‘ಮಾಗಿಯ ಗಾಳಿ’ಯಲ್ಲಿ ಆಗುವ ಅನುಭವನ್ನು ಕವಿ ಮೇಗರವಳ್ಳಿ ರಮೇಶ್ ಅವರು ಕವನದಲ್ಲಿ ಸುಂದರವಾಗಿ ವರ್ಣನೆ ಮಾಡಿದ್ದಾರೆ. ಓದಿ ನಿಮ್ಮ ಅಭಿಪ್ರಾಯವನ್ನು ತಿಳಿಸಿ…
ಬೀಸ ಬೇಡ ಹೀಗೆ, ಓ ಮಾಗಿಯ ಗಾಳಿಯೇ
ನನ್ನೆದೆಯ ನಡುಗಿಸುತ.
ನನ್ನ ಹಲವು ಗೆಳೆಯರು, ಎದೆಗೆ ಹತ್ತಿರದವರು
ಅದೋ ಹೋಗಿಯೇ ಬಿಟ್ಟರು
ಮತ್ತೆ ಕೆಲವರು ಹೊರಡುವ ತಯಾರಿಯಲ್ಲಿರುವರು.
ಬೀಸ ಬೇಡ ಹೀಗೆ, ಓ ಮಾಗಿಯ ಗಾಳಿಯೇ
ನನ್ನೆದೆಯ ನಡುಗಿಸುತ.
ಚೆಸ್ಸು, ಕೇರಮ್ಮು, ಇಸ್ಪೀಟು ಆಟಗಳಲ್ಲಿ
ಬೆಳಗಿನ ಚುಮು ಚುಮು ಚಳಿಯ ವಾಕಿಂಗ್ ಮುಗಿಸಿ
ಜತೆಯಾಗಿ ಹರಟುತ್ತಾ ಕುಡಿವ ಕ್ಯಾಂಟೀನಿನ ಕಾಫಿಯ ಬಿಸಿಯ ಹಿತದಲ್ಲಿ
ಆಹಾ, ಎಷ್ಟು ಬೆಚ್ಚಗಿದೆ ನಮ್ಮ ನಿವೃತ್ತ ಬದುಕು
ಹೀಗೆ ರುಮ್ಮನೆ ಬೀಸುತ್ತಾ,
ಓ ಮಾಗಿಯ ಗಾಳಿಯೇ
ನಡುಗಿಸ ಬೇಡ ನನ್ನ
ಸಡಿಲಗೊಳಿಸ ಬೇಡ
ನನ್ನ ಬದುಕಿನ ಬೇರುಗಳನ್ನ!
ವಸಂತದಲ್ಲಿ ಬರುವ
ಮಕ್ಕಳು, ಸೊಸೆಯಂದಿರು, ಮೊಮ್ಮಕ್ಕಳುಗಳೊಡನೆ
ನಾನು ಮತ್ತು ನನ್ನವಳು
ಸಂಭ್ರಮಿಸ ಬೇಕಿದೆ ಯುಗಾದಿಯ ಸಂತಸವನ್ನ
ಬರೆಯ ಬೇಕಿದೆ ನಾನು
ನನ್ನೊಳಗೆ ತಳಮಳಿಸುತ್ತಿರುವ
ಹಲವು ಕವಿತೆಗಳನ್ನ
ಬೀಸ ಬೇಡ ಹೀಗೆ, ಓ ಮಾಗಿಯ ಗಾಳಿಯೇ
ನನ್ನೆದೆಯ ನಡುಗಿಸುತ
ನನ್ನ ಬದುಕಿನ ಬೇರುಗಳನ್ನು ಸಡಿಲಗೊಳಿಸುತ್ತ!
- ಮೇಗರವಳ್ಳಿ ರಮೇಶ್