ಖ್ಯಾತ ಅಭಿನೇತ್ರಿ ಅಕ್ಷತಾ ಪಾಂಡವಪುರ ಮಾತುಗಳಲ್ಲಿ ಸರ್ಕಾರಿ ಆಸ್ಪತ್ರೆ…ರಂಗಭೂಮಿಯ ಖ್ಯಾತ ಕಲಾವಿದೆ ಅಕ್ಷತಾ ಪಾಂಡವಪುರ ಇತ್ತೀಚಿಗೆ ಹೆಣ್ಣು ಮಗುವಿಗೆ ಜನ್ಮ ನೀಡಿದರು. ಈ ಸಂದರ್ಭದಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ತಮಗಾದ ಅನುಭವವನ್ನು ಆಕೃತಿಕನ್ನಡದಲ್ಲಿ  ಹಂಚಿಕೊಂಡಿದ್ದಾರೆ.

ಸೆಲೆಬ್ರೆಟಿ ಗರ್ಭಿಣಿಯಾದರೆ ಅವರ ಆರಂಭದ ದಿನಗಳಿಂದ ಕೊನೆಯ ದಿನಗಳವರೆಗೂ ನಗರದಲ್ಲಿನ ಅತ್ಯುನ್ನತ್ತ ಖಾಸಗಿ ಆಸ್ಪತ್ರೆಯಲ್ಲಿಯೇ ಎಲ್ಲ ಚಿಕಿತ್ಸೆಗಳು ನಡೆಯುತ್ತವೆ. ಅವರ್ಯಾರು ಸರ್ಕಾರೀ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಯೋಚನೆಯೂ ಕೂಡಾ ಮಾಡುವುದಿಲ್ಲ. ಸರ್ಕಾರೀ ಆಸ್ಪತ್ರೆ ಎಂದರೆ ಬಡವರ ಚಿಕಿತ್ಸಾಲಯ ಎನ್ನುವ ತಾತ್ಸಾರ ಒಂದೆಡೆಯಾದರೆ, ಒಳ್ಳೆ ವೈದ್ಯರು, ನರ್ಸ ಗಳು, ಅಲ್ಲಿನ ಅವ್ಯವಸ್ಥೆಯ ಬಗ್ಗೆ ಒಂದು ರೀತಿಯ ಭಯವೂ ಇನ್ನೊಂದೆಡೆ.

ಅಕ್ಷತಾ ಪಾಂಡವಪುರ ಅವರು ಇತ್ತೀಚಿಗೆ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದರು. ಸೆಲೆಬ್ರೆಟಿಗಳಿಗೆ ಡೆಲಿವೆರಿಯಾದರೆ ಹೆಣ್ಣೋ ಅಥವಾ ಗಂಡೋ ಎನ್ನುವುದೇ ದೊಡ್ಡ ಸುದ್ದಿಯಾಗಿರುತ್ತದೆ. ಆದರೆ ಅಕ್ಷತಾ ಅವರ ವಿಚಾರದಲ್ಲಿ ವಿಭಿನ್ನ ಎಂದೇ ಹೇಳಬಹುದು. ಆಕೃತಿಕನ್ನಡ ಅವರಿಗೆ ಅಭಿನಂದನೆ ಹೇಳಲು ಕರೆ ಮಾಡಿದಾಗ ಅವರು ಸರ್ಕಾರಿ ಆಸ್ಪತ್ರೆಯಲ್ಲಿದ್ದರು.


ಅಕ್ಷತಾ ಸರ್ಕಾರಿ ಆಸ್ಪತ್ರೆಯಲ್ಲಿ ಏನು ಮಾಡುತ್ತಿದ್ದರು?

ಅವರ ಡೆಲಿವೆರಿ ಆಗಿದ್ದು, ಪಾಂಡವಪುರದ ಸರ್ಕಾರಿ ಆಸ್ಪತ್ರೆಯಲ್ಲಿ. ಅಲ್ಲಿನ ಸರ್ಕಾರಿ ಆಸ್ಪತ್ರೆಯ ಅನುಭವವನ್ನು ಆಕೃತಿಕನ್ನಡದೊಂದಿಗೆ ಹಂಚಿಕೊಂಡಿದ್ದಾರೆ.

‘ಮಕ್ಕಳ ವಿಷ್ಯದಲ್ಲಿ ತಮಾಷೆನಾ…ನಿಜ್ವಾಗ್ಲೂ ಸರ್ಕಾರಿ ಆಸ್ಪತ್ರೆ ಯೋಚನೆ ಸರೀನಾ? …ಎಷ್ಟೇ ವೆಚ್ಚವಾದರೂ ಸರಿಯೇ ಒಳ್ಳೆಯ ಹಾಸ್ಪಿಟಲ್ ಲಿ ತೋರಿಸಬೇಕು… ಕಾಸು ಕೊಟ್ಟಂತೆ ಕಜ್ಜಾಯ…ಏನೋ ಮಾಡೋಕೆ ಹೋಗಿ ಇನ್ನೇನೋ ಆಗ್ಬಿಟ್ಟರೇ?, ಸರ್ಕಾರಿ ಆಸ್ಪತ್ರೆಯಲ್ಲಿ ಅಡ್ಡ- ದಿಡ್ಡಿ ನಾರ್ಮಲ್ ಮಾಡಿ ಕಳಿಸ್ತಾರೆ. ಅದನ್ನ ತಡ್ಕೋಳ್ಳೋ ಶಕ್ತಿ ಇರ್ಬೇಕು, ಡಿಲಿವರಿ ಏನೋ ಆಗುತ್ತೆ… ಮುಂದೆ ಮಗುವಿನ ಲಾಲನೆ-ಪಾಲನೆಯ ಬಗ್ಗೆ ಸರಿಯಾದ ಮಾಹಿತಿಗಳನ್ನೂ ನೀಡೋಲ್ಲ …ಹುಷಾರು ತಪ್ಪಿದ್ರೆ dont care. ಎಲ್ಲೆಲ್ಲೋ ದುಡ್ಡು ಖರ್ಚು ಮಾಡ್ತೀವಿ, ಮಗು ಆಗುವಾಗ ಒಂದೊಳ್ಳೆ ಹಾಸ್ಪಿಟಲ್ ಬೇಡ್ವಾ?” ಅಬ್ಬಾ… ಹೀಗೆ ನಾನು ನನ್ನ ಡಿಲಿವರಿ ನಮ್ಮೂರಿನ ಸರ್ಕಾರಿ ಆಸ್ಪತ್ರೆಲೇ ಅಂತಾ ನಿರ್ಧಾರ ಮಾಡಿದಾಗ ಕೇಳಿಸಿದ ಮಾತುಗಳಿವು.‘ಸರ್ಕಾರಿ ಆಸ್ಪತ್ರೆಗಳು, ಸರ್ಕಾರಿ  ಶಾಲೆಗಳೆಂದರೆ ನಮ್ಮಂತ ಅನುಕೂಲಸ್ಥರು ಹಿಂಜರೀತೀವಿ. ಆದರೆ ಬಡವರಿಗೆ ದೊಡ್ಡ ಆಸ್ಪತ್ರೆ, ದೊಡ್ಡ ಶಾಲೆಗಳಿಗೆ ಹೋಗಲು ಶಕ್ತಿ ಇರಬೇಕಲ್ಲವೇ?. ಅವರೆಲ್ಲಾ ಸರ್ಕಾರಿ ಶಾಲೆ, ಸರ್ಕಾರಿ  ಆಸ್ಪತ್ರೆಗಳನ್ನೇ ಅವಲಂಬಿಸಿರುತ್ತಾರೆ. ಅವರ ಪರಿಸ್ಥಿಯ ಬಗ್ಗೆ ಯೋಚಿಸಿ, ನಾನು ಕೂಡಾ ಸರ್ಕಾರಿ ಆಸ್ಪತ್ರೆಯಲ್ಲಿಯೇ ಯಾಕೆ ನನ್ನ ಹೆರಿಗೆಯನ್ನು ಮಾಡಿಸಿಕೊಳ್ಳಬಾರದು?. ಮತ್ತು  ಇದರಿಂದ ಸರ್ಕಾರಿ ಆಸ್ಪತ್ರೆಯ ವ್ಯವಸ್ಥೆಯ ಬಗ್ಗೆ ನೈಜ್ಯತೆಯನ್ನು ತಿಳಿದಂತಾಗುವುದು ಎಂದು ನಿರ್ಧರಿಸಿ,  ಮಾನಸಿಕವಾಗಿ ನಾನು ಸರ್ಕಾರಿ ಆಸ್ಪತ್ರೆಗೆ ಒಗ್ಗಿಕೊಳ್ಳಲು ತಯಾರಿ ನಡೆಸಿದೆ.

ನನ್ನ ಪ್ರಾಥಮಿಕ ಚಿಕಿತ್ಸೆ ಆರಂಭವಾಗಿದ್ದು, ಪಾಂಡವಪುರದ ಸರ್ಕಾರಿ ಆಸ್ಪತ್ರೆಯಲ್ಲಿ. ಆದರೆ ನನ್ನ ವೃತ್ತಿ ಭೂಮಿ ಬೆಂಗಳೂರು ಆಗಿದ್ದರಿಂದ ತಿಂಗಳಿಗೊಮ್ಮೆ ಪಾಂಡವಪುರಕ್ಕೆ ಹೋಗಲು ಸಾಧ್ಯವಾಗುತ್ತಿರಲಿಲ್ಲ. ಆದಕಾರಣ ಬೆಂಗಳೂರಿನಲ್ಲಿಯೇ ತಿಂಗಳ scanning , check up ಮಾಡಿಸಿಕೊಂಡೆ. ೩೯ ನೇಯ ವಾರ ತುಂಬುತ್ತಿದ್ದಂತೆ ನಾನು ಹುಟ್ಟಿದ ಊರು ಪಾಂಡವಪುರಕ್ಕೆ ಬಂದೆ. ಊರಿಗೆ ಬಂದ ಒಂದೇ ವಾರದಲ್ಲಿ ಯಾವುದೇ ತೊಂದರೆಗಳಿಲ್ಲದೆ ನಮ್ಮನೆಗೆ ಮಹಾಲಕ್ಷ್ಮಿ ಬಂದಳು.

ಈ ಸಂದರ್ಭದಲ್ಲಿ ಹೆರಿಗೆ ತಜ್ಞರಾದ ಡಾ. ಶಿಲ್ಪಶ್ರೀ, ಅರವಳಿಕೆ ತಜ್ಞರಾದ ಡಾ. ಪೃಥ್ವಿ ,ಅಲ್ಲಿಯ ಹಿರಿಯ ನರ್ಸ್ ಸೋಫಿಯಾ ರಾಣಿ ಮತ್ತು ಮುಖ್ಯವಾಗಿ ನಮ್ಮ ತಾಲೂಕು ಅರೋಗ್ಯ ಆಡಳಿತಧಿಕಾರಿ ಡಾ. ಕುಮಾರ್ ಅವರು ಮಾನಸಿಕವಾಗಿ ನನ್ನನ್ನು ತಯಾರಿ ಮಾಡಿದ ರೀತಿಗೆ ಧನ್ಯವಾದಗಳನ್ನು ಹೇಳಲೇಬೇಕು. ಸರ್ಕಾರಿ ಆಸ್ಪತ್ರೆಗಳ ನ್ಯೂನತೆಗಳ ಬಗ್ಗೆ ಸಾಕಷ್ಟು ಸುದ್ದಿಗಳನ್ನು ಕೇಳಿರುತ್ತೇವೆ. ಆದರೆ ನನಗೆ ಸರ್ಕಾರಿ ಆಸ್ಪತ್ರೆಯಲ್ಲಿಯೇ ಒಳ್ಳೆಯ ಆರೈಕೆಯಾಯಿತು. ಪ್ರತಿಯೊಬ್ಬರೂ ಅಂತೇ ಕಂತೆಗಳಿಗೆ ಸೊಪ್ಪು ಹಾಕದೆ  ಸರ್ಕಾರಿ ಸೌಲಭ್ಯವನ್ನು ಪಡೆದುಕೊಳ್ಳಬೇಕು.ಎಲ್ಲಿಯೋ ಒಂದೆರಡು ಸರ್ಕಾರಿ ಆಸ್ಪತ್ರೆಗಳಲ್ಲಿ ನ್ಯೂನತೆಗಳಿರಬಹುದು. ಆ ಒಂದು ಕಪ್ಪು ಚುಕ್ಕಿಯನ್ನಿಟ್ಟುಕೊಂಡು ಎಲ್ಲಾ ಸರ್ಕಾರಿ ಆಸ್ಪತ್ರೆಗಳನ್ನೂ ಹಾಗೆಯೇ ಎಂದು ಪರಿಗಣಿಸಬಾರದು. ಖಾಸಗಿ ಆಸ್ಪತ್ರೆಗಳಲ್ಲೂ ಸಾಕಷ್ಟು ತೊಂದರೆಗಳಿವೆ. ಆದರೂ ಕೂಡಾ ಜನಾ ಹೆಚ್ಚಾಗಿ ಖಾಸಗಿ ಆಸ್ಪತ್ರೆಯನ್ನು ನಂಬುತ್ತಾರೆ. ಸರ್ಕಾರಿ ಆಸ್ಪತ್ರೆಯಲ್ಲೂ ನಂಬಿಕೆಯಿಡಿ. ಈಗ ನಾನು, ನನ್ನ ಮಗಳು ತುಂಬಾ ಖುಷಿಯಿಂದ ಆಸ್ಪತ್ರೆಯಿಂದ ಮನೆಗೆ ಹೊರಟಿದ್ದೇವೆ ಎಂದು ಅಕ್ಷತಾ ತಮ್ಮ ಸಂತೋಷವನ್ನು ವ್ಯಕ್ತ ಪಡಿಸಿದರು.


  • ಶಾಲಿನಿ ಹೂಲಿ ಪ್ರದೀಪ್
5 1 vote
Article Rating

Leave a Reply

0 Comments
Inline Feedbacks
View all comments
0
Would love your thoughts, please comment.x
()
x
%d bloggers like this:
Aakruti Kannada

FREE
VIEW