ಜನುಮ ಜನುಮಕೂ – ಭಾಗ ೧೦



ಸುಮಾಳ ಜೀಪು ಗಕ್ಕನೆ ನಿಂತಿತು. ಸುಮಾ ಕಣ್ಣರಳಿಸಿ ನೋಡಿದಳು, ಎದುರಿಗೆ ರಸ್ತೆ ನಡುವೆ ವ್ಯಕ್ತಿಯೊಬ್ಬ ನಿಂತಿದ್ದ – ಸುಮ್ಮನೆ ತಲೆ ತಗ್ಗಿಸಿಕೊಂಡು. ‘ಯಾರಪ್ಪಾ ಇವ್ನು ?ರಸ್ತೇಲಿ ಹೀಗ್ ನಿಂತಿದಾನೆ. ಸುಮಕ್ಕಾ ಪೇಟಿಗೀಲಿರೋ ಬಂದೂಕು ಎತ್ಕೊ…!’ ಮುಂದೆ ಓದಿ ಇದು ಜನುಮದ ಪ್ರೇಮ ಕತೆ…

 ಸುಮಾ ಹೊಯ್ದಾಟ

ಪೂವಯ್ಯ ಮಂಕು ಕವಿದು ಕುಳಿತುಕೊಂಡಿದ್ದ ಸುಮಾಳತ್ತ ನೋಡಿದ. ಆಕೆ ಹಾಗೆ ಕುಳಿತಿದ್ದಳು. ಎತ್ತಲು ನೆಟ್ಟದೃಷ್ಟಿ. ಮುಖದಲ್ಲಿ ಬತ್ತಿದ ಕಳೆ. ವಿಚಿತ್ರ ಮೌನ ಮನಸ್ಸಿನಲ್ಲಿ ಏನೋ ತಾಕಲಾಟ. ಅಂತರಂಗದಲ್ಲಿ ಹುಡುಕಾಟ.

‘ಸುಮಕ್ಕ ಕತ್ಲಾತು, ಸಿನಿಮಾದವರ ಜತೆ ನಾಳೆ ನಾನು ಮಾತಾಡ್ತೀನಿ. ಮನೆಗೆ ಹೋಗುವ, ಅಮ್ಮ ಕಾಯ್ತಿರ್ತಾಳೆ.’

‘ಅಂ…? ಹೂಂ…..!’

ಸುಮಾ ನಿರ್ವಿಣ್ಣಳಾಗಿ ಹೇಳಿದಾಗ ಪೂವಯ್ಯನಿಗೆ ಅಚ್ಚರಿಯಾಯಿತು.

‘ಹೂಂ….. ಏಳು ಮೇಲಕ್ಕೆ.’

ಫೋಟೋ ಕೃಪೆ : Youtube

ಅವನೇ ಅಕ್ಕನ ಕೈ ಹಿಡಿದು ಮೇಲೆಬ್ಬಿಸಿದ. ಮೇಕಪ್ಪು ಮಾಸಿರಲಿಲ್ಲ. ನಸುಗತ್ತಲಲ್ಲಿ ಅವಳ ಬಿಳಿ ಮುಖ ಚಂದ್ರನಂತೆ ಹೊಳೆಯುತ್ತಿತ್ತು. ಒಮ್ಮೊಮ್ಮೆ ಅವಳ ಮುಖ ವಯಸ್ಸಾದವರಂತೆಯೂ ಕಾಣುತ್ತಿತ್ತು.

‘ಪಪ್ಪು…. ಬಂದ….’ ಆಕೆಯ ದನಿ ಅವಳಿಗರಿವಿಲ್ಲದೇ ಹೊರಬಿತ್ತು.

ಅಲ್ಲಿಯವರೆಗೆ ಬಿಗಿದುಕೊಂಡಿದ್ದ ಸುಮಾಳ ಮುಖದಲ್ಲಿಯ ಗೆರೆಗಳು ಸಡಿಲವಾದವು. ಅವಳ ಮುಖ ಅರಳಿತು.

ಪೂವಯ್ಯ ಅಚ್ಚರಿಗೊಂಡ. ಏನಾಯಿತು ಅಕ್ಕನಿಗೆ? ಎದುರಿಗೆ ನಿರ್ದೇಶಕ ರಾಣಾ ಬರುತ್ತಿದ್ದರು.

‘ಪಪ್ಪೂ? ಯಾವ ಪಪ್ಪೂ…. ಸುಮಕ್ಕ?’



ಪೂವಯ್ಯ ಅಚ್ಚರಿಯಿಂದ ಕೇಳಿದ. ಸುಮಾ ಉತ್ತರಿಸಲಿಲ್ಲ. ಅಷ್ಟರಲ್ಲಿ ರಾಣಾ ಎದುರಿಗೆ ಬಂದು ನಿಂತಿದ್ದರು. ಸುಮಾ ಅವರತ್ತ ನೋಡಿದಳು. ಅವರ ಕಣ್ಣುಗಳು ಸುಮಳತ್ತಾ. ಪರಸ್ಪರ ಅವರಿಬ್ಬರೂ ಹಾಗೆ ನೋಡುತ್ತಾ ನಿಂತದ್ದು ಯಾಕೋ ಹೂವಯ್ಯನಿಗೆ ಸರಿಬರಲಿಲ್ಲ. ಒಮ್ಮೆ ಅಕ್ಕನಿಗೆ ತಿವಿದ.

ಸಾರ್… ನಾವು ಮನೆಗೆ ಹೋಗ್ತೀವಿ. ಕತ್ತಲಾಗ್ತಾ ಬಂತು. ಪೂವಯ್ಯ ರಾಣಾರನ್ನು ಉದ್ದೇಶಿಸಿ ಹೇಳಿದ.

ನಕ್ಕ ರಾಣಾ…. ‘ಕತ್ತಲಿಗೆ ಹೆದರ್ತೀರಾ? ನೋ… ನೋ… ನಾನದನ್ನ ಇಷ್ಟಪಡೊಲ್ಲ. ಸುಮ ಹಾಗೆಲ್ಲ ಹೆದರೋ ಹುಡುಗಿ ಅಲ್ಲ. ಹೆದರೋ ಹುಡುಗಿ ರೋಜಿ ಆಗೊಲ್ಲ.’
ರಾಣಾ ಹಳೆಯ ಪರಿಚಯಸ್ಥರಂತೆ ಹೇಳಿಕೊಂಡದ್ದು, ಅದಕ್ಕೆ ಸುಮಾ ಮೆಲ್ಲಗೆ ಹೂನಗೆ ನಕ್ಕದ್ದು ಕಂಡು ಪೂವಯ್ಯ ಅವಕ್ಕಾದ. ಒಮ್ಮೆ ಅಕ್ಕನ ಮೇಲೆ ಸಿಟ್ಟು ಬಂತು.

‘ಸಿನಿಮಾದಲ್ಲಿ ಸುಮಾಳಿಗೆ ಪಾತ್ರ ಇದೆ. ಒಳ್ಳೆಯ ಪಾತ್ರ ಕೊಡ್ತಿದ್ದೀನಿ. ರೋಜಿ…. ಅಲ್ಲಲ್ಲ…. ಸುಮಾ– ಟ್ಯಾಲೆಂಟ್ ಇರೋ ಹುಡುಗಿ. ಅವಳು ಒಳ್ಳೆಯ ಹೆಸರು ಮಾಡಬೇಕು. ಇದು ನನ್ನ ಆಸೆ.’

ರಾಣಾ ಹಾಗಂದಾಗ ಸುಮಾ ನೆಲ ನೋಡಿದಳು. ಸಂತೃಪ್ತ ಭಾವದಿಂದ ಪೂವಯ್ಯ ಮೆಲ್ಲಗೆ–

ಫೋಟೋ ಕೃಪೆ : Pinterest

ಸಾರ್… ನಮಗೆ ಹೊತ್ತಾಗ್ತದೆ. ಕತ್ತಲು ರಸ್ತೆಯಲ್ಲಿ ಜೀಪು ಓಡ್ಸೋದು ಕಷ್ಟ. ನಾವಿನ್ನೂ ಬರ್ತೀವಿ’ ಎಂದ. ಪಟಾಕಿಯಂತೆ ಯಾವಾಗಲೂ ಮಾತನಾಡುತ್ತಿದ್ದ ಸುಮಾಳಿಗೆ ಮಾತುಗಳೇ ಹೊರಬರಲಿಲ್ಲ. ಮೌನವಾಗಿದ್ದಳು. ರಾಣಾ ಅವಳನ್ನು ದಿಟ್ಟಿಸಿ ನೋಡಿದರು. ಹೊರಗೆ ಕತ್ತಲು. ಬೆಳಕೊಂದು ಮುಖದ ಮೇಲೆ ಬಿದ್ದಿತು. ಹೌದು ತನ್ನ ಹೈಸ್ಕೂಲ್ ಸಹಪಾಠಿ ರೋಜಿಯದೆ ಪಡಿಯಚ್ಚಿನಂತಿತ್ತು ಮುಖ.

ಅವಳ ಜೊತೆ ಇನ್ನಷ್ಟು ಮಾತನಾಡಬೇಕು ಅನಿಸಿತ್ತು. ಆದರೆ ಕತ್ತಲಾಗಿದೆ. ಕತ್ತಲೆಯಲ್ಲಿ ಕಾಫಿ ಎಸ್ಟೇಟಿನ ತೋಟದ ಮದ್ಯದ ರಸ್ತೆಗಳು ಅಪಾಯಕಾರಿ. ರೋಜಿಗೆ ಏನಾದರೂ ಆದರೆ…?

ಗಾಬರಿಯಾಯಿತು ರಾಣಾಗೆ. ತನಗರಿವಿಲ್ಲದೆ ಹೊರಹೊಮ್ಮಿದ ಈ ಕಾಳಜಿ ಯಾವ ಕಾರಣಕ್ಕೆ? ಏನೂ ಗೊತ್ತಾಗಲಿಲ್ಲ. ಆದರೂ ರೋಜಿಯನ್ನು ಮೂವತ್ತು ವರ್ಷದ ಹಿಂದೆ ನೋಡಿದ್ದೆ ಕಡೆಯ ಬಾರಿ ಆಮೇಲೆ ಕಂಡದ್ದೇ ಈಗ ಜೀವನದಲ್ಲಿ ನಮಗರಿವಿಲ್ಲದೆ ಎಂಥಾ ಅದ್ಬುತಗಳು ಜರಗಿ ಹೋಗುತ್ತವೆ.
‘ನಾವು ಬರ್ತೀವಿ ಸಾರ್… ಹೊತ್ತಾಗ್ತದೆ.’



ಪೂವಯ್ಯ ಮತ್ತೆ ಹೇಳಿದ. ಈಗ ಎಚ್ಚರಗೊಂಡ ರಾಣಾ ಹೊರಗಿನ ಕತ್ತಲು ಮತ್ತು ಸುಮಾಳ ಮುಖವನ್ನು ನೋಡಿ ತಾವೂ ಆತಂಕಗೊಂಡರು.

‘ಆಯ್ತು ಹೊರಡಿ, ಬೆಳಿಗ್ಗೆ ನಾನೇ ಫೋನ್ ಮಾಡ್ತೀನಿ. ಈಗ ಹೊರಟುಬಿಡಿ.’ ಸುಮಾಳ ಕೈಹಿಡಿದೆ ಹೇಳಿದರು. ಆಕೆಯ ಮುಖದಲ್ಲಿ ನಗು ಮೂಡಿತು. ಪೂವಯ್ಯನಿಗೆ ಮುಜುಗರವಾಯಿತು. ಅಕ್ಕನ ಕೈ ಹಿಡಿದು ಮೆಲ್ಲಗೆ ಎಳೆದ.
ಇವರಿಬ್ಬರೂ ಜೀಪಿನ ಹತ್ತಿರ ಬಂದು ನಿಂತಾಗ ಸುಮಾ ಮತ್ತೆ ಖಿನ್ನಳಾಗಿದ್ದಳು. ಮನೆಯಿಂದ ಬರುವಾಗ ಇದ್ದ ಉತ್ಸಾಹ ಈಗ ಹೋಗುವಾಗ ಆಕೆಗೆ ಇರಲಿಲ್ಲ. ಪೂವಯ್ಯ ಗಮನಿಸುತ್ತಲೇ ಇದ್ದ. ಏನಾಯಿತು ಅಕ್ಕನಿಗೆ?
‘ಅಕ್ಕ…. ನಾನೇ ಜೀಪು ಡ್ರೈವ್ ಮಾಡ್ತೀನಿ. ನೀನು ಬದಿಗೆ ಕೂತ್ಕೋ.’ ತಮ್ಮನ ಮಾತಿಗೆ ಸುಮಾಳ ಪ್ರತಿಕ್ರಿಯೆ ಇರಲಿಲ್ಲ. ಸುಮ್ಮನೆ ಜೀಪು ಹತ್ತಿ ಬದಿಯ ಸೀಟಿನಲ್ಲಿ ಕೂತಳು. ಪೂವಯ್ಯ ಎಂಜಿನ್ ಸ್ಟಾರ್ಟ್ ಮಾಡಿದ. ಜೀಪು ಹೊರಟು ಕಾಡು ರಸ್ತೆಗಿಳಿಯಿತು.

ಅವರು ಹೋಗುವುದನ್ನೇ ನೋಡುತ್ತಾ ನಿಂತರು ರಾಣಾ. ಮನಸ್ಸಿನಲ್ಲಿ ಏನೋ ದುಗುಡ. ತಾನು ಸಾಕಷ್ಟು ಹುಡುಗಿಯರ ಸ್ಕ್ರೀನ್ ಟೆಸ್ಟ್ ಮಾಡಿದ್ದೇನೆ. ಇವಳಿಗಿಂತ ಸುಂದರಿಯಾದ ಹುಡುಗಿಯರನ್ನು ಆಡಿಷನ್ ಮಾಡಿದ್ದೇನೆ. ಅಲ್ಲೆಲ್ಲಾ ನಿರ್ಭಾವವಿತ್ತು. ಆದರೆ ಇವತ್ತು ಈ ಸುಮಾಳನ್ನು ಕಂಡಾಗ ಉಂಟಾದ ಸೆಳೆತ ಎಂಥದ್ದು? ಸುಮಾ ನಿಜವಾಗಲೂ ನನ್ನ ರೋಜಿಯೆ ಹೌದು. ತಲೆ ಧಿಮ್ಮೆಂದಿತು. ನೋಡುತ್ತ ನಿಂತ ರಾಣಾರಿಗೆ ಎಚ್ಚರ ಆದದ್ದು ಮ್ಯಾನೇಜರ್ ಹೊಗೆರಾಮ ಬಂದು ಕರೆದಾಗಲೇ.

*

ಹರಿದಾಡುವ ವೈನ್

ಫೋಟೋ ಕೃಪೆ : buddybit (ಸಾಂದರ್ಭಿಕ ಚಿತ್ರ)

ಮನೆಯಲ್ಲಿ ಕಾವೇರಮ್ಮನಿಗೆ ಆತಂಕ ಶುರುವಾಗಿತ್ತು. ಕತ್ತಲಾಯಿತೆಂದರೆ ಕೊಡಗಿನ ಯಾವ ಹುಡುಗಿಯೂ ಬೆಟ್ಟದ ರಸ್ತೆಯಲ್ಲಿ ಕಾಣಿಸಿಕೊಳ್ಳುವುದಿಲ್ಲ. ಯಾಕೆಂದರೆ ಕೊಡಗಿನ ಬೆಟ್ಟಗಳಲ್ಲಿ ರಾತ್ರಿ ನಾನಾ ಥರದ ವೈನ್ ಗಳು ಹರಿಯುತ್ತಿರುತ್ತವೆ. ಗಂಡಸರಿಗೆ ವೈನ್ ಆಗುವುದಿಲ್ಲ. ಕೊಡಗಿನಲ್ಲಿ ಅದು ಲೇಡಿಸ್ ಡ್ರಿಂಕ್ಸ್ ಅಷ್ಟೆ. ಅವರದ್ದೇನಿದ್ದರೂ ಹಾಟ್… ಹಾಟ್… ಅಷ್ಟೇ…

ಇಂಥ ಹೊತ್ತಿನಲ್ಲಿ ಕಾವೇರಮ್ಮ ಒಬ್ಬ ಮಗಳ ತಾಯಿಯಾಗಿ ಚಿಂತೆ ಮಾಡುವುದಕ್ಕೂ ಕಾರಣವಿದೆ. ಹೀಗೆ ಆಗೋದಾದ್ರೆ ಸುಮಾಳಿಗೆ ಸಿನಿಮಾದವರ ಸಹವಾಸವೇ ಬೇಡ. ಹಾದೀಲಿ ಹೋಗೋ ಮಾರೀನ ಮನೆಗೆ ಯಾಕೆ ಕರೆದುಕೊಂಡು ಬರಬೇಕು? ಈ ಸುಮಾಗೂ ಬುದ್ಧಿಯಿಲ್ಲ.

ಉರಿಯುತ್ತಿರುವ ಹೊರಬಾಗಿಲ ದೀಪವನ್ನು ದೊಡ್ಡದು ಮಾಡಿದಳು ಕಾವೇರಮ್ಮ. ಎದುರು ಗುಡ್ಡದಿಂದ ಎಲ್ಲಿಂದಲೋ ಡಮಾರ್ ಎಂದು ಗುಂಡಿನ ಸದ್ದು ಕೇಳಿತು. ಯಾರೋ ಹಂದಿಯ ಹಣೆಗೆ ಗುಂಡಿಟ್ಟಿರಬೇಕು. ಬೆಟ್ಟದ ಕೆಳಗಿನ ಚೆಂಗಪ್ಪನವರ ತೋಟದಲ್ಲಿ ಇವತ್ತು ಭರ್ಜರಿ ಪಾರ್ಟಿ ಉಂಟು ಎಂದು ತೋಟದ ಮೇಸ್ತ್ರಿ ಜಾನಿ ಸಂಜೆ ಹೇಳಿದ್ದ. ಇಪ್ಪತ್ತು ಲೀಟರ್ ವೈನು. ೩ ಕೇಸು ಬಿಯರು. ಹತ್ತು ಬಾಟಲಿ ವಿಸ್ಕಿ ತರಿಸಿದ್ದಾರೆಂದು ಹೇಳಿದ್ದ. ವೈನ್ ಇದೆಯೆಂದರೆ ಅಲ್ಲಿ ಕೂರ್ಗಿ ಹೆಂಗಸರು ಇರುತ್ತಾರೆಂದೆ ಅರ್ಥ. ಇನ್ನೂ ಡ್ಯಾನ್ಸ್ ಅಂತೂ ಇಂಥ ಸಂದರ್ಭದಲ್ಲಿ ಮಾಮೂಲು.

ಕಾವೇರಮ್ಮ ತಮ್ಮ ಹಿಂದಿನ ದಿನಗಳನ್ನು ನೆನೆಸಿಕೊಂಡು ಕಣ್ಣಲ್ಲಿ ನೀರು ತಂದುಕೊಂಡರು. ಪತಿ ಅಪ್ಪಚ್ಚು ಇದ್ದಾಗ ತಮ್ಮ ಬಾಳೆಲೆ ತೋಟದಲ್ಲಿಯೇ ಇಂಥ ಸಾಕಷ್ಟು ಮೇಜವಾನಿಗಳು ನಡೆಯುತ್ತಿದ್ದವು. ತಾನು ಮಾಡುತ್ತಿದ್ದ ಪೋರ್ಕ್ (ಹಂದಿ ಮಾಂಸ) ಅಡುಗೆಯ ರುಚಿ ಸುತ್ತಲಿನ ಯಾವ ತೋಟದ ಮನೆಯಲ್ಲೂ ಇಲ್ಲವೆಂದು ಜನ ಈಗಲೂ ಆಡಿಕೊಳ್ಳುತ್ತಾರೆ. ಪೋರ್ಕ್ ಸಾರು-ವೈನ್ ತನಗೆ ಈಗಲೂ ಬೇಕು ಮಕ್ಕಳಿಬ್ಬರೂ ತನ್ನ ಹಾಗೆಯೇ. ಸುಮಾಳಂತೂ ಪಂದಿಕರಿ (ಹಂದಿ ಮಾಂಸದ ಅಡುಗೆ) ಅಂದರೆ ಪ್ರಾಣವನ್ನೇ ಬಿಡುತ್ತಾಳೆ. ವೈನ್ ತಯಾರಿಸುವುದರಲ್ಲಿ ಸುಮಾಳದು ಎತ್ತಿದ ಕೈ. ಇವೆಲ್ಲ ಕೊಡಗಿನ ಹೆಂಗಸರಿಗೆ ಸಾಮಾನ್ಯ ವಿಷಯ.



ಗಂಡ ಸತ್ತ ಮೇಲೆ ಎಲ್ಲಾ ಮೇಜವಾಣಿಗಳು ನಿಂತುಹೋಗಿವೆ. ಎಲ್ಲಿಯಾದರೂ ಕೂರ್ಗಿ ಮದುವೆಗೆ ಹೋದಾಗ ಬರೀ ಊಟ ಅಷ್ಟೇ. ರಾತ್ರಿ ಊಟಕ್ಕೆ ಹೋಗುವುದು ನಿಲ್ಲಿಸಿ ಹತ್ತುವರ್ಷವಾಯಿತು.

ಕಾವೇರಮ್ಮ ನಿಟ್ಟುಸಿರು ಬಿಟ್ಟರು. ಇಡೀ ಕತ್ತಲೆ ತನ್ನನ್ನು ನುಂಗಿಹಾಕುವಂತೆ ಭಯವೂ ಆಯಿತು. ಆ ಭಯದಲ್ಲೇ ಕಡುಗತ್ತಲಿನ ರಸ್ತೆ ನೋಡಿದರು. ಜೀಪಿನ ಬೆಳಕು ಇನ್ನೂ ಕಾಣಿಸಲಿಲ್ಲ. ಮತ್ತಷ್ಟು ಗಾಬರಿಯಾಯಿತು. ನೋಡುತ್ತಾ ನಿಂತುಬಿಟ್ಟರು.

ತಂದೆ ವಯಸ್ಸಿನವನು ಗೆಳೆಯನೆ?

ಕತ್ತಲೆಯನ್ನು ಸೀಳಿಕೊಂಡು ಕಾಡು ರಸ್ತೆಯ ತಿರುವುಗಳಲ್ಲಿ ನಿಧಾನವಾಗಿ ಜೀಪು ಸಾಗುತ್ತಿತ್ತು. ಜೀಪಿನ ಮುಂಭಾಗದಲ್ಲಿ ಭರ್ಜರಿಯಾಗಿದ್ದ ನಾಲ್ಕು ಹೆಡ್ ಲೈಟ್ ಗಳು ರಸ್ತೆಯನ್ನು ಸ್ಪಷ್ಟವಾಗಿ ತೋರಿಸುತ್ತಿದ್ದವು. ಪೂವಯ್ಯ ಡ್ರೈವ್ ಮಾಡುತ್ತಿದ್ದ. ಪಕ್ಕದ ಕೋಟಿನಲ್ಲಿ ಸುಮಾ ಕೂತಿದ್ದಳು ಮೌನವಾಗಿ ತಲೆಗೆ ಹ್ಯಾಟ್ ಹಾಕಿದ್ದಳು. ಮೈಗೆ ಓವರ್ ಕೋಟ್ , ಜೀನ್ಸ್ ಪ್ಯಾಂಟ್,ಕಾಲಿಗೆ ಶೂಗಳು.

‘ಯಾಕ್ ಸುಮಕ್ಕ ಮಧ್ಯಾಹ್ನದಿಂದ ಒಂಥರ ಆಗಿದೀಯ? ಅವ್ರು ನಿಂಗೆ ಸಿನಿಮಾದಲ್ಲಿ ಪಾರ್ಟು ಕೊಡ್ತೀನಿ ಅಂದಿದ್ದಾರೆ. ಮತ್ಯಾಕೆ ಹೀಗ್ ಕೂತಿದೀಯ?’
ಮೌನ ಸಹಿಸಲಾರದ ಪೂವಯ್ಯ ಕೇಳಿದ.

ತಕ್ಷಣ ಗಾಬರಿ ಬಿದ್ದ ಸುಮಾ,

ಫೋಟೋ ಕೃಪೆ : Thrillophilia

‘ಏನಾಗಿದೆ ನಂಗೆ? ಉಹು೦…ಏನೂ ಇಲ್ಲಪ್ಪ…’
‘ಸುಳ್ಳು ಹೇಳ್ಬೇಡ. ನಾನೇನೂ ಅಮ್ಮಂಗೆ ಹೇಳೋದಿಲ್ಲ. ಆಯ್ತಾ…ನನ್ನ ಹತ್ರನಾದ್ರೂ ನಿಜ ಹೇಳು ಮಾರಾಯ್ತಿ.ನನಗೂ ಪರಿಹಾರ ಕೊಡೋಕ್ ಬರುತ್ತೆ…’

‘ಸುಮ್ನಿರೋ…ತಲೆ ಹರಟೆ ಮಾಡ್ಬೇಡ.’

‘ಆಯಿತು…ಆದ್ರೆ ಅವ್ರು ನಿಂಗೆ ರೋಜಿ ಅಂತ ಕರೆಯೋದ್ಯಾತಕ್ಕೆ? ಮತ್ತೆ ನೀನು ಅವ್ರನ್ನ ಪಪ್ಪು’ ಅನ್ನೋದ್ಯಾಟಕ್ಕೆ? ಡೈರೆಕ್ಟರೂ ನಿಂಗೆ ಮೊದ್ಲೇ ಗೊತ್ತಿರೋರಾ?’

ಈಗ ಗಲಿಬಿಲಿಗೊಂಡಳು ಸುಮಾ. ಏನಂತ ಹೇಳುವುದು ಇವನಿಗೆ. ಉಸಿರೆತ್ತಲಿಲ್ಲ.

‘ಪಪ್ಪಾನ ವಯಸ್ಸಿನೋರಿಗೆ ಪಪ್ಪು ಅಂತೀಯಾ. ಮಗಳು ವಯಸ್ಸಿನ ನಿಂಗೆ ಅವ್ರು ರೋಜಿ ಅಂತಾರೆ. ನಡೀ… ಅಮ್ಮನ ಹತ್ರ ಮಾತಾಡ್ತೀನಿ.’
ಪೂವಯ್ಯಾ ಬೇಸರದಲ್ಲೇ ಹೇಳಿದಾಗ ಸುಮಾ ತಬ್ಬಿಬ್ಬಾದಳು. ಎಲ್ಲವನ್ನು ಎಲ್ಲರಿಗೂ ಎಲ್ಲಾ ಕಾಲಕ್ಕೆ ಬಿಡಿಸಿ ಹೇಳಲಾಗುವುದಿಲ್ಲ. ಮಧ್ಯಾಹ್ನದಿಂದ ತಮಗೂ ಅನಿಸತೊಡಗಿದೆ. ತಾನು ಬರೀ ಸುಮಾ ಅಪ್ಪಚ್ಚು ಅಲ್ಲ. ರೋಜಿನೂ ಹೌದು. ಅದು ಹ್ಯಾಗೆ ಏಕೆ ಏನೂ ಅಂತ ಗೊತ್ತಿಲ್ಲ. ಕಗ್ಗಂಟಿನ ದಾರಕ್ಕೆ ಈಗ ಕೈ ಹಾಕಿಯಾಗಿದೆ. ಒಂದೊಂದೇ ಎಳೆ ಬಿಸಿಡುತ್ತ ಹೋದಂತೆ ಎಲ್ಲಾ ಅರ್ಥವಾಗುತ್ತದೆ.

(ಸೂಚನೆ : ಈ ಕತೆಯೂ ಈಗಾಗಲೇ ಪುಸ್ತಕರೂಪದಲ್ಲಿದ್ದು, ಆಕೃತಿಕನ್ನಡ ಮ್ಯಾಗಝಿನ್ ನಲ್ಲಿ ಪ್ರತಿ ಶನಿವಾರ ಪ್ರಕಟವಾಗುತ್ತದೆ. ಇತರೆ ಯಾರು ಕೂಡ ಈ ಕತೆಯನ್ನು ಪ್ರಕಟಿಸುವ ಹಾಗಿಲ್ಲ.ಹಾಗೂ  ಕದಿಯುವಂತಿಲ್ಲ.)

ಮತ್ತೆ ಮುಂದಿನ ಶನಿವಾರ ಓದಿರಿ. ಇದೊಂದು ಕುತೂಹಲಕಾರಿ ಕತೆ. ತಪ್ಪದೆ ಓದಿರಿ. ]


  • ಹೂಲಿಶೇಖರ್  (ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು- ನಾಟಕಕಾರರು- ಚಿತ್ರ ಸಂಭಾಷಣಕಾರರು) 

5 1 vote
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW