರೆಯ ರಾಜ ನಮ್ಮ ದೇಶದ ಪೂರ್ವ ಗಡಿಯಲ್ಲಿ ಸೇನೆ ನಿಯೋಜನೆ ಮಾಡಿ ನಮ್ಮ ದೇಶದ ಮೇಲೆ ದಾಳಿ ಮಾಡಿದ್ದಾನೆ. ನಾವು ಕೂಡಲೇ ಪ್ರತಿ ದಾಳಿ ಮಾಡಿ ನಮ್ಮ ದೇಶ ರಕ್ಷಿಸಬೇಕು.
ಈ ಸುದ್ದಿ ತಿಳಿದ ಜನಕ ಯುದ್ಧದ ಉಡುಪು ಧರಿಸಿ, ಸೇನಾಪತಿಗೆ ಯೋಗ್ಯ ನಿರ್ದೇಶನ ಕೊಟ್ಟು ತನ್ನ ಕುದುರೆಯ ಮೇಲೆ ರಣಾಂಗಣಕ್ಕೆ ಧಾವಿಸಿದ. ನೆರೆಯ ರಾಜ ಅತ್ಯಂತ ಪ್ರಬಲನಾಗಿದ್ದ. ರಾಜಾ ಜನಕ ಸಂಪೂರ್ಣ ಸೋತು ನೆರೆಯ ರಾಜನಿಗೆ ಶರಣಾದ. ರಾಜಾ ಜನಕನಿಗೆ ಮೈತುಂಬ ಗಾಯ. ನೆರೆಯ ರಾಜನಿಗೆ ಜನಕನ ಬಗ್ಗೆ ಗೌರವ ಇತ್ತು. ಹಾಗಾಗಿ ರಾಜ್ಯವನ್ನು ಮಾತ್ರ ವಶಪಡಿಸಿಕೊಂಡು ರಾಜನನ್ನು ಹೋಗಲು ಬಿಟ್ಟ. ಜನಕ ಮಹಾರಾಜ ಮೈತುಂಬ ಗಾಯ, ಹಸಿವೆ. ನೀರಡಿಕೆ ಇವುಗಳಿಂದ ಚಡಪಡಿಸಿ ದಾರಿ ಕಾಣಲಾರದೆ ಪಕ್ಕದ ಹಳ್ಳಿಯ ಕಡೆ ನಡೆಯುತ್ತಿದ್ದ. ರಾಜಾಧಿರಾಜ ಆಗಿದ್ದ ಅವನಿಗೆ ಯಾರೂ ನೀರು ಸಹಿತ ನೀಡಲಿಲ್ಲ. ಪಕ್ಕದ ಹಳ್ಳಿಯಲ್ಲಿ ಯಾರೋ ಶ್ರೀಮಂತರು ಭಿಕ್ಷುಕರಿಗೆ ಅನ್ನದಾನ ಮಾಡುತ್ತಿದ್ದರು. ಅದು ದೊಡ್ಡ ಸರದಿ ಸಾಲಿತ್ತು. ಹಸಿವೆಯಿಂದ ಕಂಗಾಲಾದ ಜನಕ ಆಗಿದ್ದಾಗಲಿ ಅಂತಾ ಕೊನೆಯವನಾಗಿ ನಿಂತ. ಎಲ್ಲರಿಗೂ ಹಂಚುತ್ತಾ ಬಂದರು, ಜನಕನ ಸರದಿ ಬರುವ ಹೊತ್ತಿಗೇ ಅನ್ನದ ಪಾತ್ರೆ ಖಾಲಿಯಾಗಿ, ತಳದಲ್ಲಿ ಮಾತ್ರ ಸ್ವಲ್ಪ ಹೊತ್ತಿದ ಅನ್ನ ಉಳಿದಿತ್ತು. ಕೆಲಸಗಾರನು, “ಅದನ್ನೇ ಕೊಡಲೇ ಹೇಗೇ ? ಅಂತಾ ಕೇಳಿದ.
ರಾಜಾ ಜನಕ “ಅದನ್ನೇ ಕೊಡು ” ಕೆಲಸಗಾರ ಅದನ್ನೇ ಬಳಿದು ಒಂದು ದೊನ್ನೆಯಲ್ಲಿ ಹಾಕಿ ಕೊಟ್ಟ.
ರಾಜಾ ಅದನ್ನೇ ಕೈಯಲ್ಲಿ ತೆಗೆದುಕೊಂಡು, ಇನ್ನೇನು ತಿನ್ನಬೇಕು ಅನ್ನುವಷ್ಟರಲ್ಲಿ ಒಂದು ಪಕ್ಷಿ ಅದನ್ನು ಹಾರಿಸಿಕೊಡು ಹೋಯಿತು. ರಾಜಾ ಜನಕ ಅತ್ಯಂತ ದುಃಖದಿಂದ ಮಣ್ಣಿನಲ್ಲಿ ಬಿದ್ದು ಪರಿತಪಿಸುತ್ತಿದ್ದ. “ಓ ದೇವರೇ ಏನು ಗತಿ ಬಂತು” ಅಂತ ಗೋಳಿಡುತ್ತ ಇದ್ದಾಗ, ಒಮ್ಮೆಲೆ ಈ ಕನಸು ಸರಿದು ನಿದ್ದೆಯಿಂದ ಎಚ್ಚರ ವಾಯಿತು. ರಾಜಾ ಜನಕನಿಗೆ ಮೈಯಲ್ಲ ಬೆವರು.
‘ಓಹ್ ಎಂಥ ಕನಸು…’
ಕೂಡಲೇ ರಾಜಾ ಜನಕ ರಾಜ್ಯಸಭೆ ಕರೆದು ರಾಜ ತನ್ನ ಒಡ್ಡೋಲಗ ಸೇರಿಸಿದ. ರಾಜ , ಮಹಾರಾಣಿ, ಮಂತ್ರಿ, ಸೇನಾಪತಿ,ಅನೇಕ ವಿದ್ವಾಂಸರು ಮತ್ತು ವಂದಿ ಮಾಗಧರು, ಭೋಪರಾಕ ಹೇಳುವವರು ಎಲ್ಲರೂ ಸೇರಿದರು. ರಾಜ ಮತ್ತು ಮಹಾರಾಣಿ ತಮ್ಮ ರಾಜಪೋಷಾಕಿನಲ್ಲಿ ಉಳಿದ ಎಲ್ಲರೂ ಕೂಡ ತಮ್ಮ ತಮ್ಮ ಆಸನದಲ್ಲಿ ವಿರಾಜಮಾನಾಗಿದ್ದಾರೆ. ಆದರೆ ರಾಜ ಜನಕನದು ಒಂದೇ ಮಾತು
“ಅದು ಸತ್ಯವೂ ಅಥವಾ ಇದು ಸತ್ಯವೋ… ?? ” ಪದೇ ಪದೇ ಇದೇ ಮಾತು ಕೇಳಿ ರಾಜನಿಗೆ “ಏನಾಗಿದೆ ಎಲ್ಲರಿಗೂ ದಿಗಿಲು” ರಾಜವೈದ್ಯರು ಬಂದು ರಾಜನನ್ನು ಪರೀಕ್ಷಿಸಿ
“ಎಲ್ಲ ಸರಿಯಾಗಿದೆ, ಆದರೆ ಯಾಕೆ ಹೀಗೆ ಹೇಳುತ್ತಿದ್ದಾರೆ ” ಎಂದು ಅವರಿಗೆ ತಿಳಿಯಲಿಲ್ಲ.
ಅಷ್ಟರಲ್ಲಿ ಗುರು ಅಷ್ಟಾವಕ್ರ ಅಲ್ಲಿಗೆ ಬಂದರು. ಅವರು ಮಹಾಜ್ಞಾನಿಗಳು.ಅವರಿಗೆ ರಾಜನ ಎಲ್ಲ ವಿಷಯ ಅರ್ಥವಾಯಿತು.
ಫೋಟೋ ಕೃಪೆ : Hindu Blog
ಅವರು ಹೇಳಿದರು”ಅದು ಸತ್ಯವಲ್ಲ ಮತ್ತು ಇದು ಕೂಡ ಸತ್ಯವಲ್ಲ” ನಿನ್ನ ಪ್ರಜ್ಞೆ ( consciousness) ಮಾತ್ರ ಸತ್ಯ .ಯಾಕೆಂದರೆ
“ನೀನು ಕನಸಿನಲ್ಲಿ ಇದ್ದೆ. ಆಗ ಕನಸು ಸತ್ಯವೇ ಅನಿಸಿತ್ತು..”
ಕನಸಿನಲ್ಲಿಯೂ ನೀನು ಇದ್ದೆ. ನನಸಿನಲ್ಲಿಯೂ ನೀನೇ ಇದ್ದೀಯ. ಕನಸು ಸಣ್ಣ ಅವಧಿಯಲ್ಲಿ ಮುಗಿಯುತ್ತದೆ.
ಅದೇ ಪ್ರಕಾರ ಈಗ ಕಾಣುವ ಅಧಿಕಾರ, ವೈಭವ ಇದು ಕೂಡ ಒಂದು ಕನಸೇ ಇದು ಸತ್ಯವಲ್ಲ. ಇದು ಸಹಿತ ಒಂದು ದಿನ ಮುಗಿಯುತ್ತದೆ. ಇದನ್ನು ಯಾರು ತಿಳಿಯುತ್ತಾರೆ ಅವರು ಮಾತ್ರ ಈ ಮಿಥ್ಯಾ ಜಗತ್ತಿನ ಬಗ್ಗೆ ಮೋಹ ಪರವಶ ಆಗುವುದಿಲ್ಲ. ಈ ಅಧಿಕಾರ ವೈಭವ ಇದರ ಬಗ್ಗೆ ಹೆಮ್ಮೆ ಪಡುವುದಿಲ್ಲ.
- ಅರವಿಂದ ಕುಲಕರ್ಣಿ (ಮಲಪ್ರಭಾ ಗ್ರಾಮೀಣ ಬ್ಯಾಂಕ್, ನಿವೃತ್ತ ಹಿರಿಯ ಅಧಿಕಾರಿ)