ಆಧುನಿಕ ಜೀವನದಲ್ಲಿ ಮಾನವೀಯ ಮೌಲ್ಯಕ್ಕೆ ಬೆಲೆ ಇಲ್ಲದಾಗಿ, ಸಂಬಂಧಗಳು ಅಳಿದು ದೇವರ ಭಯವನ್ನು ಮರೆತು, ಮನುಷ್ಯ ಎಸಗುತ್ತಿರುವ ಅಪರಾಧದ ಬಗ್ಗೆ ಕವಿ ಖಾದರ್ ಅವರು ಈ ಕವನದಲ್ಲಿ ಸುಂದರವಾಗಿ ವರ್ಣಿಸಿದ್ದಾರೆ.
ಪಪ್ಪು ರಾಣಾನ ತಂದೆ ಬೈಲಹೊಂಗಲ ಹತ್ತಿರದ ಹಳ್ಳಿ ಸಂಪಗಾಂವದಲ್ಲಿದ್ದರು. ಅಲ್ಲಿ ಅವರಿಗೆ ಟೇಲರಿಂಗ್ ಕೆಲಸ. ಬರುವ ಅಷ್ಟಿಷ್ಟು ಆದಾಯದಲ್ಲೇ ಕುಟುಂಬ ನಿರ್ವಹಣೆ. ಹಳ್ಳಿಯಾದ್ದರಿಂದ ಹೇಗೋ ಸಾಗುತ್ತಿತ್ತು ಜೀವನ. ಪಪ್ಪು ಮುಂದೆ ಹೇಗೆ ನಿರ್ದೇಶಕನಾದ, ರೋಜಿ ಹೇಗೆ ಅವನನ್ನು ಮತ್ತೆ ಭೇಟಿಯಾದಳು. ಕುತೂಹಲಕಾರಿ ಕಾದಂಬರಿ ಓದುಗರಿಗಾಗಿ ಆಕೃತಿಕನ್ನಡದಲ್ಲಿ ಮುಂದೆ ಓದಿ …
ಗಕ್ಕನೆ ಜೀಪು ನಿಂತಿತು. ಸುಮಾ ನಿರಾತಂಕವಾಗಿದ್ದಳು.
ಸುಮ್ನಿರೋ…ಅವ್ನು ನಮ್ಮ ತೋಟದ ಜಾನ್ಸನ್. ಕುಡಿಯೋಕ್ ಹೋಗಿದ್ದ ಅಂತ ಕಾಣ್ತದೆ. ಕೂಗಿ ಹೇಳು ದಾರಿ ಬಿಡ್ತಾನೆ. ಪುಕ್ಕಲು. ಹೆದರ್ಕೋಳ್ಳೋದಾ?’
ಫೋಟೋ ಕೃಪೆ : vidyascooking
ಅಕ್ಕನ ಮಾತು ನಿಜ ಅನ್ನಿಸಿತು. ಯಾರದು? ಜಾಕ್ಸನ್?’ ಪೂವಯ್ಯ ದೊಡ್ಡ ದನಿಯಿಂದ ಕೇಳಿದ. ಆತ ದನಿ ಎತ್ತರಿಸಿ ಹೇಳಿದ.
‘ಹೋಯ್…ಬಾಳೆಲೆ ತೋಟದವರಾ? ಬನ್ನಿ ಬನ್ನಿ.ನಿಮ್ಮ ದಾರೀನೇ ನೋಡ್ತಿದೀನಿ ಅಗ್ನಿಂದ.’
ಅಪರಿಚಿತನಂತೆ ಜಾನ್ಸನ್ ಹಾಗಂದಾಗ ಇಬ್ಬರಿಗೂ ಆತಂಕ ಶುರುವಾಯಿತು.
ಯಾಕೆ ಜಾನ್ಸನ್? ಏನಾಯ್ತು. ನಮ್ಮ ದಾರೀನೇ ಯಾಕ್ ನೋಡ್ತಿದ್ದೆ?’
‘ಇಗ್ಗುತಪ್ಪ ಗುಡಿಲಿ ಈಗ ದೊಡ್ಡ ಪೂಜೆ ನಡೀತಿದೆ.ಬೆಟ್ಟದ ಮಾರಿದೇವರು ಅಲ್ಲಿಗೆ ಬಂದು ಕುಂತೈತೆ. ನಾನು ಬಾಳೆಲೆ ತೋಟದ ಹುಡುಗಿ ಜತೆ ಮಾತಾಡ್ಬೇಕು ಅಂತಿತ್ತು. ಎಲ್ಲಾ ತೋಟದ ಹಿರೀಕ್ರು ಸೇರಿಕೊಂಡಿದ್ದಾರೆ.ನೀವು ಬಗ್ಗನೆಮನೆ ತೋಟಕ್ಕೆ ಹೋಗಿದ್ರಿ ಅಂತ ಗೊತ್ತಾಯ್ತು.ಇಲ್ಲೇ ನಿಮಗೆ ವಿಷಯ ತಿಳಿಸುವಾ ಅಂತಾ ನಿಂತೇ’.
ಜಾನ್ಸನ್ ತೊದಲುತ್ತಿದ್ದ. ಇವರಿಬ್ಬರೂ ಗಾಬರಿಯಾಯಿತು. ಇಗ್ಗುತಪ್ಪನ ಗುಡಿಗೆ ಬೆಟ್ಟದ ಮಾರಿ ಬಂದಿದ್ದಾಳೆ ಅಂದ್ರೆ ಅಲ್ಲಿ ಏನೋ ವಿಶೇಷ ಇರುತ್ತದೆ. ಬಾಳೆಲೆ ತೋಟದ ಹುಡುಗಿಯಂದ್ರೆ ಸುಮಾಳೆ, ಆಕೆಯನ್ನೇ ಯಾಕ್ ಮಾತಾಡಿಸ್ಬೇಕು ಆ ದೇವ್ರು?
ಪೂವಯ್ಯಾ ಚಿಂತಿತನಾದ. ಕಟ್ಟಲು ರಾತ್ರಿ ಬೇರೆ. ಸುಮಾಳ ಮುಖದಲ್ಲಿ ವಿಚಿತ್ರ ರೇಖೆಗಳು ಮೂಡತೊಡಗಿದವು.ಆಕೆಯ ಮನಸ್ಸು ಎಲ್ಲೋ ಇತ್ತು. ಹೌದು. ಅದೇ ಕಣ್ಣುಗಳು, ಅದೇ ಮೂಗು-ಬಾಯಿ ಎಲ್ಲವೂ ಪಪ್ಪುನೆ. ಛೇ…!ತಾನು ಒಮ್ಮೆಲೇ ಹೀಗೆ ಅವನನ್ನು ಬಿಟ್ಟು ಬರಬಾರದಿತ್ತು.ತಾನು ಬರುವಾಗ ಆತ ತನ್ನನ್ನೇ ನೋಡುತ್ತಿದ್ದ. ಅಂದಿನದೇ ಅಂತಃಕರಣ ಕಣ್ಣಲ್ಲಿ ತುಂಬಿ ತುಳುಕಾಡುತ್ತಿತ್ತು. ತನಗೀಗ ಯೌವನ ತುಂಬಿದ ವಯಸ್ಸು.
ತಾನು ಆಗ ಹೇಗಿದ್ದೇನೋ ಈಗಲೂ ಹಾಗೆಯೇ ಇದ್ದೇನೆ. ಆದರೆ ಪಪ್ಪುಗೆ ಏನಾಯಿಗಿದೆ? ಅವನೇಕೆ ಹಾಗೆ ವಯಸ್ಸಾದವನಂತೆ ಕಾಣುತ್ತಿದ್ದಾನೆ? ಏನಾಗಿದೆ ಪಪ್ಪುಗೆ…ಓ ಮೈ ಗಾಡ್. ನನ್ನ ಪಪ್ಪುಗೆ ಬೇಗ ಮುಕುಕನಾಗು ಅಂತ ಯಾವ ಅಶ್ವಿನಿ ದೇವತೆಗಳು ಶಾಪ ಹಾಕಿದರೋ…!
ಸುಮಾಳ ಕಣ್ಣಲ್ಲಿ ನೀರಿಳಿಯಿತು. ಕತ್ತಲಲ್ಲಿ ಅದು ಪೂವಯ್ಯನಿಗೆ ಕಾಣುತ್ತಿರಲಿಲ್ಲ.
ನಡೀರಿ ಬೇಗ. ತಡವಾದ್ರೆ ಬೆಟ್ಟದ ಮಾರಿ ನಿಮ್ಮ ಬಾಳೆಲೆ ಮನೆಗೆ ಹೋದಾಳು’.
‘ನೀವೇ ಹೋಗಿ ಅಡ್ಡಬೀಳಿ.ವರ ಕೊಡ್ತಾಳೆ.’
ಜಾನ್ಸನ್ ದೇವರ ಏಜೇಂಟ್ ಹೇಳಿದ. ಸುಮಾಳಿಗೆ ಎಚ್ಚರವಾಯಿತು. ವಾಸ್ತವಕ್ಕೆ ಬಂದಳು ಈದಿನ ತನ್ನ ಜೀವನದಲ್ಲಿ ಏನೋ ಮಹತ್ತರ ಬದಲಾವಣೆ. ಯಾಕೆ ಎಂದು ಹೇಳಲು ಸಾಧ್ಯವಿಲ್ಲ. ಏನಾಗುತ್ತಿದೆ ಎಂದು ತನಗೆ ತಿಳಿಯುತ್ತಿಲ್ಲ. ಏನೋ ಹೊಸಲೋಕ ಕಂಡವಳಂತಾಗಿದ್ದೇನೆ. ಅದಕ್ಕೆ ಕಾರಣ ತನಗೆ ಸಿನಿಮಾದಲ್ಲಿ ಶ್ರಮವಿಲ್ಲದೆ ಅವಕಾಶ ಸಿಕ್ಕಿತು. ಅನ್ನುವುದಾ? ಇಲ್ಲ ಪಪ್ಪು ಅರ್ಥತ್ ಡೈರೆಕ್ಟರ್ ರಾಣಾರನ್ನು ನೋಡಿದೆ. ಮಾತಾಡಿಸಿದೆ- ಎಂಬುದಾ? ಗೊತ್ತಿಲ್ಲ. ಹೇಳಲಾರದ ಮಿಂಚು ಮೈಯಲ್ಲಿ.
ಬೆಟ್ಟದ ಮಾರೆಮ್ಮಗೆ ಕಾಣಿಕೆ
ಅಷ್ಟರಲ್ಲಿ ಇಗ್ಗುತ್ತಪ್ಪ ಗುಡಿಯಿಂದ ನಾಲ್ಕಾರು ಪಂಜು ಹಿಡಿದವರ ಸಣ್ಣ ಗುಂಪೊಂದು ಇವರತ್ತ ಬಂದಿತ್ತು. ಸುಮಾ ಮತ್ತು ಪೂವಯ್ಯ ತುಸು ಅಳುಕಿದರು. ಅವರಾಗಲೇ ವಿಚಿತ್ರವಾಗಿ ವರ್ತಿಸುತ್ತಿದ್ದರು.
ಫೋಟೋ ಕೃಪೆ : daijiworld
‘ಬೆಟ್ಟದ ಮಾರೆಮ್ಮ ಈ ಕಡೆಗೆ ಬಂದ್ಲು. ಒಂದು ನಮಸ್ಕಾರ ಹಾಕಿ ತಪ್ಪಾಯ್ತು ಅಂತ ಹತ್ತು ಸಾವಿರ ಕಾಣಿಕೆ ಒಪ್ಪಿಸಿ.’
ಜಾನ್ಸನ್ ಪರಿಹಾರ ಕೇಳಿದ. ಕುಡಿದ ಹೊತ್ತಿನಲ್ಲೂ ಜಾನ್ಸನ್ ಒಮ್ಮೊಮ್ಮೆ ನಿಜ ಹೇಳುತ್ತಾನೆ. ವಾದ್ಯ ಬಾರಿಸುತ್ತ ಬಂದ ಆ ಗುಂಪಿನಲ್ಲಿ ಮಾರಿ ದೇವರನ್ನು ಹೊತ್ತ ಪೂಜಾರಿ ಅಮಲೇರಿದ ಕೋಣನಂತೆ ಆಚೀಚೆ ಎಳೆದಾಡುತ್ತಿದ್ದ. ಅವನ ಎಡ ಬಲಕ್ಕೆ ನಿಂತವರು ಚಾಮರ ಸೊಪ್ಪು ಹಿಡಿದು ಗಾಳಿ ಬೀಸುತ್ತಿದ್ದರು. ಉಳಿದವರು ಈ ದೇವರ ಆಟವನ್ನು ನೋಡುತ್ತಿದ್ದರು ದೇವರನ್ನು ತಡೆಯಲು ಎಲ್ಲರಿಗೂ ಭಯ. ಅದು ನುಗ್ಗಿ ದತ್ತ ಇವರು ಹೋಗುತ್ತಿದ್ದರು.
ಸುಮಾಳಿಗೆ ಇಂಥ ದೇವರೇನು ಹೊಸದಲ್ಲ. ಕೊಡಗಿನ ಬೆಟ್ಟಗಳ ಸಾಲಿನಲ್ಲಿ ಹೀಗೆ ಮೈಮೇಲೆ ದೇವರು ಬರುವವರು, ಹೇಳಿಕೆ ನೀಡಿ ಜನಕ್ಕೆ ಪರಿಹಾರ ನೀಡುವವರು ದೊಡ್ಡ ಸಂಖ್ಯೆಯೇ ಇದೆ. ಈಗೀಗ ಮಲೆಯಾಳ ದೇಶದ
ಕಡೆಯಿಂದ ಬಂದವರು, ಕೊಳ್ಳೇಗಾಲ ಕಡೆಯಿಂದ ಬಂದವರು ಇಲ್ಲಿ ನೆಲೆಸಿ ಶುಕ್ರವಾರ ಮಂಗಳವಾರ ಮೈಮೇಲೆ ದೇವರನ್ನು ತಂದುಕೊಂಡು ಭಕ್ತರಿಗೆ ಭಯ ಹುಟ್ಟಿಸುತ್ತಿದ್ದಾರೆ.
ಸುಮ ಎಲ್ಲವನ್ನು ನೋಡಿದ್ದಳೆ. ಆಕೆ ಮೆಲ್ಲಗೆ ಜೀಪಿನಿಂದ ಇಳಿದು ನಿಂತಳು, ಅವಳ ಹಿಂದೆ ಪೂವಯ್ಯನು ಇಳಿದ, ಮೈಮೇಲೆ ದೇವರು ಬಂದವ ಓಲಾಡುತ್ತಾ ಸೀದಾ ಸುಮಾಳತ್ತ ಬಂದು ನಿಂತ. ಕೈಯಲ್ಲಿದ್ದ ನವಿಲುಗರಿಯಿಂದ ಅವಳ ತಲೆಯನ್ನು ಒಡೆದು ಹೇಳಿದ.
‘ದೊಡ್ಡ ದೊಡ್ಡ ಯೋಚನೆಯೊಳಗೆ ಇದೀಯ. ನಿನ್ನ ಬಗ್ಗೆನೇ ನಿನಗೆ ಅನುಮಾನ ಶುರುವಾಗೈತೆ. ಅಲ್ಲಿರಲೊ–ಇಲ್ಲಿ ಇರ್ಲೋ ಅಂತ ಒದ್ದಾಡ್ತಾ ಇದ್ದೀಯಾ. ಇವತ್ತು ನಿನ್ಗೆ ಮಾರಿ ದರ್ಶನ ಆಗೈತೆ…. ಯಾವ ಮಾರಿ ಅಂತ ಕೇಳ್ಬೇಡ. ಹಿಂದೆ ನೀನು ಏನಾಗಿದ್ದೆ… ಈಗ ನೀನು ಏನಾಗಬೇಕು ಅಂತಿದ್ದಿ… ಹೌದಲ್ಲೋ? ಕವಲು ದಾರಿಯೊಳಗ ನಿಂತಿದ್ದೀ…. ನೀನು ಕೊಡಗಿನ ಮಗಳಲ್ಲ. ಉತ್ತರ ದಿಕ್ಕಿನಿಂದ ಬಂದು ಇಲ್ಲಿ ನೆಲೆ ಆಗೀದಿ… ಒಡ್ಡು ಹೇಳೋ ಕಾಲ ಬರ್ತದೆ… ಅಲ್ಲಿಯತನಕ ನಿನಗೆ ನೆಮ್ಮದಿ ಇರೋದಿಲ್ಲ… ಎಲ್ಲಿಂದ ಬಂದಿದಿಯೋ ಅಲ್ಲಿಗೆ ಅಟ್ಟತೀನಿ ನಿನ್ನನ್ನ…’
ದೇವರು ಹಾಗೆ ಚೀರಿ-ಚೀರಿ ಹೇಳಿದಾಗ ಸುತ್ತಲಿದ್ದವರೆಲ್ಲರೂ ಬೆವತು ಹೋದರು. ದೇವರ ಬಾಯಿಂದ ಇಂತಹ ಮಾತುಗಳು ಬರುತ್ತವೆ ಎಂದು ಅನ್ನಿಸಿರಲಿಲ್ಲ ಯಾರಿಗೂ. ಸುಮಾಳ ಬಗ್ಗೆ ಹೀಗೇಕೆ ಹೇಳಿತು ದೇವರು? ಸುಮಾ ಬಾಳೆಲೆ ತೋಟದ ಮನೆಯ ಅಪ್ಪಚ್ಚು ಅವರ ಮಗಳು. ಕೊಡಗಿನಲ್ಲೇ ಹುಟ್ಟಿದ್ದಾಳೆ. ಬೆಳೆದದ್ದು-ಓದಿದ್ದು ಇಲ್ಲಿಯೇ ಆದರೆ ಈ ದೇವರು ನೀನು ಕೊಡಗಿನ ಮಗಳಲ್ಲ ಎಂದು ಉದ್ಘೋಷಿಸಿದ್ದು ಯಾಕೆ? ನಿನ್ನನ್ನು ಅಲ್ಲಿಗೆ ಕಟ್ಟುತ್ತೇನೆ ಎಂದು ಬೇರೆ ಹೇಳಿದೆ. ಎಲ್ಲ ವಿಚಿತ್ರವಾಗಿದೆ.
ಸುಮಾಳು ಅದನ್ನು ಕೇಳಿಸಿಕೊಂಡು ಗಾಬರಿ ಏನೂ ಆಗಲಿಲ್ಲ. ಸ್ಥಿತಪ್ರಜ್ಞಳಂತೆ ನಿಂತಿದ್ದಳು ಅಷ್ಟೆ. ಪೂವಯ್ಯ ಮಾತ್ರ ಹೆದರಿಕೊಂಡಿದ್ದ. ತನ್ನ ಅಕ್ಕ ಕೊಡಗಿನವಳಲ್ಲ ಎಂದು ಹೇಳಿ ಬಿಟ್ಟಿತ್ತಲ್ಲ ದೈವ. ಅದು ಹ್ಯಾಗೆ ಸಾಧ್ಯ? ಅಕ್ಕ ಬಾಳೆಲೆ ಮನೆಯ ಮಗಳು ಎಂಬುದು ಹೇಗೆ ಸುಳ್ಳಾಗುತ್ತದೆ?
ಆತ ತನಗರಿವಿಲ್ಲದೆಯೇ ನೋಟೊಂದನ್ನು ತೆಗೆದು ಕಾಣಿಕೆ ಡಬ್ಬಕ್ಕೆ ಹಾಕಿ ಕೈಮುಗಿದ. ದೇವರು ಎದುರಿನ ಕಾಡು ಬೆಟ್ಟದ ಕಡೆ ಮುಖ ಮಾಡಿತ್ತು. ಅಲ್ಲಿದ್ದ ಕಾವಲು ದಾರಿ ಹಿಡಿದು ಓಡತೊಡಗಿತು. ಜೊತೆಗಿದ್ದವರು ಅದರ ಹಿಂದೆ ಓಡಿದರು. ಅಲ್ಲಿ ಉಳಿದವರು ಸುಮಾ, ಪೂವಯ್ಯ ಮತ್ತು ಜಾನ್ಸನ್ ಮಾತ್ರ.
ಸುಮಾ ಮೌನವಾಗಿ ನೆಟ್ಟದೃಷ್ಟಿಯಿಂದ ಕಾವಲು ದಾರಿಯಲ್ಲಿ ಕಾಫಿ ಎಸ್ಟೇಟ್ ನತ್ತ ಓಡುತ್ತಿದ್ದ ದೈವ ಮತ್ತು ಪರಿವಾರವನ್ನು ನೋಡುತ್ತಿದ್ದಳು. ಪಂಜುಗಳ ಬೆಳಕು ಮರೆಯಾಯಿತು. ಈಗ ಸುಮ ಮೆಲ್ಲನೆ ಜೀಪು ಹತ್ತಿ ಕುಳಿತಳು. ಪೂವಯ್ಯ ಸ್ಟೇರಿಂಗ್ ಬಳಿ ಸಾಗಿದ. ಜಾನ್ಸನ್ – ‘ಮುಂದೆ ತೋಟದ ಗುಡ್ಲು ಹತ್ತಿರ ಇಳಿದುಕೊಳ್ಳುತ್ತೇನೆ’ ಎನ್ನುತ್ತಾ ಹಿಂದಿನಿಂದ ಜೀಪು ಹತ್ತಿದ. ಜೀಪಿನ ಹೆಡ್ ಲೈಟ್ ಗಳು ಭಗ್ಗನೆ ಹೊತ್ತಿಕೊಂಡವು. ಸುಮಾ ಕಲ್ಲಿನಂತೆ ಕೂತುಬಿಟ್ಟಳು.
*
ಮಕ್ಕಳಿಗಾಗಿ ಪಂದಿಕರಿ, ಕೋರಿರೊಟ್ಟಿ ಮಾಡಿಟ್ಟ ಕಾವೇರಮ್ಮ ಮಾತು ಬಾರದೆ ಹಾಗೆ ಕೂತುಬಿಟ್ಟರು. ಮನೆಯಲ್ಲಿ ಸುಮ ಯಾವಾಗಲೂ ಹೀಗೆ ಮೌನಿಯಾಗಿದ್ದವಳಲ್ಲ. ಮಾತಿನ ಪಟಾಕಿ ಇವತ್ತು ಏನಾಯಿತು? ಈ ಸಿನಿಮಾದವರ ಸಹವಾಸ ಬೇಡ, ಅವರದು ಬರೀ ರಂಗಿನ ಬದುಕು, ಹೊರಗೆ ನೋಡಲು ಚೆಂದ ಅಷ್ಟೇ. ನಿನಗ್ಯಾಕೆ ಬೇಕು ಅದರ ಹುಚ್ಚು. ನೆಮ್ಮದಿಯಿಂದ ಕಾಫಿ ಎಸ್ಟೇಟಿನ ವರನೊಬ್ಬನನ್ನು ನೋಡಿ ಮದುವೆಯಾಗಿಬಿಡು. ಹುಡುಗನನ್ನು ಹುಡುಕುವ ಜವಾಬ್ದಾರಿ ನನಗಿರಲಿ ಅಂತ ಬಡ್ಕೊಂಡ್ರೂ ಕೇಳದ ಹುಡುಗಿ. ‘ಒಂದ್ ಸಲ ಸಿನಿಮಾದಲ್ಲಿ ಆ್ಯಕ್ಟ್ ಮಾಡಿಬಿಡ್ತಿನಿ ಅಷ್ಟೆ, ಮಮ್ಮಿ…’ ಅಂದು ಹೋದಳು. ಅಲ್ಲಿ ಯಾರು ಏನಂದರೊ..? ಮುಖ ಮಂಕು ಮಾಡಿಕೊಂಡು ಕೂತಿದಾಳೆ. ಪೂವಯ್ಯನಿಗೂ ಏನೂ ಸ್ಪಷ್ಟವಾಗಿ ಗೊತ್ತಿಲ್ಲ. ಬೆಟ್ಟದ ಮಾರೆಮ್ಮ ಸುಮಾಳ ತಲೆಗೆ ಬಡಿದು ನೀನು ಕೊಡಗಿನ ಹುಡುಗಿಯಲ್ಲ ಉತ್ತರದಿಂದ ಬಂದವಳು ಅಂದಿತಂತೆ. ನಗೆ ಅಲ್ವಾ, ಕೊಡಗು ವಂಶಸ್ಥರ ಮನೆತನದಲ್ಲಿ ಹುಟ್ಟಿದ ಕೆ ಕೊಡಗು ಹುಡುಗಿ ಆಗದೆ ಇನ್ನೇನು ಆಗಲು ಸಾಧ್ಯ? ದೈವ ಹಾಗೇಕೆ ಸುಳ್ಳು ಹೇಳಿತೊ. ಈಗೀಗ ಎಲ್ಲವೂ ಹೀಗೇನೇ, ನಂಬುವುದಕ್ಕೆ ಆಗದು.
ಫೋಟೋ ಕೃಪೆ : The Indian Express
ನಡುಮನೆಗೆ ಬಂದ ಕಾವೇರಮ್ಮ ಅಲ್ಲಿ ಮುದುರಿ ಮಲಗಿಕೊಂಕೊಂಡಿದ್ದ ಸುಮಾಳನ್ನು ಎಬ್ಬಿಸಿದರು.
‘ಸುಸ್ತಾಯಿತೇನೇ… ಏಳು ಊಟಮಾಡಿ ಮಲಕ್ಕೋ… ನೋಡು… ಬಂದೂಕು ಬೇರೆ ಹತ್ರಾನೆ ಇಟ್ಕೋಂಡಿದಿಯಾ. ಕೋಣೇಲಿ ಇಡ್ತಿನಿ. ಪೂವಯ್ಯಗೆ ಊಟ ಹಾಕಾಯ್ತು. ನಮ್ಮಿಬ್ಬರದೇ ಬಾಕಿ ನೋಡು.’
ಸುಮ ಮಾತಾಡದೆ ಮೇಲೆದ್ದಳು. ಬಚ್ಚಲು ಮನೆಗೆ ನಡೆದು ಆಗಲೇ ಇದ್ದ ಬಿಸಿನೀರಲ್ಲಿ ಮುಖದೊಳೆದು ಕೊಂಡಳು. ಧಿಮ-ಧಿಮ ಅನ್ನುತ್ತಿದ್ದ ತಲೆಗೆ ಒಂದಷ್ಟು ಹಗುರವಾಯಿತು. ಕಣ್ಣು ಮುಚ್ಚಿದರೆ ಸಾಕು, ಪಪ್ಪುವಿನ ಮುಖ. ಇಲ್ಲಿ ದೇವರ ಹೇಳಿಕೆ.
ಊಟದ ಕೋಣೆಗೆ ಬಂದಾಗ ಟೇಬಲ್ ಮೇಲೆ ತನಗಿಷ್ಟವಾದ ಪಂದಿಕರಿ, ಕೋರಿ ರೊಟ್ಟಿ, ಸುಟ್ಟ ಚಪಾತಿ, ತಟ್ಟೆಯ ಎದುರು ಮನೆಯಲ್ಲೇ ತಯಾರಿಸಿದ ಜಿಂಜರ್/ಶುಂಠಿ ವೈನೂ ಬಾಟ್ಲಿ, ಅದರ ಪಕ್ಕಾ ಎರಡು ಚಿಕ್ಕ ಗ್ಲಾಸುಗಳು. ಅಮ್ಮನಿಗೆ ರಾತ್ರಿಹೊತ್ತು ಗುಟುಕು ವೈನ್ ಕುಡಿದಿದ್ರೆ ನಿದ್ದೆನೇ ಬರೋದಿಲ್ವಂತೆ. ಅಪ್ಪ ತೀರಿಹೋದ ಮೇಲೆ ಅವಳಿಗೆ ಅದೇ ಸಂಗಾತಿ. ಹಾಗಂತ ಬೇಕಾಬಿಟ್ಟಿ ಏನಿಲ್ಲ. ಕೂರ್ಗು ಮಾದರಿಯಲ್ಲೇ ಎಲ್ಲ.
‘ಯಾಕೋ ಇವತ್ತು ಡಲ್ ಆಗಿದ್ದೀಯಾ. ಒಂದು ಚಿಕ್ಕ ಗ್ಲಾಸ್ ವೈನ್ ಕುಡಿ. ಸರಿಯಾಗಿ ನಿದ್ದೆ ಹತ್ತುತ್ತೆ. ಮನೇಲಿ ಮಾಡಿದ ವೈನು ನೋಡು. ನಿನಗಿಷ್ಟವಾದದ್ದೆ….’
‘ಬೇಡಮ್ಮಾ ಊಟ ಮಾಡ್ತೀನಿ ಅಷ್ಟೇ.’
‘ನಿಂದೊಂದು ಅದಕ್ಕೆ ನೋಡು ದೈವ ಹೇಳಿದ್ದು. ನೀನು ಕೊಡಗಿನ ಹುಡುಗಿ ಅಲ್ಲ ಅಂತ. ಪಂದಿಕರಿ ಅರಗಬೇಕು ಅಂದ್ರೆ… ಒಂದು ಗ್ಲಾಸ್ ಶುಂಠಿ ವೈನು ಕುಡಿ ಬೇಕಮ್ಮ. ಸುಮ್ನೆ ತಗೋ.’ ಅಮ್ಮ ಒತ್ತಾಯ ಮಾಡಿದಳು. ಸುಮಾಳಿಗೆ ವೈನು ಹೊಸದೇನಲ್ಲ. ಶುಂಠಿ, ವೀಳ್ಯೆದೆಲೆ, ಕರಿಮೆಣಸು, ಗರಿಕೆಹುಲ್ಲು, ಕಾಫಿ ಎಲೆ ಮುಂತಾದ ಬಗೆಬಗೆಯ ವೈನುಗಳನ್ನು ಇಲ್ಲಿ ಎಲ್ಲರೂ ಮನೆಯಲ್ಲೇ ತಯಾರಿಸಿಕೊಂಡು ಕುಡಿಯುತ್ತಾರೆ. ನಮಗೆ ಎಲ್ಲಕ್ಕೂ ಕಷಾಯ. ಇವರಿಗೆ ಎಲ್ಲಕ್ಕೂ ವೈನು. ಅಷ್ಟೇ ವ್ಯತ್ಯಾಸ.
ಅಮ್ಮನ ಒತ್ತಾಯಕ್ಕೆ ಒಂದು ಗ್ಲಾಸ್ ವೈನ್ ಕುಡಿದಳು. ಅದ್ಯಾಕೋ… ಇನ್ನೂ ಒಂದು ಗ್ಲಾಸ್ ಬೇಕೆನಿಸಿತು. ಕುಡಿದಳು. ಈಗ ಅಮ್ಮನೇ ಸಾಕು ಬಿಡಿ ಅಂದು ನಕ್ಕಳು. ಅವಳಿಗೆ ತಾನು ತಯಾರಿಸಿದ ವೈನ್ ಅಂದರೆ ಮನೆಯವರಿಗೆಲ್ಲ ಪ್ರಾಣವೇ ಎಂಬ ಹೆಮ್ಮೆ.
ಸಿನಿಮಾದಲ್ಲಿ ಚಾನ್ಸ್ ಸಿಕ್ತಂತೆ
‘ಏನಾಯ್ತೇ….? ಸಿನಿಮಾದಲ್ಲಿ ನಿನಗೆ ಚಾನ್ಸ್ ಕೊಟ್ರಂತೆ. ಇದೊಂದೇ ಸಿನಿಮಾ ನೋಡು ನೀನು ಮಾಡೋದು. ಇದು ಮುಗಿಯುತ್ತಿದ್ದಂತೆಯೇ ನಿನಗೆ ಮದ್ವೆ. ಆಮೇಲೆ ನಿನ್ನ ಗಂಡ ಹ್ಯಾಗ್ ಹೇಳ್ತಾನೋ ಹಾಗೆ ಮಾಡು. ನಾನು ಯಾವುದಕ್ಕೂ ಅಡ್ಡ ಬರೋಲ್ಲ.’
‘ಯೆಸ್ ಮಮ್ಮಿ… ಥ್ಯಾಂಕ್ಸ್ ನೀನು ಕೊಟ್ಟಿರೋ ಅಡ್ವೈಜ್ ಗೆ. ಮದ್ವೆ-ಕಾಫಿ ತೋಟ, ಮನೆ, ಮಕ್ಕಳು, ಗಂಡ, ವೈನೋ ಇಷ್ಟೇ ಅಲ್ಲವಾ ನಿನಗೆ ಗೊತ್ತಿರೋ ಲೈಫ್.
‘ಇನ್ನೇನು? ನಿಮ್ಮಪ್ಪನಂಗೆ ನೀನು ಮಿಲ್ಟ್ರಿಗೆ ಹೋಗಿ ವಾರ್ ಮಾಡ್ತೀಯಾ? ಇಲ್ಲ ಕಲ್ಪನಾ ಚಾವ್ಲಾ ನಂಗೆ ಸ್ಪೇಸ್ ಗೆ ಹೋಗ್ತೀಯಾ?’
‘ಇಲ್ಲ… ಎರಡೂ ಅಲ್ಲ, ಸಿನಿಮಾ ಆರ್ಟಿಸ್ಟ್ ಆಗ್ತೀನಿ. ಯಾಕೆ? ಗಂಡ, ಮನೆ, ಮಕ್ಕಳು ಎಲ್ಲಾ ಇದ್ದೂ ಐಶ್ವರ್ಯ ರೈ, ಶ್ರೀದೇವಿ, ಹೇಮಾಮಾಲಿನಿ ಬೇರೆ ಜೀವನ ಮಾಡಿಲ್ವಾ?’
ಸುಮಾಳ ಹೆಜ್ಜೆ ತಪ್ಪುತ್ತಿದ್ದರೂ ಗೋಡೆಯ ಕುರ್ಚಿ ಹಿಡಿದು ತನ್ನ ಕೋಣೆಯ ಕಡೆಗೆ ಸಾಗಿದಳು. ಕಾವೇರಮ್ಮ ತನ್ನೊಳಗೆ ನಗುತ್ತಾ ಅಂದುಕೊಂಡರು. ಇವಳ ವಯಸ್ಸಿನಲ್ಲಿ ತಾನು ಮೂರು ಗ್ಲಾಸ್ ವೈನ್ ಕುಡಿತಿದ್ದೆ. ಏನೋ ಆಗ್ತಿರಲಿಲ್ಲ. ಇವಳು ನೋಡು ಎರಡು ಗ್ಲಾಸಿಗೆ ಸುಸ್ತು. ಈಗಿನ ಹುಡುಗಿಯರೇ ಹಾಗೆ. ಏನನ್ನು ದಕ್ಕಿಸಿಕೊಳ್ಳಲು ಆಗುವುದಿಲ್ಲ. ನಕ್ಕರು ಕಾವೇರಮ್ಮ.
ಕೋಣೆಗೆ ಬಂದ ಸುಮಾ ಹಾಸಿಗೆ ಮೇಲೆ ಬಿದ್ದುಕೊಂಡಳು. ಗೋಡೆ, ಮಾಳಿಗೆ, ಕಿಡಕಿ ಎಲ್ಲಾ ಕಡೆಯೂ ರಾಣರದೇ ಮುಖ. ಪಪ್ಪುಗೆ ಅದೆಷ್ಟು ವಯಸ್ಸಾಗಿ ಹೋಗಿದೆಯಲ್ಲ?!
ಛೇ… ಇಷ್ಟು ದಿನದಿಂದ ಎಲ್ಲಿದ್ದ ಪಪ್ಪು? ತನಗೇಕೆ ಭೇಟಿಯಾಗಿರಲಿಲ್ಲ. ತನಗೆ ನೋಡಿದರೆ ವಯಸ್ಸೇ ಆಗಿಲ್ಲ. ಆಗ ಹೇಗಿದ್ದೆನೋ…. ಈಗಲೂ ಹಾಗೇ ಇದ್ದೀನಿ. ಚಿರಂಜೀವಿ ಥರ. ಅವನ ದೇಹಕ್ಕೆ ವಯಸ್ಸಾಗಿರಬಹುದು. ಆದರೆ ಆತ್ಮಕ್ಕೆ ಅಲ್ವಲ್ಲ.
ಕಣ್ಣು ಮುಚ್ಚಿದಳು. ನಿದ್ರೆ ಬಂತೇನೋ… ಕನವರಿಸಿದಳು. ನಾನು ಕೊಡಗಿನವಳಲ್ಲ. ಉತ್ತರದಿಂದ ಬಂದವಳು. ದೈವ ಹೇಳಿದ್ದು ನಿಜ. ಹಾಗಾದರೆ ನಾನು ಯಾರು? ಪಪ್ಪು ಅರ್ಥಾತ್ ರಾಣಾ ಯಾರು?
ಸುಮ ಕಣ್ಣುಮುಚ್ಚಿಕೊಂಡೇ ಒದ್ದಾಡಿದಳು. ಮುಚ್ಚಿದ ಕಣ್ಣಲ್ಲಿ ಏನೇನೋ ದೃಶ್ಯಗಳು– ಯಾವ ಯಾವುದೋ ಮುಖಗಳು. ಅರೆ ಪ್ರಜ್ಞೆಯ ಸ್ಥಿತಿ ಅವಳಿಗೆ. ಕಣ್ಣು ಮುಚ್ಚಿದಳು.
ಹೊಟೆಲ್ಲಿಗೆ ಮರಳಿದ ರಾಣಾ ರಾತ್ರಿ ಸರಿಯಾಗಿ ಊಟವನ್ನೂ ಮಾಡಲಿಲ್ಲ. ಹಾಸಿಗೇ ಮೇಲೆ ಬಿದ್ದುಕೊಂಡು ತಾರಸಿನೋಡಿದರು. ಬೆಂಗಳೂರಿನಿಂದ ಆಗಲೇ ಹೆಂಡತಿ ಶಾಂತಮ್ಮ, ಮಗಳು ಬಬ್ಲಿ ಫೋನು ಮಾಡಿ ಅವತ್ತಿನ ಶೂಟಿಂಗ್ ಬಗ್ಗೆ ವಿಚಾರಿಸಿಕೊಂಡಿದ್ದರು ಸುಮಾ ಅಪ್ಪಚ್ಚು ವಿಷಯ ಬಿಟ್ಟು ಎಲ್ಲವನ್ನೂ ಹೇಳಿದ್ದರು. ‘ಹೀರೋಯಿನ್ ಹಿಂದಿಯವಳಾದರೇನು? ಕನ್ನಡದವಳಾದರೇನು? ಅವಳು. ಅದು ಪ್ರೊಡ್ಯೂಸರ್ ಗೆ ಬಿಟ್ಟಿದ್ದು. ನಿಮಗ್ಯಾಕೆ…? ನೀಟಾಗಿ ಒಂದು ಸಿನಿಮಾ ಮಾಡ್ಕೊಂಡು ಬನ್ನಿ ಸಾಕು…’ ಎಂದು ಶಾಂತಮ್ಮ ಪ್ರೀತಿಯ ಮಾತು ಹೇಳಿದ್ದರು.
ಹೌದು ಇನ್ನೂ ತಾನು ಸಿನಿಮಾ ಬಗ್ಗೆ ಮಾತ್ರ ತಲೆ ಕೆಡಿಸಿಕೊಳ್ಳುತ್ತೇನೆ, ಅನುಶ್ ಚಾವ್ಲಾ ಬಗ್ಗೆ ಅಲ್ಲ. ಆದ್ರೆ ಹಾಗಂತ… ಸುಮಾ ಅಪ್ಪಚ್ಚು ಬಗ್ಗೆ ಅಥವಾ… ತನ್ನ ಜೀವನದಲ್ಲಿ ದುರಂತದ ಗೆರೆಬರೆದು ಹೋದ ರೋಜಿಯ ಬಗ್ಗೆ ತಲೆಕೆಡಿಸಿಕೊಳ್ಳದೆ ಇರುವುದಕ್ಕಾಗುತ್ತದೆಯೇ?
ಈ ವಿಷಯದಲ್ಲಿ ತಾನು ನೋವನ್ನುಂಡ ನಂಜುಂಡ. ರೋಜಿ ಆಗ ಬರೀ ತನ್ನ ಗರ್ಲ್ ಫ್ರೆಂಡ್ ಆಗಿರಲಿಲ್ಲ. ತನ್ನ ಬದುಕೇ ಅವಳಾಗಿದ್ದಳು. ಅಸಂಭವನೀಯ ಘಟನೆಗಳು ಆಗ ಘಟಿಸದೇ ಹೋಗಿದ್ದರೆ ರೋಜಿ ಈಗ ತನ್ನ ಮಡದಿಯಾಗಿರುತ್ತಿದ್ದಳು. ಹಾಗೆಂದು ನಾನು ಈಗ ಶಾಂತಳನ್ನು ತಿರಸ್ಕರಿಸುತ್ತೇನೆ ಅಂತಲ್ಲ. ಶಾಂತಾ ಅನಂತರ ನನ್ನ ಬದುಕಿನಲ್ಲಿ ಬದುಕಿನ ಕಂಬವಾಗಿ ನಿಂತವಳು. ನಾನು ಅವಳನ್ನು ಸುಖದ ಸುಪ್ಪತ್ತಿಗೆಯಲ್ಲಿ ತೇಲಿಸಲಿಲ್ಲ, ಆದರೂ ಜೀವನದಲ್ಲಿ ನಾನೊಂದು ನೆಲೆ ಕಂಡುಕೊಳ್ಳಲು ಶಾಂತಾ ಸಾಕಷ್ಟು ತ್ಯಾಗ ಮಾಡಿದ್ದಾಳೆ.
ಜೀವನವೆಂದರೆ ಹೀಗೇ ನೋಡಿ. ಎಲ್ಲೋ ಹುಟ್ಟಿದ ಒಂದು ಸಣ್ಣ ನೀರಿನ ಬುಗ್ಗೆ ಜರಿಯಾಗಿ, ಹಳ್ಳವಾಗಿ, ಹೊಳೆಯಾಗಿ ತನ್ನ ಪಾತ್ರವನ್ನು ಹಿಗ್ಗಿಸುತ್ತಾ ಬೆಟ್ಟ ಕೊಳ್ಳಗಳಲ್ಲಿ ಧುಮುಕುತ್ತಾ ಕೊನೆಗೆ ಶಾಂತವಾಗುತ್ತಾ ಸಾಗರದ ಕಡೆ ಸಾಗುವ ಹಾಗೆ.
ಯೌವನಕ್ಕೆ ಬರುತ್ತಲೇ ರೋಜಿ ಹತ್ತಿರವಾದಳು, ಮನೆಯವರು ಒಪ್ಪಲಿಲ್ಲ ಎಂಬ ಕಾರಣಕ್ಕೆ ಶಾಂತ ಜೀವನದಲ್ಲಿ ರಂಗಪ್ರವೇಶ ಮಾಡಿದಳು. ಆಗ ರೋಜಿ ದೂರವಾದವಳು ಮತ್ತೆ ಕಾಣಲೇ ಇಲ್ಲ.
ರಾಣಾ ಕೊನೆಯ ಬಾರಿಗೆ ರೋಜಿಯನ್ನು ನೋಡಿದ್ದು ಈಗ ಮೂವತ್ತು ವರ್ಷದ ಕೆಳಗೆ ಮಂಗಳೂರಿನಲ್ಲಿ. ಆಮೇಲೆ ಆಕೆ ಏನಾದಳೋ ಒಂದೂ ಗೊತ್ತಿಲ್ಲ. ಆದರೆ ಇವತ್ತು ದಿಡೀರ್ ಆಗಿ ಆಕೆಯ ಮುಖದರ್ಶನ… ವಯಸ್ಸೇ ಆಗಿಲ್ಲ ಅವಳಿಗೆ..! ತನ್ನ ಮದುವೆಯಾಗಿ ನಂತರ ಆಕೆಯನ್ನು ಕೊನೆಯ ಬಾರಿ ನೋಡಿದಾಗ ಹೇಗಿದ್ದಳೋ ಇವತ್ತು ಹಾಗೆಯೇ ಇದ್ದಾಳೆ! ತನ್ನನ್ನು ನೋಡಿದ ತಕ್ಷಣ ಅವಳು ಬೆವರಿಬಿಟ್ಟಳು, ದನಿ ನಡುಗಿತು, ತನ್ನನ್ನು ಕುಕ್ಕುವಂತೆ ಹದ್ದಿನ ನೋಟದಲ್ಲಿ ನೋಡಿದಳು. ಹೆಸರು ಸುಮಾ ಅಂತೆ… ಅದೂ ನೆಪಕ್ಕೆ. ಅದರರ್ಥ… ರೋಜಿಗೆ ಮರುಜನ್ಮವಾಗಿದೆ. ಆಕೆ ತನ್ನ ಕೊನೆಯ ಭೇಟಿಯ ದಿನ ಮಂಗಳೂರಿನಲ್ಲಿ ತನಗೆ ಹೇಳಿದ್ದು ನಿಜವಾಗಿದೆಯೇ..?
ಈಗ ಮೂವತ್ತು ವರ್ಷಗಳ ಹಿಂದೆ ರೋಜಿ ಕೊನೆಯ ಭೇಟಿಯಲ್ಲಿ ಕಣ್ಣೀರು ಸುರಿಸುತ್ತ ಹೇಳಿದ್ದಳು.
‘ಪಪ್ಪು…ನನಗೆ ನಿನ್ನನ್ನು ಬಿಟ್ಟು ಬದುಕೋದಕ್ಕಾಗಲ್ಲ. ನನಗೆ ಮೋಸ ಮಾಡಿ ನೀನು ಮದ್ವೆಯಾಗಿದೀಯ. ಶಾಂತಾ ಪುಣ್ಯವಂತೆ. ನಿನ್ನ ಕೈ ಹಿಡಿದಾಳೆ. ಆದ್ರೆ ನೆನಪಿರಲಿ. ಶಾಂತ ಈ ಒಂದು ಜನ್ಮಕ್ಕಷ್ಟೇ ನಿನ್ನ ಹೆಂಡತಿ. ಮುಂದಿನ ಜನ್ಮ ಅಂತ ಇದ್ರೆ…ನಾನೇ ನಿನ್ನ ಹೆಂಡತಿಯಾಗಿ ಬರೋಳು. ನನ್ನ ನಿನ್ನ ಋಣಾ ಈ ಜನ್ಮಕ್ಕಷ್ಟೇ ಮುಗಿದೋಯ್ತು ಅನಬೇಡ ಪಪ್ಪು…ಎಷ್ಟೇ ಜನ್ಮ ಬರಲಿ. ನಾನು ನಿನ್ನನ್ನು ಬಿಡೋಲ್ಲ ಒಂದು ಜನ್ಮವಾದರೂ ಪೂರ್ತಿ ನಾನು ನೀನೂ ಗಂಡ ಹೆಂಡಿರಾಗಲೇಬೇಕು’.
ರೋಜಿ ಆಗ ಹೇಳಿದ ಮಾತು ರಾಣಾರ ಕಿವಿಯಲ್ಲಿ ಮಾರ್ದನಿಯಾಗುತ್ತಲೇ ಇತ್ತು. ಅವಳಾಡಿದ ಒಂದೊಂದು ಮಾತುಗಳು ಅವರ ಹೃದಯಕ್ಕೆ ಒಂದೊಂದು ಮುಳ್ಳು ನೆಟ್ಟ ಅನುಭವ. ಈ ಜನ್ಮದಲ್ಲಿ ಶಾಂತಾ ಹೆಂಡತಿಯಾಗಿದ್ದಾಳೆ. ಈ ಜನ್ಮ ಮುಗಿಯುವವರೆಗೆ ಇನ್ನೊಬ್ಬಳ ಪ್ರವೇಶ ಸಾಧ್ಯವಿಲ್ಲ. ಸಾಧ್ಯವಾದರೂ ಸುಮಾಳಿಗೆ ಇಪ್ಪತ್ಮೂರು ವರ್ಷ. ತನಗೆ ಐವತ್ತೆಂಟು ವರ್ಷ. ಆತ್ಮಗಳು ಒಂದಾಗಬಹುದು. ಆದರೆ ಶರೀರ?
ರಾಣಾ ಮಲಗಿದಲ್ಲೇ ಬೆವೆತುಹೋದರು.ನಿಧಾನವಾಗಿ ಕಣ್ಣಿಗೆ ಮಂಪರು ಬಂತು. ರೆಪ್ಪೆಗಳು ಮುಚ್ಚಿದವು. ಮುಚ್ಚಿದ ಕಣ್ಣಲ್ಲಿ ತಾನು ಹೈಸ್ಕೂಲ್ ನಲ್ಲಿದ್ದಾರೆ ರೋಜಿಯೊಂದಿಗೆ ಇದ್ದ ರಸಘಳಿಗೆಯ ದೃಶ್ಯಗಳು ತೇಲಿ ಬಂದವು. ರಾಣಾ ನಲವತ್ತು ವರ್ಷ ಹಿಂದಕ್ಕೆ ತೇಲಿಹೋದರು.
ಈ ನಲವತ್ತು ವರ್ಷದ ಹಿಂದಿನ ಮಾತು. ಬೆಳಗಾವಿ ಈಗಿನ ಹಾಗೆ ಜನದಟ್ಟಣೆಯಿಂದ ಕೂಡಿರಲಿಲ್ಲ. ರಾಮದೇವಗಲ್ಲಿ, ಖಡೇ ಬಜಾರ, ತಿಲಕವಾಡಿ, ಮಾಳ ಮಾರುತಿ ಕಾಲೇಜು ರಸ್ತೆ, ಮಿಲ್ಟ್ರಿ ಮಹಾದೇವನ ಗುಡಿ ಹೀಗೆ ಎಲ್ಲ ಕಡೆ ಸಲೀಸಾಗಿ ಓಡಾಡಿಕೊಂಡಿರಬಹುದಿತ್ತು. ಕಾಲೇಜು ರಸ್ತೆಯಲ್ಲಿರುವ ಗಿಲಿಗಿಂಚಿ ಅರಟಾಳ ಹೈಸ್ಕೂಲ್. ಪಪ್ಪು ರಾಣಾ ಮತ್ತು ರೋಜಿ ಡಿ’ ಸೋಝಾ ಇದೆ ಶಾಲೆಯ ಎಂಟನೇ ವರ್ಗದಲ್ಲಿ ಒಟ್ಟಿಗೆ ಓದುತ್ತಿದ್ದಾನೆ. ಇಬ್ಬರಿಗೂ ಹದಿನಾಲ್ಕು ವರ್ಷದ ಎಳೆ ಹರೆಯ.
(ಸೂಚನೆ : ಈ ಕತೆಯೂ ಈಗಾಗಲೇ ಪುಸ್ತಕರೂಪದಲ್ಲಿದ್ದು, ಆಕೃತಿಕನ್ನಡ ಮ್ಯಾಗಝಿನ್ ನಲ್ಲಿ ಪ್ರತಿ ಶನಿವಾರ ಪ್ರಕಟವಾಗುತ್ತದೆ. ಇತರೆ ಯಾರು ಕೂಡ ಈ ಕತೆಯನ್ನು ಪ್ರಕಟಿಸುವ ಹಾಗಿಲ್ಲ.ಹಾಗೂ ಕದಿಯುವಂತಿಲ್ಲ.)
[ ಮತ್ತೆ ಮುಂದಿನ ಶನಿವಾರ ಓದಿರಿ. ಇದೊಂದು ಕುತೂಹಲಕಾರಿ ಕತೆ. ತಪ್ಪದೆ ಓದಿರಿ. ]
- ಹೂಲಿಶೇಖರ್ (ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು- ನಾಟಕಕಾರರು- ಚಿತ್ರ ಸಂಭಾಷಣಕಾರರು)